ನಕಲಿ ಉಜ್ಜೀವನ

Article Body: 

ಕಡೆಯ ದಿನಗಳು ಬಹಳ ವಂಚನೆಯಿಂದಲೂ ಮತ್ತು ಅನೇಕ ಸುಳ್ಳು ಪ್ರವಾದಿಗಳಿಂದಲೂ ತುಂಬಿರುವುದನ್ನು ನೋಡಿ ಗುರುತಿಸಬಹುದೆಂದು ಯೇಸು ಮತ್ತು ಅಪೊಸ್ತಲರು ಪದೇ ಪದೇ ಎಚ್ಚರಿಸಿದರು (ಮತ್ತಾಯ 24: 3 5, 11, 24. 1ತಿಮೊಥಿ 4:1). ಮತ್ತು ಈ ಕಳೆದ ಕೆಲವು ದಶಕಗಳಲ್ಲಿ ಇದನ್ನು ನಾವು ಬಹಳಷ್ಟು ನೋಡಿದ್ದೇವೆ.

ಯಾಕೆ ಲಕ್ಷಾಂತರ ಕ್ರೈಸ್ತರು ಈ ಸುಳ್ಳು ಪ್ರವಾದಿಗಳಿಂದ ಮತ್ತು ನಕಲಿ "ಉಜ್ಜೀವನಗಳಿಂದ" ಮೋಸಹೋಗುತಿದ್ದಾರೆ? ಮತ್ತು ಯಾಕೆ ಬಹಳಷ್ಟು ಬೋಧಕರು ಅನೈತಿಕತೆಗೆ ಮತ್ತು ದುರಾಶೆಗೆ ಬಲಿಯಾಗುತ್ತಿದ್ದಾರೆ?

ಇದಕ್ಕೆ ನಾನು ನೋಡಿರುವಂಥಹ ಕೆಲವು ಮುಖ್ಯ ಕಾರಣಗಳು ಹೀಗಿವೆ:

  • 1. ಇಂದು ಬಹಳಷ್ಟು ಕ್ರೈಸ್ತರು ಹೊಸ ಒಡಂಬಡಿಕೆಯನ್ನು ಜಾಗರೂಕತೆಯಿಂದ ಅಭ್ಯಾಸಿಸದ ಕಾರಣ, ಅವರಿಗೆ ಹೊಸ ಒಡಂಬಡಿಕೆಯ ಬೋಧನೆಗಳ ಅರಿವು ಇರುವುದಿಲ್ಲ. ಆದಕಾರಣ ಅವರು ತಮ್ಮ ನಾಯಕರ ಬೋಧನೆಗಳನ್ನು ಹಿಂಬಾಲಿಸುತ್ತಾರೆಯೇ ಹೊರತು ಹೊಸ ಒಡಂಬಡಿಕೆಯ ಬೋಧನೆಗಳನ್ನಲ್ಲ.
  • 2. ಅವರಿಗೆ ತಮ್ಮ ನಡತೆಗಿಂತ (ಧೈವೀಕ ಜೀವಿತ), ಅದ್ಭುತಗಳೇ (ಧೈವೀಕ ವರಗಳು) ಬಹಳ ಮುಖ್ಯವಾಗಿಬಿಟ್ಟಿವೆ.
  • 3. ಆತ್ಮೀಕ ಐಶ್ವರ್ಯಕ್ಕಿಂತ, ಲೌಕಿಕ ಆಸ್ತಿಯೇ ಅವರಿಗೆ ಬಹಳ ಮುಖ್ಯವಾಗಿಬಿಟ್ಟಿದೆ.
  • 4. ಅವರಿಗೆ ನಿಜವಾದ ಪವಿತ್ರಾತ್ಮನ ನಡೆಸುವಿಕೆ ಮತ್ತು ಭಾವನಾತ್ಮಕ ನೊರೆ ಅಥವಾ ಮನೋವೈಜ್ಞಾನಿಕ ಕೈ ಚಳಕದ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ. ಹೊಸ ಒಡಂಬಡಿಕೆಯನ್ನು ತಿಳಿಯದಿರುವುದೇ ಇದಕ್ಕೂ ಕೂಡ ಕಾರಣವಾಗಿದೆ.
  • 5. ಅವರಿಗೆ ಯೇಸುವಿನ ಹೆಸರಿನಲ್ಲಿ ನಡೆಯುವಂಥ ಧೈವೀಕ ಸ್ವಸ್ಥತೆ ಹಾಗೂ ಮನೋವೈಜ್ಞಾನಿಕ ಸ್ವಸ್ಥತೆ (ಒಳ್ಳೆಯ ಮನೋಭಾವದಿಂದ ಬರುವಂಥ ಸ್ವಸ್ಥತೆ)ಗಳ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ.
  • 6. ಕರ್ತನಲ್ಲಿನ ಆಂತರ್ಯದ ಆನಂದಕ್ಕಿಂತ ಭಾವನಾತ್ಮಕ ಉದ್ರೇಕಗಳು ಮತ್ತು ವಿಚಿತ್ರ ಶಾರೀರಿಕ ತೋರ್ಪಡಿಸುವಿಕೆಗಳೇ ಅವರಿಗೆ ಬಹಳ ಮುಖ್ಯವಾಗಿಬಿಟ್ಟಿದೆ.
  • 7. ನಾಯಕರಿಗಂತೂ ಅವರ ಆಂತರ್ಯದ ಜೀವಿತದಲ್ಲಿ ಕರ್ತನೊಂದಿಗೆ ನಡೆಯುವುದಕ್ಕಿಂತ, ಜನರಿಗೆ ಮಾಡುವ ಸೇವೆಯೇ ಮುಖ್ಯವಾಗಿಬಿಟ್ಟಿದೆ.
  • 8. ಈ ನಾಯಕರಿಗೆ ದೇವರ ಮೆಚ್ಚಿಗೆಗಿಂತ ಜನರ ಮೆಚ್ಚಿಗೆಯೇ ಬಹಳ ಮುಖ್ಯವಾಗಿಬಿಟ್ಟಿದೆ.
  • 9. ಈ ನಾಯಕರಿಗೆ ತಮ್ಮ ಕೂಟಗಳಿಗೆ ಬರುವ ಜನರು ತಮ್ಮ ಜೀವಿತವನ್ನು ಸಂಪೂರ್ಣವಾಗಿ ಕ್ರಿಸ್ತನಿಗೆ ಅರ್ಪಿಸಿಕೊಂಡಿರುವರೇ? ಎಂಬುದಕ್ಕಿಂತ ಆ ಜನರ ಸಂಖ್ಯೆಯೇ ಮುಖ್ಯವಾಗಿಬಿಟ್ಟಿದೆ.
  • 10. ಈ ನಾಯಕರಿಗೆ ಒಂದು ಸ್ಥಳೀಯ ಸಭೆಯನ್ನು ಕಟ್ಟಿ ಆ ಸಭೆಯಲ್ಲಿ ತಮ್ಮನ್ನು ಸೇವಕರನ್ನಾಗಿ ಮಾಡಿಕೊಳ್ಳುವುದಕ್ಕಿಂತ (ಯೆರೇಮಿಯ 6:13) ತಮ್ಮ ವೈಯಕ್ತಿಕ ರಾಜ್ಯಗಳನ್ನು ಮತ್ತು ತಮ್ಮ ಹಣಕಾಸಿನ ಸಾಮ್ರಾಜ್ಯಗಳನ್ನು ಕಟ್ಟುವುದೇ ಬಹಳ ಪ್ರಾಮುಖ್ಯವಾಗಿಬಿಟ್ಟಿದೆ.
  • ಇದೆಲ್ಲವೂ ಯೇಸು ಭೋಧಿಸಿದ್ದಕ್ಕೆ ಬಹಳ ವಿರುದ್ಧವಾದದ್ದಾಗಿದೆ. ಹೊಸ ಒಡಂಬಡಿಕೆಯಲ್ಲಿ ಕ್ರಿಸ್ತನಿಗೆ ವಿರುದ್ಧವಾದದ್ದನ್ನು“ಕ್ರಿಸ್ತ ವಿರೋಧಿ”ಎಂದು ಕರೆಯಲಾಗಿದೆ. ಇದನ್ನು ಕ್ರೈಸ್ತರು ಸ್ಪಷ್ಟವಾಗಿ ತಿಳಿಯದಿದ್ದರೆ, ಈ ಕ್ರಿಸ್ತ ವಿರೋಧಿಯು ಲೋಕದಲ್ಲಿ ತನ್ನ ಸುಳ್ಳಾದ ಗುರುತು ಮತ್ತು ಅದ್ಭುತಗಳೊಂದಿಗೆ ತೋರಿಸಲ್ಪಟ್ಟಾಗ (2 ಥೆಸಲೋನಿಕ 2:3 ,10) ಅವರು ಕೂಡ ಕುರುಡರಂತೆ ಆತನನ್ನು ಸ್ವೀಕರಿಸುತ್ತಾರೆ. ಕ್ರಿಸ್ತನ ಆತ್ಮನಿಂದ ನಡೆಸಲ್ಪಡುವುದೆಂದರೆ ಈ ಮೇಲೆ ವಿವರಿಸಿದ ಅಂಶಗಳಿಗೆ ವಿರುದ್ಧವಾದ ಆತ್ಮವನ್ನು ಹೊಂದಿರುವುದೇ ಆಗಿದೆ.

    ಇಲ್ಲಿ ಮತ್ತಾಯ 7:13, 27 ರಲ್ಲಿನ ಯೇಸುವಿನ ಮಾತುಗಳನ್ನು ವಿವರವಾಗಿ ನೋಡಿಕೊಂಡರೆ ಹೀಗಿರುತ್ತದೆ. (ಮತ್ತಾಯ 5 ನೇ ಅಧ್ಯಾಯದಿಂದ 7ನೇ ಅಧ್ಯಾಯದವರೆಗೆ ಹೋಲಿಸಿ ಓದಿರಿ):

    "ನಾನು ಈಗ ತಾನೆ ವಿವರಿಸಿದಂತೆ (ಮತ್ತಾಯ 5 ರಿಂದ 7) ನಿತ್ಯಜೀವಕ್ಕೆ ಹೋಗುವಂಥ ಬಾಗಿಲು ಮತ್ತು ಮಾರ್ಗ ಎರಡೂ ಇಕ್ಕಾಟ್ಟಾಗಿದೆ ಆದರೆ ಸುಳ್ಳು ಪ್ರವಾದಿಗಳು ನಿಮ್ಮಲ್ಲಿ ಬಂದು, ಈ ಬಾಗಿಲು ಮತ್ತು ಮಾರ್ಗವು ಇಕ್ಕಾಟ್ಟಾದದ್ದಲ್ಲ, ಆದರೆ ಸುಲಭವಾದದ್ದಾಗಿಯೂ ಮತ್ತು ಅಗಲವಾಗಿಯೂ ಇದೆ ಎಂದು ಹೇಳುತ್ತಾರೆ. ಅವರ ಬಗ್ಗೆ ಎಚ್ಚರವಾಗಿರಿ. ಅವರ ನಡತೆಯ ಫಲವನ್ನು ನಿಗಾವಹಿಸಿ ನೋಡುವುದರಿಂದ ನೀವು ಇಂಥವರನ್ನು ಸುಲಭವಾಗಿ ಗುರುತಿಸಬಹುದಾಗಿದೆ; ಅವರು ತಮ್ಮ ಕೋಪದಿಂದ, ಹೆಣ್ಣನ್ನು ಮೋಹಿಸುವುದರಿಂದ, ಹಣವನ್ನು ಪ್ರೀತಿಸುವುದರಿಂದ ಹಾಗೂ ಲೌಕಿಕ ಆಸ್ತಿಯನ್ನು (ಅನ್ಯಜನರು ಬಯಸುವಂತೆ) ಬಹಳವಾದ ತವಕದಿಂದ ಬಯಸುವುದರಿಂದ ಬಿಡುಗಡೆ ಹೊಂದಿದ ಜೀವಿತವನ್ನು ಜೀವಿಸುವರೆ? ನಾನು ಇಲ್ಲಿ ಇವುಗಳ ವಿರುದ್ಧವಾಗಿ ಬೋಧಿಸಿದಂತೆ (ಮತ್ತಾಯ 5:21, 32 ಮತ್ತು ಮತ್ತಾಯ 6:24, 34) ಇವರು ಬೋಧಿಸುವರೆ? ಈ ಸುಳ್ಳು ಪ್ರವಾದಿಗಳು ಅನೇಕ ಧೈವೀಕ ವರಗಳನ್ನು ಅಭ್ಯಾಸಿಸಬಹುದು. ಮತ್ತು ಅದ್ಭುತಗಳನ್ನು ಮಾಡಬಹುದು, ಹಾಗು ನನ್ನ ಹೆಸರಿನಲ್ಲಿ ನಿಜವಾಗಿಯೂ ಜನರನ್ನು ಸ್ವಸ್ಥಪಡಿಸಲೂ ಬಹುದು. ಆದಾಗ್ಯೂ ಅವರು ನನ್ನನ್ನು (ಪವಿತ್ರನೆಂದು) ಅರಿಯದೆ ಇದ್ದದರಿಂದ, ಮತ್ತು ತಮ್ಮ ವೈಯಕ್ತಿಕ ಜೀವಿತದಲ್ಲಿ ಪಾಪವನ್ನು ಬಿಟ್ಟು ಬಿಡದೆ ಇದ್ದ ಕಾರಣ (ಮತ್ತಾಯ 7: 21 23) ಅವರೆಲ್ಲರನ್ನೂ ಕೊನೆಯ ದಿನದಲ್ಲಿ ನಾನು ನರಕಕ್ಕೆ ಕಳುಹಿಸಿ ಬಿಡುತ್ತೇನೆ. ಆದಕಾರಣ ನೀವು ಇಂದಿಗೂ ಮತ್ತು ನಿತ್ಯತ್ವಕ್ಕೂ ಅಲುಗಾಡದಂಥಹ ಮತ್ತು ಬಿದ್ದು ಹೋಗದಂಥಹ ಒಂದು ಸಭೆಯನ್ನು ಬಂಡೆಯ ಮೇಲೆ ಕಟ್ಟಲು ಬಯಸಿದರೆ, ನಾನು ಈಗ ತಿಳಿಸಿದಂಥ ಈ ಎಲ್ಲಾ ವಿಷಯಗಳನ್ನು ಜಾಗರೂಕರಾಗಿ ನಡೆಸಿರಿ(ಮತ್ತಾಯ 5 ರಿಂದ 7). ಹಾಗೂ ನಾನು ನಿಮಗೆ ಆಜ್ಞಾಪಿಸಿದವುಗಳನ್ನು ನಡೆಸುವಂತೆ ನಿಮ್ಮ ಜನರಿಗೂ ಕೂಡ ಬೋಧಿಸಿರಿ. ಆಗ ನಾನು ಸದಾಕಾಲವೂ ನಿಮ್ಮೊಂದಿಗಿರುತ್ತೇನೆ. ಮತ್ತು ನನ್ನ ಅಧಿಕಾರವು ಯಾವಾಗಲೂ ನಿಮಗೆ ಸಹಾಯ ಮಾಡುತ್ತದೆ. (ಮತ್ತಾಯ 28:20, 18) ಆದರೆ ನೀವು ನನ್ನ ಮಾತುಗಳನ್ನು ಕೇವಲ ಕೇಳಿಸಿಕೊಂಡು ಅದನ್ನು ಕೈಗೊಂಡು ನಡೆಯದಿದ್ದರೆ, ನೀವು ಕಟ್ಟುವಂಥಹ ಸಭೆಯು ದೊಡ್ಡದಾಗಿ ಮನುಷ್ಯರು ಮೆಚ್ಚುವಂತೆ ಕಂಡರೂ ಸಹ ಒಂದು ದಿನ ಖಂಡಿತವಾಗಿಯೂ ಕುಸಿದು ಬೀಳುತ್ತದೆ. (ಮತ್ತಾಯ 7:25)".

    ಹಾಗಾದರೆ, ಈ ಕಡೆಯ ದಿನಗಳಲ್ಲಿ ನಾವು ಅಲುಗಾಡದಂಥಹ ಒಂದು ಸಭೆಯನ್ನು ಹೇಗೆ ಕಟ್ಟಬಹುದು?

  • 1. ಪರ್ವತ ಪ್ರಸಂಗವನ್ನು (ಮತ್ತಾಯ 5 :7) ನಮ್ಮ ಜೀವಿತದಲ್ಲಿ ಅಳವಡಿಸಿ ಜೀವಿಸಬೇಕು ಮತ್ತು ಬಿಡದೆ ಬೋಧಿಸಬೇಕು.
  • 2. ನಾವು ಹಳೆಯ ಒಡಂಬಡಿಕೆಯಲ್ಲಿ ಜೀವಿಸದೆ ಹೊಸ ಒಡಂಬಡಿಕೆಯಲ್ಲಿಯೇ ಜೀವಿಸಬೇಕು. ಇದಕ್ಕಾಗಿ, ನಾವು ಈ ಎರಡು ಒಡಂಬಡಿಕೆಗಳ ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ತಿಳಿದಿರಬೇಕು (2 ಕೊರಿಂಥ 3:6). ಮತ್ತು ಈ ಹೊಸ ಒಡಂಬಡಿಕೆಯನ್ನು ಕೂಡ ಬೋಧಿಸಬೇಕು.
  • ಇಂದು ಬೋಧಕರು ಗಂಭೀರವಾದ ಪಾಪದಲ್ಲಿ ಬಿದ್ದರೆ, ಹಳೇ ಒಡಂಬಡಿಕೆ ದೇವಭಕ್ತರು ಸಹ ಇಂತಹ ಪಾಪಗಳಲ್ಲಿ ಬಿದ್ದಿದ್ದನ್ನು ಉದಾಹರಣೆಗೆ ಹೋಲಿಸಿ ತಮ್ಮನ್ನು ನೀತಿಕರಿಸಿಕೊಳ್ಳುತ್ತಾರೆ (ಮತ್ತು ಅದರಲ್ಲಿ ತಮ್ಮ ಸಮಾಧಾನವನ್ನು ಕಂಡುಕೊಳ್ಳುತ್ತಾರೆ). ನಂತರ ಸ್ವಲ್ಪ ಸಮಯ ವಿರಾಮದ ಬಳಿಕ ತಮ್ಮ ಸೇವೆಯನ್ನು ಮತ್ತೆ ಮುಂದುವರೆಸುತ್ತಾರೆ. ಅವರು ವ್ಯಭಿಚಾರ ಮಾಡಿದ ದಾವೀದನನ್ನು, ಮನಗುಂದಿದ ಎಲೀಯನನ್ನು ಉದಾಹರಣೆಯಾಗಿ ಬಳಸಿಕೊಂಡು ನಂತರ, "ಆದರೆ ದೇವರು ಅವರನ್ನು ಕೂಡ ಹಾಗಿದ್ದರೂ ಪುನ: ಉಪಯೋಗಿಸಿದನು" ಎಂದು ಹೇಳುತ್ತಾರೆ! ಆದರೆ ತನ್ನ ಜೀವಿತದ ಕಡೆಯವರೆಗೂ ಜಯ ಮತ್ತು ಪವಿತ್ರತೆಯಲ್ಲಿ ಜೀವಿಸಿದ ಪೌಲನ ಉದಾಹರಣೆಯ ಬಗ್ಗೆ ಮಾತ್ರ ಅವರು ಹೇಳುವುದಿಲ್ಲ.

    ಹಳೆ ಒಡಂಬಡಿಕೆಯ ದೇವಭಕ್ತರು ಇಂದು ನಮಗೆ ಉದಾಹರಣೆಗಳಲ್ಲವೆಂಬುದನ್ನು, ಈ ಭೋದಕರು (ಮತ್ತು ಬಹಳಷ್ಟು ಕ್ರೈಸ್ತರು) ನೋಡದವರಾಗಿದ್ದಾರೆ. ಈ ಕೃಪೆಯ ಅವಧಿಯಲ್ಲಿ ನಮಗೆ ಬಹಳ ಹೆಚ್ಚಾದದ್ದನ್ನು ಕೊಡಲ್ಪಟ್ಟಿದೆ ಮತ್ತು "ಯಾವನಿಗೆ ಬಹಳವಾಗಿ ಕೊಟ್ಟಿದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವುದು" (ಲೂಕ 12:48). ಹೊಸ ಒಡಂಬಡಿಕೆಗೆ ಯೇಸುವೇ ಮಧ್ಯಸ್ಥನಾಗಿದ್ದಾನೆ. ಮತ್ತು ಆತನೇ ನಮ್ಮ ಮಾದರಿಯೂ ಹಾಗು ನಮ್ಮ ನಂಬಿಕೆಯನ್ನು ಹುಟ್ಟಿಸುವವನೂ ಆಗಿದ್ದಾನೆ. ಆದರೆ ದಾವೀದನು ಮತ್ತು ಎಲಿಯನಲ್ಲ. ಹಳೆ ಒಡಂಬಡಿಕೆಯ ದೇವ ಭಕ್ತರ (ಇಬ್ರಿಯ 11 ರಲ್ಲಿ ಇದ್ದಂತೆ) ಮತ್ತು ಯೇಸುವಿನ ನಡುವಿನ ವ್ಯತ್ಯಾಸವು ಇಬ್ರಿಯ 12:1 4 ರಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಲ್ಪಟ್ಟಿದೆ. ಆದರೆ ಇದರ ನೈಜತೆಯಲ್ಲಿ ಬಹಳ ಕೆಲವರು ಮಾತ್ರ ಜೀವಿಸುತ್ತಾರೆ. ಹೊಸ ಒಡಂಬಡಿಕೆಯಲ್ಲಿ "ದೇವರು ನಮಗೊಸ್ಕರ ಶ್ರೇಷ್ಟವಾದ ಭಾಗ್ಯವನ್ನು ಏರ್ಪಡಿಸಿದ್ದಾನೆಂದು (ಇಬ್ರಿಯ 11:40)" ಕೇವಲ ಕೆಲವರು ಮಾತ್ರ ನೋಡಿದ್ದಾರೆ.

    ಸೈತಾನನು ಬಹಳ ಕುಯುಕ್ತಿಯುಳ್ಳ ಶತ್ರುವಾಗಿದ್ದಾನೆ. ಆದ್ದರಿಂದ ನಾವು ಜಾಗರೂಕರಾಗಿ ಎಚ್ಚರವಹಿಸದಿದ್ದರೆ, ಬಹಳಷ್ಟು ಬೋಧಕರು ಬಿದ್ದು ಹೋದ ರೀತಿಯಲ್ಲಿಯೇ ನಾವು ಕೂಡ ಬೀಳಬಹುದು. ನಮ್ಮ ರಕ್ಷಣೆಯು ಹೊಸ ಒಡಂಬಡಿಕೆಯ ಭೊಧನೆಗೆ ನಾವು ಸರಿಯಾಗಿ ವಿಧೇಯರಾಗುವುದರಲ್ಲಿಯೂ ಮತ್ತು ದೇವಭಕ್ತ ನಾಯಕರಿಗೆ ಒಳಪಡುವುದರಲ್ಲಿಯೂ ಇದೆ. (ದೇವಭಕ್ತ ನಾಯಕರೆಂದರೆ, ಮೊದಲು ನಾನು ತಿಳಿಸಿದ 10 ಅಂಶಗಳಲ್ಲಿ ಯಾವ ಒಂದರಲ್ಲಿಯೂ ತಪ್ಪಿಲ್ಲದವರು) ಬೇರೆಯವರ ತಪ್ಪಿನಿಂದ ನಾವು ಬುದ್ದಿ ಕಲಿತರೆ, ನಾವು ಸಹ ಆ ತಪ್ಪನ್ನು ಮಾಡುವದರಿಂದ ತಪ್ಪಿಸಿಕೊಳ್ಳಬಹುದು.

    ಆದ್ದರಿಂದ ಕರ್ತನ ಮುಂದೆ ನಮ್ಮ ಮುಖವನ್ನು ಯಾವಾಗಲೂ ಧೂಳಿನಲ್ಲಿ ಹಾಕಿರೋಣ ಅಲ್ಲಿಯೇ ದೈವೀಕ ಪ್ರಕಟಣೆಯು ಯೋಹಾನನಿಗೆ ಸಿಕ್ಕಂತೆ (ಪ್ರಕಟಣೆ 1:17) ನಮಗೂ ಸಿಗುವಂತಹದಾಗಿದೆ. ನಮ್ಮನ್ನು ನಾವು ತಗ್ಗಿಸಿಕೊಂಡರೆ ಜಯಗಳಿಸಲು ನಮಗೆ ಕೃಪೆಯು ಸಿಗುತ್ತದೆ (1 ಪೇತ್ರ 5:5). ಪವಿತ್ರಾತ್ಮನು ನಮ್ಮ ಬಗ್ಗೆ ಮತ್ತು ದೇವರವಾಕ್ಯದ ಬಗ್ಗೆ ಸತ್ಯವನ್ನು ತೋರಿಸುವಾಗ ಸಂಪೂರ್ಣವಾಗಿಯೂ, ಪ್ರಾಮಾಣಿಕವಾಗಿಯೂ ಎಲ್ಲಾ ಪಾಪಗಳಿಂದ "ರಕ್ಷಣೆಯನ್ನು ಹೊಂದುವಂತೆ ಸತ್ಯವನ್ನು ಪ್ರೀತಿಸುವವರಾಗಿರೋಣ". ಈ ರೀತಿಯಲ್ಲಿ ದೇವರಿಂದಲೇ ನಾವು ಎಲ್ಲಾ ತರಹದ ವಂಚನೆಗಳಿಂದ ಕಾಪಾಡಲ್ಪಡುತ್ತೇವೆ (2 ಥೆಸಲೋನಿಕ 2:10, 11) ಆಮೇನ್.