ದೇವರು ಯಾರಿಗೂ ಸಾಲಗಾರನಲ್ಲ. ಹೊಸ ಒಡಂಬಡಿಕೆಯಲ್ಲಿ, ನಾವು ಆತನ ಸ್ವಭಾವದಲ್ಲಿ ಪಾಲನ್ನು ಹೊಂದಲು ಕರೆಯಲ್ಪಟ್ಟಿದ್ದೇವೆ. ಹೀಗೆ ನಾವು ‘ಯಾವ ಸಾಲವೂ ನಿಮಗೆ ಇರಬಾರದು’ ಎಂದು ರೋಮಾ 13:8 ರಲ್ಲಿ ಆಜ್ಞಾಪಿಸಲ್ಪಟ್ಟಿದ್ದೇವೆ.
ಒಬ್ಬರಿಂದ ಸಾಲ ತೆಗೆದುಕೊಂಡು ಸಾಲಗಾರರಾಗುವುದು ಧರ್ಮಶಾಸ್ತ್ರದ ಶಾಪಗಳಲ್ಲಿ ಒಂದಾಗಿದೆ. ಯಾಕಂದರೆ ಇಸ್ರಾಯೇಲ್ಯರು ಧರ್ಮಶಾಸ್ತ್ರಕ್ಕೆ ಅವಿಧೇಯರಾದರೆ ಸಾಲಗಾರರಾಗುವ ಶಾಪಕ್ಕೆ ಒಳಗಾಗುವರೆಂದು ದೇವರು ಹೇಳಿದ್ದರು (ಧರ್ಮೋ 28:43-48). ದೇವರ ಆಜ್ಞೆಗಳನ್ನು ಅವರು ಕೈಗೊಳ್ಳದಿದ್ದರೆ "ಏನೂ ಇಲ್ಲದೆ"ಕಷ್ಟಪಡುವರು ಎಂದು ಹೇಳಲ್ಪಟ್ಟಿದ್ದರು (48 ನೇ ವಚನ).
ಇಸ್ರಾಯೇಲ್ಯರು ದೇವರ ಆಜ್ಞೆಗಳಿಗೆ ವಿಧೇಯರಾಗುವಾಗ ದೇವರು ಅವರಿಗೆ ವಾಗ್ದಾನ ಮಾಡಿದ್ದ ಆಶೀರ್ವಾದಗಳಲ್ಲಿ ಒಂದು "ನೀವು..., ಸಾಲ ಕೊಡಬೇಕೇ ಹೊರತು ಸಾಲ ತೆಗೆದುಕೊಳ್ಳುವುದಲ್ಲ"(ಧರ್ಮೋ. 28:12;15:16). ಇತರರಿಗೆ ಕೊಡುವಷ್ಟು ತನ್ನ ಜನರನ್ನು ಆಶೀರ್ವದಿಸುವುದಾಗಿ ದೇವರು ಹೇಳಿದ್ದರು.
ಒಂದು ವೇಳೆ ನಿಮಗೆ ಯಾವಾಗಲೂ ಹಣದ ಅವಶ್ಯಕತೆ ಇರುವದಾದರೆ, ನೀವು ಏನು ಮತ್ತು ಎಲ್ಲಿ ತಪ್ಪಾಗಿದೆಯೆಂದು ನಿಮ್ಮನ್ನು ಆತ್ಮೀಕವಾಗಿ ಪರೀಕ್ಷಿಸಿಕೊಳ್ಳುವದು ಅವಶ್ಯ.
"ಸಾಲಗಾರನು ಸಾಲ ಕೊಟ್ಟವನಿಗೆ ಸೇವಕ"ಎಂದು ಸತ್ಯವೇದವು ಹೇಳುತ್ತದೆ (ಜ್ಞಾನೋಕ್ತಿ 22:7) "ಸಾಲ" ಎಂಬ ಪದವು ಇಬ್ರಿಯ ಭಾಷೆಯಲ್ಲಿ ಸಾಲಕೊಟ್ಟವನೊಂದಿಗೆ ಬಂಧಿಸಲ್ಪಟ್ಟಿದ್ದಾನೆ ಎಂಬ ಅರ್ಥವನ್ನು ಕೊಡುತ್ತದೆ. ಅಂದರೆ ನೀವು ನಿಮಗೆ ಸಾಲಕೊಟ್ಟವನೊಂದಿಗೆ ಸರಪಣಿಗಳಿಂದ ಕಟ್ಟಲ್ಪಟ್ಟಿದ್ದೀರಿ ಮತ್ತು ಅವನಿಗೆ ನಿಮ್ಮ ಮೇಲೆ ಅಧಿಕಾರ ಇರುವುದು. ಇತರರು ದೇವರ ಮಗುವಿನ ಮೇಲೆ ಅಧಿಕಾರ ಹೊಂದಿರುವುದು ಎಂದಿಗೂ ದೇವರ ಚಿತ್ತವಲ್ಲ. ನಾವು ಯೇಸುವಿನ ರಕ್ತದಿಂದ ಕ್ರಯಕ್ಕೆ ಕೊಳ್ಳಲ್ಪಟ್ಟವರಾಗಿರುವದರಿಂದ ಮನುಷ್ಯರಿಗೆ ದಾಸರಾಗಬಾರದು ಎಂದು ಆಜ್ಞಾಪಿಸಲ್ಪಟ್ಟಿದ್ದೇವೆ.
ಯೇಸು ನಮಗೋಸ್ಕರವಾಗಿ ಶಾಪಗ್ರಸ್ತನಾಗಿ, ನಮ್ಮನ್ನು ಧರ್ಮಶಾಸ್ತ್ರದ ಶಾಪದಿಂದ ಬಿಡುಗಡೆ ಮಾಡಿದ್ದಾನೆ (ಗಲಾತ್ಯ 3:13). ಆತನು ಸೆರೆಯವರಿಗೆ ಬಿಡುಗಡೆಯನ್ನು ಸಹ ಕೊಡುವುದಕ್ಕೆ ಬಂದನು (4:18). ಇವು ಸಾಲದಲ್ಲಿರುವವರಿಗೆ ಒಂದು ಪರೀಕ್ಷಿಸಿಕೊಳ್ಳುವ ಪಟ್ಟಿ.
1. ತಪ್ಪಾದ ಪ್ರಾಮುಖ್ಯತೆಗಳು
ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡುವವರಿಗೆ ಇಹಲೋಕದ ಜೀವಿತಕ್ಕೆ ಅವಶ್ಯವಾದದ್ದೆಲ್ಲವೂ ದೊರಕುವವು ಎಂದು ಯೇಸು ಹೇಳಿದ್ದರು (ಮತ್ತಾಯ 6:33). ಈ ವಾಗ್ದಾನವೂ ಎಲ್ಲಾ ರಾಷ್ಟ್ರಗಳಲ್ಲಿಯೂ ಎಲ್ಲಾ ಕಾಲಕ್ಕೂ ಅನ್ವಯಿಸುವಂಥದಾಗಿದೆ. ದೇವರು ತಾನು ಮಾಡಿದ ವಾಗ್ದಾನವನ್ನು ನಿಶ್ಚಯವಾಗಿ ನೆರವೇರಿಸುವನು. ಆದುದರಿಂದ ನಮಗೆ ಕೊರತೆಯಿರುವಾಗ ತಪ್ಪು ನಮ್ಮದೇ ಆಗಿರಬೇಕು. ದಾವೀದನು ಎಪ್ಪತ್ತು ವಯಸ್ಸಿನವರೆಗೂ ನೀತಿವಂತನು ಇಲ್ಲದೆ ಅವನ ಸಂತತಿಯು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ, ಭಿಕ್ಷೆ ಬೇಡುವದನ್ನಾಗಲಿ (ಭಿಕ್ಷೆ ಬೇಡುವದು ಸಹ ಒಂದು ರೀತಿಯ ಸಾಲವಾಗಿದೆ) ಒಂದು ಬಾರಿಯೂ ನೋಡಲಿಲ್ಲವೆಂದು ಹೇಳುತ್ತಾನೆ (ಕೀರ್ತಿ 37:25,26).ಅದಕ್ಕೆ ಬದಲಾಗಿ ನೀತಿವಂತನು ಯಾವಾಗಲೂ ಹಣ ಸಹಾಯ ಮಾಡುವದನ್ನು ದಾವೀದನು ಕಂಡಿದ್ದಾನೆ.
ನಾವು ಮೊದಲು ದೇವರ ರಾಜ್ಯಕ್ಕಾಗಿ ತವಕಪಟ್ಟಿದ್ದೇವೊ? ಇದರ ಅರ್ಥವೇನು? ಮೊಟ್ಟ ಮೊದಲನೆಯದಾಗಿ ದುಡ್ಡಿನ ವಿಷಯದಲ್ಲಿ ನೀತಿವುಳ್ಳವರಾಗಿ, ನಮ್ಮ ಗತಕಾಲದಲ್ಲಿ ಯಾರಿಂದಾದರೂ ಅನ್ಯಾಯವಾಗಿ ಹಣವನ್ನು ಹಿಂದಿರುಗಿ ಕೊಡಬೇಕೆಂಬುದು ಇದರ ಅರ್ಥವಾಗಿದೆ. ಇಂಥಾ ವಿಷಯದಲ್ಲಿ ಹಣವನ್ನು ಸರಿಪಡಿಸದ ವಿಶ್ವಾಸಿಗಳು ಅನೇಕರಿದ್ದಾರೆ; ಆದುದರಿಂದ ಅವರು ದೇವರ ಆಶೀರ್ವಾದಗಳನ್ನು ತಮ್ಮ ಜೀವಿತದಲ್ಲಿ ಕಳೆದುಕೊಂಡಿದ್ದಾರೆ. ಯೇಸು ಜಕ್ಕಾಯನ ಮನೆಗೆ ಬಂದ ಕೂಡಲೇ ಅವನು ತನ್ನ ಗತಕಾಲದ ಅನ್ಯಾಯ ಹಣವನ್ನು ಸರಿಪಡಿಸಲು ತೀರ್ಮಾನಿಸಿಕೊಂಡನು. (ಲೂಕ 19:1-10). ಜಕ್ಕಾಯನು ಹಣ ಮೋಸ ಮಾಡಿದವರನ್ನೆಲ್ಲಾ ಹುಡುಕಿಕೊಂಡು ಹೋಗಲು ಸಾಧ್ಯವಿಲ್ಲದ ಕಾರಣ ತನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡಲು ತೀರ್ಮಾನಿಸಿದನು. ಆದುದರಿಂದ ಯೇಸು ರಕ್ಷಣೆಯು (ಹಣದಾಶೆಯಿಂದ) ಜಕ್ಕಾಯನ ಮನೆಗೆ ಬಂದಿದೆಯೆಂದು ಹೇಳಿದರು. ಅದೇ ರೀತಿಯಾಗಿ ಯೇಸು ನಮ್ಮ ನಿಷಯದಲ್ಲಿ ಹೇಳಲು ಸಾಧ್ಯವೇ? ನಾವು ಅನ್ಯಾಯವಾಗಿ ಕೂಡಿಸಿಕೊಂಡ ಹಣವನ್ನು ದೇವರು ಎಂದೂ ಆಶೀರ್ವದಿಸುವುದಿಲ್ಲ. ನಾವು ದುಡಿದು ಕೂಡಿಸಿಕೊಂಡ ಹಣವನ್ನು ದೇವರು ಅಭಿವೃದ್ಧಿಪಡಿಸುವನು (ಜ್ಞಾನೋಕ್ತಿ 13:11). ನಮಗೆ ಸ್ವಂತವಾಗಿರದ ಹಣವು ಬ್ಯಾಂಕಿನಲ್ಲಿ ನಮ್ಮ ಲೆಕ್ಕದಲ್ಲಿ ಒಂದು ಪೈಸೆ ಸಹ ಇರಕೂಡದು. ಸರ್ಕಾರವನ್ನು ತೆರಿಗೆಯಲ್ಲಿ ವಂಚಿಸಿದ ಹಣವು ಹೊಲಸ್ಸಾದದ್ದು ಮತ್ತು ಅವು ಕೇವಲ ಶಾಪವನ್ನು ತಕ್ಕಕಾಲದಲ್ಲಿ ತರುವಂಥದಾಗಿದೆ.
2. ಕೊಡದೆ ತೆಗೆದುಕೊಳ್ಳುವದು
ನಾವು ದೇವರಿಂದ ಸ್ವೀಕರಿಸಿಕೊಂಡದ್ದನ್ನು ಸ್ವಾರ್ಥದಿಂದ ಹಿಡಿದು ಕೊಂಡಿದ್ದರೆ, ನಾವು ಆತ್ಮೀಕವಾಗಿ ಸಾಯುತ್ತೇವೆ. ಆದಾಮನ ಕುಲದವರು ಸಿಕ್ಕುವುದನ್ನೆಲ್ಲಾ ಮತ್ತು ಸಿಕ್ಕಿರುವುದನ್ನೆಲ್ಲಾ ಗಟ್ಟಿಯಾಗಿ ಹಿಡಿದುಕೊಂಡಿರುವ ಮುಷ್ಟಿಯು ಸೂಕ್ತ ಚಿಹ್ನೆಯಾಗಿರುವದು. ಕಲ್ವಾರಿಯ ಶಿಲುಬೆಯಲ್ಲಿ ಯೇಸುವು ತೆರೆದ ಅಂಗೈಯುಳ್ಳವರಾಗಿದ್ದರು-ನಾವು ಸಹ ಆತನಂತೆ ಇರಬೇಕು.
ನಾವು ಕಷ್ಟದಲ್ಲಿರುವ ಬಡ ವಿಶ್ವಾಸಿಗಳ ಅವಶ್ಯಕತೆಯಲ್ಲಿ ಹಣ ಸಹಾಯ ಮಾಡದಿರುವುದು ಮತ್ತೊಂದು ಕಾರಣವಾಗಿರುವುದು. "ಬಡವರ ಮೊರೆಗೆ ಕಿವಿ ಮುಚ್ಚಿಕೊಳ್ಳುವವನು ತಾನೇ ಮೊರೆಯಿಡುವಾಗ ಯಾರೂ ಉತ್ತರ ಕೊಡರು"(ಜ್ಞಾನೋಕ್ತಿ 21:13). ಅದರ ಬದಲಾಗಿ "ಬಡವರಿಗೆ ದಯೆ ತೋರಿಸುವವರು ಕರ್ತನಿಗೆ ಸಾಲ ಕೊಡುವವನು; ಆ ಉಪಕಾರಕ್ಕೆ ಕರ್ತನೇ ಪ್ರತ್ಯುಪಕಾರ ಮಾಡುವನು"(ಜ್ಞಾನೋಕ್ತಿ 19:17). ಆದರೆ ಈ ರೀತಿಯಾಗಿ ಕೊಡುವುದನ್ನು ಜ್ಞಾನದಿಂದ ಮಾಡಬೇಕು. ಒಂದು ವೇಳೆ ಅಗತ್ಯವಾದ ಜ್ಞಾನವು ಇಲ್ಲದವರು ಸಭೆಯ ಹಿರಿಯರಿಗೆ ಕೊಟ್ಟು ಅವರ ಮೂಲಕ ಹಂಚಿಕೊಡಬಹುದು (ಅ.ಕೃ. 4:34,35).
3. ದುಂದುಗಾರಿಕೆ
ಹಾಳು ಮಾಡದಿರುವುದಕ್ಕೆ ಮೊದಲನೆಯ ಹೆಜ್ಜೆ ಹಣದ ವಿಷಯದಲ್ಲಿ ನೇರವಾಗಿರುವದಾಗಿರುತ್ತದೆ (ಸರಿಯಾಗಿರುವುದು). ನಾವು ನಂಬಿಗಸ್ತರಾಗಿರಲು ಕಲಿಯಬೇಕು. ಅನೇಕರು ತಮ್ಮ ಹಣವನ್ನು ವ್ಯರ್ಥವಾಗಿ ಖರ್ಚು ಮಾಡುವುದರಿಂದ ಸಾಲಗಾರರಾಗಿದ್ದಾರೆ. ಅವಸರ ಕಾಲದಲ್ಲಿ ಸಾಲ ಮಾಡದೆ ಇಲ್ಲವೆ ಭಿಕ್ಷೆಬೇಡದೆ ಇರುವಂತೆ, ಅಂಥವರು ಪ್ರತಿ ತಿಂಗಳು ಸ್ವಲ್ಪ ಸ್ವಲ್ಪವಾಗಿ ಕೂಡಿಡಲು ಇರುವೆಯಿಂದ ಕಲಿತು ಕೊಳ್ಳದವರಾಗಿದ್ದಾರೆ (ಜ್ಞಾನೋಕ್ತಿ 6:6-11). ಒಬ್ಬ ವ್ಯಕ್ತಿ ಪ್ರತಿ ತಿಂಗಳು ಎಷ್ಟು ಹಣವನ್ನು ಕೂಡಿಸಿಡಬೇಕು? ಅದು ಒಬ್ಬೊರಿಗೂ ದೇವರು ಕೊಟ್ಟ ವಿಶ್ವಾಸ ಬಲಕ್ಕೆ ಅನುಸಾರವಾದದ್ದಾಗಿದೆ. ಕೆಲವರಿಗೆ ಸ್ವಲ್ಪವೂ ಕೂಡಿಸದೇ ತಮ್ಮೆಲ್ಲ ಉಳಿದಿರುವ ಹಣವನ್ನೆಲ್ಲಾ ದೇವರ ಸೇವೆಗೂ ಆತನ ಜನರಿಗೂ ಕೊಡುವಷ್ಟು ನಂಬಿಕೆ ಇರಬಹುದು. ಅಂಥವರ ಅವಶ್ಯಕತೆಯಲ್ಲಿ ದೇವರು ಅವರನ್ನು ಕೈ ಬಿಡದೆ ಅವರ ಅವಶ್ಯಕತೆಯನ್ನು ಅದ್ಬುತವಾಗಿ ಒದಗಿಸುವನು. ಆದರೆ ನಮಗೆ ಅಂಥಾ ನಂಬಿಕೆ ಇಲ್ಲದಿದ್ದರೆ, ನಾವು ತಗ್ಗಿಸಿಕೊಂಡು ನಮಗೆ ಅಂಥಾ ನಂಬಿಕೆ ಇಲ್ಲವೆಂದು ಒಪ್ಪಿಕೊಳ್ಳಬೇಕು. ಮತ್ತು ಪ್ರತಿ ತಿಂಗಳು ಸ್ವಲ್ಪ ಹಣವನ್ನು ಕೂಡಿಸಿಡುವುದು ಉತ್ತಮ. ಹೀಗೆ ನಾವು ಇತರರನ್ನು ಬೇಡುವದಕ್ಕಾಗಲಿ, ಸಾಲ ತೆಗೆದುಕೊಳ್ಳುವುದಕ್ಕಾಗಲಿ ನಮಗೆ ಆಸ್ಪದವಿರುವದಿಲ್ಲ.
ಯೇಸುಸ್ವಾಮಿಯು ಕೂಡ ರೊಟ್ಟಿ-ಮೀನುಗಳನ್ನು ಸಮೃದ್ಧಿಯಾಗಿ ಹೆಚ್ಚಿಸಿದ್ದರೂ, ಮಿಕ್ಕ ತುಂಡುಗಳನ್ನು ಕೂಡಿಸಿರಿ ಎಂದು, ದುಂದುಗಾರಿಕೆ ಯಾಗಬಾರದೆಂಬ ಉದ್ದೇಶದಿಂದ ಹೇಳಿದರು (ಯೋಹಾನ 6:12). ಕರ್ತನು ವ್ಯರ್ಥ ಮಾಡುವುದನ್ನು ಇಷ್ಟಪಡುವುದಿಲ್ಲ. ಅನೇಕ ವಿಶ್ವಾಸಿಗಳು ತಮ್ಮ ಮನೆಯ ಖರ್ಚುಗಳನ್ನು ಮಿತಿಮಿರಿ ಮಾಡುವವರಾಗಿದ್ದಾರೆ. ಇಂಥಾ ಸಮಸ್ಯೆಯಲ್ಲಿರುವವರು ಪ್ರತಿ ತಿಂಗಳ ಆದಾಯ ಹಾಗೂ ಖರ್ಚುಗಳನ್ನು ಲೆಕ್ಕಿಸಿ ನೋಡಿ, ಎಲ್ಲಿ ದುಂದುವೆಚ್ಚ ಆಗುತ್ತಾ ಇದೆ ಎಂದು ಕಂಡು ಹಿಡಿಯಬೇಕು. ಹೀಗೆ ಮಾಡದಿದ್ದರೆ ನಾವು ಜೀವ ಮಾನವೆಲ್ಲಾ ಸಾಲಗಾರರಾಗಿರಬೇಕಾಗುವದು.
ವಿಶ್ವಾಸಿಗಳ ಹೆಚ್ಚಾದ ಖರ್ಚುಗಳಿಗೆ ಕಾರಣ ಮನುಷ್ಯರ ಮಾನವನ್ನು ಹುಡುಕುವದೇ ಆಗಿರುತ್ತದೆ. ಅದು ಮುಖ್ಯವಾಗಿ ಮದುವೆಗಾಗಿ ಖರ್ಚು ಮಾಡುವ ಕ್ಷೇತ್ರದಲ್ಲಿ ಆಗಿರುತ್ತದೆ. ಸಂಭ್ರಮವಾದ ಮದುವೆಗಾಗಿ ಅನೇಕರು ಇಂದು ಸಾಲಗಾರರಾಗಿದ್ದಾರೆ. ಇದು ಬುದ್ಧಿಹೀನತೆಯಾಗಿರುವುದು. ಅದೇ ರೀತಿಯಾಗಿ ಕೆಲವರು ಮನುಷ್ಯರ ಮಾನವನ್ನು ಪಡೆಯಲು ಸಂಭ್ರಮವಾದ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಇಲ್ಲವೇ ಸಂಭ್ರಮವಾದ ಊಟವನ್ನು ಮಾಡಿಸುತ್ತಾರೆ. ಇವೆಲ್ಲವೂ ಬುದ್ಧಿಹೀನತೆಯಾಗಿರುತ್ತದೆ. ನಾವು ದೇವರನ್ನು ಮಾತ್ರ ಮೆಚ್ಚಿಸುವದಕ್ಕೆ ಇಷ್ಟಪಡುವುದಾದರೆ, ಮನುಷ್ಯರ ಮಾನಕ್ಕಾಗಿ ನಾವು ಸಾಯಬೇಕು, ಹೀಗೆ ನಾವು ಸಾಲದಿಂದಲೂ ಬಿಡುಗಡೆಯಾಗುವೆವು.
ನಾವು ಹಣದ ವಿಷಯದಲ್ಲಿ ನಂಬಿಗಸ್ತರಾಗದಿದ್ದರೆ, ದೇವರು ನಮಗೆ ತನ್ನ ರಾಜ್ಯದ ನಿಜವಾದ ಧನವನ್ನು ಕೊಡಲಾರನು (ಲೂಕ 16:11). ಈ ದಿವಸಗಳಲ್ಲಿ ಒಣಗಿದ ಸಂದೇಶವನ್ನು ನೀಡುತ್ತಿರುವ ಪ್ರಸಂಗಿಗಳಿಂದ ಕೇಳುವಾಗಲೇ ಅವರಲ್ಲಿ ನಿಜವಾದ ಧನವಾಗಿರುವ ದೇವರ ವಾಕ್ಯದ ಪ್ರಕಟನೆಯಿಲ್ಲವೆಂದು ತಿಳಿಯಬಹುದು. ಇದಕ್ಕೆ ಮತ್ತೊಂದು ಕಾರಣ ಅನೇಕ ಪ್ರಸಂಗಿಗಳು ಹಣದ ವಿಷಯದಲ್ಲಿ ಅಪನಂಬಿಗಸ್ತರಾಗಿರುವುದೇ ಆಗಿರುತ್ತದೆ. ಒಂದು ವೇಳೆ ದೇವರು ನಮಗೆ ನಿಜವಾದ ಧನವಾದ-ವಾಕ್ಯ ಪ್ರಕಟಣೆಯನ್ನು ಕೊಡದಿದ್ದರೆ, ನಾವು ದುಂದುಗಾರಿಕೆ ಇಲ್ಲವೆ ಅನ್ಯಾಯವಾದ ಹಣ-ಯಾವುದಾದರೂ ವಿಷಯದಲ್ಲಿ ಅಪನಂಬಿಗಸ್ತರಾಗಿದ್ದೇವೋ ಎಂದು ನಮ್ಮನ್ನು ಪರೀಕ್ಷಿಸಿಕೊಳ್ಳಬೇಕು.
4. ತೀರ್ಪು ಮಾಡುವುದು
ನಾವು ಬಿತ್ತುವದನ್ನೇ ಕೊಯ್ಯಬೇಕು; ನಾವು ಇತರರ ವಿಷಯವಾಗಿ ತೀರ್ಪು ಮಾಡುತ್ತಿದ್ದರೆ, ಅದರ ನಿಮಿತ್ತವಾಗಿ ನಾವು ಹಣದ ಕಷ್ಟಕ್ಕೆ ಒಳಗಾಗುವಾಗ ಆಶ್ಚರ್ಯಪಡಬಾರದು. ನಾವು ಅಭಿಷೇಕಿಸಲ್ಪಟ್ಟ ಯಾವ ದೇವರ ಸೇವಕರನ್ನು ಮನಸ್ಸಿನಲ್ಲಿ ಇಲ್ಲವೇ ಬಾಯಿ ತೆರೆದು ತೀರ್ಪು ಇಲ್ಲವೆ ವಿಮರ್ಶೆ ಮಾಡಿದ್ದೇವೋ? ಇದು ಬಹಳ ಅಪಾಯಕರವಾದದ್ದಾಗಿದೆ. "ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು, ನನ್ನ ಪ್ರವಾದಿಗಳಿಗೆ ಯಾವ ಕೇಡನ್ನೂ ಮಾಡಬಾರದು"ಎಂದು ದೇವರು ಹೇಳುತ್ತಾನೆ (ಕೀರ್ತ 105:15). ದೇವರ ಸೇವಕರನ್ನು ಟೀಕಿಸುವವರನ್ನು ಇಲ್ಲವೇ ತೀರ್ಪು ಮಾಡುವವರನ್ನು ಆತನು ತೀಕ್ಷಣವಾಗಿ ವ್ಯವಹಾರ ಮಾಡುತ್ತಾನೆ. ನಾವು ನಮ್ಮ ಗತಕಾಲದಲ್ಲಿ ಅವರ ಬಗ್ಗೆ ತೀರ್ಪು ಇಲ್ಲವೆ ಟೀಕೆ ಮಾಡಿರುವುದಾದರೆ ಇಂದು ಅದಕ್ಕಾಗಿ ಹಣದ ಕಷ್ಟವು ನಮಗೆ ಬಂದಿರಲು ಸಾಧ್ಯ. ಪ್ರತಿಯೊಬ್ಬರೂ ಇದರ ವಿಷಯವಾಗಿ ಪಶ್ಚಾತ್ತಾಪ ಪಟ್ಟು ಅರಿಕೆ ಮಾಡಿದ್ದೇವೋ ಏನೋ ಎಂದು ಪರೀಕ್ಷಿಸಿಕೊಳ್ಳುವದು ಅವಶ್ಯ. ಇದೇ ಕಾರಣದಿಂದ ಅನೇಕ ದೇವ ಜನರು ರೋಗಿಗಳಾಗಿದ್ದಾರೆ. ನಮ್ಮ ಅಜಾಗರೂಕತೆಯ ಮಾತುಗಳನ್ನು ನಮಗೆ ಜ್ಞಾಪಕ ಮಾಡಲು ದೇವರು ರೋಗಗಳನ್ನೂ, ಹಣ ಕಷ್ಟಗಳನ್ನೂ, ಅನುಮತಿಸುತ್ತಾನೆ. ನಾವು ನಮ್ಮ ಮನೆಯಲ್ಲಿ ಅಭಿಷೇಕಿಸಲ್ಪಟ್ಟ ದೇವ ಮನುಷ್ಯರ ವಿರುದ್ಧವಾಗಿ ಮಾತನಾಡಿದ ಮಾತುಗಳು ಈಗ ನಮ್ಮ ಮೇಲೆಯೇ ಬಾಣದಂತೆ ಹಿಂದಿರುಗುತ್ತವೆ. ನಾವು ನಮ್ಮನ್ನು ಆಳವಾಗಿ ತೀರ್ಪು ಮಾಡಿಕೊಂಡು, ವಾಸ್ತವವಾಗಿ ತಗ್ಗಿಸಿಕೊಂಡು, ಸಂಬಂಧಪಟ್ಟ ವ್ಯಕ್ತಿಯ ಬಳಿಕ್ಷಮೆ ಕೇಳುವದೇ ಈ ಸಮಸ್ಯೆಗೆ ಸೂಕ್ತ ಪರಿಹಾರವಾಗಿದೆ.
ಇತರ ವಿಶ್ವಾಸಿಗಳು ತಮ್ಮ ಖರ್ಚುಗಳಲ್ಲಿ ಬಹಳ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆಂಬ ವಿಮರ್ಶೆ ನಮಗಿರಬಹುದು. ಆದರೆ ಅದು ಪರರ ಕಾರ್ಯದಲ್ಲಿ ತಲೆ ಹಾಕುವುದಾಗಿರುತ್ತದೆ. ನಾವು ಪರರ ಕಾರ್ಯದಲ್ಲಿ ತಲೆ ಹಾಕುವವರಾಗಿರಬಾರದೆಂದು ದೇವರು ನಮ್ಮನ್ನು ಹಣದ ಕಷ್ಟಕ್ಕೆ ಒಪ್ಪಿಸುವದರ ಮೂಲಕ ಶಿಕ್ಷಿಸಲು ಸಾಧ್ಯ.
5. ಆಪನಂಬಿಕೆ
ಸಾಲ ಮಾಡುವುದಕ್ಕೆ ಮತ್ತೊಂದು ಕಾರಣ ಅಪನಂಬಿಕೆಯಾಗಿರುತ್ತದೆ. ಈ ಲೋಕದಲ್ಲಿ ಒಬ್ಬ ನಾಸ್ತಿಕನಿಗೆ ಹಣದ ಕಷ್ಟ ಬಂದರೆ, ಅವನು ಸಹಾಯಕ್ಕಾಗಿ ಕೆಲವು ಮನುಷ್ಯರ ಬಳಿ ಓಡುತ್ತಾನೆ, ಯಾಕೆಂದರೆ ಅವನು ದೇವರ ವಿಷಯವಾಗಿ ನಂಬಿಕೆ ಇಲ್ಲದವರು. ಇದು ನಮ್ಮ ವಿಷಯದಲ್ಲಿ ಹೇಗಿದೆ? ನಮಗೆ ಹಣದ ಅವಶ್ಯಕತೆಯಿರುವಾಗ ನಾವು ಏನು ಮಾಡುತ್ತೇವೆ? ದೇವರು ನಮ್ಮನ್ನು ಹಣದ ಅವಶ್ಯಕತೆಯಿಂದ ಪರೀಕ್ಷಿಸಲು ಸಾಧ್ಯ. ಅಪೋಸ್ತಲರು ಸಹ ಹಣದ ಕೊರತೆಯಲ್ಲಿದ್ದರು (1 ಕೊರಿ. 4:11). ಆದರೆ ಅವರು ಎಂದೂ ಸಾಲ ತೆಗೆದುಕೊಳ್ಳಲಿಲ್ಲ. ಭಿಕ್ಷೆ ಬೇಡಲಿಲ್ಲ. ದೇವರು ತಮ್ಮ ಅವಶ್ಯಕತೆಯನ್ನು ನೆರವೇರಿಸಲು ಆತನಲ್ಲಿ ಭರವಸವಿಟ್ಟಿದ್ದರು ಮತ್ತು ದೇವರು ಹಾಗೆಯೇ ಮಾಡಿದರು. ದೇವರು ತನ್ನ ನಂಬಿಗಸ್ತರಾದ ಮಕ್ಕಳಿಗೆ ಎಂದೂ ಮರೆಯಲಾರನು, ಅಗತ್ಯವಿದ್ದರೆ ಆತನು ಎಲೀಯನಿಗೆ ಕಾಗೆಗಳ ಮೂಲಕ ಒದಗಿಸಿದಂತೆಯೇ ಒದಗಿಸಿಕೊಡುವನು.
ಇಸ್ರಾಯೇಲರು ಐಗುಪ್ತದ ಕಡೆಗೆ ಸಹಾಯಕ್ಕಾಗಿ ಮೊರೆಯಿಟ್ಟಾಗ, ಅವರು ಸಂಕಟಪಟ್ಟರು. ದೇವರು ಅವರನ್ನು ತನ್ನ ಕಡೆ ತಿರುಗಿಸಿಕೊಳ್ಳ ಬಯಸಿದನು. ನಾವು ನಂಬಿಕೆಯಿಂದ- ನಮ್ಮ ಹಣದ ಕಷ್ಟವನ್ನು ದೇವರ ಬಳಿ ಪ್ರಾರ್ಥಿಸಿದ್ದೇವೋ? ಅಥವಾ ನಾವು ನಾಸ್ತಿಕರಂತೆ ನಟಿಸಿದ್ದೇವೋ? (ಯೆಶಾಯ 30:7-21 ಹಾಗೂ ಕೀರ್ತನೆ 121 ಓದಿರಿ). ದೇವರು ನಮ್ಮನ್ನು ತೊರೆಯುವುದಿಲ್ಲವೆಂದು ಹೇಳಿರುವುದರಿಂದ, ದೇವರು ನಮಗೆ ಕೊಟ್ಟಿರುವುದರಲ್ಲಿ ತೃಪ್ತರಾಗಿರಬೇಕು ಮತ್ತು ನಾವು ಇತರ ವಿಶ್ವಾಸಿಗಳೊಂದಿಗೆ ನಮ್ಮನ್ನು ಹೋಲಿಸಿಕೊಳ್ಳಬಾರದು.
ಸಾಲದಲ್ಲಿರುವ ಪ್ರತಿಯೊಬ್ಬರೂ ಈ ಮೇಲಿನ ವಿಷಯಗಳಲ್ಲಿ ಪರೀಕ್ಷಿಸಿಕೊಂಡು, ತಮ್ಮನ್ನು ಸರಿಪಡಿಸಿಕೊಳ್ಳುವುದು ಪ್ರಾಮುಖ್ಯವಾಗಿದೆ. ಒಂದು ವೇಳೆ ನೀವು ಕ್ರೈಸ್ತ ನಾಯಕರು ಇಲ್ಲವೇ ಹಿರಿಯರಾಗಿದ್ದು ಸಾಲದಲ್ಲಿದ್ದವರಾಗಿದ್ದರೆ, ನೀವು ಇತರರಿಗಿಂತ ಹತ್ತು ಬಾರಿ ಹೆಚ್ಚಾಗಿಯೇ ನಿಮ್ಮನ್ನು ತೀರ್ಪುಮಾಡಿಕೊಳ್ಳಬೇಕು. ಸಾಲದಲ್ಲಿರುವವರು ದೇವರ ಸೇವಕರಾಗಿ ದೇವ ಜನರ ಮೇಲೆ ಅಧಿಕಾರ ನಡಿಸುವುದಕ್ಕೆ ಯೋಗ್ಯವಿಲ್ಲದವರು.
ಹಾಗಾದರೆ ನಾವು ಎನು ಮಾಡಬೇಕು? ನಾವು ತೀವ್ರ ಸುಧಾರಣೆಯವರಾಗಿರಬೇಕು. ಸಾಲದಲ್ಲಿರುವುದು ದೇವರ ವಾಕ್ಯಕ್ಕೆ ಅವಿಧೇಯರಾಗಿ ಪಾಪ ಮಾಡುವುದು ಎಂಬುದನ್ನು ನಾವು ತಿಳಿಯಬೇಕು (ಆಧಾರ - ರೋಮಾ 13:18). ಸಾಲದಲ್ಲಿ ಜೀವಿಸುವುದು ಪಾಪದಲ್ಲಿ ಜೀವಿಸುವುದಾಗಿರುತ್ತದೆ. ತೀವ್ರ ಸುಧಾರಣೆಯವರಾಗಿರುವುದು ಅಂದರೆ, ಪಾಪದಿಂದ ತಪ್ಪಿಸಲು ಬಲಗೈ ಇಲ್ಲವೆ ಬಲಗಣ್ಣನ್ನು ಕಿತ್ತುಹಾಕುವುದಾಗಿರುತ್ತದೆ. ನಾವು ಸಾಲವನ್ನು ತೀರಿಸಲು ಕೂಡಲೇ ಕೆಲವು ಸಂಗತಿಗಳನ್ನು ಮಾಡಬೇಕೆಂಬುದು ಇದರ ಅರ್ಥವಾಗಿರುತ್ತದೆ. ಮೊಟ್ಟ ಮೊದಲು ತಿಂಗಳಿಗೆ ಅವಶ್ಯವಾದದ್ದನ್ನು ಬಿಟ್ಟು ನಮ್ಮ ಬ್ಯಾಂಕಿನಲ್ಲಿರುವುದನ್ನೆಲ್ಲಾ ಖಾಲಿ ಮಾಡಬೇಕು. ತರುವಾಯ ನಮ್ಮಲ್ಲಿರುವ ಬಂಗಾರ ಅಥವಾ ಬೆಳ್ಳಿಯನ್ನು ಮಾರಾಟಮಾಡಿ ನಮ್ಮ ಸಾಲವನ್ನು ತೀರಿಸಬೇಕು. ನಮ್ಮ ಸಾಲವನ್ನು ಬೇಗನೇ ತೀರಿಸಲು ಪ್ರತಿ ತಿಂಗಳ ಖರ್ಚುಗಳನ್ನು ಕಡಿಮೆ ಮಾಡಬೇಕು. ನಾವು ಪೂರ್ಣ ಹಣವನ್ನು ಕೂಡಿಸಿ ಕೊಡುವುದಕ್ಕಾಗಿ ಎಂದೂ ಕಾಯಬಾರದು. ಪ್ರತಿ ತಿಂಗಳು ನಮ್ಮಿಂದ ಆದಷ್ಟು ಮಟ್ಟಿಗೆ ಉಳಿತಾಯವನ್ನು ಕೊಟ್ಟು ಸಾಲ ತೀರಿಸಬೇಕು.
ಈ ವಿಷಯದಲ್ಲಿ ನಾವು ತೀವ್ರವಾದಿಗಳಾಗಿದ್ದರೆ ದೇವರು ನಮಗೆ ಸಹಾಯ ಮಾಡುವನು. ಅನೇಕರು ಈ ವಿಷಯದಲ್ಲಿ ಅಜಾಗರೂಕತೆಯಿಂದಿರುವುದರಿಂದ, ದೇವರು ತಾನೇ ಅಂಥವರಿಗೆ ಸಹಾಯ ಮಾಡದೆ ಇದ್ದಾನೆ. ಆತನಿಗೆ ಪೂರ್ಣ ಮನಸ್ಸಿನಿಂದ ವಿಧೇಯರಾಗಲು ಬಯಸುವವರಿಗೆ ಮಾತ್ರ ದೇವರು ತನ್ನ ಸಹಾಯವನ್ನು ನೀಡುವನು.
ಒಂದು ವೇಳೆ ನಾವು ನಮ್ಮ ಸಾಲವನ್ನು ತೀರಿಸಲು ಈ ಕ್ರಮಗಳನ್ನು ಕೈಗೊಳ್ಳದಿದ್ದರೆ, ನಾವು ತೀವ್ರ ಸುಧಾರಣೆಯ ಕ್ರೈಸ್ತರಲ್ಲ ಮತ್ತು ಕರ್ತನಾದ ಯೇಸುವಿನ ಶಿಷ್ಯರಲ್ಲಿ. ನಾವು ಜೀವಮಾನವೆಲ್ಲಾ ಶರೀರಾಧೀನ ಸ್ವಭಾವದ ಕ್ರೈಸ್ತರಾಗಿರುವಂತೆ ದೇವರು ನಮ್ಮನ್ನು ಬಿಟ್ಟುಬಿಡುವನು.
ದೇವರನ್ನು ಸನ್ಮಾನಿಸುವವರನ್ನು ಆತನು ಸನ್ಮಾನಿಸುವನು.
ತಮ್ಮ ಗತಕಾಲದಲ್ಲಿ ಸೋತು ಹೋದವರನ್ನು ಖಂಡಿಸಲು ಈ ಪ್ರಬಂಧವು ಬರೆಯಲ್ಪಡಲಿಲ್ಲ. ದೇವರ ಸಭೆಯಲ್ಲಿ ನಾವು ಗತಕಾಲವನ್ನು ಕುರಿತು ಮಾತಾಡದೆ ಭವಿಷ್ಯವನ್ನು ಕುರಿತೇ ಮಾತಾಡಬೇಕು. ಗತಕಾಲದ ವಿಷಯದಲ್ಲಿ ದೇವರು ಕ್ಷಮಿಸುವಾತನಾಗಿದ್ದಾನೆ. ಆದರೆ ನಾವು ಭವಿಷ್ಯದಲ್ಲಿ ಆತನಿಗೆ ಭಯ ಪಡುವವರಾಗಿರಬೇಕೆಂದು ದೇವರು ನಮ್ಮನ್ನು ಕ್ಷಮಿಸುವಾತನಾಗಿದ್ದಾನೆ (ಕೀರ್ತ 130:4).
ಕಿವಿಯುಳ್ಳವರು ಇದನ್ನು ಕೇಳಲಿ!