ಉಪ್ಪು ತುಂಬಿರುವ ಒಂದು ಹೊಸ ಪಾತ್ರೆ

Article Body: 

(ಝ್ಯಾಕ್ ಪೂನನ್ ರವರು 1963ರ ಅಕ್ಟೋಬರ್ ನಲ್ಲಿ, ತಮ್ಮ 23ನೇ ವಯಸ್ಸಿನಲ್ಲಿ, ಇನ್ನೂ ನೌಕಾದಳದಲ್ಲಿ ಕೆಲಸ ಮಾಡುತ್ತಿದ್ದಾಗ, ಹೈದರಾಬಾದಿನಲ್ಲಿ ನಡೆದ ಭಕ್ತಸಿಂಗ್ ರವರ "ಪವಿತ್ರ ಕೂಟ"ದಲ್ಲಿ ನೀಡಿದ ಸಂದೇಶ)

ಓದುವಿಕೆ : ಮತ್ತಾಯ 5:13; 2 ಅರಸು 2:1-22; ಅಪೊಸ್ತಲರ ಕೃತ್ಯಗಳು 1:1-9.

ಈ ಲೋಕದ ಜೀವಿತಕ್ಕಾಗಿ ದೇವರ ವ್ಯವಸ್ಥೆ

ಮೇಲೆ ಕೊಟ್ಟಿರುವ ಸತ್ಯವೇದದ ವಚನಗಳಲ್ಲಿ, ಶ್ರೇಷ್ಠ ಪ್ರವಾದಿಯಾಗಿದ್ದ ಎಲೀಯನು ಪರಲೋಕಕ್ಕೆ ಎತ್ತಲ್ಪಡಲಿದ್ದ ದಿನಗಳ ಸನ್ನಿವೇಷವನ್ನು ನೋಡುತ್ತೇವೆ. ಇಸ್ರಾಯೇಲ್ಯರು ದೇವರಿಂದ ಹೆಚ್ಚು ಹೆಚ್ಚಾಗಿ ದೂರ ಸರಿಯುತ್ತಿದ್ದ ಸಮಯದಲ್ಲಿ, ದೇವರು ಎಲೀಯನನ್ನು ಕಳುಹಿಸಿದರು. ಅವನೊಬ್ಬ ಮಹಾ ಪ್ರವಾದಿಯಾಗಿದ್ದನು. ಒಂದು ಸಂದರ್ಭದಲ್ಲಿ ಆತನು ಪ್ರಾರ್ಥಿಸಿ ಆಕಾಶದಿಂದ ಬೆಂಕಿ ಬೀಳಿಸಿದ್ದನು. ಆದರೆ ಈಗ ಆತನು ಮೇಲಕ್ಕೆ ಎತ್ತಲ್ಪಡಬೇಕಾಗಿತ್ತು. ಇಂತಹ ಸಮಯದಲ್ಲಿ ಇಸ್ರಾಯೇಲ್ಯರ ಗತಿ ಏನಾಗಲಿತ್ತು?

ಈಗಾಗಲೇ ದೇವರು ಎಲೀಯನಿಗೆ, "ನಿನ್ನ ಜಾಗದಲ್ಲಿ ಶಾಘಾಟನ ಮಗನಾದ ಎಲೀಷನನ್ನು ನಿನಗೆ ಬದಲಾಗಿ ಪ್ರವಾದಿಯನ್ನಾಗಿ ಅಭಿಷೇಕಿಸು," ಎಂಬುದಾಗಿ 1 ಅರಸು 19:16ರಲ್ಲಿ ತಿಳಿಸಿದ್ದರು. ಇದು ದೇವರು ಮಾಡಿದ ಪೂರ್ವಸಿದ್ಧತೆಯಾಗಿತ್ತು. ಯೇಸು ಕ್ರಿಸ್ತನು ಮೇಲಕ್ಕೆ ಎತ್ತಲ್ಪಟ್ಟಾಗ ಕೂಡ ಹೀಗೆಯೇ ನಡೆಯಿತು. ಆತನು ತನ್ನ ಕೆಲಸವನ್ನು ಮುಂದುವರಿಸಲು ತನ್ನ ಶಿಷ್ಯರನ್ನು ಈ ಲೋಕದಲ್ಲಿ ಇರಿಸಿದನು.

ಮುಂದೆ ಎಲೀಷನು ಕಷ್ಟಕರವಾದ ಕೆಲಸ ಮಾಡಬೇಕೆಂದು ಅರಿತಿದ್ದ ಎಲೀಯನು ಅವನಿಗೆ ಹೀಗೆನ್ನುತ್ತಾನೆ - "ನಿನ್ನನ್ನು ಬಿಟ್ಟುಹೋಗುವ ಮೊದಲು ನಾನು ನಿನಗೋಸ್ಕರ ಏನು ಮಾಡಲಿ?" (2 ಅರಸು. 2:9). ಕರ್ತನಾದ ಯೇಸುವು ತನ್ನ ಶಿಷ್ಯರಿಗೆ ಸರಿಯಾಗಿ ಇದೇ ಮಾತನ್ನು ಹೇಳಿದನು "ನಾನು ತಂದೆಯ ಬಳಿಗೆ ಹೋಗುವದರಿಂದ, ನಾನು ನಡಿಸುವ ಕ್ರಿಯೆಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನೀವು ನಡಿಸುತ್ತೀರಿ" (ಯೋಹಾನ 14:12). ಎಲೀಯನು ಎಲೀಷನಿಗೆ ಹೇಳಿದ ಮಾತು, "ನಾನು ನಿನ್ನ ಬಳಿಯಿಂದ ತೆಗೆಯಲ್ಪಡುವಾಗ ನೀನು ನನ್ನನ್ನು ನೋಡುವದಾದರೆ ಅದು ದೊರಕುವದು; ಇಲ್ಲವಾದರೆ ದೊರಕುವದಿಲ್ಲ" (2 ಅರಸು. 2:10). ಮುಂದೆ ಅವನು ಮೇಲಕ್ಕೆ ಏರುವದನ್ನು ಎಲೀಷನು ನೋಡಿದ್ದರಿಂದ, ಅವನು ಎಲೀಯನಿಂದ ಬಿದ್ದ ಹೊದಿಕೆಯನ್ನು ತೆಗೆದುಕೊಂಡನು. ಅದೇ ರೀತಿ, ಕರ್ತನಾದ ಯೇಸುವು ಪರಲೋಕಕ್ಕೆ ಏರಿಹೋದ ನಂತರ, ಪಂಚಾಶತ್ತಮದ ದಿನದಂದು ತನ್ನ ಶಿಷ್ಯರ ಹೃದಯಕ್ಕೆ ಪವಿತ್ರಾತ್ಮನನ್ನು ಕಳುಹಿಸಿಕೊಟ್ಟನು.

ಮಹಿಮಾ ಪದವಿಗೆ ಕರ್ತ ಯೇಸುವಿನ ಎತ್ತಲ್ಪಡುವಿಕೆ

ಈ ಸಂದರ್ಭದಲ್ಲಿ ಪ್ರವಾದಿಗಳ ಮಕ್ಕಳು ಎಲೀಷನನ್ನು, "ಯೆಹೋವನು ಈ ಹೊತ್ತು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ಮೇಲಕ್ಕೆ ಕರೆದುಕೊಳ್ಳುವನೆಂದು ನಿನಗೆ ಗೊತ್ತುಂಟೋ?" ಎಂದು ಪ್ರಶ್ನಿಸಿದರು (2 ಅರಸು 2:3,5). ಮುಂದೆ ಆ ಪ್ರವಾದಿಗಳ ಮಕ್ಕಳೇ, ತಮ್ಮ ಹೇಳಿಕೆಯ ಪ್ರಕಾರ ಮೇಲೆತ್ತಲ್ಪಟ್ಟಿದ್ದ ಎಲೀಯನನ್ನು ಹುಡುಕಲು ಐವತ್ತು ಜನರನ್ನು ಕಳುಹಿಸುವಂತೆ ಎಲೀಷನನ್ನು ಒತ್ತಾಯ ಪಡಿಸಿದರು. ಎಲೀಯನು ಸ್ವಲ್ಪ ಸಮಯದಲ್ಲಿ ಮೇಲೆತ್ತಲ್ಪಡುವದಾಗಿ ಸ್ವತಃ ಅವರು ಹೇಳಿದ್ದರು. ಇದರ ನಂತರ, ಎಲೀಯನು ಮೇಲೆ ಹೋಗುವದನ್ನು ಅವರು ನೋಡಿದರು. ಆದರೂ ಅವನು ಪರಲೋಕಕ್ಕೆ ಹೋದನೆಂದು ಅವರು ನಂಬಲಿಲ್ಲ. ಪವಿತ್ರಾತ್ಮನು ಎಲೀಯನನ್ನು ಎಲ್ಲೋ ಬೀಸಿ ಒಗೆದಿರುತ್ತಾನೆಂದು ಅವರು ಯೋಚಿಸಿದರು. ಹಾಗಾಗಿ ಅವರಿಗೆ ಎಲೀಯನ ಬಲ ದೊರೆಯದೇ ಹೋಯಿತು.

ಇದೇ ರೀತಿಯಾಗಿ, ಇಂದು ಹಲವು ಜನರು ವೈಚಾರಿಕವಾಗಿ ಅನೇಕ ಸಂಗತಿಗಳನ್ನು ಅರಿತಿದ್ದಾರೆ. ಅವರು ಬಾಯಿಮಾತಿನಲ್ಲಿ ಹಲವು ಅದ್ಭುತ ವಿಚಾರಗಳನ್ನು ವಿವರಿಸುತ್ತಾರೆ, ಆದರೆ ಕರ್ತನಾದ ಯೇಸು ಕ್ರಿಸ್ತನು ಅತ್ಯುನ್ನತ ಸ್ಥಾನಕ್ಕೆ ಏರಿಸಲ್ಪಟ್ಟಿರುವದನ್ನು ಅವರ ಹೃದಯಗಳು ತಿಳಕೊಂಡಿಲ್ಲ. ಕ್ರಿಸ್ತನು ಮಹಿಮಾ ಪದವಿಗೆ ಎತ್ತಲ್ಪಟ್ಟದ್ದನ್ನು ಎಫೆಸದ ವಿಶ್ವಾಸಿಗಳಿಗೂ ಸಹ ಪೌಲನು ಬರೆಯಬೇಕಾಯಿತು (ಎಫೆಸ 1:18-23).

ಎಲೀಯನು ಎಲೀಷನಿಗೆ ಹೇಳಿದ ಮಾತು, "ನಾನು ಮೇಲೆ ಹೋಗುವುದನ್ನು ನೋಡಿದರೆ ಮಾತ್ರ ನಿನಗೆ ನನ್ನ ಆತ್ಮದ ಎರಡು ಪಾಲು ದೊರಕುತ್ತದೆ," ಎಂಬುದಾಗಿ. ಯೇಸುವು ಎಲ್ಲರಿಗಿಂತ ಉನ್ನತ ಸ್ಥಾನಕ್ಕೆ ಎತ್ತಲ್ಪಟ್ಟಿರುವದನ್ನು, ನಮ್ಮ ಹೃದಯದಲ್ಲಿ ವಿಶ್ವಾಸದ ಕಣ್ಣುಗಳಿಂದ ನೋಡಿ ನಂಬಿದಾಗ ಮಾತ್ರ, ನಾವು ಪವಿತ್ರಾತ್ಮನಿಂದ ತುಂಬಿಸಲ್ಪಡುತ್ತೇವೆ. ಯೇಸುವು ಅತ್ಯುನ್ನತ ಸ್ಥಾನದಲ್ಲಿ ಇರುವದನ್ನು ನಮಗೆ ತೋರಿಸುವಂತೆ ನಾವು ದೇವರನ್ನು ಕೇಳಿದರೆ ಮಾತ್ರ ಅದನ್ನು ತೋರಿಸುತ್ತಾರೆ.

ನೀವು ಪ್ರಕಟನೆ ಪುಸ್ತಕವನ್ನು ಅಧ್ಯಯನ ಮಾಡಿದರೆ, ಯಜ್ಞದ ಕುರಿಯಾದಾತನು ಸಿಂಹಾಸನದ ಮಧ್ಯೆ ಇರುವದನ್ನು ಕಾಣುವಿರಿ. ಪ್ರಪಂಚದ ಜನರು ಇದರ ಕುರಿತಾಗಿ ಏನು ಯೋಚಿಸುತ್ತಾರೆ, ಎನ್ನುವ ವಿಷಯ ಮುಖ್ಯವಲ್ಲ. ದೇವರು ಕರ್ತನಾದ ಯೇಸು ಕ್ರಿಸ್ತನನ್ನು ಎಲ್ಲರಿಗಿಂತ ಉನ್ನತ ಸ್ಥಾನಕ್ಕೆ ಏರಿಸಿದ್ದಾರೆ. ಕರ್ತನಾದ ಯೇಸುವು, ತನ್ನ ಕೈಯಲ್ಲಿ ಆಕಾಶ ಮತ್ತು ಭೂಮಿಯ ಸಂಪೂರ್ಣ ಅಧಿಕಾರ ಇದೆಯೆಂದು ತನ್ನ ಶಿಷ್ಯರಿಗೆ ಹೇಳಿದ್ದಕ್ಕೆ ಇದೇ ಕಾರಣ. ಇಂದು ಆ ಕರ್ತನು ನಮ್ಮ ಮಧ್ಯೆ ಇದ್ದಾನೆ. ನಾವು ನಮ್ಮ ಕಣ್ಣಿನಿಂದ ಆತನನ್ನು ನೋಡುವದಕ್ಕೆ ಸಾಧ್ಯವಾಗದೇ ಇರಬಹುದು, ಆದರೆ ಆತನು ಇಲ್ಲಿ ಇದ್ದಾನೆ. ಆದುದರಿಂದ ನಾವು ಮಳೆಯಿಂದ ನಮ್ಮ ಕೂಟಕ್ಕೆ ತೊಂದರೆ ಉಂಟಾಗುವದು, ಇತ್ಯಾದಿ ಚಿಕ್ಕಪುಟ್ಟ ವಿಷಯಗಳ ಬಗ್ಗೆ ಚಿಂತಿಸಬೇಕಿಲ್ಲ, ಏಕೆಂದರೆ ನಮ್ಮ ಕರ್ತನ ಕೈಯಲ್ಲಿ ಭೂಮ್ಯಾಕಾಶಗಳ ಸಕಲ ಅಧಿಕಾರವಿದೆ. ನಾವು ಅಮೇರಿಕದ ರಾಷ್ಟ್ರಪತಿಯಾಗಲೀ, ರಷ್ಯಾದ ಪ್ರಧಾನ ಮಂತ್ರಿಯಾಗಲೀ ಏನು ಹೇಳುತ್ತಾರೆಂದು ತಲೆ ಕೆಡಿಸಿಕೊಳ್ಳುವದು ಅನಾವಶ್ಯಕ, ಏಕೆಂದರೆ ಕರ್ತನಾದ ಯೇಸು ಕ್ರಿಸ್ತನ ಕೈಯಲ್ಲಿ ಎಲ್ಲಾ ಅಧಿಕಾರವು ಇಂದಿಗೂ ಮತ್ತು ಎಂದೆಂದಿಗೂ ಇರುತ್ತದೆ. ಕರ್ತನ ಅನುಮತಿಯಿಲ್ಲದೆ ಭೂಮಿಯ ಮೇಲೆ ಯಾವ ಮನುಷ್ಯನೂ ದೇವರ ಒಂದು ಮಗುವನ್ನು ಮುಟ್ಟಲಾರನು. ಆದರೆ ಆ ಪ್ರವಾದಿಗಳ ಮಕ್ಕಳು ಇದನ್ನು ನಂಬಲೇ ಇಲ್ಲ. ಇಂತಹ ಜನರು ದೇವರ ಶಕ್ತಿಯನ್ನು ಹೊಂದಲು ಆಗುವದಿಲ್ಲ.

ಬಂಜರು ಭೂಮಿ ಮತ್ತು ದೇವರ ಪರಿಹಾರ

ಎಲೀಷನು ದೇವರ ಒಬ್ಬ ಸಾಕ್ಷಿಯಾಗಿದ್ದನು. ಪರಲೋಕಕ್ಕೆ ಏರುವದಕ್ಕೆ ಸ್ವಲ್ಪ ಮೊದಲು ಕರ್ತ ಯೇಸುವು ತನ್ನ ಶಿಷ್ಯರಿಗೆ, "ನೀವು ಭೂಮಿಯ ಎಲ್ಲಾ ಭಾಗಗಳಲ್ಲಿಯೂ ನನ್ನ ಸಾಕ್ಷಿಯಾಗುವಿರಿ," ಎಂದು ಹೇಳಿದರು. ನೀವು 2 ಅರಸು 2:19-22 ಓದಿದರೆ, ನಾವು ಭೂಮಿಯ ಎಲ್ಲಾ ಭಾಗಗಳಲ್ಲಿ ಸಾಕ್ಷಿಗಳಾಗುವದನ್ನು ದೇವರು ಬಯಸುತ್ತಾರೆಂದು ನೋಡುತ್ತೀರಿ. ಎಲೀಷನು ಜೆರಿಕೋವಿಗೆ ಹೋದನು. ಆ ನಗರದ ಜನರು ಎಲೀಷನಿಗೆ, ನಗರದ ಪರಿಸ್ಥಿತಿ ಹಿತವಾಗಿದ್ದರೂ, ನೀರು ಕೆಟ್ಟದ್ದಾಗಿದೆ ಮತ್ತು ಭೂಮಿಯು ಬಂಜರಾಗಿದೆ ಎಂದು ಹೇಳಿದರು. ಅದೊಂದು ಅದ್ಭುತ ನಗರವಾಗಿತ್ತು. ಅಲ್ಲಿ ಸುಂದರ ಉದ್ಯಾನವನಗಳಿದ್ದವು. ಗಮನಾರ್ಹ ಕಟ್ಟಡಗಳಿದ್ದವು, ಶಾಲಾ ಕಾಲೇಜುಗಳು ಇದ್ದವು ಮತ್ತು ಅನೇಕ ಅದ್ಭುತಕರವಾದ ವಿಷಯಗಳಿದ್ದವು. ಆದರೆ ಜೀವನಕ್ಕೆ ಅಗತ್ಯವಾದದ್ದು ಒಂದು ಅಲ್ಲಿರಲಿಲ್ಲ: ನೀರು ಕೆಟ್ಟದ್ದಾಗಿತ್ತು, ಎಂಬುದಾಗಿ ನಾವು ನೋಡುತ್ತೇವೆ.

ನಮ್ಮ ಜೀವನಕ್ಕೆ ನೀರು ಅವಶ್ಯಕವಾದದ್ದು, ನೀವು ಒಳ್ಳೆಯ ಕಟ್ಟಡಗಳಿಲ್ಲದೆ ಜೀವಿಸಬಹುದು. ಆಹಾರ ಇಲ್ಲದೆಯೂ ಅನೇಕ ದಿನಗಳ ಕಾಲ ಬದುಕಬಹುದು. ಆದರೆ ನೀರಿಲ್ಲದೆ ಹೆಚ್ಚು ಸಮಯ ಬದುಕಲು ಸಾಧ್ಯವಿಲ್ಲ. ಕೆಟ್ಟ ನೀರು, ಬಂಜರು ಭೂಮಿ, ಫಲವಿಲ್ಲದ ಮರಗಳ ಈ ಸುಂದರ ನಗರ, ಇಂದು ಮಾನವನ ಪರಿಸ್ಥಿತಿಯ ಒಂದು ನಿಜ ಚಿತ್ರಣವಾಗಿದೆ! ದೃಷ್ಟಿಗೆ ಹಿತಕರ, ಆದರೆ ಕೆಟ್ಟ ಹೃದಯ. ಅವರು ನೋಡಲು ಬಹಳ ಅಂದವಾಗಿದ್ದಾರೆ, ಒಳ್ಳೆಯ ಪೋಷಾಕುಗಳನ್ನು ಧರಿಸುತ್ತಾರೆ, ಸಭ್ಯ ನಡವಳಿಕೆಯನ್ನು ಹೊಂದಿದ್ದಾರೆ, ಅನೇಕ ಪದವಿಗಳನ್ನು ಪಡೆದಿದ್ದಾರೆ ಮತ್ತು ಶ್ರೇಷ್ಠ ಮನೆಗಳಲ್ಲಿ ವಾಸಿಸುತ್ತಾರೆ. ಆದರೆ ಒಂದು ಅತ್ಯಾವಶ್ಯಕ ವಿಷಯ - ನಿತ್ಯಜೀವ - ಅದು ಅವರಲ್ಲಿಲ್ಲ. ನಾವು ಇದನ್ನೇ ಇಂದು ಪ್ರಪಂಚದ ಎಲ್ಲೆಡೆಯೂ ನೋಡುತ್ತೇವೆ - ಪ್ರಪಂಚದಲ್ಲೇ ಮಾತ್ರವಲ್ಲ, ದೇವಸಭೆಗಳಲ್ಲೂ ಇದರ ಅಭಾವವಿದೆ.

ಈ ಮಾತು ಎಲೀಷನಿಗೆ ಯಾವ ಊರಿನಲ್ಲಿ ಹೇಳಲಾಯಿತು? ಯೆರಿಕೋವಿನಲ್ಲಿ! ಒಂದು ಕಾಲದಲ್ಲಿ ಯೆರಿಕೋವಿನಲ್ಲಿ ದೇವರು ತನ್ನ ಪ್ರಭಾವವನ್ನು ತೋರಿಸಿದ್ದರು. ಯೆರಿಕೋ ಬಲವಾದ ಗೋಡೆಗಳಿಂದ ಆವರಿಸಲ್ಪಟ್ಟ ಒಂದು ಬಲಿಷ್ಠ ನಗರವಾಗಿತ್ತು. ಯೆಹೋಶುವನು ಇಸ್ರಾಯೇಲ್ಯರೊಂದಿಗೆ ಈ ನಗರಕ್ಕೆ ಬಂದಾಗ ಅದರ ಗೋಡೆಗಳು ನೆಲಸಮವಾಗಿದ್ದವು. ಆ ಸಮಯದಲ್ಲಿ ದೇವರ ಪ್ರಭಾವವು ಯರಿಕೋವಿನಲ್ಲಿ ಪ್ರದರ್ಶಿತವಾಗಿತ್ತು. ಆದರೆ ಈಗ 500 ವರ್ಷಗಳ ನಂತರ, ದೇವರ ಪ್ರಭಾವವು ಆ ಪಟ್ಟಣವನ್ನು ಬಿಟ್ಟು ಹೋಗಿತ್ತು. ಅದರ ನೆಲವು ಬಂಜರಾಗಿ, ಫಲಹೀನವಾಗಿತ್ತು.

ಇದೇ ರೀತಿ 2000 ವರ್ಷಗಳ ಕೆಳಗೆ, ದೇವಸಭೆಯಲ್ಲಿ ದೇವರ ಮಹಾ ಶಕ್ತಿ ಪ್ರದರ್ಶಿತವಾಗಿತ್ತು. ಇದರ ನಂತರವೂ ಕೆಲವು ಸಂದರ್ಭಗಳಲ್ಲಿ ದೇವರು ತನ್ನ ಶಕ್ತಿಯನ್ನು ಪ್ರದರ್ಶಿಸಿದರು. ಆದರೆ ಇಂದು ಸಭೆಗಳಲ್ಲಿ, ಹೊಸ ಒಡಂಬಡಿಕೆ ಮಾದರಿಯ ಸಭೆ ಎಂದು ಹೇಳಿಸಿಕೊಳ್ಳುವಲ್ಲಿಯೂ ಸಹ, ನಾವು ಏನನ್ನು ಕಾಣುತ್ತೇವೆ? ಪರಿಸ್ಥಿತಿ ಹಿತವಾಗಿದೆ, ಆದರೆ ಜೀವ ಜಲವು ಕೆಟ್ಟದ್ದಾಗಿದೆ. ಮತ್ತು ಕೊನೆಯ ದಿನಗಳಲ್ಲಿ ಲೋಕದ ಸ್ಥಿತಿ ಹೀಗೆಯೇ ಇರುತ್ತದೆ, ಎಂದು ಕರ್ತನು ನಿಖರವಾಗಿ ಹೇಳಿದನು (ಪ್ರಕಟನೆ 3:17).

ಈ ಕೆಟ್ಟ ನೀರಿಗೆ ದೇವರ ಪರಿಹಾರ ಏನು? ಈ ಬಂಜರು ಭೂಮಿಗೆ ದೇವರ ಪರಿಹಾರ ಏನು? ನನ್ನ ಮತ್ತು ನಿಮ್ಮ ಜೀವನದ ಫಲಹೀನತೆಗೆ ದೇವರ ಪರಿಹಾರವೇನು? ನಮ್ಮಿಂದ ಶುದ್ಧವಾದ ಜೀವನದಿಯ ನೀರು ಹರಿಯುವದು ಹೇಗೆ? ಇದಕ್ಕೆ ಉತ್ತರ ನಿಮಗೆ 20ನೇ ವಚನದಲ್ಲಿ ಸಿಗುತ್ತದೆ: "ಒಂದು ಹೊಸ ಮಡಿಕೆಯಲ್ಲಿ ಉಪ್ಪನ್ನು ಹಾಕಿ ತಂದು ಕೊಡಿರಿ."

ನಮ್ಮ ಈ ದಿನಗಳ ಚಿಂತನೆ ಇದೇ ವಿಷಯದ ಕುರಿತಾಗಿದೆ: "ನೀವು ಭೂಮಿಗೆ ಉಪ್ಪಾಗಿದ್ದೀರಿ."

ಲೋಕದ ಬಂಜರುತನಕ್ಕೆ ಮತ್ತು ಸಭೆಯ ಫಲಹೀನತೆಗೆ ದೇವರ ಪರಿಹಾರ, "ಒಂದು ಮಡಿಕೆಯಲ್ಲಿ ಉಪ್ಪು ಹಾಕಿ ತಂದು ಕೊಡಿರಿ." ದೇವರು ಉಪ್ಪಿನಿಂದ ತುಂಬಿದ ಹೊಸ ಪಾತ್ರೆಗಳನ್ನು ಬಯಸುತ್ತಾರೆ. ಉಪ್ಪನ್ನು ನೀರಿನ ಮೇಲೆ ಎರಚಿದ ನಂತರ ದೇವರು ಹೇಳಿದ ಮಾತು, "ಈ ನೀರಿನಿಂದ ಮರಣವೂ, ಬಂಜೆತನವೂ ಉಂಟಾಗದಂತೆ ಇದರಲ್ಲಿದ್ದ ದೋಷವನ್ನೆಲ್ಲಾ ಪರಿಹರಿಸಿದ್ದೇನೆ" (ವಾಕ್ಯ 21).

ಆ ರೋಗಪೀಡಿತ, ಫಲಹೀನ ಭೂಮಿಯು ಗುಣಪಡಿಸಲ್ಪಟ್ಟಿತು. ಇಂದು ನಮ್ಮ ಸುತ್ತಮುತ್ತಲು ಇಡೀ ದೇಶದ ಗುಣಪಡಿಸುವಿಕೆ ಬೇಕಾಗಿದೆ. ಅದು ಹೇಗೆ ಗುಣವಾಯಿತು? ಅದು ಒಂದು ಹೊಸ ಭರಣಿಯಿಂದ ಉಪ್ಪು ಎರಚಲ್ಪಟ್ಟಾಗ ಗುಣಮುಖವಾಯಿತು. ಆದರೆ ಅದು ಒಳ್ಳೆಯ ಉಪ್ಪಾಗಿತ್ತೆಂದು ನಾನು ನಿಮಗೆ ಹೇಳಬಯಸುತ್ತೇನೆ. ಅದು ರುಚಿಯನ್ನು ಕಳಕೊಂಡ ಉಪ್ಪಾಗಿದ್ದರೆ, ಆ ಭೂಮಿಯನ್ನು ಅದು ಗುಣಪಡಿಸುತ್ತಿರಲಿಲ್ಲ.

ದೇವರ ವಾಗ್ದಾನ

ಉಪ್ಪು ತನ್ನ ರುಚಿಯನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವೇ? ಅದಕ್ಕೆ ಒಂದು ದಾರಿಯಿದೆ.

2 ಪೂರ್ವಕಾಲ ವೃತ್ತಾಂತ 7:14ರಲ್ಲಿ ನಾವು ಹೀಗೆ ಓದುತ್ತೇವೆ, "ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು, ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ತಿರುಗಿಕೊಂಡು ನನ್ನನ್ನು ಪ್ರಾರ್ಥಿಸಿ ನನ್ನ ದರ್ಶನವನ್ನು ಬಯಸುವದಾದರೆ, ನಾನು ಪರಲೋಕದಿಂದ ಲಾಲಿಸಿ ಅವರ ಪಾಪಗಳನ್ನು ಕ್ಷಮಿಸಿ ಅವರ ದೇಶದಲ್ಲಿ ಆರೋಗ್ಯವನ್ನು ದಯಪಾಲಿಸುವೆನು."

ಇಲ್ಲಿ ಭೂಮಿ ಗುಣಹೊಂದುವ ವಿಧಾನವನ್ನು ದೇವರು ನಮಗೆ ತೋರಿಸಿದ್ದಾರೆ. ಒಂದು ವೇಳೆ ನಾವು ರುಚಿಯನ್ನು ಕಳೆದುಕೊಂಡ ಉಪ್ಪಿನಂತಿದ್ದರೆ, ಈ ವಚನದಲ್ಲಿ ಹೇಳಲಾದ ನಾಲ್ಕು ಷರತ್ತುಗಳನ್ನು ಖಂಡಿತವಾಗಿ ಪಾಲಿಸಬೇಕು. ಆಗ ನಾವು ಮತ್ತೊಮ್ಮೆ ರುಚಿಯನ್ನು ಪಡೆದುಕೊಳ್ಳುತ್ತೇವೆ ಮತ್ತು ಭೂಮಿಯು ವಾಸಿಯಾಗುತ್ತದೆ.

ನಮ್ಮನ್ನು ತಗ್ಗಿಸಿಕೊಳ್ಳುವದು

ಮೊದಲನೆಯ ಷರತ್ತು, ನಾವು ನಮ್ಮನ್ನು ತಗ್ಗಿಸಿಕೊಳ್ಳಬೇಕು. ಇದು ಅವಿಶ್ವಾಸಿಗಳಿಗೆ ಅಷ್ಟೇ ಅಲ್ಲ, ಕ್ರೈಸ್ತ ವಿಶ್ವಾಸಿಗಳಿಗೂ ಸಹ ಬಹಳ ಕಷ್ಟಕರವಾದದ್ದು.

ಫಿಲಿಪ್ಪಿ. 2:5-8ರಲ್ಲಿ ದೇವರ ವಾಕ್ಯ ಹೀಗೆನ್ನುತ್ತದೆ, "ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದು ಎಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ, ತನ್ನನ್ನು ಬರಿದು ಮಾಡಿಕೊಂಡು, ದಾಸನ ರೂಪವನ್ನು ಧರಿಸಿಕೊಂಡನು”. "ನಾನು ನನ್ನನ್ನು ಎಷ್ಟರ ಮಟ್ಟಿಗೆ ತಗ್ಗಿಸಿಕೊಳ್ಳಲಿ?" ಎಂದು ನೀವು ಪ್ರಶ್ನಿಸಬಹುದು. ಸತ್ಯವೇದದ ಈ ಭಾಗವು ಹೇಳುವಂತೆ, ಕರ್ತನಾದ ಯೇಸು ಕ್ರಿಸ್ತನು ತಗ್ಗಿಸಿಕೊಂಡಷ್ಟು ನಾವು ನಮ್ಮನ್ನು ತಗ್ಗಿಸಿಕೊಳ್ಳಬೇಕು. ನೀವು ನಿಮ್ಮನ್ನು ಅಷ್ಟರ ಮಟ್ಟಿಗೆ ತಗ್ಗಿಸಿಕೊಂಡಿದ್ದೀರಾ? ನಾವು ಮತ್ತಾಯ 5:3ರಲ್ಲೂ ನೋಡುವಂತೆ, ಉಪ್ಪು ತನ್ನ ರುಚಿಯನ್ನು ಮತ್ತೆ ಪಡೆಯಲು ಮೊದಲ ಷರತ್ತು, "ಆತ್ಮದಲ್ಲಿ ಬಡವರಾಗಿರುವವರು ಧನ್ಯರು," ಎಂದಾಗಿದೆ.

ನಾವು ಅನೇಕ ವಿಷಯಗಳಲ್ಲಿ ಹೆಚ್ಚಳ ಪಡಬಹುದು. ಅದು ನಮ್ಮ ಒಳ್ಳೆಯ ಹೆಸರು ಆಗಿರಬಹುದು ಅಥವಾ ನಮ್ಮ ಜನಪ್ರಿಯತೆಯ ಬಗ್ಗೆ ಆಗಿರಬಹುದು - ನಮ್ಮ ಬಗ್ಗೆ ಇತರರು ನಿಜವಾಗಿಯೂ ಶ್ರೇಷ್ಠ ಅಭಿಪ್ರಾಯ ಹೊಂದಿರಬಹುದು. ಆದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಜೀವಿತದಲ್ಲಿ ಏನಾಯಿತು? ಆತನು ಹೆಸರುವಾಸಿಯಾಗಿದ್ದನೇ? ನಾವು ಯೆಶಾಯ 53:3 ರಲ್ಲಿ ಓದುವಂತೆ,"ಅವನು ಧಿಕ್ಕರಿಸಲ್ಪಟ್ಟವನು. ಮನುಷ್ಯರು ಸೇರಿಸಿಕೊಳ್ಳದವನು". ಕರ್ತ ಯೇಸುವು ಪ್ರಸಿದ್ಧಿ ಪಡೆಯಲಿಲ್ಲ. ಲೂಕ 6:26ರಲ್ಲಿ ಆತನೇ ಹೇಳುವಂತೆ, "ಜನರೆಲ್ಲಾ ನಿಮ್ಮನ್ನು ಹೊಗಳಿದರೆ ನಿಮ್ಮ ಗತಿಯನ್ನು ಏನು ಹೇಳಲಿ!" ಗುರುವಿಗಿಂತ ಶಿಷ್ಯನು ದೊಡ್ಡವನಲ್ಲ. ನಮ್ಮ ಕರ್ತನು ಧಿಕ್ಕರಿಸಲ್ಪಟ್ಟು ಜನರಿಂದ ಸೇರಿಸಿಕೊಳ್ಳದವನು ಆಗಿದ್ದನು. ಈ ಲೋಕವು ಅವನನ್ನು ಹೊರತಳ್ಳಿತು. ಆದ್ದರಿಂದ ನಮ್ಮ ಜನಪ್ರಿಯತೆಯ ಬಗ್ಗೆ ಹೆಚ್ಚಳ ಪಡಲು ನಮಗೆ ಯಾವ ಅಧಿಕಾರವೂ ಇಲ್ಲ.

ಬಹುಶಃ ನಾವು ನಮ್ಮ ಪಾಂಡಿತ್ಯ ಮತ್ತು ನಮ್ಮ ವಿದ್ಯೆಯ ಬಗ್ಗೆ ಹೆಮ್ಮೆ ಪಡುತ್ತೇವೆ. ಆದರೆ ನಾವು ಯೋಹಾನ 7:15ರಲ್ಲಿ, ಯೆಹೂದಿಯರು ಕರ್ತನಾದ ಯೇಸುವಿನ ಬಗ್ಗೆ ಹೇಳಿದ ಮಾತನ್ನು ನೋಡುತ್ತೇವೆ, "ವಿದ್ಯಾಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವದು ಹೇಗೆ?" ಕರ್ತನಾದ ಯೇಸುವಿನಲ್ಲಿ ಹೆಚ್ಚಳ ಪಡುವಂತಹ ಪಾಂಡಿತ್ಯ ಅಥವಾ ವಿದ್ಯೆ ಇರಲಿಲ್ಲ. ದೇವರ ವಾಕ್ಯ ಹೀಗೆ ಹೇಳುತ್ತದೆ, "ಯೇಸು ಕ್ರಿಸ್ತನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ".

ಬಹುಶಃ ನಾವು ನಮ್ಮ ಸೌಂದರ್ಯದ ಬಗ್ಗೆ ಹೆಮ್ಮೆ ಪಡಬಹುದು: "ನನ್ನದು ಎಷ್ಟು ಅಂದವಾದ ಮುಖ, ನನ್ನ ದೇಹದಲ್ಲಿ ಎಂತಹ ಲಕ್ಷಣವಿದೆ". ಇತ್ಯಾದಿಯಾಗಿ. ಆದರೆ ಕರ್ತನಾದ ಯೇಸು ಕ್ರಿಸ್ತನು ಹೇಗಿದ್ದನು? ಆತನು ಭೂಮಿಯಲ್ಲಿ ಜನಿಸಿದ ಎಲ್ಲಾ ಜನರಿಗಿಂತಲೂ ಸುಂದರನಾಗಿದ್ದನು, ಆದರೂ ನಾವು ಯೆಶಾಯ 52:14ರಲ್ಲಿ ಓದುವದು ಏನೆಂದರೆ, ಆತನು ಶಿಲುಬೆಯ ಮೇಲೆ ನೇತಾಡಿದಾಗ, "ಅವನ ಮುಖವು ಸಕಲ ಮನುಷ್ಯರ ಮುಖಕ್ಕಿಂತಲೂ, ಅವನ ರೂಪವು ಎಲ್ಲಾ ನರಜನ್ಮದವರ ರೂಪಕ್ಕಿಂತಲೂ ವಿಕಾರವಾಗಿತ್ತು". ಅಂದರೆ ಆತನ ಮುಖವು ಮನುಷ್ಯರ ಮುಖದಂತೆ ಕಾಣುತ್ತಿರಲಿಲ್ಲ. ಇದು ಹೇಗಾಯಿತು? ಮನುಷ್ಯರು ಸುಂದರವಾದ ಈ ಮುಖಕ್ಕೆ - ಎಲ್ಲಾ ಮಾನವರ ಮುಖಗಳಿಗಿಂತ ಸುಂದರವಾದುದಕ್ಕೆ - ಏನು ಮಾಡಿದರು? ಅವರು ಆತನ ಮುಖದ ಕೂದಲನ್ನು ಎಳೆದು ಕಿತ್ತುಹಾಕಿದರು. ಅವರು ತಮ್ಮ ಮುಷ್ಠಿಯಿಂದ ಆತನ ಮುಖಕ್ಕೆ ಹೊಡೆದರು ಮತ್ತು ಅದರ ಮೇಲೆ ಉಗುಳಿದರು. ಆತನ ಕೆನ್ನೆಗಳಿಗೆ ಏಟು ಹಾಕಿದರು. ಆತನ ತಲೆಗೆ ಒಂದು ಮುಳ್ಳಿನ ಕಿರೀಟವನ್ನು ತೊಡಿಸಿದರು. ಆತನ ತಲೆಗೆ ದೊಣ್ಣೆಯಿಂದ ಹೊಡೆದರು. ಅವರು ಅವನಿಗೆ ಅಷ್ಟೆಲ್ಲಾ ಮಾಡಿದ ಮೇಲೆ ಅವನ ಮುಖ ಮನುಷ್ಯರ ಮುಖದಂತೆ ಕಾಣಿಸಲಿಲ್ಲ. ನಮಗೆ ನಮ್ಮ ಸೌಂದರ್ಯದ ಬಗ್ಗೆ ಹೆಚ್ಚಳ ಪಡುವ ಯಾವ ಅಧಿಕಾರವೂ ಇಲ್ಲ.

ಬಹುಶಃ ನಾವು ನಮ್ಮ ಸಾಮರ್ಥ್ಯದ ಬಗ್ಗೆ ಹೆಮ್ಮೆ ಪಡುತ್ತೇವೆ. ನಾವು ಯೋಚಿಸಬಹುದು, "ನಾನು ವಾಕ್ಯಬೋಧನೆ ಮಾಡಬಲ್ಲೆನು. ನಾನು ಚೆನ್ನಾಗಿ ಪ್ರಾರ್ಥಿಸುತ್ತೇನೆ. ನಾನು ಸತ್ಯವೇದವನ್ನು ಚೆನ್ನಾಗಿ ಕಲಿಸಿಕೊಡಬಲ್ಲೆ. ನಾನು ದೇವರ ಮಕ್ಕಳನ್ನು ಚೆನ್ನಾಗಿ ಗಮನಿಸಿ ನೋಡುತ್ತೇನೆ. ನಾನು ಇನ್ನೂ ಅನೇಕ ಕಾರ್ಯಗಳನ್ನು ಮಾಡುತ್ತೇನೆ” ಎಂಬುದಾಗಿ. ನಾವು ಬಾಯಿ ತೆರೆದು ಈ ರೀತಿಯಾಗಿ ಹೇಳದಿದ್ದರೂ, ಮನಸ್ಸಿನಲ್ಲಿ ಹೀಗೆ ಯೋಚಿಸಬಹುದು. ಆದರೆ ಯೇಸು ಕ್ರಿಸ್ತನು ಹೇಗಿದ್ದನು? ಆತನು ಹೀಗೆ ಹೇಳಿದನು, "ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು. ನನ್ನಷ್ಟಕ್ಕೆ ನಾನೇ ಏನು ಮಾಡಲಾರೆನು'', (ಯೋಹಾನ 5:19 ಮತ್ತು 30). ಕರ್ತನಾದ ಯೇಸುವು ಹೇಳಿದ ಮಾತಿನಂತೆ, ಒಂದು ಚಿಕ್ಕ ಕೆಲಸವನ್ನೇ ಆದರೂ ತನ್ನ ಸ್ವಂತ ಬಲದಿಂದ ಮಾಡಲು ಆತನಿಗೆ ಆಗುತ್ತಿರಲಿಲ್ಲ. ಅವನ ಕಾರ್ಯಗಳೆಲ್ಲವೂ ಪವಿತ್ರಾತ್ಮನ ಬಲದಿಂದ ಮಾಡಲ್ಪಟ್ಟವು. ನಾವೂ ಸಹ ಹೀಗೆ ಹೇಳುತ್ತೇವೆಯೇ? ನಮ್ಮ ಸ್ವಂತ ಶಕ್ತಿಯಿಂದ ನಾವು ಏನನ್ನಾದರೂ ಮಾಡುವದಾಗಿ ಹೇಳಿದರೆ, ನಾವು ಅಹಂಕಾರ ಪಡುತ್ತಿದ್ದೇವೆ ಎಂದು ಅರ್ಥ. ಉಪ್ಪು ತನ್ನ ರುಚಿಯನ್ನು ಕಳಕೊಂಡಿರುವದಕ್ಕೆ ಇದೇ ಕಾರಣ.

ನಾವು ಕೆಲವು ಸಲ ನಮ್ಮ ಪೂರ್ವಜರು ಮತ್ತು ನಮ್ಮ ಸಂತಾನದ ಬಗ್ಗೆ ಹೆಮ್ಮೆ ಪಡಬಹುದು. ನಾವು ಹೇಳುತ್ತೇವೆ, "ನನ್ನ ತಂದೆ ದೇವರ ಸೇವಕರಾಗಿದ್ದರು. ನನ್ನ ಮಕ್ಕಳೆಲ್ಲಾ ದೇವ ಸೇವಕರಾಗಿದ್ದಾರೆ" ಎಂಬುದಾಗಿ.

ಮತ್ತಾಯ 1ನೇ ಮತ್ತು ಲೂಕ 3ನೇ ಅಧ್ಯಾಯಗಳಲ್ಲಿ, ನೀವು ಕರ್ತನಾದ ಯೇಸುಕ್ರಿಸ್ತನ ವಂಶಾವಳಿಯನ್ನು ಓದಿದರೆ, ಅದರಲ್ಲಿ ಹಳೆ ಒಡಂಬಡಿಕೆಯ ಕೆಲವು ಸ್ತ್ರೀ-ಪುರುಷರ ಹೆಸರುಗಳಿವೆ, ಮತ್ತು ಅವರಲ್ಲಿ ಕೆಲವರು ಕಡು ಪಾಪಿಗಳಾಗಿದ್ದರು ಎಂದು ತಿಳಿಯುತ್ತದೆ. ನಮ್ಮ ಕರ್ತನಾದ ಯೇಸುವು ತನ್ನನ್ನು ಎಷ್ಟು ದೀನನಾಗಿಸಿಕೊಂಡನು ಎಂದರೆ, ಈ ಭೂಮಿಗೆ ಬರಲು ಮಾನವ ಜನಾಂಗದ ಅತೀ ಪಾಪಯುಕ್ತ ವಂಶಾವಳಿಯನ್ನು ಆರಿಸಿಕೊಂಡನು. ಆದುದರಿಂದ ನಮ್ಮ ಕರ್ತನ ವಂಶಾವಳಿಯಲ್ಲಿ ಹೆಮ್ಮೆಪಡಲು ಏನೂ ಇರಲಿಲ್ಲವೆಂದು ನಾವು ನೋಡುತ್ತೇವೆ.

ಬಹುಶಃ ನಾವು ನಮ್ಮ ಅಂದವಾದ ಮನೆಯ ಬಗ್ಗೆ ಹೆಚ್ಚಳ ಪಡಬಹುದು. ನೀವು ಯೋಚಿಸಬಹುದು, ”ನನ್ನ ಮನೆಯಲ್ಲಿ ನಾಲ್ಕು ಕೋಣೆಗಳಿವೆ", ಅಥವಾ "ನನ್ನ ಮನೆಯಲ್ಲಿ ಆರು ಕೋಣೆಗಳಿವೆ". ಈ ವಿಷಯದಲ್ಲಿಯೂ, ನಮ್ಮ ಕರ್ತನಾದ ಯೇಸುವಿನ ಹತ್ತಿರ ಏನಿತ್ತು? ಆತನಿಗೆ ತನ್ನ ಕಾಲು ಚಾಚಿ ಮಲಗಲು ಸಹ ಜಾಗವಿರಲಿಲ್ಲ, ಎಂದು ನಾವು ಓದುತ್ತೇವೆ. "ಕ್ರಿಸ್ತ ಯೇಸುವಿನಲ್ಲಿದ್ದಂತಹ ಮನಸ್ಸು ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೇ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶ್ಯನಾದನು". ನಮಗಾಗಿ ಮಾತ್ರವೇ ಹೊರತು, ಆತನು ಈ ಭೂಮಿಗೆ ಬರಲು ಯಾವ ಕಾರಣವೂ ಇರಲಿಲ್ಲ. ಆದಾಗ್ಯೂ ಆತನು ತನ್ನನ್ನು ಒಬ್ಬ ಸೇವಕನಾಗಿ ತಗ್ಗಿಸಿಕೊಂಡನು.

ಕೆಲವು ಸಲ ಸೇವಕನಾಗುವದು ತುಂಬಾ ಕಷ್ಟದ ಕೆಲಸ. ಯಾರು ಶ್ರೇಷ್ಠರು? ಒಂದು ಕೂಟದ ಸಂದೇಶಕನೋ ಅಥವಾ ಸೇವಕನೋ? ಸಂದೇಶಕನು ಶ್ರೇಷ್ಠನು ತಾನೇ? ಆದರೆ ಕರ್ತನಾದ ಯೇಸುವು ಹೇಳುವ ಮಾತು, ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ". "ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ" ನಿಮಗೆ ನೆನಪಿರಬಹುದು, ಮೇಲಂತಸ್ತಿನ ದೊಡ್ಡ ಕೊಠಡಿಯಲ್ಲಿ ನಮ್ಮ ಕರ್ತನಾದ ಯೇಸುವು ಆ ದಿನ ಸಂಜೆ, ಒಂದು ವಸ್ತ್ರವನ್ನು ತೆಗೆದುಕೊಂಡು ಶಿಷ್ಯರ ಕಾಲುಗಳನ್ನು ತೊಳೆದು ಒರಸಿದರು. ಬಹುಶಃ ಶಿಷ್ಯರಲ್ಲಿ ಯಾರೂ ಈ ಕೀಳಾದ ಕೆಲಸ ಮಾಡಲು ಇಷ್ಟಪಡಲಿಲ್ಲ. ಪ್ರಭಾವಸ್ವರೂಪನಾದ ದೇವರು, ಇಸ್ಕರಿಯೋತ ಯೂದನೂ ಒಳಗೊಂಡಂತೆ, ಅ ಪಾಪಿಷ್ಠ ಮಾನವರ ಕಾಲನ್ನು ತೊಳೆಯುವುದನ್ನು ಊಹಿಸಿಕೊಳ್ಳಿರಿ! ಹಲವು ಬಾರಿ ನಾವು ಕೀಳಾದ ಕೆಲಸಗಳನ್ನು ಮಾಡುವುದು ನಾಚಿಗೆಗೇಡು ಎಂದುಕೊಳ್ಳುತ್ತೇವೆ. ಆದರೆ ದೇವರ ವಾಕ್ಯ ಹೀಗೆ ಹೇಳುತ್ತದೆ, ’ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ’! ನಾವು ಅಹಂಕಾರಿಗಳು ಆಗಿರುವುದರಿಂದ ನಾವು ರುಚಿಯಿಲ್ಲದ ಉಪ್ಪಿನಂತಾಗಿದ್ದೇವೆ.

ಕೀರ್ತನೆ 22ರಲ್ಲಿ ಶಿಲುಬೆಗೆ ಏರಿಸುವದರ ಒಂದು ಚಿತ್ರಣವನ್ನು ನೋಡುತ್ತೇವೆ. ಅಲ್ಲಿ 6ನೇ ವಚನದಲ್ಲಿ ಯೇಸುವು ಶಿಲುಬೆಯ ಮೇಲೆ ನೇತಾಡುವ ಅನುಭವವನ್ನು ಹೀಗೆ ವಿವರಿಸಿದ್ದಾರೆ: "ನಾನಾದರೋ ಹುಳದಂತವನೇ ಹೊರತು ಮನುಷ್ಯನಲ್ಲ"

ನಿಮಗೆ ಹುಳುವೆಂದರೆ ಏನೆಂದು ಗೊತ್ತಿದೆ. ಅದು ನೆಲದ ಮೇಲೆ ಹರಿದಾಡುತ್ತದೆ. ಮತ್ತು ಜನರು ಅದನ್ನು ತುಳಿದರೂ ಅದು ಅವರ ಗಮನಕ್ಕೂ ಸಹ ಬರುವದಿಲ್ಲ. ಯಾರೂ ಒಂದು ಹುಳುವಿನ ಬಗ್ಗೆ ಚಿಂತಿಸುವದಿಲ್ಲ. ಕರ್ತನಾದ ಯೇಸುವನ್ನು ಅವರು ಹೀಗೆಯೇ ನೋಡಿದರು.

ನನಗೆ ಮತ್ತು ನಿಮಗೆ ದೇವರ ಮುಂದೆ ಹುಳಕ್ಕಿಂತ ಹೆಚ್ಚಾಗಿ ಎಣಿಸಲ್ಪಡುವ ಅಧಿಕಾರವಿಲ್ಲ. ಆದರೂ ಪದೇ ಪದೇ ನಾವು ಅನೇಕ ವಿಷಯಗಳ ಬಗ್ಗೆ ದೂರುತ್ತೇವೆ. ನಾವು ಹೇಳುವುದೇನೆಂದರೆ, "ನನಗೆ ಮಲಗಲು ಒಳ್ಳೆಯ ಜಾಗ ಬೇಕು. ನನಗೆ ಸಾಕಷ್ಟು ಊಟ ಸಿಗಬೇಕು. ನಾನು ಇದಕ್ಕೆ ಹಕ್ಕುಬಾಧ್ಯನು". ಆದರೆ ಒಂದು ಮಾತು ನೆನಪಿರಲಿ. ಸೇವಕನು ಒಡೆಯನಿಗಿಂತ ದೊಡ್ಡವನಲ್ಲ; ಶಿಷ್ಯನು ತನ್ನ ಗುರುವಿಗಿಂತ ಮೇಲಿನವನಲ್ಲ. ಕರ್ತನಾದ ಯೇಸುವು ತನ್ನನ್ನು ಒಂದು ಹುಳುವಿನ ಮಟ್ಟಕ್ಕೆ ತಗ್ಗಿಸಿಕೊಂಡರೆ, ನಿಮಗೆ ಮತ್ತು ನನಗೆ ಅದಕ್ಕಿಂತ ಹೆಚ್ಚಿನದನ್ನು ಕೇಳುವ ಅಧಿಕಾರವಿಲ್ಲ. ನೀವು ಯಾವುದೇ ಹುಳುವು ದೂರುವದನ್ನು ಕೇಳಿದ್ದೀರಾ? ಜನರು ಅದನ್ನು ಒದಿಯಬಹುದು. ಹಿಸುಕಬಹುದು, ತುಳಿಯಬಹುದು ಅಥವಾ ಅದನ್ನು ಕೊಲ್ಲಲೂ ಬಹುದು, ಆದರೆ ಅದು ತನ್ನ ಬಾಯನ್ನು ತೆರೆಯುವದೇ ಇಲ್ಲ.

ಆದರೆ ಹಾವಿನ ವಿಷಯ ಬೇರೆ. ಒಂದು ವೇಳೆ ನೀವು ಒಂದು ಹಾವನ್ನು ಒದ್ದರೆ, ಅದು ತಕ್ಷಣ ನಿಮ್ಮನ್ನು ಕಚ್ಚುತ್ತದೆ. ಪ್ರಪಂಚದ ಜನರು ಕೂಡ ಹಾಗೆಯೇ. ಯಾರಾದರೂ ಅವರನ್ನು ಸ್ವಲ್ಪ ನೋಯಿಸಿದರೆ, ತಕ್ಷಣವೇ ಕೋಪಗೊಳ್ಳುತ್ತಾರೆ. ವಿಶ್ವಾಸಿಗಳೂ ಸಹ ಹೀಗೆ ನಡಕೊಂಡರೆ, ಅವರು ರುಚಿ ಕಳಕೊಂಡ ಉಪ್ಪಿನಂತೆ ಆಗಿದ್ದಾರೆ. ಆದುದರಿಂದಲೇ ಭೂಮಿ ಬಂಜರಾಗಿದೆ ಮತ್ತು ಅಲ್ಲಿ ಯಾವ ಫಲವೂ ಇಲ್ಲ. ನಾವು ಹಲವು ವೇಳೆ ಪುನರುಜ್ಜೀವನಕ್ಕಾಗಿ ಮತ್ತು ಹೆಚ್ಚಿನ ಫಲಕ್ಕಾಗಿ ಪ್ರಾರ್ಥಿಸುತ್ತೇವೆ. ಆದರೆ ಇನ್ನೊಮ್ಮೆ ಹೀಗೆ ಪ್ರಾರ್ಥಿಸುವ ಮೊದಲು, ನಾವು ನಮ್ಮನ್ನೇ ಕೇಳಿಕೊಳ್ಳೋಣ, ನಾವು ಮೊದಲ ಷರತ್ತನ್ನು ಪೂರೈಸಿದ್ದೇವೆಯೇ? ನಮ್ಮ ಕರ್ತನು ತನ್ನನ್ನು ತಗ್ಗಿಸಿಕೊಂಡಷ್ಟು ನಾವು ನಮ್ಮನ್ನು ತಗ್ಗಿಸಿಕೊಂಡಿದ್ದೇವೆಯೇ? ನಾವು ಹಲವು ಬಾರಿ 2 ಪೂರ್ವಕಾಲ ವೃತ್ತಾಂತ 7:14ರಲ್ಲಿ, ಈ ಮಾತನ್ನು ಕೇಳಿರಬಹುದು. ಆದರೆ ಈ ದಿನ ಅದೇ ಮಾತನ್ನು ಪವಿತ್ರಾತ್ಮನು ಪ್ರಬಲವಾಗಿ ನಮ್ಮ ಹೃದಯಗಳಿಗೆ ತರುವಂತಾಗಲಿ.

ಪ್ರಾರ್ಥಿಸುವದು

ನಾವು ಈ ವಚನದಲ್ಲಿ ಓದುವ ಎರಡನೇ ನಿಯಮವೆಂದರೆ, ನಾವು ಪ್ರಾರ್ಥಿಸುವುದು ಅವಶ್ಯ.

ನಾವು ಪ್ರಾರ್ಥನೆಯ ಬಗ್ಗೆ ತುಂಬಾ ಚರ್ಚಿಸುತ್ತೇವೆ, ಆದರೆ ನಾವು ನಿಜವಾಗಿ ಪ್ರಾರ್ಥಿಸುವದು ಬಹಳ ಕಡಿಮೆ. ನನ್ನ ಅಭಿಪ್ರಾಯ ಏನೆಂದರೆ, ನಾವು ಹೆಚ್ಚಾಗಿ ಪ್ರಾರ್ಥಿಸದೇ ಇರುವದಕ್ಕೆ ಕಾರಣ, ನಮ್ಮಲ್ಲಿ ದೇವರು ಉತ್ತರಿಸುವರೆಂಬ ನಂಬಿಕೆ ಇಲ್ಲ. ದೇವರು ನಮ್ಮ ಪ್ರಾರ್ಥನೆಯನ್ನು ಉತ್ತರಿಸುತ್ತಾರೆಂಬ ನಂಬಿಕೆ ನಮ್ಮಲ್ಲಿ ಉಂಟಾದರೆ, ನಮ್ಮ ಪ್ರಾರ್ಥನಾ ಜೀವಿತವು ಸಂಪೂರ್ಣವಾಗಿ ಬದಲಾಗುವದು. ಕರ್ತನಾದ ಯೇಸು ಕ್ರಿಸ್ತನು ಹೇಳಿದ ಮಾತು ಏನೆಂದರೆ, "ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮ ವರವನ್ನು ಕೊಡುವನಲ್ಲವೇ?" (ಲೂಕ 11:13).

ನಾನು ನಿಮಗೆ ನನ್ನ ಸ್ವಂತ ಸಾಕ್ಷಿಯೊಂದನ್ನು ಕೊಡಲು ಬಯಸುತ್ತೇನೆ.

ನಾನು ಇದನ್ನು ದೇವರ ಮಹಿಮೆಗಾಗಿ ಹೇಳುತ್ತಿದ್ದೇನೆ ಮತ್ತು ದೇವರು, ತನ್ನ ಮಕ್ಕಳು ಪ್ರಾರ್ಥಿಸುವಾಗ ಮಾಡುವ ಕಾರ್ಯದ ಸಾಕ್ಷಿಯಾಗಿ ಇದನ್ನು ಹೇಳುತ್ತೇನೆ. ನಾನು 1963ನೇ ಇಸವಿಯ ಈ ಪವಿತ್ರ ಕೂಟಗಳಲ್ಲಿ ಪಾಲ್ಗೊಳ್ಳಲು ತುಂಬಾ ಉತ್ಸುಕನಾಗಿದ್ದೆನು. ನಾನು ಇದರ ಹಿಂದಿನ ವರ್ಷವೂ ಬಂದಿದ್ದೆನು ಮತ್ತು ಬಹಳವಾಗಿ ಆಶೀರ್ವದಿಸಲ್ಪಟ್ಟಿದ್ದೆನು. ಹಾಗಾಗಿ ಈ ವರ್ಷವೂ ಬರಲು ಉತ್ಸುಕನಾಗಿದ್ದೆ. ನಾನು ಈ ಸಮಯದಲ್ಲಿ ಕೊಚ್ಚಿನ್ ನಗರದ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದೆ. ಈ ತಿಂಗಳ ಮೊದಲನೇ ತಾರೀಖಿನಂದು, ನನಗೆ ಈ ಪವಿತ್ರ ಕೂಟಗಳಿಗೆ ಬರುವದಕ್ಕಾಗಿ ರಜೆ ಮಂಜೂರು ಮಾಡಲಾಗುವದೆಂದು ತಿಳಿಸಲಾಯಿತು. ಆದರೆ ಒಂದು ವಾರದ ನಂತರ, ದೆಹಲಿಯಿಂದ ಬಂದ ಒಂದು ಸಂದೇಶದ ಪ್ರಕಾರ, ಮೈಸೂರಿನಲ್ಲಿ ಅಖಿಲ ಭಾರತ ವಸ್ತು ಪ್ರದರ್ಶನ ನಡೆಯಲಿದ್ದು, ಅದರಲ್ಲಿ ಸೇನಾದಳ, ನೌಕದಳ ಮತ್ತು ವಾಯುದಳಗಳು ಪಾಲ್ಗೊಳ್ಳಬೇಕೆಂದು ತಿಳಿಸಲಾಯಿತು. ನಮ್ಮ ಕಛೇರಿಯ ಇನ್ನೊಬ್ಬ ಅಧಿಕಾರಿಗೆ ಈ ವಸ್ತು ಪ್ರದರ್ಶನಕ್ಕೆ ಅಕ್ಟೋಬರ್ 9ರಂದು ಹೊರಡಬೇಕೆಂದು ಆದೇಶಿಸಲಾಯಿತು. ಆದುದರಿಂದ ನನ್ನ ರಜೆಯನ್ನು ರದ್ದುಗೊಳಿಸಲಾಯಿತು. ನಾನು ಈ ಕೂಟಗಳಿಗೆ ಬರುವ ಎಲ್ಲಾ ನಿರೀಕ್ಷೆಯನ್ನು ಬಿಟ್ಟುಬಿಟ್ಟೆನು.

ಅಕ್ಟೋಬರ್ 12ರಂದು, ನನ್ನ ಬೆಳಗ್ಗಿನ ಧ್ಯಾನದ ಸಮಯಯಲ್ಲಿ, ನಾನು 2 ಸಮುವೇಲ 2ನೇ ಅಧ್ಯಾಯವನ್ನು ಓದುತ್ತಿದ್ದೆನು. ಅದರ ಮೊದಲನೇ ವಾಕ್ಯ ಹೀಗಿತ್ತು, "ದಾವೀದನು ಕರ್ತನನ್ನು, ’ನಾನು ಯೆಹೂದ ದೇಶದ ಯಾವುದಾದರೊಂದು ಪಟ್ಟಣಕ್ಕೆ ಹೋಗಬಹುದೋ?’ ಎಂದು ಕೇಳಲು ಆತನು, ’ಹೋಗಬಹುದು’ ಎಂದನು". ಆಗ, ಕರ್ತನು ಈ ಸಭಾ ಕೂಟಗಳಿಗೆ ಹೋಗುವಂತೆ ನನಗೆ ಹೇಳುತ್ತಿರುವದಾಗಿ ನನಗೆ ಅನಿಸಿತು. ಹಾಗಾಗಿ ನಾನು ಮತ್ತೊಮ್ಮೆ ಈ ರೀತಿ ಪ್ರಾರ್ಥಿಸಿದೆನು, "ಕರ್ತನೇ, ನಾನು ಈ ಸಭಾಕೂಟಗಳಿಗೆ ಹೋಗಬೇಕೆಂದು ನಿನ್ನ ಚಿತ್ತವೋ?" ಅದೇ ವಚನದಲ್ಲಿ ಮುಂದೆ ಓದಿದಾಗ, ಅಲ್ಲಿ ಹೀಗಿತ್ತು, "ದಾವೀದನು ತಿರಿಗಿ, ’ಯಾವ ಊರಿಗೆ ಹೋಗಲಿ’, ಎಂದು ಕೇಳಿದ್ದಕ್ಕೆ - ’ಹೆಬ್ರೋನಿಗೆ ಹೋಗು’ ಎಂಬ ಉತ್ತರ ಸಿಕ್ಕಿತು." ಆ ಕ್ಷಣವೇ ದೇವರು ನನ್ನನ್ನು ನಿಶ್ಚಯವಾಗಿ ಹೆಬ್ರೋನಿನ ಪವಿತ್ರ ಕೂಟಗಳಿಗೆ ಹೋಗಲು ನಿರ್ದೇಶಿಸುತ್ತಿದ್ದಾರೆಂದು ನನಗೆ ಅನಿಸಿತು. ಆದುದರಿಂದ ನಾನು ಹೀಗೆಂದು ಹೇಳಿದೆನು, "ಕರ್ತನೇ, ನನ್ನ ರಜೆಯು ನಿನ್ನ ಚಿತ್ತದಂತೆ ನಿರಾಕರಿಸಲ್ಪಟ್ಟಿದ್ದರೆ ಅದನ್ನು ನಾನು ಸಂತೋಷದಿಂದ ಸ್ವೀಕರಿಸುತ್ತೇನೆ. ಆದರೆ ನಾನು ಹೆಬ್ರೋನಿಗೆ ಹೋಗದಂತೆ ತಡೆಯಲು ಇದು ಸೈತಾನನ ಪ್ರಯತ್ನವಾಗಿದ್ದರೆ, ನಾನು ನಿನ್ನ ಹೆಸರಿನಲ್ಲಿ ಸೈತಾನನ್ನು ಎದುರಿಸುತ್ತೇನೆ" ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳತಕ್ಕ ಯಾವದಾದರೂ ಒಂದು ಕಾರ್ಯದ ವಿಷಯವಾಗಿ ಭೂಲೋಕದಲ್ಲಿ ಒಂದೇ ಮನಸ್ಸು ಉಳ್ಳವರಾಗಿದ್ದರೆ, ಅದು ಪರಲೋಕದಲ್ಲಿರುವ ನಮ್ಮ ತಂದೆಯಿಂದ ಅವರಿಗೆ ಆಗುವದು, ಎಂದು ಕರ್ತನು ಹೇಳಿದ್ದಾನೆ (ಮತ್ತಾಯ 18:19). ಆದುದರಿಂದ, ನಾನು ಇನ್ನೂ ಕೆಲವು ಸಹೋದರ, ಸಹೋದರಿಯರ ಜೊತೆಗೂಡಿ ಈ ವಾಗ್ದಾನವನ್ನು ಪ್ರಾರ್ಥಿಸಿ ಕೋರಿಕೊಂಡೆನು.

ಎರಡು ದಿನಗಳ ನಂತರ, ಅಕ್ಟೋಬರ್ 14ರಂದು ಬಂದ ನವದೆಹಲಿಯ ಒಂದು ಆದೇಶವು, ಈ ಪ್ರದರ್ಶನದಲ್ಲಿ ನೌಕಾಪಡೆಯು ಪಾಲ್ಗೊಳ್ಳುವದು ಬೇಡವೆಂದೂ, ಕೇವಲ ಸೇನಾಪಡೆ ಹಾಗೂ ವಾಯುಪಡೆಗಳು ಪಾಲ್ಗೊಳ್ಳಬೇಕೆಂಬ ನಿರ್ಧಾರವನ್ನು ಪ್ರಕಟಿಸಿತು. ಈ ರೀತಿಯಾಗಿ ನನಗೆ ರಜೆ ಸಿಕ್ಕಿತು ಹಾಗೂ ನಾನು ಇಲ್ಲಿಗೆ ಸರಿಯಾದ ಸಮಯಕ್ಕೆ ಬರಲು ಸಾಧ್ಯವಾಯಿತು. ದೇವರು ನಮ್ಮ ಪ್ರಾರ್ಥನೆಯನ್ನು ಉತ್ತರಿಸುತ್ತಾನೆ ಎಂದು ತೋರಿಸಲು ಇದನ್ನು ಹೇಳುತ್ತಿದ್ದೇನೆ. ಇದು ನನ್ನ ಶಕ್ತಿಯಿಂದ ಅಥವಾ ಸಾಮರ್ಥ್ಯದಿಂದ ಸಾಧ್ಯವಾಗಲಿಲ್ಲ. ದೇವರ ಮಕ್ಕಳ ಪ್ರಾರ್ಥನೆಯಿಂದ ಇದು ಸಾಧ್ಯವಾಯಿತು. ಇಲ್ಲಿ ಹೆಬ್ರೋನಿನಲ್ಲಿ ಅನೇಕರು ನನಗೋಸ್ಕರ ಪ್ರಾರ್ಥನೆ ಮಾಡುತ್ತಿದ್ದಿರೆಂದು ನನಗೆ ತಿಳಿದಿದೆ. ಆದುದರಿಂದಲೇ ವಸ್ತು ಪ್ರದರ್ಶನದಲ್ಲಿ ನೌಕಪಡೆಯವರು ಪಾಲ್ಗೊಳ್ಳುವುದನ್ನು ದೇವರು ತಪ್ಪಿಸಿದರು. ಪ್ರಾರ್ಥನೆಯೊಂದನ್ನು ಮಾತ್ರ ನಾವು ಮಾಡಿದರೆ ಸಾಕು, ದೇವರು ತನ್ನ ಮಕ್ಕಳಿಗೋಸ್ಕರ ಭೂಮ್ಯಾಕಾಶಗಳನ್ನು ಅಲ್ಲಾಡಿಸಿಬಿಡುತ್ತಾರೆ.

ನಾವು ಈಗಾಗಲೇ ನೋಡಿರುವ ದೇವರ ವಾಕ್ಯ ಹೇಳುವಂತೆ, "ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು ನನ್ನನ್ನು ಪ್ರಾರ್ಥಿಸುವದಾದರೆ..." (2 ಪೂರ್ವಕಾಲ ವೃತ್ತಾಂತ 7:14). ನಮ್ಮ ಹೃದಯದಲ್ಲಿ ಅಹಂಕಾರವನ್ನು ಇಟ್ಟುಕೊಂಡು ಪ್ರಾರ್ಥಿಸುವದರಲ್ಲಿ ಯಾವ ಪ್ರಯೋಜನವೂ ಇಲ್ಲ. ವಿಶ್ವಾಸಿಗಳಾದ ನಮ್ಮಲ್ಲಿ, ಕೆಲವೊಮ್ಮೆ ನಮ್ಮ ಸ್ಥಾನಮಾನದ ಬಗ್ಗೆ ಅಹಂಕಾರ ಇರುತ್ತದೆ. ಒಂದು ವೇಳೆ ಒಬ್ಬ ಐಶ್ವರ್ಯವಂತ ಸಹೋದರನು ನಮ್ಮನ್ನು ಮಾತನಾಡಿಸಿದರೆ, ನಾವು ಅವನೊಡನೆ ವಿನಯದಿಂದ ಬಹಳ ಸಮಯ ಮಾತನಾಡುತ್ತೇವೆ. ಆದರೆ ಹರಿದ ಬಟ್ಟೆ ಧರಿಸಿದ ದೀನನಾದ ಒಬ್ಬ ಬಡ ಸಹೋದರನು ನಮ್ಮೊಂದಿಗೆ ಮಾತನಾಡುವಾಗ, ಅವನನ್ನು ಕಡೆಗಣಿಸುತ್ತೇವೆ ಮತ್ತು ಅವನ ಬಗ್ಗೆ ಯೋಚಿಸುವದೂ ಇಲ್ಲ. ಅದು ನಮ್ಮ ಸ್ವಭಾವ. ಹೀಗಾಗಿ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡಿದೆ. ನಾನು ನಿಮ್ಮನ್ನು ಎಚ್ಚರಿಸಲು ಬಯಸುತ್ತೇನೆ, ಕ್ರಿಸ್ತನ ನ್ಯಾಯತೀರ್ಪಿನ ಸಿಂಹಾಸನದ ಎದುರು ನಮ್ಮೆಲ್ಲರಿಗೆ ಕೆಲವು ದೊಡ್ಡ ಆಶ್ಚರ್ಯಗಳು ಕಾದಿವೆ, ಎಂದು. ಇಂದು ನಾವು ಕಡೆಗಣಿಸುವ ಈ ಬಡ, ದೀನ ಸಹೋದರರು ಆ ದಿನ ಎಲ್ಲರಿಗಿಂತ ಮುಂದಿನ ಸಾಲಿನಲ್ಲಿ ಇರಬಹುದು. ಆದುದರಿಂದ ಪ್ರಿಯರೇ, ಮೊದಲು ನಾವು ನಮ್ಮನ್ನು ತಗ್ಗಿಸಿಕೊಳ್ಳದೇ ಹೋದರೆ, ನಮ್ಮ ಪ್ರಾರ್ಥನೆಯಿಂದ ಯಾವ ಪ್ರಯೋಜನವೂ ಆಗುವದಿಲ್ಲ.

ದೇವರ ಮುಖವನ್ನು ನೋಡುವ ಕಾತುರತೆ

ಈ ವಚನದಲ್ಲಿ ಕೊಟ್ಟಿರುವ ಮೂರನೆಯ ಷರತ್ತು, ನಾವು ದೇವರ ಮುಖವನ್ನು ಕಾಣಲು ಹಾತೊರೆಯಬೇಕು.

ನಾವು ಇದನ್ನು ಮಾಡುತ್ತೇವೋ, ಎಂಬ ಸಂಶಯ ನನಗಿದೆ. ನಾವು ಬೇರೆ ಸಂಗತಿಗಳಿಗಾಗಿ ಬಹಳ ಕಾತರಿಸುತ್ತೇವೆ, ಉದಾಹರಣೆಗೆ, ಒಳ್ಳೆಯ ಕೆಲಸ, ಒಳ್ಳೆಯ ಮನೆ, ಒಳ್ಳೆಯ ಜೀವನ ಸಂಗಾತಿ (ಹೆಚ್ಚಿನ ಐಶ್ವರ್ಯದ ಜೊತೆಗೆ), ಇತ್ಯಾದಿ. ಆದರೆ ನಾವು ದೇವರ ಮುಖವನ್ನು ಕಾಣಲು ಬಯಸುವದಿಲ್ಲ. ದಾವೀದನು ಕೀರ್ತನೆ 27:4ರಲ್ಲಿ ಹೀಗೆ ಹೇಳುತ್ತಾನೆ, "ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ, ಆತನ ಪ್ರಸನ್ನತೆಯನ್ನು ನೋಡುವದಕ್ಕೂ, ಆತನ ಮಂದಿರದಲ್ಲಿ ಧ್ಯಾನ ಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು, ಅದನ್ನೇ ಎದುರು ನೋಡುತ್ತಿರುವೆನು"

ದಾವೀದನು ಒಬ್ಬ ಶ್ರೇಷ್ಠ ರಾಜನಾಗಿದ್ದನು. ಅವನಲ್ಲಿ ಐಶ್ವರ್ಯವಿತ್ತು, ಅವನು ಹಲವು ಯುದ್ಧಗಳಲ್ಲಿ ಜಯ ಹೊಂದಿದ್ದನು, ಹಾಗೂ ಒಂದು ಒಳ್ಳೆಯ ಹೆಸರನ್ನು ಹೊಂದಿದ್ದನು. ಆದರೂ ಅವನು ಹೀಗೆ ಹೇಳಿದನು, "ನಾನು ತೃಪ್ತನಾಗಿಲ್ಲ. ನಾನು ಕರ್ತನಿಂದ ಒಂದು ವಿಷಯವನ್ನು ಬಯಸುತ್ತೇನೆ. ಅದು ಈ ಇಡೀ ಜಗತ್ತಿಗೆ ರಾಜನಾಗಬೇಕೆಂದು ಅಲ್ಲ, ಅಥವಾ ಒಳ್ಳೆಯ ಬೋಧಕನಾಗಬೇಕೆಂದು ಕೂಡ ಅಲ್ಲ, ಅಥವಾ ನಾನು ವಿಶೇಷವಾದ ಖ್ಯಾತಿಯನ್ನು ಹೊಂದಬೇಕೆಂದಲ್ಲ. ಆದರೆ ನಾನು ಕರ್ತನಿಂದ ಒಂದೇ ಒಂದು ವಿಷಯವನ್ನು ಬಯಸಿದ್ದೇನೆ, ಅದೇನೆಂದರೆ, ನಾನು ನನ್ನ ಕರ್ತನ ಅಂದವನ್ನು ನೋಡ ಬಯಸುತ್ತೇನೆ, ನನ್ನ ಜೀವಮಾನವಿಡೀ ಆತನ ಸೌಂದರ್ಯವನ್ನು ಹೆಚ್ಚು ಹೆಚ್ಚಾಗಿ ಕಾಣಲು ಬಯಸುತ್ತೇನೆ". ಅದು ನಮ್ಮ ಜೀವನದಲ್ಲೂ ಇರುವ ಒಂದೇ ಆಸೆ ಆಗಿದೆಯೇ?

ಯೋಹಾನ ಅಧ್ಯಾಯ 20ರಲ್ಲಿ, ಇದೊಂದೇ ಅಸೆಯನ್ನು ಇಟ್ಟುಕೊಂಡಿದ್ದ ಇನ್ನೊಬ್ಬಳ ಬಗ್ಗೆ ನಾವು ಓದುತ್ತೇವೆ. ಆಕೆ ಮಗ್ದಲದ ಮರಿಯಳು. ಆ ಭಾನುವಾರದ ಮುಂಜಾನೆ ಇನ್ನೂ ಕತ್ತಲೆ ಇರುವಾಗಲೇ ಆಕೆ ಸಮಾದಿಯ ಬಳಿಗೆ ಹೋದಳು. ಆಕೆ ಮುಂಜಾನೆಯ ಆ ಸಮಯದಲ್ಲಿ ಏಕೆ ಎದ್ದಳು? ಅಷ್ಟು ಬೇಗನೆ ಎದ್ದು, ಇನ್ನೂ ಮುಬ್ಬಿರುವಾಗ ಸಮಾಧಿಯ ಬಳಿಗೆ ಹೋಗುವ ಅವಶ್ಯಕತೆ ಏನಿತ್ತು? ಏಕೆಂದರೆ ಆಕೆಯ ಜೀವನದ ಒಂದೇ ಒಂದು ಆಸೆ, ತನ್ನ ಕರ್ತನನ್ನು ನೋಡುವದು ಆಗಿತ್ತು. ಆಕೆ ಸಮಾಧಿಯ ಬಳಿಗೆ ಹೋದಾಗ ಅದು ಬರಿದಾಗಿತ್ತೆಂದು ನಾವು ಓದುತ್ತೇವೆ. ಆಗ ಆಕೆ ಓಡಿಹೋಗಿ ವಿಷಯವನ್ನು ಇತರ ಕೆಲವು ಶಿಷ್ಯರಿಗೆ ತಿಳಿಸಿದಳು. ಅವರೂ ಸಹ ಸಮಾಧಿಯ ಕಡೆಗೆ ಹೋಗಿ ನೋಡಿದರು, ತರುವಾಯ ತಿರುಗಿ ತಮ್ಮ ಮನೆಗೆ ಹಿಂದಿರುಗಿದರು, ಬಹುಶಃ ಅವರಿಗೆ ಇನ್ನೂ ನಿದ್ರೆ ಬಿಟ್ಟಿರಲಿಲ್ಲ.

ಆದರೆ ಮಗ್ದಲದ ಮರಿಯಳು ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು. ಇದರಿಂದ ನೀವು ತಿಳಕೊಳ್ಳಬಹುದು, ಯೇಸುವಿಗಾಗಿ ಮರಿಯಳಲ್ಲಿದ್ದ ಪ್ರೀತಿ ಆ ಶಿಷ್ಯರಲ್ಲಿ ಇರಲಿಲ್ಲ. ಶಿಷ್ಯಂದಿರು ಬರಿದಾದ ಸಮಾಧಿಯನ್ನು ನೋಡಿ, ತಿರುಗಿ ನಿದ್ರಿಸಲು ಹೊರಟುಹೋದರು. ಆದರೆ ಮರಿಯಳಿಗೆ ಯೇಸುವೇ ಸರ್ವಸ್ವನಾಗಿದ್ದರಿಂದ, ಆಕೆಯ ಮನಸ್ಸು ಹಿಂದಿರುಗಲು ಒಪ್ಪಲಿಲ್ಲ.

ಇಂದು ದೇವರಿಗೆ ತನ್ನ ಸಭೆಯಲ್ಲಿ ಇಂತಹ ಜನರು ಬೇಕಾಗಿದ್ದಾರೆ. ಯೇಸುವು ಮಗ್ದಲದ ಮರಿಯಳು ಇದ್ದಲ್ಲಿಗೆ ಬಂದಾಗ, ಆಕೆ ಆತನು ತೋಟಗಾರನೆಂದು ಭಾವಿಸಿ, "ಅಯ್ಯಾ, ನೀನು ಆತನನ್ನು ಎತ್ತಿಕೊಂಡು ಹೋಗಿ ಬೇರೆಲ್ಲಾದರೂ ಇಟ್ಟಿದ್ದರೆ ಹೇಳು, ನಾನು ಆತನನ್ನು ತೆಗೆದುಕೊಂಡು ಹೋಗುತ್ತೇನೆ" ಎಂದಳು. ಆಕೆ ಆತನ ದೇಹವನ್ನು ಹೊತ್ತುಕೊಂಡು ಹೋಗಲು ಸಹ ಸಿದ್ಧಳಾಗಿದ್ದಳು. ಒಬ್ಬ ಮಹಿಳೆಯು ಒಂದು ಮೃತದೇಹವನ್ನು ಎತ್ತುಕೊಂಡು ಹೋಗುವದು ಹೆಚ್ಚುಕಡಿಮೆ ಅಸಾಧ್ಯವಾದ ಮಾತೆಂದು ನಿಮಗೆ ಗೊತ್ತಿದೆ. ಆದರೆ ಆಕೆಗೆ ಕರ್ತನ ಮೇಲಿದ್ದ ಪ್ರೀತಿ ಎಷ್ಟು ಅಪಾರವಾಗಿತ್ತು ಎಂದರೆ, ಆಕೆಯು ಆತನಿಗಾಗಿ ಎಂತಹ ಕಷ್ಟವನ್ನಾದರೂ ಸಹಿಸಲು ತಯಾರಿದ್ದಳು. "ದೇವರ ಮುಖವನ್ನು ಅರಸುವುದು" ಎಂಬುದರ ಅರ್ಥ ಇದೇ ಆಗಿದೆ. ಇದರ ಅರ್ಥವೇನೆಂದರೆ ಒಂದೇ ಒಂದು ಆಸೆಯನ್ನು ಇಟ್ಟುಕೊಳ್ಳುವದು - ಕರ್ತನ ಅಂದವನ್ನು ಕಾಣುವ ಇಚ್ಛೆ - ಮತ್ತು ಇದರ ಹೊರತಾಗಿ ಬೇರೆ ಯಾವ ಆಸೆಯೂ ಇಲ್ಲ. ನನಗೆ ಪ್ರಪಂಚದಲ್ಲಿ ಬೇಕಾಗಿರುವದು ದೊಡ್ಡ ಹೆಸರು ಅಥವಾ ಐಶ್ವರ್ಯವಲ್ಲ, ಆದರೆ ನನ್ನ ಕರ್ತನ ಅಂದವನ್ನು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚಾಗಿ ಅನುಭವಿಸುವದಾಗಿದೆ.

ಒಮ್ಮೆ ಒಬ್ಬ ವಿಧವೆಯನ್ನು ಭೇಟಿಮಾಡಲು ಹೋದ ಒಬ್ಬ ಮನುಷ್ಯನ ಕಥೆ ನನಗೆ ಜ್ಞಾಪಕಕ್ಕೆ ಬರುತ್ತದೆ. ಆಕೆ ತುಂಬಾ ಬಡವೆಯಾಗಿದ್ದಳು, ಆದರೆ ಕರ್ತನನ್ನು ಪ್ರೀತಿಸುತ್ತಿದ್ದಳು. ಆಕೆಗೆ ನಾಲ್ಕೈದು ಮಕ್ಕಳಿದ್ದರು, ಮತ್ತು ಆಕೆ ಒಂದು ಚಿಕ್ಕ ಮಣ್ಣಿನ ಗುಡಿಸಲಲ್ಲಿ ವಾಸಿಸುತ್ತಿದ್ದಳು. ನಿನ್ನ ಮನೆಯಲ್ಲಿ ಇಷ್ಟೊಂದು ಸಂತೋಷ, ಸಮಾಧಾನ ಇರಲು ಕಾರಣವೇನು, ಎಂದು ಆ ಮನುಷ್ಯ ಆಕೆಯನ್ನು ಕೇಳಿದನು. ನಿನ್ನ ಬಳಿ ಅಲ್ಪ ಸ್ವಲ್ಪ ಹಣವಿದೆ, ನಿನ್ನ ಮಕ್ಕಳು ಅರೆಹೊಟ್ಟೆ ಊಟ ಮಾಡುತ್ತಾರೆ, ಆದರೂ ಅವರೆಲ್ಲರ ಮುಖದಲ್ಲಿ ಯಾವಾಗಲೂ ಮುಗುಳ್ನಗೆ ಇರುತ್ತದೆ. ನಿನ್ನ ಮನೆಯಲ್ಲಿ ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳೂ, ರೋಗ ರುಜಿನಗಳೂ ಇದ್ದಾಗಲೂ, ನೀವು ಯಾವಾಗಲೂ ಹರ್ಷಿಸುತ್ತೀರಿ. ನಿನ್ನ ಜೀವನದ ರಹಸ್ಯವೇನು? ಇದಕ್ಕೆ ಆಕೆಯ ಉತ್ತರ, ನನಗೆ ಯೇಸು ಕ್ರಿಸ್ತನೇ ಎಲ್ಲವೂ ಆಗಿದ್ದಾನೆ. ನನಗೆ ಈ ಪ್ರಪಂಚದಲ್ಲಿ ಬೇರೇನೂ ಬೇಕಿಲ್ಲ.

ಪ್ರಿಯರೇ, ಕರ್ತನಾದ ಯೇಸು ಕ್ರಿಸ್ತನು ನಮಗೆ ಸರ್ವಸ್ವವೂ ಆದಾಗ, ನಾವೂ ಸಹ ಆಕೆಯಂತೆ ಆಗುವೆವು. ಮತ್ತೊಂದೆಡೆ, ನಾವು ಹೆಜ್ಜೆಹೆಜ್ಜೆಗೂ ಗೊಣಗುವದು ಮತ್ತು ದೂರುವದು ಏಕೆ? ನಾವು ನಮ್ಮನ್ನು ದೇವರ ಮಕ್ಕಳೆಂದು ಕರೆದುಕೊಳ್ಳುತ್ತೇವೆ, ಆದರೆ ಎಲ್ಲೋ ಸ್ವಲ್ಪ ತೊಂದರೆ ಉಂಟಾದಾಗ ನಾವು ಗೊಣಗಾಡುವದು ಏಕೆ? ಏಕೆಂದರೆ ಕರ್ತ ಯೇಸುವು ನಮ್ಮ ಸರ್ವಸ್ವವಾಗಿಲ್ಲ. ಓ, ಇದೇ ಹೊತ್ತಿನಿಂದ ನಮಗೆ ಕರ್ತ ಯೇಸುವೇ ಎಲ್ಲವೂ ಆಗಲಿ ಮತ್ತು ನಾವು ಕೀರ್ತನೆಗಾರನ ಜೊತೆಯಲ್ಲಿ ಹೀಗೆ ಹೇಳುವಂತಾಗಲಿ - ”ಕರ್ತ ಯೇಸುವೇ, ನಾನು ಈ ಲೋಕದಲ್ಲಿ ನಿನ್ನ ಹೊರತಾಗಿ ಏನನ್ನೂ, ಯಾರನ್ನೂ ಆಶಿಸುವುದಿಲ್ಲ” (ಕೀರ್ತನೆಗಳು 73:25).

ನಾವು ಕಳಕೊಂಡಿರುವ ರುಚಿಯನ್ನು ಮತ್ತೆ ಪಡೆಯಲು ಪೂರೈಸಬೇಕಾದ ಮೂರನೆಯ ಷರತ್ತು ಇದು.

ನಮ್ಮ ಕೆಟ್ಟ ನಡವಳಿಕೆಯಿಂದ ತಿರುಗಿಕೊಳ್ಳುವುದು

ಇನ್ನು 2 ಪೂರ್ವಕಾಲ ವೃತ್ತಾಂತ 7:14ದ ನಾಲ್ಕನೆಯ ಷರತ್ತು ಏನೆಂದರೆ, ನಾವು ನಮ್ಮ ಕೆಟ್ಟ ನಡವಳಿಕೆಯಿಂದ ತಿರುಗಿಕೊಳ್ಳುವದಾಗಿದೆ.

ನಮ್ಮ ಬದುಕಿನಲ್ಲಿ ಹಲವಾರು ಕೆಟ್ಟ ನಡವಳಿಕೆಗಳು ಇರಬಹುದು. ನಾವು ತುಂಬಾ ಗರ್ವಿಗಳಾಗಿರಬಹುದು, ಹಾಗಾಗಿ ಅನೇಕ ವೇಳೆ ಇತರರನ್ನು ಅಪಾರ್ಥ ಮಾಡಿಕೊಂಡು, ಅವರನ್ನು ಟೀಕಿಸಿ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುತ್ತೇವೆ. ದೇವರು ತನ್ನ ನಾಮವನ್ನು ಸ್ತುತಿಸಲು ನಮಗೆ ಒಂದು ನಾಲಿಗೆಯನ್ನು ಕೊಟ್ಟಿದ್ದಾನೆ, ಆದರೆ ಎಷ್ಟೋ ಸಲ ಅದನ್ನು ನಿರ್ದಯಿ ಖಂಡನೆಗಾಗಿ ಉಪಯೋಗ ಮಾಡುತ್ತೇವೆ. ಕೆಲವು ಸಹೋದರ ಸಹೋದರಿಯರ ವಿಷಯದಲ್ಲಿ ನಮ್ಮಲ್ಲಿ ಕಹಿ ಭಾವನೆ ಇರಬಹುದು. ಆ ಕಹಿ ಭಾವನೆಯನ್ನು ನಾವು ಹೊರಗೆ ತೋರಿಸದೆ ಇರಬಹುದು, ಆದರೆ ಅದು ನಮ್ಮ ಹೃದಯದಲ್ಲಿ ಅಡಗಿದೆ. ಅಥವಾ ನಮ್ಮ ಹೃದಯವು ಅಸೂಯೆಯಿಂದ ತುಂಬಿದೆ. ಈಗ ಹೇಳಬೇಕೆಂದರೆ, ಇವೆಲ್ಲವೂ ಸೈತಾನನ ವಿಧಾನಗಳಾಗಿವೆ.

ನಾವು ಕೆಲವು ಸಲ ಸುಳ್ಳಾಡುತ್ತೇವೆ. ಒಂದು ಸುಳ್ಳು ಎಂದರೆ ಏನು? ನೀವು ನಿಮ್ಮ ಬಾಯಿಯಿಂದ ಏನೂ ಹೇಳದಿರಬಹುದು. ಆದರೆ ನಿಮ್ಮ ನಡವಳಿಕೆಯ ಮೂಲಕ ಬೇರೆಯವರಿಗೆ ತಪ್ಪು ಅಭಿಪ್ರಾಯ ನೀಡುವದೂ ಸಹ ಸುಳ್ಳಾಗಿದೆ. ಇತರರ ಎದುರಿನಲ್ಲಿ ನೀವು ಇರುವುದಕ್ಕಿಂತ ಹೆಚ್ಚು ಪವಿತ್ರರೆಂಬ ತೋರಿಕೆ ಮಾಡಿದರೂ, ಅದೂ ಒಂದು ಸುಳ್ಳಾಗಿದೆ ಮತ್ತು ದೇವರ ದೃಷ್ಟಿಯಲ್ಲಿ ಅದು ಅಸಹ್ಯಕರವಾಗಿದೆ. ಹೀಗೆ ನಮಗೆ ಅರಿವಿಲ್ಲದ ಅನೇಕ ದುಷ್ಟ ವಿಧಾನಗಳು ನಮ್ಮಲ್ಲಿವೆ. ಉದಾಹರಣೆಗೆ, ನಾವು ದೇವರ ವಾಕ್ಯವನ್ನು ಧ್ಯಾನಿಸುವದನ್ನು ಅಥವಾ ಸಭೆಗೆ ಹಾಜರಾಗುವದನ್ನು ಕಡೆಗಣಿಸಬಹುದು (ಇಬ್ರಿಯ 10:25). ಸಾಮಾನ್ಯವಾಗಿ ನಾವು ಇವನ್ನು ಪಾಪವೆಂದು ಪರಿಗಣಿಸುವದಿಲ್ಲ.

ಕೆಲವು ಸಲ ಮನೆಗೆಲಸವನ್ನು ಅಸಡ್ಡೆ ಮಾಡಬಹುದು. ಸತ್ಯವೇದವು ಹೀಗೆನ್ನುತ್ತದೆ, "ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ" ಕ್ರಿಸ್ತನು ಸಭೆಯನ್ನು ಪರಿಮಿತಿಯಿಲ್ಲದೆ ಪ್ರೀತಿಸುತ್ತಾನೆ. ಅದೇ ರೀತಿ, ಗಂಡಂದಿರು ತಮ್ಮ ಪತ್ನಿಯರನ್ನು ಪ್ರೀತಿಸುವದರಲ್ಲಿ ಪರಿಮಿತಿ ಇರಬಾರದು. ಆದರೆ ಹಲವು ಬಾರಿ ಇದು ಹಾಗಿರುವದಿಲ್ಲ. ಆದುದರಿಂದ ಉಪ್ಪು ತನ್ನ ರುಚಿಯನ್ನು ಕಳಕೊಂಡಿದೆ. ಹಾಗೆಯೇ ಸತ್ಯವೇದದಲ್ಲಿ ಹೀಗೆ ಹೇಳಲಾಗಿದೆ, "ಸ್ತ್ರೀಯರೇ, ಸಭೆಯು ಕ್ರಿಸ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನವಾಗಿರ್ರಿ." ಇದರ ಅರ್ಥವೇನೆಂದರೆ, ಸಭೆಯು ಹೇಗೆ ಸಂಪೂರ್ಣವಾಗಿ ಕ್ರಿಸ್ತನಿಗೆ ಅಧೀನವಾಗಿದೆಯೋ, ಅದೇ ರೀತಿ, ಹೆಂಡತಿಯರು ತಮ್ಮ ಗಂಡಂದಿರಿಗೆ ಅಧೀನವಾಗಿರಬೇಕು. ಇದು ಗುಲಾಮತನದ ಮನೋಭಾವದಿಂದ ಮಾಡುವದಲ್ಲ, ಆದರೆ ಪ್ರೀತಿಯಿಂದ ಮಾಡಬೇಕು. ಆದರೆ ಕೆಲವು ಸಲ, ಪತ್ನಿಯರಿಗೆ ಹೀಗೆ ಮಾಡಲು ಕಷ್ಟವೆನಿಸಬಹುದು. ಹೀಗೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡಿದೆ.

ದೇವರ ವಾಕ್ಯದಲ್ಲಿ ಹೀಗೆ ಹೇಳಲಾಗಿದೆ, "ತಂದೆಗಳೇ, ಮಕ್ಕಳನ್ನು ದೇವರ ಭಯಭಕ್ತಿಯಲ್ಲಿ ಬೆಳೆಸಿರಿ" ಆದರೂ ಇಂದಿನ ವಿಶ್ವಾಸಿಗಳ ಮಕ್ಕಳನ್ನು ಗಮನಿಸುವಾಗ, ಅವರಲ್ಲಿ ಬಹಳಷ್ಟು ಮಂದಿ ಪ್ರಾಪಂಚಿಕ ರೀತಿಯಲ್ಲಿ ನಡೆಯುವದು ಕಾಣಿಸುತ್ತದೆ! ಇದು ಹೀಗೇಕೆ? ಏಕೆಂದರೆ ಹೆತ್ತವರು ಮಕ್ಕಳಿಗೆ ದೇವರ ಭಯವನ್ನು ಕಲಿಸಿಲ್ಲ. ಅವರು ತಮ್ಮ ಮಕ್ಕಳಿಗೆ ಒಳ್ಳೆಯ ನಡವಳಿಕೆಯನ್ನು ಕಲಿಸಿದ್ದಾರೆ ಮತ್ತು ಒಳ್ಳೆಯ ಶಿಕ್ಷಣ ಹಾಗೂ ಒಳ್ಳೆ ಉಡುಪನ್ನು ಕೊಟ್ಟಿದ್ದಾರೆ, ಆದರೆ ದೇವಭಯವನ್ನು ಪರಿಚಯ ಮಾಡಿದ್ದೇ ಇಲ್ಲ. ಹೀಗಾಗಿ ಮುಂದೆ, ಮಕ್ಕಳು ದೊಡ್ಡವರಾದಾಗ, ಹೆತ್ತವರು ಬಹಳ ವ್ಯಥೆಗೆ ಒಳಗಾಗುತ್ತಾರೆ - ಅಷ್ಟರಲ್ಲಿ ಮಕ್ಕಳನ್ನು ಶಿಸ್ತಿಗೆ ಒಳಪಡಿಸುವ ಸಮಯ ಮೀರಿ ಹೋಗಿರುತ್ತದೆ.

ದೇವರ ವಾಕ್ಯ ಮುಂದೆ ಹೀಗೆ ಹೇಳುತ್ತದೆ, "ಮಕ್ಕಳೇ, ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ". ಕೆಲವು ಮಕ್ಕಳು ತಾವು ತಮ್ಮ ತಂದೆತಾಯಿಗಳಿಗೆ ವಿಧೇಯರಾಗುವ ವಯಸ್ಸು ಮೀರಿತು ಎಂದು ಭಾವಿಸುತ್ತಾರೆ. ಆದರೆ ನಾವು ಲೂಕ 2:51ರಲ್ಲಿ ಓದುವದು ಏನೆಂದರೆ, ಯೇಸು ಕ್ರಿಸ್ತನು ತನಗೆ ಮೂವತ್ತು ವರ್ಷ ವಯಸ್ಸಾಗುವ ತನಕ ಮರಿಯ ಮತ್ತು ಯೋಸೇಫರಿಗೆ ಅಧೀನನಾಗಿದ್ದನು.

ಹೀಗೆ ನೀವು ನೋಡುವಂತೆ, ನಮ್ಮಲ್ಲಿ ಅನೇಕ ರೀತಿಯ ಕೆಟ್ಟ ನಡವಳಿಕೆಗಳು ಇರಬಹುದು. ಆದುದರಿಂದ ನಾವು ರುಚಿ ಕಳೆದುಕೊಂಡ ಉಪ್ಪಿನಂತೆ ಆಗಿದ್ದೇವೆ ಮತ್ತು ಭೂಮಿಯು ಗುಣ ಹೊಂದಿಲ್ಲ. ಇದೇ ಕಾರಣ, ನೀರು ಕೆಟ್ಟದಾಗಿ ನೆಲ ಬಂಜರಾಗಿದೆ.

ದೇವರ ವಾಗ್ದಾನಗಳು

ದೇವರ ವಾಕ್ಯದ ವಾಗ್ದಾನ ಹೀಗಿದೆ, "ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು, ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ತಿರುಗಿಕೊಂಡು, ನನ್ನನ್ನು ಪ್ರಾರ್ಥಿಸಿ, ನನ್ನ ದರ್ಶನವನ್ನು ಬಯಸುವದಾದರೆ, ನಾನು ಪರಲೋಕದಿಂದ ಲಾಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ದೇಶದಲ್ಲಿ ಆರೋಗ್ಯವನ್ನು ದಯಪಾಲಿಸುವೆನು".

ಆ ನಾಲ್ಕು ಷರತ್ತುಗಳನ್ನು ಪಾಲಿಸುವವರಿಗೆ ಇದು ಎಂತಹ ಅದ್ಭುತವಾದ ಒಂದು ವಾಗ್ದಾನವಾಗಿದೆ!

"ನಾನು ಕೇಳಿಸಿಕೊಳ್ಳುತ್ತೇನೆ"

ದೇವರು ಪರಲೋಕದಿಂದ ಕೇಳಿಸಿಕೊಳ್ಳುವ ವಾಗ್ದಾನ ನೀಡಿದ್ದಾರೆ. ದೇವರು ಪರಲೋಕದಿಂದ ಕೇಳಿಸಿಕೊಂಡಾಗ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

ಒಂದು ಸಲ ಎಲೀಯನು ಕೂಗಿಕೊಂಡಾಗ ದೇವರು ಕೇಳಿಸಿಕೊಂಡನು ಮತ್ತು ದೇವರ ಬೆಂಕಿ ಬಂದುಬಿದ್ದಿತು. ಎಲ್ಲಾ ಜನರು ಅಡ್ಡಬಿದ್ದು, "ಯೆಹೋವನೇ ದೇವರು"< ಎಂದು ಕೂಗಿದರು. ಅಪೊಸ್ತಲರ ಕೃತ್ಯಗಳು 4ನೇ ಅಧ್ಯಾಯದಲ್ಲಿ, ಪರಲೋಕದಿಂದ ದೇವರು ಶಿಷ್ಯರ ಪ್ರಾರ್ಥನೆಯನ್ನು ಆಲಿಸಿದ್ದನ್ನು ಜ್ಞಾಪಿಸಿಕೊಳ್ಳಿರಿ. ಅದರ ಪರಿಣಾಮವೇನಾಯಿತು? ಅವರು ಸೇರಿಬಂದಿದ್ದ ಇಡೀ ಜಾಗ ನಡುಗಿತು. ಇದೇ ರೀತಿ ಅ.ಕೃ.16:25ರಲ್ಲಿ, ಪೌಲನೂ ಸೀಲನೂ ಸೆರೆಮನೆಯಲ್ಲಿ ದೇವರಿಗೆ ಸ್ತುತಿಗೀತೆಗಳನ್ನು ಹಾಡಲು ಆರಂಭಿಸಿದ ಸಂದರ್ಭವನ್ನು ನಾವು ನೋಡುತ್ತೇವೆ. ದೇವರು ಪರಲೋಕದಿಂದ ಇದನ್ನು ಆಲಿಸಿದನು ಮತ್ತು ಮಹಾ ಭೂಕಂಪ ಉಂಟಾಗಿ ಸೆರೆಮನೆಯ ಅಸ್ತಿವಾರಗಳು ಕದಲಿದವು. ಯೆಹೋಶುವ 10:12ರ ಇನ್ನೊಂದು ಸಂದರ್ಭದಲ್ಲಿ, ಯೆಹೋಶುವನು ಪ್ರಾರ್ಥಿಸಿದಾಗ ದೇವರ ಪರಲೋಕದಿಂದ ಕೇಳಿಸಿಕೊಂಡದ್ದನ್ನು ನೀವು ಜ್ಞಾಪಿಸಿಕೊಳ್ಳಿರಿ. ಆ ದಿನ ಸೂರ್ಯ ಚಂದ್ರರು 24 ತಾಸುಗಳು ಆಕಾಶ ಮಧ್ಯದಲ್ಲೇ ನಿಂತುಬಿಟ್ಟವು. "ನಾನು ಪರಲೋಕದಿಂದ ಕೇಳಿಸಿಕೊಳ್ಳುತ್ತೇನೆ" ಎನ್ನುವದು ಒಂದು ಅದ್ಭುತ ವಾಗ್ದಾನವಾಗಿದೆ.

"ನಾನು ಕ್ಷಮಿಸುತ್ತೇನೆ"

ಮುಂದೆ 2 ಪೂರ್ವಕಾಲ ವೃತ್ತಾಂತ 7:14ರಲ್ಲಿ ದೇವರು ಹೇಳುವ ಮಾತು, "ನಾನು ಅವರ ಪಾಪಗಳನ್ನು ಕ್ಷಮಿಸುತ್ತೇನೆ"

ಓ, ಎಂಥಾ ಅದ್ಭುತನಾದ ದೇವರು! ನೀನು ಎಷ್ಟು ಕೆಟ್ಟವನಾಗಿದ್ದೆ ಎನ್ನುವದು ಮುಖ್ಯವಲ್ಲ. ನಿನ್ನ ಜೀವನದಲ್ಲಿ ನೀನು ಮಾಡಿರುವ ಪಾಪಗಳು ಎಷ್ಟು ಎನ್ನುವದು ಮುಖ್ಯವಲ್ಲ. ಈಗ ನೀನು ನಿನ್ನನ್ನು ತಗ್ಗಿಸಿಕೊಂಡು, ಕರ್ತನಾದ ಯೇಸು ಕ್ರಿಸ್ತನು ನಿನ್ನ ಪಾಪಿಗಳಿಗಾಗಿ ಶಿಲುಬೆಯ ಮೇಲೆ ಪ್ರಾಣವನ್ನು ನೀಡಿದ್ದನ್ನು ನಂಬಿದರೆ - ಆತನು ನಿನ್ನ ಪಾಪಗಳಿಗಾಗಿ ತನ್ನ ಹೃದಯವನ್ನು ಒಡೆಯಲು ಒಪ್ಪಿಸಿಕೊಟ್ಟದ್ದು ಮತ್ತು ಕೊನೆಯ ತೊಟ್ಟಿನ ವರೆಗೂ ತನ್ನ ಅಮೂಲ್ಯ ರಕ್ತವನ್ನು ಸುರಿಸಿದ್ದನ್ನು ನಂಬಿದರೆ - ಈ ಕ್ಷಣವೇ ದೇವರು ನಿನ್ನ ಪ್ರತಿಯೊಂದು ಪಾಪವನ್ನು ಕ್ಷಮಿಸುವನು. ಎಂತಹ ಅದ್ಭುತ ವಾಗ್ದಾನ! ದೇವರು ಹೇಳುವ ಮಾತು, "ನಿನ್ನ ಪಾಪಗಳು ಕಡು ಕೆಂಪಾಗಿದ್ದರೂ, ಹಿಮದ ಹಾಗೆ ಬಿಳುಪಾಗುತ್ತವೆ" (ಯೆಶಾಯ 1:18). ಈಗಲೂ ಸಹ ದೇವರು ಪರಲೋಕದಿಂದ ಆಲಿಸುವದೂ, ನಮ್ಮ ಪಾಪವನ್ನು ಕ್ಷಮಿಸುವದೂ ಅದೇ ರೀತಿಯಾಗಿದೆ.

ದಯವಿಟ್ಟು ಮೀಕ 7:18,19 ವಚನಗಳನ್ನು ನೋಡಿರಿ, ಮತ್ತು ಓದಿಕೊಂಡು, ದೇವರ ಈ ಅದ್ಭುತ ವಾಗ್ದಾನವನ್ನು ನಿಮ್ಮದಾಗಿಸಿಕೊಳ್ಳಿ: "ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವಾಸ್ತ್ಯದವರಲ್ಲಿ ಉಳಿದವರ ಅಪರಾಧವನ್ನು ಕ್ಷಮಿಸುವವನೂ, ಅವರ ದ್ರೋಹವನ್ನು ಲಕ್ಷಿಸದವನೂ ಆಗಿದ್ದೀ; ಹೌದು, ನಮ್ಮ ದೇವರು ನಿತ್ಯವೂ ಕೊಪಿಸುವವನಲ್ಲ, ಕರುಣೆಯೇ ಆತನಿಗೆ ಇಷ್ಟ. ಆತನು ನಮ್ಮ ಕಡೆಗೆ ತಿರುಗಿಕೊಂಡು ನಮ್ಮನ್ನು ಕನಿಕರಿಸುವನು, ನಮ್ಮ ಅಪರಾಧಗಳನ್ನು ಅಣಗಿಸುವನು. ದೇವರೇ, ನಿನ್ನ ಜನರ ಪಾಪಗಳನ್ನೆಲ್ಲಾ ಸಮುದ್ರದ ತಳಕ್ಕೆ ಬಿಸಾಟುಬಿಡುವಿ".

2 ಕೊರಿಂಥ. 1:20ರ ಪ್ರಕಾರ, ನಾವು ಈ ವಾಗ್ದಾನವನ್ನು ಕರ್ತನಾದ ಯೇಸು ಕ್ರಿಸ್ತನ ನಾಮದಲ್ಲಿ ಈ ಕ್ಷಣವೇ ಕೇಳಿಕೊಳ್ಳಬಹುದು.

ದೇವರು ಕ್ಷಮಿಸಲು ಸಿದ್ಧರಾಗಿದ್ದಾರೆ (ನೆಹೆಮಿಯ 9:17). ಅಷ್ಟೇ ಅಲ್ಲದೆ, ದೇವರು ನಮ್ಮ ಪಾಪಗಳು ಮತ್ತು ನಮ್ಮ ದುಷ್ಕೃತ್ಯಗಳನ್ನು ಎಂದಿಗೂ ನೆನಪಿಗೆ ತರುವದಿಲ್ಲವೆಂದು ಹೇಳಿದ್ದಾರೆ (ಇಬ್ರಿಯ 8:12). ಅವರು ನಿಮ್ಮ ಹಿಂದಿನ ಜೀವನವನ್ನು ಮತ್ತೆಂದಿಗೂ ನೆನಪಿಸಿಕೊಳ್ಳುವುದಿಲ್ಲ. ನೀನು ನಿನ್ನನ್ನು ತಗ್ಗಿಸಿಕೊಂಡು ಶಿಲುಬೆಯ ಹತ್ತಿರ ಬಂದು, "ಓ ದೇವರೇ, ಪಾಪಿಯಾದ ನನ್ನನ್ನು ಕರುಣಿಸು". ಎಂದು ಕೇಳಿಕೊಂಡರೆ, ಆ ಕ್ಷಣವೇ ಆತನು ನಿನ್ನನ್ನು ಕ್ಷಮಿಸುತ್ತಾನೆ, ಏಕೆಂದರೆ ಈಗಾಗಲೇ ನಿನ್ನ ಪಾಪಗಳಿಗಾಗಿ ನಿನ್ನ ಬದಲಾಗಿ ಕರ್ತ ಯೇಸುವು ತನ್ನ ಪ್ರಾಣವನ್ನು ಕೊಟ್ಟಿದ್ದಾನೆ.

"ನಾನು ಗುಣಪಡಿಸುತ್ತೇನೆ"

ಇದರ ನಂತರ ಈ ವಚನದಲ್ಲಿ ದೇವರು ಹೀಗೆ ಹೇಳುವುದನ್ನು ಓದುತ್ತೇವೆ, "ನಾನು ಅವರ ಭೂಮಿಯನ್ನು ಗುಣಪಡಿಸುತ್ತೇನೆ".

ಪಾಪವೆಂಬ ರೋಗವು ನಿಮ್ಮ ಇಡೀ ಜೀವನವನ್ನು ಆವರಿಸಿದೆ. ಅದು ನಿಮ್ಮನ್ನು ಕೆಡಿಸುತ್ತಿದೆ ಮತ್ತು ಸಾಯಿಸುತ್ತಿದೆ. ನೀವು ಮೇಲ್ನೋಟಕ್ಕೆ ಚೆನ್ನಾಗಿಯೇ ಕಾಣಿಸಬಹುದು, ಆದರೆ ನಿಮ್ಮ ಹೃದಯವು ಕೆಟ್ಟಿದೆ. ನೀವು ದೀನತೆ ಮತ್ತು ಮುರಿದ ಹೃದಯದೊಂದಿಗೆ ಬಂದಾಗ, ದೇವರು ಆ ರೋಗವನ್ನು ತಾನು ಗುಣಪಡಿಸುವುದಾಗಿ ಹೇಳುತ್ತಾರೆ. ನಿಮ್ಮ ಜೀವನದಲ್ಲಿ ಬಂಜೆತನ ಮತ್ತು ನಿಷ್ಫಲತೆ ಇರಬಹುದು. ನಿಮ್ಮಿಂದ ಬರುತ್ತಿರುವ ಜೀವವುಳ್ಳ ನೀರು ಕೆಟ್ಟುಹೋಗಿರಬಹುದು. ಆದರೆ ದೇವರು ಹೇಳುವದು ಏನೆಂದರೆ, ಈ ವಚನದಲ್ಲಿ ತಿಳಿಸಿರುವ ನಾಲ್ಕು ಸಂಗತಿಗಳನ್ನು ನೀವು ಮಾಡುವುದಾದರೆ, ಅವರು ಭೂಮಿಯನ್ನು ಗುಣಪಡಿಸುತ್ತಾರೆ.

ಈ ವಾಕ್ಯದಲ್ಲಿ ತಿಳಿಸಲಾದ ಕ್ರಮವನ್ನು ನೀವು ಗುರುತಿಸಬೇಕೆಂದು ನಾನು ಬಯಸುತ್ತೇನೆ - "ನಾನು ಪರಲೋಕದಿಂದ ಲಾಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ದೇಶದಲ್ಲಿ ಆರೋಗ್ಯವನ್ನು ದಯಪಾಲಿಸುತ್ತೇನೆ". ನಮ್ಮ ಪಾಪಗಳು ಕ್ಷಮಿಸಲ್ಪಡುವ ಮೊದಲು ಭೂಮಿಯು ಗುಣ ಹೊಂದುವುದಿಲ್ಲ. ನಾವು ನಮ್ಮನ್ನು ತಗ್ಗಿಸಿಕೊಂಡು, ನಮ್ಮ ಕೆಟ್ಟ ನಡತೆಯನ್ನು ಬಿಟ್ಟು, ಪ್ರಾರ್ಥಿಸಿ, ದೇವರ ಮುಖದರ್ಶನವನ್ನು ಬಯಸಿದರೆ, ಆಗ ಉಪ್ಪು ಕಳೆದುಹೋಗಿದ್ದ ತನ್ನ ರುಚಿಯನ್ನು ತಿರುಗಿ ಪಡೆಯುತ್ತದೆ. ಕರ್ತ ಯೇಸುವು ಹೇಳಿದರು, "ನೀವು ಭೂಮಿಗೆ ಉಪ್ಪಾಗಿದ್ದೀರಿ, ಆದರೆ ಉಪ್ಪು ಸಪ್ಪಗಾದರೆ, ಆ ಉಪ್ಪು ಕೆಲಸಕ್ಕೆ ಬಾರದು" ಈ ನಾಲ್ಕು ಷರತ್ತುಗಳನ್ನು ಪಾಲಿಸಿ, ಕಳಕೊಂಡಿರುವ ರುಚಿಯನ್ನು ಮತ್ತೆ ಪಡೆದುಕೊಳ್ಳುವಂತೆ ದೇವರು ನಮಗೆ ಸಹಾಯ ಮಾಡಲಿ.

ಉಪ್ಪಿನಿಂದ ತುಂಬಿದಂತಹ ಒಂದು ಹೊಸ ಪಾತ್ರೆ

ನೀವು ಒಂದು ಕ್ಷಣ 2 ಅರಸು 2:20ರ ಬಗ್ಗೆ ಯೋಚಿಸಿದರೆ, ದೇವರು ಏನನ್ನು ಬಯಸುತ್ತಾರೆಂದು ನೋಡುತ್ತೀರಿ. ಎಲೀಷನು ಒಂದು ಹೊಸ ಪಾತ್ರೆಯನ್ನು ತೆಗೆದುಕೊಂಡನು.

ದೇವರು ಈ ಲೋಕದಲ್ಲಿ ಸುವಾರ್ತೆಯನ್ನು ಪ್ರಸರಿಸುವದಕ್ಕಾಗಿ ಹೊಸ ವಿಧಾನಗಳು ಅಥವಾ ಹೊಸ ಸಂಸ್ಥೆಗಳಿಗಾಗಿ ಹುಡುಕುತ್ತಿಲ್ಲ. ಕರ್ತನು ತನ್ನ ಉದ್ದೇಶಗಳನ್ನು ಆಚರಣೆಗೆ ತರಲು ಉಪ್ಪು ತುಂಬಿರುವ ಹೊಸ ಪಾತ್ರೆಗಳನ್ನು ಅರಸುತ್ತಿದ್ದಾನೆ. ದೇವರು ಸ್ವತಃ ತಾನೇ ಈ ಲೋಕಕ್ಕೆ ಬೋಧಿಸಿ ಅವರು ಸುವಾರ್ತೆಯನ್ನು ಸ್ವೀಕರಿಸುವಂತೆ ಮಾಡಲು ಹೊರಟಿಲ್ಲ. ದೇವರು ಬಯಸಿದರೆ, ಸುವಾರ್ತೆಯನ್ನು ಪರಲೋಕದಿಂದ ಮೊಳಗಿಸಿ ಈ ಲೋಕಕ್ಕೆ ಸಾರಬಹುದಾಗಿತ್ತು. ಆದರೆ ಇದು ಆತನ ರೀತಿಯಲ್ಲ. ಆತನು ಒಬ್ಬ ಮನುಷ್ಯನನ್ನು ಪಾತ್ರೆಯಾಗಿ ಬಳಸಿಕೊಂಡು ಆತನಲ್ಲಿ ಈ ಉಪ್ಪನ್ನು ತುಂಬಿಸಿ, ನಂತರ ಅದನ್ನು ಭೂಮಿಯ ಮೇಲೆ ಸುರಿಯಲು ಬಯಸುತ್ತಾನೆ.

ಎಲೀಷನು ತನ್ನ ಕೈಯಲ್ಲಿ ಉಪ್ಪನ್ನು ತೆಗೆದುಕೊಳ್ಳಬಹುದಿತ್ತು ಮತ್ತು ಅದನ್ನು ಹೊರಗೆ ಸುರಿಸ ಬಹುದಿತ್ತು. ಆದರೆ ಆತನು ಹಾಗೆ ಮಾಡಲಿಲ್ಲ. ಆತನು ಒಂದು ಹೊಸ ಪಾತ್ರೆಯನ್ನು ತೆಗೆದುಕೊಂಡು, ಅದರಲ್ಲಿ ಉಪ್ಪು ತುಂಬಿಸಿ, ಆ ಉಪ್ಪನ್ನು ನೀರಿನ ಮೇಲೆ ಸುರಿದನು. ಒಡನೆಯೇ ಆ ಭೂಮಿ ಮತ್ತು ನೀರು ಗುಣಹೊಂದಿದವು. ನಾವು ಈ ಲೋಕದ ಎಲ್ಲಾ ಸಂಗತಿಗಳಿಂದ ಶುದ್ಧೀಕರಿಸಲ್ಪಟ್ಟು, ಕ್ರಿಸ್ತನಿಂದ ತುಂಬಿಸಲ್ಪಡುವ ಮನಸ್ಸನ್ನು ಹೊಂದಿ, ಒಡೆಯನ ಬಳಕೆಗೆ ಯೋಗ್ಯರಾದ ಪಾತ್ರೆಗಳಾಗುವಂತೆ ದೇವರು ಅನುಗ್ರಹಿಸಲಿ.

ಇಲ್ಲಿ ಇನ್ನೂ ಒಂದು ಸಂಗತಿಯನ್ನು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಪಾತ್ರೆಯು ಉಪ್ಪಿನಿಂದ ತುಂಬಿಸಲ್ಪಟ್ಟ ನಂತರ, ಆ ಉಪ್ಪು ಪಾತ್ರೆಯೊಳಗೆ ಹಾಗೆಯೇ ಉಳಿಯಲು ಎಲೀಷನು ಬಿಡಲಿಲ್ಲ - ಆತನು ಅದನ್ನು ಹೊರಕ್ಕೆ ಸುರಿದನು.

ದೇವರು ನಿಮ್ಮ-ನನ್ನ ಜೀವನವನ್ನು ತುಂಬಿಸುವದು, ನಾವು ಸೇವೆಯ ಮೂಲಕ ಇತರರಿಗಾಗಿ ಅರ್ಪಿಸಲ್ಪಡಬೇಕು ಎನ್ನುವ ಒಂದೇ ಕಾರಣಕ್ಕಾಗಿ. ನಾವು ಬಹಳ ಸಮಯದಿಂದ ಪವಿತ್ರಾತ್ಮನಿಂದ ತುಂಬಿಸಲ್ಪಡುವಂತೆ, ಮತ್ತು ಇನ್ನೂ ಅನೇಕ ಆತ್ಮಿಕ ಆಶೀರ್ವಾದಗಳಿಗಾಗಿ ದೇವರನ್ನು ಕೇಳುತ್ತಿರಬಹುದು. ಆದರೆ ನಾವು ಈ ಸಂಗತಿಗಳನ್ನು ಬಹುಶ: ಯಾವುದೋ ಒಂದು ಸ್ವಾರ್ಥಕ್ಕಾಗಿ ಕೇಳುತ್ತಿರಲೂಬಹುದು. ದೇವರು ಪರಲೋಕದ ಉಪ್ಪನ್ನು ನಮ್ಮಲ್ಲಿ ತುಂಬುವದು, ನಾವು ಇತರರ ಎದುರು ನಮ್ಮ ಆತ್ಮಿಕತೆಯ ಪ್ರದರ್ಶನ ಮಾಡುವದಕ್ಕಾಗಿ ಅಲ್ಲ.

ಯೆಶಾಯ 53:12ರಲ್ಲಿ ನಾವು ಕರ್ತ ಯೇಸುವಿನ ಬಗ್ಗೆ ಓದುವಂತೆ, ಆತನು ತನ್ನ ಪ್ರಾಣವನ್ನು ಮರಣದ ವರೆಗೂ ಧಾರೆ ಎರೆದನು. ಹಾಗೆ ಮಾಡಿದ್ದರಿಂದ, ನನ್ನ-ನಿಮ್ಮ ಪಾಪಗಳು ಇಂದು ಕ್ಷಮಿಸಲ್ಪಡಲು ಸಾಧ್ಯವಾಗಿದೆ. ನಾವು ಸಹ ಇತರರ ಸೇವೆಗಾಗಿ ನಮ್ಮನ್ನು ಧಾರೆ ಎರೆಯಲು ಸಿದ್ಧರಾಗಿರಬೇಕು. ಇಲ್ಲವಾದಲ್ಲಿ ಭೂಮಿಯು ಎಂದಿಗೂ ಗುಣ ಹೊಂದುವುದಿಲ್ಲ. ನಾವು ನೀರು ತುಂಬಿರುವ ಕೊಳಗಳಂತೆ ಇರುವದು ಕರ್ತನಿಗೆ ಬೇಕಿಲ್ಲ. ನಾವು ಇತರರಿಗೆ ಜೀವ-ಜಲದ ಹೊಳೆಗಳು ನಮ್ಮ ಮೂಲಕ ಹರಿಯ ಬಹುದಾದ ಕಾಲುವೆಗಳು ಆಗಬೇಕೆಂದು ಆತನು ಇಷ್ಟಪಡುತ್ತಾನೆ. ದೇವರಿಗೆ ಇಂತಹ ಪಾತ್ರೆಗಳು ಬೇಕಾಗಿವೆ - ತಮ್ಮನ್ನು ಬರಿದು ಮಾಡಿಕೊಳ್ಳಲು ಇಷ್ಟಪಡುವ ಮನಸ್ಸುಗಳು.

ಕರ್ತನ ದೃಷ್ಟಿಯು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ಸುತ್ತಾಡುತ್ತಾ, ಇಂತಹ ಪಾತ್ರೆಗಳನ್ನು ಹುಡುಕುತ್ತಿವೆ. ನಾವು ಅವಿದ್ಯಾವಂತರಾಗಿದ್ದರೂ ಪರವಾಗಿಲ್ಲ. 2 ಪೂರ್ವಕಾಲ ವೃತ್ತಾಂತ 7:14ರಲ್ಲಿ ವಿದ್ಯಾಭ್ಯಾಸದ ಬಗ್ಗೆ ನಾವು ಏನನ್ನೂ ಕಾಣುವದಿಲ್ಲ. ನೀವು ನಿಮ್ಮ ಜೀವಿತದಲ್ಲಿ ಒಂದು ದಿನವೂ ಶಾಲೆಗೆ ಹೋಗಿರದಿದ್ದರೂ ಪರವಾಗಿಲ್ಲ. ನೀವು ಈ ಲೋಕದಲ್ಲಿ ಕಡು ಬಡವರು ಅಥವಾ ಅತೀ ಮೂರ್ಖರು ಆಗಿದ್ದರೂ ಪರವಾಗಿಲ್ಲ. ದೇವರು ನೋಡುತ್ತಿರುವದು ಇಂತಹ ಸಂಗತಿಗಳನ್ನು ಅಲ್ಲವೇ ಅಲ್ಲ. ಆತನು ಸತ್ಯವೇದ ಜ್ಞಾನ ಅಥವಾ ಬೈಬಲ್ ಕಾಲೇಜಿನ ಡಿಪ್ಲೊಮಾಕ್ಕಾಗಿ ಕಾದಿಲ್ಲ. ಅವರು ಬೇರೆ ಏನನ್ನೋ ಹುಡುಕುತ್ತಿದ್ದಾರೆ.

ಅವರು ಹೇಳುವ ಮಾತು ಇದು - "ನನ್ನವರೆಂದು ಹೆಸರುಗೊಂಡ ನನ್ನ ಜನರು ತಮ್ಮನ್ನು ತಗ್ಗಿಸಿಕೊಂಡು, ಪ್ರಾರ್ಥಿಸಿ, ನನ್ನ ದರ್ಶನವನ್ನು ಬಯಸಿ, ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ತಿರುಗಿಕೊಂಡರೆ, ಆಗ ನಾನು ಈ ದೇಶಕ್ಕೆ ಆರೋಗ್ಯವನ್ನು ದಯಪಾಲಿಸಲು ಅವರನ್ನು ಉಪಯೋಗಿಸುತ್ತೇನೆ".

ನೀವು ಯಾರೇ ಆಗಿದ್ದರೂ ಪರವಾಗಿಲ್ಲ. ಮನುಷ್ಯನ ಘನತೆಯು ದೇವರ ಎದುರು ಗಣನೆಗೆ ಬರುವದಿಲ್ಲ. ಈ ಷರತ್ತುಗಳನ್ನು ಪೂರೈಸಲು ಮತ್ತು ಇತರರಿಗಾಗಿ ಧಾರೆ ಎರೆಯಲ್ಪಡಲು ನೀವು ತಯಾರಾಗಿದ್ದರೆ, ಆಗ ನೀವು ಯಾರೇ ಆಗಿದ್ದರೂ, ದೇವರು ನಿಮ್ಮನ್ನು ಉಪಯೋಗಿಸುತ್ತಾರೆ.

ಆಮೆನ್.