ಯೇಸು ಕ್ರಿಸ್ತನು ಕರ್ತನ ಭೋಜನವನ್ನು ಸ್ಥಾಪಿಸುವಾಗ ಹಿಂದೆಂದೂ ಹೇಳಿರದಂತ “ಒಡಂಬಡಿಕೆ” ಎಂಬ ಪದವನ್ನು ಉಪಯೋಗಿಸಿದನು. ಕರ್ತನ ಭೋಜನವನ್ನು ಅರ್ಥಗರ್ಭಿತವಾಗಿ ತೆಗೆದುಕೊಳ್ಳುವ ಮೊದಲು ನಾವು ಆ ಪದದ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಹೊಂದುವದು ಅವಶ್ಯ.
ದೇವರೊಂದಿಗೆ ಒಡಂಬಡಿಕೆಯ ಸಂಬಂಧ.
ಒಡಂಬಡಿಕೆ ಎಂಬ ಪದ ಮೊತ್ತಮೊದಲ ಬಾರಿಗೆ ಆದಿಕಾಂಡ 6:18 ರಲ್ಲಿ ಕಾಣಿಸುತ್ತದೆ. ಮತ್ತು ಅಲ್ಲಿ ದೇವರು ನೋಹನೊಂದಿಗೆ ಒಡಂಬಡಿಕೆಯನ್ನು ಸ್ಥಿರ ಪಡಿಸಲು ವಾಗ್ದಾನ ಮಾಡಿದನು (ಆದಿ.9:9,11). ಮನುಷ್ಯನ ಪಾಪದ ಕಾರಣ ದೇವರು ಲೋಕವನ್ನು ನ್ಯಾಯತೀರ್ಪಿಗೆ ಒಳಪಡಿಸಿದನು ಮತ್ತು ಈಗ ದೇವರು ನೋಹನ ಸಂಗಡ ಒಂದು ಒಡಂಬಡಿಕೆ ಮಾಡಿದನು ಅದೇನಂದರೆ ಎಂದೆಂದಿಗೂ ಆತನು ಲೋಕವನ್ನು ಪ್ರವಾಹದ ಮೂಲಕ ನಾಶಪಡಿಸುವದಿಲ್ಲವೆಂದು ತಿಳಿಸಿದನು. ಈ ಒಡಂಬಡಿಕೆಯನ್ನು ಸೂಚಿಸಲು ಆತನು ಒಂದು ಚಿಹ್ನೆಯನ್ನು ಉಂಟುಮಾಡಿದನು. ಅದೇನಂದರೆ ನಾವು ಈಗ “ಕಾಮನಬಿಲ್ಲು’’ ಎಂದು ಕರೆಯುವ ಚಿಹ್ನೆ. ದೇವರು ಅದನ್ನು ಮೇಘಗಳಲ್ಲಿ ನಾನು ಇಟ್ಟಿರುವ ‘ಮುಗಿಲುಬಿಲ್ಲೆ’ ಎಂದು ಕರೆದನು. (ಆದಿ.9:13) ಬಿಲ್ಲು ಎಂಬ ಪದವನ್ನು ಸತ್ಯವೇದದ ಇತರ ಕಡೆಗಳಲ್ಲಿಯೂ ಆಯುಧಗಳಿಗೆ ‘ಬಿಲ್ಲು’ ಎಂದೇ ಅನುವಾದಿಸಲಾಗಿದೆ. ನಾವು ಬಿಲ್ಲನ್ನು ಯಾವಾಗಲೂ ಯಾವ ವ್ಯಕ್ತಿಗೆ ಗುರಿಯಿಟ್ಟಿರುತ್ತೇವೊ ಆ ದಿಕ್ಕಿನ ಕಡೆಗೆ ಬಾಣವನ್ನು ತಿರಿಗಿಸಿ ಉಪಯೋಗಿಸಬೇಕು. ಮುಗಿಲುಬಿಲ್ಲು ಆಕಾಶದ ಮೇಲ್ಗಡೆಗೆ (ಕೆಳಕ್ಕೆ ತೋರಿಸುವ ಬದಲು) ಗುರಿ ತೋರಿಸುವ ಪಾಮ್ರುಖ್ಯತೆ ಏನಂದರೆ ಪರಲೋಕದಲ್ಲಿ ವಾಸಿಸುವ ದೇವರು ಬಿಲ್ಲಿನ ಮುಖಾಂತರ ಬಿಟ್ಟ ಬಾಣವನ್ನು ತಾನೇ ಸ್ವೀಕರಿಸಿ ಮಾನವನ ಪಾಪದ ನ್ಯಾಯತೀರ್ಪನ್ನು ತಾನೇ ತೆಗೆದುಕೊಂಡನು. ಬಿಲ್ಲು ದೇವರಿಗೆ ತಾನೇ ಗುರಿ ಮಾಡಿಕೊಂಡಿರುವದಲ್ಲದೆ ಮಾನವರ ಕಡೆಗಲ್ಲ. ಅಲ್ಲಿಯ ತನಕ ದೇವರು ಲೋಕವನ್ನು ಪ್ರವಾಹದ ಮೂಲಕ ನ್ಯಾಯತೀರ್ಪಿಗೆ ಒಳಪಡಿಸಿರಲಿಲ್ಲ. ಕೀರ್ತನೆ 69:1, 2, ರಲ್ಲಿ ಈ ರೀತಿಯಾಗಿ ತಿಳಿಸುತ್ತದೆ ಏನಂದರೆ ದೇವರ ನ್ಯಾಯತೀರ್ಪಿನ ಪ್ರವಾಹವು ಶಿಲುಬೆಯಲ್ಲಿದ್ದ ಯೇಸುಕ್ರಿಸ್ತನ ಮೇಲೆ ಹರಿಯಿತು. ಈ ಮುಗಿಲುಬಿಲ್ಲಿನ ಚಿಹ್ನೆಯು ಮೇಲೆ ಹೇಳಿದ ಪ್ರವಾದನೆಯನ್ನು ನೆರವೇರಿಸಿತು.
ಸತ್ಯವೇದದಲ್ಲಿ ದೇವರೊಡನೆ ಒಡಂಬಡಿಕೆ ಮಾಡಿದ ಇನ್ನೊಂದು ವ್ಯಕ್ತಿ ಅಬ್ರಾಮನು. ಇದನ್ನು ನಾವು ಆದಿ.15:18ರಲ್ಲಿ ಕಾಣಬಹುದು. ದೇವರು ಯಾವ ರೀತಿಯಲ್ಲಿ ಅಬ್ರಾಮನೊಡನೆ ಒಡಂಬಡಿಕೆ ಮಾಡಿದನು ಎಂಬದನ್ನು ಇಲ್ಲಿ ಗಮನಿಸಿರಿ. ಆತನು ಅಬ್ರಾಮನಿಗೆ ಮೂರು ಪಶುಗಳನ್ನು ಮತ್ತು ಎರಡು ಪಕ್ಷಿಗಳನ್ನು ಕೊಂದು ನೆಲದ ಮೇಲೆ ಹರಡಲು ಹೇಳಿದನು (ಆದಿ.15:9,10) . ಪಶುಗಳನ್ನು ಎರಡು ಭಾಗ ಮಾಡಿದ ಮೇಲೆ ಅರ್ಧ ಭಾಗವನ್ನು ಎದುರುಬದುರಾಗಿ ಇಡಬೇಕಿತ್ತು. ರಾತ್ರಿಯಲ್ಲಿ ದೇವರು ಕೆಳಗಿಳಿದು ಬಂದು ಹೊಗೆ ಹಾಯುವ ಒಲೆಯೂ ಉರಿಯುವ ದೀವಿಟಿಗೆಯ ಹಾಗೆ ಸತ್ತ ಪ್ರಾಣಿಗಳ ಮಧ್ಯದಲ್ಲಿ ಹಾದು ಹೋದನು. ಹೀಗೆ ಆ ದಿನದಲ್ಲಿ ದೇವರು ಅಬ್ರಾಮನೊಡನೆ ಒಡಂಬಡಿಕೆ ಮಾಡಿದನು. ದೇವರು ಸ್ವತಃ ತನ್ನ ಜೀವವನ್ನು (ಸತ್ತ ಪಶುವಿನ ಹಾಗೆ) ಅಬ್ರಾಮನಿಗೋಸ್ಕರ ಕೊಟ್ಟನು ಎಂಬ ಪ್ರಾಮುಖ್ಯ ವಿಷಯ ಮತ್ತೊಮ್ಮೆ ಸ್ಪಷ್ಟವಾಗುತ್ತದೆ. ನೋಹನ ಸಂಗಡ ಮಾಡಿದ ಒಡಂಬಡಿಕೆಯ ಚಿಹ್ನೆಯಂತೆ ಸಾಯುವದರ ಮೂಲಕ ಒಡಂಬಡಿಕೆಯನ್ನು ಸ್ಥಾಪಿಸಿದನು. ಸಾಯುವುದರ ಮೂಲಕ ದೇವರು ಸ್ವತಃ ತಾನೇ ಮೊದಲ ಹೆಜ್ಜೆಯನ್ನು ಇಟ್ಟನು.
ಈ ರೀತಿಯಾಗಿ ಒಡಂಬಡಿಕೆಯನ್ನು ಸ್ಥಾಪಿಸುವದು ಮತ್ತು ಸ್ಥಿರಪಡಿಸುವದು ನಂತರದ ದಿನಗಳಲ್ಲಿ ಇಸ್ರಾಯೇಲ್ಯರಲ್ಲಿ ಒಂದು ರೂಢಿಯಾಗಿ ಪರಿಣಮಿಸಿತು. (ಯೆರೆಮಿಯ 34:18,19) ಇಬ್ಬರು ಮನುಷ್ಯರು ಒಂದು ಒಡಂಬಡಿಕೆಗೆ ಪ್ರವೇಶಿಸುವಾಗ ಒಂದು ಕರುವನ್ನು ಬಲಿ ಅರ್ಪಿಸಿ ಎರಡು ಹೋಳು ಮಾಡಿ ಆ ಎರಡು ಹೋಳಿನ ನಡುವೆ ನಡೆಯುವದರ ಮೂಲಕ ಪ್ರತಿಯೊಬ್ಬನು ತನ್ನ ಜೀವವನ್ನು ಕೊಡಲು ಸಿದ್ದನಾಗಿರುವೆನೆಂದು ಸಾಂಕೇತಿಕವಾಗಿ ಈ ಒಡಂಬಡಿಕೆಯ ಮೂಲಕ ಸ್ಥಿರಪಡಿಸುತ್ತಾರೆ. ಇಂತ ಒಂದು ಸಾಂಕೇತಿಕವಾದ ಒಡಂಬಡಿಕೆಯನ್ನು ಮಾಡಿ ಅದನ್ನು ಮುರಿದು ಬಿಟ್ಟರೆ ಅದೊಂದು ಗಂಭೀರವಾದ ಅಪರಾಧವಾಗುತ್ತದೆ. ಆದ್ದರಿಂದ ದೇವರು ಯೆರೆಮಿಯನ ಮೂಲಕ ಇಸ್ರಾಯೇಲ್ಯರಿಗೆ ತಿಳಿಸಿದ್ದೇನಂದರೆ ಈ ರೀತಿ ಒಡಂಬಡಿಕೆ ಮಾಡಿ ಅದನ್ನು ಮುರಿದು ಬಿಟ್ಟರೆ ದೇವರು ಅವರನ್ನು ತೀವ್ರವಾದ ರೀತಿಯಲ್ಲಿ ನ್ಯಾಯತೀರ್ಪಿಗೆ ಒಳಪಡಿಸುವನೆಂದು ತಿಳಿಸಿದನು.
ಆದಿಕಾಂಡ 17 ರಲ್ಲಿ ದೇವರು ಅಬ್ರಹಾಮನೊಡನೆ ಒಡಂಬಡಿಕೆಯನ್ನು ಇನ್ನೊಮ್ಮೆ ಸ್ಥಿರಪಡಿಸಿದನು. ದೇವರು ಒಡಂಬಡಿಕೆಯನ್ನು ಸ್ಥಾಪಿಸಲು ಒಂದು ಚಿಹ್ನೆಯನ್ನು ಕೊಟ್ಟನು. ಅದೇನಂದರೆ - ಸುನ್ನತಿ. ಸುನ್ನತಿ ಎಂದರೆ ಶರೀರವನ್ನು ಕತ್ತರಿಸುವದು ಮತ್ತು ಇದು ಶರೀರಾಧೀನ ಸ್ವಬಾವಕ್ಕೆ ಸಾವನ್ನು ಸೂಚಿಸುತ್ತದೆ. (ಪಿಲಿಪ್ಪಿ 3:3 ಮತ್ತು ಕೊಲೊಸ್ಸೆ 2:11) ಒಡಂಬಡಿಕೆಯು ಸಾವನ್ನು ಸೂಚಿಸುವ ಗುರುತಾಗಿದೆ ಎಂದು ಮತ್ತೊಮ್ಮೆ ಗಮನಿಸುತ್ತೇವೆ. ಈಗ ಅಬ್ರಹಾಮ ಮತ್ತು ಅವನ ಸಂತತಿಯವರು ಸಾವನ್ನು ಒಪ್ಪಿಕೊಳ್ಳುವಷ್ಟರ ಮಟ್ಟಿಗೆ ಒಡಂಬಡಿಕೆಗೆ ಸ್ವ-ಇಚ್ಚೆಯಿಂದ ನಂಬಿಗಸ್ತರಾಗುವೆವೆಂದು ವ್ಯಕ್ತಪಡಿಸುತ್ತಾರೆ. ಇಸ್ರಾಯೇಲ್ಯರು ಹೃದಯದ ಸುನ್ನತಿಯ ಮೂಲಕ ದೇವರನ್ನು ಪೂರ್ಣ ಮನಸ್ಸಿನಿಂದ ಪ್ರೀತಿಮಾಡಬೇಕೆಂದು ಆತನ ಇಚ್ಚೆಯಾಗಿದೆ. ಬಾಹ್ಯ ಸುನ್ನತಿ ಬರೀ ಚಿಹ್ನೆ ಮಾತ್ರ. (ಧರ್ಮೊ.30:6, ರೋಮ 2:28-29) ಶರೀರಾಧೀನ ಸ್ವಬಾವಕ್ಕೆ ಸಾವಿಲ್ಲದೆ ನಾವು ದೇವರನ್ನು ಪೂರ್ಣ ಮನಸ್ಸಿನಿಂದ ಪ್ರೀತಿ ಮಾಡಲಾಗದು ಎಂದು ಇದು ನಮಗೆ ಕಲಿಸುತ್ತದೆ.
ಇನ್ನೊಂದು ಒಡಂಬಡಿಕೆಯನ್ನು ದೇವರು ಮೋಶೆಯ ಮೂಲಕ ಇಸ್ರಾಯೇಲ್ ರಾಜ್ಯದೊಡನೆ ಮಾಡಿದ್ದನ್ನು ನಾವು ನೋಡಬಹುದು. ಅದನ್ನು ನಾವು ಹಳೆ ಒಡಂಬಡಿಕೆ ಅಥವಾ ಹಳೆ ನಿಯಮ ಎಂದು ಕರೆಯುತ್ತೇವೆ. ಇದನ್ನು ನಾವು ವಿಮೋ. 24:7 ರಲ್ಲಿ ಓದುತ್ತೇವೆ. ಮೋಶೆಯು ದೇವರ ವಚನಗಳನ್ನು ಪುಸ್ತಕದಲ್ಲಿ ಬರೆದು (ನಿಬಂಧನ ಗ್ರಂಥ) ಹೋರಿಗಳನ್ನು ಯೆಹೋವನಿಗೆ ಯಜ್ಞ ಮಾಡಿದನು. ಮತ್ತು ಅದರ ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ - “ಇಗೋ, ಈ ಗ್ರಂಥದಲ್ಲಿ ಹೇಳಿರುವ ಎಲ್ಲಾ ಆಜ್ಞೆಗಳ ಪ್ರಕಾರ ಯೆಹೋವನು ನಿಮ್ಮ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಸ್ಥಿರಪಡಿಸುವ ರಕ್ತವು ಇದೇ ಅಂದನು.” (ವಿಮೋ.24:8) ಈ ಒಡಂಬಡಿಕೆಯು ಬಲಿ ಅರ್ಪಿಸಿದ ಪಶುವಿನ ರಕ್ತದ ಮೂಲಕ ದೃಢೀಕರಿಸಿತು.
ಈ ರಕ್ತದ ಒಡಂಬಡಿಕೆ ಸತ್ಯವೇದದಲ್ಲಿ ಮೊದಲನೆಯ ಬಾರಿಗೆ ಸ್ಥಾಪಿಸಿದನ್ನು ನಾವು ನೋಡುತ್ತೇವೆ. ಯೇಸುಕ್ರಿಸ್ತನು ಈ ಮೇಲೆ ಹೇಳಿದ ಪದವನ್ನು ಉಪಯೋಗಿಸಿ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರ ಮಾಡಿ ಅವರಿಗೆ ಕೊಟ್ಟು ಇದು ನನ್ನ ರಕ್ತ ಇದು ಒಡಂಬಡಿಕೆಯ ರಕ್ತ. ಇದು ಪಾಪಗಳ ಕ್ಷಮೆಗಾಗಿ ಬಹುಜನರಿಗಾಗಿ ಸುರಿಸಲ್ಪಡುವ ರಕ್ತ ಎಂದು ಶಿಷ್ಯರಿಗೆ ಕಡೆ ಭೋಜನ ಮಾಡುವಾಗ ಹೇಳಿದನು. ಹಳೆ ಒಡಂಬಡಿಕೆಯ ಪದ್ದತಿ ಪ್ರಕಾರ ರಕ್ತವನ್ನು ಜನರ ಮೇಲೆ ಪ್ರೋಕ್ಷಿಸುತ್ತಿದ್ದರು. ಹೊಸ ಒಡಂಬಡಿಕೆ ಪ್ರಕಾರ ಯೇಸುಕ್ರಿಸ್ತನು ನಮ್ಮನ್ನು ಪಾತ್ರೆಯಲ್ಲಿ ಕುಡಿಯಲು ಆಹ್ವಾನಿಸುತ್ತಿದ್ದಾನೆ. ಹಳೆ ಒಡಂಬಡಿಕೆಯಲ್ಲಿ ಧರ್ಮಶಾಸ್ತ್ರವು ಮನುಷ್ಯನ ಬಾಹ್ಯ ಜೀವಿತವನ್ನು ಮಾತ್ರ ಶುದ್ದ ಮಾಡುತ್ತದೆ. ಆದರೆ ಹೊಸ ಒಡಂಬಡಿಕೆ ನಮ್ಮ ಆಂತರಿಕ ಜೀವಿತವನ್ನು ಶುದ್ಧ ಮಾಡುತ್ತದೆ ಎಂಬ ಸತ್ಯವನ್ನು ಇದು ಸೂಚಿಸುತ್ತದೆ.
ಮತ್ತೆ ಒಡಂಬಡಿಕೆಯು ಸಾವಿನ ಮೂಲಕ ಪ್ರವೇಶಿಸುತ್ತದೆ. ಇಬ್ರಿಯ 9:13-22 ರಲ್ಲಿ ಪಶುಗಳ ರಕ್ತಕ್ಕೂ ಮತ್ತು ಯೇಸು ಕ್ರಿಸ್ತನ ರಕ್ತಕ್ಕೂ ಮದ್ಯೆ ಇರುವ ವ್ಯತ್ಯಾಸವನ್ನು ಸೂಚಿಸುತ್ತದೆ. ಅದೇನಂದರೆ ಮರಣ ಶಾಸನವು ಇರುವಲ್ಲಿ ಅದನ್ನು ಬರೆಯಿಸಿದವನ ಮರಣವು ಅವಶ್ಯವಾಗಿದೆ. ಮರಣ ಶಾಸನವು ಮರಣವಾದ ಮೇಲೆ ನಡೆಯುವುದೇ ಹೊರತು ಬರೆಯಿಸಿದವನು ಜೀವದಿಂದಿರುವಾಗ ಅಲ್ಲ. (ವ.16,17) ಆದುದರಿಂದ ದೇವರು ಮಾನವನೊಡನೆ ಮಾಡಿದ ಪ್ರತಿಯೊಂದು ಒಡಂಬಡಿಕೆಯ ಪ್ರತಿಯೊಂದು ಗುರುತು ಮರಣವನ್ನು ಸೂಚಿಸುತ್ತದೆ.
ಯೇಸುಕ್ರಿಸ್ತನು ನಮ್ಮಲ್ಲಿ ಹೊಸ ಒಡಂಬಡಿಕೆಯನ್ನು ಸ್ಥಾಪಿಸಲು ಒಂದೇ ಒಂದು ಮಾರ್ಗ ಏನಂದರೆ ಆತನ ಸ್ವಯಂ ಮರಣದ ಮೂಲಕ ಮಾತ್ರವೇ ಸಾಧ್ಯ ಮತ್ತು ನಮ್ಮ ಸ್ವಂತ ಇಚ್ಚೆಯನ್ನು ಸಾಯಿಸುವದರ ಮೂಲಕ ಮಾತ್ರ ನಾವು ಆತನು ಮಾಡಿದ ಒಡಂಬಡಿಕೆಗೆ ಪ್ರವೇಶಿಸಲು ಮತ್ತು ಅದರ ಆಶೀರ್ವಾದಗಳನ್ನು ಪಡೆಯಲು ಸಾಧ್ಯ. ಇದೇ ಕರ್ತನ ಮೇಜಿನಲ್ಲಿ ರೊಟ್ಟಿಯನ್ನು ಮುರಿಯುವುದು ಮತ್ತು ದ್ರಾಕ್ಷರಸವನ್ನು ಕುಡಿಯುವುದರ ನಿಜವಾದ ಅರ್ಥ.
ಇಬ್ರಿಯ 13:20 ರಲ್ಲಿ ದೇವರು ಯೇಸುಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದು ಆತನ ನಿತ್ಯವಾದ ರಕ್ತದ ಒಡಂಬಡಿಕೆಯಿಂದ ಎಂದು ಹೇಳಲ್ಪಟ್ಟಿದೆ. ಇದರ ಅರ್ಥವೇನು? ಕ್ರಿಸ್ತನು ತನ್ನ ಜೀವವನ್ನೇ ಕೊಡುವಷ್ಟರ ಮಟ್ಟಿಗೆ ಪಾಪವನ್ನು ವಿರೋಧಿಸಿ ಕಾಲ್ಪರಿ ಕ್ರೂಜೆಯಲ್ಲಿ ತನ್ನ ರಕ್ರವನ್ನು ಚೆಲ್ಲಿದನು. (ಇಬ್ರಿಯ 12:4) ಯೇಸು ಕ್ರಿಸ್ತನು ಪಾಪವನ್ನು ಮಾಡದೆ ತಂದೆಗೆ ವಿಧೇಯನಾಗಬೇಕೆಂದು ನಿರ್ಧಾರ ಮಾಡಿದ್ದನು. ತಾನು ಒಂದು ಚಿಕ್ಕ ವಿಷಯದಲ್ಲಾದರೂ ಅವಿಧೇಯನಾಗುವದಕ್ಕಿಂತ ಸಾಯಲು ಸಿದ್ದನಾಗಿರುವೆನೆಂದು ಆತನು ತನ್ನ ತಂದೆಯೊಂದಿಗೆ ನಡೆದುಕೊಳುತ್ತಿದ್ದನು. (ಪಿಲಿಪ್ಪಿ 2:8 ಸಾಯುವಷ್ಟರ ಮಟ್ಟಿಗೆ ವಿಧೇಯನಾದನು) ಇದು ಯೇಸು ಕ್ರಿಸ್ತನು ತನ್ನ ತಂದೆಯೊಡನೆ ಮಾಡಿದ ಒಡಂಬಡಿಕೆ.
ಈಗ ಯೇಸು ಕ್ರಿಸ್ತನು ನಮ್ಮನ್ನು ಆತನ ಮೇಜಿಗೆ ಆತನ ಹೊಸ ಒಡಂಬಡಿಕೆಯ ರಕ್ತವನ್ನು ಕುಡಿಯಲು ಆಹ್ವಾನಿಸುತ್ತಾನೆ. ನಾವು ಸಿದ್ದರಿದ್ದೇವೊ? ಆತನು ಕುಡಿದ ಪಾತ್ರೆಯಲ್ಲಿ ಈಗ ನಾವು ಕುಡಿಯಲು ಸಿದ್ದರಿದ್ದೇವೊ? ನಾವು ಅಪೋಸ್ತಲನಾದ ಪೌಲನ ಪ್ರಕಾರ ಆತನನ್ನೂ ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನು ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನು ತಿಳಕೊಂಡು ಆತನ ಮರಣದ ವಿಷಯದಲ್ಲಿ ಆತನಿಗೆ ಸ್ವರೂಪನಾಗಬೇಕೆಂದು ಕುತೂಹಲ ನಮಗಿದೆಯೋ? (ಪಿಲಿಪ್ಪಿ 3:10-11) ಅನೇಕ ವಿಸ್ವಾಸಿಗಳು ಕರ್ತನ ಮೇಜಿಗೆ ಬಹಳ ಹಗುರವಾಗಿ ಕ್ರಿಸ್ತನ ಒಡಂಬಡಿಕೆಯ ಅರ್ಥ ಮತ್ತು ಅದರ ಪರಿಣಾಮ ಏನೆಂದು ತಿಳಿಯದೆ ಬರುತ್ತಾರೆ. ಯಾರು ಪಾಪದ ವಿರುದ್ಧವಾಗಿ ಹೋರಾಡಲು ತನ್ನ ರಕ್ತವನ್ನಾದರೂ ಸುರಿಸಲು ಸಿದ್ದ ಮನಸ್ಸಿರುಳ್ಳವರಾಗಿರುತ್ತಾರೋ ಅವರು ಕರ್ತನ ಮೇಜಿನಲ್ಲಿ ಪಾಲು ತೆಗೆದುಕೊಳ್ಳಲು ಅರ್ಹರಾಗಿದ್ದಾರೆ.
“ಒಡಂಬಡಿಕೆ” ಎಂಬ ಪದ ನ್ಯಾಯಲಯದಲ್ಲಿ ನಾವು ಸಹಿ ಹಾಕುವ ವಿಧಿಯುಕ್ತವಾದ ಒಪ್ಪಂದದ ಪ್ರಕಾರ ಇರುವದು. ನ್ಯಾಯಲಯದಲ್ಲಿ ಯಾರು ಒಂದು ಒಪ್ಪಂದವನ್ನು ಸೂಕ್ಷ್ಮವಾಗಿ ಮತ್ತು ಕೂಲಂಕಷವಾಗಿ ಒಪ್ಪಂದದ ನಿಯಮಗಳನ್ನು ಓದದೆ ಮತ್ತು ಅರ್ಥ ಮಾಡಿಕೊಳ್ಳದೆ ಸಹಿಯನ್ನು ಹಾಕುವುದಿಲ್ಲ. ಆದರೆ ನಮ್ಮ ಸಭೆಗಳಲ್ಲಿ ವಿಶ್ವಾಸಿಗಳು ಎಷ್ಟು ಹಗುರವಾಗಿ ರೊಟ್ಟಿ ಮತ್ತು ದ್ರಾಕ್ಷರಸವನ್ನು ಕರ್ತನ ಮೇಜಿನಲ್ಲಿ ತೆಗೆದುಕೊಳ್ಳುವುದನ್ನು ನಾವು ಕಾಣುತ್ತಿದ್ದೇವೆ. ಕೊರಿಂಥ ಸಭೆಯಲ್ಲಿದ್ದಂತೆ ಈಗಲೂ ಅನೇಕ ವಿಶ್ವಾಸಿಗಳು ಬಲಹೀನರಾಗಿರುವದು (ಆತ್ಮೀಕವಾಗಿ ಮತ್ತು ಶಾರೀರಿಕವಾಗಿ) ರೋಗಿಗಳಾಗಿರುವದು (ಆತ್ಮೀಕವಾಗಿ ಮತ್ತು ಶಾರೀರಿಕವಾಗಿ) ಹಾಗು ಅನೇಕರು ದೇವರು ನೇಮಿಸಿದ ಸಮಯದ ಮೊದಲೇ ಸಾಯುವುದು ಆಶ್ಚರ್ಯದ ಸಂಗತಿಯಲ್ಲ. (1 ಕೊರಿ.11:30) ಕಾರಣವೇನಂದರೆ ಅವರು ಕರ್ತನ ಮೇಜಿಗೆ ಹಗುರವಾಗಿ ಬರುತ್ತಾರೆ.
ಯಾಜಕಕಾಂಡ 26:14-20 ರಲ್ಲಿ ದೇವರು ಇಸ್ರಾಯೇಲ್ಯರಿಗೆ ಈ ರೀತಿಯಾಗಿ ಎಚ್ಚರಿಸಿದ್ದನು. ನೀವು ನನ್ನೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಮುರಿದರೆ ನೀವು ಅನೇಕ ತರಹದ ರೋಗಗಳಿಂದಲೂ, ವ್ಯಾಧಿಗಳಿಂದಲೂ ಪೀಡಿತರಾಗಿ ಸೋತು ಹೋಗುವಿರಿ ಹಾಗೂ ನೀವು ಮಾಡುವ ಯಾವ ಕೆಲಸದಲ್ಲಿಯೂ ಅಥವಾ ವ್ಯವಹಾರದಲ್ಲಿ ಲಾಭ ಉಂಟಾಗುವುದಿಲ್ಲ.
ಒಡಂಬಡಿಕೆಯನ್ನು ಮುರಿಯುವುದು ಬಹು ಗಂಭೀರವಾದ ಕಾರ್ಯ. ಪ್ರಸಂಗಿ 5:2-5 ರಲ್ಲಿ “ದೇವರ ಮುಂದೆ ಮಾತಾಡಲು ನಿನ್ನ ಹೃದಯದಲ್ಲಿ ಆತುರ ಪಡದಿರು...ನೀನು ದೇವರಿಗೆ ಹರಕೆಯನ್ನು ಕಟ್ಟಿದರೆ ಅದನ್ನು ತೀರಿಸಲು ತಡಮಾಡಬೇಡ...ನೀನು ಹರಸಿಕೊಂಡು ತೀರಿಸದೆ ಇರುವದಕ್ಕಿಂತ ಹರಕೆ ಮಾಡಿಕೊóಳ್ಳದೆ ಇರುವದು ವಾಸಿ.”
ಯಾರಾದರು ಅನಾರೋಗ್ಯದಿಂದ ಮತ್ತು ವ್ಯಾಧಿಯಿಂದ ಪದೇ ಪದೇ ಪೀಡಿತರಾದರೆ ನಾವು ದೇವರೊಡನೆ ಮಾಡಿದ ಒಡಂಬಡಿಕೆಯನ್ನು ಅಲಕ್ಷ್ಯ ಮಾಡಿ ಮುರಿದಿದ್ದೇವೋ ಎಂದು ಪರೀಕ್ಷೆ ಮಾಡತಕ್ಕದ್ದು. ನಿಮ್ಮ ರೋಗಗಳಿಂದ ಸ್ವಸ್ಥತೆ ಹೊಂದಬೇಕಾದರೆ ನಿಮ್ಮ ಪಾಪಗಳನ್ನು ಅರಿಕೆ ಮಾಡಿರಿ ಎಂಬದಾಗಿ ಯಾಕೋಬನು ತಿಳಿಸುತ್ತಾನೆ. (ಯಾಕೋಬ 5:16)
ನಾವು ಮುರಿಯುವ ರೊಟ್ಟಿ ಕ್ರಿಸ್ತನ ದೇಹವನ್ನು ಸೂಚಿಸುತ್ತದೆ. ಮೊದಲನೆಯದಾಗಿ, ಕ್ರಿಸ್ತನು ಈ ಲೋಕಕ್ಕೆ ಬಂದಾಗ ಧರಿಸಿದ ಶರೀರದಲ್ಲಿ ತನ್ನ ಇಚ್ಚೆಯನ್ನು ನಿರ್ವಹಿಸದೆ ತಂದೆಯ ಇಚ್ಚೆಯನ್ನೇ ನೆರವೇರಿಸಿದನೆಂದು ಅದು ಸೂಚಿಸುತ್ತದೆ. (ಇಬ್ರಿಯ 10:5-7) ಈ ಲೋಕದಲ್ಲಿ ಇರುವಷ್ಟು ಸಮಯ ಕ್ರಿಸ್ತನ ದೇಹವು ಮುರಿದ ಮತ್ತು ತ್ಯಾಗಮಯವಾದ ದೇಹವಾಗಿತ್ತು. ಆತನ ದೇಹವು ರೊಟ್ಟಿಯ ಹಾಗೆ ಇತ್ತು ಹೇಗಂದರೆ ಬಹು ಮೆತ್ತಗೆ ಹಿಡಿದರೆ ಮುರಿಯುವ ಸ್ಥಿತಿಯಲ್ಲಿತ್ತು. ಎಲ್ಲಾ ವಿಷಯದಲ್ಲಿಯೂ ತಂದೆಯ ಚಿತ್ತಕ್ಕೆ ಒಳಗಾಗುವಂಥ ಒಂದು ದೇಹವಾಗಿತ್ತು. ನಾವು ರೊಟ್ಟಿಯನ್ನು ಮುರಿದು ಅದರಲ್ಲಿ ಪಾಲುಗೊಳ್ಳುವಾಗ ನಾವು ಕ್ರಿಸ್ತನ ತರಹ ನಮ್ಮ ದೇಹವನ್ನು ಮುರಿಯಲು ಮತ್ತು ತ್ಯಜಿಸಲು ತಯಾರಾಗಿದ್ದೇವೆಂದು ಗಂಭೀರವಾಗಿ ಕರ್ತನ ಮುಂದೆ ಸಾಕ್ಷಿ ಹೇಳುತ್ತೇವೆ. ಈ ರೀತಿಯಾಗಿ ಕರ್ತನ ಮುಂದೆ ನಾವು ಸಾಕ್ಷಿ ಹೇಳಿ ನಂತರ ನಾವು ಆತನ ಒಡಂಬಡಿಕೆಯನ್ನು ಮುರಿದು ಏನೂ ಮಾಡದವರಂತೆ ಜೀವಿಸುವುದು ಬಹು ಗಂಭೀರವಾದದ್ದು. ನಮ್ಮಲ್ಲಿ ಸಂಪೂರ್ಣ ವಿಧೇಯತೆ ಇಲ್ಲದಿರಬಹುದು ಆದರೆ ಕರ್ತನು ನಮ್ಮಿಂದ ಮಾತ್ರವಲ್ಲದೆ, ಹೊಸ ವಿಶ್ವಾಸಿಗಳು ಕೂಡ ಸ್ವ-ಇಚ್ಚೆಗೆ ಸತ್ತು ತಮಗೋಸ್ಕರ ಜೀವಿಸದೆ, ಸತ್ತು ಎದ್ದು ಬಂದಾತನಿಗೋಸ್ಕರ ಜೀವಿಸಬೇಕೆಂದು ದೇವರು ಅಪೇಕ್ಷಿಸುತ್ತಾನೆ (2 ಕೊರಿ. 5:15) ಈ ರೀತಿಯಾಗಿ ಜೀವಿಸದಿದ್ದರೆ, ನಾವು ಅಯೋಗ್ಯರಾಗಿ ಕರ್ತನ ದೇಹವನ್ನು ಸರಿಯಾಗಿ ವಿವೇಚಿಸದೆ ಕರ್ತನ ರೊಟ್ಟಿಯಲ್ಲಿ ಪಾಲು ತೆಗೆದುಕೊಳ್ಳುತ್ತೇವೆ.
ಸಹೋದರರೊಳಗೆ ಒಡಂಬಡಿಕೆಯ ಸಂಬಂಧ.
ನಾವು ರೊಟ್ಟಿಯನ್ನು ಮುರಿದು ತಿನ್ನುವುದು ಕ್ರಿಸ್ತನ ಶರೀರ ಮಾತ್ರವಲ್ಲದೆ ಕ್ರಿಸ್ತನ ದೇಹವೆಂಬ ಸಭೆಯನ್ನು ಸೂಚಿಸುತ್ತದೆ. (1 ಕೊರಿ. 10:16-17) ಯಾಕಂದರೆ ರೊಟ್ಟಿಯು ಒಂದೇಯಾಗಿರುವದರಿಂದ ಅನೇಕರಾಗಿರುವ ನಾವು ಒಂದೇ ದೇಹದಂತಿದ್ದೇವೆ. ಯಜ್ವ ಮಾಡಿದ್ದನ್ನು ತಿನ್ನುವವರು ಯಜ್ಞವೇದಿಯೊಡನೆ ಭಾಗಿಗಳಾಗಿದ್ದಾರಲ್ಲವೇ? (1 ಕೊರಿ. 10:18) ನಾವು ಕರ್ತನ ಮೇಜಿನಲ್ಲಿ ಪಾಲು ತೆಗೆದುಕೊಂಡರೆ ನಾವು ಆತನ ಕ್ರೂಜೆಯ ಮರಣದಲ್ಲಿಯೂ (ಯಜ್ಞವೇದಿಯಲ್ಲಿಯೂ) ಪಾಲುಗಾರರಾಗಬೇಕು. ದೇವರೊಂದಿಗೂ ಮತ್ತು ಕ್ರಿಸ್ತನ ದೇಹಕ್ಕೆ ಅನ್ಯೋನ್ಯವಾಗಿರುವವರೊಂದಿಗೂ ನಮ್ಮ ಸ್ವ-ಇಚ್ಚೆಯನ್ನು ಸಾಯಿಸಬೇಕು.
“ನಾವು ನಮ್ಮ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.” 1 ಯೋಹಾನ 3:16. ಇದು ಇನ್ನೊಂದು ತರಹದ ಕ್ರಿಸ್ತನ ಮೇಜಿನ ಬಗ್ಗೆ ಇರುವ ಸಾಕ್ಷಿಯಾಗಿದೆ. ನಾವು ಕ್ರಿಸ್ತನೊಡನೆ ಒಡಂಬಡಿಕೆಗೆ ಪ್ರವೇಶಿಸುವುದು ಮಾತ್ರವಲ್ಲದೆ ನಮ್ಮ ಸಹ ವಿಶ್ವಾಸಿಗಳೊಡನೆ ಕೂಡ ಪ್ರವೇಶಿಸುತ್ತೇವೆ. ಇಲ್ಲಿಯೂ ಸಹ ಸ್ವ-ಇಚ್ಚೆಯ ಸಾವಿನ ಮೂಲಕ ಒಡಂಬಡಿಕೆಗೆ ಪ್ರವೇಶಿಸುತ್ತೇವೆ.
ಇಸ್ರಾಯೇಲ್ಯರು ಒಡಂಬಡಿಕೆ ಸ್ಥಾಪಿಸುವಾಗ, ಎರಡು ಪಕ್ಷದ ಜನರು ಕರುವನ್ನು ಸೀಳಿ, ಅದರ ಹೋಳುಗಳ ನಡುವೆ ಹಾದುಹೋಗುವ ರೀತಿಯಲ್ಲಿ ಈಗ ನಾವು ಸಹ ಸಹೋದರರೊಂದಿಗೆ ಒಡಂಬಡಿಕೆ ಮಾಡಲು ಮುರಿದ ರೊಟ್ಟಿಗಳ ನಡುವೆ ಪ್ರವೇಶಿಸಬೇಕು. ಇದು ದೇವರೊಂದಿಗೆ ಮಾಡಿದ ಒಡಂಬಡಿಕೆಯಷ್ಟೇ ಗಂಭೀರವಾಗಿದೆ.
1ನೇ ಸಮುವೇಲ 18:1-8 ರಲ್ಲಿ ನಾವು ಯೋನಾತಾನನು ದಾವೀದನೊಡನೆ ಮಾಡಿದ ಒಡಂಬಡಿಕೆಯನ್ನು ನಾವು ನೋಡುತ್ತೇವೆ. ಇದು ಯಾವ ರೀತಿಯಲ್ಲಿ ನಮ್ಮ ಒಡಂಬಡಿಕೆಯ ಸಂಬಂಧ ಸಭೆಯೆಂಬ ಕ್ರಿಸ್ತನ ದೇಹದ ಪ್ರಕಾರವಾಗಿರಬೇಕೆಂಬ ಸುಂದರವಾದ ಚಿತ್ರಣವಾಗಿದೆ. ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಂದಿಗೆ ಒಂದಾಯಿತು ಎಂದು ಇಲ್ಲಿ ಹೇಳುತ್ತದೆ. ‘ಒಂದಾಯಿತು’ಎಂಬ ಪದ ನೆಹೆ.4:6 ರಲ್ಲಿ ಹೇಳಲ್ಪಟ್ಟಿದೆ. ಏನಂದರೆ ಅವರು ಗೋಡೆಯನ್ನು ಯಾವ ರೀತಿಯಲ್ಲಿ ಕಟ್ಟಿದರೆಂದರೆ ಎಲ್ಲಿಯೂ ಒಂದು ಸ್ವಲ್ಪ ಸಹ ಬಿರುಕು ಇರದೆ ಜೋಡನೆಯಾಗಿ ಕಟ್ಟಿದರು. ಇದೇ ತರಹ ಯೋನಾತಾನನ ಹೃದಯವೂ ಸಹ ದಾವೀದನ ಹೃದಯದೊಂದಿಗೆ ಎಷ್ಟು ಜೋಡನೆಯಾಗಿತ್ತೆಂದರೆ ಅಲ್ಲಿ ಸ್ವಲ್ಪ ಬಿರುಕು ಸಹ ಇಲ್ಲದ್ದರಿಂದ ಶತ್ರುವಿಗೆ ಒಳಗೆ ಬರಲು ಸಾಧ್ಯ ಇರಲಿಲ್ಲ. ಮತ್ತು ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು ಎಂದು ಬರೆಯಲ್ಪಟ್ಟಿದೆ. ಸಭೆಯೆಂಬ ಕ್ರಿಸ್ತನ ದೇಹದಲ್ಲಿ ನಮ್ಮ ಕರೆ ಸಹ ಇದೇ ರೀತಿಯಾಗಿದೆ. ಹೇಗಂದರೆ ನಾವು ಒಂದಾಗಿ ಜೋಡನೆಯಾಗಬೇಕು. ಸ್ವಲ್ಪ ಸಹ ಬಿರುಕು ನಮ್ಮ ಮಧ್ಯದಲ್ಲಿರಬಾರದು. (ಅಪಾರ್ಥ ಮಾಡಿಕೊಳ್ಳುವಂಥದ್ದು, ಹೊಟ್ಟೆಕಿಚ್ಚು, ಸಂಶಯ ಮುಂತಾದ ಬಿರುಕು ) ಶತ್ರು ಒಳಗೆ ಬಂದು ನಮ್ಮನ್ನು ವಿಭಜನೆ ಮಾಡದಂಥ ರೀತಿಯಲ್ಲಿ ನಾವು ಒಂದಾಗಿರಬೇಕು.
ಯೋನಾತಾನನು ದಾವೀದನ ಮೇಲೆ ಬಹಳ ಹೊಟ್ಟೆಕಿಚ್ಚು ಪಡುವ ವ್ಯಕ್ತಿಯಾಗಿದ್ದಿರಬೇಕಿತ್ತು. ಯಾಕಂದರೆ ಸೌಲನ ನಂತರ ಆತನು ರಾಜನ ಪದವಿಗೆ ಬರಲು ದಾವೀದನು ಒಂದು ಬೆದರಿಕೆಯಾಗಿದ್ದನು. ಇಂಥ ಪರಿಸ್ಥಿತಿಯಲ್ಲಿ ಸಹ ಆತನು ಹೊಟ್ಟೆಕಿಚ್ಚು ಪಡುವಂತ ಸ್ವಭಾವವನ್ನು ಜಯಿಸಿ ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸಿದನು. ಹೇಗೆ ಯೋನಾತಾನನು ಹೊಸ ಒಡಂಬಡಿಕೆಯ ವಿಶ್ವಾಸಿಗಳನ್ನು ನಾಚಿಕೆ ಪಡಿಸುತ್ತಾನೆ ನೋಡಬಹುದು.
ಅನಂತರ ಯೋನಾತಾನನು ದಾವೀದನೊಡನೆ ಮಾಡಿಕೊಂಡನು. ಒಡಂಬಡಿಕೆಯ ಗುರುತಾಗಿ ತನ್ನ ಮೈಮೇಲಿದ್ದಂತ ರಾಜ ವಸ್ತ್ರದ ನಿಲುವಂಗಿಯನ್ನು ತೆಗೆದು ದಾವೀದನಿಗೆ ತೊಡಿಸಿದನು. ಯೋನಾತಾನನು ಇಸ್ರಾಯೇಲಿನ ಮುಂದಿನ ರಾಜನ ಪದವಿಗೆ ಸತ್ತು ದಾವೀದನನ್ನು ಅರಸನನ್ನಾಗಿ ಮಾಡುವದಕ್ಕೆ ಇದು ಗುರುತಾಗಿತ್ತು. “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” ರೋಮ.12:10 ಎಂದು ಸಭೆಯೆಂಬ ಕ್ರಿಸ್ತನ ದೇಹಕ್ಕೆ ಆಜ್ಞಾಪಿಸಲಾಗಿದೆ. ನಾವು ನಮ್ಮ ಸ್ವ-ಇಚ್ಚೆಗೆ ಸತ್ತು ಇತರ ಸಹೋದರರು ನಮಗಿಂತಲೂ ಶ್ರೇಷ್ಟರು ಹಾಗೂ ಮರ್ಯಾದೆಗೆ ಯೋಗ್ಯರು ಎಂದು ಯಥಾರ್ಥದಿಂದಲೂ ಪ್ರೀತಿಯಿಂದಲೂ ಅದಕ್ಕಾಗಿ ಶ್ರಮಿಸಬೇಕು. ಅಗತ್ಯವಾದರೆ ನಮ್ಮ ನಿಲುವಂಗಿಯನ್ನು ತೆಗೆದು ಸಹೋದರರ ನಗ್ನತೆಯನ್ನು ಎಲ್ಲಿ ಕಾಣಬರುತ್ತದೋ ಅಲ್ಲಿ ಮುಚ್ಚಬೇಕು. ಹೀಗೆ ನಮ್ಮ ಸಹೋದರರನ್ನು ಇತರರ ಮುಂದೆ ಶ್ರೇಷ್ಟರೆಂದು ಕಾಣಿಸಬೇಕು. ಇದುವೇ ಸಭೆಯೆಂಬ ಕ್ರಿಸ್ತನ ದೇಹದಲ್ಲಿ ಸಹೋದರ ಸಂಬಂಧವೆಂಬ ಒಡಂಬಡಿಕೆಯ ಅರ್ಥ.
ನಮ್ಮ ಸ್ವ-ಇಚ್ಚೆಯನ್ನು ನಿರಂತರವಾಗಿ ಸಾಯಿಸದೇ ಇಂಥ ಒಡಂಬಡಿಕೆಯನ್ನು ಪ್ರವೇಶಿಸಲು ಸಾಧ್ಯವಿಲ್ಲ. ಎಲ್ಲಾ ವಿಶ್ವಾಸಿಗಳ ಸಭೆಯಲ್ಲಿ ಸಮಸ್ಯೆಗಳು ಉದ್ಬವಿಸಲು ಕಾರಣವೇನಂದರೆ ಅವರು ಈ ರೀತಿಯ ಒಂದು ಒಡಂಬಡಿಕೆಗೆ ಒಬ್ಬರೊಂದಿಗೊಬ್ಬರು ಪ್ರವೇಶಿಸಲು ಸಿದ್ದರಿಲ್ಲ. ಎಲ್ಲರೂ ಸ್ವ-ಇಚ್ಚೆಯನ್ನು ಬಯಸುವವರಾಗಿದ್ದಾರೆ. ಇದರ ಅಂತಿಮ ಪರಿಣಾಮವೇನಂದರೆ ಸೈತಾನನು ಜಯ ಹೊಂದುತ್ತಾನೆ. ಆದರೆ ಇಂತಹ ಸಭೆಯನ್ನು ಕ್ರಿಸ್ತನು ಕಟ್ಟುವದಿಲ್ಲ. ಯೇಸು ಕ್ರಿಸ್ತನು ಹೇಳಿದ್ದು: “ಪಾತಾಳ ಲೋಕದ ಬಲವು ಸಹ ನಾನು ಕಟ್ಟುವ ಸಭೆಯ ಮುಂದೆ ನಿಲ್ಲಲಾರದು.” (ಮತ್ತಾಯ 16:18)
ಯೇಸು ಕ್ರಿಸ್ತನು ತನ್ನ ಸಭೆಯನ್ನು ಈಗಲೂ ಸಹ ಭೂಲೋಕದಲ್ಲಿ ಕಟ್ಟುತ್ತಾ ಇದ್ದಾನೆ. ನಾವು ಕ್ರಿಸ್ತನ ಸಭೆಯ ಒಂದು ಅಂಗವಾಗಬೇಕಿದ್ದರೆ ಮತ್ತು ಆತನ ಸಭೆಯನ್ನು ಕಟ್ಟಲು ನಾವು ಪಾಲುಗಾರರಾಗಬೇಕಿದ್ದರೆ ಇಂತಹ ಒಂದು ಒಡಂಬಡಿಕೆಯ ಸಂಬಂಧ ಬೆಳೆಸಬೇಕು ಮತ್ತು ಹೇಗೆ ನಮ್ಮ ಸಹೋದರರನ್ನು ಶ್ರೇಷ್ಟರಾಗಿ ಕಾಣಿಸಬೇಕೆಂಬದನ್ನು ನಾವು ಹೃದಯಪೂರ್ವಕವಾಗಿ ಕಲಿಯಲು ಶ್ರಮಿಸಬೇಕು.
ನಂತರ ಯೋನಾತಾನನು ತನ್ನ ಯುದ್ಧ ವಸ್ತ್ರಗಳನ್ನು, ಕತ್ತಿ, ಬಿಲ್ಲು ನಡುಕಟ್ಟುಗಳನ್ನು ದಾವೀದನಿಗೆ ಕೊಟ್ಟನು. ನಮ್ಮ ಸಹೋದರರೊಡನೆ ಒಡಂಬಡಿಕೆಗೆ ಪ್ರವೇಶಿಸುವಾಗ ನಮ್ಮ ಸಹೋದರರಿಗೆ ಯಾವ ರೀತಿಯಲ್ಲಾದರೂ ಹಾನಿ ಮಾಡುವಂತ ಎಲ್ಲಾ ಆಯುಧಗಳನ್ನು ತ್ಯಜಿಸಲು ಸಿದ್ದರಿರಬೇಕು. ಇದುವೇ ಯೋನಾತಾನನು ಮಾಡಿದ ಕಾರ್ಯದ ಅರ್ಥ (1 ಸಮುವೇಲ 18:1-5) .
ಕ್ರೈಸ್ತ ಸಮುದಾಯದಲ್ಲಿ ಬಹಳಷ್ಟು ಹಾನಿ ಮಾಡುವಂತ ಆಯುಧವೆಂದರೆ ನಾಲಿಗೆ. ನಾವು ಈ ಆಯುಧವನ್ನು ಸಹೋದರ ಸಂಬಂಧದ ಒಡಂಬಡಿಕೆಯ ನಿಮಿತ್ತ ಒಂದು ಸಲವಾದರೂ ದೂಷಿಸದೆ, ಹಿಂದಿನಿಂದ ಮಾತಾಡದೆ ಯಾರ ವಿಷಯವಾಗಿಯೂ ಚಾಡಿ ಹೇಳದೆ ಇರಲೂ ನಾವು ಸಿದ್ದರಾಗಿದ್ದೇವೋ?
ಈ ರೀತಿಯಾಗಿ ನಾವು ನಮ್ಮ ಆಯುಧಗಳನ್ನು ಬಿಟ್ಟು ಬಿಟ್ಟರೆ ಸಹೋದರರ ಮಧ್ಯೆ ನಮ್ಮ ವಿಶ್ವಾಸ ಹೆಚ್ಚುತ್ತದೆ. ಮತ್ತು ಬೇರೆ ಸಹೋದರರು ನಮಗೇನೂ ಹಾನಿ ಮಾಡುವುದಿಲ್ಲ ಎಂಬ ಭರವಸೆ ನಮಗೆ ಬರುತ್ತದೆ. ಯಾಕಂದರೆ ನಾವು ಅವರ ಮುಂದೆ ನಿರಾಯುಧರಾಗಿದ್ದೇವೆ. ಇಂತಹ ಒಂದು ನಂಬಿಕೆ ಮತ್ತು ವಿಶ್ವಾಸದಿಂದ ಸಹೋದರ ಪ್ರೀತಿ ಬೆಳೆಯುತ್ತದೆ.
1 ಸಮುವೇಲ 19 ಮತ್ತು 20ನೇ ಅಧ್ಯಾಯಗಳಲ್ಲಿ ಯೋನಾತಾನನು ತನ್ನ ಸ್ವಂತ ತಂದೆಗೆ ವಿರುಧ್ದವಾಗಿ ನಿಲ್ಲಬೇಕಾಗಿ ಬಂದರೂ ದಾವೀದನ ಮೇಲೆ ತನಗಿದ್ದ ದೃಢವಾದ ರಾಜನಿಷ್ಟೆಯನ್ನು ನಾವು ನೋಡುತ್ತೇವೆ. ಯೋನಾತಾನನು ತನ್ನ ಪ್ರಾಕೃತ ಸಂಬಂಧಿಕರ ಎದುರಿಗೆ ವಿರುದ್ಧವಾಗಿ ಮತ್ತು ದಾವೀದನ ಪರವಾಗಿ ನಿಂತನು. ನಿಜವಾಗಿ ಆತನು ನಮಗೆಲ್ಲಾ ಒಂದು ಒಳ್ಳೆಯ ಉದಾಹರಣೆಯಾಗಿದ್ದಾನೆ. ನಾವು ನಮ್ಮ ಆತ್ಮೀಕ ಸಹೋದರರನ್ನು ಶಾರೀರಿಕ ಸಹೋದರರಿಗಿಂತ ಹೆಚ್ಚಾಗಿ ಪ್ರೀತಿಸಬೇಕು.
ಆಮೋಸ 1:9-10 ರಲ್ಲಿ ದೇವರು ಸಹೋದರ ಸಂಬಂಧದ ಒಡಂಬಡಿಕೆ ಮುರಿದವರನ್ನು ಬಹು ಗಂಭೀರವಾಗಿ ವೀಕ್ಷಿಸಿ ನೋಡುತ್ತಾನೆ. ಹೀರಾಮನ ದಿನಗಳಲ್ಲಿ ಇಸ್ರಾಯೇಲ್ ತೂರ್ ಪಟ್ಟಣದೊಡನೆ ಒಡಂಬಡಿಕೆ ಮಾಡಿದರು. ಆದರೆ ಇಸ್ರಾಯೇಲ್ಯರಿಗೆ ಅವಶ್ಯಕತೆ ಇದ್ದಾಗ, ಅವರು ಇಸ್ರಾಯೇಲ್ಯರಿಗೆ ದ್ರೋಹ ಮಾಡಿ ಅವರನ್ನು ಶತ್ರುಗಳಿಗೆ ಒಪ್ಪಿಸಿ ಅವರು ಮಾಡಿದ ಒಡಂಬಡಿಕೆಯನ್ನು ಮುರಿದರು. ದೇವರು ತೂರನ್ನು ಬಹಳ ಭಯಂಕರವಾಗಿ ತೀರ್ಪು ಮಾಡುವೆನೆಂದು ಆಮೋಸನಿಗೆ ತಿಳಿಸಿದನು.
2 ಸಮುವೇಲ 21: 1, 2 ರಲ್ಲಿ ಇನ್ನೊಂದು ಉದಾಹರಣೆಯನ್ನು ನೋಡುತ್ತೇವೆ. ಮೂರು ವರ್ಷಗಳ ಕಾಲ ಇಸ್ರಾಯೇಲಿನಲ್ಲಿ ಬರಗಾಲವಿತ್ತು. ದಾವೀದನು ಇದರ ಕಾರಣವನ್ನು ದೇವರಲ್ಲಿ ವಿಚಾರಿಸಿದಾಗ ದೇವರು ಅವನಿಗೆ ಹೇಳಿದ್ದೇನಂದರೆ ಇಸ್ರಾಯೇಲಿನಲ್ಲಿ ಗಿಬ್ಯೋನ್ಯರೊಂದಿಗೆ ಯೆಹೋಶುವನ ಕಾಲದಲ್ಲಿ ಮಾಡಿದ ಒಡಂಬಡಿಕೆಯನ್ನು ಮುರಿದಿದ್ದಾರೆ. ಆಗ ಸ್ಥಾಪಿಸಿದ ಒಡಂಬಡಿಕೆಯನ್ನು ರಾಜನಾದ ಸೌಲನು ಮುರಿದು ಗಿಬ್ಯೋನ್ಯರನ್ನು ಸಾಯಿಸಿದ್ದನು. ಸೌಲನು ಸತ್ತು ಬಹು ವರ್ಷಗಳ ನಂತರ ಈ ನ್ಯಾಯತೀರ್ಪು ಇಸ್ರಾಯೇಲ್ಯರನ್ನು ಪೀಡಿಸತೊಡಗಿತು. ದೇವರು ನ್ಯಾಯ ತೀರಿಸಲು ತಡಮಾಡಬಹುದು. ಆದರೆ ಎಲ್ಲಿ ಮಾನಸಾಂತರ ಇಲ್ಲದಿರುವದೋ ಅಲ್ಲಿ ದೇವರ ತೀರ್ಪು ಬಂದೇ ಬರುತ್ತದೆ. ಯಾಕೆ ಇಷ್ಟು ತಡವಾಗಿ ದೇವರು ಬರಗಾಲವನ್ನು ತಂದನೆಂದು ಯಾರಾದರೂ ಕೇಳಬಹುದು. ಯಾಕಂದರೆ ದೇವರು ಇಸ್ರಾಯೇಲ್ಯರಿಗೆ ಮಾನಸಾಂತರ ಪಡಲು ಸಾಕಷ್ಟು ಸಮಯ ಕೊಟ್ಟನು. ಆದರೆ ಅವರು ಮಾನಸಾಂತರ ಪಡದಿದ್ದಾಗ ಅವರ ಮೇಲೆ ನ್ಯಾಯತೀರ್ಪು ಬಂದಿತು.
ಪೌಲನು ಕೊರಿಂಥದವರಿಗೆ ಹೇಳಿದ್ದೇನಂದರೆ ನಮ್ಮನ್ನು ನಾವೇ ಸರಿಯಾಗಿ ತೀರ್ಪು ಮಾಡಿದರೆ ದೇವರು ನಮ್ಮನ್ನು ನ್ಯಾಯತೀರ್ಪು ಮಾಡುವುದಿಲ್ಲ. ಆದರೆ ಅವರು ತಮ್ಮನ್ನು ಸರಿಯಾಗಿ ನ್ಯಾಯತೀರ್ಪು ಮಾಡದೇ ಇದ್ದದರಿಂದ ಅವರಲ್ಲಿ ಅನೇಕರು ಬಲಹೀನರು, ರೋಗಿಗಳು ಹಾಗೂ ಅನೇಕರು ದಿನ ತುಂಬುವ ಮೊದಲೇ ಸಾಯುತ್ತಿದ್ದರು. (1 ಕೊರಿ.11:30-31) ಎಲ್ಲಾ ವಿಶ್ವಾಸಿಗಳು ಯಾರ್ಯಾರು ಸತತವಾಗಿ ಬಲಹೀನರೂ, ರೋಗಿಗಳೂ ಆಗಿದ್ದಾರೋ ಅವರು ತಮ್ಮನ್ನು ದೇವರ ಮುಂದೆ ಪರೀಕ್ಷಿಸಬೇಕು ಯಾಕಂದರೆ ಯಾರು ಸಹೋದರ ಸಂಬಂಧದ ಒಡಂಬಡಿಕೆಯನ್ನು ಮುರಿದಿದ್ದಾರೋ ಮತ್ತು ಕರ್ತನ ಮೇಜಿನಲ್ಲಿ ಪಾಲು ತೆಗೆದುಕೊಂಡು ನಂತರ ಸಹೋದರರ ಬಗ್ಗೆ ಚಾಡಿ ಹೇಳುವುದು, ಸುಳ್ಳು ಸುದ್ದಿ ಹಬ್ಬಿಸುವುದು, ಸುಳ್ಳು ನಿಂದೆ ಮಾಡುವ ದ್ರೋಹಗಳನ್ನು ಮಾಡಿದ್ದೇವೋ ಎಂದು ಪರೀಕ್ಷಿಸಬೇಕು. ಇದು ಇಸ್ಕರಿಯೋತ ಯೂದನು ಮಾಡಿದ ದೊಡ್ಡ ಅಪರಾಧ. ಏನಂದರೆ ಕರ್ತನೊಂದಿಗೆ ಒಡಂಬಡಿಕೆಯ ಭೋಜನ ಮಾಡಿ ಹೊರಕ್ಕೆ ಹೋಗಿ ಆತನಿಗೆ ದ್ರೋಹ ಮಾಡಿದನು. ಕೀರ್ತನೆಗಾರನು ಕೀರ್ತನೆ 41:9 ರಲ್ಲಿ ಪ್ರವಾದಿಸಿದಂತೆ “ನಾನು ಯಾವನನ್ನು ನಂಬಿದ್ದೆನೋ, ಯಾವನು ನನ್ನ ಮನೆಯಲ್ಲಿ ಅನ್ನ ಪಾನಗಳನ್ನು ತೆಗೆದುಕೊಂಡನೋ, ಅಂಥ ಆಪ್ತ ಸ್ನೇಹಿತನು ನನಗೆ ಕಾಲನ್ನು ಅಡ್ಡಗೊಟ್ಟಿದ್ದಾನೆ.”
ಇನ್ನು ಮುಂದೆ ಕರ್ತನ ಮೇಜಿನಲ್ಲಿ ಪಾಲು ತೆಗೆದುಕೊಳ್ಳುವಾಗ ನಾವು ನಮ್ಮನ್ನು ಪರೀಕ್ಷಿಸಿಕೊಂಡು ಆತನ ದೇಹ ಮತ್ತು ರಕ್ತಕ್ಕೆ ಸಮಾನವಾದ ರೊಟ್ಟಿ ಮತ್ತು ದ್ರಾಕ್ಷರಸದಲ್ಲಿ ಪಾಲು ತೆಗೆದುಕೊಳ್ಳುವಂತೆ ಕರ್ತನು ನಮಗೆ ಸಹಾಯ ಮಾಡಲಿ. ನಾವೆಲ್ಲರೂ ಕರ್ತನೊಂದಿಗೂ, ಸಹೋದರ ಸಹೋದರಿಯರೊಂದಿಗೂ ಮಾಡಿದ ಒಡಂಬಡಿಕೆಯನ್ನು ಮುರಿದ ಪಾಪಕ್ಕೋಸ್ಕರ ತುಂಬು ಹೃದಯದಿಂದ ಪಶ್ಚಾತ್ತಾಪ ಪಟ್ಟು ಪವಿತ್ರಾತ್ಮನ ಶಬ್ದಕ್ಕೆ ಕಿವಿಗೊಡೋಣ.