ಯೆಶಾಯ ಪ್ರವಾದಿಯ ಗ್ರಂಥದ ಕೊನೆಯ ಭಾಗದಲ್ಲಿ, ಅಂದರೆ 40ನೇ ಅಧ್ಯಾಯದಿಂದ ಆರಂಭಿಸಿ, ಕ್ರೈಸ್ತರಿಗಾಗಿ ಕೆಲವು ಅದ್ಭುತವಾದ ವಾಗ್ದಾನಗಳಿವೆ. ಯೆಶಾಯ ಗ್ರಂಥವು ಎರಡು ಭಾಗಗಳನ್ನು ಒಳಗೊಂಡಿದೆ. ಮೊದಲ 39 ಅಧ್ಯಾಯಗಳು ಹಳೆಯ ಒಡಂಬಡಿಕೆಯ 39 ಪುಸ್ತಕಗಳಿಗೆ ಸಂಬಂಧಿಸಿವೆ, ಮತ್ತು ಮುಂದಿನ 27 ಅಧ್ಯಾಯಗಳು ಹೊಸ ಒಡಂಬಡಿಕೆಯ 27 ಪುಸ್ತಕಗಳಿಗೆ ಸಂಬಂಧಿಸಿವೆ. ಈ ಕೊನೆಯ 27 ಅಧ್ಯಾಯಗಳ ವಿಶೇಷತೆ ಏನೆಂದರೆ, ವಾಸ್ತವವಾಗಿ ಇವು ಹೊಸ ಒಡಂಬಡಿಕೆಯ ಪ್ರವಾದನೆಗಳಾಗಿವೆ - ಅವುಗಳ ಹಲವು ಭಾಗಗಳಲ್ಲಿ ಕ್ರಿಸ್ತನ ಬಗ್ಗೆ ಉಲ್ಲೇಖವಿದೆ ಮತ್ತು ಇನ್ನು ಅನೇಕ ವಚನಗಳು ಕ್ರಿಸ್ತನ ಶಿಷ್ಯರಾದ ನಾವು ಅವರ ಹೆಜ್ಜೆಯನ್ನು ಅನುಸರಿಸಿ ನಡೆಯುವುದು ಹೇಗೆಂದು ಸೂಚಿಸುತ್ತವೆ. ಹೀಗೆ ಯೆಶಾಯನು 40 - 66 ಅಧ್ಯಾಯಗಳಲ್ಲಿ ಪ್ರಮುಖವಾಗಿ ಹೊಸ ಒಡಂಬಡಿಕೆಯ ಅಡಿಯಲ್ಲಿ ನಮಗೆ ಅನ್ವಯಿಸುವ ಕೆಲವು ಅದ್ಭುತವಾದ ವಾಗ್ದಾನಗಳಿವೆ.
ಯೆಶಾಯನು 66:1-2 ವಚನಗಳಲ್ಲಿ ಯೇಸು ಕ್ರಿಸ್ತನ ನಿಜವಾದ ಸಭೆಯನ್ನು ಕಟ್ಟುವ ಚಿತ್ರಣವಿದೆ, ಮತ್ತು ಇದನ್ನು ಪಾತಾಳಲೋಕದ ಬಲವು ಸೋಲಿಸಲಾರದು ಎಂಬುದಾಗಿ ಇದೆ. "ಆಕಾಶವು ನನಗೆ ಸಿಂಹಾಸನ, ಭೂಮಿಯು ನನಗೆ ಪಾದಪೀಠ. ನೀವು ನನಗೆ ಇನ್ನೆಂಥಾ ಮನೆಯನ್ನು ಕಟ್ಟಿಕೊಡುವಿರಿ? ಮಾನವರೇ, ನೀವು ಹೊಸದಾಗಿ ಹುಟ್ಟಿರುವ ಕ್ರೈಸ್ತರೆಂದು ನಿಮ್ಮನ್ನು ಹೇಳಿಕೊಳ್ಳುತ್ತೀರಿ, ಆದರೆ ನೀವು ನನಗಾಗಿ ಕಟ್ಟಲಿರುವ ಸಭೆ ಎಲ್ಲಿದೆ?"
"ನಾನು ಕಟಾಕ್ಷಿಸುವವನು ಎಂಥವನೆಂದರೆ," ಎಂದು ಕರ್ತರು ಪ್ರಸ್ತಾಪಿಸಿ, ಪಾತಾಳಲೋಕದ ಬಲವನ್ನು ಜಯಿಸುವಂತ ಕರ್ತನ ಸಭೆಯನ್ನು ಕಟ್ಟಲು ತಾನು ಎಂಥವರನ್ನು ಅನುಗ್ರಹಿಸುತ್ತೇನೆಂದು ವಿವರಿಸುತ್ತಿದ್ದಾರೆ. ಅದು ಕೋಪ, ವ್ಯಾಮೋಹ, ವ್ಯಭಿಚಾರ, ಸುಳ್ಳು, ಕಳ್ಳತನ ಮತ್ತು ಆದಾಮನ ಸಂತತಿಯ ಲಕ್ಷಣಗಳಾದ ಇತರ ಅನೇಕ ಕೆಟ್ಟ ವಿಷಯಗಳ ಮೂಲಕ ಸೈತಾನನು ಒಳನುಗ್ಗಲು ಅವಕಾಶ ನೀಡದಿರುವ ಸಭೆಯಾಗಿದೆ.
"ನಾನು ಕಟಾಕ್ಷಿಸುವವನು ಎಂಥವನೆಂದರೆ, ದೀನನೂ, ಮನಮುರಿದವನೂ, ನನ್ನ ಮಾತಿಗೆ ಭಯ ಪಡುವವನೂ ಆಗಿರುವವನೇ"(ಯೆಶಾಯನು 66:2). ಕರ್ತರು ಹುಡುಕುತ್ತಿರುವ ಮೊಟ್ಟಮೊದಲ ಗುಣ, ದೀನತೆ ಹಾಗೂ ಮುರಿದ ಮನಸ್ಸು ಅಥವಾ ಮುರಿದ ಆತ್ಮ. ದೇವರು ನೋಡುವ ಜನರು ಯಾರೆಂದರೆ, ತಮ್ಮ ಬಗ್ಗೆ ಅಲ್ಪವಾದ (ಕಡಿಮೆಯಾದ) ಭಾವನೆಯನ್ನು ಹೊಂದಿರುವಂತ ಜನರು, ಆದಾಗ್ಯೂ ಇವರು ತಮ್ಮ ಸ್ವಾಭಿಮಾನವನ್ನು ಕಳಕೊಂಡವರು ಅಲ್ಲ. ಯೇಸುವಿನ ಆತ್ಮಗೌರವ ಅಥವಾ ಸ್ವಾಭಿಮಾನ ಕೆಳಮಟ್ಟದ್ದು ಆಗಿರಲಿಲ್ಲ. ಆತನು ದೇವರ ಕುಮಾರನಾಗಿದ್ದನು. ಅವರು ತಮ್ಮ ಶಿಷ್ಯರಿಗೆ, "ನೀವು ನನ್ನನ್ನು ಗುರುವೆಂದೂ, ಕರ್ತನೆಂದೂ ಕರೆಯುತ್ತೀರಿ; ನೀವು ಕರೆಯುವುದು ಸರಿ; ನಾನು ಅಂಥವನೇ ಹೌದು," ಎಂದು ಹೇಳಿದರು (ಯೋಹಾನನು 13:13). ಯೇಸುವಿಗೆ ತಾನು ಯಾರೆಂಬುದರ ಬಗ್ಗೆ ಯಾವುದೇ ಸಂದೇಹವಿರಲಿಲ್ಲ. ಅವರಿಗೆ ತಾನು ದೇವಕುಮಾರನೆಂದು ತಿಳಿದಿತ್ತು. ಅವರಲ್ಲಿ ಕೀಳರಿಮೆಯಾಗಲೀ, ಕುಗ್ಗಿದ ಸ್ವಾಭಿಮಾನವಾಗಲೀ ಇರಲಿಲ್ಲ. ಆದರೆ ಅವರ ದೀನತೆ ಎಷ್ಟು ವಿಶಾಲವಾಗಿತ್ತೆಂದರೆ, ಇತರರನ್ನು ತಾನು ಸೇವೆ ಮಾಡಬೇಕಾದ ಜನರೆಂದು ಅವರು ಪರಿಗಣಿಸಿದರು, ಮತ್ತು ಅವರ ಕಾಲುಗಳನ್ನು ತೊಳೆದರು. ಯೇಸುವು ಇಸ್ಕರಿಯೋತ ಯೂದನ ಕಾಲುಗಳನ್ನು ಸಹ ತೊಳೆದರೆಂದು ನಿಮಗೆ ತಿಳಿದಿದೆಯೇ? ಇದೇ ದೀನತೆಯಾಗಿದೆ. ಮುಂದಿನ ಕೆಲವು ತಾಸುಗಳಲ್ಲಿ ತನ್ನನ್ನು ಶತ್ರುಗಳ ಕೈಗೊಪ್ಪಿಸಲಿರುವ ದ್ರೋಹಿಯ ಕಾಲುಗಳನ್ನು ತೊಳೆಯುವುದು. ಅವರಲ್ಲಿ ಆತ್ಮಗೌರವದ (ಸ್ವಾಭಿಮಾನದ) ಕೊರತೆ ಇರಲಿಲ್ಲ, ಆದರೆ ಅವರು ಕೆಳಮಟ್ಟದ ಸ್ಥಾನವನ್ನು ಸ್ವೀಕರಿಸಿದರು. ಅವರಲ್ಲಿ ತಾನು ಇತರರಿಂದ ಏನು ಪಡೆಯಬೇಕು ಎಂಬ ವಿಷಯದಲ್ಲಿ ದೊಡ್ಡ ನಿರೀಕ್ಷೆ ಇರಲಿಲ್ಲ. ಇತರ ಜನರೊಂದಿಗೆ ನಮ್ಮ ಸಂಬಂಧದ ವಿಷಯದಲ್ಲಿ ಫಿಲಿಪ್ಪಿಯವರಿಗೆ 2:3ರಲ್ಲಿ ಹೇಳಿರುವಂತೆ, "ಇತರರನ್ನು ನಿಮಗಿಂತ ಪ್ರಾಮುಖ್ಯರೆಂದು ಎಣಿಸಿರಿ." ಇದು ಅತಿ ಶ್ರೇಷ್ಠ ಗುಣವಾಗಿದೆ. ಇದೇ ಮುರಿದ ಆತ್ಮ. ನಾವು ಕ್ರಿಸ್ತನಂತೆ ಇಲ್ಲವೆಂದು ದುಃಖಿಸುವಾಗ ಮುರಿದ ಮನಸ್ಸನ್ನು ಹೊಂದುತ್ತೇವೆ. ದೇವರು ಇಂತಹ ವ್ಯಕ್ತಿಯನ್ನು ಗಮನಿಸುತ್ತಾರೆ.
"ನಾವು ದೇವರ ವಾಕ್ಯಕ್ಕೆ ಭಯಪಡುವುದನ್ನು ಕಲಿತುಕೊಳ್ಳೋಣ; ಆಗ ದೇವರು ತನ್ನ ಕ್ರೈಸ್ತಸಭೆಯನ್ನು ಕಟ್ಟುವುದಕ್ಕಾಗಿ ನಮ್ಮನ್ನು ಬಳಸಿಕೊಳ್ಳುವರು."
ದೇವರು ಒಬ್ಬ ವ್ಯಕ್ತಿಯಲ್ಲಿ ಹುಡುಕುವಂತ ಎರಡನೇ ಗುಣವೆಂದರೆ, ಯೆಶಾಯನು 66:2'ರಲ್ಲಿ ಹೇಳಿರುವಂತೆ, "ನನ್ನ ಮಾತಿಗೆ ಭಯಪಡುವ ವ್ಯಕ್ತಿ." ಇದು ಯೇಸುವಿನ ಆಜ್ಞೆಗಳ ವಿಧೇಯತೆಗೆ ಅನ್ವಯಿಸುವ ಬಹಳ ಮುಖ್ಯವಾದ ವಿಷಯವಾಗಿದೆ. ನೀನು ಪರ್ವತ ಪ್ರಸಂಗವನ್ನು ಓದುವಾಗ, ದೇವರ ವಾಕ್ಯಕ್ಕೆ ನಡುಗುತ್ತೀಯಾ? ನೀನು ಒಬ್ಬ ವ್ಯಕ್ತಿಯ ಮೇಲೆ ಕೋಪಗೊಂಡು ಅವನನ್ನು ಗದರಿಸಿದರೆ, ಅದು ಅಗ್ನಿನರಕಕ್ಕೆ ಹೋಗತಕ್ಕಂತ ಅಪರಾಧವಾಗಿದೆ ಎಂದು ಓದಿದಾಗ ನೀನು ನಡುಗುತ್ತೀಯಾ? ಅಲ್ಲಿ ಮತ್ತೊಂದು ವಚನ, ನಿನ್ನ ದೇಹದ ಅಂಗಗಳು ಪರಸ್ತ್ರೀಯ ಮೋಹಕ್ಕೆ ಸಾಧನಗಳಾದರೆ ಅವುಗಳನ್ನು ಅತ್ಯಂತ ಕಠಿಣವಾಗಿ ಕಡಿದುಹಾಕಬೇಕೆಂದು ತಿಳಿಸುತ್ತದೆ, ಮತ್ತು ನಿನ್ನ ಕಣ್ಣುಗಳು ಅಥವಾ ಕೈಗಳು ಪಾಪಕ್ಕೆ ಕಾರಣವಾದರೆ, ನೀನು ಅತಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ನೀನು ನರಕಕ್ಕೆ ಹೋಗುತ್ತಿಯೆಂದು ಬರೆಯಲ್ಪಟ್ಟಿದೆ. ನೀನು ಈ ವಾಕ್ಯಕ್ಕೆ ನಡುಗುತ್ತೀಯಾ?
ಅನೇಕ ವರ್ಷಗಳಿಂದ ನನ್ನ ಈ ಬೋಧನೆಯನ್ನು ಅನೇಕರು ಕೇಳಿಸಿಕೊಂಡಿದ್ದರೂ, ಈ ವಾಕ್ಯಕ್ಕೆ ನಡುಗುವ ಬಹಳ ಕಡಿಮೆ ಕ್ರೈಸ್ತರನ್ನು ನಾನು ಕಂಡುಕೊಂಡಿದ್ದೇನೆ. ನನ್ನ ಜವಾಬ್ದಾರಿಗೆ ಒಳಪಟ್ಟಿರುವ ಕೆಲವು ಸಭೆಗಳಲ್ಲೂ ಸಹ, ಅಲ್ಲಿನ ಜನರು ಕಳೆದ 25 ವರ್ಷಗಳಿಂದ ನಾನು ಈ ಪಾಪಗಳ ವಿರುದ್ಧ ಬೋಧಿಸುವುದನ್ನು ಕೇಳಿಸಿಕೊಂಡಿದ್ದರೂ, ಅವರು ಈ ವಾಕ್ಯಕ್ಕೆ ಭಯಪಟ್ಟು ನಡುಗುವವರಾಗಿ ಕಾಣಿಸುತ್ತಿಲ್ಲವೆಂದು ಹೇಳಲು ನಾನು ವಿಷಾದಿಸುತ್ತೇನೆ. ಅನೇಕ ಕ್ರೈಸ್ತರ ಸ್ಥಿತಿ ಇದಾಗಿದೆ: ಅವರಿಗೆ ದೇವರ ವಾಕ್ಯದ ಅರಿವಿದೆ. ಆದರೆ ಅವರು ಅದನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಕ್ರಿಸ್ತನು ನಮ್ಮನ್ನು ಪಾಪದಿಂದ ಬಿಡುಗಡೆಗೊಳಿಸಲು ಶಿಲುಬೆಯ ಮೇಲೆ ಎಷ್ಟು ದೊಡ್ಡ ಬೆಲೆ ತೆತ್ತನೆಂದು ನಿಮಗೆ ತಿಳಿದಿದೆ. ಆದಾಗ್ಯೂ ನೀವು ಪಾಪವನ್ನು ಹೇಗೆ ಹಗುರವಾಗಿ ಪರಿಗಣಿಸುತ್ತೀರಿ? ನಾನು ನನ್ನ ಮನಸ್ಸಿನಲ್ಲಿ ಹಾಡಿಕೊಳ್ಳುವ ಒಂದು ಹಾಡು ಹೀಗಿದೆ:
ಪ್ರತೀಬಾರಿ ನಾನು ಶೋಧನೆಗೆ ಒಳಗಾದಾಗ, ಕರ್ತನೇ, ಇದನ್ನು ನೋಡುವಂತೆ ನನಗೆ ಸಹಾಯ ಮಾಡು,
ನನ್ನ ದೇವರು ಏಕಾಂಗಿಯಾಗಿ ಕೈಚಾಚಿ ಗಾಯಗೊಂಡು,
ತಾನೇ ಸೃಷ್ಟಿಸಿದ ಭೂಮಿಯ ಮೇಲೆ ರಕ್ತ ಸುರಿಸಿದ್ದಕ್ಕೆ
ನನ್ನ ಪಾಪವೇ ಕಾರಣವಾಗಿತ್ತೆಂದು ನನ್ನ ಮನಸ್ಸಿಗೆ ನಾಟುವಂತೆ ಮಾಡು,
ಅಲ್ಲಿ ನನ್ನ ಪಾಪದ ಹೊರತಾಗಿ ಇನ್ಯಾವ ಪಾಪವೂ ನನಗೆ ಕಾಣಿಸದಿರಲಿ;
ಆ ನನ್ನ ಪಾಪದ ಹೊರೆಯು ಭೂಮ್ಯಾಕಾಶವನ್ನು ಎತ್ತಿ ಹಿಡಿಯುವಂತ ಆತನಿಗೆ
ಹೊರಲು ಅತ್ಯಂತ ಕಠಿಣವಾದ ಹೊರೆಯಾಗಿತ್ತು.
ಹೇಗೆ ಸಕಲ ಸೃಷ್ಟಿಯ ಹೊರೆಯನ್ನು ಹೊತ್ತುಕೊಳ್ಳುವ ನನ್ನ ಕರ್ತನು ನನ್ನ ಪಾಪದ ಭಾರವನ್ನು ಹೊರಲಾರದೆ ಬಾಧೆಪಟ್ಟನು ಎಂಬುದಾಗಿ ನಾನು ನೆನಪಿಸಿಕೊಳ್ಳುವ ಸಲುವಾಗಿ ನಾನು ಈ ಹಾಡನ್ನು ಅನೇಕ ಬಾರಿ ಹಾಡಿಕೊಳ್ಳುತ್ತೇನೆ. ಕಲ್ವಾರಿ ಗುಡ್ಡದ ಮೇಲೆ ನನ್ನ ಪಾಪವು ಆತನನ್ನು ಜಜ್ಜಿತು. ಪಾಪದ ಬಗ್ಗೆ ನನ್ನಲ್ಲಿ ಅಪಾರ ಹಗೆತನ ಉಂಟುಮಾಡಲು ಈ ಅರಿವು ನನಗೆ ಸಹಾಯಮಾಡಿತು ಮತ್ತು ಅದು ದೇವರ ವಾಕ್ಯದ ಬಗ್ಗೆ ನನ್ನಲ್ಲಿ ಭಯಭಕ್ತಿಯನ್ನು ಹುಟ್ಟಿಸಿತು. ಅದಲ್ಲದೆ, ಕ್ರೈಸ್ತರಿಗೆ ಇದರ ಬಗ್ಗೆ ತಿಳುವಳಿಕೆ ನೀಡಿ, ಕಣ್ಣುಗಳ ವ್ಯಾಮೋಹದಂತ ಪಾಪಗಳು AIDSಗಿಂತ ಅಥವಾ ಕ್ಯಾನ್ಸರ್‌ಗಿಂತ ದೊಡ್ಡ ರೋಗಗಳೆಂಬ ತಿಳುವಳಿಕೆ ಅವರಲ್ಲಿ ಹುಟ್ಟಿಸಬೇಕೆಂಬ ಭಾರವನ್ನು ನನಗೆ ಕೊಟ್ಟಿದೆ.
ನೀವು ಈ ವಿಷಯದ ತಿಳುವಳಿಕೆಯನ್ನು ಪಡೆದ ದಿನದಿಂದ ಇಂತಹ ಪಾಪಗಳನ್ನು ತೀವ್ರವಾಗಿ ವಿರೋಧಿಸಿ ಹೋರಾಡುತ್ತೀರಿ. ನೀವು AIDS ವೈರಸ್‌ನಿಂದ ಸೋಂಕಿತ ಸೂಜಿಗಳನ್ನು ಸುಮ್ಮಸುಮ್ಮನೆ ಬಳಸುವುದಿಲ್ಲ. ನೀವು ಇದರ ಬಗ್ಗೆ ಇಷ್ಟು ಎಚ್ಚರಿಕೆ ವಹಿಸುವಾಗ, AIDSಗಿಂತ ಬಹಳ ಹೆಚ್ಚು ಕೆಟ್ಟದಾದ ಒಂದು ವಿಷಯದ ಬಗ್ಗೆ ಏಕೆ ನಿರ್ಲಕ್ಷ್ಯದಿಂದ ನಡೆಯುತ್ತೀರಿ? ಏಕೆಂದು ನಾನು ತಿಳಿಸುತ್ತೇನೆ: ಏಕೆಂದರೆ ಪಾಪವು AIDS ಅಥವಾ ಕ್ಯಾನ್ಸರ್‌ಗಿಂತ ಹೆಚ್ಚು ಕೆಟ್ಟದ್ದೆಂದು ನೀವು ನಂಬುವುದಿಲ್ಲ. ನೀವು ದೇವರ ವಾಕ್ಯಕ್ಕೆ ನಡುಗುವುದಿಲ್ಲ. ಪಾಪವು ಅತ್ಯಂತ ಅಪಾಯಕರವೆಂಬ ತಿಳುವಳಿಕೆಯನ್ನು ನಾನು ಹೊಂದಿ ಅದನ್ನು ನಂಬಿದ್ದೇನೆ. ಮತ್ತು ಈ ಕಾರಣಕ್ಕಾಗಿ ನಾನು ಕೋಪ, ಸ್ತ್ರೀ ವ್ಯಾಮೋಹ ಮತ್ತು ವಿವಾಹ ವಿಚ್ಛೇದನ ಈ ಪಾಪಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸುತ್ತೇನೆ. ನಾವು ಪರಲೋಕ ರಾಜ್ಯವನ್ನು ಪ್ರವೇಶಿಸುವುದಕ್ಕೆ ನಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಯನ್ನು ಮೀರಬೇಕು.
ಈ ವಿಷಯವನ್ನು ಬಹಳ ಕಡಿಮೆ ಕ್ರೈಸ್ತರು ಗಂಭೀರವಾಗಿ ಪರಿಗಣಿಸುತ್ತಾರೆ. ಮತ್ತು ಬಹಳ ಕಡಿಮೆ ಬೋಧಕರು ಇದನ್ನು ಗಂಭೀರವಾಗಿ ಬೋಧಿಸುತ್ತಾರೆ ಎಂಬುದಾಗಿ ನಾನು ಕಂಡುಕೊಂಡಿದ್ದೇನೆ. ಪರ್ವತ ಪ್ರಸಂಗವು ಸೂಚಿಸುವ ಗುಣಮಟ್ಟವು ನಮ್ಮಲ್ಲಿ ಇರಬೇಕಾದ ಅತ್ಯಾವಶ್ಯಕ ಅರ್ಹತೆಯಾಗಿದೆ. ಯೇಸುವು ತಿಳಿಸಿದಂತೆ, "ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಹೆಚ್ಚಿನದಾಗದಿದ್ದರೆ ನೀವು ಪರಲೋಕ ರಾಜ್ಯದಲ್ಲಿ ಸೇರಲಾರಿರಿ"(ಮತ್ತಾಯನು 5:20).
ಈ ಹೇಳಿಕೆಯನ್ನು ನಾನು ಪೂರ್ಣಹೃದಯದಿಂದ ನಂಬುತ್ತೇನೆ. ಕ್ರೈಸ್ತರು ದಶಾಜ್ಞೆಗಳ ಮಟ್ಟಕ್ಕಿಂತ ಬಹಳ ಉನ್ನತವಾದ ನೀತಿವಂತಿಕೆಯ ಗುಣಮಟ್ಟವನ್ನು ಪ್ರದರ್ಶಿಸಬೇಕೆಂದು ಕರ್ತನು ನಿರೀಕ್ಷಿಸುತ್ತಾನೆ. ವಿಗ್ರಹಾರಾಧನೆ ಎಂದರೆ ಮರ ಅಥವಾ ಕಲ್ಲಿನಿಂದ ಕೆತ್ತಲ್ಪಟ್ಟ ವಿಗ್ರಹಗಳಿಗೆ ತಲೆಬಾಗುವುದು ಅಲ್ಲ. ಅದು ನನ್ನ ಹೃದಯದಲ್ಲಿ ದೇವರ ಹೊರತಾಗಿ ಮತ್ತೊಂದಕ್ಕೆ ಸ್ಥಾನವನ್ನು ನೀಡುವುದಾಗಿದೆ. ಸಬ್ಬತ್ ಆಚರಣೆ ಕೇವಲ ಸಬ್ಬತ್ ದಿನದಲ್ಲಿ ಯಾವ ಕೆಲಸವನ್ನೂ ಮಾಡದೆ ಇರುವುದು ಅಲ್ಲ; ಅದು ಮನಸ್ಸಿನೊಳಗೆ ವಿಶ್ರಾಂತಿ ಅಥವಾ ಸಮಾಧಾನವನ್ನು ಹೊಂದಿರುವುದಾಗಿದೆ. ವ್ಯಭಿಚಾರವೆಂದರೆ ಕೇವಲ ದೈಹಿಕ ವ್ಯಭಿಚಾರಕ್ಕೆ ಇಳಿಯುವುದು ಅಲ್ಲ; ಕಣ್ಣಿನ ವ್ಯಾಮೋಹವೂ ಅದೇ ಪಾಪಕ್ಕೆ ಸಮನಾಗಿದೆ. ಕೊಲೆ ಎಂದರೆ ಕೇವಲ ಒಬ್ಬನನ್ನು ಕೊಲ್ಲುವುದು ಅಲ್ಲ; ಕೋಪವೂ ಸಹ ಕೊಲೆಯಾಗಿದೆ. ಇದೇ ರೀತಿ ಎಲ್ಲಾ ಆಜ್ಞೆಗಳನ್ನು ಪರಿಗಣಿಸಬೇಕು, ನಾವು ಇದರ ಬಗ್ಗೆ ಮುಂದಿನ ಭಾಗದಲ್ಲಿ ಮತ್ತಷ್ಟು ತಿಳಿದುಕೊಳ್ಳೋಣ.
ದೇವರು ತನ್ನ ಸಭೆಯನ್ನು ಕಟ್ಟುವುದಕ್ಕೆ ನಮ್ಮನ್ನು ಬಳಸಿಕೊಳ್ಳುವ ಪ್ರಯುಕ್ತ ನಾವು ದೇವರ ವಾಕ್ಯವನ್ನು ಭಯಭೀತಿಯಿಂದ ಸ್ವೀಕರಿಸುವುದನ್ನು ಕಲಿಯೋಣ. ದೇವರು ತನ್ನ ಮನೆಯನ್ನು ಕಟ್ಟಲಿಕ್ಕಾಗಿ ಆರಿಸಿಕೊಳ್ಳುವ ವ್ಯಕ್ತಿ ಎಂಥವನೆಂದು ನಾವು ಯೆಶಾಯನು 66: 1-2ರಲ್ಲಿ ನೋಡಿದ್ದೇವೆ. ದೇವರು ನಮಗೆ ಸಹಾಯ ಮಾಡಲಿ.