ದೇವರ ವಾಕ್ಯದಲ್ಲಿ ಆಜ್ಞಾಪಿಸಲ್ಪಟ್ಟಿರುವುದೇನೆಂದರೆ, ನಾವು ನಮ್ಮ ವಿಷಯದಲ್ಲಿಯೂ, ನಮ್ಮ ಭೋಧನೆಯ ವಿಷಯದಲ್ಲಿಯೂ ಬಹಳ ಎಚ್ಚರವಹಿಸಬೇಕೆಂದು, ಹೀಗೆ ಮಾತ್ರ ನಾವು, ನಮ್ಮ ಮತ್ತು ನಾವು ಬೋದಿಸುವವರ ರಕ್ಷಣೆಯ ಬಗ್ಗೆಯೂ ಖಚಿತವುಳ್ಳವರಾಗಿರಬಹುದು. (1 ತಿಮೊ. 4:16).
ನಮ್ಮ ಜೀವಿತ ಹಾಗು ನಮ್ಮ ಬೋಧನೆ- ಇವೆರಡೂ ನಮ್ಮ ಕ್ರೈಸ್ತ ಜೀವಿತಕ್ಕೆ ಸ್ಥಿರತೆಯನ್ನು ಕೊಡುವ ಎರಡು ಕಾಲುಗಳಿದ್ದಂತೆ, ಸಹಜವಾಗಿ ಮಾನವ ಜೀವಿಗಳಿಗಿರುವಂತೆ ಕಾಲುಗಳು ಉದ್ದದಲ್ಲಿ ಒಂದೇ ಸಮವಾಗಿರಬೇಕು. ಆದರೆ ಸಾಮಾನ್ಯವಾಗಿ ಕ್ರೈಸ್ತ ಸಮಾಜದಲ್ಲಿ, ನಾವು ನೋಡುವದೇನೆಂದರೆ - ಬಹಳಷ್ಟು ವಿಶ್ವಾಸಿಗಳು ಈ ಎರಡು 'ಕಾಲು'ಗಳಲ್ಲಿ ಒಂದು ಅಥವಾ ಇನ್ನೊಂದು ಕಾಲಿನ ಬಗ್ಗೆ ಅತಿಯಾದ ಪ್ರಾಮುಖ್ಯತೆ ವಹಿಸುವವರಾಗಿದ್ದಾರೆ.
ದೇವರ ವಾಕ್ಯಕ್ಕೆ ಬರುವುದಾದರೆ "ನಾವು ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸಬೇಕು" ಎಂದು ಆಜ್ಞಾಪಿಸಲ್ಪಟ್ಟಿದ್ದೇವೆ (2 ತಿಮೊ. 2:15). ಬಹಳಷ್ಟು ಜನರು ವಾಕ್ಯವನ್ನು ಓದುವದರಲ್ಲಿ(ಅದ್ಯಯನ ಮಾಡುವದರಲ್ಲಿ) ಬಹಳ ಆಲಸಿಗಳಾಗಿದ್ದಾರೆ, ಮತ್ತು ಆ ಕಾರಣದಿಂದ ದೇವರ ವಾಕ್ಯವನ್ನು ಅರ್ಥ ಮಾಡಿಕೊಳ್ಳುವ ವಿಷಯದಲ್ಲಿ ಅಸಮತೋಲನವುಳ್ಳವರಾಗಿದ್ದಾರೆ.
ದೇವರ ಸತ್ಯವು ಮಾನವ ದೇಹವಿದ್ದಂತೆ, ಯಾವಾಗ ಪ್ರತಿಯೊಂದು ಅಂಗವು ಸರಿಯಾದ ಆಕಾರ ಮತ್ತು ಅಳತೆಯುಳ್ಳದ್ದಾಗಿರುತ್ತದೋ ಆಗ ಮಾತ್ರ ಅದು ಪರಿಪೂರ್ಣತೆಯುಳ್ಳದ್ದಾಗಿದೆ ವಾಕ್ಯದಲ್ಲಿ ಬರುವ ಎಲ್ಲಾ ಸತ್ಯಗಳೂ ಸಮಾನವಾದ ಪ್ರಾಮುಖ್ಯತೆ ಹೊಂದಿಲ್ಲ.
ಒಂದು ಉದಾಹರಣೆಯನ್ನು ಕೊಡುವದಾದರೆ, ಅನ್ಯಬಾಷೆಯಲ್ಲಿ ಮಾತಾಡುವದು, ಇತರ ವಿಶ್ವಾಸಿಗಳನ್ನು ಪ್ರೀತಿಸುವುದಕ್ಕಿಂತ ಹೆಚ್ಚು ಪ್ರಾಮುಖ್ಯವಲ್ಲ. ಯಾವುದಾದರೂ ಒಂದು ಭೋಧನೆಯನ್ನು ಇನ್ನೂಂದು ಭೋಧನೆಗಿಂತ ಹೆಚ್ಚು ಒತ್ತಿ ಹೇಳಿದರೆ, ನಾವು ಸಾರುವ ಸತ್ಯವು ಹೇಗಿರುತ್ತದೆಯೆಂದರೆ, ಒಂದು ಕಣ್ಣು ಅಥವಾ ಒಂದು ಕಿವಿ ಬಹು ದೊಡ್ಡ ಗಾತ್ರದಾಗಿದ್ದರೆ ಆ ದೇಹವು ಹೇಗೆ ಅಸಹ್ಯವಾಗಿ ಕುರೂಪವುಳ್ಳದಾಗಿರುತ್ತದೋ ಹಾಗೆಯೇ ಇರುತ್ತದೆ!! ಇನ್ನೊಂದೆಡೆ, ಆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡುವಿಕೆಯು, ನಮ್ಮನ್ನು ನಮ್ಮ ನಂಬಿಕೆಯಲ್ಲಿ ಸುಳ್ಳು ಭೋಧಕರಾಗಿ ಬಿಡುವಂತೆ ನಡೆಸುತ್ತದೆ. ಆದಕಾರಣ, ದೇವರ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವದು ಬಹಳ ಪ್ರಾಮುಖ್ಯವಾಗಿದೆ.
ದೇವರ ವಾಕ್ಯದಲ್ಲಿ(ಸತ್ಯವೇದದ 66 ಪುಸ್ತಕಗಳಲ್ಲಿ) ಕಾಣುವ ಎಲ್ಲಾ ಸತ್ಯವನ್ನು ನಾವು ನಂಬುತ್ತೇವೆ ಎಂದಷ್ಟೇ ಹೇಳಿದ್ದರೆ ಅದು ತುಂಬಾ ಸರಳವಾಗಿರುತ್ತಿತ್ತು. ಅದೇ ಸತ್ಯವಾಗಿದೆ, ಆದರೆ ದೇವರ ವಾಕ್ಯದ ಸತ್ಯವು ದುಷ್ಟ ಸೈತಾನನಿಂದಲೂ, ಮನುಷ್ಯರಿಂದಲೂ ತಿರುವು ಮುರುವು ಮಾಡಲ್ಪಟ್ಟಿರುವದರಿಂದಲೂ, ಕೆಡಿಸಲ್ಪಟ್ಟಿರುವದರಿಂದಲೂ, ದೇವರ ವಾಕ್ಯ ನಮಗೆ ಸ್ಪಷ್ಟವಾಗಿ ಕಲಿಸುವುದನ್ನು ನಾವು ಸ್ಪಷ್ಟವಾಗಿ ವಿವರಿಸುವುದು ಅತ್ಯವಶ್ಯವಾಗಿದೆ.
ಪವಿತ್ರಾತ್ಮನ ಪ್ರಕಟಣೆ ಇಲ್ಲದೆ ದೇವರ ವಾಕ್ಯವನ್ನು ನಾವು ಕೇವಲ ನಮ್ಮ ಬುದ್ಧಿಶಕ್ತಿಯಿಂದ ಗಣಿತ, ವಿಜ್ಞಾನಗಳಂತೆ ತಿಳುಕೊಳ್ಳಲು ಸಾದ್ಯವಿಲ್ಲ. ಈ ಪ್ರಕಟಣೆಯು ಗರ್ವಿಗಳಾದ ಬುದ್ಧಿವಂತರಿಗೆ ಮರೆಮಾಡಿ ಮಕ್ಕಳಿಗೆ (ದೀನರಿಗೆ) ಮಾತ್ರ ಕೊಡಲ್ಪಟ್ಟಿದೆ ಎಂದು ಯೇಸು ಸ್ವಾಮಿಯು ಹೇಳಿದ್ದಾರೆ (ಮತ್ತಾಯ 11:25). ಈ ಕಾರಣದಿಂದಲೇ ಯೇಸುವಿನ ಕಾಲದ ಸತ್ಯವೇದ ಪಂಡಿತರು, ಅವರ ಬೋಧನೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ಈಗಿನ ಕಾಲದ ಹೆಚ್ಚಿನಾಂಶ ಸತ್ಯವೇದದ ಪಂಡಿತರು ಸಹ ಇದೇ ಕಾರಣದಿಂದಾಗಿ, ಇದೇ ನಾವೆಯಲ್ಲಿದ್ದಾರೆ.
ಅದೇ ಸಮಯದಲ್ಲಿ, ನಾವು ನಮ್ಮ ಮನಸನ್ನು ಕೂಡ ಉಪಯೋಗಿಸಬೇಕಾಗಿದೆ, ಯಾಕಂದರೆ ನಾವು - 1 ಕೊರಿಂಥದವರಿಗೆ 14:20 ರಲ್ಲಿ "ನಾವು ಬುದ್ದಿಯ ವಿಷಯದಲ್ಲಿ ಪ್ರಾಯಸ್ಥರಾಗಿರಬೇಕು" ಎಂದು ಆಜ್ಞಾಪಿಸಲ್ಪಟ್ಟಿದ್ದೇವೆ, ಆದಕಾರಣ ಪವಿತ್ರಾತ್ಮನಿಗೆ ಸಂಪೂರ್ಣವಾಗಿ ಅಧೀನವಾಗಿರುವ ಮನಸ್ಸು ಮಾತ್ರವೇ ದೇವರ ವಾಕ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾದ್ಯ.
ದೇವರು ಬಯಸುವದು - ಆತನ ಎಲ್ಲಾ ಮಕ್ಕಳೂ ಎಲ್ಲಾ ವಿದದಲ್ಲಿಯೂ ಸಂಪೂರ್ಣ ಬಿಡುಗಡೆಯಾಗಿರಬೇಕೆಂದು. ಆದರೆ ಅನೇಕ ವಿಶ್ವಾಸಿಗಳು ಅನೇಕ ಪಾಪಮಯವಾದ ದುರಬ್ಯಾಸಗಳಿಗೂ ಮತ್ತು ಮಾನವ ಸಂಪ್ರದಾಯಗಳಿಗೂ(ಇನ್ನೂ ಗುಲಾಮರಾಗಿದ್ದಾರೆ) ಕಟ್ಟಲ್ಪಟ್ಟವರಾಗಿದ್ದಾರೆ(ಬಂದಿಗಳಾಗಿದ್ದಾರೆ). ಇದಕ್ಕೆ ಒಂದು ಕಾರಣವೆಂದರೆ, ಅವರು ದೇವರ ವಾಕ್ಯವನ್ನು ಬಹಳ ಅಲಸ್ಯತನದಿಂದ(ಅಜಾಗರೂಕತೆಯಿಂದ) ಓದುವವರಾಗಿದ್ದಾರೆ.
ದೇವರ ವಾಕ್ಯವನ್ನು ಓದಿ ಅರ್ಥ ಮಾಡಿಕೋಳ್ಳುವದರಲ್ಲಿ ನಾವು ಎಷ್ಟು ಹೆಚ್ಚಾಗಿ ಶ್ರದ್ಧೆವಹಿಸುತ್ತೇವೋ, ಅಷ್ಟೇ ಹೆಚ್ಚಾಗಿ ಸತ್ಯವು ನಮ್ಮನ್ನು ನಮ್ಮ ಜೀವಿತದ ಎಲ್ಲಾ ಕ್ಷೇತ್ರದಲ್ಲಿ ಬಿಡುಗಡೆ ಮಾಡುತ್ತದೆ (ಯೋಹಾನ 8:32 ಓದಿ).
ಅನೇಕ ವಿಶ್ವಾಸಿಗಳು ತಮ್ಮ ಹಣವನ್ನು ಬಂಡವಾಳ ಹಾಕುವ(ವ್ಯವಹಾರದಲ್ಲಿ ತೊಡಗಿಸುವ) ವಿಷಯ ಬಂದಾಗ ಬಹಳ ಜಾಗರೂಕರಾಗಿರುತ್ತಾರೆ, ಆದರೆ ದೇವರ ವಾಕ್ಯ ಓದುವ ವಿಶಯಕ್ಕೆ ಬಂದಾಗ ಅವರು ಬಹಳ ಅಲಸ್ಯಗಾರರಾಗಿದ್ದಾರೆ. ಇದೇನು ತೋರಿಸುತ್ತದೆಯೆಂದರೆ, ಅವರು ದೇವರಿಗಿಂತ ಹಣವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಅಥವಾ ಬೆಲೆಕೊಡುತ್ತಾರೆ ಎಂದು. ಅಂಥಹ ವಿಶ್ವಾಸಿಗಳು ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳುವ ವಿಷಯದಲ್ಲಿ ಸಹಜವಾಗಿಯೇ ದಾರಿ ತಪ್ಪತ್ತಾರೆ.
ದೇವರ ವಾಕ್ಯವು ನಮಗೆ ಕೊಡಲ್ಪಟ್ಟ ಉದ್ದೇಶವು ನಮ್ಮನ್ನು "ಪರಿಪೂರ್ಣ ಪ್ರವೀಣ"ರಾಗಿ ಮಾಡಲು ಎಂಬುದಾಗಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ (2 ತಿಮೊ. 3:16). ಆದ್ದರಿಂದ, ಯಾರೆಲ್ಲಾ ಕ್ರೈಸ್ತ ಜೀವಿತದ ಪರಿಪೂರ್ಣತೆಯಲ್ಲಿ ನಿರಾಸಕ್ತಿಯುಳ್ಳವರಾಗಿದ್ದಾರೋ, ಅವರು ದೇವರವಾಕ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹ ಆಶಕ್ತರಾಗಿದ್ದಾರೆ ಎಂದು ನಾವು ಹೇಳಬಹುದಾಗಿದೆ (ಯೋಹಾನ 7:17 ಓದಿ).
ಕರ್ತನ ಭಯವೇ ಜ್ಞಾನದ ಆರಂಭ: ಮತ್ತು ದೇವರು ತನ್ನ ರಹಸ್ಯಗಳನ್ನು ಆತನಿಗೆ ಭಯಪಡುವವರಿಗೆ ಮಾತ್ರ ಪ್ರಕಟಿಸುತ್ತಾನೆ (ಕೀರ್ತನೆಗಳು 25:14).
ದೇವರ ವಿಷಯವಾದ ಸತ್ಯವುದೇವರು ಒಬ್ಬನೇ, ಹಾಗೂ ಈ ಒಬ್ಬ ದೇವರಲ್ಲಿ ಮೂರು ವ್ಯಕ್ತಿಗಳಿದ್ದಾರೆ ಎಂದು ಸತ್ಯವೇದವು ನಮಗೆ ಕಲಿಸುತ್ತದೆ.
ಅಂಕೆ ಸಂಖ್ಯೆಗಳು ಈ ಲೋಕಕ್ಕೆ ಸೇರಿದ್ದರಿಂದ ಹಾಗೂ ದೇವರು ಆತ್ಮಸ್ವರೂಪನಾಗಿರುವುದರಿಂದ ಒಂದು ಸಣ್ಣ ಬಟ್ಟಲು ಸಮುದ್ರದ ಪೂರ್ತಿ ನಿರನ್ನು ಹೇಗೆ ತನ್ನಲ್ಲಿ ತುಂಬಿಸಿಕೊಳ್ಳಲು ಸಾದ್ಯವಿಲ್ಲವೋ ಹಾಗೆಯೇ ಇಲ್ಲಿ ನಮ್ಮ ಮಿತಿಯುಳ್ಳ ಮನಸ್ಸು ಈ ಸತ್ಯವನ್ನು ಪೂರ್ಣವಾಗಿ ಗ್ರಹಿಸಲು ಆಗದು.
ಮೂರು 'ಒಂದು'ಗಳನ್ನು ಗುಣಿಸಿದಾಗ ಹೇಗೆ ಉತ್ತರವು 'ಒಂದೇ' ಆಗಿರುತ್ತದೆ (1x1x1=1) ಎಂದು ಒಂದು ನಾಯಿಗೆ ಗುಣಕಾರವು ಅರ್ಥವಾಗುವದಿಲ್ಲವೊ ಅದೇ ರೀತಿಯಾಗಿ, ದೇವರು ಮೂರು ವ್ಯಕ್ತಿಯಾಗಿದ್ದರೂ ಒಬ್ಬನೇ ಆಗಿದ್ದಾನೆ ಎಂದು ನಾವೂ ಅರ್ಥಮಾಡಿಕೊಳ್ಳಲಾಗದು. ಒಂದು ನಾಯಿ ಇನ್ನೊಂದು ನಾಯಿಯನ್ನು ಮಾತ್ರ ಅರ್ಥ ಮಾಡಿಕೊಳ್ಳಲು ಸಾದ್ಯ. ಅದು ಒಬ್ಬ ಮನುಷ್ಯನನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಾರದು. ಅದೇ ರೀತಿಯಾಗಿ, ನಮ್ಮ ಮಾನವ ಬುದ್ದಿಯಿಂದ ದೇವರನ್ನು ವಿವರಿಸುವದು ಮತ್ತು ಅರ್ಥಮಾಡಿಕೊಳ್ಳುವದು ಯಾವಾಗ ಸಾದ್ಯವೆಂದರೆ ಆತನು ನಮ್ಮ ಹಾಗೆಯೇ ಮತ್ತೊಬ್ಬ ಮನುಷ್ಯನಾಗಿದ್ದಲ್ಲಿ ಮಾತ್ರ. ನಮ್ಮ ಆಲೋಚನೆಗಳನ್ನೂ ಮೀರಿ ಹೋಗುವಾತನು ನಮ್ಮ ಸತ್ಯವೇದದ ದೇವರು' ಎಂಬ ನಿಜ ಸಂಗತಿಯೇ ಇದು ಖಂಡಿತವಾಗಿಯೂ ಸತ್ಯವಾಗಿದೆ ಎಂಬುದಕ್ಕೆ ಸ್ಪಷ್ಟವಾದ ಪುರಾವೆಯಾಗಿದೆ.
ಸತ್ಯವೇದದ ಮೊದಲನೇಯ ವಾಕ್ಯದಿಂದ ಈ ಸತ್ಯವು ಸ್ಪಷ್ಟವಾಗಿದೆ. ಇಬ್ರಿಯ ಭಾಷೆಯಲ್ಲಿ "ದೇವರು" ಎನ್ನುವ ಪದವು " ಎಲೊಹಿಮ್" (Elohim) ಎಂದಿದ್ದು, ಬಹುವಚನವಾಗಿದೆ. ಆದಿಕಾಂಡ 1:26 ರಲ್ಲಿ (ಹಾಗೂ ಆದಿಕಾಂಡ 3:22 ರಲ್ಲಿ) 'ನಮ್ಮ' ಮತ್ತು 'ನಮ್ಮಲ್ಲಿ' ಎಂಬ ಪದಗಳನ್ನು ನಾವು ಕಾಣಬಹುದು. ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ತಂದೆಯು (ಆಕಾಶವಾಣಿ), ಮಗನು (ಯೇಸುವು) ಮತ್ತು ಪವಿತ್ರ ಆತ್ಮನು (ಪಾರಿವಾಳದ ಸ್ವರೂಪದಲ್ಲಿ) ಪ್ರತ್ಯಕ್ಷವಾಗಿದ್ದನ್ನು ನಾವು ನೋಡುತ್ತೇವೆ (ಮತ್ತಾ. 3:16,17).
ಯೇಸುವೇ - ತಂದೆ, ಮಗ ಮತ್ತು ಪವಿತ್ರಾತ್ಮನಾಗಿದ್ದಾನೆ ಎಂದು ಹೇಳುವವರು, ಯೇಸುವು ಹೇಗೆ ತನ್ನ ಚಿತ್ತವನ್ನು ನಿರಾಕರಿಸಿ ತನ್ನ ತಂದೆಯ ಚಿತ್ತವನ್ನು ಈ ಭೂಮಿಯ ಮೇಲೆ ಮಾಡಬಹುದೆಂದು ವಿವರಿಸಲಾರರು (ಯೋಹಾನ 6:38) .ಅದ್ವೈತಿಗಳು ದೇವರು ಕೇವಲ ಒಬ್ಬ ವ್ಯಕ್ತಿ ಎಂದು ನಂಬುವವರಾಗಿರುವದರಿಂದ "ಯೇಸುವಿನ ಹೆಸರಿನಲ್ಲಿ ಮಾತ್ರ" ದೀಕ್ಷಾಸ್ನಾನ ಮಾಡಿಸುತ್ತಾರೆ ಮತ್ತು ಈ ಕಾರಣದಿಂದ ಯೇಸು ಮಾನವನಾಗಿ ಬಂದನು ಎಂಬುದನ್ನು ನಿರಕರಿಸುತ್ತಾರೆ.
ಸತ್ಯವೇದವು ಹೇಳುವದೇನಂದರೆ, ಯಾವನು ಸರಿಯಾದ ಭೋದನೆಯನ್ನು ಹೋಂದಿದ್ದಾನೋ, ಆತನು ತಂದೆ ಮತ್ತು ಮಗ ಇಬ್ಬರನ್ನೂ ಹೊಂದಿದವನಾಗಿದ್ದಾನೆ, ಮತ್ತು ಯಾರು ತಂದೆ ಅಥವಾ ಮಗ ಇಬ್ಬರಲ್ಲಿ ಒಬ್ಬರನ್ನು ನಿರಾಕರಿಸಿದರೂ ಆತನು ಕ್ರಿಸ್ತ ವಿರೋಧಿಯ ಆತ್ಮವನ್ನು ಹೊಂದಿದವನಾಗಿದ್ದಾನೆ (2 ಯೋಹಾ 1:9, 1 ಯೋಹಾನ 2:22).
ಕ್ರಿಸ್ತೀಯ ದೀಕ್ಷಾಸ್ನಾನದಲ್ಲಿಯೂ ಸಹ ನಾವು ತಂದೆ, ಮಗ ಹಾಗೂ ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಲು ಯೇಸುವು ನಮಗೆ ಸ್ಪಷ್ಟವಾಗಿ ಆಜ್ಞಾಪಿಸಿದ್ದಾನೆ (ಮತ್ತಾ. 28:19). ಮಗನು ಕರ್ತನಾಗಿರುವ ಯೇಸು ಕ್ರಿಸ್ತನೇ (ಅ.ಕೃ. 2:38).
ಯೇಸುವಿನ ವಿಷಯವಾದ ಸತ್ಯವುಯೇಸುವು ನಿತ್ಯತ್ವದಿಂದಲೂ ದೇವರಾಗಿಯೂ, ದೇವರಿಗೆ ಸರಿಸಮಾನವಾಗಿಯೂ ಇದ್ದನು (ಯೋಹಾ. 1:1) ಮತ್ತು ಮಾನವನಾಗಿ ಆತನು ಈ ಲೋಕಕ್ಕೆ ಬಂದಾಗ, ದೇವರಾಗಿ ತನಗಿದ್ದ ಶಕ್ತಿಗಳನ್ನು ಉಪಯೋಗಿಸಬಾರದೆಂದು ತಾನಾಗಿಯೇ ಆರಿಸಿಕೊಂಡನು. "ಆತನು ತನ್ನನ್ನು ಬರಿದು ಮಾಡಿಕೊಂಡನು" (ಫಿಲಿಪ್ಪಿಯವರಿಗೆ 2:6,7) ಎಂಬುದರ ಅರ್ಥ ಇದೇ ಆಗಿದೆ.
ದೇವರು ಕೆಟ್ಟದ್ದರಿಂದ ಶೋಧಿಸಲ್ಪಡಲಾರನು (ಯಾಕೋಬ. 1:13) ಎಂಬುದನ್ನು ಸಮರ್ಥಿಸಬಹುದಾದ ಕೆಲವು ಉದಾಹರಣೆಗಳನ್ನು ಗಮನಿಸಿರಿ, ಆದರೆ ಯೇಸು ತಾನು ಶೋಧಿಸಲ್ಪಡಲು ತನ್ನನ್ನು ತಾನೇ ಅನುಮತಿಸಿಕೊಂಡನು (ಮತ್ತಾ. 4:1-10). ದೇವರು ಸರ್ವಜ್ಣನಾಗಿದ್ದಾನೆ(ಎಲ್ಲವನ್ನು ಬಲ್ಲಾತನು), ಆದರೂ ಯೇಸು ಭೂಲೋಕದಲ್ಲಿದ್ದಾಗ, ತನ್ನ ಎರಡನೆಯ ಬರುವಿಕೆಯ ಸಮಯವಾಗಲಿ ಅಥವಾ ದಿನಾಂಕವಾಗಲಿ ತನಗೆ ಗೊತ್ತಿಲ್ಲವೆಂದು ಹೇಳಿದನು (ಮತ್ತಾ. 24:36).ಆತನು ಅಂಜೂರದ ಮರದ ಹತ್ತಿರ ಸಹ ಹೋಗಿ ಅದರಲ್ಲಿ ಫಲವಿದೆಯೋ ಇಲ್ಲವೋ ಎಂದು ನೋಡಬೇಕಾಗಿಬಂತು (ಮತ್ತಾ. 21:19). ಒಂದು ವೇಳೆ ಆತನು ತನ್ನ ದೈವಿಕ ಶಕ್ತಿಯನ್ನು ಉಪಯೋಗಿಸಿದ್ದಾದರೆ, ದೂರದಿಂದಲೇ ಆತನಿಗೆ ಆ ಮರದಲ್ಲಿ ಹಣ್ಣಿಲ್ಲವೆಂದು ತಿಳಿಯುತ್ತಿತ್ತು! ದೇವರ ಜ್ನಾನವು ಬದಲಾಗದಂಥದ್ದು ಮತ್ತು ಶಾಶ್ವತ (ನಿತ್ಯ)ವಾದದ್ದು. ಆದಾಗ್ಯೂ, ಸತ್ಯವೇದದಲ್ಲಿ ಎರಡು ಬಾರಿ ನಮ್ಮ ಕರ್ತನಾದ ಕ್ರಿಸ್ತಯೇಸುವಿನ ಬಗ್ಗೆ, "ಆತನು ಜ್ಞಾನದಲ್ಲಿ ಬೆಳೆದನು" ಎಂಬುದಾಗಿ ದಾಖಲಾಗಿದೆ (ಲೂಕ. 2:40,52).
ಈ ಎಲ್ಲಾ ವಾಕ್ಯಗಳು ತೋರಿಸುವುದೇನೆಂದರೆ, ಯೇಸುವು ದೇವರಾಗಿ ತನಗಿದ್ದ ಅನೇಕ ಸಾಮರ್ಥ್ಯಗಳನ್ನು, ತಾನು ಈ ಲೋಕಕ್ಕೆ ಬಂದಾಗ "ಬರಿದುಮಾಡಿಕೊಂಡನು" ಎಂಬುದಾಗಿ.
ಆದರೆ ಯೇಸುವು ಈ ಭೂಲೋಕಕ್ಕೆ ಬಂದಾಗ ಈ ಶಕ್ತಿಗಳಿಂದ ತನ್ನನ್ನು ಬರಿದುಮಾಡಿಕೊಂಡಾಗ್ಯೂ, ಇನ್ನೂ ಆತನು ತನ್ನ ವ್ಯಕ್ತಿತ್ವದಲ್ಲಿ ದೇವರಾಗಿಯೇ ಇದ್ದನು. ದೇವರು ತಾನು ಆ ರೀತಿ ಮಾಡ ಬಯಸಿದರೂ, ಆತನಿಗೆ ದೇವರಾಗಿರದೆ ಇರಲು ಸಾಧ್ಯವೇ ಇಲ್ಲ ಎಂಬುದು ಸಂದೇಹವಿಲ್ಲದ ವಿಷಯ. ಒಬ್ಬ ಅರಸನು ತನಗಿರಬೇಕಾದ ರಾಜನ ಹಕ್ಕುಗಳನ್ನು ಬಿಟ್ಟುಕೊಟ್ಟು, ಒಂದು ಕೊಳಚೆ ಪ್ರದೇಶದಲ್ಲಿ ಜೀವಿಸಲು ಸಾಧ್ಯ. ಆದರೆ ಹಾಗಿದ್ದರೂ, ಆತನು ಅರಸನೇ ಆಗಿದ್ದಾನೆ. ಅದೇ ರೀತಿ ಯೇಸುವು ಸಹ.
ಯೇಸುವು ತಾನು ಭೂಲೋಕದಲ್ಲಿದ್ದಾಗ ತನ್ನ ದೈವಿಕತೆಗೆ ಸ್ಪಷ್ಟವಾದ ಸಾಕ್ಷಿಯಾಗಿ ಆರಾಧನೆಯನ್ನು ಸ್ವೀಕರಿಸಿದ್ದನ್ನು, ನಾವು ಸತ್ಯವೇದದಲ್ಲಿ ದಾಖಲಾದ ಏಳು ಉಧಾಹರಣೆಗಳಲ್ಲಿ ನೋಡಬಹುದಾಗಿದೆ. (ಮತ್ತಾ. 8:2 ;9:18 :14;33 ;15:25; 20:20; ಮಾರ್ಕ. 5:6 ; ಯೋಹಾ. 9:38). ದೇವದೂತರಾಗಲಿ, ದೇವರಿಗೆ ಭಯಪಡುವ ಮನುಷ್ಯರಾಗಲಿ ಆರಾಧನೆಯನ್ನು ಅಂಗೀಕರಿಸುವುದಿಲ್ಲ (ಅಪೋಸ್ತಲರ ಕೃತ್ಯಗಳು 10:25-26; ಪ್ರಕ. 22:8,9). ಆದರೆ ಯೇಸು ಅದನ್ನು ಅಂಗೀಕರಿಸಿದನು; ಯಾಕೆಂದರೆ ಆತನು ದೇವರ ಮಗನಾಗಿದ್ದನು. ಯೇಸು ಭೂಮಿಯ ಮೇಲಿದ್ದಾಗಲೂ 'ಆತನು ದೇವರ ಮಗನು' ಎಂದು ತಂದೆಯು ಪೇತ್ರನಿಗೆ ಪ್ರಕಟಿಸಿದನು (ಮತ್ತಾ. 16:16,17).
ಯೇಸುವಿನ ಮಾನವೀಕತೆಯ(ಮಾನವ ಸ್ವಭಾವದ) ಬಗ್ಗೆ ಇಬ್ರಿಯರಿಗೆ 2:17 ಸ್ಪಷ್ಟವಾಗಿ,"ಯೇಸು ಸರ್ವ ವಿಷಯಗಳಲ್ಲೂ ತನ್ನ ಸಹೋದರರಂತೆ ಮಾಡಲ್ಪಟ್ಟನು" ಎಂಬುದಾಗಿ ಹೇಳುತ್ತದೆ. ಆತನು ಆದಾಮನ ಮಕ್ಕಳ ಹಾಗೆ ಮಾಡಲ್ಪಡಲಿಲ್ಲ; ಯಾಕೆಂದರೆ,ಆಗ ಆತನು ಇತರ ಮಾನವಜೀವಿಗಳಂತೆ ತನ್ನಲ್ಲಿ 'ಹಳೇ ಮನುಷ್ಯ'ನನ್ನು ಹೊಂದಿರುತ್ತಿದ್ದನು. (ವಾಕ್ಯದ ಪ್ರಕಾರ-'ಹಳೇ ಮನುಷ್ಯ' ಎಂದರೆ,'ಪಾಪಮಯ ಸ್ವಭಾವ' ಎಂದರ್ಥ. ದುರದೃಶ್ಟವಶಾತ್ ಅನೇಕರು 'ಹಳೇ ಮನುಷ್ಯ' ಎಂಬ ಪದಗಳ(ಉಕ್ತಿಯ) ಬದಲಿಗೆ 'ಪಾಪಮಯಸ್ವಭಾವ' ಎಂಬುದನ್ನು ಉಪಯೋಗಿಸುತ್ತಾರೆ).
ಯೇಸುವಿಗೆ 'ಪಾಪಮಯ ಸ್ವಭಾವ'ವಿರಲಿಲ್ಲ. ಯಾಕೆಂದರೆ, ಆತನಿಗೆ ಮಾನವೀಯ ತಂದೆಯಿರಲಿಲ್ಲ. ಯೇಸುವು ಪವಿತ್ರಾತ್ಮನಿಂದ ಹುಟ್ಟಿದವನಾಗಿದ್ದು, ಗರ್ಭದಿಂದಲೇ ಪವಿತ್ರನಾಗಿದ್ದನು (ಲೂಕ. 1:35).
ಯೇಸುವಿನ ಸಹೋದರರು ಯಾರೆಂದರೆ, ಯಾರು ದೇವರ ಚಿತ್ತವನ್ನು ಮಾಡುತ್ತಾರೋ ಅವರೇ; (ಮತ್ತಾ. 12:49,50). ಅವರು ಆತ್ಮನಿಂದ ಹುಟ್ಟಿದವರು (ಯೋಹಾ. 3:5), ಮತ್ತು ಯಾರು ತಮ್ಮಲ್ಲಿನ ಹಳೇ ಮನುಷ್ಯನನ್ನು (ಹಳೇ ಸ್ವಭಾವ) ತೆಗೆದುಹಾಕಿ, ಹೊಸ ಮನುಷ್ಯ(ಸ್ವಭಾವ)ನನ್ನು ತಮ್ಮಲ್ಲಿ ಧರಿಸಿರುತ್ತಾರೋ ಅವರೇ (ಎಫೆಸದವರಿಗೆ 4:22,24). ಆದರೆ, ಯೇಸುವಿನ ಸಹೋದರರಾದ ನಾವು ಕೂಡ ನಮ್ಮದೇ ಆದ ಸ್ವಂತ ಚಿತ್ತವನ್ನು ಹೊಂದಿದ್ದೇವೆ; ಮತ್ತು ಯೇಸು ಸಹ ಸರ್ವ 'ವಿಷಯಗಳಲ್ಲೂ' ನಮ್ಮಂತೆ ಮಾಡಲ್ಪಟ್ಟನು. ಆತನು ಕೂಡ ತನ್ನದೇ ಆದ ಸ್ವಂತ ಚಿತ್ತವನ್ನು ಹೊಂದಿದ್ದು, ಅದನ್ನು ಆತನು ನಿರಾಕರಿಸಿದನು (ಯೋಹಾ. 6:38).
ನಾವು ಆದಾಮನ ಮಕ್ಕಳಾಗಿ ಹುಟ್ಟಿದಾಗ, ನಾವೆಲ್ಲರೂ ಹಳೇಮನುಷ್ಯನೊಂದಿಗೆಯೇ (ಪಾಪದಲ್ಲಿ) ಹುಟ್ಟಿದೆವು. ಆ ಹಳೇಮನುಷ್ಯನು ಹೇಗಿದ್ದಾನೆಂದರೆ, ಒಬ್ಬ ಅಪನಂಬಿಗಸ್ಥನಾದ ಸೇವಕನು ನಮ್ಮ ಹೃದಯದ ಬಾಗಿಲನ್ನು ಈ ಶರೀರದ (ಮಾಂಸಿಕ) ಆಶೆಗಳಿಗಾಗಿ ತೆರೆದು ಅವನ್ನು ಒಳ ನುಗ್ಗಲು ಬಿಟ್ಟಂತೆ. (ಅದು ಹೇಗೆಂದರೆ- ಕಳ್ಳರ ಗುಂಪಿಗೆ ಅವಕಾಶ ಕೊಟ್ಟಂತೆ). ಆದರೆ, ನಾವು ಹೊಸದಾಗಿ ಹುಟ್ಟಿದಾಗ (ಮರುಹುಟ್ಟು ಪಡೆದಾಗ), ಈ ಹಳೇಮನುಷ್ಯನು ದೇವರಿಂದ ಕೊಲ್ಲಲ್ಪಟ್ಟನು (ರೋಮಾ. 6:6). ಆದರೆ, ನಾವು ಇನ್ನೂ ಶರೀರ(ಮಾಂಸ)ವನ್ನು ಹೊಂದಿದ್ದು, ಅದರ ಮೂಲಕ ನಾವು ಶೋಧನೆಗೆ ಒಳಗಾಗುತ್ತೇವೆ (ಯಾಕೋಬನು 1:14,15). ಈ ಹಳೇ ಮನುಷ್ಯನು ಈಗ ಹೊಸಮನುಷ್ಯನಾಗಿ ಬದಲಿಸಲ್ಪಟ್ಟಿದ್ದು, ಆತನು ಶರೀರದ(ಮಾಂಸಿಕ) ಆಶಾಪಾಶಗಳನ್ನು ಎದುರಿಸುವವನಾಗಿದ್ದಾನೆ; ಮತ್ತು ಹೃದಯದ ಬಾಗಿಲನ್ನು 'ಈ ಕಳ್ಳರಗುಂಪಿಗೆ'ವಿರುದ್ಧವಾಗಿ ಯಾವಾಗಲೂ ಮುಚ್ಚಿರುವಂತೆ ನೋಡಿಕೊಳ್ಳುವವನಾಗಿದ್ದಾನೆ.
ಯೇಸು ಸರ್ವವಿಷಯಗಳಲ್ಲೂ ನಮ್ಮ ಹಾಗೆ ಶೋಧಿಸಲ್ಪಟ್ಟನು ಮತ್ತು ಜಯಹೊಂದಿದನು (ಇಬ್ರಿಯರಿಗೆ 4:15). ಹೇಗಿದ್ದರೂ, ಆತನು 'ಪಾಪಮಯ ಶರೀರ(ಮಾಂಸ)ದಿಂದ" ಬರಲಿಲ್ಲ. ಆದರೆ 'ಪಾಪಮಯದೇಹ ಸ್ವರೂಪದಿಂದ ಬಂದನು' (ರೋಮಾ. 8:3). ನಾವು ಅನೇಕ ವರ್ಷಗಳ ಕಾಲ ಪಾಪದಿಂದ ಜೀವಿಸಿದ್ದೇವೆ. ಅನೇಕ ವರ್ಷಗಳ ಕಾಲದಿಂದ ಪಾಪ ಮಾಡುತ್ತಾ ಜೀವಿಸಿ ಗಳಿಸಿದ ನಮ್ಮ ಈ ಪಾಪಮಯ ಸ್ವಭಾವವು- ನಾವು ಹೊಸದಾಗಿ ಹುಟ್ಟಿದ್ದರೂ ನಮಗೆ ತಿಳಿಯದೆಯೇ ಪಾಪಮಾಡುವಂತೆ ಮಾಡುತ್ತದೆ.
ಉಧಾಹರಣೆಗೆ, ಮೊದಲಿನಿಂದಲೂ ಅನೇಕ ಆಣಿಗಳನ್ನು ಇಡುತ್ತಾ ಜೀವಿಸಿದವರು ನಂತರವೂ ತಮಗೆ ತಿಳಿಯದೆಯೇ ತಮ್ಮ ಬಾಯಿಂದ ಈ ಆಣೆಯ ಶಬ್ದಗಳು ತಾವು ಒತ್ತಡದ ಕೆಳಗಿರುವಾಗ ತಮ್ಮ ಇಷ್ಟಕ್ಕೆ ವಿರುದ್ದವಾಗಿ, ಬರುವುದನ್ನು ನೋಡಬಹುದು; ಆದರೆ, ಕೆಲವರು ತಮ್ಮ ಬದಲಾಗದ ಹಳೇ ಜೀವಿತದಲ್ಲಿ ಈ ರೀತಿಯ ಆಣಿಯ ಪದಗಳನ್ನು ಬಳಸದ ಕಾರಣ, ನಂತರವೂ ತಮಗೆ ಗೊತ್ತಿಲ್ಲದೆ ಆ ರೀತಿಯ ಪದಗಳು ತಮ್ಮ ಬಾಯಿಂದ ಬರುವದನ್ನು ಕಾಣುವದಿಲ್ಲ. ಅದೇ ರೀತಿ ಯಾರು ಮೊದಲು ಅಶ್ಲೀಲಕರವಾದವುಗಳನ್ನು ಓದಿರುತ್ತಾರೋ, ಅಂತವರು, ಯಾರು ತಮ್ಮನ್ನು ಆ ಮಟ್ಟಕ್ಕೆ ಕೆಡಿಸಿಕೊಂಡಿಲ್ಲವೋ ಅವರಿಗಿಂತ ಕೆಟ್ಟ(ಅಶ್ಲೀಲ) ಯೋಚನೆ ಮತ್ತು ಕನಸುಗಳಿಂದ ಬಹಳ ತೊಂದರೆಗೊಳಗಾಗುತ್ತಾರೆ.
ಯೇಸುವು ಎಂದಿಗೂ ಪಾಪ ಮಾಡಲಿಲ್ಲ ಮತ್ತು ಆತನ ಜೀವಿತದಲ್ಲಿ ಯಾವ ತಿಳಿಯದ ಪಾಪಗಳು ಸಹ ಇರಲಿಲ್ಲ ಒಂದು ವೇಳೆ ಆತನು ತನಗೆ ತಿಳಿಯದೆಯೇ ಒಂದು ಪಾಪ ಮಾಡಿದ್ದರೂ ಸಹ, ಆತನು ಆ ಪಾಪಕ್ಕಾಗಿ ಒಂದು ಯಜ್ಞವನ್ನು ಅರ್ಪಿಸಬೇಕಾಗಿತ್ತು ( ಯಾಜಕಕಾಂಡ 4:27-28 ರಲ್ಲಿ ಓದುವಂತೆ). ಆಗ ಆತನು ನಮ್ಮ ಪಾಪಗಳಿಗಾಗಿ ಅರ್ಪಿಸತಕ್ಕಂಥ(ಪರಿಪೂರ್ಣವಾದ) ಯಜ್~ಝದ ಕುರಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಆತನು ಎಂದಿಗೂ ತಿಳಿದೂ, ತಿಳಿಯದೆಯೂ ಯಾವ ಪಾಪವನ್ನೂ ಮಾಡಲಿಲ್ಲ.
ಸಭೆಯ ಇತಿಹಾಸದುದ್ದಕ್ಕೂ ನಾವು ಯೇಸುವಿನ ವ್ಯಕ್ತಿತ್ವದ ಭೋಧನೆಯು ವಿವಾದಾತ್ಮಕವಾಗಿದ್ದು (ವಾಗ್ವಾದಮಯ), ಅದರ ಬಗ್ಗೆ ಅನೇಕ ಸುಳ್ಳು ಭೋಧನೆಯನ್ನು ಭೋಧಿಸಲಾಗುತ್ತಿದೆ. ಕೆಲವರು ಆತನ ದೈವಿಕತೆಯ ಬಗ್ಗೆ ಎಷ್ಟು ಹೆಚ್ಚಾಗಿ ಒತ್ತಿ ಹೇಳುವವರಾಗಿದ್ದಾರೆಂದರೆ, ಆತನು ನಮ್ಮ ಹಾಗೆ ಮಾನವನಾಗಿ ಬಂದು ನಮ್ಮಂತೆ ಶೋಧನೆಗೆ ಒಳಗಾದವನು ಎಂಬುದನ್ನು ನೋಡಲಾಗದವರಾಗಿದ್ದಾರೆ. ಇನ್ನೂ ಕೆಲವರು ಆತನ ಮಾನವರೂಪಕ್ಕೆ ಎಷ್ಟು ಹೆಚ್ಚು ಒತ್ತು ಕೊಡುವವರಾಗಿದ್ದಾರೆಂದರೆ, ಆತನ ದೈವಿಕತೆಯನ್ನೇ (ದೈವಸ್ವರೂಪವನ್ನೇ) ಅಲ್ಲಗಳೆಯುವವರಾಗಿದ್ದಾರೆ.
ಈ ಎರಡೂ ಸುಳ್ಳು ಭೋಧನೆಗಳನ್ನು ನಮ್ಮಿಂದ ದೂರವಿರಿಸಲು ಇರುವ ನಮ್ಮ ಒಂದೇ ಸುರಕ್ಷತಾ ಮಾರ್ಗವೆಂದರೆ, ದೇವರ ವಾಕ್ಯದಲ್ಲಿರುವ ದೇವರ ಪೂರ್ಣ ಪ್ರಕಟಣೆಯೊಂದಿಗೆ ನಾವು ನಿಲ್ಲುವುದು, ಮತ್ತು ಎಲ್ಲಿ ಆ ಪ್ರಕಟಣೆ ನಿಲ್ಲುತ್ತದೆಯೋ ನಾವೂ ಅಲ್ಲೇ ನಿಲ್ಲಿಸಬೇಕೇ ಹೊರತು 'ಇನ್ನೂ ಮುಂದಕ್ಕೆ ಹೋಗದಿರುವುದು' ಆಗಿರುತ್ತದೆ ( 2 ಯೋಹಾ 1:7,9).
ಯೇಸು ಭೂಮಿಗೆ ಮಾನವನಾಗಿ ಬಂದದ್ದೇ ಒಂದು ನಿಗೂಡ ಸತ್ಯವಾಗಿದೆ. ಸತ್ಯವೇದದಲ್ಲಿ ಹೇಳಿರುವುದಕ್ಕಿಂತ ಹೆಚ್ಚಾಗಿ ಈ ಸತ್ಯವನ್ನು ಬೇರೆ ರೀತಿಯಲ್ಲಿ ವಿಶ್ಲೇಷಿಸಿದರೆ ಅದು ನಮ್ಮ ಮೂರ್ಖತನವಾಗಿದೆ. ಆ ರೀತಿ ಮಾಡುವುದು ಎಂಥಹ ಮೂರ್ಖತನದ ಮತ್ತು ಅಸಂಬದ್ಧವಾದ ಕ್ರಿಯೆಯಾಗಿದೆಯೆಂದರೆ, ಇಸ್ರಾಯೇಲ್ಯರು ತವಕದಿಂದ (ಕುತೂಹಲದಿಂದ) ದೇವರ ಮಂಜೂಷದ(ಕ್ರಿಸ್ತನ ಒಂದು ಮಾದರಿ) ಒಳಗೆ ಇಣಿಕಿ ನೋಡಿದಂತೆ; ಅದಕ್ಕಾಗಿ ದೇವರು ಆ ರೀತಿ ಮಾಡಿದವರನ್ನು ಸಾಯಿಸಿದನು ( 1 ಸಮು. 6:19).
ಯೇಸು ಹೇಳಿದ್ದೇನೆಂದರೆ, ತಾನು ಈ ಭೂಮಿಗೆ ಬಂದದ್ದು ತನ್ನ ಸ್ವಂತ ಚಿತ್ತವನ್ನು ನಿರಾಕರಿಸಿ, ತಂದೆಯ ಚಿತ್ತವನ್ನು ಮಾಡಲೆಂದು (ಯೋಹಾ. 6:38). ಇದು ಏನನ್ನು ತೋರಿಸುತ್ತದೆಯೆಂದರೆ, ಯೇಸುವಿಗೆ ಮಾನವೀಯ ಚಿತ್ತವಿದ್ದು, ಅದು ದೇವರ ಚಿತ್ತಕ್ಕೆ ವಿರುದ್ಧವಾಗಿದ್ದಿತು ಎಂದು (ಮತ್ತಾ. 26:39), ಇಲ್ಲದಿದ್ದರೆ, ತನ್ನ ಚಿತ್ತವನ್ನು ಆತನು ನಿರಾಕರಿಸಬೇಕಾಗಿರಲಿಲ್ಲ.
ಯೇಸುವು ಸಹ ಸರ್ವವಿಷಯಗಳಲ್ಲೂ ನಮ್ಮ ಹಾಗೆಯೇ ಶೋಧಿಸಲ್ಪಟ್ಟನು (ಇಬ್ರಿ. 4:15), ಆದರೆ ಯಾವ ಒಂದು ಶೋಧನೆಗೂ ಆತನು ತನ್ನ ಮನಸ್ಸಿನಲ್ಲಿ ಎಂದಿಗೂ ಸಮ್ಮತಿ ಕೊಡದೆ ಹೋದ ಕಾರಣ, ಆತನು ಎಂದಿಗೂ ಪಾಪಮಾಡಲಿಲ್ಲ (ಯಾಕೋಬನು 1:15). ನಮ್ಮ ಜೀವಿತದಲ್ಲಿ ನಾವು ಎದುರಿಸುವ ಪ್ರತಿಯೊಂದು ಶೋಧನೆಯನ್ನೂ, ನಮ್ಮ ಕರ್ತನಾದ ಯೇಸುವು ತನ್ನ ಭೂಲೋಕದ ಜೀವಿತದಲ್ಲಿ ಎದುರಿಸಿದನು ಮತ್ತು ಜಯಗಳಿಸಿದನು.
ನಮ್ಮೆಲ್ಲರಿಗೂ ಗೊತ್ತು, ಒಂದು ದಿನವಾದರೂ ಪಾಪಮಾಡದೆ ಜೀವಿಸುವುದು ಎಷ್ಟು ಕಷ್ಟವೆಂದು! ಆದ್ದರಿಂದ, "ಯೇಸು ಮಾಡಿದ ಅತಿ ಮಹತ್ತಾದ ಮಹತ್ಕಾರ್ಯವೆಂದರೆ, 33 ವರ್ಷಗಳಿಗೂ ಹೆಚ್ಚು ಕಾಲ, ಪ್ರತಿದಿನವೂ ಎಲ್ಲ ವಿಷಯಗಳಲ್ಲು ನಮ್ಮಂತೆಯೇ ಶೋಧಿಸಲ್ಪಟ್ಟರೂ, ಆತನು ಪಾಪ ಮಾಡದೆ ಜೀವಿಸಿದ್ದು"- ಎಂದು ನಾವು ಹೇಳಬಹುದು. ಆತನು ಮರಣದವರೆಗೂ ಪಾಪವನ್ನು ಎದುರಿಸಿದನು (ನಿರಾಕರಿಸಿದನು). ಮತ್ತು ಆತನು ತಾನು ಹುಟ್ಟಿದಂದಿನಿಂದ ತನ್ನ ಮರಣದವರೆಗೂ ತಂದೆಯಿಂದ ಕೃಪೆಯನ್ನು ಸ್ವೀಕರಿಸಿದನು (ಲೂಕ. 2:40, ಇಬ್ರಿ. 2:9); ಯಾಕೆಂದರೆ, ಆತನು ಜೋರಾಗಿ ಅಳುತ್ತಾ, ಕಣ್ಣೀರಿಡುತ್ತಾ ಕೃಪೆಗಾಗಿ ಹಂಬಲಿಸಿ ಬೇಡಿದ್ದರಿಂದ (ಇಬ್ರಿ. 5:7 ಮತ್ತಾ. 12:3-4).
ನಮ್ಮ ಮುಂದಾಗಿ ಹೋದಾತನಾದ ಯೇಸುವು - ನಮ್ಮ ಸ್ವಂತ ಚಿತ್ತವನ್ನು ಪ್ರತಿದಿನವೂ ಮರಣಕ್ಕೆ ಒಪ್ಪಿಸುವಂತೆಯೂ, ಅದಕ್ಕಾಗಿ ಶಿಲುಬೆಯನ್ನು ಹೊರುವಂತೆಯೂ, ಆತನನ್ನು (ಆತನ ಮಾದರಿಯನ್ನು) ಹಿಂಬಾಲಿಸುವಂತೆಯೂ ನಮ್ಮನ್ನು ಈಗ ಕರೆಯುತ್ತಿದ್ದಾನೆ (ಲೂಕ. 9:23).
ನಾವು ಪಾಪವನ್ನು ಸಾಕಷ್ಟು ಗಂಭೀರತೆಯಿಂದ ಎದುರಿಸದೆ ಹೋಗುವವರಾದ್ದರಿಂದಲೂ ಮತ್ತು ಅದನ್ನು ಜಯಿಸಲು ತಂದೆಯಿಂದ ಕೃಪೆಯನ್ನು ಕೇಳದೆ ಹೋಗುವವರಾದ್ದರಿಂದಲೂ ಪಾಪದಲ್ಲಿ ಬೀಳುತ್ತೇವೆ. ಈ ದಿನ ನಾವು ಯೇಸುವನ್ನು, ನಮ್ಮ ಜೀವಿತದ ಬಾಹ್ಯ ಕ್ರಿಯೆಗಳಾದ - ಬಡಗಿ ಕೆಲಸದಲ್ಲಾಗಲಿ, ಬ್ರಹ್ಮಚರ್ಯತ್ವದಲ್ಲಾಗಲಿ ಅಥವಾ ನೀರಿನ ಮೇಲೆ ನಡೆಯುವ ಅಥವಾ ಸತ್ತವರನ್ನು ಎಬ್ಬಿಸುವಂಥಹ, ಆತನ ಸೇವೆಯನ್ನಾಗಲಿ ಆತನನ್ನು ಹಿಂಬಾಲಿಸುವಂತೆ ಕೇಳಲ್ಪಡದೆ, ಆತನು ಪಾಪವನ್ನು ಜಯಿಸಿದಂತೆ ನಾವೂ ನಂಬಿಗಸ್ತರಾಗಿರಲು ಕೇಳಲ್ಪಟಿದ್ದೇವೆ.
ಪವಿತ್ರಾತ್ಮನು, ಯೇಸುವಿನ ವಿಷಯವಾಗಿ ನಾವು ಎರಡು ಅರಿಕೆಗಳನ್ನು ಮಾಡುವಂತೆ ನಮ್ಮನ್ನು ಪ್ರೇರಿಸುತ್ತಾನೆ. ಒಂದು-'ಆತನು ಕರ್ತನಾಗಿದ್ದಾನೆ' ಎಂದು. ಮತ್ತೊಂದು , 'ಆತನು ಮಾಂಸಿಕನಾಗಿ (ಶರೀರಧಾರಿಯಾಗಿ) ಬಂದನು' ಎಂದು (1 ಕೊರಿ. 12:3; 1 ಯೋಹಾ 4:2-3). ಎರಡೂ ಅರಿಕೆಗಳು ಸಮಾನವಾಗಿ ಪ್ರಾಮುಖ್ಯವಾಗಿವೆ. ಆದರೆ ಎರಡನೆಯದು ಇನ್ನೂ ಹೆಚ್ಚಾಗಿ ಪ್ರಮುಖವಾದಂಥದ್ದಾಗಿದೆ. ಯಾಕೆಂದರೆ, ಕ್ರಿಸ್ತವಿರೋಧಿಯ ಆತ್ಮನನ್ನು (ಆತ್ಮವುಳ್ಳವನನ್ನು) ಗುರುತಿಸುವ ಚಿಹ್ನೆ ಯಾವುದೆಂದರೆ, ಆತನು , 'ಯೇಸುವು ಶರೀರಧಾರಿಯಾಗಿ (ಮಾಂಸಧಾರಿ) ಬಂದನು' ಎಂದು ಅರಿಕೆಮಾಡಲಾರನು (ಒಪ್ಪಿಕೊಳ್ಳಲಾರನು)- ಎಂಬುದಾಗಿ ನಮಗೆ ಹೇಳಲ್ಪಟ್ಟಿದೆ (2 ಯೋಹಾ 1:7).
ಇಂದು, ಮಾನವನಾದ ಕ್ರಿಸ್ತಯೇಸುವು (1 ತಿಮೊ. 2:5), "ಅನೇಕ ಸಹೋದರರಲ್ಲಿ ಮೊದಲು ಹುಟ್ಟಿದವನಾಗಿದ್ದಾನೆ" (ನಮ್ಮ ಹಿರಿಯ ಸಹೋದರನಾಗಿದ್ದಾನೆ); ಮತ್ತು ಆತನ ತಂದೆಯು ನಮಗೂ ತಂದೆಯಾಗಿದ್ದಾನೆ (ರೋಮಾ. 8:29,ಯೋಹಾನನು 20:17; ಎಫೆ. 1:3; ಇಬ್ರಿ. 2:11).
ಯೇಸುವು ಭೂಲೋಕಕ್ಕೆ ಬಂದಾಗ ತಾನು ದೇವರಾಗಿರುವುದನ್ನು ನಿಲ್ಲಿಸಲಿಲ್ಲ (ಯೋಹಾ. 10:33). ಆತನು ಪರಲೋಕಕ್ಕೆ ಹಿಂತಿರುಗಿ ಹೋದಾಗಲೂ ಮಾನವನಾಗಿರಲು ನಿಲ್ಲಿಸಲಿಲ್ಲ (1 ತಿಮೊ. 2:5).
ರಕ್ಷಣೆಯ ವಿಷಯವಾದ ಸತ್ಯವುದೇವರ ವಾಕ್ಯದಲ್ಲಿ ರಕ್ಷಣೆಯು ತ್ರಿಕಾಲದಲ್ಲಿದೆ - ಭೂತಕಾಲ (ಎಫೆ. 2:8), ವರ್ತಮಾನಕಾಲ (ಫಿಲಿ. 2:12) ಹಾಗೂ ಭವಿಷ್ಯತ್‍ಕಾಲ (ರೋಮಾ. 13:11) - ಅಥವಾ ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ, ರಕ್ಷಣೆಯು ನೀತಿ ನಿರ್ಣಯ, ಶುದ್ಧೀಕರಣ ಹಾಗೂ ಮಹಿಮೆ ಹೊಂದುವುದಾಗಿದೆ.
ರಕ್ಷಣೆಯು ಅಡಿಪಾಯ ಹಾಗೂ ಬಹು ಮಹಡಿಯ ಕಟ್ಟಡವಾಗಿವೆ. ಅಡಿಪಾಯವು ಪಾಪಕ್ಷಮೆ ಮತ್ತು ನೀತಿ ನಿರ್ಣಯವಾಗಿದೆ. ನೀತಿ ನಿರ್ಣಯವು ಪಾಪಕ್ಷಮೆಗಿಂತ ಹೆಚ್ಚಿನದಾಗಿದೆ.
ನೀತಿನಿರ್ಣಯವು ಅಂದರೆ, ಕ್ರಿಸ್ತನ ಮರಣ, ಪುನರುತ್ಥಾನ ಹಾಗೂ ದಿವ್ಯಾರೋಹಣದ ಮೇಲೆ ಆಧಾರವಾಗಿರುವ ನಮ್ಮ ಪಾಪದ ಕ್ಷಮಾಪಣೆಯ ಮೂಲಕವಾಗಿ ನಾವು ದೇವರ ದೃಷ್ಟಿಯಲ್ಲಿ ನೀತಿವಂತರೆಂದು ನಿರ್ಣಯಿಸಲ್ಪಡುವುದು. ಇದು ನಮ್ಮ ಪುಣ್ಯಕ್ರಿಯೆಗಳಿಂದ ಆಗುವಂಥದ್ದಲ್ಲ (ಎಫೆ. 2:8,9). ನಮ್ಮ ಪುಣ್ಯಕ್ರಿಯೆಗಳು ದೇವರ ದೃಷ್ಟಿಯಲ್ಲಿ ಹೊಲೆ ಬಟ್ಟೆಯ ಹಾಗಿವೆ ( ಯೆಶಾ. 64:6). ನಾವು ಕ್ರಿಸ್ತನ ನೀತಿಯಿಂದ ಹೊಂದಿಸಲ್ಪಟ್ಟಿದ್ದೇವೆ (ಗಲಾ. 3:27). ನೀತಿವಂತರೆಂಬ ನಿರ್ಣಯ ಹೊಂದುವುದಕ್ಕೆ ಪಶ್ಚಾತ್ತಾಪ ಹಾಗೂ ನಂಬಿಕೆಯು ಮುಖ್ಯವಾಗಿವೆ (ಅ.ಕೃ. 20:21). ನಿಜ ಮಾನಸಾಂತರವು ನಷ್ಟ ಪರಿಹಾರಮಾಡುವದು ಹಣವನ್ನು ವಾಪಸ್ ಮಾಡುವದು, ನಮ್ಮದಲ್ಲದ ವಸ್ತುಗಳನ್ನಾಗಲೀ ಹಣವನ್ನಾಗಲೀ, ಸುಂಕವನ್ನಾಗಲಿ ಇತರರಿಗೆ ಹಿಂತಿರುಗಿಸುವದು, ಯಾರಿಗಾದರೂ ನಾವು ತಪ್ಪು ಮಾಡಿದ್ದರೆ ಕ್ಷಮೆಯಾಚಿಸುವದು (ಲೂಕ 19:8,9) ದೇವರು ನಮ್ಮನ್ನು ಕ್ಷಮಿಸುವಾಗ ನಾವೂ ಸಹ ಇತರರನ್ನು ಕ್ಷಮಿಸಲು ಆತನು ಬಯಸುತ್ತಾನೆ. ನಾವು ಇದನ್ನು ಮಾಡದೆ ಹೋದರೆ ದೇವರು ನಮ್ಮ ಪಾಪ ಕ್ಷಮೆಯನ್ನು ರದ್ದು ಮಾಡುತ್ತಾನೆ. ( ಮತ್ತಾಯ 18:23-35).
ಪಶ್ಚತ್ತಾಪವೂ ನಂಬಿಕೆಯೂ ನಮ್ಮನ್ನು ನೀರಿನೊಳಗೆ ಮುಳುಗಿಸಿ ದೀಕ್ಷಾಸ್ನಾನಕ್ಕೆ ನಡೆಸಬೇಕು ಇದರಿಂದ ನಾವು ಬಹಿರಂಗವಾಗಿ ದೇವರಿಗೆ, ಮನುಷ್ಯರಿಗೆ ಹಾಗೂ ಸೈತಾನನಿಗೆ ನಮ್ಮ ಹಳೇ ಮನುಷ್ಯನು (ಪೂರ್ವ ಸ್ವಭಾವವು) ಹೂಳಲ್ಪಟ್ಟನೆಂದು ಸಾಕ್ಷಿ ಕೊಡುತ್ತೇವೆ (ರೋಮಾ 6:4-6).
ನಂತರ ನಾವು ನಮ್ಮ ಬಾಯಿಯಿಂದಲೂ, ಜೀವಿತದಿಂದಲೂ ಬಲವಾದ ಸಾಕ್ಷಿಗಳಾಗುವದಕ್ಕಾಗಿ ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಹೊಂದಬಲ್ಲೆವು (ಅ.ಕೃ. 1:8) ಪವಿತ್ರಾತ್ಮನ ಸಂಪೂರ್ಣತೆಯು ವಾಗ್ದಾನವಾಗಿದೆ ಅದನ್ನು ನಾವು ಹುಡುಕಬೇಕು (ಲೂಕ 11:13) ಇದು ನಂಬಿಕೆಯಿಂದ ದೇವರ ಮಕ್ಕಳೆಲ್ಲರಿಗೆ ದೊರೆಯುವದು (ಮತ್ತಾಯ 3:11).
ಪ್ರತಿ ವಿಶ್ವಾಸಿಯ ಹೃದಯದಲ್ಲಿ ಪವಿತ್ರಾತ್ಮನು ನಾವು ದೇವರ ಮಕ್ಕಳಾಗಿದ್ದೇವೆಂದು ಹೇಳುವ ಭಾಗ್ಯ ನಮಗಿದೆ (ರೋಮಾ. 8:16) ಮತ್ತು ನಾವು ಆತನಿಂದ ತುಂಬಿಸಲ್ಪಟ್ಟಿದ್ದೇವೆ (ಎಫೆ. 5:18).
ಶುದ್ದೀಕರಣವೆಂದರೆ ನಾವು ಪಾಪದಿಂದಲೂ ಈ ಲೋಕದಿಂದಲೂ ಪ್ರತ್ಯೇಕಿಸಲ್ಪಡುವದು. ಇದು ನಾವು ಹೊಸದಾಗಿ ಹುಟ್ಟಿದಂದಿನಿಂದ (1 ಕೊರಿ. 1:2) ನಮ್ಮ ಭೂಲೋಕದ ಜೀವಿತದ ಅಂತ್ಯದವರೆಗೆ ಮುಂದುವರಿಯುತ್ತದೆ (1 ಥೆಸ. 5:23-24). ದೇವರು ತನ್ನ ಆಜ್ಞೆಗಳನ್ನು ಪವಿತ್ರಾತ್ಮನ ಮೂಲಕವಾಗಿ ನಮ್ಮ ಮನಸ್ಸಿನಲ್ಲಿ ಬರೆಯುವುದರ ಮೂಲಕ ಈ ಕಾರ್ಯವನ್ನು ಪ್ರಾರಂಭಿಸುವನು (ಇಬ್ರಿ. 8:10); ಆದರೆ ನಾವು ಮನೋಭೀತಿಯಿಂದ ನಡುಗುವವರಾಗಿ ನಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಬೇಕು (ಫಿಲಿ. 2:12-13). ಆತ್ಮನು ಕೊಡುವ ಬಲದಿಂದ ನಾವು ನಮ್ಮ ದೇಹದ ದುರಭ್ಯಾಸಗಳನ್ನು ನಾಶಮಾಡಬೇಕು (ರೋಮಾ. 8:13). ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರಬೇಕು (2 ಕೊರಿ. 7:1).
ಒಬ್ಬ ಶಿಷ್ಯನು ಈ ಕಾರ್ಯದಲ್ಲಿ ಪವಿತ್ರಾತ್ಮನೊಂದಿಗೆ ತೀವ್ರವಾಗಿ, ಪೂರ್ಣ ಹೃದಯದಿಂದ ಸಹಕರಿಸುವಾಗ, ಶುದ್ಧೀಕರಣ ಕಾರ್ಯವು ಬೇಗನೆ ಅಭಿವೃದ್ಧಿಗೊಳ್ಳುತ್ತದೆ. ಇನ್ನೊಬ್ಬ ಸೋಮಾರಿಯು ಆತ್ಮನ ನಡೆಸುವಿಕೆಗೆ ಹೆಚ್ಚು ಪ್ರತಿಕ್ರಿಯೆ ತೋರಿಸದೇ ಹೋದಲ್ಲಿ ಈ ಕಾರ್ಯವು ಸಾವಧಾನವಾಗಿ ನಡೆಯಬಹುದು ಅಥವಾ ಸ್ಥಗಿತಗೊಳ್ಳಬಹುದು.
ಶೋಧನೆಯ ಸಮಯವೇ ನಾವು ಪೂರ್ಣ ಹೃದಯದಿಂದ ಶುದ್ಧೀಕರಣವನ್ನು ಬಯಸುತ್ತೇವೋ ಇಲ್ಲವೋ ಎನ್ನುವುದಕ್ಕೆ ಪರೀಕ್ಷೆಯಾಗಿದೆ.
ಶುದ್ಧೀಕರಣವೆಂದರೆ ನಮ್ಮೊಳಗೆ ಧರ್ಮಶಾಸ್ತ್ರದ ನಿಯಮವು ನೆರವೆರುವುದೇ - ಆ ಹಳೇ ಒಡಂಬಡಿಕೆಯ ಕಾಲದಲ್ಲಿ ಇದು ಹೊರಭಾಗದಲ್ಲಿ ಮಾತ್ರವೇ ನೆರವೇರಿಸಲ್ಪಡುತ್ತಿತ್ತು (ರೋಮಾ. 8:4). ಇದನ್ನೇ ಯೇಸುವು ಮತ್ತಾಯ 5:17-48 ರಲ್ಲಿ ಒತ್ತಿಹೇಳಿದ್ದಾನೆ.
ಯೇಸುವಿನ ಪ್ರಕಾರ, ದೇವರನ್ನು ಪೂರ್ಣ ಹೃದಯದಿಂದ ಪ್ರೀತಿಸುವುದು ಮತ್ತು ನಮ್ಮ ನೆರೆಯವರನ್ನು ನಮ್ಮಂತೆಯೇ ಪ್ರೀತಿಸುವುದೇ ಧರ್ಮಶಾಸ್ತ್ರದ ಆಧಾರವಾಗಿವೆ (ಮತ್ತಾ. 22:36-40).
ದೇವರ ಸ್ವಭಾವವಾಗಿರುವ ಪ್ರೀತಿ ಎಂಬ ಆಜ್ಞೆಯನ್ನು ದೇವರು ಈಗ ನಮ್ಮ ಹೃದಯದಲ್ಲಿ ಬರೆಯಲು ಕಾತುರನಾಗಿದ್ದಾನೆ (ಇಬ್ರಿ. 8:10; 2 ಪೇತ್ರ. 1:4). ಇದು ಬಾಹಿರವಾಗಿ ಗೋಚರವಾದುವುದು ಹೇಗೆಂದರೆ ನಮ್ಮ ಪ್ರಜ್ಞಾಜೀವಿತದಲ್ಲಿ ಎಲ್ಲಾ ಪಾಪಗಳ ಮೇಲೆ ಜಯ ಹಾಗೂ ಯೇಸುವಿನ ಎಲ್ಲಾ ಆಜ್ಞೆಗಳಿಗೆ ನಾವು ವಿಧೇಯರಾಗುತ್ತೇವೆ (ಯೋಹಾ. 14:15).
ಯೇಸುವಿನ ಶಿಶ್ಯತ್ವದ ಕರಾರುಗಳನ್ನು ಪಾಲಿಸದೇ ನಾವು ಈ ಜೀವಿತವನ್ನು ಪ್ರವೇಶಿಸುವುದು ಅಸಾಧ್ಯ (ಲೂಕ 14:26-33). ಸಂಕ್ಷಿಪ್ತವಾಗಿ ಇದರ ಅರ್ಥವೇನೆಂದರೆ, ನಾವು ನಮ್ಮ ಸಂಬಂಧಿಕರಿಗಿಂತಲೂ, ನಮ್ಮ ಸ್ವಾರ್ಥ ಜೀವಿತಕ್ಕೂ ಮೇಲಾಗಿ ಕರ್ತನಿಗೇ ಪ್ರಥಮ ಸ್ಥಾನ ಕೊಡುವುದು ಮತ್ತು ಲೌಕಿಕ ವಸ್ತುಗಳಿಂದ ಹಾಗೂ ಸಂಪತ್ತುಗಳಿಂದ ನಮ್ಮನ್ನು ಪ್ರತ್ಯೇಕಿಸಿಕೊಳ್ಳುವುದು.
ನಾವು ಪ್ರಾರಂಭದಲ್ಲಿ (ಮೊದಲು) ಹಾದುಹೋಗಬೇಕಾದ ಇಕ್ಕಾಟಾದ ಬಾಗಿಲು ಇದೇ. ನಂತರ ಬರುವುದು - ಶುದ್ಧೀಕರಣವೆಂಬ ಇಕ್ಕಾಟ್ಟಾದ ಮಾರ್ಗ. ಯಾರೆಲ್ಲಾ ಶುದ್ಧೀಕರಣವನ್ನು ಅನುಸರಿಸಿ (ಬೆನ್ನಟ್ಟಿ) ಹೋಗುವುದಿಲ್ಲವೋ ಅವರು ಕರ್ತನನ್ನು ಎಂದಿಗೂ ಕಾಣಲಾರರು. (ಇಬ್ರಿ. 12:14).
ನಾವು ಈ ಜೀವಿತದಲ್ಲಿ ನಮ್ಮ ಮನಃಸಾಕ್ಷಿಗೆ ಅನುಸಾರವಾಗಿ ಪರಿಪೂರ್ಣವಾಗಿ ಜೀವಿಸಲು ಸಾಧ್ಯವಾದರೂ (ಇಬ್ರಿ. 7:19; 9:9,14), ಯೇಸುವಿನ ಬರೋಣದವರೆಗೆ ನಾವು ಪಾಪವಿಲ್ಲದೇ ಪರಿಪೂರ್ಣರಾಗಿ ಜೀವಿಸಲು ಸಾಧ್ಯವಿಲ್ಲ (1 ಯೋಹಾ 3:2). ನಾವು ಆತನ ಹಾಗೆ ಇರಲು ಆಗ ಮಾತ್ರ ಸಾಧ್ಯ. ಆದರೆ ಈಗ ನಾವು ಆತನು ನಡೆದಂತೆಯೇ ನಡೆಯಲು ಪ್ರಯತ್ನಿಸಬೇಕು (1 ಯೋಹಾ 2:6).
ನಾವು ಎಷ್ಟೇ ಹೆಚ್ಚಾಗಿ ಶುದ್ಧೀಕರಣಗೊಂಡಿದ್ದರೂ, ಎಲ್ಲಿಯವರೆಗೂ ನಾವು ಈ ಭ್ರಷ್ಟ ಶರೀರವನ್ನು ಹೊಂದಿರುತ್ತೇವೋ, ಅಲ್ಲಿಯವರೆಗೂ ತಿಳಿಯದ ಪಾಪಗಳು (unconscious sins) ನಮ್ಮಲ್ಲಿ ಕಂಡುಬರುತ್ತವೆ (1 ಯೋಹಾ 1:8). ಆದರೆ ಈಗಲೂ ನಾವು ಹೃದಯಪೂರ್ವಕವಾಗಿದ್ದರೆ (1 ಕೊರಿ. 4:4), ನಮ್ಮ ಮನಸ್ಸಾಕ್ಷಿಯಲ್ಲಿ ನಾವು ಪರಿಪೂರ್ಣ(ದೋಷವಿಲ್ಲದವ)ರಾಗಿರಬಹುದು (ಅ.ಕೃ. 24:16). ಮತ್ತು ತಿಳಿದೂ ಮಾಡುವ ಪಾಪದಿಂದ ಕೂಡ ಬಿಡುಗಡೆಹೊಂದಬಹುದು (1 ಯೋಹಾ 2:1).
ಹೀಗೆ ನಾವು ಯೇಸುವಿನ ಎರಡನೇ ಬರೋಣ ಹಾಗೂ ನಮ್ಮ ರಕ್ಷಣೆಯ ಕೊನೆಯ ಭಾಗವಾದ-ನಾವು ಮಹಿಮಾರೂಪಹೊಂದುವುದನ್ನು, ಎದುರು ನೋಡುವವರಾಗಿದ್ದೇವೆ, ಆಗ ನಾವು ಪಾಪರಹಿತಪೂರ್ಣರಾಗಿರುವೆವು (ರೋಮಾ. 8:23; ಫಿಲಿ. 3:21).
ಸಭೆಯ ವಿಷಯವಾದ ಸತ್ಯವುಸಭೆಯು ಕ್ರಿಸ್ತನ ದೇಹವಾಗಿದೆ; ಅದಕ್ಕೆ ಒಂದೇ ಶಿರಸ್ಸು - ಕ್ರಿಸ್ತನು; ಮತ್ತು ಅದರ ಕೇಂದ್ರ ಕಾರ್ಯಾಲಯವು (headquarters) ಒಂದು ಮಾತ್ರ - ಮೂರನೇ ಆಕಾಶವು. ಕ್ರಿಸ್ತನ ದೇಹವಾದ ಸಭೆಯಲ್ಲಿ ಪ್ರತಿಯೊಬ್ಬರಿಗೂ ಕೆಲಸವಿದೆ (ಎಫೆ. 4:16). ಕೆಲವರಿಗೆ ಬಹಳ ಪ್ರಾಮುಖ್ಯವಾದ, ಗೋಚರವಾದ ಸೇವೆ ಇರಬಹುದು ಆದರೆ ಪ್ರತಿಯೂಬ್ಬನಿಗೂ ಅಮೂಲ್ಯವಾದ ಸೇವೆಯಿದೆ. ಇತರ ಪಂಗಡಗಳಲ್ಲಿ ಈ ರೀತಿ ಇಲ್ಲದೇ ಇರುವ ಸಭೆಗಳು ಯೇಸುವು ಕಟ್ಟುವ ಸಭೆಗಳಲ್ಲ, ಅವು ಕೇವಲ ಮಾನವನ ಕೆಲಸಗಳು.
ಕ್ರಿಸ್ತನು ತನ್ನ ದೇಹವಾದ ಸಭೆಯ ಅಭಿವೃದ್ಧಿಗೋಸ್ಕರ ಕೆಲವರನ್ನು ಅಪೋಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ, ಕೆಲವರನ್ನು ಸೌವಾರ್ತಿಕರನ್ನಾಗಿಯೂ, ಕೆಲವರನ್ನು ಸಭಾಪಾಲಕರನ್ನಾಗಿಯೂ, ಉಪದೇಶಿಗಳನ್ನಾಗಿಯೂ ಅನುಗ್ರಹಿಸಿದನು (ಎಫೆಸ. 4:11). ಇವುಗಳು ಸೇವೆಯಾಗಿವೆಯೇ ಹೊರತು ಬಿರುದುಗಳಲ್ಲ. ಅಪೋಸ್ತಲರು ಸ್ಥಳೀಯ ಸಭೆಗಳನ್ನು ಕಟ್ಟುವದಕ್ಕಾಗಿ ದೇವರಿಂದ ಕಳುಹಿಸಲ್ಪಟ್ಟವರು. ಅಪೋಸ್ತಲರು ದೇವರಿಂದ ಕರೆಯಲ್ಪಟ್ಟು ಕೆಲವು ನಿರ್ದಿಷ್ಟವಾದ ಕಾರ್ಯಗಳಿಗೋಸ್ಕರ ಕಳುಹಿಸಲ್ಪಟ್ಟವರು (2 ಕೊರಿ. 10:13). ಅಪೋಸ್ತಲರು ತಮ್ಮ ಸಬೆಗಳ ಹಿರಿಯರಿಗೆ, ಹಿರಿಯರಾಗಿರುವರು. ಅವರಿಗೆ ಸಭೆಯಲ್ಲಿ ಮೊದಲನೆಯ ಸ್ಥಾನವಿದೆ (1 ಕೊರಿ. 12:28). ಪ್ರವಾದಿಗಳು ದೇವಜನರ ಅಂತರ್ಯದ ಕೊರತೆಗಳನ್ನು ನೀಗಿಸುವವರಾಗಿದ್ದಾರೆ. ಸೌವಾರ್ತಿಕರು ಅನ್ಯರನ್ನು ಕ್ರಿಸ್ತನ ಬಳಿಗೆ ಕರೆಕೊಂಡು ಬರುವವರು. ಇವರು ಕ್ರಿಸ್ತನ ದೇಹವಾದ ಸ್ಥಳೀಯ ಸಭೆಗಳಿಗೆ ಈ ಹೊಸ ಕ್ರೈಸ್ತರನ್ನು ಸೇರಿಸತಕ್ಕದ್ದು (ಇಲ್ಲಿಯೇ ಆಧುನಿಕ ಸುವಾರ್ತೆ ಸೇವೆಯು ವಿಫಲವಾಗಿದೆ). ಸಭಾಪಾಲಕಾರು (shepherds) ಕುರುಬರು - ಚಿಕ್ಕ ಕುರಿಮರಿಗಳನ್ನು ಹಾಗೂ ಕುರಿಗಳನ್ನು ದಕ್ಷತೆಯಿಂದ ಪರಾಂಬರಿಸಿ ನಡೆಸುವವರು. ಉಪದೇಶಿಕರು ಶಾಸ್ತ್ರವನ್ನು (ದೇವರ ವಾಕ್ಯವನ್ನು) ವಿವರಿಸಿ ಬೋಧಿಸುವವರು. ಈ ಐದು ವರಗಳು ಲೋಕದಲ್ಲಿರುವ ಎಲ್ಲಾ ಸಭೆಗಳಿಗೋಸ್ಕರವಾಗಿವೆ. ಆದರೆ ಇವೆಲ್ಲವುಗಳಲ್ಲಿ ಪ್ರಾಮುಖ್ಯವಾಗಿ ಕುರುಬರ ಮತ್ತು ಪ್ರವಾದಿಗಳ ಸೇವೆಗಳು ಅಗತ್ಯವಾದವುಗಳು. ಉಳಿದ ಮೂರು ಸೇವೆಗಳು ಸಂಚರಿಸುವ ಸೇವಕರಿಗೆ ಅನ್ವಯಿಸುತ್ತದೆ.
ಸ್ಥಳೀಯ ಸಭೆಯ ನಾಯಕ್ತ್ವವು ಹಿರಿಯರ (elders) ಕೈಯಲ್ಲಿರಬೇಕು. ಇದನ್ನೇ ಹೊಸ ಒಡಂಬಡಿಕೆಯು ಸ್ಪಷ್ಟವಾಗಿ ಬೋಧಿಸುತ್ತದೆ (ತೀತ.1:5; ಅ.ಕೃ. 14:23). "ಹಿರಿಯರು" ಎಂಬ ಪದವು ಬಹುವಚನವಾಗಿದ್ದು, ಪ್ರತೀ ಸಭೆಯಲ್ಲಿ ಕನಿಷ್ಠ ಇಬ್ಬರು ಹಿರಿಯರು ಇರಬೇಕು. ಸ್ಥಳಿಯ ಸಭೆಯ ನಾಯಕತ್ವದಲ್ಲಿ ಕನಿಷ್ಟ ಇಬ್ಬರು ಇರುವದರಿಂದ ಸಭೆಯಲ್ಲಿ ಸಮತೋಲನೆ ಇರುವದಲ್ಲದೆ ಒಗ್ಗಟ್ಟಾಗಿ ಅವರು ಕರ್ತನ ಪ್ರಸನ್ನತೆಯಿಂದ ಸೈತಾನನ ಕುತಂತ್ರಗಳನ್ನು ಬಂದಿಸಬಹುದು (ಮತ್ತಾಯ 18: 18-20). ಒಬ್ಬ ಮನುಷ್ಯನ ನಾಯಕತ್ವದಲ್ಲಿರುವ ಸಭೆಯು ಹೊಸ ಒಡಂಬಡಿಕೆಯ ಬೋಧನೆಗೆ ವಿರೋಧವಾಗಿದೆ. ಆದರೆ ಇಬ್ಬರು ಹಿರಿಯರಲ್ಲಿ ಒಬ್ಬಾತನು (- ಆತನು ದೇವವಾಕ್ಯದಲ್ಲಿ ಕುಶಲತೆ ಹೊಂದಿದವನಾಗಿದ್ದಲ್ಲಿ -) 'ಸಭೆಯ ದೂತನು' ಅಥವಾ ಸಂದೇಶಕನಾಗಿರಬಹುದು (ಪ್ರಕ. 2:1). ಸ್ಥಳಿಯ ಸಭಿಕರು, ಹಿರಿಯರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು (ಇಬ್ರಿ 13:17, 1 ಥೆಸ. 5:12,13).
ಯೇಸುವು ತನ್ನ ಶಿಷ್ಯರಿಗೆ ಬಿರುದುಗಳು ಇರಬಾರದು ಎಂದು ಹೇಳಿದನು (ಮತ್ತಾ. 23:7-12). ರಬ್ಬೀ, ತಂದೆ (Father), ಪಾಸ್ಟರ್, ರೆವರೆಂಡ್ ಅಥವಾ ನಾಯಕನೆಂಬ ಬಿರುದುಗಳು ದೇವರ ವಾಕ್ಯಕ್ಕೆ ವಿರೋಧವಾಗಿವೆ. "ರೆವರೆಂಡ್" ಎಂಬೀ ಪದವು ಸತ್ಯ ವೇದದಲ್ಲಿ ಒಂದೇ ಸಾರಿ ದೇವರಿಗೆ ಉಪಯೋಗಿಸಲ್ಪಟ್ಟಿದೆ (ಕೀರ್ತ. 111:9 - KJV) . (ಅದನ್ನು ಉಪಯೋಗಿಸುವವನು ದೇವರ ಹಾಗೆ ಆಗಬೇಕೆನ್ನುವ ಲೂಸೀಫರನ ಪಾಪದಲ್ಲಿ ಬೀಳುತ್ತಾನೆ.) ಸಭೆಯಲ್ಲಿ ಪ್ರತಿಯೊಬ್ಬನೂ ಕೇವಲ ಸಹೋದರನೂ ಸೇವಕನೂ ಆಗಿರಬೇಕು.
ವಾಕ್ಯದ ಉಪದೇಶಕ್ಕಾಗಿ (ಅ. ಕೃ. 20: 9,11) ಪ್ರಾರ್ಥನೆಗಾಗಿ (ಅ. ಕೃ. 12: 5,12), ಸುವಾರ್ತೆ ಕೂಟಗಳು (ಅ. ಕೃ. 2:14-40) ಒಬ್ಬರನ್ನೂಬ್ಬರು ಉತ್ತೇಜಿಸುವದಕ್ಕಾಗಿ (ಇಬ್ರಿ 3:13) ಸ್ಥಳೀಯ ಸಭೆಯಲ್ಲಿ ಕೂಟಗಳನ್ನು ಏರ್ಪಡಿಸಬಹುದು. ಸ್ಥಳೀಯ ಸಭೆಯಲ್ಲಿ ಪ್ರತಿಯೊಬ್ಬ ಶಿಷ್ಯನಿಗೂ ಪ್ರವಾದಿಸಲು ಅವಕಾಶವಿರಬೇಕು (1 ಕೊರಿ. 14:26-40). ಪ್ರವಾದಿಸುವ ವರವನ್ನು ಎಲ್ಲರೂ ಅಪೇಕ್ಷಿಸಬೇಕು (1 ಕೊರಿ. 14:1, 39). ಅನ್ಯಭಾಷೆಯು ವೈಯಕ್ತಿಕ ಅಭಿವೃದ್ಧಿಗೋಸ್ಕರವಿದ್ದರೂ (1 ಕೊರಿಂಥ 14:4,18,19) ಅದರ ಅರ್ಥ ಹೇಳುವವನಿದ್ದರೆ ಅದನ್ನು ಸಭೆಯಲ್ಲಿ ಆಡಬಹುದು (1 ಕೊರಿ. 14:27). ಅನ್ಯಬಾಷೆಯ ಪ್ರಕಟಣೆಯಾಗಲಿ, ಬುದ್ದಿ ಮಾತಾಗಲಿ, ಪ್ರವಾದನೆಯಾಗಲಿ, ಭೋಧನೆಯಾಗಲಿ ಅಥವಾ ಪ್ರಾರ್ಥನೆಯಾಗಿರಬಹುದು. 1 ಕೊರಿ. 12:8-10, 28 ಮತ್ತು ರೋಮಾ. 12:6-8 ರಲ್ಲಿ ಹೇಳಿದ ಎಲ್ಲಾ ವರಗಳು ಕ್ರಿಸ್ತನ ದೇಹದ ಅಭಿವೃದ್ಧಿಗೋಸ್ಕರವಾಗಿವೆ. ಆತ್ಮನ ವರಗಳನ್ನು ಹೀನೈಸುವ (ಅಥವಾ ಕಡೆಗಣಿಸುವ) ಸಭೆಯು ಅವುಗಳನ್ನು ಹೊಂದಲಾರದು, ಹೀಗಾಗಿ ಅವು ಬಲಹೀನವಾದ ಸಭೆಗಳಾಗಿರುತ್ತವೆ.
ಸ್ತೀಯರು ತಮ್ಮ ತಲೆಯನ್ನು ಮುಚ್ಚಿಕೊಂಡು ಪ್ರಾರ್ಥಿಸಲು ಅಥವಾ ಪ್ರವಾದಿಸಬಹುದು, ಆದರೆ ಪುರುಷರ ಮೇಲೆ ಅಧಿಕಾರ ಮಾಡುವದಾಗಲಿ ಅವರಿಗೆ ಭೋಧಿಸುವದಕ್ಕಾಗಲಿ ಅವರಿಗೆ ಅನುಮತಿಯಿಲ್ಲ (1 ಕೊರಿಂಥ 11:5, 1 ತಿಮೊಥೆ 2:12) ಸ್ತೀಯು ತಲೆಯನ್ನು ಮುಚ್ಚಿಕೊಳ್ಳುವದು (1 ಕೊರಿಂಥ 11:1-16) ಈ ಕೆಳಗಿನವುಗಳನ್ನು ಸೂಚಿಸುತ್ತದೆ:
ಅ) ಪುರುಷನ ಮಹಿಮೆಯು/ಪ್ರಭೆಯು ಸಭೆಯಲ್ಲಿ ಮುಚ್ಚಿರಬೇಕು (ಸ್ತೀಯು ಪುರುಷನ ಪ್ರಭೆಯಾಗಿದ್ದಾಳೆ. ವ. 7)
ಆ) ಸ್ತೀಯ ಪ್ರಭೆಯೂ ಸಹ ಸಭೆಯಲ್ಲಿ ಮುಚ್ಚಿರಬೇಕು (ಅದು ಅವಳ ಕೂದಲಾಗಿದೆ. ವ 15) ಅವರ ಅಂದವು ಅವರ ಕೂದಲಿನಲ್ಲಿದೆ ಎಂದರಿತ ಸ್ತೀಯರು ಬಾಗಶ: ತಮ್ಮ ಕೂದಲನ್ನು ಮುಚ್ಚಿಕೊಳ್ಳುತ್ತಾರೆ.
ಇ) ಪುರುಷನ ಅಧಿಕಾರಕ್ಕೆ ಅಧೀನಳು (ವ. 10) ಗಂಡನಾಗಲೀ, ತಂದೆಯಾಗಲೀ ಅಥವಾ ಸಭಾ ಹಿರಿಯನಾಗಲಿ.
ಸ್ತೀಯರು ತಮ್ಮ ಉಡುಗೆಗಳಿಂದ ಕ್ರಿಸ್ತನ ಪವಿತ್ರತೆಯನ್ನು ತೋರ್ಪಡಿಸಬೇಕು. ಅವರು ಸಬ್ಯತೆಯಿಂದ ಮರ್ಯಾದೆಯಿಂದ ಉಡುಪನ್ನು ಧರಿಸಬೇಕು (1 ತಿಮೋ. 2:9).
ಸುವಾರ್ತೆಯನ್ನು ಸಾಧ್ಯವಿದ್ದಷ್ಟು ರೀತಿಯಲ್ಲಿ ಮುಟ್ಟಿಸಿ, ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವ ಜವಾಬ್ದಾರಿಯೂ ಸ್ಥಳೀಯ ಸಭೆಗಿದೆ (ಮಾರ್ಕ. 16:15 ಹಾಗೂ ಮತ್ತಾ. 28:19). ಶಿಷ್ಯರನ್ನು ಮಾಡದೇ ಸುವಾರ್ತೆಯನ್ನು ಸಾರುವುದು (ದೇವರ ಚಿತ್ತವಾಗಿಲ್ಲ, ಅದಲ್ಲದೆ ಇದು ಜಗತ್ತಿನಲ್ಲಿ) ಕ್ರಿಸ್ತನ ಸಾಕ್ಷಿಗೆ ಅಡ್ಡಿಯಾಗಿದೆ.
ಪ್ರತಿ ಸ್ಥಳೀಯ ಸಭೆಯು ಯೇಸುವಿನ ಮರಣವನ್ನು "ರೊಟ್ಟಿ ಮುರಿಯುವುದರ" ಮೂಲಕ ಸಾರಬೇಕು (1 ಕೊರಿ. 11:22-34). ರೊಟ್ಟಿ ಮುರಿಯುವದು ಎಷ್ಟು ಸಾರೆ/ಯಾವಾಗ ಮಾಡಬೇಕೆಂದು ದೇವರ ವಾಕ್ಯ ಹೇಳುವದಿಲ್ಲವಾದ್ದರಿಂದ ಈ ವಿಷಯವಾಗಿ ಸ್ವತಂತ್ರ್ಯವಿದೆ. ಆದರೆ ಇದು ರೂಢಿಯಾಗಿ ಅರ್ಥವಿಲ್ಲದ್ದಾಗಿರದಂತೆ ಎಚ್ಚರವಹಿಸಬೇಕು.
ಕಾಣಿಕೆಯ ವಿಷಯದಲ್ಲಿ, ಅನ್ಯ ಜನರಿಂದ ದೇವರ ಸೇವೆಗೆ ಹಣವನ್ನು ತೆಗೆದುಕೊಳ್ಳುವುದು ತಪ್ಪು ಎಂದು ದೇವರ ವಾಕ್ಯ ಹೇಳುತ್ತದೆ (3 ಯೋಹಾ. 7). ಆದುದರಿಂದ ಅನ್ಯ ಜನರಿರುವ ಕೂಟಗಳಲ್ಲಿ ಕಾಣಿಕೆಯನ್ನು ತೆಗೆದುಕೊಳ್ಳಬಾರದು. ವಿಶ್ವಾಸಿಗಳ ಕಾಣಿಕೆಯು ಸ್ವಪ್ರೇರಿತವೂ, ಉಲ್ಲಾಸದಿಂದ ಹಾಗೂ ರಹಸ್ಯವಾಗಿ ನೀಡಿರುವದೂ ಆಗಿರಬೇಕು (ಮತ್ತಾ. 6:3; 2 ಕೊರಿ. 9:7). ಆದ್ದರಿಂದ ಕಾಣಿಕೆಯ ಪೆಟ್ಟಿಗೆಯನ್ನು ಒಂದು ಸ್ಥಳದಲ್ಲಿ ಇಡುವದರ ಮೂಲಕ ಯಾರೂ ವೀಕ್ಷಿಸದಂತೆ ಜನರು ಕೊಡಬಹುದು. ಇತರರಿಗೆ ದೇವರ ಕಾರ್ಯಗಳ ಕುರಿತಾದ ವರದಿಗಳನ್ನು ಹಣ ಸಂಗ್ರಹಣೆಗೋಸ್ಕರ ಕಳಿಸುವುದು ತಪ್ಪೆಂದು ನಾವು ನಂಬುತ್ತೇವೆ, (ಈ ವರದಿಗಳನ್ನು "ಪ್ರಾರ್ಥನಾ ಪತ್ರ"ವೆಂದು ಕರೆಯಬಹುದು) ಯಾಕಂದರೆ ಯೇಸುವಾಗಲಿ ಹಾಗೂ ಅಪೋಸ್ತಲರಾಗಲಿ ಈ ರೀತಿಯಾಗಿ ಮಾಡಲಿಲ್ಲ.
ಯಾವುದೇ ಸ್ಥಳೀಯ ಸಭೆಯು ಯೇಸುವಿನ ಎಲ್ಲಾ ಆಜ್ಞೆಗಳಿಗೆ, ವಿಶೇಷವಾಗಿ ಮತ್ತಾಯ 5ರಿಂದ 7ನೇ ಅಧ್ಯಾಯಗಳಲ್ಲಿರುವ ಆಜ್ಞೆಗಳಿಗೆ, ವಿಶ್ವಾಸದಿಂದ ವಿಧೇಯರಾಗಬೇಕೆಂದು ಬೋಧಿಸುವ ಸಭೆಯಾಗಿದ್ದರೆ, ಅದು ಕದಲಲಾರದು. ಹೊಸ ಒಡಂಬಡಿಕೆಯ ಬಹು ಚಿಕ್ಕ ಆಜ್ಞೆಗಳನ್ನೂ ಉತ್ಸಾಹದಿಂದ ಪಾಲಿಸಿ ಪ್ರಕಟಿಸಬೇಕು. ಅಂಥವನೇ ದೇವರ ದೃಷ್ಟಿಯಲ್ಲಿ ದೊಡ್ಡವನೆನಿಸಿಕೊಳ್ಳುವನು (ಮತ್ತಾ. 5:19).
ಇನ್ನೂ ಅನೇಕ ವಿಷಯಗಳಲ್ಲಿ ಹೊಸ ಒಡಂಬಡಿಕೆಯು ಮೌನವಾಗಿದೆ. ಅಂಥಹ ವಿಷಯಗಳಲ್ಲಿ ನಾವು ಇತರ ಶಿಷ್ಯರಿಗೆ ಅವರ ಮನವರಿಕೆಗಳನ್ನು ಇಟ್ಟುಕೊಳ್ಳಲು ಸ್ವಾತಂತ್ರ್ಯ ಕೊಡಬೇಕೇ ಹೊರತು ಹಟವಾದಿಗಳಾಗಿರಬಾರದು (ರೊಮ 14:5).
ಎಲ್ಲಾ ವಿಷಯಗಳಲ್ಲಿ ನಮ್ಮ ಹಾಗೆ ಒಪ್ಪಿಕೊಳ್ಳುವವರನ್ನು ಪ್ರೀತಿಸುವದು ಸುಲಭ ಆದರೆ ನಮ್ಮೊಂದಿಗೆ ಸಮ್ಮತಿಸದವರನ್ನು ಪ್ರೀತಿಸುವದರಲ್ಲಿ ನಾವು ಪರೀಕ್ಷಿಸಲ್ಪಡುತ್ತೇವೆ. ಪ್ರತಿಯೊಂದು ಚಿಕ್ಕ ವಿಷಯಗಳಲ್ಲಿ ನಾವೆಲ್ಲರೂ ಒಮ್ಮನಸ್ಕಾರಾಗಿರಬೇಕೆಂದು ದೇವರು ಅಪೇಕ್ಷಿಸುವದಿಲ್ಲ. ವೈವಿಧ್ಯತೆಯಲ್ಲಿ ಅನ್ಯೋನ್ಯತೆಯ ಮೂಲಕ ದೇವರ ಮಹಿಮೆಯು ಗೋಚರಿಸುತ್ತದೆ. ಎಕರೂಪತೆಯು ಮಾನವ ಮಾಡಿದ್ದು ಅದು ಆತ್ಮಿಕ ಮರಣವನ್ನು ತರುತ್ತದೆ. ದೇವರು ಐಕ್ಯತೆಯನ್ನು ಬಯಸುತ್ತಾರೆಯೇ ಹೊರತು ಏಕರೂಪತೆಯನ್ನಲ್ಲ.
ಕೊನೆಯದಾಗಿ, ಯೇಸುವಿನ ಶಿಷ್ಯರ ಸ್ಪಷ್ಟವಾದ ಗುರುತು ಏನೆಂದರೆ - ಅವರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ (ಯೋಹಾ. 13:35). ಹೀಗೆ ತಂದೆ ಮತ್ತು ಮಗನು ಒಂದಾಗಿರುವ ಹಾಗೆ ಸಭೆಯು ಒಂದಾಗಿರಬೇಕು (ಯೋಹಾ. 17:21).
ಸಂಕ್ಷೇಪವಾಗಿ, ನಾವು ನಂಬುವ ಸತ್ಯವು ಈ ಸಂಗತಿಗಳೇ.
ಇದು ಸತ್ಯವಾಗಿದೆ, ಏಕೆಂದರೆ ಹೃತ್ಪೂರ್ವಕವಾಗಿ ಇದನ್ನು ಅಂಗೀಕರಿಸಿದವರನ್ನು ಇದು ವಿಮೋಚಿಸಿದೆ (ಯೋಹಾ. 8:32).