ಒಂದು ಸಾರಿ ಅಪೊಸ್ತಲನಾದ ಪೌಲನು, "ಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಗೆ ಅನುಸಾರವಾಗಿ ನೋಡಿದರೆ ನಾನು ನಿರಪರಾಧಿಯಾಗಿ ಕಂಡು ಬಂದೆ," ಎಂದು ಹೇಳಿದನು. ’ಅಪೋಸ್ತಲರ ಕೃತ್ಯಗಳು 23:1'ರಲ್ಲಿ ಆತನು ಮಹಾಯಾಜಕನ ಎದುರು ಸಾಕ್ಷಿ ನೀಡಿದಾಗ, "ನಾನು ಈ ದಿನದ ವರೆಗೂ ದೇವರ ಮುಂದೆ ಒಳ್ಳೇ ಮನಸ್ಸಾಕ್ಷಿಯಿಂದ ಜೀವಿಸಿದ್ದೇನೆ," ಎಂದನು. ಅವನ ಮಾತಿನ ಅರ್ಥವೇನು? ಅವನ ಮಾತಿನ ಅರ್ಥ, ತಾನು ಎಲ್ಲಾ ಆಜ್ಞೆಗಳನ್ನು ಕೈಗೊಂಡಿದ್ದೇನೆ, ಎಂಬುದಾಗಿತ್ತು. ಆತನು ಯಾವ ಆಜ್ಞೆಗಳನ್ನು ಕೈಗೊಂಡಿದ್ದನು? ಆತನು ದಶಾಜ್ಞೆಗಳಲ್ಲಿ ಕೇವಲ ಮೊದಲ 9 ಆಜ್ಞೆಗಳನ್ನು ಮಾತ್ರ ಕೈಗೊಂಡಿದ್ದನು, ಯಾಕೆಂದರೆ ’ರೋಮಾಪುರದವರಿಗೆ 7:7-8'ರಲ್ಲಿ ಅವನು ಯಥಾರ್ಥವಾಗಿ ಒಪ್ಪಿಕೊಂಡ ಪ್ರಕಾರ, ಹತ್ತನೇ ಆಜ್ಞೆಯು ಹೀಗಿದೆ, "ನೀವು ದುರಾಶೆ ಪಡಬಾರದು, ನೀವು ಅತ್ಯಾಶೆ ಪಡಬಾರದು;" ಆದಾಗ್ಯೂ "ಸಕಲ ವಿಧವಾದ ದುರಾಶೆಗಳು ನನ್ನಲ್ಲಿ ಹುಟ್ಟಿಕೊಂಡವು" - ಹಣಕ್ಕಾಗಿ ದುರಾಸೆ, ಬೇರೆಯವರ ಹೆಂಡತಿ ಮತ್ತು ಹೆಣ್ಣು ಮಗಳಿಗಾಗಿ ದುರಾಸೆ ಮತ್ತು ಗೌರವವನ್ನು ಪಡೆಯುವ ದುರಾಸೆ - ಈ ರೀತಿಯಾಗಿ ಆತನು ತನ್ನೊಳಗೆ ಹಲವಾರು ತರದ ದುರಾಸೆಗಳು ಇರುವುದನ್ನು ಕಂಡುಕೊಂಡನು - ಮತ್ತು ಈ (ಹತ್ತನೇ) ಆಜ್ಞೆಯನ್ನು ಕೈಗೊಂಡು ನಡೆಯಲು ತನ್ನಿಂದ ಸಾಧ್ಯವಿಲ್ಲ, ಎಂಬುದನ್ನು ಗ್ರಹಿಸಿದನು.
ಅಪೊಸ್ತಲ ಪೌಲನು ತನ್ನ ಹೃದಯವು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಾಗ (ಪಂಚಾಶತಮಾನದ ದಿನದಂದು ಪವಿತ್ರಾತ್ಮನು ಜನರನ್ನು ತುಂಬಿಸಿದ ಹಾಗೆ), ಏನು ನಡೆಯಿತು ಎಂಬುದನ್ನು ಆತನು ’ರೋಮಾಪುರದವರಿಗೆ 8:2'ರಲ್ಲಿ ತಿಳಿಸಿದ್ದಾನೆ, "ದಶಾಜ್ಞೆಗಳಲ್ಲ - ಆದರೆ ಪವಿತ್ರಾತ್ಮನ ನಿಯಮವು - ಅಂದರೆ, ಯೇಸು ಕ್ರಿಸ್ತನ ಮೂಲಕ ಪ್ರಾಪ್ತವಾದ ಜೀವಿತವು ನನ್ನನ್ನು ಪದೇ ಪದೇ ಕೋಪ, ಅತ್ಯಾಸೆ ಮತ್ತು ಇನ್ನೂ ಹಲವಾರು ತರದ ಪಾಪಗಳಲ್ಲಿ ಬೀಳುವಂತೆ ಮಾಡುತ್ತಿದ್ದ ಪಾಪದ ನಿಯಮದಿಂದ ಬಿಡುಗಡೆ ಮಾಡಿತು," ಎನ್ನುತ್ತಾನೆ ಮತ್ತು ನಾಲ್ಕನೇ ವಚನದಲ್ಲಿ ಮುಂದುವರಿಯುತ್ತಾ ಹೀಗೆ ಹೇಳುತ್ತಾನೆ, "ಧರ್ಮಶಾಸ್ತ್ರದ ನಿಯಮಕ್ಕೆ ಅನುಸಾರವಾದ ನೀತಿಯು - ’ನೀವು ದುರಾಶೆ ಪಡಬೇಡಿರಿ’ ಎನ್ನುವಂತದ್ದು - ಈಗ ನಮ್ಮಲ್ಲಿ ನೆರವೇರಿದೆ, ಯಾಕೆಂದರೆ ನಾವು ಶರೀರಭಾವಕ್ಕೆ ಅನುಸಾರವಾಗಿ ನಡೆಯುವುದಿಲ್ಲ, ಈಗ ನಾವು ಪವಿತ್ರಾತ್ಮನ ನಡೆಸುವಿಕೆಗೆ ಅನುಸಾರವಾಗಿ ನಡೆಯುತ್ತೇವೆ". ಹಳೇ ಒಡಂಬಡಿಕೆಯ ಅಡಿಯಲ್ಲಿ ಇಂತಹ ಜೀವಿತವು ಅಸಾಧ್ಯವಾಗಿತ್ತು.
ಯೇಸುವು ಇವಲ್ಲಾ ಪಾಪಗಳನ್ನು ಜಯಿಸುವುದರ ಬಗ್ಗೆ ’ಮತ್ತಾಯನು 5ನೇ ಅಧ್ಯಾಯದಲ್ಲಿ’ ಮಾತನಾಡಿದಾಗ, ಅವೆಲ್ಲವೂ ಪವಿತ್ರಾತ್ಮನ ಶಕ್ತಿಯಿಲ್ಲದೆ ಮನುಷ್ಯನಿಗೆ ಮಾಡಲು ಅಸಾಧ್ಯವಾದ ವಿಷಯಗಳಾಗಿದ್ದವು. ನೀವು ’ಮತ್ತಾಯನು 5,6 ಮತ್ತು 7ನೇ ಅಧ್ಯಾಯಗಳನ್ನು’ ಓದಿಕೊಂಡರೆ, ಈ ಮೂರು ಅಧ್ಯಾಯಗಳ ಕೊನೆಯಲ್ಲಿ ಒಂದು ಅತಿ ಮುಖ್ಯವಾದ ಪ್ರಶ್ನೆಗೆ ಉತ್ತರವನ್ನು ಕೊಡಲಾಗಿಲ್ಲ, ಎಂಬುದನ್ನು ನೀವು ಕಂಡುಕೊಳ್ಳುವಿರಿ. ಯಾವ ಪ್ರಶ್ನೆ? "ಕರ್ತನೇ, ನಾನು ಈ ಜೀವಿತವನ್ನು ಹೇಗೆ ಜೀವಿಸಲಿ?" ಇದರ ಬಗ್ಗೆ ’ಮತ್ತಾಯನು 5,6 ಮತ್ತು 7ನೇ ಅಧ್ಯಾಯಗಳಲ್ಲಿ’ ಎಲ್ಲಿಯೂ ಪ್ರಸ್ತಾಪವೇ ಇಲ್ಲ! ಪರ್ವತದ ಪ್ರಸಂಗವು ಒಬ್ಬ ಹೊಸ ಒಡಂಬಡಿಕೆಯ ಕ್ರೈಸ್ತನಿಂದ (ಅಂದರೆ ಒಬ್ಬ ಹೊಸದಾಗಿ ಹುಟ್ಟಿರುವ ಕ್ರೈಸ್ತನಿಂದ) ದೇವರು ಎಂತಹ ಜೀವಿತವನ್ನು ನಿರೀಕ್ಷಿಸುತ್ತಾರೆಂದು ಮಾತ್ರ ನಮಗೆ ತೋರಿಸುತ್ತದೆ, ಆದರೆ ಆ ಮಟ್ಟವನ್ನು ತಲುಪುವುದು ಹೇಗೆಂದು ಇಡೀ ಪ್ರಸಂಗದಲ್ಲಿ ಹೇಳಲಾಗಿಲ್ಲ.
ಹಾಗಾದರೆ ನಾವು ಏನು ಮಾಡಬೇಕೆಂಬ ದೊಡ್ಡ ಪ್ರಶ್ನೆಗೆ ಉತ್ತರ ಪಡೆಯುವುದು ಹೇಗೆ? ಕ್ರಿಸ್ತನು ಪರ್ವತದ ಮೇಲಿನ ಪ್ರಸಂಗವನ್ನು ಸಾರಿದ್ದು ಈ ರೀತಿಯ ಜೀವಿತ ಜೀವಿಸಬೇಕೆಂಬ ಇಚ್ಛೆಯನ್ನು ನಮ್ಮ ಹೃದಯದಲ್ಲಿ ಹುಟ್ಟಿಸುವುದಕ್ಕಾಗಿ ಮಾತ್ರವಾಗಿತ್ತೆಂದು ನಾನು ನಂಬುತ್ತೇನೆ, ಮತ್ತು ಇಂತಹ ಜೀವಿತ ಜೀವಿಸಬೇಕೆಂಬ ಹಂಬಲ ಒಬ್ಬ ವ್ಯಕ್ತಿಯಲ್ಲಿ ಉಂಟಾದರೆ, ಆತನು ದೇವರ ಬಳಿಗೆ ಹೋಗಿ, "ಕರ್ತನೇ, ಇದಕ್ಕೆ ಪರಿಹಾರವೇನು?" ಎಂದು ಕೇಳುತ್ತಾನೆ. ಆಗ ಕರ್ತರು ಹೀಗೆ ಹೇಳುತ್ತಾರೆ, "ನೀನು ಪವಿತ್ರಾತ್ಮನಿಂದ ತುಂಬಲ್ಪಡಬೇಕು, ಮತ್ತು ನಿನ್ನ ಆಂತರ್ಯದ ಮನುಷ್ಯನು ಬಲಗೊಳ್ಳಬೇಕು."
ಶ್ರೇಷ್ಠ ಅಪೊಸ್ತಲನಾದ ಪೌಲನು ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ಬಹಳ ಯಥಾರ್ಥಚಿತ್ತನಾಗಿದ್ದನು, ಆದರೂ ಆತನು ಪವಿತ್ರಾತ್ಮನಿಂದ ತುಂಬಿಸಲ್ಪಡುವ ವರೆಗೆ ತನ್ನ ಹೃದಯದ ಆಶಾಪಾಶಗಳನ್ನು ಜಯಿಸಲು ಸಾಧ್ಯವಾಗಲಿಲ್ಲ, ಮತ್ತು ತದನಂತರ ದೇವರಾತ್ಮನು ಆತನನ್ನು ಆ ದುರವಸ್ಥೆಯಿಂದ ಬಿಡುಗಡೆಗೊಳಿಸಿದನು. ಇದು ಹೇಗೆಂದರೆ, ಯೇಸುವು ಒಬ್ಬ ಕುರುಡನ ಕಣ್ಣುಗಳನ್ನು ತೆರೆದ ಹಾಗೆ: ಆ ಕುರುಡನು ತಾನಾಗಿ ತನ್ನ ಕಣ್ಣುಗಳನ್ನು ತೆರೆಯಲು ಸಾಧ್ಯವಿರಲಿಲ್ಲ.
"ನೀನು ಪವಿತ್ರಾತ್ಮನಿಂದ ತುಂಬಲ್ಪಟ್ಟಿದ್ದರೆ, ಆತನು ನಿನಗೆ ನಿನ್ನ ನಾಲಿಗೆ ಮತ್ತು ಕಣ್ಣುಗಳ ಮೇಲೆ ನಿಯಂತ್ರಣವನ್ನು ನೀಡುತ್ತಾನೆ”
ಇದು ಪವಿತ್ರಾತ್ಮನ ಬಲದಿಂದ ಮಾತ್ರವೇ ಸಾಧ್ಯ. ವಾಸ್ತವವಾಗಿ, ನಾವು ಪವಿತ್ರಾತ್ಮನಿಂದ ತುಂಬಲ್ಪಟ್ಟಿದ್ದರೆ ಮಾತ್ರ, ಯೇಸುವು ಪರ್ವತದ ಪ್ರಸಂಗದಲ್ಲಿ ಹೇಳಿರುವ ಎಲ್ಲಾ ಸಂಗತಿಗಳಿಗೆ ನಾವು ವಿಧೇಯರಾಗಿ ಜೀವಿಸಲು ಸಾಧ್ಯವಾಗುತ್ತದೆ.
ಇಂದು "ಆತ್ಮದ ಪರಿಪೂರ್ಣತೆ” ಎಂಬ ಹೆಸರಿನಲ್ಲಿ ಪ್ರಚಾರವಾಗುತ್ತಿರುವ ನಕಲಿ ಅನುಭವಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ನೀವು ಅನುಭವಿಸಿದ್ದೀರಿ ಎಂದು ಹೇಳಿಕೊಳ್ಳುವ ಆತ್ಮದ ಪರಿಪೂರ್ಣತೆಯು ನಿಮ್ಮನ್ನು ಅಲುಗಿಸಿ, ನೆಲದಲ್ಲಿ ಉರುಳಿಸಿ, ನಗಿಸಿ, ಅನ್ಯಭಾಷೆಗಳಲ್ಲಿ ಮಾತನಾಡುವಂತೆ ಮಾಡಿದ್ದರೂ, ನೀವು ಇನ್ನೂ ಕೋಪ, ಕಾಮಗಳಂತಹ ಪಾಪಗಳಿಂದ ಸೋತಿದ್ದರೆ, ನಿಮ್ಮ ಹೆಂಡತಿ ಅಥವಾ ನಿಮ್ಮ ಗಂಡನ ಮೇಲೆ ರೇಗಾಡುತ್ತಿದ್ದರೆ, ನೀವು ಪವಿತ್ರಾತ್ಮನಿಂದ ತುಂಬಲ್ಪಟ್ಟಿಲ್ಲ. ನೀವು ಯಾರಿಂದಲೂ ಮೋಸಹೋಗದಿರಿ. ಅನೇಕರು ಮೋಸಹೋಗಿದ್ದಾರೆ. ಪವಿತ್ರಾತ್ಮನು ನಮಗೆ ಒಂದು ಹೊಸ ಭಾಷೆಯನ್ನು ಕೊಡುತ್ತಾನೆ - ಅನ್ಯಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯವಷ್ಟೇ ಅಲ್ಲ, ನಮ್ಮ ಮಾತೃಭಾಷೆಯನ್ನು ನಿಯಂತ್ರಿಸುವ ಶಕ್ತಿಯನ್ನೂ ಕೊಡುತ್ತಾನೆ. ನೀವು ಭಾನುವಾರ ಬೆಳಿಗ್ಗೆ ಸಭಾಕೂಟದಲ್ಲಿ ಅನ್ಯಭಾಷೆಗಳಲ್ಲಿ ಮಾತನಾಡಿದಾಗ್ಯೂ, ಅದೇ ಭಾನುವಾರ ಮಧ್ಯಾಹ್ನ ನಿಮ್ಮ ಹೆಂಡತಿ ಅಥವಾ ಗಂಡನ ಮೇಲೆ ಮಾತೃಭಾಷೆಯಲ್ಲಿ ರೇಗಾಡುವುದಾದರೆ, ಅದು ಉಪಯೋಗವಿಲ್ಲದ ಅನ್ಯಭಾಷೆಯಾಗಿದೆ. ಇದು ಪವಿತ್ರಾತ್ಮನ ಪರಿಪೂರ್ಣತೆಯಲ್ಲ.
ಪವಿತ್ರಾತ್ಮನ ಪರಿಪೂರ್ಣತೆಯು ನಮಗೆ ನಮ್ಮ ನಾಲಿಗೆಯನ್ನು ನಿಯಂತ್ರಿಸುವ ಶಕ್ತಿಯನ್ನು ಕೊಡುತ್ತದೆ. ಆತ್ಮನ ಫಲವು ಸ್ವ-ನಿಯಂತ್ರಣವಾಗಿದೆ, ಮತ್ತು ಪವಿತ್ರಾತ್ಮನು ನಮಗೆ ದಿನದ 24 ಗಂಟೆಗಳು, ವಾರದ ಏಳು ದಿನಗಳು ನಮ್ಮ ನಾಲಿಗೆಯನ್ನು ನಿಯಂತ್ರಿಸುವ ಶಕ್ತಿಯನ್ನು ಕೊಡುತ್ತಾನೆ. ಇದು ನಿಮ್ಮಲ್ಲಿ ಕಾಣಿಸದೇ ಇದ್ದರೆ, ನಿಮಗೆ ನಿಜವಾದ ಪವಿತ್ರಾತ್ಮನ ಪರಿಪೂರ್ಣತೆಯನ್ನು ನೀಡುವಂತೆ ನೀವು ದೇವರನ್ನು ಕೇಳಿರಿ. ಆತ್ಮನ ವರಗಳಿಗಾಗಿ ದೇವರಿಗೆ ಧನ್ಯವಾದ ಸಲ್ಲಿಸಿರಿ, ಆದರೆ ನಿಜವಾದ ಪವಿತ್ರಾತ್ಮನ ಪರಿಪೂರ್ಣತೆಯು ಕೇವಲ ವರಗಳನ್ನು ಹೊಂದುವುದಕ್ಕಿಂತ ಹೆಚ್ಚಿನದ್ದಾಗಿದೆ; ಅದಕ್ಕಾಗಿ ದೇವರನ್ನು ಕೇಳಿರಿ. ಇದೊಂದೇ ಪಾಪವನ್ನು ಜಯಿಸುವ ಮಾರ್ಗವಾಗಿದೆ. ಬೇರೆ ಯಾವುದೇ ಮಾರ್ಗವಿಲ್ಲ.
ಯಾಕೋಬನು ಹೀಗೆ ಹೇಳುತ್ತಾನೆ: ನರಮನುಷ್ಯನು ಪ್ರತಿಯೊಂದು ಪ್ರಾಣಿಯನ್ನೂ ಹತೋಟಿಗೆ ತಂದಿದ್ದಾನೆ, ಆದರೆ ಯಾವ ಮಾನವನೂ ನಾಲಿಗೆಯನ್ನು ಹತೋಟಿಗೆ ತರಲಾರನು (ಯಾಕೋಬನು 3:7-8). ಇದನ್ನು ಪವಿತ್ರಾತ್ಮನು ಮಾತ್ರ ಮಾಡಬಲ್ಲನು. ನೀವು ಪವಿತ್ರಾತ್ಮನಿಂದ ತುಂಬಲ್ಪಟ್ಟಿದ್ದರೆ, ಆತನು ನಿಮಗೆ ನಿಮ್ಮ ನಾಲಿಗೆಯನ್ನು ಮತ್ತು ನಿಮ್ಮ ಕಣ್ಣುಗಳನ್ನು ನಿಯಂತ್ರಿಸುವ ಶಕ್ತಿಯನ್ನು ಕೊಡುತ್ತಾನೆ. ಯೇಸುವು ’ಮತ್ತಾಯನು 5:21-32'ರಲ್ಲಿ ಪಾಪದ ಸಂಬಂಧದಲ್ಲಿ ಮಾತನಾಡುತ್ತಾ, ಮಾನವನ ದೇಹದ ಈ ಎರಡು ಅಂಗಗಳ ಬಗ್ಗೆ ಉಲ್ಲೇಖಿಸಿದ್ದಾರೆ. ನಾಲಿಗೆಯಿಂದ ಮಾಡುವ ಪಾಪ, ಕಣ್ಣುಗಳಿಂದ ಮಾಡುವ ಪಾಪ - ಇವೆರಡೂ ಅತಿ ಹೆಚ್ಚು ಪ್ರಾಮುಖ್ಯವಾದವುಗಳು.
ಪವಿತ್ರಾತ್ಮನಿಂದ ತುಂಬಿಸಲ್ಪಡುವ ವಿಷಯದಲ್ಲಿ, ಅದು ನಿಮ್ಮ ನಾಲಿಗೆಯ ಮೇಲೆ ಮತ್ತು ನಿಮ್ಮ ಕಣ್ಣುಗಳ ಮೇಲೆ ನಿಯಂತ್ರಣ ನೀಡದಿದ್ದರೆ, ಯಾವುದೇ ಕಳಪೆ ಅಥವಾ ನಕಲಿ ಆತ್ಮನ ತುಂಬುವಿಕೆಯಿಂದ ತೃಪ್ತಿ ಪಡಬೇಡಿರಿ. ದೇವರ ಮುಂದೆ ಹೋಗಿ ಹೀಗೆ ಪ್ರಾರ್ಥಿಸಿ: "ಸ್ವಾಮೀ, ನನ್ನಲ್ಲಿ ಒಂದು ನಕಲಿ ಆತ್ಮವಿದೆ. ನಾನು ನಿಮ್ಮೊಂದಿಗೆ ಪ್ರಾಮಾಣಿಕನಾಗಿರಲು ಬಯಸುತ್ತೇನೆ. ನಾನು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದೇನೆ ಎಂದು ಜನರನ್ನು ನಂಬಿಸುತ್ತಿದ್ದೇನೆ, ಆದರೆ ಅದು ಯಾವ ಪ್ರಯೋಜನಕ್ಕೂ ಬಾರದಂತದ್ದು. ನಿಜವಾದ ಪವಿತ್ರಾತ್ಮನ ಪರಿಪೂರ್ಣತೆಯಿಲ್ಲದ ನಕಲಿಯನ್ನು ನಾನು ಬಯಸುವುದಿಲ್ಲ."
ನಾನು ಯೌವನಸ್ಥ ಕ್ರೈಸ್ತನಾಗಿದ್ದಾಗ, ಮೇಲಿನ ಈ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದೆನು. ನಾನು ಪವಿತ್ರಾತ್ಮನಿಂದ ತುಂಬಿಸಲ್ಪಡಲು ತವಕಿಸುತ್ತಿದ್ದಾಗ, ಜನರು ನನಗೆ ಅನೇಕ ವಿಧವಾದ ಸಭಾಕೂಟಗಳನ್ನು ತೋರಿಸಿದರು, ಆದರೆ ನಾನು ಅಲ್ಲಿ ಕಂಡ ವಿಷಯಗಳಿಂದ ತುಂಬಾ ನಿರಾಶೆಗೊಂಡೆನು. ನಾನು ಈ ರೀತಿಯಾಗಿ ಸಾಕಷ್ಟು ಗದ್ದಲವನ್ನು ಕೇಳಿಸಿಕೊಂಡ ನಂತರ ಹೀಗೆ ಹೇಳಿದೆನು: "ಸ್ವಾಮೀ, ನಾನು ಹುಡುಕುತ್ತಿರುವುದು ಇದನ್ನಲ್ಲ. ನಾನು ಪಾಪವನ್ನು ಜಯಿಸುವ ಶಕ್ತಿಗಾಗಿ ತವಕಿಸುತ್ತಿದ್ದೇನೆ. ಇದನ್ನು ಪಡೆಯಲು ಹತ್ತು ವರ್ಷಗಳು ಬೇಕಾದರೂ ಪರವಾಗಿಲ್ಲ, ಆದರೆ ನಾನು ನಿಜವಾದದ್ದನ್ನು ಬಯಸುತ್ತೇನೆ. ಪೇತ್ರ, ಯಾಕೋಬ ಮತ್ತು ಯೋಹಾನರು ಪಂಚಾಶತ್ತಮ ದಿನದಂದು ಪಡೆದದ್ದನ್ನು ನಾನು ಬಯಸುತ್ತೇನೆ, ಇಂದು ಪ್ರಪಂಚದಾದ್ಯಂತ ಹರಡುತ್ತಿರುವ ಕಳಪೆಯಾದ ನಕಲಿ ಆತ್ಮವನ್ನಲ್ಲ."
ಜನರು ಯಾವುದಾದರೂ ನಕಲಿಯಿಂದ ತೃಪ್ತರಾಗಬೇಕು ಎಂದು ಸೈತಾನನು ಬಯಸುತ್ತಾನೆ. ನೀವು ಚಿನ್ನ ಅಥವಾ ವಜ್ರಗಳನ್ನು, ಅಥವಾ ಕರೆನ್ಸಿ ನೋಟುಗಳನ್ನು ಕೊಳ್ಳಲು ಹೋಗುವಾಗ, ಯಾವುದೇ ನಕಲಿ ಸಿಗದಂತೆ ಎಷ್ಟು ಜಾಗ್ರತೆ ವಹಿಸುತ್ತೀರಿ! ಸಾಕಷ್ಟು ನಕಲಿ ಕರೆನ್ಸಿ ಚಲಾವಣೆಯಲ್ಲಿದೆ ಎಂದು ನಿಮಗೆ ತಿಳಿದರೆ, ನೀವು ತೆಗೆದುಕೊಳ್ಳುವ ಐನೂರು ರೂಪಾಯಿ ನೋಟುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತೀರಿ. ನಮ್ಮ ನಿತ್ಯತ್ವಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ — ಅಂದರೆ ಪವಿತ್ರಾತ್ಮನಿಂದ ಸಂಪೂರ್ಣವಾಗಿ ತುಂಬಿಸಲ್ಪಡುವುದರ ಬಗ್ಗೆ — ನಾವು ಇನ್ನೂ ಹೆಚ್ಚು ಜಾಗ್ರತೆ ವಹಿಸಬೇಕಲ್ಲವೇ!
ನಕಲು ಆತ್ಮನಿಂದ ತೃಪ್ತರಾಗಬೇಡಿ. ನೀವು ನಕಲಿ ಚಿನ್ನ, ವಜ್ರ ಮತ್ತು ಕರೆನ್ಸಿ ನೋಟುಗಳ ವಿಷಯದಲ್ಲಿ ತೃಪ್ತರಾಗಿರದಿದ್ದರೆ, ಪವಿತ್ರಾತ್ಮನ ಪರಿಪೂರ್ಣತೆಯ ವಿಷಯದಲ್ಲಿ ನಕಲಿಯಿಂದ ಇನ್ನೆಷ್ಟು ಹೆಚ್ಚು ದೂರವಿರಬೇಕು! ಈ ರೀತಿಯಾಗಿ ಪರೀಕ್ಷಿಸಿರಿ: ’ದೇವರ ಆತ್ಮವು ನಿಮ್ಮನ್ನು ಪಾಪಮರಣಗಳಿಗೆ ಕಾರಣವಾದ ನಿಯಮದಿಂದ ಬಿಡಿಸಿದೆಯೇ’ (ರೊಮಾ. 8:2)? ನಾವು ಮಾಡಬೇಕಾದ ಪರೀಕ್ಷೆ ಇದೇ ಆಗಿದೆ.