"ನೀವು ಭೂಮಿಗೆ ಉಪ್ಪಾಗಿದ್ದೀರಿ"(ಮತ್ತಾ. 5:13). ಯೇಸುವು ಈ ಮಾತನ್ನು ಜನಸಮೂಹಕ್ಕೆ ಹೇಳಲಿಲ್ಲ. ಪರ್ವತ ಪ್ರಸಂಗವು ಪ್ರಮುಖವಾಗಿ ಯೇಸುವಿನ ಶಿಷ್ಯರಿಗಾಗಿತ್ತು ಮತ್ತು ಜನರ ಗುಂಪುಗಳು ಸುತ್ತಲೂ ಕುಳಿತುಕೊಂಡು ಇದನ್ನು ಕೇಳಿಸಿಕೊಂಡರು, ಎಂಬುದನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಜನಸಮೂಹವು ಖಂಡಿತವಾಗಿಯೂ ಈ ಭೂಮಿಗೆ ಉಪ್ಪಾಗಿರಲು ಸಾಧ್ಯವಿಲ್ಲ - ಏಕೆಂದರೆ ಅವರಲ್ಲಿ ಯಾವುದೇ ಉಪ್ಪಿನ ರುಚಿ ಇರುವುದಿಲ್ಲ. ಆದರೆ ಶಿಷ್ಯರು ಲೋಕಕ್ಕೆ ಉಪ್ಪಾಗಿರಬೇಕು. ಯೇಸುವು ಸಾಮ್ಯಗಳ ಮೂಲಕ, ಅಂದರೆ ಮಾತಿನ ಚಿತ್ರಣಗಳ ಮೂಲಕ ವಿಷಯಗಳನ್ನು ವಿವರಿಸುವುದರಲ್ಲಿ ಬಹು ನಿಪುಣರಾಗಿದ್ದರು, ಆದಾಗ್ಯೂ ಈ ವರ್ಣನೆಗಳನ್ನು ಗ್ರಹಿಸಿಕೊಳ್ಳುವುದಕ್ಕೆ ಪವಿತ್ರಾತ್ಮನ ಪ್ರೇರಣೆ ಮತ್ತು ಪ್ರಕಟನೆಗಾಗಿ ಬೇಡಿಕೊಳ್ಳುವ ಕರ್ತವ್ಯವನ್ನು ಆತನು ನಮಗೆ ವಹಿಸಿದ್ದಾನೆ. "ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ ಅದಕ್ಕೆ ಉಪ್ಪಿನ ರುಚಿ ತರಿಸಲು ಹೇಗೆ ಸಾಧ್ಯ? ಜನರು ಅದನ್ನು ಹೊರಕ್ಕೆ ಬಿಸಾಡಿ ಕಾಲಿನ ಕೆಳಗೆ ತುಳಿಯುವುದಕ್ಕೆ ಅದು ಯೋಗ್ಯವಾಗುತ್ತದೆ ಅಲ್ಲವೇ?"
ಯಾವಾಗಲೂ ಯೇಸುವಿನ ಶಿಷ್ಯರ ಸಂಖ್ಯೆಯು ಕಡಿಮೆ ಇರುತ್ತದೆಂದು ನಮಗೆ ತೋರಿಸುವುದಕ್ಕಾಗಿ ಯೇಸುವು ಈ ಚಿತ್ರಣವನ್ನು ಉಪಯೋಗಿಸಿದರು. ನೀವು ಒಂದು ತಟ್ಟೆಯಲ್ಲಿ ಊಟಕ್ಕೆ ಅನ್ನ ಮತ್ತು ಸಾರನ್ನು ಬಡಿಸಿಕೊಂಡರೆ, ಅದಕ್ಕೆ ಎಷ್ಟು ಉಪ್ಪು ಸೇರಿಸುತ್ತೀರಿ? ನೀವು ಅರ್ಧ ಚಮಚದಷ್ಟು ಉಪ್ಪನ್ನು ಸಹ ಹಾಕಲಾರಿರಿ. ಆ ಊಟಕ್ಕೆ ರುಚಿ ನೀಡಲು ಬಹಳ ಕಡಿಮೆ ಉಪ್ಪು ಸಾಕಾಗುತ್ತದೆ ಅಲ್ಲವೇ? ಆದರೆ ಉಪ್ಪು ಸಪ್ಪಗಾದರೆ, ನೀವು 20 ಚಮಚ ಉಪ್ಪನ್ನು ಸೇರಿಸಿದರೂ ಆ ಊಟದ ರುಚಿಯು ಬದಲಾಗುವುದಿಲ್ಲ. ಇಲ್ಲಿ ಮುಖ್ಯವಾದ ಅಂಶ ಉಪ್ಪಿನ ಪ್ರಮಾಣವಲ್ಲ, ಆದರೆ ಅದರ ಗುಣಮಟ್ಟ. ಯೇಸುವು "ಉಪ್ಪು ಸಪ್ಪಗಾದರೆ," ಎಂಬ ಮಾತನ್ನು ಹೇಳುವಾಗ (ಮತ್ತಾ. 5:13), ಆತನು ಹೇಳುತ್ತಿರುವುದು ಉಪ್ಪಿನ ಪ್ರಮಾಣದ ಬಗ್ಗೆ ಅಲ್ಲವೇ ಅಲ್ಲ.
ಜಗತ್ತಿನ ಜನಸಂಖ್ಯೆಯಲ್ಲಿ ನಿಜವಾದ ಶಿಷ್ಯರು ಎಷ್ಟು ಜನ ಇರುತ್ತಾರೆಂದರೆ, ಆಹಾರಕ್ಕೆ ಎಷ್ಟು ಉಪ್ಪು ಬೇಕಾಗುತ್ತದೋ ಅಷ್ಟು (ಕೆಲವೊಮ್ಮೆ ಒಂದು ಸಭೆಯ ಸದಸ್ಯರ ನಡುವೆ ಇರುವಂತ ನಿಜವಾದ ಶಿಷ್ಯರೂ ಇಷ್ಟು ಮಾತ್ರ!). ಯಥಾರ್ಥ ಶಿಷ್ಯರ ಸಂಖ್ಯೆಯು ಯಾವಾಗಲೂ ಬಹಳ ಕಡಿಮೆ ಇರುತ್ತದೆ.
ಆದರೆ ಕೇವಲ ಯಥಾರ್ಥರಾದ ಶಿಷ್ಯರನ್ನು ಭೂಮಿಯ ಉಪ್ಪೆಂದು ಕರೆಯಲಾಗುತ್ತದೆ. ಇವರ ನಿಮಿತ್ತವಾಗಿ ಭೂಮಿಯು ನ್ಯಾಯತೀರ್ಪಿಗೆ ಒಳಗಾಗುವುದರಿಂದ ಕಾಪಾಡಲ್ಪಡುತ್ತದೆ. ಒಂದು ಸಲ ಕರ್ತನು ದುಷ್ಟ ಪಟ್ಟಣವಾಗಿದ್ದ ಸೊದೋಮನ್ನು ನಾಶಮಾಡಲು ಹೊರಟಿದ್ದ ಸಂದರ್ಭದಲ್ಲಿ, ಅಬ್ರಹಾಮನು ದೇವರನ್ನು ಈ ರೀತಿಯಾಗಿ ಪ್ರಾರ್ಥಿಸುತ್ತಾನೆ (ಅಲ್ಲಿ ಕೆಲವು ನೀತಿವಂತರು ಇದ್ದರೂ ಕರ್ತನು ಅದನ್ನು ನಾಶಮಾಡುವನೋ, ಎಂಬ ಕುರಿತಾಗಿ), "ಕರ್ತನೇ, ಸೊದೋಮಿನಲ್ಲಿ ಹತ್ತು ಮಂದಿ ನೀತಿವಂತರು ಸಿಕ್ಕಿದರೆ ಆಗ ಅದನ್ನು ನಾಶಮಾಡದೇ ಉಳಿಸುವೆಯಾ?" (ಆದಿ. 18:32); "ಹತ್ತು ಮಂದಿ ನೀತಿವಂತರ ನಿಮಿತ್ತ ಸೊದೋಮ್ ಪಟ್ಟಣವನ್ನು ನಾನು ಉಳಿಸುವೆನು,"ಎಂದು ಕರ್ತನು ಉತ್ತರಿಸುತ್ತಾನೆ. ಅ ಪಟ್ಟಣವನ್ನು ನಾಶವಾಗದಂತೆ ಕಾಪಾಡಲು ಹತ್ತು ನೀತಿವಂತರು ಇದ್ದರೆ ಸಾಕಾಗಿತ್ತು, ಆದರೆ ಅಲ್ಲಿ ಹತ್ತು ಮಂದಿ ನೀತಿವಂತರು ಕೂಡ ಸಿಗಲಿಲ್ಲ, ಹಾಗಾಗಿ ಅದು ನಾಶಗೊಂಡಿತು.
ಯೆರೆಮೀಯನ ಜೀವಿತಕಾಲದಲ್ಲಿ, ಕರ್ತನು ಈ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡಿದನು. ಇಸ್ರಾಯೇಲ್ ದೇಶವು ಬಾಬೆಲಿನ ಅರಸನ ಮೂಲಕ ಸೆರೆ ಹಿಡಿಯಲ್ಪಡುವ ಸಮಯ ಸಮೀಪಿಸಿದಾಗ (ಅದು ದೇವರು ವಿಧಿಸಿದ ಶಿಕ್ಷೆಯಾಗಿತ್ತು), ಯೆರೆಮೀಯನು ಪ್ರವಾದಿಸುತ್ತಿದ್ದನು, ಆದರೆ ಆತನು ಅದಕ್ಕಿಂತ ಮೊದಲಿನಿಂದಲೇ ಅವರ ನಡುವೆ ಪ್ರವಾದಿಯಾಗಿ ಬಂದಿದ್ದನು. ಅವನು 40 ವರ್ಷಗಳ ಕಾಲ ಪ್ರವಾದಿಸಿದನು ಮತ್ತು ಅವರನ್ನು ಎಚ್ಚರಿಸಿದನು, ಆದರೆ ಅವರು ಅವನಿಗೆ ಕಿವಿಗೊಡಲಿಲ್ಲ. ಕರ್ತನು ಯೆರೆಮೀಯನಿಗೆ ಹೇಳಿದ್ದು ಏನೆಂದರೆ, "ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡುತ್ತಾ ಅಲ್ಲಿನ ಚೌಕಗಳಲ್ಲಿ ಹುಡುಕಿರಿ; ನ್ಯಾಯವನ್ನು ಕೈಕೊಂಡು ಸತ್ಯವನ್ನು ಅನುಸರಿಸುವ ಒಬ್ಬನಾದರೂ ಇದ್ದಾನೋ (ಹತ್ತು ಮಂದಿಯಲ್ಲ, ಕೇವಲ ಒಬ್ಬ ಮನುಷ್ಯನು), ಎಂಬುದನ್ನು ನೋಡಿ ನಿಶ್ಚಯಿಸಿರಿ; ಸಿಕ್ಕಿದರೆ ನಾನು ಪಟ್ಟಣವನ್ನು ಕ್ಷಮಿಸುವೆನು" (ಯೆರೆಮೀಯನು 5:1). ಆಶ್ಚರ್ಯಕರ ವಿಷಯವೆಂದರೆ, ಇಂತಹ ಒಬ್ಬನಾದರೂ ನೀತಿವಂತನು ಸಿಗಲಿಲ್ಲ, ಮತ್ತು ಆ ಇಡೀ ಪಟ್ಟಣವು ಸೆರೆ ಹಿಡಿಯಲ್ಪಟ್ಟಿತು.
ಹಲವು ಬಾರಿ ದೇವರು ಈ ರೀತಿಯಾಗಿ ಸುತ್ತಲೂ ವೀಕ್ಷಿಸುತ್ತಾರೆ. ಬಾಬೆಲ್ ಇಸ್ರಾಯೇಲನ್ನು ಸೆರೆ ಹಿಡಿಯಲಿದ್ದ ಸಮಯದಲ್ಲಿ ಯೆಹೆಜ್ಕೇಲನು ಕೂಡ ಒಬ್ಬ ಪ್ರವಾದಿಯಾಗಿದ್ದನು ಮತ್ತು ದೇವರು ಯೆಹೆಜ್ಕೇಲನ ಮೂಲಕ ಕೊಟ್ಟ ಸಂದೇಶ ಏನೆಂದರೆ, "ನಾನು ದೇಶವನ್ನು ಹಾಳುಮಾಡದಂತೆ ನನ್ನೆದುರಿಗೆ ದೇಶರಕ್ಷಣೆಗಾಗಿ ಪೌಳಿಯ ಒಡಕಿನಲ್ಲಿ ನಿಲ್ಲುವದಕ್ಕೂ, ಗೋಡೆಯನ್ನು ಗಟ್ಟಿಮಾಡುವದಕ್ಕೂ ತಕ್ಕವನನ್ನು ನಾನು ಹುಡುಕಿದಾಗ ಯಾರೂ ಸಿಕ್ಕಲಿಲ್ಲ"(ಯೆಹೆಜ್ಕೇಲನು 22:30). ದೇವರು ಹಿಂದೆ ಹೇಳಿದ ಮಾತನ್ನೇ ಮತ್ತೊಮ್ಮೆ ನುಡಿದರು : ಗುಣಮಟ್ಟ ಬೇಕಾಗಿದೆ, ಹೆಚ್ಚಿನ ಸಂಖ್ಯೆ ಬೇಕಿಲ್ಲ. ಅವರು 10,000 ಜನರು ಬೇಕೆಂದು ಹುಡುಕಲಿಲ್ಲ. ಒಬ್ಬನೇ ಪುರುಷನು ಸಿಕ್ಕಿದ್ದರೆ ಸಾಕಾಗಿತ್ತು.
ಪೂರ್ಣ ಹೃದಯ ಮತ್ತು ಸಂಪೂರ್ಣ ಸಮರ್ಪಣಾಭಾವವನ್ನು ಹೊಂದಿರುವ ಒಬ್ಬ ಮನುಷ್ಯನ ಮೂಲಕ ದೇವರು ಎಂತಹ ಮಹತ್ಕಾರ್ಯವನ್ನು ಮಾಡಬಲ್ಲರು ಎಂಬುದು ಆಶ್ಚರ್ಯಕರವಾಗಿದೆ. ಮೋಶೆಯ ಬಗ್ಗೆ ಯೋಚಿಸಿರಿ - ದೇವರು ಹಳೆಯ ಒಡಂಬಡಿಕೆಯ ಒಬ್ಬ ವ್ಯಕ್ತಿಯ ಮೂಲಕ 20 ಲಕ್ಷ ಇಸ್ರಾಯೇಲ್ಯರನ್ನು ಬಿಡುಗಡೆ ಮಾಡಲು ಸಾಧ್ಯವಾಯಿತು. ಇಸ್ರಾಯೇಲಿನಲ್ಲಿ ನಾಯಕತ್ವಕ್ಕೆ ಯೋಗ್ಯನಾದ ಇಂತಹ ಬೇರೊಬ್ಬ ಮನುಷ್ಯನು ಇರಲಿಲ್ಲ.
ಒಬ್ಬ ಮನುಷ್ಯನು ಪೂರ್ಣಹೃದಯನು ಮತ್ತು ದೇವಭಕ್ತನು ಆಗಿದ್ದರೆ, ದೇವರು ಅವನ ಮೂಲಕ ಮಾಡಬಲ್ಲ ಸಂಗತಿಗಳು ಅದ್ಭುತಕರವಾದವು"
ಎಲೀಯನ ಜೀವಿತಕಾಲದಲ್ಲಿ, ಬಾಳನ ವಿಗ್ರಹದ ಮುಂದೆ ಮೊಣಕಾಲೂರದ ಏಳು ಸಾವಿರ ಜನರಿದ್ದರೂ ಸಹ (ವಿಗ್ರಹಾರಾಧನೆ ಮಾಡದಿರುವ ಏಳು ಸಾವಿರ ವಿಶ್ವಾಸಿಗಳ ಒಂದು ಚಿತ್ರಣ ಇದಾಗಿದೆ), ಆಕಾಶದಿಂದ ದೇವರ ಬೆಂಕಿಯನ್ನು ತರಿಸಲು ಸಮರ್ಥನಾದ ಒಬ್ಬನೇ ಒಬ್ಬ ಮನುಷ್ಯನು (ಎಲೀಯನು) ಇದ್ದನು. ಇಂದಿಗೂ ಕೂಡ ಇದೇ ಅನುಪಾತವು ಇದೆ. 7,000 ವಿಶ್ವಾಸಿಗಳ ನಡುವೆ ಒಬ್ಬನೇ ಒಬ್ಬ ವಿಶ್ವಾಸಿಯು ತನ್ನ ಸೇವೆ ಅಥವಾ ತನ್ನ ಪ್ರಾರ್ಥನೆಯ ಮೂಲಕ ಪರಲೋಕದಿಂದ ದೇವರ ಬೆಂಕಿಯನ್ನು ತರಿಸಲು ಶಕ್ತನಾಗಿದ್ದಾನೆಂದು ನೀವು ಕಂಡುಕೊಳ್ಳಬಹುದು.
7,000 ವಿಶಾಸಿಗಳು ಪಾಪದ ಕುರಿತಾಗಿ, "ನಾನು ಇದನ್ನು ಮಾಡುವುದಿಲ್ಲ, ನಾನು ಅದನ್ನು ಮಾಡುವುದಿಲ್ಲ" ಎಂದು ಹೇಳಬಹುದು. ಅವರ ಸಾಕ್ಷಿಯು ನಕಾರಾತ್ಮಕವಾಗಿದೆ. "ನಾನು ಚಲನಚಿತ್ರಗಳನ್ನು ನೋಡುವುದಿಲ್ಲ, ನಾನು ಕುಡಿಯುವುದಿಲ್ಲ, ನಾನು ಜೂಜಾಡುವುದಿಲ್ಲ ಮತ್ತು ನಾನು ಸಿಗರೇಟ್ ಸೇದುವುದಿಲ್ಲ." ಅವರು ಬಾಳನನ್ನು ಆರಾಧಿಸುವುದಿಲ್ಲ, ಆದರೆ ಪರಲೋಕದಿಂದ ಬೆಂಕಿಯನ್ನು ತರಿಸಬಲ್ಲವರು ಯಾರು? ಯಾರು ಎಲೀಯನಂತೆ ದೇವರ ಮುಖದ ಮುಂದೆ ಅಂದರೆ ದೇವರ ಸಾನ್ನಿಧ್ಯದಲ್ಲಿ (ಸಮ್ಮುಖ) ಜೀವಿಸುತ್ತಾರೋ ಅವರು; ಎಲೀಯನಲ್ಲಿ ಆ ಉಪ್ಪು ಇತ್ತು.
ಹೊಸ ಒಡಂಬಡಿಕೆಯಲ್ಲಿ ಇದೇ ಸತ್ಯಾಂಶವು ಕಂಡುಬರುತ್ತದೆ. ಒಂದು ವೇಳೆ ಅಪೊಸ್ತಲ ಪೌಲನು ಜೀವಿಸಿರದಿದ್ದರೆ, ಕ್ರೈಸ್ತಸಭೆಯು ಎಂತಹ ನಷ್ಟಕ್ಕೆ ಒಳಗಾಗುತ್ತಿತ್ತು, ಮತ್ತು ನಾವು ಎಷ್ಟು ನಷ್ಟವನ್ನು ಅನುಭವಿಸುತ್ತಿದ್ದೆವು ಎಂಬುದನ್ನು ನೀವು ಊಹಿಸಬಲ್ಲಿರಾ? ದೇವರ ವಾಕ್ಯದ ಎಷ್ಟೊಂದು ಭಾಗಗಳು ಇಲ್ಲದಾಗುತ್ತಿದ್ದವು? ಅವನು ಒಬ್ಬನೇ ಮನುಷ್ಯನಾಗಿದ್ದನು! ಹೌದು, ಒಬ್ಬ ಮನುಷ್ಯನು ವಿಫಲನಾಗುವುದರಿಂದ ದೇವರ ಕಾರ್ಯಕ್ಕೆ ಯಾವುದೇ ಆಡ್ಡಿಯಾಗುವುದಿಲ್ಲ (ದೇವರು ಆ ಕೆಲಸಕ್ಕಾಗಿ ಮತ್ತೊಬ್ಬನನ್ನು ಉಪಯೋಗಿಸುತ್ತಿದ್ದರು), ಆದರೆ ನಾವು ಸತ್ಯವೇದದಲ್ಲಿ ನೋಡುವುದು ಏನೆಂದರೆ, ಅನೇಕ ಬಾರಿ ದೇವರು ಲೋಕದೊಂದಿಗೆ ರಾಜಿಯಾಗುವಂತ 10,000 ಜನರ ಮೂಲಕ ಸಾಧಿಸುವಂತ ಕಾರ್ಯಕ್ಕಿಂತ ಹೆಚ್ಚಿನದನ್ನು ಪೂರ್ಣ ಹೃದಯದಿಂದ ದೇವರನ್ನು ಹಿಂಬಾಲಿಸುವ ಒಬ್ಬ ವ್ಯಕ್ತಿಯ ಮೂಲಕ ಸಾಧಿಸುತ್ತಾರೆ. ಇದೇ ಅಂಶವನ್ನು ಯೇಸುಸ್ವಾಮಿಯು ತನ್ನ ಶಿಷ್ಯರಿಗೆ, "ನೀವು ಉಪ್ಪಾಗಿದ್ದೀರಿ," ಎಂದು ಒತ್ತಿ ಹೇಳಿದರು. "ನಾವು ಕಡಿಮೆ ಸಂಖ್ಯೆಯಲ್ಲಿ ಇದ್ದೇವೆ," ಎಂಬುದಾಗಿ ಎಂದಿಗೂ ದೂರಬೇಡಿರಿ!