WFTW Body: 

"ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿರುವ ಮನೆಯು ಮರೆಯಾಗಿರಲಾರದು, ಮತ್ತು ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವುದಿಲ್ಲ; ದೀಪಸ್ತಂಬದ ಮೇಲೆ ಇಡುತ್ತಾರಷ್ಟೆ. ಆಗ ಅದು ಮನೆಯಲ್ಲಿರುವ ಎಲ್ಲರಿಗೂ ಬೆಳಕು ಕೊಡುತ್ತದೆ. ಅದರಂತೆಯೇ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು", (ಮತ್ತಾ. 5:14-16). "

ಬೆಳಕು ಯೇಸುವು ಸಾಮ್ಯದ ಮೂಲಕ ಬಳಸಿಕೊಂಡ ಮತ್ತೊಂದು ಪದಚಿತ್ರಣವಾಗಿದೆ. ಯೇಸುವಿನ ಕಾಲದಲ್ಲಿ ಎಣ್ಣೆಯ ದೀಪಗಳನ್ನು ಬಳಸುತ್ತಿದ್ದರು. ದೀಪದಲ್ಲಿ ಬತ್ತಿಯು ಬಹಳ ಚಿಕ್ಕದಾಗಿರುತ್ತದೆ (ಇಂದು ಬಹಳ ಚಿಕ್ಕದಾದ ವಿದ್ಯುತ್ ಬಲ್ಬುಗಳಿವೆ). ಆದರೆ ಅದು ಇಡೀ ಕೋಣೆಯನ್ನು ಬೆಳಗಿಸುತ್ತದೆ! ದೀಪದ ಬತ್ತಿ ಅಥವಾ ಬಲ್ಬಿನ ಗಾತ್ರವು ಪ್ರಾಮುಖ್ಯವಾಗಿರಲಿಲ್ಲ, ಆದರೆ ಅದರ ಬೆಳಕಿನ ತಿಕ್ಷ್ಣತೆಯು ಪ್ರಾಮುಖ್ಯವಾಗಿತ್ತು. ಹಿಂದಿನ ಸಾಮ್ಯದಂತೆ ಇಲ್ಲಿಯೂ ಒತ್ತು ನೀಡಿರುವುದು ಗಾತ್ರಕ್ಕಲ್ಲ, ಆದರೆ ಗುಣಮಟ್ಟಕ್ಕೆ. ಕೆಲವು ಶೂನ್ಯ ಪ್ರಕಾಶದ ಬಲ್ಬುಗಳು ಇರುತ್ತವೆ, ಅವುಗಳ ಬೆಳಕಿನಲ್ಲಿ ಯಾವುದೂ ಸ್ಪಷ್ಟವಾಗಿ ಕಾಣಿಸುವುದಿಲ್ಲ, ಮತ್ತೊಂದು ಪಕ್ಕದಲ್ಲಿ ಬಹಳ ಪ್ರಭಾವಶಾಲಿ ಹ್ಯಾಲೋಜನ್ ಅಥವಾ LED' ಬಲ್ಬುಗಳು ಚಿಕ್ಕದಾಗಿದ್ದರೂ ಇಡೀ ಬೀದಿಯನ್ನು ಬೆಳಗಿಸುತ್ತವೆ. ಈ ಬಲ್ಬುಗಳಲ್ಲಿ ಹೆಚ್ಚು ಕಡಿಮೆ ವಾಟೇಜ್ (ಪ್ರಕಾಶದ ಮಟ್ಟ) ಇರುತ್ತದೆ. ಬಲ್ಬಿನ ಆಕಾರ ಅಥವಾ ಗಾತ್ರ ಮುಖ್ಯವಲ್ಲ, ಆದರೆ ಅದರ ಪ್ರಭಾವವು ಪ್ರಾಮುಖ್ಯವಾಗಿದೆ - ಅದು ಎಷ್ಟು ಬೆಳಕನ್ನು ನೀಡುತ್ತದೆ ಎಂಬುದು. ಮತ್ತು ಯೇಸುವು ಹೇಳಿದ ಮಾತು ಏನೆಂದರೆ, "ನೀನು ಲೋಕಕ್ಕೆ ಬೆಳಕಾಗಿದ್ದಿ."

ಲೋಕದಲ್ಲಿ ಅಂಧಕಾರವಿದೆ, ಮತ್ತು ನನ್ನಲ್ಲಿ ಅದರ ಸ್ವಲ್ಪ ಭಾಗವೂ ಇರಬಾರದು. ನಾನು ಒಂದು ಬಲ್ಬಿನಂತಿದ್ದರೆ ಮತ್ತು ನನ್ನಲ್ಲಿ ಲೋಕದ ಅಂಧಕಾರವಿದ್ದರೆ, ನಾನು ಒಡೆದುಹೋದ ಬಲ್ಬಿನಂತೆ ಇದ್ದೇನೆ. ಅನೇಕ ಕ್ರೈಸ್ತಸಭೆಗಳಲ್ಲಿ ಇರುವಂತ ಕ್ರೈಸ್ತರು ಒಡೆದ ಬಲ್ಬುಗಳಂತೆ ಇದ್ದಾರೆ. ಹಿಂದೆ ಒಂದು ಸಮಯದಲ್ಲಿ ಅವರು ಪ್ರಜ್ವಲಿಸಿ ಬೆಳಕನ್ನು ನೀಡುತ್ತಿದ್ದರು, ಆದರೆ ಈಗ ಅವರು ಒಡೆದ ಬಲ್ಬುಗಳಂತಿದ್ದಾರೆ: ಅವರು ಜೀವಿತದಲ್ಲಿ ಹಿಂಜಾರಿದ್ದಾರೆ ಮತ್ತು ಈಗ ಅವರ ಬೆಳಕು ಉರಿಯುತ್ತಿಲ್ಲ. ಆ ಬೆಳಕು ಯಾವುದು? ಮೇಲಿನ ವಚನದಲ್ಲಿ ಹೇಳಿರುವಂತೆ, "ಜನರ ಮುಂದೆ ನಿಮ್ಮ ಬೆಳಕು ಯಾವ ರೀತಿ ಪ್ರಕಾಶಿಸಬೇಕು ಎಂದರೆ, ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವರು." ಹಿಂದಿನ ಕಾಲದ ದೀಪವು ತನ್ನಲ್ಲಿದ್ದ ಎಣ್ಣೆಯ ಮೂಲಕ ಬತ್ತಿಯನ್ನು ನಿರಂತರವಾಗಿ ಬೆಳಗಿಸಿ ಬೆಳಕು ನೀಡುತ್ತಿತ್ತು, ಮತ್ತು ಅದರಲ್ಲಿದ್ದ ಎಣ್ಣೆಯು ಪವಿತ್ರಾತ್ಮನ ಚಿತ್ರಣವಾಗಿದೆ.

ಪವಿತ್ರಾತ್ಮನಿಂದ ಅಭಿಷೇಕಿಸಲ್ಪಟ್ಟ ಒಬ್ಬ ವ್ಯಕ್ತಿಯ ಒಂದು ಲಕ್ಷಣವೆಂದರೆ, ಆತನು ಒಳ್ಳೆಯ ಕಾರ್ಯವನ್ನು ಮಾಡುತ್ತಾನೆ. ಅಪೋಸ್ತಲರ ಕೃತ್ಯಗಳು 10:38ರ ವಚನವು ಹೇಳುವಂತೆ, ಯೇಸುವು ಪವಿತ್ರಾತ್ಮನಿಂದಲೂ ಬಲದಿಂದಲೂ ಅಭಿಷೇಕಿಸಲ್ಪಟ್ಟಿದ್ದನು, ಮತ್ತು ಆತನು ಉಪಕಾರಗಳನ್ನು ಮಾಡುತ್ತಾ ಜೀವಿಸಿದನು. ಯೇಸುವು ಇಂದು "ಅಭಿಷೇಕಿಸಲ್ಪಟ್ಟ"ಬೋಧಕರೆಂದು ಹೇಳಿಕೊಳ್ಳುವ ವ್ಯಕ್ತಿಗಳು ಮಾಡುವಂತೆ ತನ್ನ ಸೇವೆಗಾಗಿ ಜನರಿಂದ ಹಣವನ್ನು ಸಂಗ್ರಹಿಸುತ್ತಾ ಸುತ್ತಾಡಲಿಲ್ಲ. ಯೇಸುವು ಇಂಥವರಿಂದ ಸಂಪೂರ್ಣ ವ್ಯತಿರಿಕ್ತನಾಗಿದ್ದನು. ಆತನು ಒಳ್ಳೆಯ ಕಾರ್ಯವನ್ನು ಮಾಡುತ್ತಾ ಜೀವಿಸಿದನು, ಮತ್ತು ಇದಕ್ಕಾಗಿ ಅವರಿಂದ ಹಣವನ್ನು ಕೇಳಲಿಲ್ಲ. ಜನರು ಸ್ವಂತ ಇಚ್ಛೆಯಿಂದ ಆತನು ಕೇಳದಿದ್ದರೂ ಹಣವನ್ನು ಕೊಡುತ್ತಿದ್ದರು ಮತ್ತು ಆತನು ಅದನ್ನು ಸ್ವೀಕರಿಸಿದನು, ಆದರೆ ಆತನು ತನ್ನ ಅಗತ್ಯತೆಯನ್ನು ಯಾರಿಗೂ ತಿಳಿಸಲಿಲ್ಲ. ಆತನು ಯಾವುದೇ ಶುಲ್ಕವಿಲ್ಲದೆ ಒಳ್ಳೆಯ ಕಾರ್ಯವನ್ನು ಮಾಡುತ್ತಾ ಸಾಗಿದನು.

ಆತನು ಹೇಳುವ ಮಾತು, "ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಆಗ ನಿಮ್ಮ ಸತ್ಕಾರ್ಯಗಳಿಂದಾಗಿ ಅವರು ದೇವರನ್ನು ಮಹಿಮೆಪಡಿಸಲಿ, ನಿಮ್ಮನ್ನಲ್ಲ!"ನೀವು ನಿಮ್ಮ ಸ್ವಂತದ ಮಹಿಮೆಗಾಗಿ, ಮಾನ್ಯತೆಯನ್ನು ಗಳಿಸುವುದಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳುವುದಾದರೆ, ಅದು ವಾಸ್ತವವಾಗಿ ಅಂಧಕಾರವಾಗಿದೆ. ಅನೇಕ ಕ್ರೈಸ್ತರು ಕೈಗೊಳ್ಳುವ ಬಹಳಷ್ಟು ಸತ್ಕಾರ್ಯಗಳು ನಿಜವಾಗಿ ಒಳ್ಳೆಯ ಹೆಸರು ಗಳಿಸಿಕೊಳ್ಳುವುದಕ್ಕಾಗಿ, ತಮ್ಮ ಸ್ವಂತದ ಜಾಹೀರಾತಿಗಾಗಿ ಆಗಿರುತ್ತವೆ. ಅವರ ಸಂಘಸಂಸ್ಥೆಗಳಲ್ಲಿ ಮತ್ತು ಅವರ ಸೇವಾಕಾರ್ಯದಲ್ಲಿ ನಿಜವಾಗಿ ಅಂಧಕಾರವಿದೆ, ಏಕೆಂದರೆ ಅವುಗಳಿಂದ ಪರಲೋಕದ ತಂದೆಗೆ ಯಾವುದೇ ಮಹಿಮೆ ಸಲ್ಲುವುದಿಲ್ಲ. ಇದಕ್ಕೆ ಬದಲಾಗಿ, ಆ ನಿರ್ದಿಷ್ಟ ಸಂಸ್ಥೆಗೆ ಅಥವಾ ಆ ನಿರ್ದಿಷ್ಟ ವ್ಯಕ್ತಿಗೆ ಮಹಿಮೆ ಸಲ್ಲುತ್ತದೆ. ಆದಾಗ್ಯೂ ಯೇಸುವು ಹೀಗೆ ಹೇಳಿದರು, "ಜನರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆ ಪಡಿಸಲಿ."ಎಲ್ಲಿ ಒಬ್ಬನ ಒಳ್ಳೆಯ ಕಾರ್ಯದ ಮೂಲಕ ಆ ವ್ಯಕ್ತಿಗೆ ಅಲ್ಲ, ಆದರೆ ಕ್ರಿಸ್ತನಿಗೆ ಮಹಿಮೆ ಸಲ್ಲುತ್ತದೋ, ಅಲ್ಲಿ ನಿಜವಾದ ಬೆಳಕಿದೆ, ಬೆಳಕನ್ನು ತೋರ್ಪಡಿಸುವುದು ಎಂದರೆ ಇದೇ. ಯೋಹಾನನು 1:4 ರಲ್ಲಿ ಬೆಳಕನ್ನು ಈ ರೀತಿಯಾಗಿ ವಿವರಿಸಲಾಗಿದೆ: .ಯೇಸು ಕ್ರಿಸ್ತನಲ್ಲಿ ಜೀವವಿತ್ತು, ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು." ಹಾಗಿದ್ದರೆ ಬೆಳಕು ಒಂದು ಮೂಲತತ್ವವಲ್ಲ, ಅದು ಒಂದು ಬೋಧನೆ ಅಥವಾ ಒಂದು ನಿರ್ದಿಷ್ಟ ಸಂದೇಶವೂ ಅಲ್ಲ - ಅದು ಒಂದು ಜೀವಿತವಾಗಿದೆ. ಯೇಸುವಿನ ನಿಜ ಜೀವಿತವು ಪವಿತ್ರಾತ್ಮನ ಮೂಲಕ ನಮ್ಮ ಜೀವಿತದಲ್ಲಿ ಪ್ರಕಟಗೊಳ್ಳುವುದನ್ನೇ ಬೆಳಕು ಎಂದು ಹೇಳುತ್ತೇವೆ. ನಮ್ಮಿಂದ ಯೇಸುವಿನ ಜೀವಿತವು ಹರಿದು ಬರುವುದನ್ನು ಹಿಂದಿನ ಕಾಲದ ಎಣ್ಣೆಯ ದೀಪದಿಂದ ಬೆಳಕು ಹೊರಹೊಮ್ಮುವುದಕ್ಕೆ ಹೋಲಿಸಬಹುದು.

"ಬೆಳಕು ಒಂದು ಮೂಲತತ್ವವಲ್ಲ, ಅದು ಒಂದು ಬೋಧನೆ ಅಥವಾ ಒಂದು ನಿರ್ದಿಷ್ಟ ಸಂದೇಶವೂ ಅಲ್ಲ - ಅದು ಒಂದು ಜೀವಿತವಾಗಿದೆ".

ಯೇಸುವು ಯೋಹಾನನು 8:12ರಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದು ಏನೆಂದರೆ, "ನಾನು ಲೋಕಕ್ಕೆ ಬೆಳಕಾಗಿದ್ದೇನೆ; ನನ್ನನ್ನು ಅನುಸರಿಸುವವನು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ." ಈ ವಚನವು ಹೇಳುವ ಪ್ರಕಾರ, ಒಬ್ಬ ಮನುಷ್ಯನು ಕತ್ತಲಲ್ಲಿ ನಡೆಯುತ್ತಿರುವಾಗ, ಆತನು ಯೇಸುವನ್ನು ಅನುಸರಿಸುತ್ತಿಲ್ಲವೆಂದು ನಾವು ಖಚಿತವಾಗಿ ಹೇಳಬಹುದು. "ನಾನು ಸದ್ಯಕ್ಕೆ ಸ್ವಲ್ಪ ಕತ್ತಲೆಯಲ್ಲಿದ್ದೇನೆ," ಎಂದು ನೀನು ಹೇಳುವುದಾದರೆ, ಇದಕ್ಕೆ ಕಾರಣ ಬಹುಶಃ ನೀನು ಯೇಸುವನ್ನು ಹಿಂಬಾಲಿಸುತ್ತಿಲ್ಲ. ಕತ್ತಲಲ್ಲಿ ನಡೆಯುವುದನ್ನು ದೇವರ ಚಿತ್ತ ಸ್ಪಷ್ಟವಾಗಿ ತಿಳಿಯಲಿಲ್ಲ ಎಂಬುದಾಗಿ ದಯವಿಟ್ಟು ತಪ್ಪಾಗಿ ವಿವರಿಸಬೇಡ. ಯೇಸುವು ಸಹ ಗೆತ್ಸೇಮನೆ ತೋಟದಲ್ಲಿ, ದೇವರ ಚಿತ್ತದ ವಿಚಾರವಾಗಿ ಗೊಂದಲಕ್ಕೆ ಒಳಗಾಗಿದ್ದರು. ಅದಕ್ಕಾಗಿಯೇ ಆತನು ಒಂದು ಗಂಟೆಯ ಕಾಲ ಪ್ರಾರ್ಥಿಸಿ, "ಅಪ್ಪಾ, ತಂದೆಯೇ, ನಿನ್ನ ಚಿತ್ತವೇನೆಂದು ತಿಳಿಸು, ನಾನು ಈ ಪಾತ್ರೆಯಿಂದ ಕುಡಿಯಬೇಕೋ ಬೇಡವೋ?" ಎಂದು ಪ್ರಶ್ನಿಸಿದರು. ಇದು ಅಂಧಕಾರವಲ್ಲ. ಏನು ಮಾಡಬೇಕೆಂದು ತಿಳಿಯದಾಗುವ ಗೊಂದಲವು ನಂಬಿಕೆಯ ಜೀವಿತದ ಭಾಗವಾಗಿದೆ, ಆದರೆ ಕತ್ತಲೆಯು ಇದರಿಂದ ವಿಭಿನ್ನವಾಗಿದೆ, ಅದು ಯೇಸುವಿನ ಜೀವನಕ್ಕೆ ವಿರುದ್ಧವಾದದ್ದು. ಯೇಸುವು ಹೇಳಿದ ಮಾತು, "ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವ ಕೊಡುವ ಬೆಳಕನ್ನು ಹೊಂದಿದವನಾಗುವನು, ಏಕೆಂದರೆ ನಾನು ಲೋಕಕ್ಕೆ ಬೆಳಕಾಗಿದ್ದೇನೆ."

ಇದರ ನಂತರ ಯೇಸುವು ಮುಂದುವರಿಸಿ, ತಾನು ಲೋಕಕ್ಕೆ ಒಂದು ನಿರ್ದಿಷ್ಟ ಅವಧಿಗೆ ಬೆಳಕಾಗಿ ಇರುತ್ತೇನೆ, ಎಂದು ಹೇಳಿದರು. "ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ"(ಯೋಹಾ. 9:5). ಯೇಸುವು ಲೋಕದಲ್ಲಿ ಎಷ್ಟು ಕಾಲ ಇದ್ದರು? ಅವರು ಲೋಕದಲ್ಲಿ 33 1/2 ವರ್ಷಗಳ ಕಾಲ ಇದ್ದರು. ಕೇವಲ ಅಷ್ಟು ಸಮಯ ಮಾತ್ರ.

ಜನರು ಬಹಳ ಆತ್ಮಿಕರಂತೆ ನಡೆದುಕೊಂಡು ಈ ರೀತಿಯಾಗಿ ಪ್ರಶ್ನಿಸಬಹುದು: "ಈ ಕ್ಷಣದಲ್ಲಿ ಲೋಕದಲ್ಲಿ ಕ್ರಿಸ್ತನು ಇಲ್ಲವೇ?" ವಾಸ್ತವವಾಗಿ, ನೀವು ಯೋಹಾನನು 17:11ರಲ್ಲಿ ಓದಿಕೊಳ್ಳುವುದು ಏನೆಂದರೆ, "ಇನ್ನು ನಾನು ಲೋಕದಲ್ಲಿ ಇರುವುದಿಲ್ಲ."

ನಾವು ನಮ್ಮ ಅತಿಯಾದ ಆತ್ಮಿಕತೆಯನ್ನು ಬಿಟ್ಟುಬಿಡಬೇಕು. ಯೇಸುವು ಭೂಲೋಕವನ್ನು ಬಿಟ್ಟು ಪರಲೋಕಕ್ಕೆ ಹೋಗುವ ಸ್ವಲ್ಪ ಮೊದಲು, ಶಿಲುಬೆಗೆ ಹಾಕಲ್ಪಡುವ ಹಿಂದಿನ ದಿನ ಹೀಗೆ ಹೇಳಿದರು, "ನಾನು ಇನ್ನು ಮೇಲೆ ಲೋಕದಲ್ಲಿ ಇರುವುದಿಲ್ಲ. ಆದರೆ ನನ್ನ ಈ ಶಿಷ್ಯರು ಈ ಲೋಕದಲ್ಲಿರುತ್ತಾರೆ. ಅವರು ಜಗತ್ತಿನಲ್ಲಿದ್ದಾರೆ, ಆದರೆ ಇನ್ನು ಮೇಲೆ ನಾನು ಇರುವುದಿಲ್ಲ. ಪವಿತ್ರನಾದ ತಂದೆಯೇ, ನಾನು ನಿನ್ನ ಬಳಿಗೆ ಬರುತ್ತೇನೆ, ಹಾಗಾಗಿ ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ." ಹಾಗಾಗಿ ಅವರು ಯೋಹಾನನು 9ನೇ ಅಧ್ಯಾಯದಲ್ಲಿ ."ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ," ಎಂದು ಹೇಳಿದಾಗ, ತಾನು ಲೋಕದಲ್ಲಿ 33 1/2 ವರ್ಷಗಳ ಕಾಲ ಯಥಾರ್ಥವಾದ ಜೀವಿತವನ್ನು ತೋರಿಸಿಕೊಟ್ಟದ್ದರ ಬಗ್ಗೆ ಪ್ರಸ್ತಾಪಿಸಿದರು. ಅವರು ಪರಲೋಕಕ್ಕೆ ಏರಿ ಹೋದ ನಂತರ, ಇಂದು ಲೋಕದಲ್ಲಿ ಬೆಳಕು ಯಾರಾಗಿದ್ದಾರೆ?
"ನೀನು ಲೋಕಕ್ಕೆ ಬೆಳಕಾಗಿರುವೆ," ಎಂದು ಮತ್ತಾಯನು 5:14 ಹೇಳುತ್ತದೆ. ಯಾರಾದರೂ ನನ್ನನ್ನು "ಲೋಕಕ್ಕೆ ಯಾರು ಬೆಳಕಾಗಿದ್ದಾರೆ?"ಎಂದು ಪ್ರಶ್ನಿಸಿದರೆ, ಸತ್ಯವೇದಕ್ಕೆ ಅನುಸಾರವಾದ ಉತ್ತರ, "ನಾನು. ನಾನು ಲೋಕಕ್ಕೆ ಬೆಳಕಾಗಿದ್ದೇನೆ, ಮತ್ತು ಯೇಸುವನ್ನು ಅನುಸರಿಸುವ ಇತರರೂ ಸಹ ಬೆಳಕಾಗಿದ್ದಾರೆ." ನೀವು ಎಂದಾದರೂ ಈ ವಿಷಯದ ಬಗ್ಗೆ ಈ ರೀತಿಯಾಗಿ ಯೋಚಿಸಿದ್ದೀರಾ? "ಲೋಕಕ್ಕೆ ಬೆಳಕು ಯಾರು?" ಎಂಬ ಸವಾಲಿಗೆ, "ನಾನು ಮತ್ತು ಯೇಸುವನ್ನು ಅನುಸರಿಸುವ ಇತರರು," ಎಂಬ ಜವಾಬು ನಿಮ್ಮ ಮನಸ್ಸಿಗೆ ಎಂದಾದರೂ ಹೊಳೆದಿದೆಯೇ? ಅದೇ ಸರಿಯಾದ ಉತ್ತರವಾಗಿದೆ.
"ಓ, ನನ್ನನ್ನು ನೋಡಬೇಡಿರಿ. ಯೇಸುವನ್ನು ಮಾತ್ರ ನೋಡಿರಿ," ಎನ್ನುವುದು ಬಹಳ ಸುಲಭ. ಆದರೆ ಯೇಸುವು ಲೋಕದಲ್ಲಿ ಇಲ್ಲ! ಅವರು, "ಲೋಕದಲ್ಲಿ ನಾನು ಇರುವಷ್ಟು ಸಮಯದಲ್ಲಿ ಮಾತ್ರ ನಾನು ಲೋಕಕ್ಕೆ ಬೆಳಕಾಗಿದ್ದೇನೆ,"ಎಂದು ನುಡಿದರು. ಹಾಗಾಗಿ ಅನೇಕ ಕ್ರೈಸ್ತರು ದೇವರ ವಾಕ್ಯವನ್ನು ಸರಿಯಾಗಿ ಓದದೇ ಇರುವುದರಿಂದ ಸಂಪೂರ್ಣ ತಪ್ಪು ತಿಳುವಳಿಕೆ ಹೊಂದಿದ್ದಾರೆ ಮತ್ತು ಅವರ ತಲೆಯಲ್ಲಿ ಹಲವಾರು ತಪ್ಪಾದ ಆಲೋಚನೆಗಳು ಉಂಟಾಗುತ್ತವೆ.

ಯೇಸುವಿನ ಜೀವಿತದ 33 1/2 ವರ್ಷಗಳಲ್ಲಿ ತಂದೆಯಾದ ದೇವರು ತನ್ನ ಜೀವವನ್ನು ಯಥಾರ್ಥವಾಗಿ ಪ್ರತ್ಯಕ್ಷಗೊಳಿಸಲು ಹೇಗೆ ಯೇಸು ಕ್ರಿಸ್ತನನ್ನು 100%ರಷ್ಟು ಅವಲಂಬಿಸಿದ್ದರೋ, ಅದೇ ರೀತಿ ಈಗ ಅವರು ಅದನ್ನು ತೋರಿಸಿಕೊಡುವುದಕ್ಕಾಗಿ ಕ್ರೈಸ್ತಸಭೆಯನ್ನು - ಅಂದರೆ ಲೋಕದಲ್ಲಿರುವ ಯೇಸುವಿನ ಶಿಷ್ಯರನ್ನು - ಅವಲಂಬಿಸಿದ್ದಾರೆ.
"ಜನರು ನಿಮ್ಮ ಸತ್ಕಾರ್ಯಗಳನ್ನು ನೋಡಲಿ ಮತ್ತು ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ."