ಸಾದಾರಣವಾಗಿ ಹೇಳುವುದಾದರೆ ಕ್ರೈಸ್ತರನ್ನು ಈ ಕೆಳಗೆ ಕಾಣುವಂತೆ ಎರಡೆರಡು ಪಂಗಡಗಳಾಗಿ ವಿಂಗಡಿಸಬಹುದು:
1. ಅವರ ಹುಟ್ಟನ್ನು ಆದರಿಸಿ "ರೋಮನ್ ಕಥೋಲಿಕರು" ಮತ್ತು "ಪ್ರೊಟೆಸ್ಟಂಟರು" ಎಂದು.
2. ಸಭೆಯ ಮಾದರಿಯನ್ನು ಆದರಿಸಿ "ಎಪಿಸ್ಕೊಪಲ್" (ಸಭೆಯ ಪದ್ದತಿಗಳನ್ನು ಅನುಸರಿಸುವವರು) ಮತ್ತು "ಸ್ವತಂತ್ರ ಸಭೆ" (ಸಭೆಯ ಪದ್ದತಿಗಳನ್ನು ಅನುಸರಿಸದವರು) ಎಂದು.
3. ಅನುಭವವನ್ನು ಆದರಿಸಿ "ಹೊಸ ಹುಟ್ಟು ಪಡೆದ ಕ್ರೈಸ್ತರು" ಹಾಗೂ "ಹೆಸರಿಗೆ ಮಾತ್ರ ಕ್ರೈಸ್ತರು" ಎಂದು.
4. ಭೋದನೆಯನ್ನು ಆದರಿಸಿ "ಸುವಾರ್ತಿಕ" ಹಾಗು "ಸ್ವತಂತ್ರ" ಕ್ರೈಸ್ತರೆಂದು.
5. ಅನ್ಯಬಾಷೆ ಮಾತನಾಡುವ ಆದಾರದ ಮೇಲೆ "ಕ್ಯಾರಿಸ್ಮಾಟಿಕ್" ಮತ್ತು "ಕ್ಯಾರಿಸ್ಮಾಟಿಕ್ ಅಲ್ಲದವರೆಂದೂ"
6. ಕೆಲಸದ ಆದಾರದ ಮೇಲೆ "ಪೂರ್ಣಕಾಲಿಕ ಕ್ರೈಸ್ತ ಸೇವೆ ಮಾಡುವವರೂ" ಹಾಗೂ "ಲೌಕಿಕ ಕೆಲಸ ಮಾಡುವವರು" ಎಂದು.
ಹೀಗೆ ಇನ್ನೂ ಇಂಥಹ ಹಲವಾರು ಪಂಗಡಗಳಿರಬಹುದು. ಆದರೆ ಈ ಯಾವ ಪಂಗಡಗಳೂ ನಮ್ಮ ಕರ್ತನು ಪರಿಹರಿಸಲು ಬಂದ ಮುಖ್ಯ ಸಮಸ್ಯೆಯ ಮೂಲವನ್ನು ಬಗೆಹರಿಸುವದಿಲ್ಲ.
"ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತನೆಂದು"(1 ಕೊರಿಂಥ 15:3) ಬಹಳ ಮಂದಿ ತಿಳಿದಿದ್ದಾರೆ. ಆದರೆ ಕ್ರಿಸ್ತನು ಸತ್ತದ್ದು "ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ಸತ್ತು ಎದ್ದು ಬಂದಾತಿನಿಗಾಗಿ ಜೀವಿಸುವವರಾಗಿರಬೇಕೆಂದು (2 ಕೊರಿಂಥ 5:15) ಸತ್ಯವೇದವು ಹೇಳುವುದು ಬಹಳ ಮಂದಿಗೆ ತಿಳಿದಿಲ್ಲ.
ಹೀಗೆ ದೇವರ ವಾಕ್ಯಕ್ಕೆ ಅನುಗುಣವಾಗಿ ಕ್ರೈಸ್ತರನ್ನು ವಿಂಗಡಿಸಿದರೆ ಹೀಗಿರಬಹುದು:
“ತಮಗಾಗಿ ಜೀವಿಸುವವರು” ಮತ್ತು “ಕ್ರಿಸ್ತನಿಗಾಗಿ ಜೀವಿಸುವವರು” ಅಥವಾ
“ತಮ್ಮ ಸ್ವಾರ್ಥವನ್ನು ಬಯಸುವವರು” ಮತ್ತು “ಕ್ರಿಸ್ತನ ಚಿತ್ತವನ್ನು ಬಯಸುವವರು” ಅಥವಾ
“ಲೌಕಿಕ ವಸ್ತುಗಳನ್ನು ಮುಖ್ಯವಾಗಿ ಬಯಸುವವರು” ಮತ್ತು “ದೇವರ ರಾಜ್ಯವನ್ನು ಮುಖ್ಯವಾಗಿ ಬಯಸುವವರು” ಅಥವಾ
“ಹಣವನ್ನು ಪ್ರೀತಿಸುವವರು” ಮತ್ತು "ದೇವರನ್ನು ಪ್ರೀತಿಸುವವರು” (ಎರಡನ್ನೂ ಪ್ರೀತಿಸುವುದು ಅಸಾಧ್ಯವೆಂದು ಯೇಸು ಹೇಳಿದ್ದಾರೆ ಲೂಕ 16: 13).
ಆದರೆ ಈ ರೀತಿಯ ವಿಂಗಡನೆಯನ್ನು ಬಳಸಿರುವುದನ್ನು ನಾನೆಂದೂ ಕೇಳಿಲ್ಲ. ಈ ವಿಂಗಡನೆಯು ಒಬ್ಬ ಕ್ರೈಸ್ತನ ಒಳ ಜೀವಿತವನ್ನೂ ಹಾಗೂ ದೇವರೊಂದಿಗಿನ ಆತನ ವೈಯಕ್ತಿಕ ಸಂಭಂದವನ್ನೂ ವ್ಯವಹರಿಸುತ್ತದೆ. ಆದರೆ ಆರಂಭದಲ್ಲಿ ತಿಳಿಸಿದ ಮಾದರಿಗಳು ಒಬ್ಬನ ಹೊರ ಜೀವನ ಶೈಲಿಯನ್ನು ವ್ಯವಹರಿಸುತ್ತದೆ. ಆದರೆ ಪರಲೋಕ ಮಾತ್ರ ಎರಡನೆಯದಾಗಿ ತಿಳಿಸಿದ ರೀತಿಯಲ್ಲಿಯೇ ಕ್ರೈಸ್ತರನ್ನು ವಿಭಾಗಿಸುತ್ತದೆ. ಹಾಗಾದರೆ ಈ ರೀತಿಯಲ್ಲಿ ವಿಭಾಗ ಮಾಡುವುದೇ ಗಣನೀಯವಾದದ್ದು! ಹೀಗೆ ನಮ್ಮನ್ನು ನಾವು ಮಾತ್ರ ವಿಭಾಗಿಸಿಕೊಳ್ಳಬಹುದೇ ಹೊರತು ಬೇರೆ ಯಾರೂ ವಿಭಾಗಿಸಲಾಗುವುದಿಲ್ಲ. ಏಕೆಂದರೆ ನಮಗೆ ಮಾತ್ರ ನಮ್ಮ ಆಂತರ್ಯದ ಪೂರ್ಣ ಆಶೆಗಳು, ಉದ್ದೇಶಗಳು ತಿಳಿದಿರುತ್ತವೆ. ನಮ್ಮ ಹೆಂಡತಿಯರು ಕೂಡ ನಾವು ಯಾವುದಕ್ಕೆ ಜೀವಿಸುತ್ತಿದ್ದೇವೆಂದು ತಿಳಿಯಲು ಸಾಧ್ಯವಿರುವುದಿಲ್ಲ.
ನಮ್ಮ ಕರ್ತನು ಜನರಿಗೆ ಒಂದು ಭೋಧನೆಯನ್ನಾಗಲಿ, ಸಭೆಯ ಮಾದರಿಯನ್ನಾಗಲಿ, ಅನ್ಯಭಾಷೆಯಲ್ಲಿ ಮಾತನಾಡುವ ವರವನ್ನಾಗಲಿ ಅಥವಾ ಒಂದು ಅನುಭವವನ್ನಾಗಲೀ ಕೊಡುವುದಕ್ಕಾಗಿಮುಖ್ಯವಾಗಿ ಬರಲಿಲ್ಲ!
ನಮ್ಮನ್ನು “ಪಾಪದಿಂದ ರಕ್ಷಿಸಲು” ಆತನು ಬಂದನು; ಮರದ ಬುಡಕ್ಕೆ ಕೊಡಲಿ ಹಾಕಲು ಆತನು ಬಂದನು. ಹಾಗೂ ಪಾಪದ ಮೂಲವೆಂದರೆ ನಾವು ನಮ್ಮಲ್ಲೇ ಕೇಂದ್ರೀಕೃತರಾಗಿರುವುದು. ನಮ್ಮ ಸ್ವಂತ ಇಚ್ಛೆಯನ್ನು ಮಾಡುತ್ತಾ ಸ್ವಾರ್ಥವನ್ನು ಹುಡುಕುವುದು. ಕರ್ತನು ನಮ್ಮ ಜೀವಿತದಲ್ಲಿನ ಈ ಬೇರನ್ನು ತೆಗೆದು ಹಾಕಲು ನಾವು ಅನುಮತಿಸದಿದ್ದರೆ, ಹೆಸರಿಗೆ ಮಾತ್ರ ಕ್ರೈಸ್ತರಾಗಿರುತ್ತೇವೆ. ಹಾಗೂ ಸೈತಾನನು, ನಾವು ನಮ್ಮ ಭೋದನೆ, ಅನುಭವ, ಅಥವಾ ಸಭೆಯ ಮಾದರಿಯನ್ನು ನೋಡಿಕೊಂಡು ಬೇರೆಯವರಿಗಿಂತ ಒಳ್ಳೆಯ ಮಟ್ಟದಲ್ಲಿದ್ದೇವೆಂದು ಭಾವಿಸಿಕೊಳ್ಳುವಂತೆ ಮಾಡಿ ನಮ್ಮನ್ನು ಮೋಸಗೊಳಿಸುತ್ತಾನೆ!
ನಾವು "ನಮಗಾಗಿ ಜೀವಿಸುತ್ತಿರುವವರೆಗೆ" (ಇದೊಂದು ರೀತಿಯಲ್ಲಿ "ಪಾಪದಲ್ಲಿ ಜೀವಿಸುತ್ತಿರುವುದೆಂದು" ಹೇಳಬಹುದು) ನಮ್ಮ ಭೋದನೆ ಎಷ್ಟೇ ಸರಿಯಿರಲಿ, ಅನುಭವವಿರಲಿ, ಮತ್ತು ಒಳ್ಳೆಯ ಸಭಾ ಮಾದರಿಯಿರಲಿ, ಸೈತಾನನು ಯಾವ ರೀತಿಯಲ್ಲಿಯೂ ಚಿಂತಿಸುವುದಿಲ್ಲ. ಇಂದಿನ ಕ್ರೈಸ್ತ ರಾಜ್ಯದಲ್ಲಿ ಬಹಳಷ್ಟು ಕ್ರೈಸ್ತರು ತಮ್ಮ ಸ್ವಾರ್ಥಕ್ಕಾಗಿ ಜೀವಿಸಿಕೊಂಡು ಕೇವಲ ತಮ್ಮ ಸರಿಯಾದ ಭೋಧನೆಗಳ ಅಥವಾ ಸಭಾಮಾದರಿ ಅಥವಾ ಅನುಭವಗಳ ಆಧಾರದಿಂದ ಬೇರೆ ಕ್ರೈಸ್ತರಿಗಿಂತ ಉತ್ತಮರೆಂದು ಯೋಚಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಇದು ನಮ್ಮ ಮಧ್ಯೆ ಸೈತಾನನು ಎಂಥಹ ಮಹಾ ಕಾರ್ಯವನ್ನು ಮಾಡುವುದರಲ್ಲಿ ಜಯಶಾಲಿಯಾಗಿರುವುದನ್ನು ತೋರಿಸುತ್ತದೆ.
ಯೋಹನ 6:28 ರಲ್ಲಿ ನಮ್ಮ ಕರ್ತನು ಹೇಳಿದನು: ತಾನು ಪರಲೋಕದಿಂದ ಈ ಭೂಮಿಗೆ ಬಂದಿರುವುದು:
1. ತನ್ನ ಮಾನವೀಯ ಇಚ್ಛೆಯನ್ನು ನಿರಾಕರಿಸುವುದಕ್ಕೋಸ್ಕರ. (ಆತನು ಮಾನವ ರೂಪ ಧರಿಸಿ ಭೂಮಿಗೆ ಬಂದಾಗ)
2. ಮನುಷ್ಯನಾಗಿ ತನ್ನ ತಂದೆಯ ಚಿತ್ತ(ಇಚ್ಛೆ)ವನ್ನು ಮಾಡುವುದಕ್ಕೋಸ್ಕರ. ಹೀಗೆ ಆತನು ನಮಗೆ ಮಾದರಿಯಾದನು.
ಯೇಸುವು ಈ ಭೂಲೋಕದ ಜೀವಿತದಲ್ಲಿ ತಾನು ಜೀವಿಸಿದ 33 1/2 ವರ್ಷಗಳಲ್ಲೂ ತನ್ನ ಸ್ವಂತ ಇಚ್ಛೆಯನ್ನು ನಿರಾಕರಿಸಿ ತನ್ನ ತಂದೆಯ ಇಚ್ಛೆಯನ್ನು ಮಾಡಿದನು. ಹಾಗೂ ತನ್ನ ಶಿಷ್ಯರಾಗಬೇಕೆಂದು ಬಯಸುವ ಪ್ರತಿಯೊಬ್ಬನೂ ಇದನ್ನೇ ಮಾಡಬೇಕೆಂದು ಹೇಳಿದನು. “ನಮ್ಮ ಸ್ವಂತ ಇಚ್ಛೆಯನ್ನು ಮಾಡುವಂಥ” ನಮ್ಮ ಜೀವನದ ಪಾಪದ ಮೂಲವನ್ನು ಒಡೆದುಹಾಕಿ ಅದರಿಂದ ನಮ್ಮನ್ನು ರಕ್ಷಿಸಲು ಆತನು ಬಂದನು.
ವಿಜ್ಞಾನದ ಕ್ಷೇತ್ರದಲ್ಲಿ ಮನುಷ್ಯನು ಈ ವಿಶ್ವದ ಕೇಂದ್ರವು ಭೂಮಿಯೆಂದು ಭಾವಿಸಿ ಸಾವಿರಾರು ವರ್ಷಗಳಿಂದ ತಪ್ಪು ಮಾಡಿದ್ದನು. ಮಾನವನ ಕಣ್ಣಿಗೆ ಅದು ಹಾಗೆಯೇ ಕಾಣಿಸುತಿತ್ತು. ಏಕೆಂದರೆ ಪ್ರತಿ 24 ತಾಸುಗಳಿಗೆ ಆಕಾಶದಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳು ಚಲಿಸಿ ಮರೆಯಾಗುತ್ತಿದ್ದು, ಭೂಮಿಯ ಸುತ್ತಾ ತಿರುಗುತ್ತಿರುವಂತೆ ಕಾಣಿಸುತ್ತಿತ್ತು. ಆದರೆ ಕೇವಲ 450 ವರ್ಷಗಳ ಹಿಂದೆ ಕೊಪರ್ನಿಕಸ್ ಎಂಬವನಿಗೆ ಈ ನಂಬಿಕೆಯು ಪೂರ್ಣವಾಗಿ ತಪ್ಪಾಗಿ ಕಾಣಿಸಿತು. ಭೂಮಿಯು ವಿಶ್ವಕ್ಕೆ ಮಾತ್ರವಲ್ಲದೆ ಸೌರವ್ಯೂಹಕ್ಕೂ ಕೂಡ ಕೇಂದ್ರ ಅಲ್ಲವೆಂದು ತಿಳಿಸಲು ಅವನಿಗೆ ಬಹಳ ಧೈರ್ಯ ಬೇಕಾಗಿತ್ತು. ಅವನು ತೋರಿಸಿದ ಭೂಮಿಯು ಸೂರ್ಯನನ್ನು ಕೇಂದ್ರವಾಗಿಟ್ಟುಕೊಂಡು ಸೃಷ್ಟಿಸಲ್ಪಟ್ಟಿತ್ತು. ಎಲ್ಲಿಯವರೆಗೆ ಮನುಷ್ಯನು ತಪ್ಪು ಕೇಂದ್ರವನ್ನು ಹೊಂದಿದ್ದನೋ, ಅಲ್ಲಿಯವರೆಗೂ ಆತನ ಲೆಕ್ಕಾಚಾರಗಳೆಲ್ಲವೂ ತಪ್ಪಾಗಿದ್ದವು. ಏಕೆಂದರೆ ಆತನ ಕೇಂದ್ರ ತಪ್ಪಾಗಿತ್ತು. ಯಾವಾಗ ಭೂಮಿಯ ಸರಿಯಾದ ಕೇಂದ್ರವನ್ನು ಕಂಡುಹಿಡಿದನೋ ಆಗ ಆತನ ಲೆಕ್ಕಾಚಾರಗಳೆಲ್ಲಾ ಸರಿಯಾದವು.
‘ದೇವರಲ್ಲಿ ಕೇಂದ್ರೀಕರಿಸದೆ’ ಎಲ್ಲಿಯವರೆಗೆ ನಾವು ‘ಸ್ವಾರ್ಥವನ್ನು ಕೇಂದ್ರಿಕರಿಸುತ್ತೇವೋ’ ಅಲ್ಲಿಯವರೆಗೆ ನಮಗೂ ಹೀಗೆಯೇ ಆಗುತ್ತದೆ. ದೇವರ ವಾಕ್ಯ ಮತ್ತು ದೇವರ ಪರಿಪೂರ್ಣ ಇಚ್ಛೆಯ ಬಗ್ಗೆ ನಮ್ಮ ತಿಳುವಳಿಕೆಯು ತಪ್ಪಾಗಿರುತ್ತದೆ. ಆದರೆ ಭೂಮಿಯ ಬಗ್ಗೆ 5000 ವರ್ಷಗಳ ಕಾಲ ಎಲ್ಲಾ ಜನರು ತಾವು ಸರಿ ಎಂದು ಅಂದುಕೊಂಡಂತೆ, ನಾವೂ ಕೂಡ ನಾವೇ ಸರಿಯೆಂದು ಭಾವಿಸಬಹುದು! ಆದರೆ ನಿಜವಾಗಿ 100% ತಪ್ಪಾಗಿರುತ್ತೇವೆ.
ಇಂದು ಬಹಳಷ್ಟು ‘ಒಳ್ಳೆ ಕ್ರೈಸ್ತರಲ್ಲಿ’ ಇದನ್ನೇ ನೋಡುತ್ತೇವೆ. ಇವರಲ್ಲಿ ಅದೇ ಸತ್ಯವೇದ ವಾಕ್ಯಗಳ ವಿವಿಧ ರೀತಿಯ ಅರ್ಥ ವಿವರಗಳಿದ್ದು ಹಾಗೂ ಪ್ರತಿಯೊಬ್ಬರೂ ತಮ್ಮ ವಿವರಣೆಯನ್ನು ಬಿಟ್ಟು ಬೇರೆ ಎಲ್ಲರ ವಿವರಣೆಯೂ ತಪ್ಪೆಂದು ನಂಬಿರುತ್ತಾರೆ. ಹಾಗೂ ಬೇರೆಯವರಲ್ಲರೂ "ಮೋಸಕ್ಕೊಳಗಾಗಿದ್ದಾರೆ" ಎಂದು ಹೇಳುತ್ತಾರೆ. ಏಕೆ ಹೀಗೆ ? ಏಕೆಂದರೆ ಅವರ ಕೇಂದ್ರವು ತಪ್ಪಾಗಿದೆ.
ಮನುಷ್ಯನು ತನ್ನಲ್ಲಿ ಕೇಂದ್ರೀಕೃತನಾಗಿರದೆ ದೇವರಲ್ಲಿ ಮಾತ್ರ ಕೇಂದ್ರಿಕೃತನಾಗಿರುವುದಕ್ಕೆ ಸೃಷ್ಟಿಸಲ್ಪಟ್ಟಿದ್ದಾನೆ. ಮತ್ತು ಯಾವಾಗ ಒಬ್ಬ ಕ್ರೈಸ್ತನು ತಪ್ಪು ಕೇಂದ್ರವನ್ನು ಹೊಂದಿರುತ್ತಾನೋ ಅವನ ಸುವಾರ್ತೆ ಕೂಡ ತಪ್ಪಾಗಿರುತ್ತದೆ. ಮೂಲತ: ಇಂದು "ಎರಡು ರೀತಿಯ ಸುವಾರ್ತೆಗಳನ್ನು" ಮಾತ್ರ ಸಾರಲಾಗುತ್ತಿದೆ. ಒಂದು ಮನುಷ್ಯನನ್ನು ಕೇಂದ್ರಿಕರಿಸಿದ್ದು ಹಾಗು ಮತ್ತೂಂದು ದೇವರನ್ನು ಕೇಂದ್ರಿಕರಿಸಿದ್ದು.
ಮನುಷ್ಯನನ್ನು ಕೇಂದ್ರಿಕರಿಸಿದ ಸುವಾರ್ತೆಯು, ದೇವರು ಒಬ್ಬನಿಗೆ ಭೂಮಿಯಲ್ಲಿ ಬಹಳ ಅನುಕೂಲಕರವಾಗಿ ಜೀವಿಸಲು ಎಲ್ಲಾ ತರಹದ ವಾಗ್ದಾನಗಳನ್ನು ಕೊಟ್ಟು ಜೀವನದ ಕೊನೆಯಲ್ಲಿ ಪರಲೋಕದಲ್ಲಿಯೂ ಸಹ ಒಂದು ಸ್ಥಾನವನ್ನು ಕಾದಿರಿಸುತ್ತಾನೆ, ಹಾಗೂ ಇಲ್ಲಿ ಒಬ್ಬನಿಗೆ ಯೇಸುವು ಅವನೆಲ್ಲಾ ಪಾಪಗಳನ್ನು ಕ್ಷಮಿಸಿ, ಆತನ ಕಾಯಿಲೆಗಳನ್ನು ಗುಣಪಡಿಸಿ ಅವನಿಗೆ ಐಶ್ವರ್ಯ ಅನುಕೂಲಗಳನ್ನು ಆಶೀರ್ವದಿಸಿ ಅವನ ಲೌಕಿಕ ತೊಂದರೆಗಳನ್ನೆಲ್ಲಾ ಪ್ರರಿಹರಿಸುವುದಾಗಿ, ಇತ್ಯಾದಿ ಹೇಳಿಕೊಡಲಾಗುತ್ತದೆ.
ಇಲ್ಲಿ ಸ್ವಾರ್ಥವೇ ಆ ಮನುಷ್ಯನ ಜೀವನದ ಕೇಂದ್ರವಾಗಿರುತ್ತದೆ, ಅವನ ಸುತ್ತಲೂ ಅವನ ಸೇವಕನಂತೆ ಅವನೆಲ್ಲಾ ಪ್ರಾರ್ಥನೆಗಳನ್ನು ಉತ್ತರಿಸುತ್ತಾ ಅವನಿಗೆ ಬೇಕಾದ್ದನ್ನೆಲ್ಲಾ ಕೊಡುತ್ತಾ ದೇವರು ಸುತ್ತುತ್ತಾ ಇರುತ್ತಾನೆ !! ಅವನೇನು ಮಾಡಬೇಕೆಂದರೆ "ನಂಬಿಕೆಯಿಂದ" ಮತ್ತು "ಯೇಸುವಿನ ಹೆಸರಿನಲ್ಲಿ" ಎಲ್ಲಾ ಲೌಕಿಕ ಆಶೀರ್ವಾದಗಳನ್ನು ಪಡಕೊಳ್ಳಬೇಕು!!
ಇದು ಸುಳ್ಳು ಸುವಾರ್ತೆ, ಏಕೆಂದರೆ ಇಲ್ಲಿ ‘ಮಾನಸಾಂತರದ’ ಉಲ್ಲೇಖನವೇ ಇಲ್ಲ. ಮಾನಸಾಂತರವನ್ನೇ ಎಲ್ಲಕ್ಕಿಂತ ಮೊದಲಿಗೆ, ಸ್ನಾನಿಕನಾದ ಯೋಹಾನ, ಯೇಸು, ಪೌಲ, ಪೇತ್ರ, ಹಾಗು ಎಲ್ಲಾ ಅಪೋಸ್ತಲರು ಬೋಧಿಸಿದ್ದು ಆದರೆ ಇಂದು ಅಭಾಗ್ಯಕರವಾಗಿ ಮಾನಸಾಂತರವನ್ನು ಕೊನೆಯಲ್ಲಿಯೂ ಬೋಧಿಸುವುದಿಲ್ಲ !!
ದೇವರನ್ನು ಕೇಂದ್ರೀಕರಿಸಿದ ಸುವಾರ್ತೆಯು ಮಾನಸಾಂತರಕ್ಕೆ ಮೊದಲು ಕರೆಕೊಡುತ್ತದೆ, ಇದು ಮಾನಸಾಂತರವನ್ನು ಹೀಗೆ ವಿವರಿಸುತ್ತದೆ:
ತನ್ನ ಸ್ವಾರ್ಥ ಜೀವನದಿಂದ, ತನ್ನ ಸ್ವಾರ್ಥ ಚಿತ್ತದಿಂದ, ತಾನೇ ಆರಿಸಿದ ಮಾರ್ಗಗಳಲ್ಲಿ ನಡೆಯುವುದರಿಂದ, ಹಣವನ್ನು ಪ್ರೀತಿಸುವುದರಿಂದ ಹಾಗು ಈ ಲೋಕ ಮತ್ತು ಲೋಕದಲ್ಲಿನ ವಸ್ತುಗಳಿಂದ (ಶರೀರದಾಶೆ, ಕಣ್ಣಿನಾಶೆ, ಜೀವನದಲ್ಲಿನ ಗರ್ವ) ತಿರುಗಿಕೊಳ್ಳುವುದು.
ಹಾಗು ದೇವರ ಕಡೆಗೆ ತಿರುಗಿಕೊಂಡು ಆತನನ್ನು ತನ್ನ ಪೂರ್ಣ ಹೃದಯದಿಂದ ಪ್ರೀತಿಸುವುದು, ಅವನನ್ನು ತನ್ನ ಜೀವನದ ಕೇಂದ್ರವಾಗಿರಿಸಿಕೊಂಡು ಆತನ ಚಿತ್ತವನ್ನೇ ಮಾಡುವುದು ಇತ್ಯಾದಿ.
ಮಾನಸಾಂತರ ಪಟ್ಟ ನಂತರ ಮಾತ್ರ ಒಬ್ಬನು ಪಾಪ ಪರಿಹಾರಕ್ಕಾಗಿ ಶಿಲುಬೆಯ ಮೇಲೆ ಸತ್ತ ಕ್ರಿಸ್ತನಲ್ಲಿ ನಂಬಿಕೆ ಇಟ್ಟರೆ ಆತನ ಪಾಪ ಪರಿಹಾರವಾಗುತ್ತದೆ. ನಂತರ ಆತನ ಜೀವನದಲ್ಲಿ ತನ್ನನ್ನು ನಿರಾಕರಿಸಿ ದೇವರಲ್ಲಿ ಕೇಂದ್ರಿಕರಿಸಿದ ಜೀವನವನ್ನು ನಡೆಸಲು ಪವಿತ್ರಾತ್ಮನ ಶಕ್ತಿಯಿಂದ ತುಂಬಿಸಲ್ಪಡುವನು. ಇದೇ ಸುವಾರ್ತೆಯನ್ನು ಯೇಸು ಮತ್ತು ಅಪೋಸ್ತಲರು ಬೋಧಿಸಿದ್ದು.
ಸುಳ್ಳು ಸುವಾರ್ತೆಯು ಬಾಗಿಲನ್ನು ಅಗಲವಾಗಿಯೂ ಹಾಗು ಮಾರ್ಗವನ್ನು ವಿಶಾಲವಾಗಿಯೂ ಮಾಡುತ್ತದೆ. (ಇಲ್ಲಿ ಸುಲಭವಾಗಿ ಹೋಗಬಹುದು ಏಕೆಂದರೆ ಒಬ್ಬನು ತನ್ನ ಸ್ವಾರ್ಥವನ್ನೂ, ತನ್ನ ಸ್ವಂತ ಆಶೆಗಳಿಗೆ ಜೀವಿಸುವುದನ್ನೂ, ಹಾಗು ತನ್ನ ಸ್ವಂತ ಲಾಭವನ್ನು ನಿರಾಕರಿಸಬೇಕಾಗಿಲ್ಲ) ಇಂಥಹ ಸುಳ್ಳು ಸುವಾರ್ತೆಯನ್ನು ಸಾರುವ ಸ್ಥಳಗಳಲ್ಲಿ ಮಿಲಿಯಗಟ್ಟಲೆ ಜನರು ಸೇರುತ್ತಾರೆ ಹಾಗು ಈ ಬಾಗಿಲಿನ ಮೂಲಕ ಪ್ರವೇಶಿಸಿ ಇದೇ ಜೀವದ ಮಾರ್ಗವೆಂದು ಭಾವಿಸಿ ನಡೆಯಲು ಪ್ರಾರಂಭಿಸುತ್ತಾರೆ, ಆದರೆ ಇದು ನಾಶಕ್ಕೆ ನಡೆಸುತ್ತದೆ. ಈ ಸುವಾರ್ತೆಯನ್ನು ಸಾರುವವರು ಅವರ ಕೂಟಗಳಲ್ಲಿ ಎಷ್ಟು ಜನರು ಕೈಯೆತ್ತಿ ಕ್ರಿಸ್ತನಿಗಾಗಿ ನಿರ್ಧಾರ ಮಾಡಿದ ಭಾರಿ ಸಂಖ್ಯೆಯನ್ನು ಹೇಳಿಕೊಂಡು ಹೆಮ್ಮೆ ಪಡುತ್ತಾರೆ!! ಆದರೆ ಇದೆಲ್ಲವೂ ಮೋಸ, ಹಾಗೆ ಕೆಲವರು ತಮ್ಮ ನಿಷ್ಕಪಟತನದಿಂದ ಯಥಾರ್ಥವಾಗಿ ಪರಿವರ್ತನೆ ಹೊಂದಿದರೂ ಕೊನೆಯಲ್ಲಿ ತಮ್ಮ ನಿಜ ಸ್ಥಿತಿಯ ಬಗ್ಗೆ ಮೋಸ ಹೊಂದಿ "ಎರಡರಷ್ಟು ನರಕ ಪಾತ್ರರಾಗುತ್ತಾರೆ (ಮತ್ತಾಯ 23:25).
ನಿಜ ಸುವಾರ್ತೆಯು ಬಾಗಿಲನ್ನು ಕಿರಿದಾಗಿಯೂ ಮತ್ತು ಮಾರ್ಗವನ್ನು ಇಕ್ಕಟ್ಟಾಗಿಯೂ ಮಾಡುತ್ತದೆ. ಕೆಲವು ‘ಅತೀ ಆತ್ಮೀಕ’ ಸುಳ್ಳು ಬೋಧಕರು, ಯೇಸು ಮಾಡಿದಕ್ಕಿಂತ ಕಿರಿದಾಗಿಯೂ, ಇಕ್ಕಟ್ಟಾಗಿಯೂ ಮಾಡುವಂತೆ ಅಲ್ಲ, ಬದಲಿಗೆ ಯೇಸು ಮಾಡಿದಷ್ಟೇ ಗಾತ್ರ ಮಾಡುವುದು, ಇಲ್ಲಿ ಕೆಲವರು ಮಾತ್ರ ಈ ಜೀವಿತದ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಈ ಸುವಾರ್ತೆಯನ್ನು ಬೋಧಿಸುವ ಸುವಾರ್ತಿಕನಿಗೆ ಇದರ ಬಗ್ಗೆ ಹೇಳಿಕೊಳ್ಳಲು ಹೆಚ್ಚು ಇರುವುದಿಲ್ಲ. ಆದರೆ ಈ ಸುವಾರ್ತೆಯು ಜನರನ್ನು ಕರ್ತನಾದ ಯೇಸುವಿನ ಕಡೆಗೂ ಹಾಗು ಪರಲೋಕದ ಕಡೆಗೂ ನಡೆಸುತ್ತದೆ.
"ನೀವು ಯಾವ ರೀತಿ ಕೇಳುತ್ತೀರೆಂದು ಎಚ್ಚರವಹಿಸಿ, ಯಾರು ತಾನು ಕೇಳಿದ್ದಕ್ಕೆ ವಿಧೇಯನಾಗುತ್ತಾನೊ ಅವನಿಗೆ ಹೆಚ್ಚು ಜ್ಞಾನವನ್ನು ಹಾಗು ಬೆಳಕನ್ನು ಕೊಡಲಾಗುವುದು. ಆದರೆ ಯಾರು ಕೇಳಿದ್ದಕ್ಕೆ ವಿದೇಯರಾಗುವುದಿಲ್ಲವೋ ಅಂಥವನಿಂದ ಅವನು ಎಷ್ಟು ಜ್ಞಾನ ಮತ್ತು ಬೆಳಕನ್ನು ಹೊಂದಿದ್ದೇನೆ ಎಂದು ಯೋಚಿಸುತ್ತಾನೋ ಅದನ್ನು ಸಹ ಕಸಿದುಕೊಳ್ಳಲಾಗುವುದು" (ಲೂಕ 8:18 ವಿಸ್ತರಿಸಿ ಬರೆದದ್ದು).
ಕೇಳಲು ಕಿವಿಯುಳ್ಳವನು ಕೇಳಲಿ !