ನಿರ್ಜೀವ ಕಾರ್ಯಗಳು

Article Body: 

ಹೊಸ ಒಡಂಬಡಿಕೆಯು ಮಾಂಸದ ಕಾರ್ಯಗಳು (ಗಲಾತ್ಯ 5:19) ಹಾಗೂ ನಿರ್ಜೀವ ಕಾರ್ಯಗಳ ಬಗ್ಗೆ ಮಾತನಾಡುತ್ತದೆ (ಇಬ್ರಿ. 6:1).

ಯಾರೆಲ್ಲ ಮಾಂಸದ ಕಾರ್ಯಗಳಾದ ಜಾರತ್ವ. ಬಂಡುತನ, ಮುಂತಾದವುಗಳಲ್ಲಿ ಯಾರು ತಮ್ಮನ್ನೇ ತೊಡಗಿಸಿಕೊಳ್ಳುತ್ತಾರೋ ಅಂಥವರು ನಿಶ್ಚಯವಾಗಿ ದೇವರ ಸಾಮ್ರಾಜ್ಯವನ್ನು ಹೊಂದುವುದಿಲ್ಲ. ತನ್ನ ಆತ್ಮಸಾಕ್ಷಿಯಲ್ಲಿ ಅಪರಾಧಿ ಎಂದೆಣಿಸಿಕೊಳ್ಳದೆ ಯಾವೊಬ್ಬ ವಿಶ್ವಾಸಿಗೂ ಇವನ್ನು ಪಾಲಿಸಲು ಕಷ್ಟ. ಏಕೆಂದರೆ, ಈ ಕಾರ್ಯಗಳು ನಿಸ್ಸಂದೇಹವಾಗಿಯೂ ಪಾಪಭರಿತವಾಗಿವೆ.

ನಿರ್ಜೀವ ಕಾರ್ಯಗಳು ತುಂಬಾ ಮೋಸಭರಿತವಾಗಿವೆ. ಹೊರಗಿನಿಂದ ಅವು ಒಳ್ಳೆಯ ಕೆಲಸಗಳು. ಆದರೆ ಅವು ಕೊಳಕಾದ ಬುಗ್ಗೆಯಿಂದ ಹುಟ್ಟುತ್ತವೆ. (ಯಾಕೆಂದರೆ, ನಮ್ಮ ಮಾಂಸದಲ್ಲಿ ಒಳ್ಳೆಯದೇನೂ ನೆಲೆಸಿಲ್ಲ). ಆದಕಾರಣ ದೇವರ ದೃಷ್ಟಿಯಲ್ಲಿ ಅವು ಹೊಲಸು ಬಟ್ಟೆಯಂತಾಗಿವೆ (ರೋಮಾ.7:18 ; ಯೆಶಾ. 64:6)

ಅದಕ್ಕಾಗಿ ನಾವು ಪಾಪದಿಂದ ಮಾತ್ರವಲ್ಲದೆ, ನಿರ್ಜೀವ ಕಾರ್ಯಗಳಿಂದಲೂ ಮಾನಸಾಂತರ ಹೊಂದಬೇಕೆಂದು ಆಜ್ಞಾಪಿಸಲ್ಪಟ್ಟಿದ್ದೇವೆ. ನಾವು ಅಂಥಹ ಅಸ್ತಿವಾರವನ್ನು ಹಾಕಿದ ಮೇಲೆ ಮಾತ್ರ ಪರಿಪೂರ್ಣತೆಯೆಡೆಗೆ ಮುನ್ನಡೆಯಲು ಸಾಧ್ಯ (ಇಬ್ರಿ. 6:1).

ಯೇಸುವಿನ ರಕ್ತವು ನಮ್ಮ ಎಲ್ಲಾ ಪಾಪಗಳಿಂದ ನಮ್ಮನ್ನು ಶುದ್ಧೀಕರಿಸುವುದು ಎಂಬುದು ವಿಶ್ವಾಸಿಗಳಿಗೆ ತಿಳಿದಿರುವ ವಿಚಾರ. ನಾವು ಜೀವಂತ ದೇವರ ಸೇವೆ ಮಾಡುವ ಮೊದಲು ಯೇಸುವಿನ ರಕ್ತವು ನಮ್ಮನ್ನು ನಿರ್ಜೀವ ಕಾರ್ಯಗಳಿಂದ ನಮ್ಮ ಅಂತ:ಕರಣವನ್ನು ಕೂಡ ಶುದ್ಧೀಕರಿಸಬೇಕು ಎಂದು ವಿಶ್ವಾಸಿಗಳಿಗೆ ಅಷ್ಟೊಂದಾಗಿ ತಿಳಿಯದಿರುವ ವಿಚಾರವಾಗಿದೆ.

ಆದುದರಿಂದ, ನಿಜವಾಗಿಯೂ ನಿರ್ಜೀವ ಕಾರ್ಯಗಳು ಅಂದರೆ ಏನು ಎಂಬುದರ ಬಗ್ಗೆ ನಮಗೆ ಸ್ಪಷ್ಟವಾದ ತಿಳುವಳಿಕೆ ಇರುವುದು ತುಂಬಾ ಅಗತ್ಯವಾಗಿದೆ.

1. ಸಂತೋಷವಿಲ್ಲದೆ ಮಾಡಿದ ಕಾರ್ಯಗಳು

ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾರೆ(2 ಕೊರಿಂಥ 9:7). ಸಂತೋಷದಿಂದ ತನ್ನ ಇಚ್ಛೆಯನ್ನೂ ಕೊಡುವವನನ್ನು ದೇವರು ಪ್ರೀತಿಸುತ್ತಾರೆ. ನೀತಿಯನ್ನು ಮಾಡುವುದರಲ್ಲಿ ಹರ್ಷಿಸುವವರನ್ನು ದೇವರು ಸಂಧಿಸುತ್ತಾರೆ (ಯೆಶಾ. 64:5). ಇಸ್ರಾಯೇಲ್ಯರು ಯಾವಾಗ ಸಂತೋಷದಿಂದ ಕರ್ತನ ಸೇವೆ ಮಾಡಲಿಲ್ಲವೋ ಆಗ ಅವರು, ಅವರ ಶತ್ರುಗಳ ಸೇವೆ ಮಾಡುವಂತೆ ಕರ್ತನು ಅವರನ್ನು ಶಿಕ್ಷಿಸಿದನು (ಧರ್ಮೋ. 28:47, 48). ದೇವರ ರಾಜ್ಯವು ಪವಿತ್ರಾತ್ಮನ ಸಂತೋಷದಿಂದಿರುವ ನೀತಿಯನ್ನು ಕೂಡಿದೆ (ರೋಮಾ. 14:17). ಆತನ ಚಿತ್ತವನ್ನು ಮಾಡುವುದರಲ್ಲಿ ಯಾರು ಹರ್ಷಿಸುತ್ತಾರೋ ಅವರು ಮಾತ್ರ ದೇವರ ಹೃದಯಕ್ಕೆ ಸಂತೋಷವನ್ನು ತರಲು ಸಾಧ್ಯ.

ದಶಮಾಂಶದ ವಿಷಯವನ್ನು ಪರಿಗಣಿಸಿರಿ. ಇದು ಹಳೆ ಒಡಂಬಡಿಕೆಯಲ್ಲಿದ್ದ ನಿಯಮ. ಆದರೆ ಹೊಸ ಒಡಂಬಡಿಕೆಯ ಅಡಿಯಲ್ಲಿರುವವರಿಗೆ ಯೇಸುವಾಗಲೀ ಅಥವಾ ಅಪೊಸ್ತಲರಾಗಲೀ ಇದನ್ನು ಆಜ್ಞಾಪಿಸಿಲ್ಲ. ಆದರೆ ಅನೇಕ ದುರಾಶೆಯ ಪಾಸ್ಟರ್ ಗಳು ಒಂದೇ ದೈವಿಕ ಬಹುಮಾನದ ವಾಗ್ದಾನದ ಮೂಲಕ ಅಥವಾ ದೈವಿಕ ನ್ಯಾಯತೀರ್ಪಿನ ಬೆದರಿಕೆಯ ಮೂಲಕ ತಮ್ಮ ಸಭೆಯಲ್ಲಿರುವವರು ಕಡ್ಡಾಯವಾಗಿ ದಶಮಾಂಶವನ್ನು ಕೊಡಲೇಬೇಕೆಂದು ಒತ್ತಾಯಪಡಿಸುತ್ತಾರೆ. ಜನರು ಕೊಡುತ್ತಾರೆ ಆದರೆ ಸಂತೋಷದಿಂದಲ್ಲ. ಇದು ಸ್ವಯಂಪ್ರೇರಿತವಾಗಿ ಕೊಡುವುದಲ್ಲ ಆದರೆ ಇದು ಗೊಣಗುಟ್ಟಿ ಹಾಗೂ ಹಿಂಜರಿಕೆಯಿಂದ ಕೊಡುವಂಥದ್ದು. ಕಾಣಿಕೆಯ ಡಬ್ಬಗಳು ತುಂಬಿದಾಗ ಪಾಸ್ಟರ್ ಗಳು ಸಂತೋಷಪಡುತ್ತಾರೆ ಆದರೆ ದೇವರಲ್ಲ. ಪಾಸ್ಟರ್ ಗಳು ಬಹಳವಾಗಿ ಕೊಡುವವರನ್ನು ಪ್ರೀತಿಸುತ್ತಾರೆ, ಆದರೆ ದೇವರು ಸಂತೋಷದಿಂದ ಕೊಡುವವರನ್ನು ಮಾತ್ರ ಪ್ರೀತಿಸುತ್ತಾರೆ.

ಹೊಸ ಒಡಂಬಡಿಕೆಯ ತತ್ವ "ನಿನಗೆ ಸಾಧ್ಯವಿರುವಷ್ಟು ಕೊಡು" ಎಂದಲ್ಲ. ಆದರೆ, "ನೀನು ಸಂತೋಷದಿಂದ ಎಷ್ಟನ್ನು ಕೊಡಲು ಸಾಧ್ಯವೋ ಅಷ್ಟನ್ನು ಕೊಡು" ಎಂದು. ದೇವರು ಅದರಿಂದ ಹೆಚ್ಚಿನದೇನನ್ನೂ ಅಪೇಕ್ಷಿಸುವುದಿಲ್ಲ. ಸತ್ಯವೇನೆಂದರೆ, ನೀನು ಕೊಡುವ ಪ್ರಮಾಣದಲ್ಲೇ ನೀನು ಪಡೆಯುವಿ" (2ಕೊರಿಂಥ. 9:7; ಲೂಕ. 6:3). ಆದರೆ ಅದು, ಇನ್ನೊಂದು ವಿಷಯ. ದೇವರು ಯಾವತ್ತೂ ಕಷ್ಟದಿಂದ ಅಥವಾ ಮನಸ್ಸಿಲ್ಲದೆ ಕೊಡುವ ಯಾವ ಕಾಣಿಕೆಗಳನ್ನೂ ಬಯಸುವುದಿಲ್ಲ. ನಾವು ಅಸಂತೋಷದಿಂದ ಮಾಡುವುದೆಲ್ಲವೂ ನಿರ್ಜೀವ ಕಾರ್ಯವಾಗಿದೆ.

2. ಪ್ರೀತಿಯಿಲ್ಲದೆ ಮಾಡಿದ ಕಾರ್ಯಗಳು

ದೇವರನ್ನು ಮತ್ತು ಮನುಷ್ಯರನ್ನು ಪ್ರೀತಿಸುವುದು ಎಂಬ ಈ ಗೂಟಗಳ ಮೇಲೆ ಪ್ರತಿಯೊಂದು ಆಜ್ಞೆಯೂ ತೂಗಿಕೊಂಡಿರುತ್ತದೆ. ಈ ಆಜ್ಞೆಗಳನ್ನು ತೆಗೆದರೆ ಎಲ್ಲವೂ ನೆಲಕ್ಕೆ ಬೀಳುತ್ತದೆ. ಈ ಕಾರಣಕ್ಕಾಗಿಯೇ ಎಫೆಸದ ಸಭೆಯ ಹಿರಿಯನು ಗದರಿಸಲ್ಪಟ್ಟನು. ಅವನ ಕಾರ್ಯಗಳು ದೇವರ ಮತ್ತು ಮನುಷ್ಯನ ಪ್ರೀತಿಯಿಂದ ಪ್ರೇರೇಪಿತವಾಗಿರಲಿಲ್ಲ. ನಾವು ದೇವರ ಆಜ್ಞೆಗಳನ್ನು ಅವುಗಳ ಆತ್ಮದಿಂದ ಪಾಲಿಸದಿದ್ದರೆ, ನಮ್ಮ ಕಾರ್ಯಗಳು ನಿರ್ಜೀವ ಕಾರ್ಯಗಳಾಗುತ್ತವೆ. ನಾವು ದೇವರ ಮಂದೆಯ ಕುರುಬರಾಗಿ ನಮ್ಮನ್ನು ಅವರು ನೇಮಿಸುವ ಮೊದಲು, ನಾವು ಅವರನ್ನು ಶ್ರೇಷ್ಠವಾಗಿ ಪ್ರೀತಿಸುತ್ತೇವೆಯೋ ಎಂದು (ಪೇತ್ರನನ್ನು ಪರೀಕ್ಷಿಸಿದಂತೆ) ನಮ್ಮನ್ನು ಪರೀಕ್ಷಿಸುತ್ತಾರೆ (ಯೋಹಾ. 21:15-17). ಇಲ್ಲವಾದಲ್ಲಿ ನಮ್ಮ ಸೇವೆಯು ನಿಷ್ಪ್ರಯೋಜಕವಾಗುತ್ತದೆ. ಅದರಂತೆಯೇ ನಮ್ಮನ್ನು ಶಪಿಸುವವರನ್ನು ನಾವು ಕೇವಲ ಪ್ರೀತಿಸಿದರೆ ಸಾಲದು. ನಾವು ಅವರನ್ನು ನಮ್ಮ ಹೃದಯಾಂತರಾಳದಿಂದ ಪ್ರೀತಿಸಬೇಕು. ಇಲ್ಲವಾದಲ್ಲಿ ನಾವು ಕೇವಲ ವಾಕ್ಯವನ್ನು ಅಕ್ಷರಶ: ಪಾಲಿಸುತ್ತೇವೆ ಆದರೆ, ಅದರ ಆತ್ಮವನ್ನು ಪಾಲಿಸುವುದಿಲ್ಲ. ಅದರಂತೆಯೇ, ನಮಗೆ ಸಭೆಯಲ್ಲಿ ಹೇಳಲಾಗಿದೆ ಎಂಬ ಕಾರಣಕ್ಕಾಗಿ ನಾವು ನಮ್ಮ ಸಹೋದರ ಸಹೋದರಿಯರ ಸೇವೆಯನ್ನು ಮಾಡುವುದಾದರೆ, ನಾವು ಅವರನ್ನು ಟೀಕಿಸುವುದಾದರೆ, (ಬಹುಶ: ನಮಗೆ ಕೃತಜ್ಞರಾಗಿಲ್ಲ ಎಂಬುದಕ್ಕಾಗಿ) ಆಗ ಅವರ ಸೇವೆಯು ನಿರ್ಜೀವ ಕಾರ್ಯಗಳ ರಾಶಿಯಾಗುತ್ತದೆ. ಆಗ ಕರ್ತನ ಕೆಲಸಕ್ಕಾಗಿ ನಾವು ಮಾಡುವ ತ್ಯಾಗವು ನಾವು ಆತನನ್ನು ಪ್ರೀತಿಸುವುದರಿಂದ ಉದ್ಭವಿಸದಿದ್ದರೆ, ಅದು ಪ್ರಯೋಜನವಿಲ್ಲದ್ದಾಗುತ್ತದೆ.

3. ಆಸಕ್ತಿಯಿಲ್ಲದೆ (ಹುರುಪಿಲ್ಲದೆ) ಮಾಡಿದ ಕಾರ್ಯಗಳು

"ನಿನ್ನ ಕೃತ್ಯಗಳನ್ನು ನಾನು ಬಲ್ಲೆನು...ಉಗುರುಬೆಚ್ಚಗಿರುವುದರಿಂದ ನೀನು ತಣ್ಣಗೂ ಅಲ್ಲ, ಬೆಚ್ಚಗೂ ಅಲ್ಲ...ಆದುದರಿಂದ ಆಸಕ್ತನಾಗಿರು" (ಪ್ರಕ. 3: 15-19). ಅರೆಮನಸ್ಸಿನ ಕಾರ್ಯಗಳು ನಿರ್ಜೀವ ಕಾರ್ಯಗಳಾಗಿವೆ. ನಾವು ನಮ್ಮ ಕರ್ತರಾದ ದೇವರನ್ನು ನಮ್ಮ ಪೂರ್ಣ ಹೃದಯದಿಂದಲೂ, ನಮ್ಮ ಪೂರ್ಣ ಮನಸ್ಸಿನಿಂದಲೂ ಮತ್ತು ನಮ್ಮ ಪೂರ್ಣ ಬಲದಿಂದಲೂ ಪ್ರೀತಿಸಬೇಕು (ಮಾರ್ಕ. 12:30). ನಮ್ಮ ಆರಾಧನೆ ಮತು ಸ್ತುತಿಯು ಪೂರ್ಣಹೃದಯದಿಂದ ಆಗಬೇಕು, ಜೀವವಿಲ್ಲದ್ದು ಅಥವಾ ನಿರ್ಜೀವವಾಗಿರಬಾರದು. ನಮ್ಮ ಪ್ರಾರ್ಥನೆಯು ಭಾರದಿಂದ ಕೂಡಿರಬೇಕು ಮತ್ತು ನಮ್ಮ ಪ್ರವಾದನೆಯು ಹುರುಪಿನಿಂದ ಕೂಡಿರಬೇಕು. ನಾವು ಯಾವಾಗಲೂ "ಆತ್ಮದಿಂದ ಪ್ರಕಾಶಿಸುತ್ತಿರಬೇಕು" (ರೋಮಾ. 12:11). ವೇದಿಕೆಯ ಮೇಲೆ ಬೆಂಕಿಯು ನಿರಂತರವಾಗಿ ಉರಿಯುತ್ತಿರಬೇಕು (ಯಾಜಕ. 6:13). ದೇವರು ನಮಗೆ ಕೊಟ್ಟಂತಹ ಆತ್ಮದ ವರಗಳು ಉರಿಯುವಂತೆ ನಾವು ಅವಕ್ಕೆ ಗಾಳಿ ಹಾಕಬೇಕು. ಅನೇಕರು ಅವುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದಕ್ಕಾಗಿ ನಾವು ಅವುಗಳನ್ನು ತುಚ್ಚವಾಗಿ ಕಾಣಬಾರದು (2 ತಿಮೊಥೆ.1:7). ಇಂದು ಅನೇಕ ಕ್ರೈಸ್ತ ಸಮುದಾಯಗಳು ಪವಿತ್ರಾತ್ಮನ ಉರಿಯುವಿಕೆಯಿಲ್ಲದೆ ನಿರ್ಜೀವ ಸ್ಥಿತಿಯಲ್ಲಿವೆ. ಕರ್ತನಿಂದ ಅವು ತಿರಸ್ಕರಿಸಲ್ಪಡುವುದಕ್ಕೆ ಸಿದ್ಧವಾಗಿವೆ (ಪ್ರಕ. 3:16), ಯಾಕೆಂದರೆ ಅವರಲ್ಲಿ ಹುರುಪು ಇಲ್ಲವಾಗಿದೆ. ನಾವು ನಮ್ಮ ಜೀವನದಲ್ಲಿನ ಇಂಥಹ ನಿರ್ಜೀವ ಕಾರ್ಯಗಳಿಗಾಗಿ ಮಾನಸಾಂತರ ಹೊಂದುವ ಅಗತ್ಯವಿದೆ.

4, ನಂಬಿಕೆಯಿಲ್ಲದೆ ಮಾಡಿದ ಕಾರ್ಯಗಳು

ಹೇಗೆ ಕಾರ್ಯಗಳಿಲ್ಲದ ನಂಬಿಕೆಯು ವ್ಯರ್ಥವೋ (ಯಾಕೋ. 2:26) ಅದೇ ರೀತಿ ನಂಬಿಕೆಯಿಲ್ಲದ ಕಾರ್ಯಗಳೂ ವ್ಯರ್ಥವಾಗಿವೆ. ನಂಬಿಕೆಯ ಕೊರತೆಯಿರುವ ಕಾರಣ, ಅನೇಕ ಪ್ರಾರ್ಥನಾ ಕೂಟಗಳು ನಿರ್ಜೀವವಾಗಿವೆ. ನಂಬಿಕೆಯಿಂದ ಕೂಡಿದ ಐದು ನಿಮಿಷಗಳ ಪ್ರಾರ್ಥನೆಯು, ತಾಳ್ಮೆ ಹಾಗೂ ದೃಢತೆಯ ಸಾಧನೆಗಾಗಿ ಇಡೀ ರಾತ್ರಿ ಮಾಡಿದ ಪ್ರಾರ್ಥನಾಕೂಟಕ್ಕಿಂತ, ದೇವರ ಉದ್ದೇಶಗಳನ್ನು ನೆರವೇರಿಸಲು ಹೆಚ್ಚು ಜೀವವುಳ್ಳದ್ದು ಮತ್ತು ಬಲವುಳ್ಳದ್ದಾಗಿದೆ. ಯೇಸುವು ರಾತ್ರಿಯಿಡೀ ಪ್ರಾರ್ಥಿಸಿದರು. ಅಗತ್ಯವಿದ್ದಾಗ, ನಾವೂ ಹಾಗೆಯೇ ಮಾಡಬೇಕು. ಆದರೆ ಒಂದು ನಿರ್ಜೀವ ಕಾರ್ಯದಂತೆ ಅಲ್ಲ. ನಂಬಿಕೆಯೆಂದರೆ ವೈಯುಕ್ತಿಕ ಖಚಿತತೆ ಇರುವುದು (ರೋಮಾ 14:22). ನಮಗೆ ವೈಯಕ್ತಿಕ ಖಚಿತತೆ ಇಲ್ಲದೇ ನಾವು ಏನೇ ಮಾಡಿದರೂ, ಅದು ನಿರ್ಜೀವ ಕಾರ್ಯವಾಗುತ್ತದೆ. ಕೇವಲ ದೇವರ ಒಬ್ಬ ಶ್ರೇಷ್ಟ ಮನುಷ್ಯನು ಯಾವುದೋ ಒಂದು ಸಿದ್ಧಾಂತವನ್ನು ನಂಬುತ್ತಾನೆ ಮತ್ತು ಬೋಧಿಸುತ್ತಾನೆ ಎಂಬ ಮಾತ್ರಕ್ಕಾಗಿ ನಾವು ಆತನನ್ನು ಅನುಕರಿಸಬೇಕು ಎಂಬುದು ಅದರ ಅರ್ಥವಲ್ಲ. ಆದಾಗ್ಯೂ, ಕ್ರೈಸ್ತ-ಸಮಾಜದಲ್ಲಿ, ವೈಯುಕ್ತಿಕ ಖಚಿತತೆ ಇಲ್ಲದೆ, ಕುರುಡಾಗಿ ಇತರರನ್ನು ಅನುಕರಿಸುವ ವಿಶ್ವಾಸಿಗಳು ಅನೇಕರಿದ್ದಾರೆ. ಅನುಕರಣೆಯು ಯಾವಾಗಲೂ ಮರಣವನ್ನು ತರುತ್ತದೆ. ಇಸ್ರಾಯೇಲ್ಯರು ಕೆಂಪು ಸಮುದ್ರವನ್ನು ನಂಬಿಕೆಯಿಂದ ದಾಟಿದರು. ಐಗುಪ್ತ್ಯರು ಅವರನ್ನು ಅನುಕರಿಸಿ ಮುಳುಗಿ ಹೋದರು (ಇಬ್ರಿಯ.11:29) ನಮ್ಮ ಎಚ್ಚರಿಕೆಗಾಗಿ ಇದು ಬರೆಯಲ್ಪಟ್ಟಿದೆ. ಇತರರ ಕಾರ್ಯಗಳನ್ನು ಅಥವಾ ಸೇವೆಗಳನ್ನು ಅನುಕರಿಸಬೇಡಿರಿ. ಮತ್ತೊಬ್ಬರ ಸೇವೆಯಲ್ಲಿರುವ ಒತ್ತನ್ನು ಅನುಕರಿಸುವುದನ್ನೂ ನಾವು ಮಾಡಬಾರದು. ಅದೂ ಕೂಡ ಒಂದು ನಿರ್ಜೀವ ಕಾರ್ಯವಾಗಿದೆ. ನಮ್ಮ ಸ್ವಂತ ನಂಬಿಕೆಯ ಪ್ರಮಾಣದಂತೆ ನಾವು ಪ್ರವಾದಿಸಬೇಕು (ರೋಮಾ12:16). ನಾವು ನಾವಾಗಿಯೇ ಇರಬೇಕೆಂದು ದೇವರ ಬಯಕೆಯಾಗಿದೆ. ಯಾಕೆಂದರೆ, ನಮ್ಮ ವಿಶಿಷ್ಟ ವ್ಯಕ್ತಿತ್ವದ ಮೂಲಕ ನಾವು ಕ್ರಿಸ್ತನ ದೇಹಕ್ಕೆ ಒಂದು ವಿಶೇಷವಾದ ಕೊಡುಗೆಯನ್ನು ಮಾಡಬೇಕಾಗಿದೆ.

5. ಸ್ವಂತ ಲಾಭ ಮತ್ತು ಸ್ವ-ಘನತೆಗಾಗಿ ಮಾಡಿದ ಕಾರ್ಯಗಳು

"ನಿನ್ನ ಕೃತ್ಯಗಳನ್ನು ಬಲ್ಲೆನು. ಜೀವಿಸುವವನು ಎಂದು ಹೆಸರು ನಿನಗಿದ್ದರೂ ಸತ್ತವನಾಗಿದ್ದೀ ಎಂಬುದನ್ನು ಬಲ್ಲೆನು" (ಪ್ರಕ. 3:1)
ಆತ್ಮಿಕವಾಗಿ ಸತ್ತ ಒಬ್ಬ ಮನುಷ್ಯನು ಇಲ್ಲಿದ್ದನು. ಆದರೆ ಅವನು ತೃಪ್ತಿಹೊಂದಿದ ಮನುಷ್ಯನಾಗಿದ್ದನು. ಯಾಕೆಂದರೆ, ಜೀವಿಸುವವನು ಎಂಬ ಹೆಸರು ಆತನಿಗಿತ್ತು. ಆತನು ದೇವರ ಪ್ರೀತಿಗಿಂತ ಹೆಚ್ಚಾಗಿ ಮನುಷ್ಯನ ಪ್ರೀತಿಯನ್ನು ಬಯಸಿದನು. (ಯೋಹಾ. 5:44; 12:43). ಇದರ ಫಲಿತಾಂಶವಾಗಿ ಆತನ ಎಲ್ಲಾ ಕಾರ್ಯಗಳು ನಿರ್ಜೀವ ಕಾರ್ಯಗಳಾಗಿದ್ದವು. ಮನುಷ್ಯರನ್ನು ಮೆಚ್ಚಿಸಲು ನಾವು ಮಾಡುವುದೆಲ್ಲವೂ ನಿರ್ಜೀವ ಕಾರ್ಯವಾಗಿದೆ. ಇನ್ನೊಬ್ಬರಿಗೆ ಗೊತ್ತಾಗಬೇಕು ಎಂದು ನಾವು ಮಾಡುವ ಕಾರ್ಯವು ಕೂಡ ನಿರ್ಜೀವ ಕಾರ್ಯವಾಗಿದೆ (ಮತ್ತಾ. 6:1-18). ಸಜೀವ ಕಾರ್ಯಗಳು - ಮನುಷ್ಯರ ಕಣ್ಣುಗಳಿಂದ ಅಡಗಿಸಲು ಪ್ರತಿಯೊಂದು ಪ್ರಯತ್ನವನ್ನು ಮಾಡಿ, ದೇವರ ಮುಖದ ಮುಂದೆ ರಹಸ್ಯವಾಗಿ ಮಾಡುವಂಥದ್ದಾಗಿವೆ. ದೇವರಿಗಾಗಿ ನಾವು ಮಾಡುವ ಸಾಧನೆಗಳಲ್ಲಿ ನಾವು ಮಹಿಮೆ ಹೊಂದುವಾಗ, "ನಾವು ನಮ್ಮ ಕೈಯಾರೆ ಮಾಡಿದ ಕೆಲಸಗಳನ್ನು ಆರಾಧಿಸಲು" ಆರಂಭಿಸಿದ್ದೇವೆ. (ಅ ಕೃ. 7:41). ಆಗ ತಕ್ಷಣವೇ ನಮ್ಮ ಕಾರ್ಯಗಳು ನಿರ್ಜೀವ ಕಾರ್ಯಗಳಾಗುತ್ತವೆ. ದಾನಿಯೇಲ 4:30 ಸ್ಪಷ್ಟಪಡಿಸುವಂತೆ, ಬಾಬೆಲನ್ನು ಕಟ್ಟುವುದು ಹೀಗೆಯೇ.

ನಮ್ಮ ಬಗ್ಗೆ ಅಥವಾ ನಮ್ಮ ಕೆಲಸದ ಬಗ್ಗೆ ನಾವು ಇತರರ ಅಭಿಪ್ರಾಯವನ್ನು ಕಂಡುಕೊಳ್ಳುವ ಶೋಧನೆಗೆ ಒಳಗಾದ ಕೂಡಲೇ ನಾವು ಇಂಥಹ ಯೋಚನೆಗಳು ಎಲ್ಲಿ ಸೇರಬೇಕೋ ಅಲ್ಲಿಗೆ, ಅಂದರೆ- ಚರಂಡಿಗೆ ಅವನ್ನು ಎಸೆಯಬೇಕು. ದೇವರ ಶ್ರೇಷ್ಠ ಪುರುಷರು ನಮ್ಮ ಬಗ್ಗೆ ಹೊಂದಿರುವ ಅಭಿಪ್ರಾಯಗಳೆಲ್ಲವನ್ನು ಕೂಡಾ ನಾವು ನಮ್ಮ ಮನಸ್ಸಿನಿಂದ ಚರಂಡಿಗೆ ಎಸೆಯಬೇಕು. "ಮನುಷ್ಯನ ದೃಷ್ಟಿಯಲ್ಲಿನ ನಮ್ಮ ನೀತಿಯು ದೇವರ ಕಣ್ಣುಗಳಲ್ಲಿ (ಚರಂಡಿಗೆ ಯೋಗ್ಯವಾದದ್ದು) ಹೊಲಸು." (ಲೂಕ 16:15).

ಯಾರು ಈ ರೀತಿಯಾಗಿ ಗಂಭೀರವಾಗಿದ್ದಾರೋ ಅವರು ಮಾತ್ರ ನಿರ್ಜೀವ ಕಾರ್ಯಗಳಿಂದ ತಪ್ಪಿಸಲ್ಪಡಬಹುದು. ಇದೇ ರೀತಿಯಲ್ಲಿ ದೇವರಿಗಾಗಿ ಸಂಬಳಕ್ಕೆ ಮಾಡಿದ ಕಾರ್ಯವೂ ನಿರ್ಜೀವ ಕಾರ್ಯವಾಗಿದೆ. ಸಂಬಳಕ್ಕೆ ಮಾಡಿದ ಕಾರ್ಯವು ಕ್ರೈಸ್ತ ಕಾರ್ಯವಲ್ಲ. ಅದಕ್ಕೆ ಕ್ರೈಸ್ತ ಹೆಸರಿದ್ದರೂ ಅದೊಂದು ಪ್ರಾಪಂಚಿಕ ಕೆಲಸವಾಗಿದೆ. ದೇವರ ಮತ್ತು ಧನದ ಸೇವೆ ಮಾಡುವುದು ಅಸಾಧ್ಯವಾಗಿದೆ.

6. ಕೇವಲ ತನ್ನ ಮನಸಾಕ್ಷಿಯನ್ನು ಸಮಾಧಾನಪಡಿಸಲು ಮಾಡಿದ ಕಾರ್ಯಗಳು

ಅನ್ಯ ಧರ್ಮದವರು ಉಪವಾಸ ಮಾಡುವುದು, ಪ್ರಾರ್ಥನೆ ಮಾಡುವುದು ಮತ್ತು ದಾನವನ್ನು ಕೊಡುವುದು ಇವೇ ಮುಂತಾದ ಕಾರ್ಯಗಳನ್ನು ತಮ್ಮ ಮಾನಸಾಕ್ಷಿಯ ಖಂಡನೆಗಳಿಂದಾಗಿ ಮಾಡುತ್ತಾರೆ.

ತಮ್ಮ ಮನಸಾಕ್ಷಿಯನ್ನು ತೃಪ್ತಿಪಡಿಸುವುದಕ್ಕೋಸ್ಕರ ಕ್ರೈಸ್ತರೂ ಕೂಡ ಇಂಥಹ ಕಾರ್ಯಗಳನ್ನು ಮಾಡಲು ಸಾಧ್ಯ. ಅನೇಕರು ನಿತ್ಯವೂ ಸತ್ಯವೇದವನ್ನು ಓದುವುದು ಮತ್ತು ಪ್ರಾರ್ಥಿಸುವುದು ತಮ್ಮ ಮಾನಸಾಕ್ಷಿಯ ಖಂಡನೆಯಿಂದ ಮುಕ್ತರಾಗುವುದಕ್ಕಾಗಿ ಆಗಿದೆ. ಅದಕ್ಕಾಗಿಯೇ ಅವರು ಪ್ರಾರ್ಥನಾ ಕೂಟಗಳಿಗೆ ಹೋಗುತ್ತಾರೆ, ದಶಮಾಂಶವನ್ನು ಕೊಡುತ್ತಾರೆ ಹಾಗೂ ಭಿಕ್ಷುಕರಿಗೆ ಭಿಕ್ಷೆಯನ್ನು ಕೊಡುತ್ತಾರೆ. ಇಂಥಹ ಎಲ್ಲಾ ಕಾರ್ಯಗಳು ನಿರ್ಜೀವ ಕಾರ್ಯಗಳಾಗಿವೆ. ವಿಶ್ವಾಸಿಗಳ ಈ ಬಲಹೀನತೆಗಳನ್ನು ತಮ್ಮ ಸ್ವಂತ ಲಾಭಕ್ಕಾಗಿ ಉಪಯೋಗಿಸುವ ಬೋಧಕರಿದ್ದಾರೆ. ಅವರು ಕ್ರಿಸ್ತನಿಲ್ಲದೆ ನಾಶವಾಗುತ್ತಿರುವ ಲಕ್ಷಾಂತರ ಜನರಿಗಾಗಿ ಏನನ್ನಾದರೂ ಮಾಡುವಂತೆ ಜನರನ್ನು ಒತ್ತಾಯಿಸುತ್ತಾರೆ. "ಕೊಡಿ ಇಲ್ಲವೇ, ಇಲ್ಲಿಂದ ಹೊರಟು ಹೋಗಿ" ಎಂದು ಅವರು ಇಂಥಹ ಜನರಿಗೆ ಹೇಳುತ್ತಾರೆ. ಇದರ ಫಲಿತಾಂಶವಾಗಿ, ಕೆಲವರು ಹಣವನ್ನು ಕೊಡುತ್ತಾರೆ ಮತ್ತು ಇನ್ನು ಕೆಲವರು ತಮ್ಮ ಕೆಲಸಗಳನ್ನು ಬಿಟ್ಟು ಕ್ರೈಸ್ತ ಕೆಲಸಕ್ಕಾಗಿ ಹೋಗುತ್ತಾರೆ. ಆದರೆ ಎರಡೂ ಗುಂಪುಗಳು ಕರ್ತನ ಮುನ್ನಡೆಸುವಿಕೆಯಿಲ್ಲದೆ, ಕೇವಲ ಖಂಡನೆಗೊಳಪಡುವ ತಮ್ಮ ಮನಸಾಕ್ಷಿಯನ್ನು ಸಮಾಧಾನ ಪಡಿಸುವ ಕ್ಷಣಮಾತ್ರದ ಭಾವನೆಯಿಂದ ನಡೆಸಲ್ಪಟ್ಟಿದ್ದಾರೆ. ಇಂಥವರು ನಿರ್ಜೀವ ಕಾರ್ಯಗಳೆಂಬ ಕೊನೆಯಿಲ್ಲದ ವೃತ್ತದಲ್ಲೇ ಕೊನೆಗೊಳ್ಳುತ್ತಾರೆ.

7. ದೈವಿಕ ತೀರ್ಪಿನ ಭಯದ ನಿಮಿತ್ತ ಮಾಡಿದ ಕಾರ್ಯಗಳು

ದೇವರ ತೀರ್ಪಿನ ಭಯದಿಂದ ಪಾಪವನ್ನು ತಪ್ಪಿಸುವುದು ಒಳ್ಳೆಯದು. ಆದರೆ ಯೇಸುವು ಖಚಿತವಾಗಿ ಅಂಥಹ ಉದ್ದೇಶದಿಂದ ಪಾಪವನ್ನು ತಪ್ಪಿಸಲಿಲ್ಲ. ಯೇಸು ಪಾಪವನ್ನು ತಪ್ಪಿಸಿದ್ದು, ತಾವು ತಂದೆಗೆ ಸಂತೋಷಪಡಿಸಲು ಬಯಸಿದ್ದರ ಉದ್ದೇಶದಿಂದ. ನಮ್ಮ ಉದ್ದೇಶವೂ ಇದೇ ಆಗಬೇಕು. ಒಂದು ವೇಳೆ, ಹೆಂಗಸರ ಬಗ್ಗೆ ಮೋಹಿಸುವುದಕ್ಕೆ ಅಥವಾ ಸುಳ್ಳು ಹೇಳುವುದಕ್ಕೆ ಅಥವಾ ಮತ್ತೊಬ್ಬರ ಬಗ್ಗೆ ಕಹಿ ಭಾವನೆಯಿಂದಿರುವುದಕ್ಕೆ ಯಾವುದೇ ಶಿಕ್ಷೆಯಿಲ್ಲದೇ ಇರುತ್ತಿದ್ದರೆ, ನಾವು ಆ ಪಾಪಗಳನ್ನು ಮಾಡುತ್ತಿದ್ದೆವೋ? ಅಥವಾ ನಮ್ಮ ಪ್ರಾಥಮಿಕ ಆಸೆ ದೇವರನ್ನು ಮೆಚ್ಚಿಸುವುದಾಗಿರುವುದರಿಂದ ನಾವು ಆ ಪಾಪಗಳನ್ನು ದೂರಮಾಡುತ್ತಿದ್ದೆವೋ? ಪ್ರತಿಯೊಬ್ಬನೂ ಈ ಪ್ರಶ್ನೆಗಳಿಗೆ ತನಗೆ ತಾನೇ ಉತ್ತರ ಕೊಡಲಿ ಮತ್ತು ನಿರ್ಜೀವ ಕಾರ್ಯಗಳಿಂದ ರಕ್ಷಣೆಯನ್ನು ಪಡೆಯುವುದಕ್ಕಾಗಿ ನಡುಗುತ್ತಾ ಹಾಗೂ ಭಯದಿಂದ ಕೆಲಸ ಮಾಡಲಿ. ನಾವು ಕೇವಲ ದೇವರ ನ್ಯಾಯ ತೀರ್ಪಿನಂತೆ ಒಂದು ಕಾಯಿಲೆಗೊಳಗಾಗಬಾರದು ಅಥವಾ ದೇವರು ನಮ್ಮನ್ನು ಕ್ಷಮಿಸಬೇಕು ಎಂಬುದಕ್ಕಾಗಿ ನಾವು ಇತರರನ್ನು ಕ್ಷಮಿಸುವುದು ನಿರ್ಜೀವ ಕಾರ್ಯವಾಗಿದೆ. ಯಾಕೆಂದರೆ ಅದರ ಉದ್ದೇಶವಾಗಿರುವುದು ನ್ಯಾಯತೀರ್ಪಿನ ಭಯದ ಸ್ವಾರ್ಥತೆ. ಕೇವಲ ಅಪಘಾತಗಳನ್ನು ತಪ್ಪಿಸುವುದಕ್ಕಾಗಿ ದಿನಾಲು ಬೆಳಗ್ಗೆ ಸತ್ಯವೇದವನ್ನು ಓದುವುದು ಮತ್ತು ಪ್ರಾರ್ಥನೆ ಮಾಡುವವರ ಬಗ್ಗೆ ನಾವು ಹೇಳುವುದಾದರೂ ಏನು! ಅದು ಅನ್ಯಜನರು ನಂಬುವ ಅತೀ ಕೆಟ್ಟ ಮೂಢ ನಂಬಿಕೆಯ ವರ್ಗಕ್ಕೆ ಸೇರಿದ್ದಾಗಿದೆ.

8. ಪ್ರತಿಫಲವನ್ನು ಪಡೆಯುವುದಕ್ಕಾಗಿ ಮಾಡಿದ ಕಾರ್ಯಗಳು.

ಯೇಸುವು ನಂಬಿಗಸ್ತ ವಿಶ್ವಾಸಿಗಳಿಗೆ ಪ್ರತಿಫಲ ನೀಡುತ್ತಾರೆ ಎಂಬುದು ನಿಜ (ಪ್ರಕಟನೆ 22:12) ಮತ್ತು ಕರ್ತರನ್ನು ಮೆಚ್ಚಿಸುವುದೇ ನಮ್ಮ ಜೀವನದ ಅಂತಿಮ ಬಯಕೆಯಾಗಿರಬೇಕು ಎಂಬುದು ಸಹ ನಿಜವಾದದ್ದು (2 ಕೊರಿ. 5:9), ಹೀಗಾಗಿ ನಾವು ಒಂದು ದಿನ ಕರ್ತರಿಂದ, "ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನು" ಎಂಬ ಮಾತನ್ನು ಕೇಳಿಸಿಕೊಳ್ಳಬಹುದು; ಆದಾಗ್ಯೂ ಸ್ವತಃ ಯೇಸುವೇ ನಮಗೆ ನೀಡಿದ ಎಚ್ಚರಿಕೆ ಏನೆಂದರೆ, ನಾವು ಸ್ವರ್ಗೀಯ ಪ್ರತಿಫಲವನ್ನು ಪಡೆಯುವ ಸ್ವಾರ್ಥದ ಆಸೆಯನ್ನೇ ನಮ್ಮ ಮೂಲಪ್ರೇರಣೆಯನ್ನಾಗಿ ಇರಿಸಿಕೊಂಡು ಕರ್ತನಿಗಾಗಿ ತ್ಯಾಗ ಮಾಡುವುದಾಗಲೀ ಅಥವಾ ಆತನ ಸೇವೆಗೆ ಕೈಹಾಕುವುದಾಗಲೀ ಬೇಡ, ಎಂಬುದಾಗಿ.

ಪೇತ್ರನು ಒಬ್ಬ ಶ್ರೀಮಂತ ಯೌವನಸ್ಥ ಅಧಿಕಾರಿಯೊಂದಿಗೆ ತನ್ನನ್ನು ಹೋಲಿಸಿಕೊಂಡು (ಆ ಯೌವನಸ್ಥನು ಆಗ ತಾನೇ ಯೇಸುವಿನ ಬಳಿಯಿಂದ ಹೊರಟುಹೋಗಿದ್ದನು), ತಾನು ಆತನಿಗಿಂತ ಉತ್ತಮನು ಎಂದುಕೊಂಡು, "ಇಗೋ, ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ನಮಗೆ ಏನು ದೊರಕುವುದು?"(ಮತ್ತಾ. 19:27) ಎಂದು ಪ್ರಶ್ನಿಸಿದಾಗ ಅದಕ್ಕೆ ಪ್ರತ್ಯುತ್ತರವಾಗಿ ಯೇಸುವು ದ್ರಾಕ್ಷೇತೋಟದ ಕೆಲಸಗಾರರ ಸಾಮ್ಯವನ್ನು ಉಲ್ಲೇಖಿಸಿದರು (ಮತ್ತಾ. 20:1-16). ಆ ಸಾಮ್ಯದಲ್ಲಿ ನಾವು ನೋಡುವುದು ಏನೆಂದರೆ, ಸಂಬಳಕ್ಕಾಗಿ (ಪ್ರತಿಫಲಕ್ಕಾಗಿ) ಕೆಲಸವನ್ನು ಮಾಡಿದ ಆಳುಗಳು ಕೊನೆಯವರಾಗಿ ಸಂಬಳವನ್ನು ಪಡೆದರು, ಆದರೆ ಯಾವುದೇ ಪ್ರತಿಫಲದ ಆಲೋಚನೆಯಿಲ್ಲದೆ ಕೆಲಸವನ್ನು ಮಾಡಿದವರು (ಅವರ ಕೆಲಸದ ಪ್ರಮಾಣವು ಮೊದಲು ಕೆಲಸಕ್ಕೆ ಬಂದಿದ್ದವರ ಕೆಲಸದ ಹೋಲಿಕೆಯಲ್ಲಿ ಒಂದು ಚಿಕ್ಕ ಅಂಶ ಮಾತ್ರವಾಗಿತ್ತು) ಮೊದಲನೆಯವರಾಗಿ ಸಂಬಳವನ್ನು ಪಡೆದರು.

ಕೆಲಸದ ಪ್ರಮಾಣ ಹಾಗೂ ಕೆಲಸದ ಗುಣಮಟ್ಟ - ನಾವು ಇದರಲ್ಲೇ ನಿರ್ಜೀವ ಕಾರ್ಯಗಳು ಮತ್ತು ಜೀವಂತ ಕಾರ್ಯಗಳ ನಡುವಿನ ವ್ಯತ್ಯಾಸವನ್ನು ಕಾಣುತ್ತೇವೆ. ನಾವು ಕಾರ್ಯಗಳನ್ನು ಮಾಡುವಾಗ, ಅಂತಿಮವಾಗಿ ಇತರ ವಿಶ್ವಾಸಿಗಳನ್ನು ಮೀರಿಸಿ ಭಡ್ತಿಯನ್ನು ಹೊಂದಿ, ಕ್ರಿಸ್ತನೊಂದಿಗೆ ವಿವಾಹವಾಗುವ ವಧುವಿನ ಸ್ಥಾನಕ್ಕೆ ಆರಿಸಲ್ಪಡುವ ನಿರೀಕ್ಷೆಯಿಂದ ಎಲ್ಲವನ್ನೂ ಮಾಡಿದ್ದರೆ, ಆ ಅಂತಿಮ ದಿನದಲ್ಲಿ ಅವೆಲ್ಲವೂ ನಿರ್ಜೀವ ಕಾರ್ಯಗಳೆಂದು ಬಹಿರಂಗವಾಗಿ ತೋರಿಸಲ್ಪಡುತ್ತವೆ.

ನೀವು ನಿಮ್ನ ಮನಸ್ಸಿನ ಆಲೋಚನೆಗಳನ್ನು ಶುದ್ಧೀಕರಿಸಿಕೊಂಡು, ಇತರರಿಗೆ ಒಳ್ಳೆಯದನ್ನು ಮಾಡಿ, ನಿಮ್ಮ ಹೆಂಡತಿಯನ್ನು ಪ್ರೀತಿಸಿ ಅಥವಾ ನಿಮ್ಮ ಗಂಡನಿಗೆ ವಿಧೇಯರಾಗಿ ಇದ್ದುಕೊಂಡು ಜೀವಿಸಿದರೂ, ಇವೆಲ್ಲವನ್ನೂ ಭವಿಷ್ಯದಲ್ಲಿ ಒಂದು ದಿನ ಉನ್ನತ ಸ್ಥಾನಕ್ಕೆ ಏರಿಸಲ್ಪಡುತ್ತೇನೆಂಬ ಆಲೋಚನೆಯೊಂದಿಗೆ ಮಾಡಿದ್ದರೆ, ನಿಮ್ಮ ಜೀವಿತವು ಇನ್ನೂ ’ಸ್ವಾರ್ಥದಲ್ಲೇ’ಕೇಂದ್ರೀಕೃತವಾಗಿದೆ ಮತ್ತು ನಿಮ್ಮ ಎಲ್ಲಾ ಸ್ವ-ಕೇಂದ್ರಿತವಾದ "ಒಳ್ಳೆಯ"ಕಾರ್ಯಗಳು ನಿರ್ಜೀವ ಕಾರ್ಯಗಳಾಗಿವೆ!

ಮಹಿಮೆಯ ದಿನದಲ್ಲಿ ಕಿರೀಟಗಳನ್ನು ಪಡೆಯುವವರು ಅವುಗಳನ್ನು ತ್ವರಿತವಾಗಿ ಕರ್ತನ ಪಾದಗಳ ಮುಂದೆ ಇರಿಸಿ, "ಇವನ್ನು ಹೊಂದುವದಕ್ಕೆ ನೀನೊಬ್ಬನೇ ಯೋಗ್ಯನಾಗಿದ್ದೀ," ಎಂದು ಹೇಳುತ್ತಾರೆ (ಪ್ರಕಟನೆ 4:10).ನಾವು ದೇವರನ್ನು ಮಹಿಮೆಪಡಿಸುವ ಆಲೋಚನೆಗೆ ಹೊರತಾಗಿ ಇತರ ಎಲ್ಲಾ ಉದ್ದೇಶಗಳನ್ನು ಹೃದಯದಿಂದ ತೆಗೆದುಹಾಕಿ ನಮ್ಮನ್ನು ಶುದ್ಧೀಕರಿಸಿಕೊಂಡಾಗಲೇ ನಾವು ನಿರ್ಜೀವ ಕಾರ್ಯಗಳಿಂದ ಮುಕ್ತರಾಗುತ್ತೇವೆ! ಒಂದು ವೇಳೆ ನಾವು ಮಾಡಿದಂಥ ಒಳ್ಳೇಯ ಕಾರ್ಯಗಳನ್ನೆಲ್ಲಾ ನಮ್ಮ ನೆನಪಿನಲ್ಲಿ ದಾಖಲಿಸಿಟ್ಟುಕೊಂಡಿದ್ದರೆ, ಆ ಎಲ್ಲಾ ಒಳ್ಳೇಯ ಕಾರ್ಯಗಳು ನಿರ್ಜೀವ ಕಾರ್ಯಗಳಾಗುತ್ತವೆ.

ಅಂತಿಮ ನ್ಯಾಯ ವಿಚಾರಣೆಯ ದಿನದ ಬಗ್ಗೆ ಯೇಸುವು ನಮಗೆ ಎರಡು ಚಿತ್ರಣಗಳನ್ನು ನೀಡಿದರು - ಒಂದು, ಜನರು ಕರ್ತನ ಮುಂದೆ ತಾವು ತಮ್ಮ ಭೂಲೋಕದ ಜೀವಿತಗಳಲ್ಲಿ ಮಾಡಿದ್ದ ಎಲ್ಲಾ ಒಳ್ಳೆಯ ಕಾರ್ಯಗಳನ್ನು ಪಟ್ಟಿಮಾಡಿ, "ಕರ್ತನೇ, ನಾವು ಹಲವಾರು ಕಾರ್ಯಗಳನ್ನು ಮಾಡಿದೆವು, ನಿನ್ನ ಹೆಸರಿನಲ್ಲಿ ಬೋಧಿಸಿದೆವು, ನಿನ್ನ ಹೆಸರಿನಲ್ಲಿ ರೋಗಿಗಳನ್ನು ಗುಣಪಡಿಸಿದೆವು"(ಮತ್ತಾ. 7:22,23) ಎಂದು ಹೇಳಿದರು. ಈ ಜನರು ಕರ್ತರಿಂದ ನಿರಾಕರಿಸಲ್ಪಟ್ಟರು. ಮುಂದಿನ ಚಿತ್ರಣದಲ್ಲಿ, ನೀತಿವಂತರು ಭೂಲೋಕದ ತಮ್ಮ ಜೀವಿತಗಳಲ್ಲಿ ಮಾಡಿದ್ದ ಒಳ್ಳೆಯ ಕಾರ್ಯಗಳನ್ನು ಕರ್ತರು ಅವರಿಗೆ ಜ್ಞಾಪಿಸಿದಾಗ, "ಕರ್ತನೇ, ನಾವು ಯಾವಾಗ ಇವೆಲ್ಲವನ್ನು ಮಾಡಿದೆವು?" ಎಂದು ಅವರು ಅಚ್ಚರಿಗೊಳ್ಳುತ್ತಾರೆ (ಮತ್ತಾ. 25:34-40). ಅವರು ಮಾಡಿದ ತಮ್ಮ ಒಳ್ಳೆಯ ಕಾರ್ಯಗಳನ್ನು ಮರೆತುಬಿಟ್ಟಿದ್ದರು - ಏಕೆಂದರೆ ಅವರು ಪ್ರತಿಫಲದ ಆಸೆಯಿಂದ ಅವುಗಳನ್ನು ಮಾಡಿರಲಿಲ್ಲ. ನಾವು ಇವೆರಡು ಚಿತ್ರಣಗಳಲ್ಲಿ ನಿರ್ಜೀವ ಕಾರ್ಯಗಳು ಮತ್ತು ಜೀವಂತ ಕಾರ್ಯಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಕಾಣುತ್ತೇವೆ. ನಾವು ಇವೆರಡರಲ್ಲಿ ಯಾವ ಪಂಗಡದಲ್ಲಿ ಇದ್ದೇವೆ?

9. ಯೇಸುವಿನ ಮರಣವನ್ನು ಸಾರದೆ/ಪ್ರಕಟಿಸದೆ ಮಾಡಿದ ಕಾರ್ಯಗಳು

ನಮ್ಮೊಳಗಿರುವ ಯೇಸುವಿನ ಜೀವಿತದಿಂದ ಹರಿಯುವಂಥವುಗಳೇ ಜೀವಂತ ಕಾರ್ಯಗಳಾಗಿವೆ. ದಿನನಿತ್ಯದ ಶಿಲುಬೆ, ಅಂದರೆ ನಾವು ಮೊದಲು ಯೇಸುವಿನ ಮರಣವನ್ನು ನಮ್ಮ ಜೀವಿತದಲ್ಲಿ ಪ್ರಕಟಿಸದೆ ಇಂಥಹ ಜೀವಿತವನ್ನು ಹೊಂದುವುದು ಅಸಾಧ್ಯವಾಗಿದೆ (2 ಕೊರಿಂಥ, 4:10). ನಾವು ಕೋಪದಿಂದ ಮಾತಾಡಬಾರದೆಂದು ನಮ್ಮ ನಾಲಿಗೆಗಳನ್ನು ನಿಯಂತ್ರಣದಲ್ಲಿಡುವುದು ಅಥವಾ ನಮ್ಮ ಮುಖಗಳು ಉಗ್ರವಾಗಿ ಕಾಣಬಾರದೆಂದು ಅವನ್ನು ಮಾತ್ರ ನಮ್ಮ ಹತೋಟಿಯಲ್ಲಿಟ್ಟುಕೊಳ್ಳುವುದು, ಆದರೆ ಒಳಗೆ ನಾವು ಕೋಪದಿಂದಿರುವುದು ಜಯವಲ್ಲ. ಅದು ಕೇವಲ ನಿಗ್ರಹವಾಗಿದೆ. ಅದು ಯೋಗವು ಕಲಿಸುವ ಬೋಧನೆಯಾಗಿದೆಯೇ ಹೊರತು ಯೇಸುಕ್ರಿಸ್ತನ ಬೋಧನೆಯಲ್ಲ. ನಾವು ನಮ್ಮ ಶಿಲುಬೆಯನ್ನು ನಿತ್ಯವೂ ಹೊರಬೇಕೆಂದು ಯೇಸುವು ನಮಗೆ ಹೇಳಿದ್ದಾರೆ. ಹಾಗೆಂದರೆ, ನಾವು ನಮ್ಮ ಮಾಂಸದ ಸ್ವಭಾವವನ್ನು ದಿನನಿತ್ಯವೂ ಸಾಯಿಸುವುದಾಗಿದೆ (ಗಲಾತ್ಯ. 5;24).

ಬಂದೂಕಿನ ಹೊಡೆತದಂತಿರದೆ ಅಥವಾ ನೇಣಿನಂತಿರದೆ ಶಿಲುಬೆಯ ಮೂಲಕವಾದ ಮರಣವು ಒಂದು ದೀರ್ಘವಾದ ಪ್ರಕ್ರಿಯೆಯಾಗಿದೆ. ಮಾಂಸದ ಸ್ವಭಾವವನ್ನು ಬಂದೂಕಿನ ಹೊಡೆತದಿಂದ ಅಥವಾ ನೇಣಿನಿಂದ ಒಂದೇ ಸಲ ಸಾಯಿಸಲಾಗದು; ಅದನ್ನು ನಾವು ಕೇವಲ ಶಿಲುಬೆಗೇರಿಸಬಹುದು. ಆದರೆ ನಾವು ಈ ಅಪರಾಧಿಯನ್ನು ಶಿಲುಬೆಯಲ್ಲೇ ಇರಿಸಲು ನಂಬಿಗಸ್ತರಾದರೆ, ಕಾಲಕ್ರಮೇಣ ಈ ವಿಷಯಕ್ಕೆ ಮರಣವು ಬಂದೇ ಬರುತ್ತದೆ ಮತ್ತು ಒಂದು ದಿನ ಆಂತರಿಕವಾಗಿ ನಾವು ಪಾಪದಿಂದ ಬಿಡುಗಡೆ ಹೊಂದುತ್ತೇವೆ (1 ಪೇತ್ರ, 4:11). ಆಗ ಆತ್ಮನ ಜೀವಂತ ಕಾರ್ಯಗಳು ಜೀವಕರವಾದ ನದಿಗಳಂತೆ ನಮ್ಮ ಜೀವಿತದೊಳಗಿಂದ ಹರಿಯುತ್ತವೆ (ಯೋಹಾ. 7:38). ಆಗ ನಮ್ಮ ಆಂತರಿಕ ಮನೋಧೋರಣೆಗಳು ಹೊರಗಿನ ನೋಟದೊಂದಿಗೆ ಮತ್ತು ಕಾರ್ಯಗಳೊಂದಿಗೆ ಹೊಂದಿಕೊಳ್ಳುತ್ತವೆ. ಆಗ ಕೃತಕವಾದ ಮುಗುಳ್ನಗೆಯ ಅಥವಾ ಬೇರೆ ಯಾವುದೇ ಬಾಹ್ಯ-ಭಕ್ತಿಯ ಅವಶ್ಯಕತೆ ಇರುವುದಿಲ್ಲ.

10. ನಮ್ಮ ಸ್ವ-ಅನುಕಂಪದಿಂದ ಮಾಡುವ ಕಾರ್ಯಗಳು

ಸತ್ಕಾರ್ಯಗಳು ಮತ್ತು ನಿರ್ಜೀವ ಕಾರ್ಯಗಳಿಗೆ ಒಂದು ಒಳ್ಳೆಯ ಉದಾಹರಣೆಯೆಂದರೆ, ಕರ್ತನ ಮತ್ತು ಆತನ ಜನರಿಗೆ ಮಾರ್ಥಳು ಮಾಡಿದ ನಿಸ್ವಾರ್ಥ ತ್ಯಾಗದ ಕೆಲಸ (ಲೂಕ 10:38-42). ಅದು ಒಳ್ಳೆಯ ಕಾರ್ಯ ಎಂಬ ಭಾವನೆಯಿಂದ ಅವಳು ಆ ಕಾರ್ಯವನ್ನು ಮಾಡಿದಳು. ಆದರೆ ಒಬ್ಬ ಸೇವಕನ ಬಗೆಗಿನ ಅತ್ಯಂತ ಮುಖ್ಯವಾದ ವಿಷಯವೇನೆಂದರೆ, ಅವನು ತನ್ನ ಯಜಮಾನನು ಏನು ಮಾಡಬೇಕೆಂದು ಹೇಳುತ್ತಾನೋ ಅದನ್ನು ಮಾಡುತ್ತಾನೆ. ತನ್ನ ಇಷ್ಟದಂತೆ ಆತನು ಮಾಡುವುದಿಲ್ಲ (1 ಕೊರಿಂಥ. 4:2 Living Bible). ಹೀಗೆ ಮರಿಯಳು ಮೊದಲು ಯೇಸುವಿನ ಪಾದದ ಬಳಿ ಕುಳಿತು ಆತನು ಏನು ಮಾಡಬೇಕೆಂಬುದನ್ನು ಹೇಳುತ್ತಾನೋ ಅದನ್ನು ಕೇಳಬಯಸುವ ಬುದ್ಧಿವಂತೆಯಾಗಿದ್ದಳು.

ಇಬ್ರಿಯ (4:10-12) ಹೀಗೆ ಹೇಳುತ್ತದೆ. ದೇವರ ವಾಕ್ಯವು ಪ್ರಾಣ ಮತ್ತು ಆತ್ಮವನ್ನು ವಿಭಾಗಿಸುವಂಥದ್ದಾಗಿದೆ. ನಾವು ಹೇಗೆ ಪಾಪರಹಿತ ಜೀವನ ಬಯಸುತ್ತೇವೋ ಹಾಗೆಯೇ, ನಮ್ಮ ಸ್ವಂತ ಕಾರ್ಯಗಳನ್ನು ಮಾಡುವುದನ್ನು ನಾವು ನಿಲ್ಲಿಸತಕ್ಕದ್ದು. ಉದ್ವೇಗದ ಆತ್ಮದಿಂದ ಮಾಡುವ ಕಾರ್ಯಗಳು ನಿರ್ಜೀವ ಕಾರ್ಯಗಳಾಗಿವೆ.

ಯೇಸು ಎಂದಿಗೂ ಯಾವುದನ್ನೂ ತನ್ನ ಸ್ವಂತ ಇಚ್ಛೆಯಿಂದ ಮಾಡಲಿಲ್ಲ (ಯೋಹಾ. 5:30). ಇಂದು ಸಹ ದೇವರು ಹುಡುಕುವುದು ಯಾರನ್ನು ಎಂದರೆ, ತನ್ನ ಕೆಲಸವನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಉಜ್ವಲವಾದ ಆಲೋಚನೆಗಳನ್ನು ಹೊಂದಿದವರರನ್ನು ಅಲ್ಲ (ಅಂಥವರು ಇಷ್ಮಯೇಲರನ್ನು ಮಾತ್ರ ಉತ್ಪಾದಿಸಬಲ್ಲರು). ಆದರೆ, ತಮ್ಮ ಸ್ವಂತ ಬುದ್ಧಿಶಕ್ತಿಯ ಕೊರತೆಯನ್ನು ಒಪ್ಪಿಕೊಳ್ಳುವಷ್ಟು ದೀನರಾಗಿರುವವರನ್ನು ಮತ್ತು ದೇವರು ತಮ್ಮನ್ನು ಉಪಯೋಗಿಸಲು ಯಾವಾಗಲೂ ಲಭ್ಯವಿರುವ ಮತ್ತು ಆತನ ಮೆಚ್ಚುಗೆಗೆ ತಕ್ಕಂತೆ ಇರಲು ಬಯಸುವವರನ್ನು. ದೇವರು ಸಾಮರ್ಥ್ಯವನ್ನಲ್ಲ, ಲಭ್ಯತೆಯನ್ನು ನೋಡುತ್ತಾನೆ.

ಈಗ ನಿರ್ಜೀವ ಕಾರ್ಯಗಳ ಬಗ್ಗೆ ಕೇಳಿದ ನಂತರ ನಮ್ಮಲ್ಲಿ ಕೆಲವರಿಗೆ ಇರುವ ದೊಡ್ಡ ಅಪಾಯವೇನೆಂದರೆ, ನಿರ್ಜೀವ ಕಾರ್ಯಗಳ ಬಂಡೆಯಿಂದ ಹಿಂದೆ ಸರಿಯುವುದು ಮತ್ತು ಕಿರಿದಾದ ದಾರಿಯ ಬದಿಯಲ್ಲಿ ಬೀಳುವುದು, ಅಂದರೆ "ಏನೂ ಮಾಡದೆ" ಇರುವುದು. ಇದು ಮೋಸಕರವಾದದ್ದು. ನಾವು ಶಿಸ್ತುಬದ್ಧ ಜೀವನವನ್ನು ನಡೆಸುವಲ್ಲಿ ಆತ್ಮದೊಂದಿಗೆ ಸಹಕರಿಸಿದಾಗ ಮಾತ್ರ ಪವಿತ್ರಾತ್ಮನ ಜೀವಂತ ಕಾರ್ಯಗಳನ್ನು ನಮ್ಮ ಮೂಲಕ ಉತ್ಪಾದಿಸಬಹುದು. ಕಾನೂನು ಅಲ್ಲ, ಆದರೆ ಶಿಸ್ತು. ನಾವು ಶರೀರದ ಎಲ್ಲಾ ಕಲ್ಮಶವನ್ನು ನಮ್ಮಲ್ಲಿ ಶುಚಿ ಮಾಡಿಕೊಳ್ಳುವುದು ಮಾತ್ರವಲ್ಲದೆ (2 ಕೊರಿಂಥ.7:1) ಆತ್ಮದಿಂದಲೂ ನಾವು ನಮ್ಮನ್ನು ಶುದ್ಧೀಕರಿಸಿಕೊಳ್ಳೋಣ.

ಇದರಿಂದ ನಮ್ಮ ನೀತಿಯ ಕಾರ್ಯಗಳು ಯಜ್ಞದ ಕುರಿಯಾದಾತನ ವಿವಾಹದ ದಿನಕ್ಕೆ ನಮಗೆ ಉಡುಪಾಗಿರುತ್ತವೆ (ಪ್ರಕ. 19:8).