ಒಬ್ಬ ಆತ್ಮಿಕ ಮನುಷ್ಯನ ಮೂರು ಗುರುತುಗಳು

ಬರೆದಿರುವವರು :   ಝ್ಯಾಕ್ ಪೂನನ್
Article Body: 

"ನಾನಂತೂ ದೇವರಾತ್ಮನಿಂದ ನಡಿಸಿಕೊಳ್ಳುವವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತಾಡಲಾರದೆ ಪ್ರಾಪಂಚಿಕರೂ ಕ್ರಿಸ್ತನ ವಿಷಯದಲ್ಲಿ ಎಳೆಗೂಸುಗಳೂ ಆಗಿರುವಂಥವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತಾಡಬೇಕಾಯಿತು" (1 ಕೊರಿಂಥ 3:1).

ನಾವು 1 ಕೊರಿಂಥ 1:5-7 ರಲ್ಲಿ ಓದುವಂತೆ, ಕೊರಿಂಥದ ಕ್ರೈಸ್ತರು ಮೂರು ವಿಷಯಗಳಲ್ಲಿ ಮುಂದುವರೆದಿದ್ದರು - ದೇವರ ವಾಕ್ಯದ ಜ್ಞಾನ, ಬೋಧನೆ ಮಾಡುವದು ಮತ್ತು ಪವಿತ್ರಾತ್ಮನ ವರದಾನಗಳು. ಅವರು ಇವೆಲ್ಲವನ್ನು ಹೊಂದಿಯೂ ಆತ್ಮಿಕರಾಗಿರಲಿಲ್ಲ. ಕೃಪಾ ವರಗಳನ್ನು ಹೊಂದಿ, ಚೆನ್ನಾಗಿ ಬೋಧನೆ ಮಾಡಿ ಮತ್ತು ದೇವರ ವಾಕ್ಯವನ್ನು ಚೆನ್ನಾಗಿ ತಿಳಿದಿರುವ ಒಬ್ಬ ಬೋಧಕನು ಆತ್ಮಿಕ ಮನುಷ್ಯ ಆಗಿರದೇ ಇರಬಹುದೆಂದು ಮತ್ತು ಆತನು ಸಂಪೂರ್ಣವಾಗಿ ಒಬ್ಬ ಲೌಕಿಕ ಮನುಷ್ಯನೂ ಆಗಿರಬಹುದು ಎನ್ನುವ ಸೂಕ್ಷ್ಮವಾದ ತಿಳುವಳಿಕೆ ಕ್ರೈಸ್ತ ವಿಶ್ವಾಸಿಗಳಲ್ಲಿ ಕೆಲವರು ಮಾತ್ರ ಹೊಂದಿರುತ್ತಾರೆ.

ದೌರ್ಭಾಗ್ಯವೆಂದರೆ, ನಾವಿರುವ ಈ ದಿನಗಳಲ್ಲಿ ಒಬ್ಬ ಸಭೆಯ ಸಂಚಾಲಕನು ಉತ್ಸಾಹದಿಂದ, ಎಲ್ಲರನ್ನು ನಗಿಸುತ್ತಾ, ಚುರುಕಾಗಿ ಬೋಧನೆ ಮಾಡಿದರೆ ಅಧಿಕಾಂಶ ವಿಶ್ವಾಸಿಗಳು ಆತನು ಒಬ್ಬ ಉತ್ತಮ ಆತ್ಮಿಕ ಮನುಷ್ಯನೆಂದು ತಿಳಿಯುತ್ತಾರೆ.

ಸುಳ್ಳು ಬೋಧಕರ ವ್ಯಕ್ತಿತ್ವದಲ್ಲಿ ದೇವರಾತ್ಮನ ಫಲ ಇಲ್ಲದಿರುವಂಥದ್ದರ ಮೂಲಕ ಅವರು ಗುರುತು ಹಿಡಿಯಲ್ಪಡುವರೆಂದು ಯೇಸುವು ಸ್ಪಷ್ಟವಾಗಿ ತಿಳಿಸಿದ್ದರೂ (ಮತ್ತಾಯ 7:15-20), ದುಃಖಕರ ವಿಷಯವೆಂದರೆ, ಇಂದಿನ ಬೋಧಕರು ಅವರ ವರಗಳಿಗಾಗಿ ಗೌರವಿಸಲ್ಪಡುತ್ತಾರೆ, ಅವರ ಜೀವನದ ಕ್ರಿಸ್ತ-ಸಾರೂಪ್ಯದ ಫಲಕ್ಕಾಗಿ ಅಲ್ಲ.

ಯೇಸುವು ತಿಳಿಸಿದ ಇನ್ನೊಂದು ವಿಷಯವೆಂದರೆ, ನ್ಯಾಯ ವಿಚಾರಣೆ ದಿನದಂದು ಅನೇಕರು ಯೇಸುವಿನ ಎದುರು ನಿಂತು, ಆತನ ಹೆಸರಿನಲ್ಲಿ ತಾವು ಪ್ರವಾದನೆಯನ್ನೂ, ಮಹತ್ಕಾರ್ಯಗಳನ್ನೂ ಮಾಡಿದ್ದಾಗಿ ಹೇಳಿಕೊಳ್ಳುವರು. ಯೇಸುವು ಅದಕ್ಕೆ ಉತ್ತರವಾಗಿ, ತನಗೆ ಅವರ ಪರಿಚಯವೇ ಇಲ್ಲವೆಂದು ಹೇಳುವನು (ಮತ್ತಾಯ 7:22, 23). ಅವರು ಯೇಸುವನ್ನು ‘ಕರ್ತ’ನೆಂದು ಕರೆದರು ಮತ್ತು ಪವಾಡಗಳನ್ನು ನಡೆಸುವ ಶಕ್ತಿಯನ್ನು ಹೊಂದಿದ್ದರು. ಆದರೆ ಅವರ ಜೀವನದಲ್ಲಿ ಪಾಪವಿತ್ತು. ವಿವಿಧ ’ಕ್ರಿಸ್ತೀಯ’ ಚಟುವಟಿಕೆಗಳು ಮತ್ತು ದೊಡ್ಡ ಪವಾಡಗಳೂ ಸಹ ಒಬ್ಬನನ್ನು ಆತ್ಮಿಕ ಮನುಷ್ಯನನ್ನಾಗಿ ಮಾಡಲಾರವು ಎಂದು ನಮಗೆ ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಅಷ್ಟೇ ಅಲ್ಲ, ಇವು ಒಬ್ಬ ಮನುಷ್ಯನು ಮರುಜನ್ಮ ಪಡೆದಿರುವದರ ಲಕ್ಷಣವೂ ಸಹ ಅಲ್ಲ, ಏಕೆಂದರೆ ಯೇಸುವು ಈ ಜನರಿಗೆ ಹೇಳಿದಂತೆ ಅವನಿಗೆ ಅವರ ಪರಿಚಯ ಯಾವತ್ತೂ ಇರಲಿಲ್ಲ!!

ಒಬ್ಬ ಮನುಷ್ಯನನ್ನು ಆತ್ಮಿಕನನ್ನಾಗಿ ಮಾಡುವದು ಯಾವದು ಎಂದು ತಿಳಿಯಲು, ನಾವು ಮೊಟ್ಟಮೊದಲು ಸೈತಾನನ ಗುಣಗಳ ಒಂದು ಪಟ್ಟಿಯನ್ನು ತಯಾರಿಸಬಹುದು. ಇದರಿಂದ ಯಾವ ಗುಣಗಳು ನಿಜವಾದ ಆತ್ಮಿಕತೆಯ ಗುರುತುಗಳು ಅಲ್ಲವೆಂದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ.

ಉದಾಹರಣೆಗೆ, ’ಚಟುವಟಿಕೆ’ಯ ಕುರಿತಾಗಿ ನೋಡಿರಿ: ಸೈತಾನ ಒಬ್ಬ ಪೂರ್ಣಾವಧಿಯ ಕೆಲಸಗಾರನಾಗಿದ್ದು, ಹಗಲಿರುಳು ಕೆಲಸದಲ್ಲಿ ತೊಡಗಿರುತ್ತಾನೆ (ಪ್ರಕಟನೆ 12:9-10). ಆತನು ಯಾವತ್ತೂ ರಜೆ ಹಾಕುವದಿಲ್ಲ. ಆತನು ವಿರಾಮವಿಲ್ಲದೆ ದುಡಿಯುತ್ತಾ, ಜನರನ್ನು ದೂಷಿಸುವದಕ್ಕಾಗಿ ಪ್ರಯತ್ನಿಸುತ್ತಾನೆ - ಮತ್ತು ಇದರಲ್ಲಿ ಆತನಿಗೆ ಅನೇಕ ಸಹಾಯಕರು ಸಹಾ ಇದ್ದಾರೆ. ಆತನಲ್ಲಿ ಎಷ್ಟು ಬೈಬಲ್ ಜ್ಞಾನ ಇದೆಯೆಂದರೆ, ಆತನು ಯೇಸುವಿಗೂ ದೇವರ ವಾಕ್ಯವನ್ನು ಉಲ್ಲೇಖಿಸಿದನು. ಆತನಲ್ಲಿ ಪವಾಡ ನಡೆಸುವ ಶಕ್ತಿಯಿದೆ, ಉತ್ಸಾಹವಿದೆ, ಅನೇಕ ಸಹೋದ್ಯೋಗಿಗಳು ಇದ್ದಾರೆ, ಅನೇಕರು ಆತನನ್ನು ಹಿಂಬಾಲಿಸುತ್ತಾರೆ ಮತ್ತು ಬಹಳಷ್ಟು ಜನರ ಮೇಲೆ ಆತನು ಅಧಿಕಾರ ಚಲಾಯಿಸುತ್ತಾನೆ. ಅದಾಗ್ಯೂ ಆತನಲ್ಲಿ ಆತ್ಮಿಕತೆ ಇಲ್ಲ!!

ಒಬ್ಬ ವ್ಯಕ್ತಿಯನ್ನು ನಿಜವಾದ ಆತ್ಮಿಕನನ್ನಾಗಿ ಮಾಡುವದು ಯಾವದೆಂದು ಈ ಮೂರು ಮಾತುಗಳು ವ್ಯಕ್ತಪಡಿಸುತ್ತವೆ: ಒಂದು ಮೇಲ್ಮುಖ ದೃಷ್ಟಿ, ಒಂದು ಒಳಮುಖ ದೃಷ್ಟಿ ಮತ್ತು ಒಂದು ಸುತ್ತಲಿನ ದೃಷ್ಟಿ.

ಒಬ್ಬ ಆತ್ಮಿಕ ಮನುಷ್ಯನು ಯಾವಾಗಲೂ ಈ ಕೆಳಗಿನ ಮೂರು ದಿಕ್ಕುಗಳಲ್ಲಿ ನೋಡುತ್ತಿರುತ್ತಾನೆ:

 • 1. ಮೇಲೆ: ದೇವರ ಮತ್ತು ಕ್ರಿಸ್ತನ ಮೇಲಿನ ಭಕ್ತಿ ಹಾಗು ಆರಾಧನೆಯ ದೃಷ್ಟಿ.
 • 2. ಒಳಗೆ: ತನ್ನ ಒಳಗಿನ ಅಕ್ರಿಸ್ತೀಯ ಜೀವನದ ಬಗ್ಗೆ ಅರಿಕೆ ಮಾಡುವ ಮತ್ತು ಪಶ್ಚಾತಾಪ ಪಡುವ ದೃಷ್ಟಿ.
 • 3. ಸುತ್ತಮುತ್ತಲು: ಇನ್ನೊಬ್ಬರಿಗೆ ಸಹಾಯ ಮಾಡುವ ಮತ್ತು ಆಶೀರ್ವದಿಸಲು ಪ್ರಯತ್ನಿಸುವ ದೃಷ್ಟಿ.
 • ಆತ್ಮಿಕನಾದ ಒಬ್ಬ ಮನುಷ್ಯನು ತಲೆಯೆತ್ತಿ ಮೇಲೆ ದೃಷ್ಟಿಸುತ್ತಾನೆ

  ದೇವರು ಮೊದಲನೆಯದಾಗಿ ನಮ್ಮನ್ನು ಆರಾಧಕರಾಗಲು - ನಾವು ಆತನಿಗಾಗಿ ಹಸಿದು ಬಾಯಾರಲು - ಕರೆದಿದ್ದಾನೆ. ಒಬ್ಬ ಆತ್ಮಿಕ ಮನುಷ್ಯ ದೇವರನ್ನು ಆರಾಧಿಸುತ್ತಾನೆ. ಆತನ ಒಂದೇ ಅಪೇಕ್ಷೆ ದೇವರಾಗಿದ್ದಾನೆ. ಆತನು ದೇವರನ್ನು ಹೊರತಾಗಿ ಇಹಲೋಕದಲ್ಲಾಗಲೀ ಪರಲೋಕದಲ್ಲಾಗಲೀ ಏನನ್ನೂ ಅಥವಾ ಯಾರನ್ನೂ ಬಯಸುವದಿಲ್ಲ (ಕೀರ್ತನೆ 73:25). ಆತನಿಗೆ ಹಣವು ದೇವರಿಗಿಂತ ದೊಡ್ಡದಲ್ಲ. ಬಾಯಾರಿದ ಜಿಂಕೆಯು ಹೇಗೆ ನೀರಿನ ತೊರೆಗಳನ್ನು ಬಯಸುತ್ತದೋ, ಹಾಗೆಯೇ ಒಬ್ಬ ಆತ್ಮಿಕ ಮನುಷ್ಯನು ದೇವರಿಗಾಗಿ ತವಕಿಸುತ್ತಾನೆ. ಒಬ್ಬ ಬಾಯಾರಿದ ಮನುಷ್ಯನು ನೀರಿಗಾಗಿ ತವಕಿಸುವದಕ್ಕಿಂತ ಹೆಚ್ಚಾಗಿ, ಆತನು ದೇವರಿಗಾಗಿ ತವಕಿಸುತ್ತಾನೆ.

  ಆತ್ಮಿಕನಾದವನು ದೇವರ ಪ್ರಸನ್ನತೆಗಾಗಿ ತವಕಿಸುತ್ತಾನೆಯೇ ಹೊರತು ಹಾಯಾದ ಜೀವನಕ್ಕಾಗಿ ಅಲ್ಲ. ಆತನು ದಿನನಿತ್ಯವೂ ದೇವರು ತನ್ನೊಂದಿಗೆ ಮಾತನಾಡುವದನ್ನು ಕೇಳಲು ತವಕ ಪಡುತ್ತಾನೆ.

  ಹಣ ಮತ್ತು ತಮ್ಮ ಸೌಕರ್ಯಗಳನ್ನು ಆರಾಧಿಸುವವರಲ್ಲಿ ಯಾವಾಗಲೂ ಒಂದಲ್ಲ ಒಂದು ದೂರು ಇರುತ್ತದೆ. ಆದರೆ ಆತ್ಮಿಕ ಮನುಷ್ಯನಿಗೆ ದೂರು ಹೇಳುವ ವಿಷಯಗಳೇ ಇರುವದಿಲ್ಲ, ಏಕೆಂದರೆ ಆತನಿಗೆ ದೇವರ ಹೊರತಾಗಿ ಬೇರೆ ಯಾವ ಆಶೆಯೂ ಇರುವದಿಲ್ಲ ಮತ್ತು ದೇವರು ಯಾವಾಗಲೂ ಆತನ ಹತ್ತಿರ ಇರುತ್ತಾನೆ. ಆತನು ಜೀವನದ ಯಾವ ಪರಿಸ್ಥಿತಿಯಲ್ಲೂ ನಿರಾಶೆ ಹೊಂದುವದಿಲ್ಲ, ಏಕೆಂದರೆ ಆತನು ಪ್ರತಿಯೊಂದು ಪರಿಸ್ಥಿತಿಯಲ್ಲಿ ದೇವರ ಬಲವಾದ ಹಸ್ತವನ್ನು ನೋಡುತ್ತಾನೆ ಮತ್ತು ಯಾವಾಗಲೂ ಆ ಹಸ್ತದ ಕೆಳಗೆ ತನ್ನನ್ನು ತಗ್ಗಿಸಿಕೊಳ್ಳುವದರಲ್ಲಿ ಆನಂದಿಸುತ್ತಾನೆ.

  ಆತ್ಮಿಕನಾದವನು ಯಾವಾಗಲೂ ದೇವರೊಂದಿಗೆ ಸಂಪರ್ಕ ಹೊಂದಿರುವದರಿಂದ, ಆತನಿಗೆ ಜೀವನದಲ್ಲಿ ಯಾವುದೇ ಆಜ್ಞೆ ಅಥವಾ ಕಾಯದೆಯ ನಿಯಂತ್ರಣ ಬೇಕಾಗುವದಿಲ್ಲ. ಆತನು ಜೀವಕರವಾದ ವೃಕ್ಷವನ್ನು (ಸ್ವತಃ ದೇವರನ್ನೇ) ಪಡೆದಿರುವಾಗ, ಒಳ್ಳೆದರ ಕೆಟ್ಟದರ ಅರಿವು ಹುಟ್ಟಿಸುವ ಜ್ಞಾನದ ವೃಕ್ಷದಲ್ಲಿ ಆತನಿಗೆ ಆಸಕ್ತಿಯಿಲ್ಲ. ಆತನು ಯೇಸುವಿನಲ್ಲಿ ಸರಳ ಮತ್ತು ಸಂಪೂರ್ಣ ಸಮರ್ಪಣೆಯನ್ನು ಹೊಂದಿದ್ದು, ಇತರ ವಿಷಯಗಳು ಆತನಿಗೆ ಅಡ್ಡಿ ಆಗಲಾರವು. ಆತ್ಮಿಕನಾದವನು ಯೇಸುವನ್ನೇ ನೋಡುತ್ತಾ ಮುಂದೆ ಹೋಗುವಾಗ, ವರ್ಷದಿಂದ ವರ್ಷಕ್ಕೆ ತನ್ನ ಕರ್ತನ ಹಾಗೆ ಬದಲಾವಣೆ ಹೊಂದುತ್ತಾ ಹೋಗುತ್ತಾನೆ.

  ಆತ್ಮಿಕನಾದವನು ಯಾವಾಗಲೂ ತನ್ನನ್ನು ತಗ್ಗಿಸಿಕೊಳ್ಳುತ್ತಾನೆ. ಹಾಗಾಗಿ ದೇವರು ಅಂಥವನನ್ನು ಹೆಚ್ಚಾಗಿ ವೃದ್ಧಿಸುತ್ತಾನೆ. ಹೆಚ್ಚುಹೆಚ್ಚಾಗಿ ವೃದ್ಧಿ ಹೊಂದುತ್ತಾ - ಆತನು ದೇವರಿಗೆ ಇನ್ನೂ ಸಮೀಪನಾಗುತ್ತಾನೆ. ಆ ವ್ಯಕ್ತಿಯು ನಿಜವಾದ ಪರಲೋಕ ಜೀವಿತದ ಅನುಭವ ಹೊಂದಿ, ಯಾವಾಗಲೂ ಮನುಷ್ಯರ ಕಣ್ಣಿಗೆ ಕಾಣಿಸದಂತೆ ಸತ್ಕಾರ್ಯಗಳನ್ನು ಮಾಡಲು ಬಯಸುತ್ತಾನೆ.

  ಆತ್ಮಿಕ ಮನುಷ್ಯನು ತನ್ನೊಳಗೆ ನೋಡುತ್ತಾನೆ

  ಮೇಲಣ ದೃಷ್ಟಿಯ ಮೂಲಕ ಒಳಮುಖ ದೃಷ್ಟಿ ಸಾಧ್ಯವಾಗುತ್ತದೆ. ಯೆಶಾಯನು ದೇವರ ಮಹಿಮೆಯನ್ನು ನೋಡಿದ ತಕ್ಷಣವೇ, ತನ್ನ ಪಾಪದ ಸ್ಥಿತಿಯ ಅರಿವನ್ನು ಹೊಂದಿದನು (ಯೆಶಾಯ 6:1-5). ಇದೇ ರೀತಿಯಾಗಿ ಯೋಬ, ಪೇತ್ರ ಮತ್ತು ಯೋಹಾನರ ಜೀವಿತದಲ್ಲಿಯೂ ನೋಡುತ್ತೇವೆ (ಯೋಬ 42:5,6; ಲೂಕ 5:8; ಪ್ರಕಟನೆ 1:17). ನಾವು ದೇವಪ್ರಸನ್ನತೆಯಲ್ಲಿ ಜೀವಿಸುವಾಗ, ನಮ್ಮ ಜೀವನದ ಅನೇಕ ವಿಷಯಗಳಲ್ಲಿ ನಾವು ಕ್ರಿಸ್ತನಂತೆ ಇಲ್ಲದಿರುವದನ್ನು ಕಾಣುತ್ತೇವೆ. ಈ ರೀತಿಯಾಗಿ ಆತ್ಮಿಕ ಮನುಷ್ಯನು ನಿರಂತರವಾಗಿ ತನ್ನ ಜೀವನದ ರಹಸ್ಯ ಪಾಪಗಳನ್ನು ಅರಿಯುತ್ತಾ ಹೋಗುತ್ತಾನೆ.

  ದೇವರನ್ನು "ಪರಿಶುದ್ಧತೆಯೆಂಬ ಭೂಷಣದೊಡನೆ (ಉಡುಗೆ)" ಆರಾಧಿಸುವಂತೆ ನಮಗೆ ಆಜ್ಞಾಪಿಸಲಾಗಿದೆ (ಕೀರ್ತನೆ 29:2). ನಮ್ಮಲ್ಲಿ ಪರಿಶುದ್ಧತೆಯ ಉಡುಪು ಇಲ್ಲದಿದ್ದಲ್ಲಿ, ನಾವು ಕರ್ತನ ಮುಂದೆ ಬೆತ್ತಲೆಯಾಗಿದ್ದೇವೆ. ಆದ್ದರಿಂದ ಒಬ್ಬ ಆತ್ಮಿಕ ಮನುಷ್ಯನು ದೇವರ ಮತ್ತು ಜನರ ಮಧ್ಯೆ ತನ್ನ ಆತ್ಮಸಾಕ್ಷಿಯನ್ನು ಶುದ್ಧವಾಗಿ ಇರಿಸಿಕೊಳ್ಳಲು "ಸಕಲ ಪ್ರಯತ್ನವನ್ನು" ಮಾಡುತ್ತಾನೆ (ಅ.ಕೃ. 24:16). ಒಬ್ಬ ವ್ಯಾಪಾರಿಯು ಹೆಚ್ಚಿನ ಸಂಪಾದನೆಗಾಗಿ ಮತ್ತು ಒಬ್ಬ ಸಂಶೋಧಕ ವಿಜ್ಞಾನಿಯು ಹೊಸ ಸಂಶೋಧನೆಗಳಿಗಾಗಿ ಶಕ್ತಿಮೀರಿ ಪ್ರಯತ್ನಿಸುವಂತೆ, ಒಬ್ಬ ಆತ್ಮಿಕ ಮನುಷ್ಯನು ತನ್ನ ಆತ್ಮಸಾಕ್ಷಿಯನ್ನು ಎಲ್ಲಾ ವೇಳೆಯಲ್ಲಿ ಸ್ವಚ್ಚವಾಗಿ ಇರಿಸಲು ಎಡೆಬಿಡದೆ ಪ್ರಯತ್ನಿಸುತ್ತಾನೆ.

  ಆತ್ಮಿಕ ಮನುಷ್ಯನು ಯಾವಾಗಲೂ ತನ್ನನ್ನು ಪರೀಕ್ಷಿಸಿಕೊಳ್ಳುತ್ತಾನೆ, ಮತ್ತು ಆ ಮೂಲಕ ತನ್ನ ಜೀವಿತದಲ್ಲಿ ತಿದ್ದಿಕೊಳ್ಳಬೇಕಾದ ಅನೇಕ ವಿಷಯಗಳನ್ನು ಆತನು ಕಾಣುತ್ತಿರುತ್ತಾನೆ - ಈ ವಿಷಯಗಳು ಇತರ ವಿಶ್ವಾಸಿಗಳಿಗೆ ತಮ್ಮ ಜೀವಿತದಲ್ಲಿ ಅಸಮಾಧಾನ ಉಂಟುಮಾಡದೇ ಇರಬಹುದು.

  ಒಬ್ಬ ಆತ್ಮಿಕ ಮನುಷ್ಯನು ದೇವರಿಗೆ ಉಪಯೋಗಿಯಾಗಲು ಅಡ್ಡಿ ಉಂಟುಮಾಡುವ ಹಲವಾರು ವಿಷಯಗಳಿಗೆ ತಾನು ಪ್ರತಿದಿನ ಸಾಯುವದು ಅವಶ್ಯವೆಂದು ಅರಿತಿದ್ದಾನೆ. ಹಾಗಾಗಿ ಆತನ ಜೀವನ ಶೈಲಿಯು ತನ್ನ ಶಿಲುಬೆಯನ್ನು ಹೊತ್ತುಕೊಂಡು ಹೋಗುವಂಥದ್ದಾಗಿರುತ್ತದೆ ಮತ್ತು 2 ಕೊರಿಂಥ 4:10ರಲ್ಲಿ ಹೇಳಿದಂತೆ, "ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುತ್ತಾ ತಿರುಗಾಡುತ್ತೇವೆ".

  ಆತ್ಮಿಕನಾದವನಿಗೆ ಯಾರ ಮುಂದೆಯೂ - ತನಗಿಂತ ಹಿರಿಯರು ಅಥವಾ ಕಿರಿಯರ ಮುಂದೆ - ತಗ್ಗಿಸಿಕೊಳ್ಳಲು, ಅಥವಾ ಅವರಿಂದ ಕ್ಷಮೆ ಕೇಳಲು ಯಾವ ಸಂಕೋಚವೂ ಇರುವದಿಲ್ಲ. ಆತನು ಒಬ್ಬನೇ ಒಬ್ಬ ವ್ಯಕ್ತಿಯ ಮನಸ್ಸನ್ನು ಯಾವುದೇ ರೀತಿಯಲ್ಲಿ ನೋಯಿಸಿದ್ದರೂ ಸಹ - ಆತನ ಹೆಂಡತಿ, ಸಹೋದರನ ಅಥವಾ ಅಕ್ಕಪಕ್ಕದವರು, ಯಾರಾದರೂ ಆಗಿರಬಹುದು - ಆತನ ಪ್ರಾರ್ಥನೆ ಮತ್ತು ಸೇವೆ ಯಾವತ್ತೂ ದೇವರಿಂದ ಸ್ವೀಕರಿಸಲ್ಪಡದು ಎಂದು ಆತನಿಗೆ ತಿಳಿದಿದೆ. ಹಾಗಾಗಿ, ತಾನು ಯಾರನ್ನಾದರೂ ನೋಯಿಸಿರುವದು ಆತನ ಗಮನಕ್ಕೆ ಬಂದೊಡನೆಯೇ, ಆತನು ತನ್ನ "ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ, ಮೊದಲು ತನ್ನ ಸಹೋದರನ ಸಂಗಡ ರಾಜಿ ಮಾಡಿಕೊಂಡು, ಆ ಮೇಲೆ ಬಂದು ತನ್ನ ಕಾಣಿಕೆಯನ್ನು ದೇವರಿಗೆ ಕೊಡುತ್ತಾನೆ" (ಮತ್ತಾಯ 5:23-24).

  ಆತ್ಮಿಕನಾದ ಮನುಷ್ಯನು ತನ್ನ ಸುತ್ತಮುತ್ತಲು ನೋಡುತ್ತಾನೆ

  ಮೇಲಿನ ನೋಟ ಮತ್ತು ಒಳಗಿನ ನೋಟವು ಮುಂದೆ ಹೊರಗಣ ನೋಟಕ್ಕೆ ನಡೆಸುತ್ತವೆ.

  ಆತ್ಮಿಕನಾದವನು, ದೇವರು ತನ್ನನ್ನು ಆಶೀರ್ವದಿಸಿರುವದು ಕೇವಲ ಇನ್ನೊಬ್ಬರನ್ನು ಆಶೀರ್ವದಿಸುವದಕ್ಕಾಗಿ ಎಂದು ತಿಳಿದಿದ್ದಾನೆ. ತನ್ನನ್ನು ದೇವರು ಕ್ಷಮಿಸಿದ್ದರಿಂದ, ತನಗೆ ಹಾನಿ ಮಾಡಿರುವ ಎಲ್ಲರನ್ನು ತಡಮಾಡದೆ, ಸಂತೋಷವಾಗಿ ಕ್ಷಮಿಸುತ್ತಾನೆ. ದೇವರು ತನಗೆ ಬಹಳ ಒಳ್ಳೆಯವನು ಆಗಿರುವುದರಿಂದ, ಈತನೂ ಎಲ್ಲರೊಂದಿಗೆ ಒಳ್ಳೆಯವನು ಆಗಿರುತ್ತಾನೆ. ಈತನು ದೇವರಿಂದ ಉಚಿತವಾಗಿ ಪಡೆದಿದ್ದರಿಂದ, ಇತರರಿಗೂ ಉಚಿತವಾಗಿ ಕೊಡುತ್ತಾನೆ.

  ಒಬ್ಬ ಆತ್ಮಿಕ ಮನುಷ್ಯನು ಯಥಾರ್ಥವಾಗಿ ಇತರರ ಹಿತದ ಬಗ್ಗೆ ಚಿಂತಿಸುತ್ತಾನೆ. ಆತನಲ್ಲಿ ಕಷ್ಟ-ವಿನಾಶಕ್ಕೆ ಈಡಾಗಿರುವ ಜನತೆಗಾಗಿ ಸಂವೇದನೆ ತುಂಬಿರುತ್ತದೆ. ಆತನು ಕರುಣೆಯುಳ್ಳವನಾಗಿದ್ದು, ಬಳಲುತ್ತಿರುವ ಒಬ್ಬ ಸಹೋದರನ ಅವಶ್ಯಕತೆಯನ್ನು ಎಂದಿಗೂ ಕಡೆಗಣಿಸುವದಿಲ್ಲ - ಮತ್ತು ಒಳ್ಳೆಯ ಸಮಾರ್ಯದವನ ಸಾಮ್ಯದ ಯಾಜಕ ಮತ್ತು ಲೇವಿಯರಂತೆ ನಡೆಯುವದಿಲ್ಲ (ಲೂಕ 10:30-37).

  ದೇವರಲ್ಲಿ ಬಿದ್ದುಹೋಗಿರುವ ಮನುಷ್ಯನ ಬಗ್ಗೆ ಕಳವಳಿ ಇದೆ - ಅದು ಆತನಿಗೆ ಸಹಾಯ ಒದಗಿಸಿ, ಆಶೀರ್ವದಿಸಿ, ಮೇಲಕ್ಕೆ ಎತ್ತುವದು ಅಲ್ಲದೆ, ಆತನನ್ನು ಸೈತಾನನ ಬಂಧನದಿಂದ ಬಿಡಿಸುವದಕ್ಕಾಗಿ ಆಗಿದೆ. ಆತ್ಮಿಕ ಮನುಷ್ಯನಲ್ಲೂ ಇದೇ ರೀತಿಯ ಕಾಳಜಿ ಇರುತ್ತದೆ. ತನ್ನ ಯಜಮಾನನಂತೆ ಆತನೂ ಸಹ ಸೇವೆ ಮಾಡಿಸಿಕೊಳ್ಳುವದನ್ನು ಅಲ್ಲ, ಇನ್ನೊಬ್ಬರ ಸೇವೆ ಮಾಡಲು ಬಯಸುತ್ತಾನೆ. ಯೇಸುವು ಒಳ್ಳೆಯದನ್ನೇ ಮಾಡುತ್ತಾ, ಸೈತಾನನ ಬಂಧನದಿಂದ ಜನರನ್ನು ಬಿಡುಗಡೆಗೊಳಿಸುತ್ತಾ, ಎಲ್ಲೆಡೆ ಸಂಚರಿಸುತ್ತಿದ್ದನು (ಅ.ಕೃ. 10:38). ಆತ್ಮಿಕ ಮನುಷ್ಯನೂ ಇದನ್ನೇ ಮಾಡುತ್ತಾನೆ.

  ಒಬ್ಬ ಆತ್ಮಿಕ ಮನುಷ್ಯನು ಸೇವೆ ಮಾಡುವ ಮೂಲಕ ಇತರರಿಂದ ಹೆಚ್ಚಳವನ್ನು - ಸಂಪತ್ತು ಅಥವಾ ಗೌರವವನ್ನು - ಗಳಿಸಲು ಆಶಿಸುವದಿಲ್ಲ. ದೇವರು ಮಾಡುವಂತೆ, ಆತನು ತನ್ನ ಜೀವನ ಮತ್ತು ಶ್ರಮೆಯಿಂದ ಇತರರನ್ನು ಆಶೀರ್ವದಿಸಲು ಮಾತ್ರ ಇಚ್ಛಿಸುತ್ತಾನೆ. ಆತನು ಇತರರಿಂದ ಯಾವುದೇ ಕಾಣಿಕೆಯನ್ನು ಯಾವತ್ತೂ ಬಯಸುವದಿಲ್ಲ - ಆತನು ತನ್ನ ಪ್ರತಿಯೊಂದು ಅವಶ್ಯಕತೆಗಾಗಿ ದೇವರನ್ನು ನಂಬುತ್ತಾನೆ. 2ನೇಯ ಶತಮಾನದಿಂದ ನಮಗೆ ಸಿಕ್ಕಿರುವ "ಹನ್ನೆರಡು ಅಪೊಸ್ತಲರ ಬೋಧನೆಗಳು" ಎಂಬ ಹೆಸರಿನ ಒಂದು ಚಿಕ್ಕ ಪುಸ್ತಕದಲ್ಲಿ, ಅಪೊಸ್ತಲರು ಅವರ ಕಾಲದ ಎಲ್ಲಾ ವಿಶ್ವಾಸಿಗಳಿಗೆ ಬೋಧಿಸಿದ್ದೇನೆಂದರೆ - ಅವರಿಂದ ಹಣ ಕೇಳುವ ಬೋಧಕರು ಸುಳ್ಳು ಬೋಧಕರು ಆಗಿರುತ್ತಾರೆ, ಅವರ ಕುರುತಾಗಿ ಎಚ್ಚರವಾಗಿರಬೇಕು, ಎಂದು. ನಾವು ಇಷ್ಟು ಮಾತ್ರ ತಿಳಕೊಂಡಿದ್ದರೆ, ಇಂದಿನ ಹಲವಾರು ಸುಳ್ಳು ಪ್ರವಾದಿಗಳಿಂದ ರಕ್ಷಿಸಲ್ಪಡುತ್ತಿದ್ದೆವು!!

  ಒಬ್ಬ ಆತ್ಮಿಕ ಮನುಷ್ಯನು ಮೇಲೆ, ಒಳಗಡೆ ಹಾಗೂ ತನ್ನ ಸುತ್ತ ಮುತ್ತಲೂ ನೋಡುತ್ತಾನೆ. ಅವನು ಕೇವಲ ಮೇಲೆ ನೋಡುವದಾದರೆ, ಅದು ಅಸಹಜವಾಗಿರುತ್ತದೆ - "ಭೂಲೋಕದ ಜೀವನಕ್ಕೆ ಯಾವ ಉಪಯುಕ್ತತೆಯೂ ಇರದಂತೆ ಸಂಪೂರ್ಣವಾಗಿ ಪರಲೋಕದಲ್ಲಿ ಮಗ್ನರಾಗಿರುವದು". ಆತನು ಕೇವಲ ತನ್ನೊಳಗೆ ನೋಡಿದರೆ, ದಿನವಿಡೀ ಕುಗ್ಗಿ ನಿರುತ್ಸಾಹಗೊಳ್ಳುತ್ತಾನೆ. ಕೇವಲ ಸುತ್ತಮುತ್ತ ನೋಡುವದಾದರೆ ಆತನ ಸೇವೆಯಲ್ಲಿ ಆಳ ಇರುವದಿಲ್ಲ. ಆದರೆ ಒಬ್ಬ ಆತ್ಮಿಕ ಮನುಷ್ಯನು ನಿರಂತರವಾಗಿ ಈ ಮೂರೂ ದಿಕ್ಕುಗಳಲ್ಲಿ ನೋಡುತ್ತಾನೆ. ನಾವು ಸಂತುಲಿತವಾಗಿ ಇರುವಂತೆ - ಮತ್ತು ಆತ್ಮಿಕರಾಗುವಂತೆ - ದೇವರು ನಮಗೆ ಸಹಾಯ ಮಾಡಲಿ.