ಕ್ರೈಸ್ತಸಭೆಯಲ್ಲಿ ಸಭಾಹಿರಿಯರ ಶಿಸ್ತುಪಡಿಸುವಿಕೆ

ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ನಾಯಕರಿಗೆ
Article Body: 

ಮೊದಲನೆಯ ಶತಮಾನದ ಕೊನೆಯ ವರ್ಷಗಳಲ್ಲಿ, ಎಫೆಸದ ಸಭೆಯ ಅನೇಕ ವಿಶ್ವಾಸಿಗಳು ಅಲ್ಲಿನ ಪ್ರಮುಖ ಸಭಾಹಿರಿಯನ ಸೇವೆಯ ಅತ್ಯಾಸಕ್ತಿ ಹಾಗೂ ಪರಿಶ್ರಮಕ್ಕಾಗಿ ಆತನನ್ನು ವಿವೇಚನೆಯಿಲ್ಲದೆ ಬಹಳ ಮೆಚ್ಚಿಕೊಂಡಿರಬಹುದು. ಆ ಸಭಾಹಿರಿಯನೂ ಸಹ ಕರ್ತನಿಗಾಗಿ ತನ್ನ ಪರಿಶ್ರಮದ ಬಗ್ಗೆ ಬಹಳ ಹೆಚ್ಚಳಪಟ್ಟಿರಬಹುದು. ಆದಾಗ್ಯೂ ಆ ಸಭಾಹಿರಿಯನ ಬಗ್ಗೆ ಕರ್ತರು ಸಂಪೂರ್ಣ ವಿಭಿನ್ನವಾದ ಅಭಿಪ್ರಾಯವನ್ನು ಹೊಂದಿದ್ದ ವಿಷಯ ಆ ವಿಶ್ವಾಸಿಗಳಿಗೆ (ಮತ್ತು ಆ ಸಭಾಹಿರಿಯನಿಗೂ ಸಹ) ತಿಳಿದಿರಲಿಲ್ಲ. ಕರ್ತನ ದೃಷ್ಟಿಯಲ್ಲಿ ಆ ಹಿರಿಯನು ಎಷ್ಟು ಕೆಳಗೆ ಜಾರಿದ್ದನು ಎಂದರೆ, ಆ ಸಭೆಯು ಕರ್ತನ ಪ್ರಸನ್ನತೆಯನ್ನು ಕಳೆದುಕೊಳ್ಳುವ ಹಂತವನ್ನು ತಲುಪಿತ್ತು. ಕರ್ತರು ಆತನಿಗೆ ಹೇಳಿದ ಮಾತು, "ನಾನು ನಿನ್ನ ಕೃತ್ಯಗಳನ್ನೂ, ಪ್ರಯಾಸವನ್ನೂ, ತಾಳ್ಮೆಯನ್ನೂ ಬಲ್ಲೆನು; ನೀನು ನನ್ನ ಹೆಸರಿನ ನಿಮಿತ್ತ ತಾಳ್ಮೆಯಿಂದ, ಬೇಸರಗೊಳ್ಳದೆ ದುಡಿದಿದ್ದಿ. ಆದರೆ ಮೊದಲು ನಿನ್ನಲ್ಲಿದ್ದ ಪ್ರೀತಿಯನ್ನು ನೀನು ಬಿಟುಬಿಟ್ಟಿದ್ದೀಯೆಂದು ನಾನು ನಿನ್ನ ಮೇಲೆ ತಪ್ಪು ಹೊರಿಸಬೇಕಾಗಿದೆ. ಆದ್ದರಿಂದ ನೀನು ಎಲ್ಲಿಂದ ಬಿದ್ದಿದ್ದೀಯೆಂದು ನೆನಪಿಗೆ ತಂದುಕೊಂಡು ನನ್ನ ಕಡೆಗೆ ತಿರುಗಿಕೋ, ಮತ್ತು ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು. ನೀನು ನನ್ನ ಕಡೆಗೆ ತಿರುಗಿಕೊಳ್ಳದೇ ಹೋದರೆ ನಾನು ಬಂದು ನಿನ್ನ ದೀಪಸ್ತಂಭವನ್ನು ತೆಗೆದುಹಾಕುವೆನು (ಪ್ರಕಟನೆ 2:1-5).

ಆ ಸಭಾಹಿರಿಯನು ತನ್ನ ಕೃತ್ಯಗಳು ದೇವರ ಆಶೀರ್ವಾದ ಪಡೆದಿವೆಯೆಂದು ತೀರಾ ಉಬ್ಬಿಕೊಂಡಿದ್ದನು, ಮತ್ತು ಆತನು ದೇವರ ಕೃಪೆಯನ್ನು ಕಳಕೊಂಡಿದ್ದನ್ನು ಗಮನಿಸಲೇ ಇಲ್ಲ. ಆತನು ಸಭಾಸದಸ್ಯರ ಮೆಚ್ಚುಗೆ ಗಳಿಸುವುದನ್ನು ತನ್ನ ಗುರಿ ಮಾಡಿಕೊಂಡಿದ್ದನು ಮತ್ತು ತನ್ನಲ್ಲಿದ್ದ ಅಹಂಕಾರವನ್ನು ಗುರುತಿಸಲೇ ಇಲ್ಲ. ಆತನು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ, ಆ ಸಭೆಯು ದೇವರ ಪ್ರಸನ್ನತೆಯನ್ನು ಕಳಕೊಳ್ಳುವುದೆಂದು ("ನಾನು ನಿನ್ನ ದೀಪಸ್ತಂಭವನ್ನು ತೆಗೆದುಹಾಕುವೆನು") ಕರ್ತನು ಅಪೊಸ್ತಲ ಯೋಹಾನನ ಮೂಲಕ ಆತನನ್ನು ಎಚ್ಚರಿಸಿದನು. ಆತನು ಹಾಗೆ ಮಾಡದೇಹೋದರೆ ಏನಾಗಲಿತ್ತು? ಆಗ ಕರ್ತನ ಪ್ರಸನ್ನತೆಯು ಅವರ ನಡುವಿನಿಂದ ಹೊರಟುಹೋಗುತ್ತಿತ್ತು. ಅಂತಹ ಸಂದರ್ಭದಲ್ಲಿ ಆ ಸಭೆಯ ಜಯಶಾಲಿಗಳು (ಪ್ರಕಟನೆ 2:7) ಅಲ್ಲಿಂದ ಹೊರಬಂದು ಪ್ರತ್ಯೇಕ ಸಭೆಯಾಗಿ ಸೇರಿಬರುತ್ತಿದ್ದರು.

ಒಬ್ಬ ಸಭಾಹಿರಿಯನು ದೀನತೆಯಿಂದ ತನ್ನ ಪಾಪವನ್ನು ಅರಿಕೆ ಮಾಡಲು ಸಿದ್ಧನಿಲ್ಲವಾದರೆ, ಆಗ "1ತಿಮೊಥೆಯನಿಗೆ 5:19-21"ರ ಮಾರ್ಗದರ್ಶನದ ಪ್ರಕಾರ ಕ್ರಮ ಕೈಕೊಳ್ಳಬೇಕು.

"ಸಭಾಹಿರಿಯನ ಮೇಲೆ ಯಾವುದೋ ದೂರು ಬಂದಾಗ, ಇಬ್ಬರು ಅಥವಾ ಮೂವರು ಸಾಕ್ಷಿಗಳು ಇಲ್ಲವಾದರೆ, ಅದಕ್ಕೆ ಕಿವಿಗೊಡಬೇಡ. ಆ ಹಿರಿಯನ ಪಾಪದ ಕುರಿತಾದ ದೂರು ನಿಜವಾಗಿದ್ದರೆ, ಅವನನ್ನು ಇಡೀ ಸಭೆಯ ಮುಂದೆ ಗದರಿಸು; ಈ ರೀತಿಯಾಗಿ ಅವನ ಮಾದರಿಯನ್ನು ಅನುಸರಿಸಲು ಇತರರು ಹಿಂಜರಿಯಲಿ. ಆ ಸಭಾಹಿರಿಯನು ನಿನ್ನ ಒಳ್ಳೆಯ ಸ್ನೇಹಿತನಾಗಿದ್ದರೂ, ತಂದೆಯಾದ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತ ಮತ್ತು ಪವಿತ್ರ ದೇವದೂತರ ಸನ್ನಿಧಿಯಲ್ಲಿ ನಿನಗೆ ಇದನ್ನು ಗಂಭೀರವಾಗಿ ಆಜ್ಞಾಪಿಸುತ್ತಿದ್ದೇನೆ. ಎಲ್ಲರೊಂದಿಗೆ ಯಾವುದೇ ಪಕ್ಷಪಾತವಿಲ್ಲದೆ ನಡೆದುಕೋ" (Living Bible ಅನುವಾದ).

ಒಬ್ಬ ಸಭಾಹಿರಿಯನನ್ನು ತಿದ್ದುವ ಅಥವಾ ಶಿಸ್ತುಪಡಿಸುವ ಸಂದರ್ಭದಲ್ಲಿ, ಈ ವಿಷಯವನ್ನು ಇಡೀ ಸಭೆಗೆ ಪ್ರಕಟಪಡಿಸಬೇಕೆಂದು ದೇವರು ಇಚ್ಛಿಸುತ್ತಾರೆ. ಇದಕ್ಕೆ ಕಾರಣ, ಆ ಸಭಾಹಿರಿಯನನ್ನು ಏಕೆ ಶಿಸ್ತುಪಡಿಸಲಾಯಿತು ಎಂಬುದು ಸಭೆಯ ಎಲ್ಲಾ ವಿಶ್ವಾಸಿಗಳಿಗೆ ಸ್ಪಷ್ಟವಾಗಬೇಕು. ಆ ಸಭಾಹಿರಿಯನ ವಿರುದ್ಧ ಯಾವುದೋ ಪಕ್ಷಪಾತದಿಂದ ಅಥವಾ ಯಾವುದೋ ವೈಯಕ್ತಿಕ ತಪ್ಪು ಭಾವನೆಯಿಂದ ಹೀಗೆ ಮಾಡಲಾಯಿತೆಂದು ಯಾರೂ ಅಂದುಕೊಳ್ಳಲು ಅವಕಾಶ ನೀಡಬಾರದು.

ಹಾಗಾಗಿ ಎಫೆಸದ ಸಭೆಯ ಹಿರಿಯನಿಗೆ ಮತ್ತು ಹಿಂಜರಿದಿದ್ದ ಇನ್ನಿತರ ನಾಲ್ಕು ಸಭಾಹಿರಿಯರಿಗೆ ಅವರ ತಪ್ಪುಗಳನ್ನು ತೋರಿಸುವಂತೆ ಕರ್ತರು ಅಪೊಸ್ತಲ ಯೋಹಾನನಿಗೆ ಹೇಳಿದಾಗ (ಪ್ರಕಟನೆ 2,3ನೇ ಅಧ್ಯಾಯ), ಆ ಪತ್ರಿಕೆಗಳ ಪ್ರತಿಗಳನ್ನು ಆ ಪ್ರದೇಶದ ಎಲ್ಲಾ ಏಳು ಸಭೆಗಳಿಗೆ ಕಳುಹಿಸಿ, ಆ ಸಭೆಗಳಲ್ಲಿ ಅದನ್ನು ಬಹಿರಂಗವಾಗಿ ಓದಿಸುವಂತೆ ಕರ್ತರು ಆತನಿಗೆ ತಿಳಿಸಿದರು (ಪ್ರಕಟನೆ 1:11). ಈ ರೀತಿಯ ವೈಫಲ್ಯಗಳನ್ನು ಬಹಿರಂಗಪಡಿಸುವುದು ಆ ಹಿರಿಯರಿಗೆ ಖಂಡಿತವಾಗಿ ಮುಜುಗರದ ವಿಷಯವಾಗಿತ್ತು. "ನೀನು ಕರ್ತರ ದೃಷ್ಟಿಯಲ್ಲಿ ದುರವಸ್ಥೆಗೆ ಬಿದ್ದಿರುವವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬಟ್ಟೆಯಿಲ್ಲದವನು"(ಪ್ರಕಟನೆ 3:17), ಎಂಬ ಮಾತನ್ನು ಲವೊದಿಕೀಯದ ಹಿರಿಯನಿಗೆ (ಮತ್ತು ಅವನ ಕುಟುಂಬದವರಿಗೆ) ಎಲ್ಲಾ ಸಭೆಗಳಲ್ಲಿ ಬಹಿರಂಗವಾಗಿ ಓದಿದ್ದನ್ನು ಕೇಳಿಸಿಕೊಂಡು ಅವರಿಗೆ ಎಷ್ಟು ಮುಜುಗರವಾಗಿರಬೇಕು ಎಂಬುದನ್ನು ಕಲ್ಪಿಸಿಕೊಳ್ಳಿರಿ.

ದೇವರು ಸಭಾಹಿರಿಯರ ತಪ್ಪುಗಳನ್ನು ಎಲ್ಲರ ಮುಂದೆ ಬಹಿರಂಗ ಪಡಿಸುವುದು, ಅವರೊಂದಿಗೆ ಅವರ ಸಭಾಸದಸ್ಯರು ಬೀಳದಿರಲಿ ಎಂಬ ಉದ್ದೇಶದಿಂದ. ಕರ್ತರು ಕ್ರೈಸ್ತಸಭೆಯಲ್ಲಿ ಒಬ್ಬನನ್ನು ಸಭಾಹಿರಿಯನನ್ನಾಗಿ ನೇಮಿಸುವುದು ಆ ವ್ಯಕ್ತಿಗೆ ಒಂದು ದೊಡ್ಡ ಗೌರವವಾಗಿದೆ. ಆದರೆ ಆ ಹಿರಿಯನು ಉಬ್ಬಿಕೊಂಡರೆ ಮತ್ತು ದೀನತೆಯಿಲ್ಲದೆ ನಡೆದರೆ, ಆಗ ಕರ್ತರು ಆತನ ನಿಜಸ್ಥಿತಿಯನ್ನು ಬಹಿರಂಗಪಡಿಸಿ, ಎಲ್ಲರ ಮುಂದೆ ಆತನನ್ನು ತಗ್ಗಿಸುತ್ತಾರೆ. "ಯಾವನಿಗೆ ಬಹಳವಾಗಿ ಕೊಡಲ್ಪಟ್ಟಿದೆಯೋ, ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವದು," (ಲೂಕ. 12:48).

ಯೇಸುವು ಶಿಲುಬೆಗೆ ಹೋಗುವುದಕ್ಕೆ ಪೇತ್ರನು ತಡೆಯೊಡ್ಡಿದಾಗ, ಕರ್ತರು ಎಲ್ಲರ ಮುಂದೆ ಆತನನ್ನು "ಸೈತಾನನು" ಎಂದು ಗದರಿಸಿದರು (ಮತ್ತಾ. 16:23). ಪೇತ್ರನನ್ನು ಪಕ್ಕಕ್ಕೆ ಕರೆದು, ಖಾಸಗಿಯಾಗಿ, ಮೆದುವಾಗಿ ಆತನನ್ನು ತಿದ್ದುವುದು "ಆತ್ಮಿಕತೆಯ" ಲಕ್ಷಣವೆಂದು ನಮ್ಮಲ್ಲಿ ಹೆಚ್ಚಿನವರ ಭಾವನೆ ಆಗಿರಬಹುದು. ಆದರೆ ದೇವರ ಮಾರ್ಗಗಳು ನಮ್ಮ ಮಾರ್ಗಗಳಲ್ಲ. ಯೇಸುವು ಪೇತ್ರನನ್ನು ಎಲ್ಲರೂ ಕೇಳಿಸಿಕೊಳ್ಳುವಂತೆ ಸಾರ್ವಜನಿಕವಾಗಿ ಗದರಿಸಿದರು. ಅಷ್ಟೇ ಅಲ್ಲದೆ, ಯೇಸುವಿನ ಎಲ್ಲಾ ಗದರಿಕೆಗಳಲ್ಲಿ ಇದು ಅತ್ಯಂತ ಬಿರುಸಾದ ಗದರಿಕೆಯಾಗಿತ್ತು. ಅದೇ ರೀತಿ ದೇವರ ಆಲಯದಲ್ಲಿ ವ್ಯಾಪಾರಿಗಳು ದುರಾಸೆಯಿಂದ ಬಡಜನರಿಂದ ಹಣವನ್ನು ಸುಲಿಗೆ ಮಾಡುವುದನ್ನು ನೋಡಿ, ಆ ವ್ಯಾಪಾರಿಗಳನ್ನು ಯೇಸುವು ಬಹಿರಂಗವಾಗಿ ಹೊಡೆದಟ್ಟುವುದನ್ನು ನಾವು ಕಾಣುತ್ತೇವೆ (ಯೋಹಾ. 2:15,16). ನಮ್ಮಲ್ಲಿ ಹೆಚ್ಚಿನವರು ಇಷ್ಟು ಬಿರುಸಾದ ಕ್ರಮವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಆದರೆ "ದೇವರ ಆಲಯದ ಅಭಿಮಾನವು ಯೇಸುವನ್ನು ಬೆಂಕಿಯಂತೆ ದಹಿಸಿತು" (ಯೋಹಾ. 2:17) - ಇಂದಿನ ಹೆಚ್ಚಿನ ವಿಶ್ವಾಸಿಗಳಿಗೆ ಇಂತಹ ರೀತಿಯ ಪರಿಚಯವೇ ಇಲ್ಲ, ಏಕೆಂದರೆ ಅವರಲ್ಲಿ ದೇವರ ಬಗ್ಗೆ ಇಂತಹ ಅಭಿಮಾನ ಇರುವುದಿಲ್ಲ.

ಇನ್ನೊಂದು ಸಂದರ್ಭದಲ್ಲಿ, ಪೇತ್ರನು ಯಾವುದೋ ವಿಷಯದಲ್ಲಿ ಲೌಕಿಕತೆಯ ಮಾರ್ಗದಲ್ಲಿ ನಡೆದಾಗ, ಪೌಲನು ಯೇಸುವಿನ ಮಾದರಿಯನ್ನು ಅನುಸರಿಸಿದನು ಮತ್ತು ಪೇತ್ರನನ್ನು ಇತರ ವಿಶ್ವಾಸಿಗಳ ಮುಂದೆ ಬಹಿರಂಗವಾಗಿ ಗದರಿಸಿದನು. ಆ ಮೇಲೆ, ಪೌಲನು ಗಲಾತ್ಯ ಪ್ರದೇಶದ ವಿಶ್ವಾಸಿಗಳಿಗೆ ಒಂದು ಪತ್ರಿಕೆಯನ್ನು ಕಳುಹಿಸಿ, ಅವರೆಲ್ಲರಿಗೂ ಪೌಲನು ಈ ವಿಫಲತೆಯ ಬಗ್ಗೆ ತಿಳಿಸಿದನು (ಗಲಾ. 2:11-13). ಪೇತ್ರನಂತ ದೈವಿಕ ಮನುಷ್ಯನ ಬಗ್ಗೆ ಈ ರೀತಿಯಾಗಿ ಬರೆದದ್ದು - ವಿಶೇಷವಾಗಿ ಕೂಸುಗಳಂತಿದ್ದ ಗಲಾತ್ಯದ ವಿಶ್ವಾಸಿಗಳಿಗೆ ಇದನ್ನು ತಿಳಿಸಿದ್ದು - ತಪ್ಪೆಂದು ನಮ್ಮಲ್ಲಿ ಹೆಚ್ಚಿನವರು ಅಂದುಕೊಳ್ಳಬಹುದು. ಆದರೆ ದೇವರ ಮಾರ್ಗಗಳ ಬಗ್ಗೆ ತಿಳುವಳಿಕೆ ಇಲ್ಲದೆ ನಾವು ಹೀಗೆ ಯೋಚಿಸುತ್ತೇವೆ. ಪೌಲನು ಪವಿತ್ರಾತ್ಮನ ಪ್ರೇರಣೆಯಿಂದ ಈ ರೀತಿಯಾಗಿ ಬರೆದನು - ಮತ್ತು ದೇವರ ವಾಕ್ಯದಲ್ಲಿ ಇದು ಸೇರಿಸಲ್ಪಟ್ಟಿರುವುದಕ್ಕೆ ಕಾರಣ, ದೇವರು ಕೈಕೊಳ್ಳುವ ಮಾರ್ಗಗಳು ನಮ್ಮ ಮಾರ್ಗಗಳಿಂದ ಬಹಳ ವಿಭಿನ್ನವಾದವು ಎಂಬುದನ್ನು ನಮಗೆ ಕಲಿಸಿಕೊಡುವುದಕ್ಕಾಗಿ ಆಗಿದೆ - ಮತ್ತು ನಾವು ನಮ್ಮನ್ನು ತಗ್ಗಿಸಿಕೊಂಡು ಈ ವಿಷಯವನ್ನು ಒಪ್ಪಿಕೊಳ್ಳುವುದು ಒಳ್ಳೆಯದು.

ನಮ್ಮ ಪ್ರಾರ್ಥನೆಯಲ್ಲಿ ಮೊದಲನೆಯದಾಗಿ, "ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ," ಎಂದು ಬೇಡಿಕೊಳ್ಳುವುದನ್ನು ಕರ್ತರು ನಮಗೆ ಕಲಿಸಿದ್ದಾರೆ. ಕ್ರೈಸ್ತ ಬೋಧಕರು ತಮ್ಮ ಸೇವೆಗಾಗಿ ಜನರಿಂದ ಹಣವನ್ನು ಕೇಳುವಾಗಲೆಲ್ಲಾ ದೇವರ ನಾಮವು ಅಗೌರವಕ್ಕೆ ಒಳಗಾಗುತ್ತದೆ. ಇಂತಹ ಬೇಡಿಕೆಗಳು ನಮ್ಮ ಕರ್ತನನ್ನು ಹಣದಾಶೆಯುಳ್ಳವನು ಮತ್ತು ಹಣವನ್ನು ದೋಚಿಕೊಳ್ಳುವವನು ಎಂಬಂತೆ ಚಿತ್ರಿಸುತ್ತದೆ.

ಕ್ರೈಸ್ತ ನಾಯಕರು ಇತರ ವಿಶ್ವಾಸಿಗಳ ಮೇಲೆ ದೊರೆತನ ಮಾಡಿ, ಅವರು ತಮ್ಮನ್ನು ಆಶ್ರಯಿಸುವಂತೆ ಮಾಡುವಾಗಲೂ ದೇವರ ನಾಮಕ್ಕೆ ಅವಮಾನವಾಗುತ್ತದೆ. ಯೇಸುವು ಒಬ್ಬ ಸೇವಕನಾಗಿದ್ದನು ಮತ್ತು ಆತನು ತನ್ನ ಶಿಷ್ಯರು ಇತರರ ಸೇವಕರು ಆಗಿರಬೇಕೇ ಹೊರತು ಜನರ "ಪರಿಪಾಲಕರು" ಅಥವಾ "ಪೋಷಕರು" ಆಗಬಾರದು ಎಂದು ಅವರಿಗೆ ತೋರಿಸಿಕೊಟ್ಟನು (ಲೂಕ. 22:25,26). ನಾವು ಜನರ ’ಪೋಷಕರು’ ಎನಿಸಿಕೊಂಡಾಗ, ಅವರು ಕ್ರಿಸ್ತನನ್ನು ಆತುಕೊಳ್ಳುವುದರ ಬದಲಾಗಿ ನಮಗೆ ಅಂಟಿಕೊಳ್ಳುತ್ತಾರೆ. ಹೀಗೆ ನಾವು ಇತರರ ಪೋಷಕರಂತೆ ನಡೆದುಕೊಂಡರೆ, ಅದರಿಂದ ಅವರ ಆತ್ಮಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಮತ್ತು ಅವರು ಸ್ವತಃ ಬಲಗೊಂಡು ಮುಂದಿನ ಪೀಳಿಗೆಗೆ ನಾಯಕರು ಆಗುವುದನ್ನು ತಡೆಯುತ್ತದೆ.

ಸಭಾಹಿರಿಯರು ಮತ್ತು ಬೋಧಕರು ಕ್ರಿಸ್ತನ ಹೆಸರನ್ನು ಈ ರೀತಿಯಾಗಿ ಅವಮಾನಿಸಿದಾಗ, ಕರ್ತನಲ್ಲಿ ಅವರ ಮೇಲೆ ಅಧಿಕಾರ ಹೊಂದಿರುವವರು ಅವರನ್ನು ತಾಳ್ಮೆಯಿಂದ ಗದರಿಸಬೇಕು - ಮತ್ತು ಒಂದು ವೇಳೆ ಅವರು ಬದಲಾಗದಿದ್ದರೆ, ಅವರನ್ನು ಇತರರ ಮುಂದೆ ಸರಿಪಡಿಸಬೇಕು. ಈ ಸನ್ನಿವೇಶದಲ್ಲಿ ಅವರ ಮೇಲೆ ಅಧಿಕಾರವನ್ನು ಹೊಂದಿರುವವರು, ಯೇಸು ಹಾಗೂ ಪೌಲನಲ್ಲಿದ್ದ ದೇವರ ಆಲಯದ ಪರಿಶುದ್ಧತೆಗಾಗಿ ಅಭಿಮಾನವನ್ನು ತಮ್ಮ ನಡತೆಯಲ್ಲಿ ತೋರಿಸಬೇಕು.

ಒಬ್ಬ ಸಭಾಹಿರಿಯನನ್ನು ಶಿಸ್ತಿಗೆ ಒಳಪಡಿಸುವ ಅಧಿಕಾರವನ್ನು ಯಾರು ಹೊಂದಿದ್ದಾರೆ? ಇದಕ್ಕೆ ಉತ್ತರ ತುಂಬಾ ಸರಳವಾಗಿದೆ: ಸಭಾಹಿರಿಯನನ್ನು ನೇಮಿಸುವ ಅಧಿಕಾರ ಹೊಂದಿರುವವರಿಗೆ ಆತನನ್ನು ಶಿಸ್ತು ಪಡಿಸುವ ಅಧಿಕಾರವೂ ಇದೆ. ’ಅಪೋಸ್ತಲರ ಕೃತ್ಯಗಳು 14:23'ರಲ್ಲಿ ನಾವು ನೋಡುವಂತೆ, ಅಪೊಸ್ತಲರು ಸಭಾಹಿರಿಯರನ್ನು ನೇಮಿಸಿದರು. ಹಾಗಾಗಿ ಅವರು ಆ ಸಭಾಹಿರಿಯರನ್ನು ಶಿಸ್ತುಪಡಿಸುವ ಅಧಿಕಾರವನ್ನು ಸಹ ಹೊಂದಿದ್ದಾರೆ. ದೇವರು ನಿಮಗೆ ಈ ಅಧಿಕಾರವನ್ನು ನೀಡದ ಹೊರತು ನೀವು ಇಂತಹ ಕ್ರಮವನ್ನು ಕೈಕೊಳ್ಳಲು ಎಂದಿಗೂ ಪ್ರಯತ್ನಿಸಬಾರದು.

ಆದಾಗ್ಯೂ, ಅಪೊಸ್ತಲ ಯೋಹಾನನು ತನ್ನಿಂದ ತಿದ್ದುಪಡಿಯನ್ನು ಸ್ವೀಕರಿಸಲು ನಿರಾಕರಿಸಿದ ಒಬ್ಬ ಸಭಾಹಿರಿಯನ ಬಗ್ಗೆ ಉಲ್ಲೇಖಿಸುತ್ತಾನೆ: "ನಾನು ಸಭೆಗೆ ಕೆಲವು ಮಾತುಗಳನ್ನು ಬರೆದಾಗ, ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುವುದಿಲ್ಲ. ಆದಕಾರಣ ನಾನು ಬಂದರೆ ಅವನು ಮಾಡುವ ಕೃತ್ಯಗಳ ವಿಷಯದಲ್ಲಿ ಎಲ್ಲರಿಗೂ ನೆನಪುಕೊಡುವೆನು. ಅವನು ಹರಟೆ ಕೊಚ್ಚುವವನಾಗಿ ನಮ್ಮ ವಿಷಯದಲ್ಲಿ ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತಾನೆ. ಇವೂ ಸಾಲದೆ ತಾವು ಸಹೋದರರನ್ನು ಸೇರಿಸಬೇಕೆಂದು ಇರುವವರಿಗೆ ಅಡ್ಡಿಮಾಡಿ, ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಾನೆ"(3 ಯೋಹಾನನು 9,10). ದಿಯೊತ್ರೇಫನನ್ನು ಸಭಾಹಿರಿಯನಾಗಿ ನೇಮಿಸಿದವನು ಯೋಹಾನನೇ ಆಗಿರಬಹುದು - ಮತ್ತು ಸಭಾಹಿರಿಯನಾಗಿ ನೇಮಿಸಲ್ಪಡುವಾಗ ದಿಯೊತ್ರೇಫನು ಯೋಹಾನನ ಅಧಿಕಾರವನ್ನು ಸಂತೋಷವಾಗಿ ಒಪ್ಪಿಕೊಂಡಿರುತ್ತಾನೆ. ಆದರೆ ಮುಂದೆ ಅದೇ ಅಪೊಸ್ತಲನಿಂದ ಶಿಸ್ತುಪಡಿಸಿಕೊಳ್ಳಲು ಮತ್ತು ಗದರಿಸಿಕೊಳ್ಳಲು ಆತನು ಬಯಸಲಿಲ್ಲ. ಅಹಂಕಾರದ ನಿಮಿತ್ತ ದಿಯೊತ್ರೇಫನು ಸೇವಕನು ಎಂಬ ತನ್ನ ಆಸನವನ್ನು (ಒಬ್ಬ ಸಭಾಹಿರಿಯನ ನಿಜವಾದ ಸ್ಥಾನ) ಒಂದು ಸಿಂಹಾಸನವಾಗಿ ಪರಿವರ್ತಿಸಿ, ಒಬ್ಬ ರಾಜನಂತೆ ಅದರ ಮೇಲೆ ಕುಳಿತಿದ್ದನು!

ಮೊದಲನೆಯ ಶತಮಾನದಲ್ಲಿ ಸಭೆಗಳನ್ನು ನೆಡುವ ಕಾರ್ಯವು ವಿಸ್ತರಿಸುತ್ತಾ ಹೋದಾಗ, ಸಭಾಹಿರಿಯರನ್ನು ನೇಮಿಸಲಿಕ್ಕಾಗಿ ಪೌಲನು ಯಾವಾಗಲೂ ಸ್ವತಃ ತಾನೇ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆಗ ಆತನು ಹಿರಿಯರನ್ನು ನೇಮಿಸಲಿಕ್ಕಾಗಿ ತನ್ನ ಪರವಾಗಿ ನಂಬಿಗಸ್ತರಾದ ಪುರುಷರನ್ನು - ತಿಮೊಥೇಯನು ಮತ್ತು ತೀತನಂಥವರು - ಕಳುಹಿಸುತ್ತಿದ್ದನು (ತೀತ. 1:5ನ್ನು ನೋಡಿರಿ). ಇದು ಹೊಸ ಒಡಂಬಡಿಕೆಯ ಮಾದರಿಯಾಗಿದೆ.

ಇಂದು ಇಂತಹ ಅಪೊಸ್ತಲರ ಅಧಿಕಾರವು ಬಹುತೇಕ ಕಾಣೆಯಾಗಿದ್ದು, ಯೇಸು ಕ್ರಿಸ್ತನ ಸಭೆಯು ದೇವರಿಗಾಗಿ ಒಂದು ಆತ್ಮಿಕ ಶಕ್ತಿ-ಕೇಂದ್ರವಾಗಿ ಇರುವುದರ ಬದಲಾಗಿ, ಜೀವವಿಲ್ಲದ ಒಂದು ಧಾರ್ಮಿಕ ಸಂಘಟನೆಯಾಗಿದೆ. ಈ ಕಾರಣಕ್ಕಾಗಿ ವಿಶ್ವಾಸಿಗಳು ಪಾಪದ ವಿಷಯದಲ್ಲಿ ಎಚ್ಚರಿಕೆಯಿಂದ ನಡೆಯುತ್ತಿಲ್ಲ ಮತ್ತು ಲೌಕಿಕ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಇಂತಹ ರಾಜಿ ಮಾಡಿಕೊಳ್ಳುವಿಕೆಯ ವಿರುದ್ಧವಾದ ಎಲ್ಲಾ ಬೋಧನೆಯನ್ನು ಅವರು "ಕಠಿಣ ನಿಲುವು" ಅಥವಾ "ಮೊಂಡುತನದ ಸಂದೇಶ" ಎಂದು ಪರಿಗಣಿಸುವುದು ಸಾಮಾನ್ಯವಾಗಿದೆ. ಯೇಸುವಿನ ಶಿಷ್ಯರಲ್ಲಿ ಅನೇಕರು ಆತನ ಸಂದೇಶ "ಬಹು ಕಠಿಣ"ವೆಂದು ಅಂದುಕೊಂಡರು ಮತ್ತು ಗುಣಗುಟ್ಟುತ್ತಾ ಆತನಿಂದ ಹಿಂಜರಿದರು (ಯೋಹಾ. 6:60-66ನ್ನು ಓದಿಕೊಳ್ಳಿರಿ).

ಪೌಲನ ಜೀವಿತದ ಅಂತ್ಯದ ವೇಳೆಗೆ, ಆತನ ಸಹೋದ್ಯೋಗಿಗಳಲ್ಲಿ ಅನೇಕರು ಆತನಿಂದ ಹಿಂಜರಿದರು, ಏಕೆಂದರೆ ಅವರಿಗೆ ಪೌಲನ ಸಂದೇಶಗಳು ಹಾಗೂ ಆತನ ಗದರಿಕೆಗಳು "ಬಹಳ ಕಠಿಣ"ವಾಗಿದ್ದವು. ಆದರೆ ಕೆಲವು ನಂಬಿಗಸ್ತ ಶಿಷ್ಯರು ಪೌಲನ ಜೀವಿತದ ಕೊನೆಯ ವರೆಗೆ ಆತನೊಂದಿಗೆ ಮುಂದುವರಿದರು (2 ತಿಮೊಥೆಯನಿಗೆ 1:15,16 ನೋಡಿರಿ). ಅವರೊಂದಿಗೆ ಪೌಲನು ತನ್ನ ಓಟವನ್ನು ಯಶಸ್ವಿಯಾಗಿ ಕೊನೆಗೊಳಿಸಿದನು - ಮತ್ತು ಆತನ ಜೀವಿತಕ್ಕಾಗಿದ್ದ ದೇವರ ಸಂಕಲ್ಪವು ಸಂಪೂರ್ಣವಾಗಿ ನೆರವೇರಿತು (2 ತಿಮೊಥೆಯನಿಗೆ 4:7).

ಪವಿತ್ರಾತ್ಮನು ಹೀಗೆನ್ನುತ್ತಾನೆ, "ನಿಮ್ಮೊಳಗೆ ಭಿನ್ನಾಭಿಪ್ರಾಯಗಳು ಇರುವುದು ಅವಶ್ಯವೇ, ಏಕೆಂದರೆ ಅವುಗಳ ಮೂಲಕ ದೇವರ ದೃಷ್ಟಿಯಲ್ಲಿ ಯಾರು ಯೋಗ್ಯರು ಎಂಬುದು ಪ್ರಕಟವಾಗುತ್ತದೆ"(1 ಕೊರಿ. 11:19). ಸೃಷ್ಟಿಯ ಆದಿಯಲ್ಲಿ ದೇವರು ಮಾಡಿದಂತೆ, ಈ ದಿನವೂ ಇಂತಹ ವಿಭಜನೆಗಳ ಮೂಲಕವೇ ದೇವರು ತನ್ನ ಜನರ ನಡುವೆ ಬೆಳಕನ್ನೂ ಕತ್ತಲೆಯನ್ನೂ ಬೇರ್ಪಡಿಸುತ್ತಾರೆ (ಆದಿಕಾಂಡ 1:4). ಈ ರೀತಿಯಾಗಿ ಪೀಳಿಗೆಯಿಂದ ಪೀಳಿಗೆಗೆ ಕ್ರೈಸ್ತಸಭೆಯು ಕರ್ತನ ಹೆಸರಿನ ಮಹಿಮೆಗಾಗಿ - ನಂಬಿಗಸ್ತ ಪುರುಷರ ಮೂಲಕ - ಪರಿಶುದ್ಧ ಸಾಕ್ಷಿಯಾಗಿ ಸಂರಕ್ಷಿಸಲ್ಪಡುತ್ತದೆ.

ನೀವು ದೇವರ ಸಂಪೂರ್ಣ ಸಂಕಲ್ಪವನ್ನು ಪ್ರಬಲವಾಗಿ ಮತ್ತು ಶಕ್ತಿಯುತವಾಗಿ ಸಾರುವಾಗ, ಅದನ್ನು ಕೇಳಿಸಿಕೊಂಡ ಜನರು ಬೇಸರಗೊಂಡು, ನಿಮ್ಮ ಸಂದೇಶವು "ಬಹಳ ಕಠಿಣವಾದದ್ದು" ಎಂದು ಹೇಳಿ ನಿಮ್ಮನ್ನು ಬಿಟ್ಟುಹೊಗುವ ಸನ್ನಿವೇಶವನ್ನು ನೀವು ಎದುರಿಸುವಿರಿ - ಜನರು ಯೇಸುವನ್ನು ಮತ್ತು ಪೌಲನನ್ನು ಇದೇ ರೀತಿ ಬಿಟ್ಟು ಹಿಂಜರಿದರು. ಅದರೆ ಕೇವಲ ಕೆಲವು ನಂಬಿಗಸ್ತ ವಿಶ್ವಾಸಿಗಳು ದೇವರ ಸತ್ಯಾಂಶವನ್ನು ಒಪ್ಪಿಕೊಂಡು ನಿಮ್ಮೊಂದಿಗೆ ಮುಂದುವರಿಯುತ್ತಾರೆ - ಮತ್ತು ಅವರ ಮೂಲಕ ದೇವರ ನಿಜವಾದ ಸಭೆಯು ಕಟ್ಟಲ್ಪಡುತ್ತದೆ.

ಈ ದಿನ ದೇವರು ದೇವಭಕ್ತಿ ಹಾಗೂ ದೀನತೆಯುಳ್ಳ ನಾಯಕರನ್ನು ಹುಡುಕುತ್ತಿದ್ದಾರೆ; ಇವರು ಯಾವುದೇ ರೀತಿಯ ಪಾಪವನ್ನು ಮತ್ತು ಲೋಕದೊಂದಿಗೆ ರಾಜಿ ಮಾಡಿಕೊಳ್ಳುವುದನ್ನು ಬಲವಾಗಿ ವಿರೋಧಿಸಿ ನಿಲ್ಲುತ್ತಾರೆ, ಮತ್ತು ಮನುಷ್ಯರನ್ನು ಮೆಚ್ಚಿಸಲು ಎಂದಿಗೂ ಬಯಸುವುದಿಲ್ಲ. ಇಂತಹ ಜನರ ಮೂಲಕ ಕ್ರಿಸ್ತನ ದೇಹವು - ದೇವರ ಬಯಸುವ ಮಾದರಿಯಲ್ಲಿ - ಕಟ್ಟಲ್ಪಡುತ್ತದೆ.

ಹಿಂಜಾರುವಿಕೆ ಮತ್ತು ಆತ್ಮಿಕ ಬಲಹೀನತೆಯ ಇಂದಿನ ದಿನದಲ್ಲಿ, ಕರ್ತನು ನಮ್ಮನ್ನು ದೀನರಾಗಿ ಇರಿಸಲಿ ಮತ್ತು ಆತನಿಗೆ ಸಂಪೂರ್ಣ ನಂಬಿಗಸ್ತರಾಗಿ ಇರುವಂತೆ ಕಾಪಾಡಲಿ.

ಕಿವಿಯುಳ್ಳವನು ಕೇಳಲಿ.