ಭಾರತದಲ್ಲಿ ಅನೇಕ ಜನರು ನಮ್ಮ ಸಭೆಗಳಿಗೆ ಸೇರಲು ಬಯಸುತ್ತಾರೆ. ಏಕೆಂದರೆ ಅವರು ನಮ್ಮ ನಡುವೆ ಅತಿಥಿ ಸತ್ಕಾರ ಮಾಡುವಂತ, ಉದಾರ ಮನಸ್ಸಿನ ಅನೇಕ ಜನರನ್ನು ಕಾಣುತ್ತಾರೆ. ಆದರೆ ನಾವು ಎಚ್ಚರವಾಗಿದ್ದು ಇಂಥವರನ್ನು ತಕ್ಷಣವೇ ಗುರುತಿಸಿ ಅವರನ್ನು ಸಭೆಯಿಂದ ತೆಗೆದು ಹಾಕದೇ ಇದ್ದರೆ, ಬಹಳ ಬೇಗ ಭಾರತದಲ್ಲಿರುವ ಪ್ರತಿಯೊಬ್ಬ ಬಡವನೂ ನಮ್ಮ ಸಭೆಗಳಿಗೆ ಸೇರಲು ಬಯಸಬಹುದು; ಆಗ ನಮಗೆ ಅಚ್ಚರಿಗೊಳಿಸುವ" ಸಭೆಯ ಬೆಳವಣಿಗೆ" ಕಾಣಿಸಬಹುದು!! ಈ ರೀತಿಯಾಗಿ ನೀತಿವಂತಿಕೆಯಲ್ಲಿ ಆಸಕ್ತಿ ಇರಿಸದೆ, ಹಣದ ಮೇಲೆ ಆಸಕ್ತರಾಗಿರುವ "ಮಾನಸಾಂತರಗೊಂಡ ಕ್ರೈಸ್ತರು" ನಮಗೆ ಸಿಗುತ್ತಾರೆ.
ಇಂದು ಭಾರತದಲ್ಲಿರುವ ಅನೇಕ ಕ್ರೈಸ್ತ ಸೇವಕರಿಗೆ" ಪ್ರಭುವಿನ ಸೇವೆಯು ಒಂದು ಉದ್ಯೋಗವಾಗಿದೆಯೇ ಹೊರತು, ಒಂದು ಕರೆಯಾಗಿಲ್ಲ. ಹಲವರು ಸಭೆಗೆ ಸೇರಿಕೊಂಡು ಆರ್ಥಿಕವಾಗಿ ಅಭಿವೃದ್ಧಿಯಾಗಿದ್ದಾರೆ. ಈ ಅಭಿವೃದ್ಧಿ ದೇವರು ಅವರ ನೀತಿವಂತಿಕೆಯ ಜೀವನವನ್ನು ಗೌರವಿಸಿ ಕೊಟ್ಟ ಆಶೀರ್ವಾದವಾಗಿದ್ದರೆ ಅದು ಒಳ್ಳೆಯದೇ. ಆದರೆ ಅವರು ಸಭೆಗೆ ಸೇರಿಕೊಂಡು ಶ್ರೀಮಂತ ಜನರ ಸಂಪರ್ಕ ಪಡೆದದ್ದರಿಂದ ಅಭಿವೃದ್ಧಿ ಹೊಂದಿದ್ದರೆ, ಅವರು ದೇವರ ಚಿತ್ತದಿಂದ ಸಂಪೂರ್ಣವಾಗಿ ದೂರ ಸರಿದಿದ್ದಾರೆ. ಏಕೆಂದರೆ ಕ್ರೈಸ್ತತ್ವವು ಹಣಗಳಿಸುವ ಮಾರ್ಗವಲ್ಲ.
ಕ್ರೈಸ್ತ ಸಭೆ ಎಂಬುದು ತ್ಯಾಗ ಮಾಡುವ ಮತ್ತು ಕೊಡುವ ಆತ್ಮದ ಸ್ಥಳವಾಗಿದೆ. ಅದು ಲಾಭ ಮತ್ತು ಹಣ ಗಳಿಕೆಯ ಸ್ಥಳವಲ್ಲ. ಇಂದು ಭಾರತದಲ್ಲಿ ಅನೇಕ "ಕ್ರೈಸ್ತ ಸೇವಕರು" ತಾವು ಒಂದು ಪ್ರಾಪಂಚಿಕ ನೌಕರಿಯಲ್ಲಿ ಗಳಿಸಬಹುದಾಗಿದ್ದ ಸಂಪಾದನೆಗಿಂತ ಐದರಿಂದ ಹತ್ತು ಪಟ್ಟು ಹೆಚ್ಚಾಗಿ ಸಂಪಾದಿಸುತ್ತಿರುವುದು ಒಂದು ದುಃಖಕರ ಸಂಗತಿಯಾಗಿದೆ. "ಕ್ರೈಸ್ತ ಸೇವಕರಲ್ಲಿ" ಅನೇಕರು ಒಂದು ದಿನವೂ ಲೌಕಿಕ ನೌಕರಿ ಮಾಡಿದವರಲ್ಲ. ಯೇಸು ಸ್ವಾಮಿಯು ತನ್ನ ಅಪೊಸ್ತಲರನ್ನು ಆರಿಸಿಕೊಂಡಾಗ, ಹಿಂದೆ ಲೌಕಿಕ ಉದ್ಯೋಗ ಮಾಡದೇ ಇದ್ದ ಒಬ್ಬನನ್ನೂ ಸಹ ಆರಿಸಿಕೊಳ್ಳಲಿಲ್ಲ. ಇಂದು ಭಾರತದಲ್ಲಿ ಕ್ರೈಸ್ತ ಸೇವೆ ಎಂಬುದು ಅಧಿಕವಾಗಿ ಲಾಭ ಗಳಿಸುವ ಮಾರ್ಗವಾಗಿ ಮಾರ್ಪಟ್ಟಿದೆ. ಅನ್ಯಜನರು ಇಂತಹ ಸೇವಕರನ್ನು ನೋಡಿ, "ಈತನು ಹಣ ಸಂಪಾದಿಸುವುದಕ್ಕಾಗಿ ಕ್ರೈಸ್ತ ಸೇವೆಯಲ್ಲಿ ತನ್ನನ್ನೇ ತೊಡಗಿಸಿಕೊಂಡಿದ್ದಾನೆ," ಎಂದು ಹೇಳುತ್ತಾರೆ. ಅವರ ಮಾತು ಸರಿಯಾಗಿಯೇ ಇದೆ! ನಾವು ಅವರ ಬಾಯನ್ನು ಹೇಗೆ ಮುಚ್ಚಿಸಬಹುದು? ಕ್ರೈಸ್ತ ಸೇವಕರು ತಾವು ಯಾವುದೋ ಲೌಕಿಕ ಉದ್ಯೋಗ ಮಾಡುತ್ತಿದ್ದರೆ ಕ್ರೈಸ್ತ ಸೇವೆಯ ಸಂಪಾದನೆಗಿಂತ ಹೆಚ್ಚು ಹಣ ಸಂಪಾದಿಸುತ್ತಿದ್ದೆವು, ಎಂದು ತೋರಿಸಿಕೊಟ್ಟಾಗ ಮಾತ್ರ ಇದು ಸಾಧ್ಯವಾಗುತ್ತದೆ.
"ಸಭೆ ಎಂಬುದು ತ್ಯಾಗ ಮಾಡುವ ಮತ್ತು ಕೊಡುವ ಆತ್ಮದ ಸ್ಥಳವಾಗಿದೆ. ಲಾಭ ಪಡೆಯುವ ಮತ್ತು ಹಣ ಗಳಿಕೆಯಸ್ಥಳವಲ್ಲ"
ಅಪೊಸ್ತಲರ ಕೃತ್ಯಗಳು 5'ನೇ ಅಧ್ಯಾಯದಲ್ಲಿ, ನಾವು ಓದುವುದೇನೆಂದರೆ, ಎಲ್ಲರೂ ತಮ್ಮ ತಮ್ಮ ಆಸ್ತಿಗಳನ್ನು ಮಾರಾಟ ಮಾಡಿ, ಅದನ್ನು ಬಡವರಿಗೆ ಹಂಚುವುದಕ್ಕಾಗಿ ಅಪೊಸ್ತಲರಿಗೆ ತಂದು ಕೊಡುತ್ತಿದ್ದಾಗ, ಅನನೀಯ ಮತ್ತು ಸಪ್ಫೈರಳು, "ನಾವು ನಮ್ಮ ಹಣವನ್ನು ಉಳಿಸಿಕೊಂಡು ಆತ್ಮಿಕರಂತೆ ಹೇಗೆ ಕಾಣಿಸಿಕೊಳ್ಳಬಹುದು?" ಎಂಬುದಾಗಿ ಯೋಚಿಸಿದರು. ಹಾಗಾಗಿ ಅವರು ತಮ್ಮ ಜಮೀನನ್ನು ಮಾರಾಟ ಮಾಡಿ ಎಲ್ಲಾ ಹಣವನ್ನು ಕೊಡಲಿಲ್ಲ. ಅವರು ಎಲ್ಲಾ ಹಣವನ್ನು ಕೊಡದೇ ಇದ್ದುದು ಅವರ ಪಾಪವಾಗಿರಲಿಲ್ಲ. ದೇವರು ಸಂತೋಷವಾಗಿ ಕೊಡುವವರನ್ನು ಪ್ರೀತಿಸುತ್ತಾರೆ ಮತ್ತು ದೇವರಿಗೆ ಯಾರ ಹಣವೂ ಬೇಕಾಗಿಲ್ಲ. ಪೇತ್ರನು ಅನನೀಯನಿಗೆ ಹೀಗೆ ಹೇಳಿದನು - "ನಿನ್ನ ಜಮೀನು ನಿನ್ನ ಬಳಿ ಇದ್ದಾಗ ಅದು ನಿನ್ನದಾಗಿತ್ತು ಮತ್ತು ನಿನಗೆ ಅದರಿಂದ ಏನು ಬೇಕಾದರೂ ಮಾಡಬಹುದಾಗಿತ್ತು. ಅದನ್ನು ಮಾರಾಟ ಮಾಡಿದ ನಂತರವೂ ಸಹ ಆ ಹಣವು ನಿನ್ನದಾಗಿತ್ತು. ಆದರೆ ನೀನು ಏಕೆ ಸುಳ್ಳು ಹೇಳಿದೆ?" . ಅನನೀಯನ ಪಾಪ ಕಪಟತನವಾಗಿತ್ತು - ಪೂರ್ಣ ಹೃದಯದವನು ಎಂಬುದಾಗಿ ನಟನೆ ಮಾಡಿದ್ದು. ಒಂದು ವೇಳೆ ಅನನೀಯನು ಹೀಗೆ ಹೇಳ ಬಹುದಾಗಿತ್ತು, "ನಾವು ಆ ಜಮೀನನ್ನು 50,000 ರೂಪಾಯಿಗಳಿಗೆ ಮಾರಿದೆವು, ಆದರೆ ನಾವು ಶೇಕಡ 20% ಕೊಟ್ಟು ಉಳಿದ ಹಣವನ್ನು ನಮ್ಮ ಅವಶ್ಯಕತೆಗಾಗಿ ಇಟ್ಟುಕೊಂಡಿದ್ದೇವೆ. ಇಗೋ, 10,000 ರೂಪಾಯಿ ಇಲ್ಲಿದೆ". ಆಗ, ಪೇತ್ರನು ಅನನೀಯನನ್ನು ಆಶೀರ್ವದಿಸುತ್ತಿದ್ದನು ಮತ್ತು ಅವನು ಮತ್ತು ಅವನ ಹೆಂಡತಿಯ ಜೀವವನ್ನು ಕಾಪಾಡಿಕೊಳ್ಳಬಹುದಾಗಿತ್ತು. ಅನನೀಯನು ಒಂದು ಮಾತನ್ನೂ ನುಡಿಯಲಿಲ್ಲ. ಅವನು ಬಾಯನ್ನು ತೆರೆಯದೇ, ಕೇವಲ ಪರಿಪೂರ್ಣ ಹೃದಯದವರ ಸಾಲಿನಲ್ಲಿ ನಿಲ್ಲುವುದರ ಮೂಲಕ ಸುಳ್ಳನ್ನು ನುಡಿದನು. ಆದರೆ ಪೇತ್ರನು ವಿವೇಚನೆಯನ್ನು ಹೊಂದಿದ್ದನು. ಅನನೀಯ ಮತ್ತು ಸಪ್ಫೈರಳು ಎಂಥವರು ಎಂಬುದು ಪೇತ್ರನಿಂದ ಬಹಿರಂಗವಾಯಿತು ಮತ್ತು ಅವರು ತಮ್ಮ ಕಪಟತನಕ್ಕಾಗಿ ಸತ್ತರು.
ಇಂದು ದೇವರು ಏಕೆ ಆ ರೀತಿಯಾಗಿ ಕಾರ್ಯಮಾಡುವುದಿಲ್ಲ? ಏಕೆಂದರೆ, ಅವರು ಹಾಗೆ ಮಾಡಿದರೆ ಕ್ರೈಸ್ತ ಸಭೆಗಳಲ್ಲಿ ಕೇವಲ ಕೆಲವೇ ಮಂದಿ ಜೀವಂತವಾಗಿ ಉಳಿದುಕೊಳ್ಳುತ್ತಾರೆ! ಅನನೀಯ ಮತ್ತು ಸಪ್ಫೈರಳು ಪರಿಶುದ್ಧತೆಯಲ್ಲಿ ಹಾಗೂ ಆತ್ಮನ ಬಲದಲ್ಲಿ ನಡೆಯುತ್ತಿದ್ದ ಒಂದು ಕ್ರೈಸ್ತ ಸಭೆಯಲ್ಲಿದ್ದರು - ಮತ್ತು ಇದರಿಂದಾಗಿ ಅವರು ಸತ್ತು ಹೋದರು. ಅವರು ಲೌಕಿಕತೆಯಿಂದ ನಿರ್ಜೀವವಾಗಿದ್ದ ಯಾವುದೋ ಒಂದು ಸಭೆಯಲ್ಲಿ ಇದ್ದಿದ್ದರೆ (ಕೊರಿಂಥದ ಸಭೆ ಇಂಥವುಗಳಲ್ಲಿ ಒಂದಾಗಿತ್ತು), ಅಲ್ಲಿ ಅವರು ಸಭಾಹಿರಿಯರ ಸ್ಥಾನದಲ್ಲೂ ಇರಬಹುದಾಗಿತ್ತು. ನಿಮ್ಮಲ್ಲಿ ಅಹಂಕಾರ ಹಾಗೂ ಕಪಟತನವಿದ್ದರೆ, ನೀವು ಕ್ರಿಸ್ತನ ಪರಿಪೂರ್ಣತೆಯ ಕಡೆಗೆ ಉತ್ಸಾಹದಿಂದ ಮುನ್ನಡೆಯುತ್ತಿರುವ ಒಂದು ಸಭೆಗೆ ಸೇರಿಕೊಳ್ಳುವುದು ಅಪಾಯಕರವಾಗಿದೆ. ದೇವರು ಒಂದಲ್ಲ ಒಂದು ರೀತಿಯಲ್ಲಿ ನಿಮ್ಮನ್ನು ದಂಡಿಸಿ ಅಂತಹ ಸಭೆಯಿಂದ ನಿಮ್ಮನ್ನು ತೆಗೆದುಹಾಕುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಇಂತಹ ಕ್ರೈಸ್ತ ಸಭೆಗಳು ಬಹಳ ವಿರಳವಾಗಿವೆ. ಹಾಗಾಗಿ ಇಂದು ಹೆಚ್ಚಿನ ಸಭೆಗಳಲ್ಲಿ ನೀವು ತೊಂದರೆಯಿಲ್ಲದೆ ಉಳಿದುಕೊಳ್ಳುತ್ತೀರಿ. ನೀವು ಅಹಂಕಾರಿಗಳು ಮತ್ತು ಕಪಟಿಗಳಾಗಿ ಜೀವಿಸಲು ಬಯಸಿದರೆ, ನೀವು ಯಾವುದಾದರೂ ನಿರ್ಜೀವ ಸಭೆಯನ್ನು ಆರಿಸಿಕೊಂಡು ಅದಕ್ಕೆ ಸೇರಿರಿ.