ಲೂಕ 18:1ರಲ್ಲಿ ಯೇಸು ತಮ್ಮ ಶಿಷ್ಯಂದಿರಿಗೆ ”ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥಿಸತಕ್ಕದ್ದು” ಎಂಬುದಾಗಿ ಹೇಳಿದರು.
ಪಟ್ಟುಬಿಡದ ವಿಧವೆಯ ಕುರಿತು ಸಾಮ್ಯವನ್ನು ಯೇಸು ಹೇಳತೊಡಗಿದರು, ಆಕೆಯು ನ್ಯಾಯಾಧಿಪತಿಯ ಬಳಿಗೆ ನಿರಂತರವಾಗಿ ಹೋಗಿ ತನಗೆ ನ್ಯಾಯ ಕೊಡಿಸುವವರೆಗೂ ಪಟ್ಟು ಬಿಡದವಳಾಗಿದ್ದಳು. ನಂತರ ಯೇಸು ಹೇಳುತ್ತಾರೆ, ”ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಾಗ, ಆತನು ಅವರ ವಿಷಯದಲ್ಲಿ ಬಹಳವಾಗಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಆತನು ಬೇಗನೆ ಅವರಿಗೆ ನ್ಯಾಯ ತೀರಿಸುವನೆಂದು ನಾನು ನಿಮಗೆ ಹೇಳುತ್ತೇನೆ. ಆದಾಗ್ಯೂ ಮನುಷ್ಯಕುಮಾರನು ಬಂದಾಗ, ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ ಅಂದನು” (ಲೂಕ 18:7-8).
ಕಳೆದ ಸುಮಾರು ಒಂದು ತಿಂಗಳಿನಲ್ಲಿ, ಯೇಸು ಕೊಟ್ಟಂತ ಈ ಪ್ರೋತ್ಸಾಹದ ಮಾತು ನನ್ನ ಹೃದಯವನ್ನು ನಾಟುವಂತೆ ದೇವರು ಮಾಡಿದರು.
ನಮ್ಮ ಸಭೆಯಲ್ಲಿ, ಪೋಷಕರು ತಮ್ಮ ಮಕ್ಕಳಿಗಾಗಿ ಕ್ರಮವಾಗಿ, ಸ್ಥಿರವಾಗಿ ಪ್ರಾರ್ಥಿಸುತ್ತಿರಬೇಕು ಎಂದು ಸಹೋದರ ಜ್ಯಾಕ್ ರವರು ಹೇಳಿದ್ದನ್ನು ನಾವು ಹಲವು ಬಾರಿ ಕೇಳಿಸಿಕೊಂಡಿರುತ್ತೇವೆ.
ನಾನು ಆ ರೀತಿಯಾಗಿ ನನ್ನ ಹೆಂಡತಿಯೊಟ್ಟಿಗೆ ಪ್ರಾರ್ಥಿಸಲು ಪ್ರಯತ್ನಿಸಿದೆ ಮತ್ತು ಒಂದು ಹಗ್ಗದಿಂದ ಯಾರನ್ನಾದರೂ ಕಟ್ಟಿದರೆ ಅದು ತಡೆಯುವಂತೆ, ಪ್ರಾರ್ಥನೆಯು ಸಹ ಅವರು ದಾರಿ ತಪ್ಪದಂತೆ ತಡೆಯುತ್ತದೆ - ಅದು ನಮ್ಮ ಸಂರಕ್ಷಣೆ, ಎಂಬುದಾಗಿ ನಾನು ಕಂಡುಕೊಂಡೆ. ಎಲ್ಲವನ್ನೂ ಮಾಡಿದ ನಂತರ ಕೊನೆಯಲ್ಲಿ - ನನ್ನ ಮಕ್ಕಳು ದೊಡ್ಡವರಾಗಿ, ನಮ್ಮ ಮನೆಯಿಂದ ಬೇರೆ ಕಡೆ ಹೋದಾಗ, ನಾವು ನಮ್ಮ ಮಕ್ಕಳನ್ನು ಬೆಳೆಸಿರುವಂತ ರೀತಿಯನ್ನು ತಿರುಗಿ ನೋಡುವಾಗ, ನಾವು ಅನೇಕ ತಪ್ಪುಗಳನ್ನು ಮಾಡಿರುತ್ತೇವೆ; ಆದರೂ ನಾವು ನಮ್ಮ ಮಕ್ಕಳಿಗಾಗಿ ಸ್ಥಿರವಾಗಿ ಪ್ರಾರ್ಥಿಸಿದೆವು, ಎಂದು ಹೇಳುವುದಕ್ಕಾದರೂ ಶಕ್ತರಾಗಿರುತ್ತೇವಾ? ಹಾಗಿದ್ದರೆ, ನಾವು ಹಿಂದೆ ಮಾಡಿದಂತಹ ತಪ್ಪುಗಳನ್ನು, ಕೊರತೆಗಳನ್ನು ಮತ್ತು ಪಾಪಗಳನ್ನು ಮುಚ್ಚಿಹಾಕಲು ಅಷ್ಟೇ ಸಾಕಾಗುತ್ತದೆ.
ನಾನು ನನ್ನ ಜೀವಿತದಲ್ಲಿ, ನನಗಾಗಿ ಮತ್ತೊಬ್ಬರಾಗಲಿ, ನನ್ನ ಪೋಷಕರಾಗಲಿ ಪ್ರಾರ್ಥಿಸಿದಾಗ ಸಿಕ್ಕಿದ ಪರಿಣಾಮ ಏನೆಂದು ನೋಡಿದ್ದೇನೆ, ಹಾಗಾಗಿ ನಾನು ನನ್ನ ಮಕ್ಕಳಿಗಾಗಿ ಪ್ರಾರ್ಥಿಸುವಾಗ ಸಿಗಲಿರುವ ಕರ್ತನ ನಂಬಿಗಸ್ತಿಕೆಯ ಉತ್ತರದ ಬಗ್ಗೆ ನನಗೆ ಮನವರಿಕೆಯಾಗಿದೆ. ನಾನು ಅವರಿಗಾಗಿ ಪ್ರಾರ್ಥಿಸುವಾಗ ಬೇಸರಗೊಳ್ಳದಿರಲು ಅಥವಾ ಅವರು ಹೊಸದಾಗಿ ಹುಟ್ಟುವ ವರೆಗೆ ಪ್ರಾರ್ಥನೆಯನ್ನು ನಿಲ್ಲಿಸದಿರಲು, ಅವರು ಶಿಷ್ಯಂದಿರಾಗಬೇಕು ಎಂದು ನಿಲ್ಲಿಸದೇ ಪ್ರಾರ್ಥಿಸುವ ಸಲುವಾಗಿ ನನ್ನ ಮನಸ್ಸನ್ನು ಸಿದ್ಧಮಾಡಿಕೊಳ್ಳುತ್ತೇನೆ.
ಆದರೆ, ಒಂದು ದಿನ ಒಂದು ಯೋಚನೆ ನನಗೆ ಬಂತು, ಅದು ಕರ್ತನಿಂದಾದ ಮನವರಿಕೆಯೆಂದು ನಾನು ನಂಬಿದ್ದೇನೆ - ಅದೇನೆಂದರೆ, ನಾನು ನನ್ನ ಮಕ್ಕಳಿಗಾಗಿ ಹೀಗೆ ಪ್ರಾರ್ಥಿಸುವುದಾದಲ್ಲಿ, ಇದೇ ತರಹದ ನಂಬಿಕೆಯಿಂದ - ಛಲ ಬಿಡದೆ, ಕ್ರಮವಾಗಿ ಮತ್ತು ಸ್ಥಿರವಾಗಿ - ಇನ್ನಿತರೆ ಮುಖ್ಯವಾದ ಸಂಗತಿಗಳಿಗಾಗಿ ನಾನು ಏಕೆ ಪ್ರಾರ್ಥಿಸಬಾರದು? ವಿಶೇಷವಾಗಿ, ನನ್ನ ಪಾಪದ ವಿರುದ್ಧವಾಗಿ ಮತ್ತು ನನ್ನೊಳಗೆ ಬಹುಕಾಲದಿಂದ ಹುದುಗಿರುವ ಕ್ರಿಸ್ತನ ಮನೋಭಾವಕ್ಕೆ ಹೋಲದ ಪ್ರವೃತ್ತಿಯ ವಿರುದ್ಧವಾಗಿ ಪ್ರಾರ್ಥಿಸಬಾರದಾ?
ಉದಾಹರಣೆಗೆ, ನನ್ನ ಹೃದಯದಲ್ಲಿ ನಾನು ಕಾಣುವ ಈ ಪಾಪಗಳಿಗಾಗಿ - ಕೊನೆಗೊಳ್ಳದ ಅಸಹನೆ, ಮತ್ತೊಬ್ಬರ ವಿಷಯವಾಗಿ ಕಹಿಭಾವನೆ ಅಥವಾ ಹಣದ ವಿಷಯವಾಗಿ ನನ್ನಲ್ಲಿರುವ ಸೂಕ್ಷ್ಮವಾದ ಪ್ರೀತಿ ಮತ್ತು ಅದಕ್ಕಾಗಿ ಆಗಾಗ ಉಂಟಾಗುವ ದುರಾಶೆಯ ಯೋಚನೆಗಳು, ಆಹಾರಕ್ಕೆ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳಿಗೆ (ನನ್ನ ಮೊಬೈಲ್) ದಾಸನಾಗಿರುವುದು, ಅಥವಾ ಸ್ವಲ್ಪ ಸ್ವಾರ್ಥ, ಸ್ವಲ್ಪ ಸೋಮಾರಿತನ, ಬತ್ತಿಹೋದ ಆತ್ಮಿಕತೆ ಮತ್ತು ಕರ್ತನಿಗಾಗಿ ಹೊಂದಿರಬೇಕಾದ ಪ್ರೀತಿಯ ಕೊರತೆ - ಇವುಗಳಿಂದ ಬಿಡುಗಡೆ ಹೊಂದಲು ದೇವರು ಸಹಾಯ ಮಾಡುವವರೆಗೆ ನಾನು ಸತತವಾಗಿ ಪ್ರಾರ್ಥಿಸುವುದಕ್ಕೆ ಸಿದ್ಧನಾಗಿರುವೆನೇ?
ನನ್ನ ಮಕ್ಕಳ ರಕ್ಷಣೆಗಾಗಿ ಬೇಕಾದಷ್ಟು ನಂಬಿಕೆ ಮತ್ತು ಭಾರ ನನಗಿದೆ. ನನ್ನ ಪಾಪಗಳಿಂದ ನನ್ನ ಸ್ವಂತ ರಕ್ಷಣೆಯು (ಇಂದು ನನ್ನಲ್ಲಿ ಪ್ರಸ್ತುತ ಹುದುಗಿರುವ ಪಾಪಗಳಿಂದ ರಕ್ಷಿಸಲ್ಪಡುವುದು) ಅಷ್ಟೇ ಮುಖ್ಯವಲ್ಲವಾ ಮತ್ತು ಅವಶ್ಯಕತೆ ಇದ್ದಲ್ಲಿ, ನನ್ನ ಜೀವಿತದ ಕೊನೆಯ ವರೆಗೂ ಇದಕ್ಕಾಗಿ ನಿರಂತರ ಪ್ರಾರ್ಥನೆಯ ಅವಶ್ಯಕತೆ ಇದೆ ಅಲ್ಲವೇ?!
ಇತ್ತೀಚೆಗೆ ಈ ಯೋಚನೆಯು ನನ್ನನ್ನು ಸಂಪೂರ್ಣವಾಗಿ ನಾಟಿತು ಮತ್ತು ನನ್ನ ಪ್ರಾರ್ಥನಾ ಜೀವಿತವನ್ನು ಬದಲಾಯಿಸಿತು - ನಾನು ಪ್ರಾರ್ಥನೆ ಮಾಡುವುದಾದಲ್ಲಿ ಮತ್ತು ಪ್ರಾರ್ಥನೆಯನ್ನು ನಿಲ್ಲಿಸದಿದ್ದಲ್ಲಿ, ಕರ್ತನು ನಿಶ್ಚಿತವಾಗಿ ಉತ್ತರ ಕೊಡುತ್ತಾನೆ.
ಈ ಪ್ರಾರ್ಥನೆಗಳು ಮತ್ತೊಬ್ಬರಿಗಾಗಿಯೂ ಸಹ ಇರಬಹುದು. ನಾನು ಮತ್ತೊಬ್ಬರಲ್ಲಿ ದಾಸತ್ವ ಅಥವಾ ಯಾವುದೋ ಪಾಪ ಇರುವುದನ್ನು ನಾನು ನೋಡುವಾಗ, ಅವರು ಆ ಪಾಪಗಳಿಂದ ಬಿಡುಗಡೆ ಕಾಣುವುದಕ್ಕೆ ನಾನು ಭಾರ ಹೊಂದಿರುತ್ತೇನೆ. ಹಡ್ಸನ್ ಟೈಲರ್ ರವರು ಹೇಳಿದಂತ ಮಾತನ್ನು ನಾನು ಯಾವಾಗಲೂ ನೆನೆಪಿಸಿಕೊಳ್ಳುತ್ತಿರುತ್ತೇನೆ, ಅದೇನೆಂದರೆ, "ಕೇವಲ ಪ್ರಾರ್ಥನೆಯ ಮೂಲಕ ಒಬ್ಬ ಮನುಷ್ಯನನ್ನು ಹೇಗೆ ನಡೆಸುವುದು ಎಂಬುದನ್ನು ನಾನು ಕಲಿತುಕೊಂಡಿದ್ದೇನೆ" ಎಂಬುದಾಗಿ. ಮತ್ತೊಬ್ಬ ವ್ಯಕ್ತಿಯ ಹೃದಯದೊಳಗೆ ಕಾರ್ಯ ಮಾಡುವಂತೆ ಕರ್ತನನ್ನು ನಾನು ನಿರಂತರವಾಗಿ ಮೊರೆಯಿಡಲು ಸಾದ್ಯವಿಲ್ಲವಾ? ಅಂದರೆ, ದಾರಿತಪ್ಪಿರುವ ಒಬ್ಬ ಆತ್ಮೀಯ ವ್ಯಕ್ತಿಗಾಗಿ, ನನ್ನ ಸಹೋದ್ಯೋಗಿಗಾಗಿ? ನನ್ನ ಸಹೋದರನು ಪಾಪ, ದಾಸತ್ವ, ನಿರುತ್ಸಾಹ ಅಥವಾ ಖಂಡನೆಯಲ್ಲಿ ಕಷ್ಟಪಡುತ್ತಿದ್ದರೆ, ಆತನ ಹೃದಯದಲ್ಲಿ ಚಲಿಸುವಿಕೆ ಆಗಲಿ ಎಂದು ನಿರಂತರವಾಗಿ ನಾನು ಕರ್ತನನ್ನು ಮೊರೆಯಿಡಬಾರದಾ? ಮತ್ತೊಬ್ಬರಿಗೆ ಆಹಾರ ಕೊಡಲಿಕ್ಕಾಗಿ ಸತತವಾಗಿ ನಾವು ಬಾಗಿಲನ್ನು ತಟ್ಟಿದಲ್ಲಿ, ಕರ್ತನು ಸಹ ಉತ್ತರ ನೀಡುತ್ತಾನೆ!! ಮತ್ತೊಬ್ಬರ ವಿಷಯಕ್ಕೆ ಸಂಬಂಧಿಸಿದಂತೆ, ಮಧ್ಯರಾತ್ರಿಯಲ್ಲಿ ಸ್ನೇಹಿತನ ಬಳಿಗೆ ಹೋಗುವಂತ ಸಾಮ್ಯದಲ್ಲಿ ಯೇಸು ಇದನ್ನೇ ಹೇಳಿದ್ದಾರೆ (ಲೂಕ 11:5-8)!
ನನ್ನ ಕುಟುಂಬದ ನಿಮಿತ್ತವಾಗಿ, ನಾನು ಮತ್ತೊಬ್ಬರ ಮೇಲೆ ಪ್ರಭಾವಬೀರುವ ಅಗತ್ಯತೆ ಇರಬಹುದು. ನನ್ನ ಮಕ್ಕಳು ಓದುವಂತ ಶಾಲೆಯು ನನ್ನ ಮಗುವಿನ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ಗುರುತಿನ ಪತ್ರವನ್ನು ಕಳೆದು ಹಾಕಿರಬಹುದು, ಇದರಿಂದಾಗಿ ನನ್ನ ಮಗು ತಪ್ಪಾದ ಶಾಲೆಗೆ ಹೋಗುವಂತ ಸಾಧ್ಯತೆ ಇರಬಹುದು. ದೂರುವಿಕೆಯು ಒಂದು ಪಾಪವಾಗಿದೆ ಮತ್ತು ದೂರುವುದರಿಂದ ಏನು ಉಪಯೋಗ ಕೂಡ ಇಲ್ಲ. ಇದಕ್ಕೆ ಬದಲಾಗಿ, ನಾನು "ಕೇವಲ ಪ್ರಾರ್ಥನೆಯಿಂದ ಒಬ್ಬ ಮನುಷ್ಯನನ್ನು ಈ ವಿಷಯವಾಗಿ ನಡೆಸಬಹುದಾ?" ಒಂದು ಬ್ಯಾಂಕ್ ತಪ್ಪೆಸಗಿರಬಹುದು ಮತ್ತು ಇದರಿಂದ ಹೆಚ್ಚಿನ ಹಣವು ಕಡಿತವಾಗಬಹುದು, ಆ ಹಣವು ನನ್ನ ಕುಟುಂಬಕ್ಕೆ ಮತ್ತು ನನಗೆ ತೀರಾ ಅಗತ್ಯತೆಯುಳ್ಳದ್ದಾಗಿರಬಹುದು, ಆಗ ಇದನ್ನು ಸರಿಪಡಿಸುವಂತೆ ಸಹಾಯ ಮಾಡಲು ಸರಿಯಾದ ವ್ಯಕ್ತಿಯು ನನಗೆ ಸಿಗದೇ ಇರಬಹುದು. ಕೇವಲ ಪ್ರಾರ್ಥನೆಯ ಮೂಲಕ ಆ ಸರಿಯಾದ ವ್ಯಕ್ತಿಯನ್ನು ಈ ವಿಷಯ ಸರಿಪಡಿಸುವಂತೆ ನಡೆಸಬಹುದಾ? ದೇವರು ಸಹಾಯ ಮಾಡುವವರೆಗೆ ಪ್ರಾರ್ಥನೆ ಮಾಡುತ್ತಿರಬಹುದಾ?
ಕರ್ತನ ಮೇಲೆಯೇ ಆತುಕೊಳ್ಳುವಂತ ಮತ್ತು ಆತನನ್ನು ಬಿಡದಿರುವಂತ ನಂಬಿಕೆಯನ್ನು ಕರ್ತರು ನೋಡಲು ಇಷ್ಟಪಡುತ್ತಾರೆ ಎಂದು ನಾನು ನಂಬುತ್ತೇನೆ. ಏಕೆಂದರೆ ದೇವರನ್ನು ಮೆಚ್ಚಿಸುವಂತದ್ದು ನಂಬಿಕೆ ಮಾತ್ರ (ಇಬ್ರಿಯ 11:6).
ಲೋಕವು, ಉಚಿತವಾಗಿ ಕೆಲ ಸಂಗತಿಗಳನ್ನು ಒದಗಿಸುವಾಗ (ಆಹಾರ, ಹಣ, ಲೌಕಿಕ ವಸ್ತುಗಳ ಮೇಲೆ ರಿಯಾಯಿತಿ, ಇತರೆ), ಇರುವೆಗಳು ಸೇರುವ ಹಾಗೆ, ಈ ಒದಗಿಸುವಿಕೆಯ ಸುತ್ತ ಗುಂಪು ಸೇರುತ್ತದೆ! ಅಮೇರಿಕದಲ್ಲಿ ”ಬ್ಲಾಕ್ ಫ್ರೈಡೇ” ದಿನ ಎಂದು ಕರೆಯುತ್ತಾರೆ - ಆ ದಿನ ದೇಶದ ಅನೇಕ ಅಂಗಡಿಗಳಲ್ಲಿ ಹೆಚ್ಚಿನ ರಿಯಾಯಿತಿಗೆ ಮಾರಾಟವಿರುತ್ತದೆ. ಆ ದಿನದಂದು ಅತಿ ಹೆಚ್ಚು ಸಂಖ್ಯೆಯಲ್ಲಿ ಜನರು ವರ್ಷಕ್ಕೆ ಒಂದು ಬಾರಿಯಾದರೂ ಸ್ವಲ್ಪ ಹಣ ಅಥವಾ ಕೆಲವು ಡಾಲರ್ ಗಳನ್ನು ಉಳಿಸಲು ಬೆಳಗ್ಗೆ ಬೇಗನೇ ಎದ್ದು ವಸ್ತುಗಳನ್ನು ಕೊಂಡುಕೊಳ್ಳಲು ಹೊರಡುತ್ತಾರೆ. ಇನ್ನೂ ಕೆಲವರು ರಾತ್ರಿಯೆ ಅಲ್ಲಿ ಬಿಡಾರವನ್ನು ಹೂಡಿ ಬಿಡುತ್ತಾರೆ. ದೇವರು ಕೊಡುವಂತ ಸಂಗತಿಗಳನ್ನು ಪಡೆದುಕೊಳ್ಳಲು ದೇವರ ಸಿಂಹಾಸನದ ಬಳಿಗೆ ದೇವರ ಮಕ್ಕಳು ಹಿಂಡುಹಿಂಡಾಗಿ ನುಗ್ಗದೇ ಇರುವಂತದ್ದು ಆಶ್ಚರ್ಯಕರವಲ್ಲವಾ? ಈ ರೀತಿ ಯಾಕೆ ದೇವರ ಮಕ್ಕಳು ನುಗ್ಗುತ್ತಿಲ್ಲ ಎಂದರೆ, ಯೇಸು 8ನೇ ವಚನದಲ್ಲಿ ಹೇಳಿರುವ ಪ್ರಕಾರ, ನಂಬಿಕೆ ಇಲ್ಲದೇ ಇರುವಂತದ್ದು, ”ಮನುಷ್ಯಕುಮಾರನು ಬಂದಾಗ, ಈ ರೀತಿಯಾದ ನಂಬಿಕೆಯನ್ನು ಕಾಣುವನೇ (ಛಲದಿಂದ ರುಜುವಾತದ ನಂಬಿಕೆ ಮತ್ತು ಪಡೆದುಕೊಳ್ಳುವ ವರೆಗೂ ನಿಲ್ಲಿಸದೇ ಇರುವಂತ ನಂಬಿಕೆ)”.
"ದೇವರ ಮಕ್ಕಳು ಹೊಂದದೇ ಇರುವ ಆಶೀರ್ವಾದಗಳ ಪರ್ವತವನ್ನು ಕಂಡು ದೇವದೂತರು ಆಘಾತಕ್ಕೊಳಗಾಗಬಹುದು, ಏಕೆಂದರೆ ಮಕ್ಕಳು ದೇವರ ಬಳಿ ಬಂದು ಕೇಳದ ಕಾರಣ ಅವೆಲ್ಲವೂ ಪರಲೋಕದಲ್ಲಿ ಹಾಗೆಯೇ ಉಳಕೊಂಡಿವೆ," ಎಂದು ಒಬ್ಬರು ಒಮ್ಮೆ ಹೇಳುವಂತದ್ದನ್ನು ನಾನು ಕೇಳಿದ್ದೀನಿ.
ಅದರಂತೆ, ಕೆಲವು ಅಪರೂಪದ ದೇವಭಕ್ತರು ಬಿಟ್ಟುಕೊಡದೆ ಪ್ರಾರ್ಥಿಸುತ್ತಾರೆ ಹಾಗೂ ಎಲ್ಲಾ ಪ್ರಯತ್ನಗಳನ್ನು ಮಾಡಿ ಆ ಸಂಪತ್ತನ್ನು ಪಡೆದುಕೊಳ್ಳುತ್ತಾರೆ. ಇದನ್ನು ನೋಡಿ ಪರಲೋಕದಲ್ಲಿ ತುಂಬಾ ಸಂತೋಷವಿರಬೇಕು. ಆಗ ದೇವದೂತರು ಹೀಗೆ ಹೇಳಬಹುದು, “ಅಂತಿಮವಾಗಿ!!!! ಕೆಲವರು ದೇವರು ಕೊಡುವಂತ ವಿಶಾಲವಾದ ನಿತ್ಯತ್ವದ ಮೌಲ್ಯವನ್ನು ಕಂಡುಕೊಂಡರಲ್ಲ!!”
ಮತ್ತು ಈ ಜನರು ಹೊರನೋಟಕ್ಕೆ ಉತ್ಸಾಹಭರಿತರಾಗಿ ಅಥವಾ ಅತ್ಯಾಸಕ್ತರಾಗಿ ಕಾಣಿಸುವುದಿಲ್ಲ. ಅದು ಅವರ ವ್ಯಕ್ತಿತ್ವವಾಗಿರಬಹುದು. ವ್ಯಕ್ತಿಗಳ ವ್ಯಕ್ತಿತ್ವ ಮತ್ತು ಭಾವನೆಗಳಿಂದ ನಿಜವಾದ ಉತ್ಸಾಹವನ್ನು ತೋರಿಸಲಾಗುವುದಿಲ್ಲ. ನಿಜವಾದ ಉತ್ಸಾಹ ಮತ್ತು ನಂಬಿಕೆಯು ಛಲ ಬಿಡದೇ ಕೇಳುವುದರಿಂದ ಸಾಬೀತಾಗುವಂತದ್ದಾಗಿದೆ.
ನಂಬಿಕೆ ಎಂದರೆ ಭಾರ ಎಂದರ್ಥ. ದೇವರು ಏನಾದರೂ ಮಾಡುವ ವರೆಗೂ, ನಾವು ಸಾಯುವ ದಿನದ ವರೆಗಾದರೂ ಸರಿ ನಾವು ಪ್ರಾರ್ಥಿಸುತ್ತೇವೆ, ಭಾರ ಎಂದರೆ ಇದೇ ಆಗಿದೆ. ನಿಜವಾದ ನಂಬಿಕೆ ಮತ್ತು ಭಾರ ಎಂದರೆ ಅದು ಎಂದಿಗೂ ನಿಲ್ಲದೇ ಇರುವಂತದ್ದಾಗಿದೆ.
ದೇವರು ಉತ್ತರಿಸದಿದ್ದಾಗ ನಾವು ನಿರುತ್ಸಾಹಗೊಳ್ಳಬಹುದು, ಮತ್ತು ಏಕೆ ಎಂದು ಆಶ್ಚರ್ಯಪಡಬಹುದು, ಇದು ಎಲ್ಲಾ ಸಮಯ ಗ್ರಹಿಕೆಗೆ ಸಿಗಲಾರದು - ದೇವರು ವಿಳಂಬ ಮಾಡಲು ಕಾರಣ ಏನೆಂದರೆ, ನಾವು ಪ್ರಾರ್ಥಿಸುತ್ತಿರುವುದಕ್ಕೆ ಉತ್ತರಿಸುವುದಕ್ಕಿಂತ ಹೆಚ್ಚಿನದನ್ನು ದೇವರು ಏನೋ ಮಾಡುತ್ತಿದ್ದಾರೆ ಎಂಬುದಾಗಿ. ಆತನ ಮಾರ್ಗಗಳು ನಮ್ಮ ಮಾರ್ಗಗಳಿಗಿಂತ ಎಷ್ಟೋ ಉನ್ನತವಾಗಿವೆ (ಯೆಶಾಯ 55:9). ನಮ್ಮ ಪ್ರಾರ್ಥನೆಯ ಮೂಲಕ ನಮ್ಮ ಪರಿಸ್ಥಿತಿಯನ್ನು ಬದಲಾಯಿಸಲು ಮಾತ್ರ ದೇವರು ಬಯಸುವುದಿಲ್ಲ, ಆತನು ನಮ್ಮನ್ನು ಸಹ ಬದಲಾಯಿಸಲು ಬಯಸುತ್ತಾನೆ.
ಪ್ರಾರ್ಥನೆಯು ನಮ್ಮ ಪರಿಸ್ಥಿತಿಯನ್ನು ಮಾತ್ರ ಬದಲಾಯಿಸುವುದಿಲ್ಲ, ಅದು ನಮ್ಮನ್ನು ಬದಲಾಯಿಸುತ್ತದೆ!
ಯೇಸುವಿನ ಈ ಮಾತಿನ ಮೂಲಕ ದೇವರು ಇತ್ತೀಚೆಗೆ ನನ್ನ ಜೀವಿತವನ್ನು ಬದಲಾಯಿಸಿದ್ದಾರೆ ಮತ್ತು ಈ ಛಲ ಬಿಡದ ವಿಧವೆಯ ಈ ಸಾಮ್ಯದಲ್ಲಿ ದೇವರು ನನಗೆ ವಿಶ್ವಾಸವನ್ನು ಕೊಟ್ಟಿದ್ದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ, ನಾವು ಪ್ರಾರ್ಥನೆ ಮಾಡಿ, ಮನಗುಂದದಿದ್ದರೆ, ಸರಿಯಾದ ಸಮಯದಲ್ಲಿ ನಾವು ಭೇದಿಸಿ, ದೇವರು ನಮಗಿಟ್ಟುರುವಂತದ್ದನ್ನು ಆತ್ಮೀಕ ಬೆಟ್ಟದಿಂದ ಮುಕ್ತವಾಗಿ ತೆಗೆದುಕೊಳ್ಳಬಹುದು, ಅದು ಛಲ ಬಿಡದ ನಂಬಿಕೆಯನ್ನು ನಾವು ಹೊಂದಿದ್ದಲ್ಲಿ ಮಾತ್ರ.
ನೀವು ಯಾವುದೇ ಪಾಪವನ್ನು ಎದುರಿಸುತ್ತಿದ್ದರೂ, ಯಾವುದೇ ಒಳಗಿನ ಹೋರಾಟ ನಿಮ್ಮದಾಗಿದ್ದರೂ - ಸಂತೋಷದ ಕೊರತೆ, ಕೋಪ ಅಥವಾ ಕಾಮಕ್ಕೆ ದಾಸತ್ವ ಹೊಂದಿರುವುದು, ಚಿಂತೆ, ಭಯ, ದೇವರ ಕಡೆಗೆ ಉಗುರು ಬೆಚ್ಚಗಿರುವುದು - ಇನ್ನೊಬ್ಬರ ವಿಷಯವಾಗಿ ನೀವು ಯಾವುದೇ ಭಾರವನ್ನು ಹೊಂದಿರಬಹುದು, ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮದುವೆಯಲ್ಲಿ ಸೈತಾನನು ಯಾವುದೇ ಹಿಡಿತವನ್ನು ಹೊಂದಿರಬಹುದು, ನಿಮ್ಮ ಜೀವಿತ ಅಥವಾ ನಿಮ್ಮ ಕುಟುಂಬದಲ್ಲಿ ಯಾವುದೋ ಒಂದು ಅಗತ್ಯತೆ ಪೂರೈಸದೇ ಹಾಗೆಯೇ ಉಳಿದಿರಬಹುದು -
ಇಂದು ಲೂಕ18 ನೇ ಅಧ್ಯಾಯವನ್ನು ಬಿಡದೆ ಹಿಡಿಯಿರಿ ಮತ್ತು ದೇವರ ವಾಗ್ದಾನಗಳನ್ನು - ದೇವರು ನಿಮಗಾಗಿ ಮುಕ್ತವಾಗಿ ಇಟ್ಟಿರುವ ಸಂಪತ್ತನ್ನು ಭೇದಿಸಿ ತೆಗೆದುಕೊಳ್ಳುವ ವರೆಗೂ, “ಪ್ರಾರ್ಥಿಸಿರಿ ಮತ್ತು ಮನಗುಂದಬೇಡಿರಿ.” ಈ ವಿಷಯಗಳಿಗಾಗಿ ಒಂದೆರಡು ನಿಮಿಷಗಳಾದರೂ ಸಹ, ಪ್ರತಿನಿತ್ಯ ಪ್ರಾರ್ಥಿಸಿರಿ - ಮುಖ್ಯವಾದ ಸಂಗತಿ ಏನೆಂದರೆ, ಆ 2 ನಿಮಿಷಗಳಲ್ಲಿ ನಿಮ್ಮ ಹೃದಯದಿಂದ ಭಾರದಿಂದ ಪ್ರಾರ್ಥಿಸಿ ಮತ್ತು ನಿಯಮಿತವಾಗಿ, ಪ್ರತಿದಿನ ಪ್ರಾರ್ಥಿಸಿ, ನಿಲ್ಲಿಸಬೇಡಿ. ಇದು ವರ್ಷಗಳು ಅಥವಾ ದಶಕಗಳನ್ನು ತೆಗೆದುಕೊಂಡರೂ ಸಹ! ದೇವರು ಉತ್ತರ ನೀಡುತ್ತಾರೆ, ಇನ್ನೂ ಮುಖ್ಯವಾಗಿ, ನಿಮ್ಮ ಛಲ ಬಿಡದ ನಂಬಿಕೆಯಿಂದ ದೇವರು ಮಹಿಮೆಗೊಳ್ಳುತ್ತಾರೆ ಮತ್ತು ಅದಕ್ಕಾಗಿ ಸಂತೋಷಪಡುತ್ತಾರೆ.