ತಪ್ಪಿತಸ್ಥ ಭಾವನೆಯನ್ನು ಮೂಡಿಸುವ ಬೋಧನೆ

Article Body: 

"ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು, ಖಂಡಿಸುವುದಕ್ಕಾಗಿ ಕಳುಹಿಸಲಿಲ್ಲ" (ಯೋಹಾನ 3:17, ಸರಳ ಭಾಷಾಂತರ).

ನಾವು ದೇವರ ವಾಕ್ಯವನ್ನು ಬೋಧಿಸುವಾಗ, ದೇವಜನರು ತಮ್ಮನ್ನು ತಪ್ಪಿತಸ್ಥರು ಎಂದೆಣಿಸಿಕೊಂಡು ಖಂಡನೆಗೆ ಒಳಗಾಗಿಸುವ ಬೋಧನೆಯನ್ನು ಯಾವತ್ತೂ ಮಾಡಬಾರದು.

ದೇವಜನರು ಪಾಪದಿಂದ ಮೋಸಹೋಗಿ ಕಠಿಣರಾಗದಂತೆ, "ಪ್ರತಿನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ" (ಪ್ರೋತ್ಸಾಹಿಸಿರಿ) ಎಂದು ಸತ್ಯವೇದವು ನಮಗೆ ತಿಳಿಸುತ್ತದೆ (ಇಬ್ರಿಯ. 3:13). ಇದರ ಅರ್ಥವೇನೆಂದರೆ, ನಾವು ಪ್ರತಿನಿತ್ಯವೂ, ನಮ್ಮ ಪ್ರತಿಯೊಂದು ಬೋಧನೆಯ ಮೂಲಕವೂ, ನಮಗೆ ಕಿವಿಗೊಡುವ ಜನರನ್ನು ಪ್ರೋತ್ಸಾಹಿಸಬೇಕು. ಈ ರೀತಿಯಾಗಿ ಮಾತ್ರ ನಾವು ಅವರನ್ನು ಪಾಪದಿಂದ ರಕ್ಷಿಸಬಹುದು. ಆದರೆ ನಾವು ನಮ್ಮ ಬೋಧನೆಯಿಂದ ವಿಶ್ವಾಸಿಗಳನ್ನು ಖಂಡನೆಗೆ ಗುರಿ ಮಾಡುವುದರ ಮೂಲಕ ಅವರನ್ನು ಹೆಚ್ಚು ಪವಿತ್ರರನ್ನಾಗಿಯೂ, ಉತ್ತಮ ದೇವಭಕ್ತರನ್ನಾಗಿಯೂ ಮಾಡಬಹುದು ಎಂದು ಸೈತಾನನು ನಮ್ಮನ್ನು ವಂಚಿಸುತ್ತಾನೆ. ಇದೊಂದು ಸುಳ್ಳಾಗಿದೆ.

ವಾಕ್ಯದ ಬೋಧನೆಯ ಮೂಲಕ, ಪವಿತ್ರಾತ್ಮನು ದೇವಜನರಲ್ಲಿ ತಮ್ಮ ಪಾಪದ ಅರಿವನ್ನು ಖಂಡಿತವಾಗಿ ಉಂಟುಮಾಡುತ್ತಾನೆ. ಆದರೆ ಇದನ್ನು ಮಾಡುವಾಗ ಆತನು ಅವರನ್ನು ಪ್ರೋತ್ಸಾಹಿಸುತ್ತಾನೆ. ನಾವು ಈಗಾಗಲೇ ನೋಡಿದಂತೆ, ದೇವರು ತನ್ನ ಮಗನನ್ನು ಲೋಕದ ರಕ್ಷಣೆಗಾಗಿ ಕಳುಹಿಸಿದನೇ ಹೊರತು, ಲೋಕದ ಖಂಡನೆಗಾಗಿ ಅಲ್ಲ; ಮತ್ತು ದೇವರು ಪವಿತ್ರಾತ್ಮನನ್ನು ಸಭೆಯಲ್ಲಿ ವಿಶ್ವಾಸಿಗಳನ್ನು ಎಚ್ಚರಿಸಿ ಪ್ರೋತ್ಸಾಹಿಸುವುದಕ್ಕಾಗಿ ಕಳುಹಿಸಿದನೇ ಹೊರತು ಖಂಡಿಸುವುದಕ್ಕಾಗಿ ಅಲ್ಲ. ದೇವರು ಸಂತೈಸುವ ದೇವರಾಗಿದ್ದಾರೆ. ಆತನು ಯಾವಾಗಲೂ ನಮ್ಮ ಆತ್ಮವನ್ನು ಮೇಲೆತ್ತುವನು ಮತ್ತು ನಮಗೆ ನಿರೀಕ್ಷೆಯನ್ನು ಕೊಡುವಾತನು ಆಗಿದ್ದಾನೆ (ರೋಮಾ. 15:5 ಮತ್ತು 2 ಕೊರಿಂಥ 1:3,4). ಖಂಡನೆಯ ಸೇವೆಯು ಜನರನ್ನು ಆತ್ಮಿಕ ಮರಣಕ್ಕೆ ನಡೆಸುವ "ಹಳೆಯ ಒಡಂಬಡಿಕೆಯ ಒಂದು ಸೇವೆ" ಆಗಿತ್ತು (2 ಕೊರಿಂಥ 3:7-9). ಇನ್ನೊಂದೆಡೆ, ಹೊಸ ಒಡಂಬಡಿಕೆಯ ಸೇವೆಯು ಜೀವವುಳ್ಳ ಸೇವೆಯಾಗಿದ್ದು, ಅದು ನಮ್ಮನ್ನು ದೇವ ಸ್ವಾರೂಪ್ಯಕ್ಕೆ ನಡೆಸುತ್ತದೆ.

ನಾವು ಪಾಪವನ್ನು ಬಹಿರಂಗ ಗೊಳಿಸುವ ಬೋಧನೆಯಿಂದ, ವಿಶ್ವಾಸಿಗಳನ್ನು ಖಂಡನೆಗೆ ಗುರಿಪಡಿಸುವಂತ ಬಲೆಗೆ ಸುಲಭವಾಗಿ ಬೀಳಬಹುದು. ಹೀಗೆ ಮಾಡಿದರೆ, ನಾವು ನಮ್ಮ ಸೇವೆಯಲ್ಲಿ ಸೋತಿದ್ದೇವೆ ಮತ್ತು ಜನರನ್ನು "ಅಪರಾಧಿಯ ಮನಸ್ಥಿತಿಗೆ" ತಳ್ಳುವವರಾಗಿರುತ್ತೇವೆ. ಮಾನವ ಪ್ರೇರಿತವಾದ ಇಂತಹ ತಪ್ಪಿತಸ್ಥ ಭಾವನೆಯು ಒಂದು ರೀತಿಯ ಸೆರೆಮನೆಯಾಗಿದ್ದು, ಇದರಿಂದ ಪಾರಾಗಲು ಜನರು ಬಹಳ ಕಷ್ಟ ಪಡಬೇಕಾಗುತ್ತದೆ.

ಸಾಮಾನ್ಯವಾಗಿ ಇಂತಹ ಅತೀ ಉನ್ನತ ಗುಣಮಟ್ಟವನ್ನು ಬೋಧಿಸುವ ತಂತ್ರವನ್ನು ಕೆಲವು ಬೋಧಕರು (ವಿಶೇಷವಾಗಿ ಅವರು ಯುವಕರು, ಅನುಭವವಿಲ್ಲದವರು ಆಗಿದ್ದು, ಅವರಲ್ಲಿ ಇರುವ ಅಭದ್ರತೆ ಹಾಗೂ ತಾವು ಕೆಳದರ್ಜೆಯವರು ಎಂಬ ಅನಿಸಿಕೆಯಿಂದಾಗಿ, ಅವರು ಜನರ ಮೆಚ್ಚುಗೆ ಗಳಿಸಲು ಬಯಸುವಾಗ) ಉಪಯೋಗಿಸಿ, ಎಲ್ಲರಲ್ಲೂ (ತಮ್ಮನ್ನು ಹೊರತಾಗಿ) ತಪ್ಪಿತಸ್ಥ ಭಾವನೆಯನ್ನು ಉಂಟುಮಾಡುತ್ತಾರೆ. ಅವರ ಬೋಧನೆ ಪಾಲಿಸಲು ಅಸಾಧ್ಯವಾದದ್ದು. ಸ್ವತ: ಯೇಸು ಅಥವಾ ಅಪೊಸ್ತಲರೇ ಇಂತಹ ಬೋಧನೆಯನ್ನು ಮಾಡಲಿಲ್ಲ ಅಥವಾ ಜನರು ಆ ರೀತಿಯಾಗಿ ಜೀವಿಸುವಂತೆ ಹೇಳಲಿಲ್ಲ. ಈ ಬೋಧಕರು ತಮ್ಮ ಬೋಧನೆಯ ಮಟ್ಟದಲ್ಲಿ ಜೀವಿಸುವದಿಲ್ಲ. ಆದರೆ ಈ ಉಪದೇಶದಿಂದ ಬಲಹೀನ ಮನಸ್ಸಿನ ವಿಶ್ವಾಸಿಗಳು, ಸ್ವ-ಖಂಡನೆ ಮತ್ತು ತಪ್ಪಿತಸ್ಥ ಭಾವನೆಗೆ ಒಳಗಾಗಿ ನಿರುತ್ಸಾಹಗೊಳ್ಳುತ್ತಾರೆ.

ಕ್ರೈಸ್ತ ಸಮಾಜದಲ್ಲಿ ವಿಶ್ವಾಸಿಗಳಿಗೆ "ಪೂರ್ಣ-ಕಾಲಿಕ" ಕ್ರೈಸ್ತ ಸೇವೆಗೆ ಅಥವಾ ಧರ್ಮಪ್ರಚಾರ ಕಾರ್ಯಕ್ಕೆ ಬರುವಂತೆ ನೀಡಲಾಗುವ ಹೆಚ್ಚಿನ ಸವಾಲುಗಳು, ತಪ್ಪಿತಸ್ಥ ಭಾವನೆಯನ್ನು ಮೂಡಿಸುವ ಬೋಧನೆಯ ಮೂಲಕ ನೀಡಲಾಗುತ್ತವೆ. ಲೋಕದ ಅನೇಕ ಪ್ರಾಂತ್ಯಗಳಲ್ಲಿ ಇರುವ ಕೊರತೆಗಳನ್ನು ಬೋಧಕನು ಎಷ್ಟು ಒತ್ತಿ ಹೇಳುತ್ತಾನೆಂದರೆ, ಅದನ್ನು ಕೇಳಿ ಕೆಲವರು ತಮ್ಮ ಉದ್ಯೋಗವನ್ನು ಬಿಟ್ಟು, ಧರ್ಮ ಪ್ರಚಾರಕ್ಕೆ ಕೈ ಹಾಕುತ್ತಾರೆ. ಆದರೆ ಯೇಸು ಮತ್ತು ಅಪೊಸ್ತಲರು, ಲೋಕವೆಂಬ ಗದ್ದೆಯ ಪೈರನ್ನು ಕೊಯ್ಯುವ ಕೆಲಸಗಾರರನ್ನು ಕಳುಹಿಸಲು ಇಂತಹ ತಂತ್ರಗಳನ್ನು ಉಪಯೋಗಿಸಲಿಲ್ಲ. ಯೇಸುವು ತನ್ನ ಅಪೊಸ್ತಲರಿಗೆ, ನೀವು ಹೊರಟು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ ಎಂದು ಹೇಳಿದನು. ಆದರೆ ಯೇಸುವು ಇಸ್ರಾಯೇಲಿನಲ್ಲಿ ಅವರ ಸುಖಕರ ಜೀವನವನ್ನು ಲೋಕದ ಇತರ ಭಾಗದ ಜನರ ಬಡತನಕ್ಕೆ ಹೋಲಿಸಿ, ಅವರನ್ನು ತಪ್ಪಿತಸ್ಥರನ್ನಾಗಿ ಮಾಡಿ, ಅವರನ್ನು ಹೊರಗೆ ಕಳುಹಿಸಲಿಲ್ಲ. ಇಂದು ಅನೇಕ ಬೋಧಕರು ಇಂಥಹ ವಿಧಾನಗಳನ್ನು ಬಳಸುತ್ತಿದ್ದಾರೆ ಮತ್ತು ಇದರಿಂದಾಗಿ ಕ್ರೈಸ್ತ ಸೇವಕರಲ್ಲಿ ಅನೇಕರು ಪೊಳ್ಳಾದ ಜೀವನ ಜೀವಿಸುತ್ತಿದ್ದಾರೆ.

ಇದು ಈ ರೀತಿಯಾಗಿ ನಡೆಯುತ್ತದೆ: ಅನೇಕರು ಧರ್ಮ ಪ್ರಚಾರಕರ ಸವಾಲನ್ನು ಕೇಳಿ, ತಾವು ಪ್ರಾಪಂಚಿಕ ಉದ್ಯೋಗದಲ್ಲಿ ಮುಂದುವರೆಯುವದು ತಪ್ಪೆಂದು ಭಾವಿಸಿ, ತಮ್ಮ ಕೆಲಸವನ್ನು ಬಿಟ್ಟು ದೇವರ ಸೇವೆಗೆ ಹೊರಡುತ್ತಾರೆ. ಆ ಕರೆ ದೇವರಿಂದ ಬಂದಿರುವದಿಲ್ಲ. ಆದರೆ ಅವರ ತಪ್ಪಿತಸ್ಥ ಮನೋಭಾವ ಅವರನ್ನು ಈ ರೀತಿಯಾಗಿ ಪ್ರೇರೇಪಿಸುತ್ತದೆ. ಆದರೆ, ಕ್ರಿಸ್ತನ ಪೂರ್ಣಕಾಲಿಕ ಸೇವೆಯು ಎಷ್ಟು ಪವಿತ್ರವಾದುದು ಎಂದರೆ, ನಮ್ಮನ್ನು ಸ್ವತ: ದೇವರೇ ಕರೆಯದಿದ್ದರೆ ಅದನ್ನು ಮಾಡುವ ಹಕ್ಕು ನಮಗಿಲ್ಲ.

ಇಂದು ಕ್ರೈಸ್ತ ಸಮಾಜದಲ್ಲಿ ದಶಮಾಂಶ ಮತ್ತು ಕಾಣಿಕೆಯ ಕುರಿತಾದ ಉಪದೇಶಗಳಲ್ಲಿ ಹೆಚ್ಚಿನವು ಈ ಖಂಡನೆಯ ವಿಧಾನವನ್ನು ಅನುಸರಿಸುತ್ತವೆ. "ದೇವರ ಕಾರ್ಯ"ಕ್ಕೆ ಹಣವನ್ನು ನೀಡುತ್ತಿಲ್ಲವೆಂಬ ತಪ್ಪಿತಸ್ಥ ಮನೋಭಾವವನ್ನು ವಿಶ್ವಾಸಿಗಳಲ್ಲಿ ಉಂಟುಮಾಡಲಾಗುತ್ತದೆ. ಹಾಗಾಗಿ ಅವರು ಕಷ್ಟಪಟ್ಟು ಕೂಡಿಟ್ಟ ಸಾವಿರಾರು ರೂಪಾಯಿಗಳನ್ನು ಈ ದುರಾಸೆಯ ಬೋಧಕರ "ಸೇವೆಗೆ" ನೀಡುತ್ತಾರೆ.

ಇದು ಇಂದಿನ ಬೋಧಕರು ಬಡ ವಿಶ್ವಾಸಿಗಳಿಗೆ ಮಾಡುತ್ತಿರುವ ಮಹಾ ಕೇಡು ಮತ್ತು ಅವರು ಇವೆಲ್ಲವನ್ನು "ಕ್ತಿಸ್ತನ ನಾಮದಲ್ಲಿ" ಮಾಡುತ್ತಾರೆ. ಯೇಸುವು ಹೀಗೆ ಅತಿಯಾದ ಒತ್ತಡವನ್ನು ಹೇರಿದ ಒಂದು ಸಂದರ್ಭವೂ ನಮಗೆ ಕಾಣಿಸುವದಿಲ್ಲ. ಆತನ ವಾಕ್ಯವು ಹೀಗೆ ಹೇಳುತ್ತದೆ - "ನೀವು ನನ್ನನ್ನು ಪ್ರೀತಿಸುವದಾದರೆ, ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ" (ಯೋಹಾನ 14:15). ಆತನು ಪೇತ್ರನಿಗೆ ಹೇಳಿದ್ದೇನೆಂದರೆ, "ನೀನು ಇವುಗಳಿಗಿಂತ ಹೆಚ್ಚಾಗಿ ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ? ಹಾಗಿದ್ದರೆ ನನ್ನ ಕುರಿಗಳನ್ನು ಮೇಯಿಸು" (ಯೋಹಾನ 21:15-17). ದೇವರು ತನಗೆ ಸಂತೋಷವಾಗಿ ವಿಧೇಯರಾಗುವವರನ್ನು ಮಾತ್ರ ಪ್ರೀತಿಸುತ್ತಾನೆ (2 ಕೊರಿಂಥ. 9:7).

ಇದು ಹೊಸ ಒಡಂಬಡಿಕೆಯಲ್ಲಿ ದೇವರು ತೋರಿಸಿರುವ ವಿಧಾನ - ಯಾವ ಬೋಧಕನ ಭಾವನಾತ್ಮಕ ಒತ್ತಡವೂ ಇಲ್ಲದೆ, ಸ್ವಪ್ರೇರಿತವಾಗಿ, ಸ್ವೇಚ್ಛೆಯಿಂದ ಮತ್ತು ಸಂತೋಷದಿಂದ ಮಾಡುವ ಸೇವೆಯಾಗಿದೆ. ಚತುರ ಬೋಧಕರ ಭಾವನಾತ್ಮಕ ಒತ್ತಡ ಮತ್ತು ಪವಿತ್ರಾತ್ಮನ ಮೆತ್ತನೆಯ ನಡೆಸುವಿಕೆ, ಇವುಗಳ ನಡುವಿನ ವ್ಯತ್ಯಾಸದ ಗ್ರಹಿಕೆ ನಮ್ಮಲ್ಲಿ ಇರಬೇಕು. ದೆವ್ವಗಳು ಜನರನ್ನು ಹಿಡಿದಾಗ, ಅವು ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಕಿತ್ತುಕೊಂಡು, ಅವರನ್ನು ತಮ್ಮ ಸಂಪೂರ್ಣ ಹಿಡಿತದಲ್ಲಿ ಇರಿಸುತ್ತವೆ. ಮತ್ತೊಂದೆಡೆ, ಪವಿತ್ರಾತ್ಮನು ಜನರನ್ನು ತನ್ನ ಹಿಡಿತದಲ್ಲಿ ಇರಿಸುವದಿಲ್ಲ. ಆತನು ಅವರನ್ನು ತುಂಬಿಸುತ್ತಾನೆ. ಇದರಲ್ಲಿ ವ್ಯತ್ಯಾಸವೇನೆಂದರೆ - ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಆತನು ಎಂದಿಗೂ ತೆಗೆದುಕೊಳ್ಳುವುದಿಲ್ಲ ಮತ್ತು ಆತನು ಅವರನ್ನು ತುಂಬಿಸಿದ ನಂತರವೂ ಸಹ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತಾನೆ. ನಮ್ಮ ಸ್ವ-ಚಿತ್ತಕ್ಕೆ ತಡೆ ಒಡ್ಡುವದು ಮತ್ತು ನಮ್ಮನ್ನು ಒತ್ತಾಯಿಸುವದು - ಸೈತಾನ ಹಾಗೂ ಹಲವು ಬೋಧಕರು ಮಾಡಲು ಪ್ರಯತ್ನಿಸುವಂತೆ - ಇವು ಪವಿತ್ರಾತ್ಮನು ಯಾವತ್ತೂ ಮಾಡದಂತಹ ಕಾರ್ಯ.

ನಾವು ಸ್ವತಂತ್ರ, ಆತ್ಮಪ್ರೇರಿತ ರೀತಿಯಲ್ಲಿ ನಡೆಯಬೇಕಾದರೆ, "ಅಪರಾಧಿ ಮನೋಭಾವ" ಮೂಡಿಸುವ ಉಪದೇಶಗಳನ್ನು ಒಡನೆಯೇ ಗುರುತಿಸಿ, ಅವನ್ನು ತಕ್ಷಣವೇ ನಮ್ಮ ತಲೆಯಿಂದ ತೆಗೆದುಹಾಕಬೇಕು.

ನನ್ನ ಯೌವ್ವನದ ದಿನಗಳಲ್ಲಿ, ಹೊಸ ಒಡಂಬಡಿಕೆಯ ಸೇವಕ ಹೇಗಿರಬೇಕೆಂದು ನಾನು ಅರ್ಥ ಮಾಡಿಕೊಳ್ಳದೇ ಇದ್ದಾಗ, ನಾನು ಸಹ ಕಾನೂನಿಗೆ (ನಿಯಮಕ್ಕೆ) ಕಟ್ಟುನಿಟ್ಟಾಗಿ ಅಂಟಿಕೊಂಡು "ಅಪರಾಧಿ ಮನೋಭಾವ" ಮೂಡಿಸುವ ಹಲವಾರು ಬೋಧನೆಗಳನ್ನು ಮಾಡಿದ್ದೇನೆ. ಆದರೆ ನಾನು ಈ ವಿಷಯದಲ್ಲಿ ನನ್ನ ತಪ್ಪನ್ನು ಅರಿತುಕೊಂಡು ಮಾನಸಾಂತರ ಹೊಂದಿದ್ದೇನೆ ಮತ್ತು ಆ ಬೋಧನಾ ರೀತಿಯನ್ನು ಬಹಳ ಹಿಂದೆಯೇ ಬಿಟ್ಟುಬಿಟ್ಟಿದ್ದೇನೆ. "ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು, ಬಾಲಕನ ಅಲೋಚನೆಗಳನ್ನು ಮಾಡಿಕೊಂಡೆನು, ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು" (1 ಕೊರಿಂಥದವರಿಗೆ 13:11). ಈ ಅಪರಾಧಿ ಪ್ರಜ್ಞೆ ಮೂಡಿಸುವ ಬೋಧನೆಯು ಜನರನ್ನು ಗುಲಾಮಗಿರಿಗೆ ನಡೆಸುತ್ತದೆ - ಆದರೆ ಯೇಸು ಮತ್ತು ಪವಿತ್ರಾತ್ಮನು ಎಲ್ಲಾ ಜನರನ್ನು ಬಿಡುಗಡೆ ಗೊಳಿಸುವ ಉದ್ದೇಶದಿಂದ ಬಂದಿದ್ದಾರೆ.

ಅಪರಾಧಿ ಮನೋಭಾವವನ್ನು ಮೂಡಿಸುವ ಪ್ರತಿಯೊಬ್ಬ ಬೋಧಕನೂ ಕಾನೂನಿಗೆ (ನಿಯಮಕ್ಕೆ) ಅಂಟಿಕೊಂಡಿದ್ದಾನೆ. ಆದರೆ ಆತನು ಇದನ್ನು ತಿಳಕೊಂಡಿಲ್ಲ. ಕಾನೂನಿಗೆ ಕಟ್ಟುನಿಟ್ಟಾಗಿ ಅಂಟಿಕೊಂಡಿರುವವರಲ್ಲಿ, ಹೊಸ ಒಡಂಬಡಿಕೆಯ ಸತ್ಯಾಂಶಗಳನ್ನು ಹಳೆಯ ಒಡಂಬಡಿಕೆಯ ಆತ್ಮದಿಂದ ಬೋಧಿಸುವವರು ಬಹಳ ಹೆಚ್ಚು ಹಾನಿಕಾರಕರು. ತಾವು ಹೊಸ ಒಡಂಬಡಿಕೆಯನ್ನು ಬೋಧಿಸುತ್ತಿದ್ದೇವೆ ಎಂದು ಅವರು ಕಲ್ಪಿಸಿಕೊಂಡರೂ, ಸೈತಾನನಿಂದ ಮೋಸಹೋಗಿ, ಅವರು ಹೊಸ ಒಡಂಬಡಿಕೆಯ ಆತ್ಮದ ಪರಿಚಯವಿಲ್ಲದೆಯೇ, ಅದನ್ನು ಕೇವಲ ಶಬ್ದಾನುಸಾರವಾಗಿ ಬೋಧಿಸುತ್ತಾರೆ.

ಹೊಸ ಒಡಂಬಡಿಕೆಯು ಅಕ್ಷರಾನುಸಾರವಾದ ಶುಭಸಂದೇಶವಲ್ಲ, ಆದರೆ ಅದು ಆತ್ಮಾನುಸಾರವಾದ ಶುಭ ಸಂದೇಶವಾಗಿದೆ. ಯೇಸುವಿನ ಮಾತುಗಳು "ಆತ್ಮವಾಗಿಯೂ ಜೀವವಾಗಿಯೂ" ಇದ್ದವು (ಯೋಹಾನ 6:63). ಆತ್ಮನ ಸೇವೆಯಲ್ಲಿ ಕಡ್ಡಾಯವಾಗಲೀ, ಖಂಡನೆಯಾಗಲೀ ಎಂದಿಗೂ ಇರದು, ಆದರೆ ಅದರಲ್ಲಿ ಸದಾ ಪ್ರೋತ್ಸಾಹ ಮತ್ತು ನಿರೀಕ್ಷೆ ಇರುತ್ತವೆ. ದೇವರು ನಮ್ಮ "ತಲೆಯನ್ನು ಎತ್ತುವಂತೆ ಮಾಡುವವನು ಆಗಿದ್ದಾನೆ" (ಕೀರ್ತನೆಗಳು 3:3), ನಮ್ಮ "ತಲೆಯನ್ನು ತಗ್ಗಿಸುವವನು ಅಲ್ಲ" ನಾವು ಅವಮಾನದಿಂದ ನಾಚಿಕೊಂಡು ಆತನಿಗೆ ವಿಧೇಯರಾಗುವದು ಆತನಿಗೆ ಎಂದಿಗೂ ಇಷ್ಟವಿಲ್ಲ. ಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಅವಮಾನಗೊಳಿಸಿ ಅವರು ವಿಧೇಯರಾಗುವಂತೆ ಮಾಡಲು ಪ್ರಯತ್ನಿಸಬಹುದು. ಆದರೆ ಪ್ರೀತಿಸುವ ತಂದೆಗಳು ಎಂದಿಗೂ ಹಾಗೆ ಮಾಡುವದಿಲ್ಲ. ಅವರು ಉತ್ತೇಜನದ ಮೂಲಕ ತಮ್ಮ ಮಕ್ಕಳು ಇಷ್ಟಪಟ್ಟು ವಿಧೇಯರಾಗುವಂತೆ ಮಾಡುತ್ತಾರೆ (1 ಕೊರಿಂಥ. 4:14,15 ನೋಡಿರಿ). ಈ ವಿಷಯದಲ್ಲಿ ನಮ್ಮ ಬಳಗದೊಂದಿಗೆ ನಮ್ಮ ನಡವಳಿಕೆಯು ನಾವು ಶಿಕ್ಷಕರೋ ಅಥವಾ ತಂದೆಯೋ ಎನ್ನುವದನ್ನು ಬಯಲುಗೊಳಿಸುತ್ತದೆ. ನಮ್ಮ ಸಭೆಗಳಲ್ಲಿ ಬೇಕಾಗಿರುವದು ಶಿಕ್ಷಕರು ಅಲ್ಲ. ನಮಗೆ ಅನೇಕ ತಂದೆಗಳ ಕೊರತೆಯಿದೆ.

ಪವಿತ್ರಾತ್ಮನ ಮೂಲಕ ಉಂಟಾಗುವ ದೃಢನಂಬಿಕೆ ಮತ್ತು ಹಳೆಯ ಒಡಂಬಡಿಕೆಯ ನಿಯಮಗಳಿಂದ ಉಂಟಾಗುವ ಖಂಡನೆಯ ನಡುವಿನ ವ್ಯತ್ಯಾಸವನ್ನು ನಾವು ಗ್ರಹಿಸುವದು ಅವಶ್ಯ. ಅಪರಾಧ ಭಾವನೆಯನ್ನು ಮೂಡಿಸುವ ಬೋಧನೆಯು ಜನರನ್ನು ನಿರುತ್ಸಾಹ ಮತ್ತು ಸ್ವ-ಖಂಡನೆಗೆ ನಡೆಸುತ್ತದೆ. ಇದರಿಂದ ಜನರು ಆತ್ಮನ ಸ್ವಾತಂತ್ರ್ಯದ ಜೀವಿತಕ್ಕೆ ಬರುವುದಿಲ್ಲ ಮತ್ತು ಜಯಶಾಲಿಗಳಾಗುವದಿಲ್ಲ.

ಅಪರಾಧಿ ಮನೋಭಾವವನ್ನು ಮೂಡಿಸುವ ವಿಧಾನವನ್ನು ಅಳವಡಿಸಿಕೊಂಡಿರುವ ಬೋಧಕನು, ಕರ್ತನನ್ನು ನಿಜವಾಗಿ ಅರಿತುಕೊಂಡಿಲ್ಲ ಅಥವಾ ಪವಿತ್ರಾತ್ಮನ ಕಾರ್ಯ ವಿಧಾನವನ್ನು ತಿಳಕೊಂಡಿಲ್ಲ ಎಂಬುದನ್ನು ತೋರಿಸುತ್ತದೆ. ಇದು ಆತನಿಗೆ ಸಾಕಷ್ಟು ಸತ್ಯವೇದದ ಜ್ಞಾನವಿಲ್ಲವೆಂದು ಸಾಬೀತು ಪಡಿಸುತ್ತದೆ. ಆತನಲ್ಲಿ ಯಥಾರ್ಥತೆಯೂ ಸಹ ಇಲ್ಲವಾಗಿದೆ - ಏಕೆಂದರೆ ಆತನು ತನ್ನ ಬೋಧನೆಯ ಗುಣಮಟ್ಟದಲ್ಲಿ ಜೀವಿಸುವ ಸಾಧ್ಯತೆಯೇ ಇರುವದಿಲ್ಲ. ಯೇಸುವು ಮೊದಲು ಒಂದು ಕೆಲಸವನ್ನು ಕೈಗೊಂಡು, ನಂತರ ಅದರ ಬಗ್ಗೆ ಉಪದೇಶಿಸಿದನು (ಅಪೋಸ್ತಲರ ಕೃತ್ಯಗಳು 1:1). ಆದರೆ ಈ ಬೋಧಕರು, ಹಿಂದೆ ಫರಿಸಾಯರು ಮಾಡಿದಂತೆ, "ಅವರು ಹೇಳುತ್ತಾರೆಯೇ ಹೊರತು, ತಾವು ಹೇಳಿದಂತೆ ನಡೆಯುವುದಿಲ್ಲ. ಅವರು ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸುತ್ತಾರೆ; ತಾವಾದರೋ ಬೆರಳಿನಿಂದಲಾದರೂ ಅವುಗಳನ್ನು ಮುಟ್ಟಲೊಲ್ಲರು" (ಮತ್ತಾಯ 23:3,4).

ಅಪರಾಧಿ ಮನೋಭಾವವನ್ನು ಮೂಡಿಸುವ ಬೋಧಕನಲ್ಲಿ ಆತ್ಮಿಕ ಬಡತನ ಇರುವುದಿಲ್ಲ, ಹಾಗಾಗಿ ಆತನೊಂದಿಗೆ ಆತ್ಮೀಯ ಅನ್ಯೋನ್ಯತೆಯನ್ನು ಹೊಂದುವದು ಅಸಾಧ್ಯವಾದ ಮಾತು. ’ಆತ್ಮದಲ್ಲಿ ಬಡವರನ್ನು’ ಇನ್ನೊಂದು ಭಾಷಾಂತರವು ಈ ರೀತಿಯಾಗಿ ವಿಶ್ಲೇಷಿಸುತ್ತದೆ - "ಯಾರು ತನ್ನನ್ನು ಅಲ್ಪನೆಂದು ಎಣಿಸಿಕೊಳ್ಳುತ್ತಾನೋ, ಅವನೇ ಆತ್ಮದಲ್ಲಿ ಬಡವನು" (ಮತ್ತಾಯ 5:3; Amplified Bible). ತಮ್ಮನ್ನು ಅಲ್ಪರೆಂದು ಎಣಿಸುವ ಕೆಲವೇ ಬೋಧಕರನ್ನು ನಾನು ನನ್ನ ಜೀವಿತದಲ್ಲಿ ಭೇಟಿಯಾಗಿದ್ದೇನೆ. ಬಹಳಷ್ಟು ಬೋಧಕರ ಬೋಧನೆಯ ಭಂಗಿಯು ಘೋಷಿಸುವದು ಏನೆಂದರೆ, ಈ ಸಭೆಯ ಸಾಮಾನ್ಯ ವಿಶ್ವಾಸಿಗಳ ನಡುವೆ "ನಾನೊಬ್ಬ ಬಹಳ ಗಣ್ಯ ವ್ಯಕ್ತಿಯಾಗಿದ್ದೇನೆ," ಎಂಬುದಾಗಿ!! ಇಂಥವರ ಬೋಧನೆಯನ್ನು ಕೇಳುವಾಗ ನಾನು ತಪ್ಪದೆ ಆಂತರಿಕವಾಗಿ ಕಿವಿಗಳನ್ನು ಮುಚ್ಚಿಕೊಳ್ಳುತ್ತೇನೆ, ಏಕೆಂದರೆ ನನಗೆ ಇಂತಹ ಗರ್ವಿಷ್ಠ ಜನರಿಂದ ನಿತ್ಯತ್ವದ ಯಾವುದೇ ಅಮೂಲ್ಯ ಸಂಗತಿಗಳು ಸಿಗಲಾರವು.

ಇಂತಹ ಬೋಧಕರಿಗೆ ದೂರುಗಾರನ ಆತ್ಮದ ಸೋಂಕು ತಗುಲಿದೆ, ಹಾಗಾಗಿ ಅವರ "ತಪ್ಪಿತಸ್ಥ ಭಾವನೆ ಮೂಡಿಸುವ" ಬೋಧನೆಗಳು, ಮುಖ್ಯವಾಗಿ ಇತರರು ದೇವರ ಗುಣಮಟ್ಟಕ್ಕೆ ಬಂದಿಲ್ಲವೆಂಬ ದೂಷಣೆಯಿಂದ ತುಂಬಿರುತ್ತವೆ. ಅವರು ತಮ್ಮನ್ನು "ಪ್ರವಾದಿಗಳೆಂದು" ಕಲ್ಪಿಸಿಕೊಳ್ಳುತ್ತಾರೆ, ಆದರೆ ಅವರಲ್ಲಿ ನಿಜವಾದ ಪ್ರವಾದಿಗಳ ಅನುಕಂಪ ಇರುವದಿಲ್ಲ. ಇಂತಹ ದುರಹಂಕಾರದ ಬೋಧಕರು ಪರಲೋಕ ರಾಜ್ಯವನ್ನು ಸೇರುವದಿಲ್ಲ (ಮತ್ತಾಯ 5:3). ಹಾಗಾಗಿ ಅವರು ಇತರರನ್ನು ದೇವರ ಆತ್ಮನ ಸ್ವಾತಂತ್ರ್ಯಕ್ಕೆ ನಡೆಸಲು ಆಗುವದಿಲ್ಲ (ಪರಲೋಕ ರಾಜ್ಯದ ಗುಣಲಕ್ಷಣ ಅದಾಗಿದೆ). ಇಂತಹ ಬೋಧಕರು, ಸಹೋದರರ ಒಂದು ಸಭೆಯನ್ನು ಕಟ್ಟುವದು ಅಥವಾ ಯಾವುದೇ ಒಂದು ಸ್ಥಳದಲ್ಲಿ ಕ್ರಿಸ್ತನ ದೇಹವನ್ನು ಕಟ್ಟುವದು ಅಸಾಧ್ಯವಾದ ಮಾತು. ಅವರು ಕೇವಲ ತಮ್ಮ ಸ್ವಂತ "ಅಭಿಮಾನಿಗಳ" ಗುಂಪುಗಳನ್ನು ಕಟ್ಟಲು ಸಾಧ್ಯವಾಗಬಹುದು. ದೇವರು ನಮ್ಮನ್ನು ಇಂತಹ ಅನಾಹುತಗಳಿಂದ ರಕ್ಷಿಸಲಿ.

ನಾನು ಕಂಡಿರುವಂತೆ, ಸಾಮಾನ್ಯವಾಗಿ ಯುವ ಬೋಧಕರು "ತಪ್ಪಿತಸ್ಥ ಭಾವನೆಯನ್ನು ಮೂಡಿಸುವ" ಬೋಧನೆಗೆ ಕೈ ಹಾಕುತ್ತಾರೆ. ಆದರೆ ನಾನು ನೋಡಿರುವ ಇನ್ನೊಂದು ವಿಷಯ, ಇಂತಹ ಯುವ ಬೋಧಕರು ತಮ್ಮನ್ನೇ ತೀರ್ಪು ಮಾಡಿಕೊಂಡು, ಕೃಪೆಯಲ್ಲಿ ಬೆಳೆಯುವ ಪ್ರಯತ್ನ ಮಾಡದೇ ಹೋದರೆ, ಮುದಿ ವಯಸ್ಸಿನಲ್ಲೂ, ಅಥವಾ ತಾವು ಸಭೆಯ ಹಿರಿಯರಾದಾಗಲೂ ಸಹ ಇವರು ಹಾಗೇಯೇ ಬದಲಾಗದೇ ಉಳಿಯುತ್ತಾರೆ.

ಆದ್ದರಿಂದ ನಾವು ನಮ್ಮ ಬೋಧನೆಯಲ್ಲಿ "ತಪ್ಪಿತಸ್ಥ ಭಾವನೆಯನ್ನು ಮೂಡಿಸುವ" ವಿಧಾನವನ್ನು ಬಳಸುವದನ್ನೂ, ಇತರರು ದೇವರಿಗೆ ವಿಧೇಯರಾಗದೆ ಇರುವದಕ್ಕಾಗಿ ಅವರಲ್ಲಿ "ತಪ್ಪಿತಸ್ಥ ಭಾವನೆಯನ್ನು ಮೂಡಿಸುವ" ಪ್ರಯತ್ನವನ್ನೂ ಎಂದಿಗೂ ಮಾಡುವದಿಲ್ಲವೆಂದು ಖಚಿತಪಡಿಸಿಕೊಳ್ಳಬೇಕು. ನಾವು ಯಾವ ಬೋಧಕನಿಗೂ ತನ್ನ ಬೋಧನೆಯ ಮೂಲಕ ನಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನು ಮೂಡಿಸುವ ಅವಕಾಶವನ್ನು ಎಂದಿಗೂ ಕೊಡುವದು ಬೇಡ. ನಾವು ಇತರರಿಗೆ ವಿಪರೀತ ಕಾನೂನು(ನಿಯಮ) ಪಾಲನೆಯ ಬೋಧನೆ ಮಾಡಿದ್ದು ಸರಿಯಲ್ಲವೆಂದು ಒಪ್ಪಿಕೊಂಡು, ಅದರ ಬದಲಾಗಿ ತಂದೆಯ ಮನೋಭಾವವನ್ನು ಕಲಿಯುವ ಪ್ರಯತ್ನ ಮಾಡಬೇಕು. ನಮ್ಮ ಕರ್ತನ ಮಹಿಮೆಯು ಅವನಲ್ಲಿ ತುಂಬಿ ತುಳುಕುತ್ತಿದ್ದ ಕೃಪೆ ಮತ್ತು ಸತ್ಯದ ಮೂಲಕ, ಅವನ ಕಾರ್ಯಗಳಲ್ಲಿ ಮತ್ತು ಮಾತಿನಲ್ಲಿ, ಅವನ ಜೀವನವಿಡೀ ಕಾಣಿಸಿತು (ಯೋಹಾನ 1:14). ನಮ್ಮ ಮೂಲಕವೂ ಅದೇ ಮಹಿಮೆಯು ಕಂಡುಬರಲಿ. ಆಮೆನ್ ಮತ್ತು ಆಮೆನ್.