ಯೇಸುವು ಹೇಳಿದಂತೆ, "ಮನುಷ್ಯನು ರೊಟ್ಟಿಯಿಂದ ಮಾತ್ರ ಜೀವಿಸುವುದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ (ಒಂದನ್ನೂ ಬಿಡದೆ) ಜೀವಿಸುತ್ತಾನೆ" (ಮತ್ತಾಯ 4:4), ಅಂದರೆ ದೇವರ ಯಾವುದೋ ಒಂದು ಮಾತಿನಿಂದ ಅಷ್ಟೇ ಅಲ್ಲವೆಂದು. ಆದುದರಿಂದ ಸತ್ಯವೇದದ ಕೇವಲ ಒಂದು ವಚನವನ್ನು ತೆಗೆದುಕೊಂಡು, ಇತರ ವಚನಗಳೊಂದಿಗೆ ಅದನ್ನು ಹೋಲಿಸದೇ ಇದ್ದಲ್ಲಿ, ನಾವು ತಪ್ಪಾದ ನಿರ್ಣಯಕ್ಕೆ ಬರಬಹುದು, ಮತ್ತು ಕೊನೆಗೆ ಅಸತ್ಯವನ್ನು ನಂಬಬಹುದು. ಅನೇಕ ಬೋಧಕರು ಜನರಿಗೆ ಸತ್ಯವೇದದ ಕೇವಲ ಒಂದು ವಚನವನ್ನು ತೋರಿಸಿ, ಇತರ ವಚನಗಳನ್ನು ಕಡೆಗಣಿಸುವದರ ಮೂಲಕ, ಸುಳ್ಳಾದ ನಿರೀಕ್ಷೆಗಳನ್ನು ನೀಡಿ ಅವರನ್ನು ವಂಚಿಸಿದ್ದಾರೆ.
ಸತ್ಯವೇದದ ಬೋಧನೆಗಳ ಕುರಿತಾಗಿ ಹಲವಾರು ತಪ್ಪು ತಿಳಿವಳಿಕೆಗಳು ಉಂಟಾಗಲು ಕಾರಣ ದೇವರ ವಾಕ್ಯವನ್ನು ವಾಕ್ಯದೊಂದಿಗೆ ಹೋಲಿಸಿ ನೋಡದೇ ಇರುವದು. ಸೈತಾನನು ಯೇಸುವಿಗೆ ಹೀಗೆ ಬರೆದಿದೆ ಎಂದು ಒಂದು ವಾಕ್ಯವನ್ನು ಉಲ್ಲೇಖಿಸಿದಾಗ, ಯೇಸುವು ಹೀಗೆಯೂ ಬರೆಯಲಾಗಿದೆ ಎಂದು ಅದನ್ನು ಸರಿದೂಗಿಸಿದನು (ಮತ್ತಾಯ 4:6,7). ದೇವರು ಹಕ್ಕಿಗಳನ್ನು ಎರಡು ರೆಕ್ಕೆಗಳೊಂದಿಗೆ ಸೃಷ್ಟಿಸಿ, ಅವುಗಳು ನೇರವಾಗಿ ಹಾರಾಡುವಂತೆ ಮಾಡಿದನು. ಸತ್ಯವೇದದ ಸತ್ಯವೂ ಸಹ ಅದೇ ರೀತಿಯ ಸಮತೋಲನವನ್ನು ಹೊಂದಿದೆ.
ನಾವು ನಿತ್ಯ ಭದ್ರತೆಯ ಸಿದ್ಧಾಂತವನ್ನು ಪರಿಶೀಲಿಸುವಾಗ, ಎರಡು ಮಹತ್ವಪೂರ್ಣ ಸತ್ಯಗಳಾದ ದೇವರ ಸಾರ್ವಭೌಮತ್ವ ಮತ್ತು ಮನುಷ್ಯನ ಸ್ವಚಿತ್ತ ಇವುಗಳ ನಡುವೆ ಸಮತೋಲನವನ್ನು ಕಂಡುಕೊಳ್ಳಬೇಕು.
ದೇವರು ಮಾನವನಿಗೆ ಒಂದು ಸ್ವತಂತ್ರ-ಚಿತ್ತವನ್ನು ಕೊಟ್ಟಿದ್ದಾನೆ ಮತ್ತು ಅವನು ತನ್ನನ್ನು ಆರಿಸಿಕೊಳ್ಳುವಂತೆ ಯಾರನ್ನೂ ಒತ್ತಾಯಿಸುವದಿಲ್ಲ. ಆದರೆ ಅವನಿಗೆ ತನ್ನನ್ನು ಯಾರು ಆರಿಸಿಕೊಳ್ಳುವರು ಮತ್ತು ಯಾರು ಆರಿಸುವದಿಲ್ಲವೆಂದು ನಿತ್ಯ ಕಾಲದಿಂದಲೇ ತಿಳಿದಿದೆ. ಆದುದರಿಂದ ಅವನ ಭವಿಷ್ಯತ್ ಕಾಲದ ಜ್ಞಾನಾನುಸಾರವಾಗಿ (ಇದನ್ನು 1 ಪೇತ್ರ 1:1,2ರಲ್ಲಿ ಸ್ಪಷ್ಟಪಡಿಸಲಾಗಿದೆ), ಅವನು ಕೆಲವು ಜನರನ್ನು ತನ್ನ ಮಕ್ಕಳಾಗಿ ಆರಿಸಿಕೊಂಡಿರುವದು, ಮತ್ತು ಅದು ಗೊತ್ತುಗುರಿಯಿಲ್ಲದ ಆಯ್ಕೆಯಲ್ಲ.
ದೇವರು ಗ್ರಹಗಳಿಗೆ ಆಯ್ಕೆಯ ಸ್ವಾತಂತ್ರ ಇರದಂತೆ ಸೃಷ್ಟಿಸಿದ್ದಾನೆ. ಈ ಗ್ರಹಗಳು ಎಷ್ಟೋ ಸಾವಿರ ವರ್ಷಗಳು ದೇವರ ಆಜ್ಞೆಗಳನ್ನು ಚಾಚೂ ತಪ್ಪದೆ ಪಾಲಿಸಿದ್ದರೂ, ಅವುಗಳು ಪರಿಶುದ್ಧ ಅಥವಾ ಅಪರಿಶುದ್ಧವಾಗಲು, ಅಥವಾ ದೇವರ ಮಕ್ಕಳು ಆಗಲು ಸಾಧ್ಯವಿಲ್ಲ. ಇನ್ನೊಂದೆಡೆ, ದೇವರು ಮೃಗಗಳನ್ನು ಸ್ವತಂತ್ರ-ಚಿತ್ತದೊಂದಿಗೆ ಸೃಷ್ಟಿಸಿದನು. ಆದರೆ ಅವುಗಳಲ್ಲಿ ಮನಸ್ಸಾಕ್ಷಿ ಇಲ್ಲ. ಹಾಗಾಗಿ ಅವುಗಳೂ ಸಹ ಪರಿಶುದ್ಧ ಅಥವಾ ಅಪರಿಶುದ್ಧವಾಗಲು, ಅಥವಾ ದೇವರ ಮಕ್ಕಳಾಗಲು ಸಾಧ್ಯವಿಲ್ಲ.
ಆದರೆ, ದೇವರು ಮನುಷ್ಯನನ್ನು ಸೃಷ್ಟಿಸಿದಾಗ, ಅವನಿಗೆ ಒಂದು ಸ್ವತಂತ್ರ-ಚಿತ್ತವನ್ನೂ ಮತ್ತು ಒಂದು ಮನಸ್ಸಾಕ್ಷಿಯನ್ನೂ ಕೊಟ್ಟನು. ಆದುದರಿಂದಲೇ, ಮನುಷ್ಯನು ಪರಿಶುದ್ಧನಾಗಿ ಅಥವಾ ಪಾಪಿಯಾಗಿ ಇರಬಹುದು ಮತ್ತು ದೇವರ ಒಬ್ಬ ಮಗುವಾಗಲು ನಿರ್ಣಯಿಸಬಹುದು!
ಒಂದು ವೇಳೆ ದೇವರು ನಮ್ಮ ಮನಸ್ಸಾಕ್ಷಿಯನ್ನು ನಮ್ಮಿಂದ ತೆಗೆದರೆ, ನಾವು ಮೃಗಗಳ ಸಮನಾಗುತ್ತೇವೆ - ಅಂದರೆ, ನೈತಿಕ ನಿರ್ಣಯ ಮಾಡಲು ಅಸಮರ್ಥರು ಮತ್ತು ಆ ಕಾರಣಕ್ಕಾಗಿ ಪರಿಶುದ್ಧರೋ ಅಥವಾ ಪಾಪಿಗಳೋ ಆಗಲು ಅಶಕ್ತರು.
ದೇವರು ನಮ್ಮಲ್ಲಿರುವ ಸ್ವತಂತ್ರ-ಚಿತ್ತವನ್ನು (ಸ್ವ-ಚಿತ್ತ) ಹಿಂತೆಗೆದುಕೊಂಡರೆ, ನಾವು ಯಾಂತ್ರಿಕ ಮಾನವರ (’ರೋಬೋಟ್’) ಹಾಗಾಗುತ್ತೇವೆ ಮತ್ತು ಪರಿಶುದ್ಧರೋ ಅಥವಾ ಪಾಪಿಗಳೋ ಆಗಲು ಅಶಕ್ತರಾಗುತ್ತೇವೆ. ಆದುದರಿಂದಲೇ, ನಾವು ಕ್ರೈಸ್ತ ವಿಶ್ವಾಸಿಗಳಾದ ಮೇಲೆಯೂ ಸಹ ದೇವರು ಸ್ವ-ಚಿತ್ತವನ್ನು ನಮ್ಮಿಂದ ಹಿಂತೆಗೆಯುವದಿಲ್ಲ.
ನಾವು ಈ ಸತ್ಯವನ್ನು ಗುರುತಿಸಿದರೆ, ನಿತ್ಯ ಭದ್ರತೆಯ ಸಿದ್ದಾಂತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿಶ್ವಾಸಿಗಳು ದೇವರಿಂದ ದೂರ ಸರಿದು ಭ್ರಷ್ಟರಾಗಲು ಸಾಧ್ಯವಿಲ್ಲ ಎನ್ನುವ ಬೋಧನೆಯು ವಿಶ್ವಾಸಿಗಳನ್ನು ಆಯ್ಕೆಯ ಸ್ವಾತಂತ್ರ್ಯವಿಲ್ಲದ ’ರೋಬೋಟ್’ಗಳನ್ನಾಗಿ ಮಾರ್ಪಡಿಸುತ್ತದೆ.
ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ, (2 ಕೊರಿಂಥ 9:7) - ಈ ವಚನ ವಿಧೇಯತೆಯೂ ಸೇರಿದಂತೆ, ಎಲ್ಲಾ ವಿಷಯಗಳಿಗೆ ಅನ್ವಯಿಸುತ್ತದೆ. ದೇವರಿಗೆ ಒತ್ತಾಯದ ವಿಧೇಯತೆ ಇಷ್ಟವಿಲ್ಲ. ಆದುದರಿಂದಲೇ ಅವರು ನಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಎಂದಿಗೂ ಹಿಂತೆಗೆಯುವದಿಲ್ಲ. ನಾವು ಯೇಸುವನ್ನು ಹಿಂಬಾಲಿಸಲು ನಿರ್ಧರಿಸಬಹುದು ಮತ್ತು ಆ ಮೇಲೆ ಮನಸ್ಸು ಬದಲಾದರೆ, ಅವನನ್ನು ಬಿಟ್ಟು ದೂರ ಸರಿಯಲೂ ಬಹುದು.
ಪಾಪ ಕ್ಷಮಾಪಣೆ ದೇವರ ಒಂದು ಆಶ್ಚರ್ಯಕರವಾದ, ಉಚಿತ ಕೊಡುಗೆಯಾಗಿದೆ. ಆದರೆ ಒಬ್ಬ ವ್ಯಕ್ತಿಯು ಅದನ್ನು ತನ್ನ ಆಯ್ಕೆಯ ಮೂಲಕ ಹೊಂದುತ್ತಾನೆ. ದೇವರು ಅದನ್ನು ಯಾರ ಮೇಲೂ ಬಲವಂತವಾಗಿ ಎಂದಿಗೂ ಹೊರಿಸುವದಿಲ್ಲ. ದೇವರು ಜನರಿಗೆ ಕ್ಷಮಾಪಣೆಯನ್ನು ಬಲವಂತವಾಗಿ ನೀಡಿದ್ದರೆ, ಲೋಕದಲ್ಲಿ ಪ್ರತಿಯೊಬ್ಬನೂ ಕ್ಷಮಿಸಲ್ಪಡುತ್ತಿದ್ದನು ಮತ್ತು ರಕ್ಷಿಸಲ್ಪಡುತ್ತಿದ್ದನು. ಪವಿತ್ರಾತ್ಮನ ತುಂಬಿಸುವಿಕೆಯೂ ಅದೇ ರೀತಿಯಾಗಿದೆ. ದೇವರು ವಿಶ್ವಾಸಿಗಳನ್ನು ಪವಿತ್ರಾತ್ಮನಿಂದ ತುಂಬಿಸಲ್ಪಡಲು ಒತ್ತಾಯಿಸುವದಿಲ್ಲ. ಕೇಳಿ ಹೊಂದುವ ಆಯ್ಕೆ ಜನರದು (ಯೋಹಾನ 7:37-39).
ದೇವರ ವಾಗ್ದಾನಗಳು ಎಂದಿಗೂ ತಾವಾಗಿಯೇ ನೆರವೇರುವದಿಲ್ಲ. ದೇವರ ವಾಗ್ದಾನಗಳೆಲ್ಲವೂ ಕ್ರಿಸ್ತನಲ್ಲಿ ಹೌದು ಎಂದೇ ಇವೇ! ಆದರೆ ನಾವು ನಮ್ಮ ಸ್ವ-ಚಿತ್ತದಿಂದ ಆಮೆನ್ ಎಂದು ಸೇರಿಸಿದಾಗ ಮಾತ್ರವೇ, ನಾವು ಅವುಗಳನ್ನು ಹೊಂದಿ ಅನುಭವಿಸಬಹುದು (2 ಕೊರಿಂಥ 1:20).
ಇದನ್ನು ಸಾಬೀತು ಪಡಿಸಲು ಈ ಉದಾಹರಣೆಯನ್ನು ನೋಡಿರಿ. ಐಗುಪ್ತ ದೇಶದಲ್ಲಿ ದೇವರು ಇಸ್ರಾಯೇಲಿನ ಹಿರಿಯರಿಗೆ ಎರಡು ವಾಗ್ದಾನಗಳನ್ನು ನೀಡಿದರು:
ಆದರೆ ಆ ಹಿರಿಯರ ಜೀವಿತದಲ್ಲಿ ಇವೆರಡು ವಾಗ್ದಾನಗಳಲ್ಲಿ ಮೊದಲನೆಯದು ಮಾತ್ರ ನೆರವೇರಿತು, ಏಕೆಂದರೆ ಅವರು ಮೊದಲನೆಯದನ್ನು ನಂಬಿ, ಎರಡನೆಯದನ್ನು ನಂಬಲಿಲ್ಲ (ಅರಣ್ಯಕಾಂಡ 14:22,23).
ದೇವರ ವಾಗ್ದಾನಗಳು ನಮ್ಮ ಜೀವನದಲ್ಲಿ ತಮ್ಮಷ್ಟಕ್ಕೇ ನೆರವೇರುವದಿಲ್ಲ. ನಮಗೆ ಅವು ಸಿಗಬೇಕಾದರೆ ನಾವು ಅವನ್ನು ನಂಬಬೇಕು. ಯಾಕೋಬನು ಹೇಳುವಂತೆ, ಕೇಳುವವನು ಸ್ವಲ್ಪವೂ ಸಂದೇಹಪಡದೆ ನಂಬಿಕೆಯಲ್ಲಿ ಕೇಳಿಕೊಳ್ಳಲಿ. ಏಕೆಂದರೆ ಸಂದೇಹಪಡುವವನು ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆದಾಡುತ್ತಿರುವನು. ಆ ಮನುಷ್ಯನು ತಾನು ಕರ್ತನಿಂದ ಏನಾದರೂ ಹೊಂದುವೆನೆಂದು ಭಾವಿಸದೆ ಇರಲಿ" (ಯಾಕೋಬ 1:6,7).
"ನೀವು ಬಹು ಹೆಚ್ಚಾಗಿ ಭಯದಿಂದ ನಡುಗುತ್ತಾ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. ಏಕೆಂದರೆ, ದೇವರೇ ತನ್ನ ಚಿತ್ತದಂತೆ ನಿಮ್ಮಲ್ಲಿ ಉದ್ದೇಶವನ್ನೂ ಪ್ರಯತ್ನವನ್ನೂ ನಡೆಸುತ್ತಾನೆ " ಎಂಬ ಆಜ್ಞೆಯನ್ನು ನಮಗೆ ಫಿಲಿಪ್ಪಿ. 2:12,13ರಲ್ಲಿ ನೀಡಲಾಗಿದೆ.
ಇಲ್ಲಿ ನಮ್ಮೊಳಗೆ ಉದ್ದೇಶವನ್ನೂ ಅದನ್ನು ನೆರವೇರೆಸಲು ಸಾಮರ್ಥ್ಯವನ್ನೂ ದಯಪಾಲಿಸಿ, ಕಾರ್ಯವನ್ನು ಆರಂಭಿಸುವದು ದೇವರೇ ಎಂದು ನಾವು ನೋಡುತ್ತೇವೆ. ಇದು ಸತ್ಯದ ಒಂದು ಭಾಗ. ಆದರೆ ಆ ರಕ್ಷಣೆ ನೆರವೇರಲು ಅದನ್ನು ನಾವೇ ಸಾಧಿಸಬೇಕು. ಇದೇ ಸತ್ಯದ ಎರಡನೆಯ ಭಾಗ. ಕೆಲವು ಕ್ರೈಸ್ತರು ಈ ಸತ್ಯದ ಒಂದು ಭಾಗಕ್ಕೆ ಮಹತ್ವ ನೀಡುತ್ತಾರೆ, ಹಾಗೆಯೇ ಇನ್ನು ಕೆಲವರು ಅದರ ಇನ್ನೊಂದು ಭಾಗಕ್ಕೆ ಮಹತ್ವ ನೀಡುತ್ತಾರೆ. ಸಂಪೂರ್ಣ ಸತ್ಯಾಂಶ ಸಿಗಲು ನಮಗೆ ಎರಡು ಭಾಗಗಳೂ ಬೇಕು. ನಾವು ಒಂದನ್ನು ಮಾತ್ರ ಸ್ವೀಕರಿಸಿದರೆ, ನಾವು ಒಂದು ರೆಕ್ಕೆಯ ಹಕ್ಕಿಯಂತೆ, ಒಂದೇ ಜಾಗದಲ್ಲಿ ಸುತ್ತುತ್ತಾ ಇರುತ್ತೇವೆ!!
ದೇವರು ನಮ್ಮ ಒಳಗೆ ನಡೆಸುವ ಕ್ರಿಯೆಯನ್ನು ನಾವು ಹೊರಗೆ ನೆರವೇರಿಸಿದಾಗ ಮಾತ್ರ, ಮೇಲಿನ ವಚನಗಳಲ್ಲಿ ವಿವರಿಸಿರುವ ರಕ್ಷಣೆಯನ್ನು ನಾವು ಹೊಂದಬಹುದು.
ಇದರ ಮುಂದಿನ ವಚನವು ಈ ಹೇಳಿಕೆಯನ್ನು ಸಮರ್ಥಿಸುತ್ತದೆ, "ಎಲ್ಲವನ್ನೂ ಗುಣಗುಟ್ಟದೆಯೂ ವಿವಾದವಿಲ್ಲದೆಯೂ ಮಾಡಿರಿ" (ಫಿಲಿಪ್ಪಿ. 2:14). ಎಷ್ಟು ವಿಶ್ವಾಸಿಗಳು ಎಲ್ಲಾ ಗುಣುಗುಟ್ಟುವಿಕೆಯಿಂದ ಮತ್ತು ವಿವಾದ ಮಾಡುವದರಿಂದ ತಾವು ರಕ್ಷಿಸಲ್ಪಟ್ಟಿರುವದಾಗಿ ಸಾಕ್ಷಿ ಹೇಳಬಹುದು? ಸ್ವತಃ ನೀವು ಹೀಗೆ ಸಾಕ್ಷಿ ಹೇಳಲು ಸಾಧ್ಯವಿದೆಯೇ? ಅದು ನಿಮಗೆ ಸಾಧ್ಯವಾಗದಿದ್ದರೆ, ಅದಕ್ಕೆ ಕಾರಣ ದೇವರು ನಿಮ್ಮನ್ನು ಆ ಪಾಪಗಳಿಂದ ರಕ್ಷಿಸಲು ನಿಮ್ಮೊಳಗೆ ಕಾರ್ಯ ನಡೆಸುತ್ತಿಲ್ಲವೆಂದು ಅರ್ಥವಲ್ಲ. ಅದಕ್ಕೆ ಕಾರಣ, ನಿಮ್ಮನ್ನು ಆ ಪಾಪಗಳಿಂದ ರಕ್ಷಿಸಲು ಕಾರ್ಯ ಮಾಡುವ ಅವರ ಪವಿತ್ರಾತ್ಮನೊಂದಿಗೆ ನೀವು ಸಹಕರಿಸಲಿಲ್ಲ. ಹೀಗೆ ನಾವು ಎಲ್ಲಾ ಗುಣಗುಟ್ಟುವಿಕೆಯಿಂದಲೂ ಎಲ್ಲಾ ವಿವಾದಗಳಿಂದಲೂ ಬಿಡುಗಡೆ ಹೊಂದಿದಾಗ ಮಾತ್ರ, ಮುಂದಿನ ವಚನ ತೋರಿಸುವಂತೆ, ನಾವು ವಕ್ರವಾದ ದುಷ್ಟ ಜನಾಂಗದ ಮಧ್ಯದಲ್ಲಿ ನಮ್ಮನ್ನು ದೇವರ ಮಕ್ಕಳಾಗಿ ನಿರೂಪಿಸಿಕೊಳ್ಳಬಹುದು (ಫಿಲಿಪ್ಪಿ. 2:15). ನೀವು ಈ ಅಳತೆಯ ಪ್ರಕಾರ ನಿಮ್ಮ ಸುತ್ತಲಿನ ಲೋಕಕ್ಕೆ, ನೀವು ದೇವರ ಒಂದು ಮಗುವಾಗಿದ್ದೀರೆಂದು ಸಾಬೀತು ಮಾಡುತ್ತಿರುವಿರಾ?
ಇನ್ನೊಂದು ಉದಾಹರಣೆಯನ್ನು ನೋಡಿರಿ: ಸ್ವತಃ ದೇವರೇ ಮಾನಸಾಂತರ ಹೊಂದುವ ಸಾಮರ್ಥ್ಯವನ್ನು ಜನರಿಗೆ ದಯಪಾಲಿಸುತ್ತಾರೆ (ಅಪೋ. ಕೃ. 11:18). ಇದಲ್ಲದೆ, ಎಲ್ಲರೂ ಮಾನಸಾಂತರ ಪಡಬೇಕು ಎನ್ನುವದು ದೇವರ ಅಪೇಕ್ಷೆಯಾಗಿದೆ (2 ಪೇತ್ರ 3:9). ಹಾಗಿದ್ದರೆ ಎಲ್ಲರಿಗೂ ಮಾನಸಾಂತರವನ್ನು ಒದಗಿಸುವದು ಅವರ ಇಚ್ಛೆಯಾಗಿದೆ ಎನ್ನುವದು ಸ್ಪಷ್ಟವಾಗಿದೆ. ಆದರೆ ಅಧಿಕಾಂಶ ಜನರು (ವಿಶ್ವಾಸಿಗಳೂ ಸೇರಿದಂತೆ) ಮಾನಸಾಂತರ ಪಡಿಸುವ ಪವಿತ್ರಾತ್ಮನ ಪ್ರೆರೇಪಣೆಯನ್ನು ಸ್ವೀಕರಿಸಿ ಸಹಕರಿಸುವುದಿಲ್ಲ! ಯಾವುದನ್ನು ಮಾಡಲು ದೇವರು ಸಿದ್ಧನಾಗಿ ಇದ್ದಾನೋ, ಅದನ್ನು ನಡೆಸಲು ಅವರು ಪ್ರಯತ್ನಿಸುತ್ತಿಲ್ಲ.
ಇನ್ನೂ ಒಂದು ಉದಾಹರಣೆಯನ್ನು ನೋಡಿರಿ: ದೇವರು ಮಾತ್ರ ಯಾರನ್ನೇ ಆದರೂ ರಕ್ಷಿಸ ಬಲ್ಲನು. ಅದಲ್ಲದೆ, ಎಲ್ಲಾ ಮನಷ್ಯರು ರಕ್ಷಣೆ ಹೊಂದಬೇಕೆಂದು ದೇವರ ಚಿತ್ತವಾಗಿದೆ (1 ತಿಮೊಥೆ. 2:4). ಹಾಗಾದರೆ ಜನರು ರಕ್ಷಣೆ ಹೊಂದದಿರಲು ಕಾರಣ, ತಮ್ಮ ಜೀವಿತದಲ್ಲಿ ದೇವರು ಮಾಡುವ ಕ್ರಿಯೆಗೆ ಅವರು ಪ್ರತಿಕ್ರಿಯೆ ತೋರಿಸುತ್ತಿಲ್ಲ. ಅವರು ದೇವರ ಕೃಪೆಯನ್ನು ವಿರೋಧಿಸುತ್ತಾರೆ. ದೇವರು ಮಾಡಲು ಇಚ್ಛಿಸುವದನ್ನು ಅವರು ನೆರವೇರಿಸುವದಿಲ್ಲ.
ನಿತ್ಯ ಭದ್ರತೆಯ ವಿಷಯದಲ್ಲಿ ಹಲವಾರು ತಪ್ಪು ಅಭಿಪ್ರಾಯಗಳು ಉಂಟಾಗಲು ಕಾರಣ, ನಿತ್ಯಜೀವ ಎಂದರೆ ನಿರಂತರವಾಗಿ ಜೀವಿಸುವುದು ಎನ್ನುವ ತಪ್ಪಾದ ತಿಳುವಳಿಕೆ ಇರುವದರಿಂದ. ಆದರೆ, ನಿತ್ಯಜೀವವು ಕೊನೆಯಿಲ್ಲದ ಜೀವನವನ್ನು ಸೂಚಿಸುವದಿಲ್ಲ, ಏಕೆಂದರೆ ನರಕಕ್ಕೆ ಹೋಗುವ ಜನರು ಸಹ ನಿತ್ಯಕ್ಕೂ ಜೀವಿಸುತ್ತಾರೆ - ಮತ್ತು ಅವರಲ್ಲಿ ನಿಶ್ಚಯವಾಗಿ ನಿತ್ಯಜೀವವಿಲ್ಲ. ಯೇಸುವು "ನಿತ್ಯಜೀವ"ವನ್ನು ಹೀಗೆ ವಿವರಿಸಿದನು, "ದೇವರನ್ನೂ ಮತ್ತು ಯೇಸು ಕ್ರಿಸ್ತನನ್ನೂ ತಿಳಿಯುವದು" (ಯೋಹಾನ 17:3). ನಿತ್ಯಜೀವ ಎಂದರೆ ಮೊದಲನೆಯದಾಗಿ, ಆರಂಭವಿಲ್ಲದ ಒಂದು ಜೀವನ ಮತ್ತು ಅದಕ್ಕೆ ಅಂತ್ಯವೂ ಇಲ್ಲ. ಹಾಗಾಗಿ ಇದು ಸ್ವತಃ ದೇವರ ಜೀವನವಲ್ಲದೆ ಇನ್ಯಾವುದೂ ಆಗಲಾರದು. ಇದು ನಾವು ಕ್ರಿಸ್ತನಲ್ಲಿ ಈಗ ಅನುಭವಿಸಬಹುದಾದ ದೈವಿಕ ಸ್ವಭಾವ (2 ಪೇತ್ರನು 1:4).
ಈ ನಿತ್ಯಜೀವವೋ ದೇವರ ಉಚಿತ ವರವೇ ಆಗಿದೆ (ರೋಮಾ. 6:23). ಯಾರೆಲ್ಲಾ ಪಾಪದಿಂದ ಬಿಡುಗಡೆ ಹೊಂದಿ ದೇವರಿಗೆ ಗುಲಾಮರಾಗಲು ಬಯಸುತ್ತಾರೋ, ಅವರಿಗೆ ಮಾತ್ರ ದೇವರು ಈ ನಿತ್ಯಜೀವವನ್ನು ದಯಪಾಲಿಸುವನು, ಎಂದು ಹಿಂದಿನ ವಚನ (ರೋಮಾ. 6:22) ನಮಗೆ ತಿಳಿಸುತ್ತದೆ. ಆದ್ದರಿಂದ ನಿತ್ಯಜೀವವು ದೇವರ ಉಚಿತ ವರವಾಗಿದ್ದರೂ, ಅದನ್ನು ಹೊಂದಲು ಷರತ್ತುಗಳು ಇವೆ.
ನಿತ್ಯ ಭದ್ರತೆಯ ವಿಚಾರವಾಗಿ, ಸತ್ಯವೇದದ ಈ ಮುಂದಿನ ಏಳು ವಾಕ್ಯಗಳನ್ನು ಗಮನಿಸಿ ನೋಡಿರಿ. [ನಾವು ಈ ವಚನಗಳನ್ನು ನೋಡುವಾಗ, ಈ ವಚನಗಳ ಅರ್ಥ ಇದೇ, ಎಂಬ ಪೂರ್ವಭಾವಿ ಅಭಿಪ್ರಾಯಗಳನ್ನು ಬಿಟ್ಟುಬಿಡುವದು ಅವಶ್ಯ. ಇವು "ದೇವರು ನುಡಿದ ವಾಕ್ಯಗಳು," ಆದ್ದರಿಂದ ಈ ವಚನಗಳನ್ನು ಸಂಪೂರ್ಣವಾಗಿ ಬಿಚ್ಚು ಮನಸ್ಸಿನಿಂದ ಓದಿರಿ, ಏಕೆಂದರೆ ಹಾಗೆ ಮಾಡಿದಾಗ ನೀವು ಖಂಡಿತವಾಗಿ ಸತ್ಯವನ್ನು ತಿಳಿಯುವಿರಿ]:
ಸತ್ಯವೇದ ಯಾವ ದೋಷವೂ ಇಲ್ಲದ ದೇವ-ವಾಕ್ಯವಾಗಿದೆ ಎಂದು ನಂಬುವದಾಗಿ ಅನೇಕರು ಹೇಳಿಕೊಳ್ಳುತ್ತಾರೆ. ಆದರೆ ಇವರು ಅದರಲ್ಲಿ ತಾವು ನಂಬಲು ಇಷ್ಟಪಡುವದನ್ನು ಆರಿಸಿಕೊಂಡು, ತಮಗೆ ಬೇಡವಾದುದನ್ನು ತಿರಸ್ಕರಿಸಿ ಬಿಡುತ್ತಾರೆ. ಇವರ ಭರವಸೆ ದೇವರ ವಾಕ್ಯದ ಸ್ಪಷ್ಟ ಬೋಧನೆಗಳ ಮೇಲೆ ಇಲ್ಲ, ಆದರೆ ತಪ್ಪು ಪ್ರವೃತ್ತಿಯುಳ್ಳ ತಮ್ಮ ಮನಸ್ಸಿನ ಅನಿಸಿಕೆಯ ಮೇಲಿದೆ. ಇವರು ಇದರ ಮೂಲಕ ತಮ್ಮ ಅಹಂಕಾರ ಮತ್ತು ಗರ್ವವನ್ನು ಬಹಿರಂಗಪಡಿಸುತ್ತಾರೆ.
ಇವೆಲ್ಲವೂ ಬಹಳ ಮುಖ್ಯವಾದ ಅಂಶಗಳು, ಏಕೆಂದರೆ ಅವು ನಮ್ಮ ನಿತ್ಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ನಾವು ಮನುಷ್ಯರ ಬೋಧನೆಯಲ್ಲಿ ಕುರುಡು ನಂಬಿಕೆ ಇರಿಸುವದರ ಮೂಲಕ ವಂಚನೆಗೆ ಒಳಗಾಗಬಾರದು! ನಾವು ಈ ಕತ್ತಲೆಯ ಲೋಕದಲ್ಲಿ ನಮಗಿರುವ ಒಂದೇ ಬೆಳಕಾದ ದೇವರ ವಾಕ್ಯವನ್ನು ನಂಬಬೇಕು. ನೀವು ಹೊಸ ಒಡಂಬಡಿಕೆಯ ಇತರ ಯಾವುದೇ ವಚನಕ್ಕೆ ಯಾವ ಅರ್ಥ ವಿವರಣೆಯನ್ನಾದರೂ ನೀಡಿರಿ, ಆದರೆ ಅದು ಮೇಲೆ ತೋರಿಸಲಾದ ವಚನಗಳ ಸ್ಪಷ್ಟವಾದ ಸತ್ಯತೆಗಳನ್ನು ಅಳಿಸಿಬಿಡಲಾರದು.
ಸತ್ಯವೇದ ಪತ್ರಿಕೆಗಳ ಕೊನೆಯ ವಾಗ್ದಾನಗಳಲ್ಲಿ ಒಂದು, ಕರ್ತನು ಎಡವಿ ಬೀಳದಂತೆ ನಿಮ್ಮನ್ನು ಕಾಪಾಡುವುದಕ್ಕೆ... ಶಕ್ತನು (ಯೂದ 24) ಎಂಬ ವಚನ. ಹೌದು, ನಿಜ - ಕರ್ತನು ಬಿದ್ದುಹೋಗದಂತೆ ನಮ್ಮನ್ನು ಕಾಪಾಡಲು ಖಂಡಿತವಾಗಿ ಸಮರ್ಥನು. ಆದರೆ, ನಾವು ನಮ್ಮನ್ನು ಅವನಿಗೆ ಸಂಪೂರ್ಣವಾಗಿ ಒಪ್ಪಿಸದೇ ಇದ್ದಲ್ಲಿ, ಅವನು ನಮ್ಮನ್ನು ಎಡವಿ ಬೀಳದಂತೆ ಕಾಯಲು ಆಗುವದಿಲ್ಲ - ಏಕೆಂದರೆ, ಅವನು ತನ್ನ ಚಿತ್ತವನ್ನು ಯಾರ ಮೇಲೂ ಕಡ್ಡಾಯವಾಗಿ ಹೇರುವದಿಲ್ಲ. ಇದೇ ಕಾರಣಕ್ಕಾಗಿ, ಈ ವಚನದ ಹಿಂದಿನ ಮೂರನೆಯ ವಚನದಲ್ಲಿ ನಮಗೆ ಹೀಗೆ ಹೇಳಲಾಗಿದೆ: "ದೇವರ ಪ್ರೀತಿಯಲ್ಲಿ ನಿಮ್ಮನ್ನು ಕಾಪಾಡಿಕೊಳ್ಳಿರಿ" (ಯೂದ 21). ನಾವು ನಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಂಡರೆ, ಅವನು ನಮ್ಮನ್ನು ಕೊನೆಯ ತನಕ ಕಾಪಾಡುವನು. ಆದರೆ ಇದು ಕೇವಲ ಕರ್ತನ ಮೇಲೆ ಅವಲಂಬಿತವಾದ ಏಕ-ಮುಖವಾದ ವಿಷಯವಲ್ಲ. ಇದರಲ್ಲಿ ನಮ್ಮ ಭಾಗವೂ ಇದೆ.
ಕ್ರಿಸ್ತನೊಂದಿಗೆ ವಿಶ್ವಾಸಿಗಳಾದ ನಮ್ಮ ಸಂಬಂಧವನ್ನು, ವಿವಾಹಕ್ಕಾಗಿ ಕಾದಿರುವ ನಿಶ್ಚಿತಾರ್ಥವಾದ ಕನ್ನಿಕೆಯ ಸಂಬಂಧಕ್ಕೆ ಹೋಲಿಸಲಾಗಿದೆ (2 ಕೊರಿಂಥ. 11:2; ಪ್ರಕಟನೆ 19:7). ಅಂದು ಸೈತಾನನು ಹವ್ವಳನ್ನು ವಂಚಿಸಿದಂತೆ, ಇಂದು ನಮ್ಮನ್ನು ಸಹ ವಂಚಿಸಿ, "ಕ್ರಿಸ್ತನ ಮೇಲೆ ಇರಬೇಕಾದ ಯಥಾರ್ಥತೆಯನ್ನೂ ಸರಳ ಭಕ್ತಿಯನ್ನೂ ಕಸಿದು ಕೊಂಡುಬಿಡುತ್ತಾನೋ?" ಎಂದು ತಾನು ಭಯಪಡುವದಾಗಿ ಪೌಲನು ಮುಂದಿನ ವಚನದಲ್ಲಿ (2 ಕೊರಿಂಥ. 11:3) ಹೇಳುತ್ತಾನೆ. ಪರದೈಸಿನಲ್ಲಿದ್ದ ಹವ್ವಳು ಸೈತಾನನ ಕುಯುಕ್ತಿಯಿಂದಾಗಿ ಪರದೈಸಿನಿಂದ ಹೊರಗೆ ಕಳುಹಿಸಲ್ಪಟ್ಟಳು. ಇಂದು ಕ್ರಿಸ್ತನೊಂದಿಗೆ ವಿವಾಹಕ್ಕಾಗಿ ನಿಶ್ಚಯಿಸಲ್ಪಟ್ಟ ನಾವಾದರೋ, ಪರದೈಸಿನ ಕಡೆಗೆ ಚಲಿಸುತ್ತಿದ್ದೇವೆ. ಆದರೆ ನಾವು ಸೈತಾನನಿಗೆ ನಮ್ಮನ್ನು ಮೋಸಗೊಳಿಸುವ ಅವಕಾಶ ನೀಡುವದಾದರೆ, ಎಂದಿಗೂ ಪರದೈಸನ್ನು ಸೇರಲಾರೆವು.
ಮದಲಗಿತ್ತಿಯು ಲೋಕದೊಂದಿಗೆ ಮತ್ತು ಪಾಪದೊಂದಿಗೆ ವ್ಯಭಿಚಾರ ಮಾಡಿದರೆ, ಆಕೆಯ ಮದಲಿಂಗನು ಆಕೆಯನ್ನು ಮದುವೆಯಾಗಲು ನಿರಾಕರಿಸುವನು. ಪ್ರಕಟನೆ 17ನೆಯ ಅಧ್ಯಾಯದಲ್ಲಿ ಈ ಜಾರತ್ವದ ಸಭೆಯು ಮಹಾ ಬಾಬಿಲೋನ್‍ಗೆ ಹೋಲಿಸಲ್ಪಟ್ಟಿದ್ದು, ಅದು ಕೊನೆಗೆ ಕರ್ತನಿಂದ ತಿರಸ್ಕರಿಸಲ್ಪಡುವದು.
ನೀನು ಕರ್ತನನ್ನು ಪ್ರೀತಿಸುವದಾದರೆ, ಅಕ್ಕಪಕ್ಕದ ಇತರ ವಿಶ್ವಾಸಿಗಳು ಲೋಕದೊಂದಿಗೆ ಮತ್ತು ಪಾಪದೊಂದಿಗೆ ವ್ಯಭಿಚಾರದ ಸವಿ ನೋಡುತ್ತಿದ್ದರೂ, ನೀನು ನಿನ್ನ ಶುದ್ಧತೆಯನ್ನು ಕರ್ತನಿಗಾಗಿ ಕಾಪಾಡಿಕೊಳ್ಳುವೆ. ಕಡೆಯ ದಿವಸಗಳಲ್ಲಿ "ಬಹುಜನರ ಪ್ರೀತಿಯು ತಣ್ಣಗಾಗುವದು" ಎಂದು ಯೇಸುವು ನಮಗೆ ಎಚ್ಚರಿಕೆ ನೀಡಿದನು (ಈ ವಚನ ವಿಶ್ವಾಸಿಗಳ ಕುರಿತಾಗಿ ಹೇಳುತ್ತದೆ, ಏಕೆಂದರೆ ಕರ್ತನನ್ನು ಪ್ರೀತಿಸುವದು ಅವರು ಮಾತ್ರ). ಆದರೆ ಕಡೆಯವರೆಗೆ ತಾಳುವವನೇ ರಕ್ಷಿಸಲ್ಪಡುವನು (ಮತ್ತಾಯ 24:11-13).
ಸೈತಾನನು ನಮ್ಮೆಲ್ಲರನ್ನೂ ವಂಚಿಸಲು ಹೊಂಚು ಹಾಕುತ್ತಾನೆ. ಆದರೆ ಸತ್ಯವೇದವು ನಮ್ಮನ್ನು ಎಚ್ಚರಿಸುವದು ಏನೆಂದರೆ, ರಕ್ಷಣೆ ಪಡುವಂತೆ ಸತ್ಯವನ್ನು ಪ್ರೀತಿಸಲು ನಾವು ನಿರಾಕರಿಸಿದರೆ, ದೇವರೂ ಸಹ ನಾವು ವಂಚನೆಗೆ ಈಡಾಗುವದನ್ನು ಅನುಮತಿಸಿ, ಸುಳ್ಳನ್ನು ನಂಬುವಂತೆ ಮಾಡುತ್ತಾನೆ (2 ಥೆಸಲೋನಿಕ 2:10,11).
ನಾವು ದೇವರ ವಾಕ್ಯದ ಸತ್ಯವನ್ನು ಸ್ವೀಕರಿಸಿದರೆ, ಮತ್ತು ನಮ್ಮ ಜೀವಿತದಲ್ಲಿ ಪವಿತ್ರಾತ್ಮನು ತೋರಿಸುವ ಪಾಪಗಳ ನಿಜಸ್ಥಿತಿಯನ್ನು ನೋಡಿ ಎದುರಿಸುವದಾದರೆ, ಮತ್ತು ಆ ಎಲ್ಲಾ ಪಾಪಗಳಿಂದ ರಕ್ಷಿಸಲ್ಪಡುವ ಆಸಕ್ತಿ ನಮ್ಮಲ್ಲಿ ಇದ್ದರೆ, ಆಗ ನಾವು ಖಂಡಿತವಾಗಿ ವಂಚಿಸಲ್ಪಡುವದಿಲ್ಲ.
ಆದರೆ ದೇವರ ವಾಕ್ಯದಲ್ಲಿ ಸ್ಪಷ್ಟವಾಗಿ ಬರೆದಿರುವದನ್ನು ನಾವು ಸ್ವೀಕರಿಸದೆ ಹೋದರೆ, ಅಥವಾ ಪಾಪದಿಂದ ರಕ್ಷಣೆಯ ಅಪೇಕ್ಷೆ ನಮ್ಮಲ್ಲಿ ಇಲ್ಲವಾದರೆ, ಆಗ ನಾವು ವಂಚನೆಗೆ ಈಡಾಗುವದನ್ನು ದೇವರು ಅನುಮತಿಸಿ - "ನಿತ್ಯ ಭದ್ರತೆ"ಯ ವಿಷಯದಲ್ಲಿ ಮಾತ್ರವಲ್ಲ ಇತರ ವಿಷಯಗಳಲ್ಲಿಯೂ - ಸುಳ್ಳನ್ನು ನಂಬುವಂತೆ ಮಾಡುತ್ತಾನೆ.
ಹಾಗಾದರೆ ಈ ಎಲ್ಲಾ ವಿಷಯಗಳಲ್ಲಿ ಮಾಡಬಹುದಾದ ಅಂತಿಮ ನಿರ್ಧಾರ ಹೀಗೆ ಇರುತ್ತದೆ:
ಕರ್ತನು ನಮ್ಮನ್ನು ಮೊದಲು ಪ್ರೀತಿಸಿದಕ್ಕಾಗಿ ಮತ್ತು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದಕ್ಕಾಗಿ ನಾವು ಆತನನ್ನು ಪ್ರೀತಿಸುತ್ತೇವೆ. ಆದುದರಿಂದ ಅವನ ಕೃಪೆಯ ಮೂಲಕ, ನಾವು ಎಲ್ಲಾ ವೇಳೆಯಲ್ಲೂ ನಮ್ಮ ಮನಸ್ಸಾಕ್ಷಿಯನ್ನು ಶುದ್ಧವಾಗಿ ಕಾದಿರಿಸಿ, ನಾವು ಅವನನ್ನು ಪ್ರೀತಿಸುತ್ತೇವೆ ಮತ್ತು ಕೊನೆಯ ವರೆಗೆ ಹಿಂಬಾಲಿಸುತ್ತೇವೆ ಮತ್ತು ಆ ಮೂಲಕ "ನಾವು ನಿತ್ಯದ ಭದ್ರತೆಗೆ ಪಾತ್ರರಾಗುತ್ತೇವೆ."
ಯೇಸುಕ್ರಿಸ್ತನನ್ನು ಹಿಂಬಾಲಿಸುತ್ತಿರುವ ಪ್ರತಿಯೊಬ್ಬ ಶಿಷ್ಯನು ನಿತ್ಯ ಭದ್ರತೆಗೆ ಪಾತ್ರನು.
ಆದರೆ ತಾನು ದೃಢವಾಗಿ ನಿಂತಿದ್ದೇನೆ ಎಂದು ಭಾವಿಸುವ ನೀನು ಬೀಳದಿರುವಂತೆ ಎಚ್ಚರವಾಗಿರು (1 ಕೊರಿಂಥ. 10:12).
ಕಿವಿಯುಳ್ಳವನು ಕೇಳಿಸಿಕೊಳ್ಳಲಿ.