"ಅತಿಗರ್ವದಿಂದ ಮೆರೆಯುವವರನ್ನು"ದೇವರು ಸಭೆಯಿಂದ ತೆಗೆದುಹಾಕುತ್ತಾರೆ (ಚೆಫನ್ಯ 3:8-17) .
ಅಪೊಸ್ತಲನಾದ ಯೋಹಾನನು ತನ್ನ ಜೀವಮಾನದ ದಿವಸಗಳಲ್ಲಿ ಈ ವಾಕ್ಯವು ನೆರವೇರುವುದನ್ನು ನೋಡಿದನು. ಅವನು ಈ ರೀತಿ ಹೇಳಿದನು, "ಅವರು ನಮ್ಮನ್ನು ಬಿಟ್ಟು ಹೊರಟುಹೋದರು, ಆದರೆ ಅವರು ನಮ್ಮವರಾಗಿರಲಿಲ್ಲ. ಅವರು ನಮ್ಮವರಾಗಿದ್ದರೆ ನಮ್ಮ ಜೊತೆಯಲ್ಲೇ ಇರುತ್ತಿದ್ದರು, ಆದರೆ ಅವರು ನಮ್ಮನ್ನು ಬಿಟ್ಟುಹೋದದರಿಂದ ಕ್ರೈಸ್ತರೆನಿಸಿಕೊಳ್ಳುವವರೆಲ್ಲರೂ ನಮ್ಮವರಲ್ಲವೆಂಬದು ಸ್ಪಷ್ಟವಾಗಿ ತೋರಬಂತು"(1 ಯೋಹಾನ 2:19).
ಪ್ರತಿಯೊಂದು ಸಭೆಯ ಹಿರಿಯರು ತಮ್ಮ ಸಭೆಗಳಲ್ಲಿ ಯಾವ ಆತ್ಮಿಕ ಮಾನದಂಡವನ್ನು ಕಾಪಾಡಿಕೊಳ್ಳಬೇಕೆಂದು ನಿರ್ಧರಿಸುತ್ತಾರೆ. ಪವಿತ್ರತೆಯ ಬಗ್ಗೆ ಯಾವುದೇ ಮಾನದಂಡಗಳನ್ನು ಹೊಂದಿರದ ಸಭೆಗಳನ್ನು ಯಾರೂ ಬಿಟ್ಟು ಹೋಗುವುದಿಲ್ಲ. ಆದರೆ ಯೇಸುಸ್ವಾಮಿ ಕಲಿಸಿಕೊಟ್ಟ ಮಾನದಂಡಗಳ ಪ್ರಕಾರ ಜೀವಿಸಲು ತೀರ್ಮಾನಿಸುವ ಸಭೆಗಳನ್ನು ಯೇಸು ಸ್ವತಃ ಕಂಡುಕೊಂಡಂತೆ, ಅನೇಕರು ಬಿಟ್ಟು ಹೋಗುತ್ತಾರೆ ಮತ್ತು ಇದು ನಮ್ಮ ಸಭೆಗಳಲ್ಲಿಯೂ ಸಂಭವಿಸುವುದನ್ನು ನಾವು ನೋಡಿದ್ದೇವೆ.
ನಮ್ಮ ಸಭೆಗಳನ್ನು ಬಿಟ್ಟುಹೋದವರು ಮೊದಲನೆಯದಾಗಿ ಶ್ರೀಮಂತರು ಮತ್ತು ಪ್ರಬಲರಾಗಿದ್ದರು; ಅವರು ಲೋಕದಲ್ಲಿ ಹಾಗೂ ಇತರ ಸಭೆಗಳಲ್ಲಿ ತಾವು ಪಡೆಯುತ್ತಿದ್ದ ವಿಶೇಷ ಆದ್ಯತೆಯನ್ನು ನಮ್ಮ ಮಧ್ಯದಲ್ಲಿ ಪಡೆಯದ ಕಾರಣ ಅಸಮಧಾನಗೊಂಡಿದ್ದರು. ಅವರು ಯೇಸುವಿನ ಶಿಷ್ಯರಾಗಲು ಅಡ್ಡಿಯಾಗಿದ್ದದ್ದು ಅವರ ಸಂಪತ್ತು ಅಥವಾ ಅವರ ಸ್ಥಾನಮಾನಗಳಲ್ಲ, ಆದರೆ ಈ ವಿಷಯಗಳಲ್ಲಿ ಅವರಿಗಿದ್ದ ಗರ್ವ. ನಾವು ಐಹಿಕ ಸಂಪತ್ತು ಅಥವಾ ಸ್ಥಾನಮಾನಗಳ ಕುರಿತು ಎಂದಿಗೂ ವಿಶೇಷ ಕಾಳಜಿ ವಹಿಸಲಿಲ್ಲ. ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ (ಕೀರ್ತನೆ 15:4) , ನಾವು ದೀನತೆಯುಳ್ಳವರು ಮತ್ತು ದೇವರಿಗೆ ಭಯಪಡುವವರನ್ನು, ಮಾತ್ರ ಸನ್ಮಾನಿಸಿದೆವು.
ನಮ್ಮ ಸಭೆಗಳಲ್ಲಿ ಸಭಾ ಹಿರಿಯರಾಗಲು ಬಯಸಿದವರನ್ನು ಹಿರಿಯರನ್ನಾಗಿ ನೇಮಿಸಿಲ್ಲ ಎಂದು ಕೆಲವರು ನಮ್ಮನ್ನು ಬಿಟ್ಟು ಹೋದರು. ಮತ್ತು ಕೆಲವು ಮಂದಿ ಸಭಾ ಹಿರಿಯರಾಗಿ ನೇಮಕಗೊಂಡಿದ್ದರೂ, ತಮ್ಮ ಜವಾಬ್ದಾರಿಯಲ್ಲಿ ನಿಷ್ಠರಾಗಿರದೆ, ಅವರಿಗೆ ಹಿರಿತನವನ್ನು ಬಿಟ್ಟುಕೊಡಲು ಹೇಳಿದಾಗ ನಮ್ಮನ್ನು ಬಿಟ್ಟುಹೋದರು. ಕೆಲವರು ತಮ್ಮ ಬೋಧನೆಯ ಸಾಮರ್ಥ್ಯದ ಮೂಲಕ ಹಣ ಸಂಪಾದಿಸಲು ಬಯಸಿದರು (1 ಪೇತ್ರ 5:2); ಆದರೆ ಸುವಾರ್ತೆಯನ್ನು ಹಣಕ್ಕಾಗಿ ಬೋಧಿಸುವ ಎಲ್ಲರಿಂದ ದೂರವಿರಲು ನಮಗೆ ಆಜ್ಞಾಪಿಸಲಾಗಿದೆ (1 ತಿಮೊಥೆ 6:3). ಇನ್ನೂ ಕೆಲವರು ಮಂದೆಯ ಅಂದರೆ ದೇವಜನರ ಮೇಲೆ ದೊರೆಯಂತೆ ಆಳಲು ಪ್ರಯತ್ನಿಸಿದರು (1 ಪೇತ್ರ 5:3). ಕೆಲವರು, ಜನರನ್ನು ಕರ್ತನ ಕಡೆಗೆ ಅಲ್ಲದೇ, ತಮ್ಮ ಕಡೆಗೆ ಸೆಳೆಯಲು ಪ್ರಯತ್ನಿಸಿದರು (ಅ. ಕೃ. 20:30). ದೇವರು ಇಂತಹ ಎಲ್ಲಾ ಸಭಾ ಹಿರಿಯರ ಸ್ಥಾನಗಳಲ್ಲಿ ಉತ್ತಮ ವ್ಯಕ್ತಿಗಳನ್ನು ನೇಮಿಸಿ, ಇವರನ್ನು ತೆಗೆದುಹಾಕಿದವರು ತಾವೇ ಎಂಬುದನ್ನು ನಮಗೆ ದೃಢಪಡಿಸಿದರು.
ಇನ್ನೂ ಕೆಲವರು, ನಮ್ಮಂತಹ ಬಡ ಭಾರತೀಯ ಸಭೆಯನ್ನು ತಿರಸ್ಕರಿಸಿ ಶ್ರೀಮಂತ ಪಾಶ್ಚಿಮಾತ್ಯ ದೇಶದ ಸಭೆಯೊಂದರೊಂದಿಗೆ ಸಂಪರ್ಕ ಹೊಂದಲು ಬಯಸಿ ನಮ್ಮನ್ನು ಬಿಟ್ಟು ಹೋದರು. ಹೆಚ್ಚಿನ ಭಾರತೀಯ ಕ್ರೈಸ್ತರು, ಪಾಶ್ಚಿಮಾತ್ಯ ದೇಶದ ಕ್ರೈಸ್ತರು ಆತ್ಮಿಕವಾಗಿ ಶ್ರೇಷ್ಠರು ಎಂದು ನಂಬುತ್ತಾರೆ. ಆದ್ದರಿಂದ, ಅವರು, ಅವರ ಮುಂದೆ ಸಂಪೂರ್ಣವಾಗಿ ತಲೆಬಾಗುತ್ತಾರೆ. ಭಾರತದಲ್ಲಿರುವ ಅನೇಕ ಸಭೆಗಳು ತಮ್ಮ ವಿಶೇಷ ಕೂಟಗಳಲ್ಲಿ ಮುಖ್ಯ ಬೋಧಕನಾಗಿ ಕನಿಷ್ಠ ಒಬ್ಬ ಅಮೆರಿಕ ಅಥವಾ ಯೂರೋಪಿನ ಬೋಧಕನಿಲ್ಲದೆ ವಿಶೇಷ ಕೂಟಗಳನ್ನೇ ನಡೆಸುವುದಿಲ್ಲ. ಹೀಗೆ ಮಾಡಿದರೆ ಮಾತ್ರ ತಮ್ಮ ಕೂಟಗಳಿಗೆ ಜನರನ್ನು ಆಕರ್ಷಿಸಬಹುದು ಎಂದು ಅವರು ನಂಬುತ್ತಾರೆ. ಆದರೆ ನಾವು ಎಲ್ಲಾ ಜನಾಂಗದವರನ್ನೂ ಸಮಾನರಾಗಿ ನೋಡಿದ್ದೇವೆ ಮತ್ತು ನಾವು ಬೋಧಿಸುವ ಸಂದೇಶ ಮತ್ತು ಆತ್ಮನ ಅಭಿಷೇಕದ ಮೂಲಕ ಜನರನ್ನು ನಮ್ಮ ಸಭೆಗಳ ಕಡೆಗೆ ಸೆಳೆಯಲು ಪ್ರಯತ್ನಿಸಿದ್ದೇವೆ. ಬೋಧಕನ ಚರ್ಮದ ಬಣ್ಣದ ಮೂಲಕ ಅಲ್ಲ. ಅನೇಕ ಭಾರತೀಯ ಕ್ರೈಸ್ತರು ಆರ್ಥಿಕ ಲಾಭಕ್ಕಾಗಿ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಉಚಿತ ಪ್ರವಾಸಗಳನ್ನು ಪಡೆಯುವುದಕ್ಕಾಗಿ ಪಾಶ್ಚಿಮಾತ್ಯ ಗುಂಪುಗಳಿಗೆ ಅಂಟಿಕೊಂಡಿರುತ್ತಾರೆ!! ನಾವು ಇಂತಹ ಎಲ್ಲಾ ‘ಸ್ವಾರ್ಥ ಹುಡುಕುವ’ ಮನೋಭಾವಗಳಿಗೆ ವಿರೋಧವಾಗಿ ನಿಂತಿದ್ದೇವೆ.
"ಸಭೆಯು ದೇವರ ವಾಸಸ್ಥಳವಾಗಿದೆ"
ನಂತರ, ನಾವು ಬೋಧಿಸುವ ಪವಿತ್ರತೆಯ ಮಟ್ಟವು ಬಹಳ ಉನ್ನತವಾದದ್ದು ಎಂಬ ಕಾರಣಕ್ಕೆ ಅನೇಕರು ನಮ್ಮನ್ನು ಬಿಟ್ಟು ಹೋದರು. ನಾವು ಬೋಧಿಸಿದ್ದು - ಶಿಷ್ಯತ್ವದ ಕುರಿತಾಗಿಯೂ, ಪವಿತ್ರಾತ್ಮನ ಸ್ನಾನ ಮತ್ತು ಅಭಿಷೇಕ ಮತ್ತು ಪವಿತ್ರಾತ್ಮನ ವರಗಳ ಕುರಿತಾಗಿಯೂ, ನಮಗೆ ತಿಳಿದೂ ಮಾಡುವ ಎಲ್ಲಾ ಪಾಪಗಳ ಕುರಿತಾಗಿಯೂ, ಪರ್ವತ ಪ್ರಸಂಗ (ಮತ್ತಾ.-5, 6 ಮತ್ತು 7), ಪರಿಪೂರ್ಣತೆಗೆ ಸಾಗುವಂಥದ್ದು, ಯೇಸು ಜೀವಿಸಿದಂತೆ ಜೀವಿಸುವುದರ ಕುರಿತಾಗಿಯೂ, ದೈವಿಕ ಕುಟುಂಬ ಜೀವಿತ, ಪ್ರತಿದಿನವೂ ನಮ್ಮ ಶಿಲುಬೆಯನ್ನು ನಾವು ಹೊರುವುದು, ಪ್ರಾಪಂಚಿಕತೆಯಿಂದ ನಮ್ಮನ್ನು ನಾವು ಬೇರ್ಪಡಿಸಿಕೊಳ್ಳುವುದು, ಹಣದ ವ್ಯಾಮೋಹದಿಂದ ಬಿಡುಗಡೆ, ಉಪವಾಸ ಮತ್ತು ಪ್ರಾರ್ಥನೆಯ ಕುರಿತಾಗಿಯೂ, ಎಲ್ಲರನ್ನೂ ಹೃದಯಪೂರ್ವಕವಾಗಿ ಕ್ಷಮಿಸುವುದು, ಯೇಸು ನಮ್ಮನ್ನು ಪ್ರೀತಿಸಿದಂತೆಯೇ ಇತರರನ್ನು ಪ್ರೀತಿಸುವುದು, ಸ್ಥಳೀಯ ಸಭೆಯನ್ನು ಕ್ರಿಸ್ತನ ದೇಹವಾಗಿ ಕಟ್ಟುವುದು, ಮುಂತಾದವು. ಇಂತಹ ಉಪದೇಶಗಳು ಅನೇಕರು ಎಡವುವಂತೆ ಮಾಡಿ ಅವರು ನಮ್ಮ ಸಭೆಯನ್ನು ಬಿಟ್ಟು ಹೋದರು. ಆದರೆ ಇದು ನಮಗೆ ಯಾವ ರೀತಿಯೂ ತೊಂದರೆ ಮಾಡಲಿಲ್ಲ. ಯಾಕೆಂದರೆ ಅನೇಕರು ಯೇಸುವಿನ ಬೋಧನೆಗೂ ಸಹ ಅಸಮಾಧಾನಗೊಂಡು ಆತನನ್ನು ಬಿಟ್ಟು ಹೋದರೆಂದು ನಮಗೆ ಗೊತ್ತಿತ್ತು( ಯೋಹಾನ 6: 60 , 66). ಆದರೆ ನಾವು ಆಶ್ಚರ್ಯಪಡುವಂತೆ ಮಾಡಿದ್ದೇನೆಂದರೆ, ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಅತ್ಯುತ್ತಮ ಶಾಲೆಗಳನ್ನು ಆರಿಸಿಕೊಳ್ಳುವ ಮತ್ತು ತಮ್ಮ ವೈದ್ಯಕೀಯ ಚಿಕಿತ್ಸೆಗಾಗಿ ಉನ್ನತ ಮಟ್ಟದ ಆಸ್ಪತ್ರೆಗಳನ್ನು ಆರಿಸಿಕೊಳ್ಳುವ ಕ್ರೈಸ್ತರು ತಮ್ಮ ಆತ್ಮಿಕ ಅನ್ಯೋನ್ಯತೆಗೆ ಮಾತ್ರ ಪವಿತ್ರತೆಯಲ್ಲಿ ಕೀಳು ಮಟ್ಟದ ಸಭೆಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಇದು ಏನನ್ನು ಪ್ರತಿಪಾದಿಸಿತು ಎಂದರೆ ಅವರು ಆತ್ಮಿಕ ವಿಷಯಗಳಿಗಿಂತ ಲೌಕಿಕ ವಿಷಯಗಳನ್ನು ಮತ್ತು ತಮ್ಮ ಆತ್ಮ-ಪ್ರಾಣಗಳಿಗಿಂತ ತಮ್ಮ ದೇಹಗಳಿಗೆ ಹೆಚ್ಚು ಮಹತ್ವ ಕೊಡುತ್ತಾರೆ ಎಂದು.
ಆದರೆ ನಮಗೆ ಇನ್ನೂ ಹೆಚ್ಚು ಆಶ್ಚರ್ಯಪಡಿಸಿದ ವಿಷಯವೇನೆಂದರೆ - ದೈವಿಕ ಜೀವಿತವನ್ನು ಜೀವಿಸುವುದರಲ್ಲಿ ಯಾವುದೇ ಆಸಕ್ತಿ ಇಲ್ಲದ ಕೆಲವರು ಇನ್ನೂ ನಮ್ಮ ಸಭೆಗಳಲ್ಲಿ ಇರಲು ಆರಿಸಿಕೊಂಡಿರುವುದಾಗಿದೆ. ಹೇಗಿದ್ದರೂ ಅವರಲ್ಲಿ ನಾವು ತಿಳಿದುಕೊಂಡ ಸತ್ಯಾಂಶವೇನೆಂದರೆ, ಅವರಿಗೆ ಕೇವಲ ತಮ್ಮ ತಮ್ಮ ಕುಟುಂಬಗಳಿಗಾಗಿ ನಮ್ಮ ಸಭೆಯ ಮಧ್ಯದಲ್ಲಿ ಒಳ್ಳೆಯ ವಾತಾವರಣವನ್ನು ಕಂಡುಕೊಂಡಿದ್ದಾರೆ. ಅದಕ್ಕಾಗಿ ಅವರು ಇಲ್ಲಿರಲು ಬಯಸುತ್ತಾರೆ ಎಂದು. ನಮ್ಮ ಸಭೆಯು ಅವರಿಗೆ ಒಂದು ಒಳ್ಳೆಯ ಕ್ಲಬ್ ಅಥವಾ ಸಂಘ-ಸಂಸ್ಥೆಯಂತಿದೆ. ಯಾಕೆಂದರೆ ಇಲ್ಲಿ ಅವರು ಸದಸ್ಯರಾಗಿರಲು ಯಾವುದೇ ಸದಸ್ಯ-ಶುಲ್ಕ ವಸೂಲಾತಿ ಇಲ್ಲ. ಆದ ಕಾರಣ ಅನೇಕ ಬಾಬೇಲಿನಂತ ಕ್ರೈಸ್ತರು ಇನ್ನೂ ನಮ್ಮ ಸಭೆಗಳಲ್ಲಿ ಇದ್ದುಬಿಟ್ಟಿದ್ದಾರೆ. ಯೇಸು ಕೂಡ ತನ್ನ ಸಭೆಯಲ್ಲಿ ಇಸ್ಕರಿಯೋತ ಯೂದನನ್ನು ಹೊಂದಿದ್ದರು!
ಆದರೆ ನಮ್ಮ ಸಭಾ-ಹಿರಿಯರಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕಾಗಿ ನಾವು ಆಗಾಗ ಸಭೆಗಳನ್ನು ಮತ್ತು ಸಮ್ಮೇಳನಗಳನ್ನು ಈ ಹಿರಿಯರಿಗಾಗಿಯೇ ಆಯೋಜಿಸಿದೆವು. ದೇವರು, ನಮ್ಮ ಸಭೆಗಳಲ್ಲಿ ಕೆಲವು ಉತ್ತಮ ಪುರುಷರನ್ನು ಹಿರಿಯರಾನ್ನಾಗಿ ಎಬ್ಬಿಸಿದರು. ಅವರಲ್ಲಿ ಅನೇಕರು ಚತುರ ಬೋಧಕರಾಗಿರಲಿಲ್ಲ. ಆದರೆ ಅವರು ಕ್ರಿಸ್ತನ ಮಹಿಮೆಯನ್ನು ಹುಡುಕುತ್ತಿದ್ದರು ಮತ್ತು ದೇವ ಜನರ ಒಳಿತಿಗಾಗಿ ನಿಜವಾದ ಕಾಳಜಿಯನ್ನು ಹೊಂದಿದ್ದರು (ಫಿಲಿಪ್ಪಿ. 2: 19 - 21). ಒಂದು ಸ್ಥಳದಲ್ಲಿ ಅಂತಹ ಒಬ್ಬ ಸಹೋದರನನ್ನು ನಾವು ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ನಾವು ಅಲ್ಲಿ ಸಭೆಯನ್ನು ಪ್ರಾರಂಭಿಸುತ್ತಿರಲಿಲ್ಲ. ಏಕೆಂದರೆ ದೈವಿಕ ಕುರುಬನಿಲ್ಲದೆ, ಕುರಿಗಳು ದಾರಿ ತಪ್ಪಿಹೋಗುತ್ತವೆ ಎಂದು ನಾವು ಅರಿತುಕೊಂಡೆವು.
ಇಂದು ನಾವು ನಮ್ಮ ಸಭೆಗಳನ್ನು ನೋಡುವಾಗ, ದೇವರು ನಾವು ಏನಾಗಬೇಕೆಂದು ಬಯಸುತ್ತಾರೋ, ಅದರಿಂದ ನಾವು ಇನ್ನೂ ಬಹಳ ಹಿಂದೆ ಇದ್ದೇವೆ ಎಂದು ನಾವು ಕಂಡುಕೊಳ್ಳುವವರಾಗಿದ್ದೇವೆ. ಆದರೆ ನಾವು ಪರಿಪೂರ್ಣತೆಯತ್ತ ಸಾಗುತ್ತಿದ್ದೇವೆ, ಮತ್ತು ಯಾರು ನಮ್ಮನ್ನು ಸೇರುತ್ತಾರೆ ಅಥವಾ ಯಾರು ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂಬುದನ್ನು ಲೆಕ್ಕಿಸದೆ, ಯೇಸು ಕಲಿಸಿದ ಪವಿತ್ರತೆಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ.
ಹಳೆಯ ಒಡಂಬಡಿಕೆಯಲ್ಲಿ ಗುಡಾರ ಇದ್ದಂತೆ, ಸಭೆಯು ದೇವರ ವಾಸಸ್ಥಳವಾಗಿದೆ. ಆ ಗುಡಾರವು ಮೂರು ಭಾಗಗಳನ್ನು ಹೊಂದಿತ್ತು - ಹೊರಗಿನ ಅಂಗಳ, ಪವಿತ್ರ ಸ್ಥಳ, ಮತ್ತು ಅತಿ ಪವಿತ್ರ ಸ್ಥಳ. ಹೊರಗಿನ ಅಂಗಳದಲ್ಲಿ ಬಲಿಪೀಠ ಮತ್ತು ತೊಟ್ಟಿಯ (ಪಾಪ-ಕ್ಷಮೆ ಮತ್ತು ನೀರಿನ ದೀಕ್ಷಾ-ಸ್ನಾನದ ಸಂಕೇತ) ಸುತ್ತಲೂ ಬಹಳ ಜನರು ಸೇರುತ್ತಿದ್ದರು. ಆದಾಗ್ಯೂ ಪವಿತ್ರ ಸ್ಥಳದಲ್ಲಿ ಜನರ ಸಂಖ್ಯೆಯು ತುಂಬಾ ಕಡಿಮೆಯಾಗಿರುತ್ತಿತ್ತು. ಅಲ್ಲಿ ದೀಪ-ಸ್ತಂಭ, ರೊಟ್ಟಿಯ ಮೇಜು ಮತ್ತು ಧೂಪದ್ರವ್ಯದ ಬಲಿಪೀಠವು ಪವಿತ್ರಾತ್ಮರ ಅಭಿಷೇಕ, ದೇವರ ವಾಕ್ಯದ ಅಧ್ಯಯನ ಮತ್ತು ಪ್ರಾರ್ಥನೆಯನ್ನು ಸಂಕೇತಿಸುತ್ತವೆ. ಆದರೆ ಹಳೆಯ ಒಡಂಬಡಿಕೆಯ ಕಾಲದಲ್ಲಿ, ಅತ್ಯಂತ ಪವಿತ್ರ ಸ್ಥಳಕ್ಕೆ ಯಾರೂ ಪ್ರವೇಶಿಸಲು ಸಾಧ್ಯವಾಗಲಿಲ್ಲ. ದೇವರೊಂದಿಗೆ ಅನ್ಯೋನ್ಯತೆಯನ್ನು ಬಯಸುವ, ತಮ್ಮ ಎಲ್ಲವನ್ನೂ ಆತನಿಗೆ ಒಪ್ಪಿಸುವ ಹಾಗೂ ಆತ್ಮ ಮತ್ತು ಸತ್ಯದಲ್ಲಿ ಆತನನ್ನು ಆರಾಧಿಸಲು ಬಯಸುವ ಎಲ್ಲರಿಗೂ ಇಂದು ತೆರೆದಿರುವುದು ಈ ಪವಿತ್ರ ಸ್ಥಾನವಾಗಿದೆ.
ಗುಡಾರದ ಈ ಮೂರೂ ಭಾಗಗಳು ದೇವರೊಂದಿಗಿನ ಅನ್ಯೋನ್ಯತೆಯ ಮೂರು ವಲಯಗಳನ್ನು ಪ್ರತಿನಿಧಿಸುತ್ತವೆ ಮತ್ತು ಪ್ರತಿಯೊಂದು ಸಭೆಯು (ನಮ್ಮ ಸಭೆಯೂ ಸೇರಿ,) ಈ ಮೂರು ಕ್ಷೇತ್ರಗಳಲ್ಲಿ ಒಂದರಲ್ಲಿ ವಾಸಿಸಲು ಆಯ್ಕೆ ಮಾಡುವ ಜನರನ್ನು ಒಳಗೊಂಡಿದೆ. ಆದಾಗ್ಯೂ ಜಯಶಾಲಿಗಳು ಎಲ್ಲಾ ಸಮಯದಲ್ಲೂ, ಅತ್ಯಂತ ಪವಿತ್ರ ಸ್ಥಳದಲ್ಲಿ ವಾಸಿಸಲು ಆಯ್ಕೆ ಮಾಡುವರು ಮತ್ತು ಅದರಿಂದ ಅವರು ಕೊನೆಯವರೆಗೂ ಕರ್ತನಿಗೆ ನಂಬಿಗಸ್ಥರಾಗಿ ಉಳಿಯುತ್ತಾರೆ. ಅವರು ತಮ್ಮ ಸಭೆಗಳ ಮತ್ತು ಪ್ರತಿಯೊಂದು ಸಭೆಯ ನಿಜವಾದ ಶಕ್ತಿಯಾಗಿದ್ದಾರೆ.