ಹಣಕಾಸಿನ ವಿಚಾರದಲ್ಲಿ ಯೇಸುವು ನಮಗೆ ನೀಡಿರುವ ಒಂದು ಉದಾಹರಣೆಯು, ಆತನ ಸೇವೆ ಮಾಡುವ ಎಲ್ಲಾ ಜನರು ಹಾಗೂ ಎಲ್ಲಾ ಕ್ರೈಸ್ತಸಭೆಗಳು ಅವಶ್ಯವಾಗಿ ಅನುಸರಿಸಬೇಕಾದದ್ದು ಆಗಿದೆ.
ಯೇಸುವು ತನ್ನ 30ನೇ ವಯಸ್ಸಿನ ವರೆಗೆ ಬಡಗಿಯ ವೃತ್ತಿಯನ್ನು ಮಾಡುತ್ತಿದ್ದಾಗ, ಆತನು - ಪ್ರಾಮಾಣಿಕತೆಯಿಂದ, ಯಾರಿಗೂ ಮೋಸಮಾಡದೆ ಮತ್ತು ಸಾಲದ ಹಿಡಿತಕ್ಕೆ ಒಳಗಾಗದೆ - ಆ ಸಂಪಾದನೆಯ ಮೂಲಕ ಜೀವಿಸಿದನು.
ಇದರ ನಂತರ, ಆತನು ಮುಂದಿನ ಮೂರುವರೆ ವರ್ಷಗಳ ಕಾಲ ಪೂರ್ಣಾವಧಿಯ ದೇವರ ಸೇವೆ ಮಾಡಿದನು. ಅ ಅವಧಿಯಲ್ಲಿ, ಆತನು ಹಣಕಾಸಿನ ವಿಷಯದಲ್ಲಿ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಇರಿಸಿಕೊಂಡಿದ್ದನು. ಆತನ ಅಪೊಸ್ತಲರು ಈ ಪ್ರಮುಖ ನಿಯಮಗಳನ್ನು ಶಿಸ್ತಿನಿಂದ, ಚಾಚೂ ತಪ್ಪದೆ ಪಾಲಿಸಿದರು. ಕ್ರೈಸ್ತಸಭೆಯು "ಕ್ರಿಸ್ತನ ದೇಹ"ವಾಗಿದೆ, ಆದುದರಿಂದ ಅದು ಪ್ರಥಮ ಕ್ರಿಸ್ತನ ದೇಹ (ಅಂದರೆ, ಸ್ವತಃ ಯೇಸುವು) ಪಾಲಿಸಿದ ನಿಯಮಗಳನ್ನು ಅವಶ್ಯವಾಗಿ ಪಾಲಿಸಬೇಕು. ಎಲ್ಲಾ ಸಭೆಗಳು ಮತ್ತು ಕ್ರಿಸ್ತೀಯ ಸೇವೆಯಲ್ಲಿ ತೊಡಗಿರುವ ಎಲ್ಲರೂ ಇವೇ ನಿಯಮಗಳನ್ನು ಪಾಲಿಸುವದು ಅವಶ್ಯವಾಗಿದೆ.
ಹಣಕಾಸಿನ ಕುರಿತಾದ ಈ ಮೂಲತತ್ವಗಳು ಯಾವವು?
ಪ್ರಪ್ರಥಮವಾಗಿ, ಯೇಸುವು ಆತನ ಪರಲೋಕದ ತಂದೆಯ ಸೇವಕನಾಗಿದ್ದರಿಂದ, ಆತನು ಎಲ್ಲಾ ಲೌಕಿಕ ಅವಶ್ಯಕತೆಗಳ ಪೂರೈಕೆಗಾಗಿ ತನ್ನ ತಂದೆಯನ್ನು ಮಾತ್ರ ನಂಬಿದ್ದನು - ಅದು ಹೇಗೆಂದರೆ, ಒಂದು ಸಂಸ್ಥೆಯ ಕೆಲಸಗಾರನು ತನ್ನ ಪ್ರತಿಯೊಂದು ಆರ್ಥಿಕ ಅವಶ್ಯಕತೆಯನ್ನು ಆ ಸಂಸ್ಥೆಯು ನೋಡಿಕೊಳ್ಳುತ್ತದೆ ಎಂಬ ನಿರೀಕ್ಷೆಯನ್ನು ಇರಿಸಿಕೊಳ್ಳುವ ಹಾಗೆ. ಈ ಕಾರಣಕ್ಕಾಗಿ ಯೇಸುವು ತನ್ನ ಹಣಕಾಸಿನ ಅವಶ್ಯಕತೆಗಳನ್ನು ತನ್ನ ತಂದೆಗೆ ಹೊರತಾಗಿ ಇನ್ಯಾರಿಗೂ ಯಾವತ್ತೂ ತಿಳಿಸಲಿಲ್ಲ. ಆತನು ತನ್ನ ಸೇವೆಯ ಬಗ್ಗೆ ಎಲ್ಲೂ ಪ್ರಚಾರ ಮಾಡಲಿಲ್ಲ ಮತ್ತು ಯಾರಿಗೂ ತನ್ನ ಕೆಲಸದ ಬಗ್ಗೆ ವರದಿಗಳನ್ನು ಕಳುಹಿಸಿ ಅವರ ಸಹಾಯವನ್ನು ಯಾಚಿಸಲಿಲ್ಲ. ಯೇಸುವಿಗೆ ಕೆಲವು ಜನರು ಸ್ವೇಚ್ಛಾಪೂರ್ವಕವಾಗಿ ಕಾಣಿಕೆಗಳನ್ನು ನೀಡುವಂತೆ ಸ್ವತಃ ದೇವರು ಅವರನ್ನು ಪ್ರೇರೇಪಿಸಿದರು - ಮತ್ತು ಆತನು ಇಂತಹ ಕಾಣಿಕೆಗಳನ್ನು ಸ್ವೀಕರಿಸಿದನು. ಇವರಿಂದ ಪಡೆದ ಹಣದ ಚೀಲವನ್ನು ನಿರ್ವಹಿಸುವುದಕ್ಕೆ ಯೇಸುವು ಒಬ್ಬ ಕೋಶಾಧಿಕಾರಿಯನ್ನು (ಯೂದನನ್ನು) ನೇಮಿಸಿದನು.
ಲೂಕ 8:2,3ರಲ್ಲಿ ಹೀಗೆ ಬರೆಯಲ್ಪಟ್ಟಿದೆ: "ಮಗ್ದಲದವಳೆಂಬ ಮರಿಯಳು, ಯೋಹಾನಳು (ಹೆರೋದನ ಮನೆವಾರ್ತೆಯವನಾದ ಕೂಜನ ಹೆಂಡತಿ), ಸುಸನ್ನಳು, ಇನ್ನು ಬೇರೆ ಅನೇಕರು, ಇವರು ತಮ್ಮ ಆಸ್ತಿಯಿಂದ ಯೇಸು ಮತ್ತು ಆತನ 12 ಮಂದಿ ಶಿಷ್ಯರಿಗೆ ಕೊಟ್ಟು ಉಪಚಾರ ಮಾಡುತ್ತಿದ್ದರು." ಮತ್ತು ಯೇಸುವು ಅವರ ಕೊಡುಗೆಗಳನ್ನು ಸ್ವೀಕರಿಸಿದನು.
ಎರಡನೆಯದಾಗಿ, ಯೇಸುವು ಪಡಕೊಂಡ ಹಣವನ್ನು ಬಹಳ ಕಾಳಜಿಯಿಂದ ಉಪಯೋಗಿಸುತ್ತಿದ್ದನು. ನಮಗೆ ಯೋಹಾನ 13:29ರಲ್ಲಿ, ಯೇಸುವು ಹಣವನ್ನು ಹೇಗೆ ಉಪಯೋಗಿಸುತ್ತಿದ್ದನೆಂಬ ಒಂದು ಸೂಚನೆ ಸಿಗುತ್ತದೆ. ಅಲ್ಲಿ ಯೇಸುವು ಯೂದನಿಗೆ ಕೆಲವು ನಿರ್ದೇಶಗಳನ್ನು ನೀಡಿದಾಗ, ಅಲ್ಲಿದ್ದ ಇತರ ಅಪೊಸ್ತಲರು ಯೇಸುವಿನ ಸಾಮಾನ್ಯ ಹಣದ ಬಳಕೆಯ ಸಂಪ್ರದಾಯದ ಪ್ರಕಾರ ಆತನು ಯೂದನನ್ನು ಆದೇಶಿಸಿದ್ದಾನೆ ಎಂದು ಯೋಚಿಸಿದರು. ಅಂದರೆ, (1) ಅವರಿಗೆ ಬೇಕಾಗಿದ್ದ ವಸ್ತುಗಳನ್ನು ಖರೀದಿಸುವಂತೆ, ಮತ್ತು (2) ಬಡ ಜನರ ಸಹಾಯಕ್ಕಾಗಿ. ಈ ಸೂತ್ರವು ಯಾವಾಗಲೂ ನಮಗೆ ಹಣದ ಬಳಕೆಯಲ್ಲಿ ಮಾರ್ಗದರ್ಶನ ಮಾಡಬೇಕು.
ಅಪೊಸ್ತಲರು ಯೇಸುವಿನ ಮಾದರಿಯನ್ನು ನಿಖರವಾಗಿ ಅನುಸರಿಸಿದರು. ಅವರು ಸಹ ತಮ್ಮ ಎಲ್ಲಾ ಕೊರತೆಗಳ ಪೂರೈಕೆಗಾಗಿ ತಮ್ಮ ಪರಲೋಕದ ತಂದೆಯನ್ನು ನಂಬಿದ್ದರು. ಹಾಗಾಗಿ, ಅವರ ಖಾಸಗಿ ಅವಶ್ಯಕತೆಗಳು ಮತ್ತು ಸೇವೆಯ ಅವಶ್ಯಕತೆಗಳಿಗಾಗಿ, ಯಾವ ಸಂದರ್ಭದಲ್ಲೇ ಆಗಲಿ, ಅವರು ಯಾರನ್ನೂ ಸಂಪರ್ಕಿಸಲಿಲ್ಲ - ಬಾಯಿಮಾತಿನಿಂದ ಅಥವಾ ಪತ್ರದ ಮೂಲಕ (ಹಾಗೆ ಮಾಡುವದು ಹಣದ ಅವಶ್ಯಕತೆಯನ್ನು ಪರೋಕ್ಷವಾಗಿ ಇತರರಿಗೆ ಸೂಚಿಸಿದಂತೆ ಆಗುತ್ತಿತ್ತು). ಅಪೊಸ್ತಲರು ಸಭೆಗಳನ್ನು ಧನ ಸಂಗ್ರಹಕ್ಕೆ ಉತ್ತೇಜಿಸಿದ್ದು, ಯಾವಾಗಲೂ ಬಡ ವಿಶ್ವಾಸಿಗಳ ಸಹಾಯಕ್ಕಾಗಿ ಮಾತ್ರವೇ ಆಗಿತ್ತು - ಮತ್ತು ಯಾವತ್ತೂ ಬೇರೆ ಯಾವುದೇ ಕಾರಣಕ್ಕಾಗಿ ಆಗಿರಲಿಲ್ಲ (2 ಕೊರಿ. 8; 2 ಕೊರಿ. 9 ಮತ್ತು 1 ಕೊರಿ. 16:1-3 ನೋಡಿರಿ).
ಕೆಲವು ಜನರು 1 ತಿಮೊ. 5:17,18ನ್ನು ತಪ್ಪಾಗಿ ಉಲ್ಲೇಖಿಸುತ್ತಾರೆ ಮತ್ತು ಪಾಸ್ಟರುಗಳು ಮತ್ತು ಕ್ರೈಸ್ತ ಕಾರ್ಯಕರ್ತರಿಗೆ ಉತ್ತಮ ಪಗಾರ ಸಲ್ಲಿಸುವುದು ಯೋಗ್ಯವೆಂದು ಬೋಧಿಸುತ್ತಾರೆ. ಆದರೆ ಈ ವಚನಗಳು ನಿಜವಾಗಿ ತಿಳಿಸುವದೇನು?
"ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು, ಅವರೊಳಗೆ ವಿಶೇಷವಾಗಿ ಪ್ರಸಂಗದಲ್ಲಿಯೂ, ಉಪದೇಶದಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು. ಕಣ ತುಳಿಯುವ ಎತ್ತಿನ ಬಾಯಿ ಕಟ್ಟಬಾರದು ಎಂತಲೂ, ಆಳು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ ಎಂತಲೂ ಶಾಸ್ತ್ರದಲ್ಲಿ ಹೇಳಿದೆಯಲ್ಲಾ."
ಈ ವಚನಗಳು ಹಣದ ವಿಚಾರವಾಗಿ ಏನೂ ಹೇಳುತ್ತಿಲ್ಲ. ಅವು ಕಲಿಸುವುದು ಇಷ್ಟು ಮಾತ್ರ, ಬೋಧನೆಯಲ್ಲಿ ಶ್ರಮಿಸುತ್ತಿರುವ ಸಭಾ ಹಿರಿಯರಿಗೆ ಸಭೆಯ ಜನರು ಎರಡರಷ್ಟು ಮಾನ್ಯತೆಯನ್ನು ಸಲ್ಲಿಸಬೇಕು. ಈ ವಚನದಲ್ಲಿ ಪ್ರಸ್ತಾಪ ಮಾಡಿರುವುದು ಹಣದ ವಿಚಾರವಾಗಿದ್ದರೆ, ಸಭೆಗಳು ತಮ್ಮ ಸಭಾ ಹಿರಿಯರಿಗೆ ಸಭೆಯ ಇತರರಿಗಿಂತ ಎರಡರಷ್ಟು ವೇತನವನ್ನು ನೀಡಲು ದೇವರು ಆಜ್ಞಾಪಿಸುತ್ತಿದ್ದಾರೆ!! ಅದು ಹಾಸ್ಯಾಸ್ಪದವಾಗಿದೆ! ವಾಸ್ತವವಾಗಿ ಇಲ್ಲಿ ಅಪೊಸ್ತಲ ಪೌಲನು ವಿಶ್ವಾಸಿಗಳು ಸಭಾ ಹಿರಿಯರನ್ನು ಪ್ರಶಂಸಿಸಿ ಗೌರವಿಸುವದನ್ನು ಕಲಿಸುತ್ತಿದ್ದಾನೆ. ಅವನ ಮಾತಿನ ತಾತ್ಪರ್ಯ, "ಕಣವನ್ನು ತುಳಿದು ಫಸಲನ್ನು ಕೊಡುವ ಎತ್ತಿಗೆ ಧಾನ್ಯವನ್ನು ತಿನ್ನಿಸುವ ಹಾಗೆ, ಬೋಧಕರಿಗೆ ಸಲ್ಲತಕ್ಕ ಗೌರವವನ್ನು ಸಲ್ಲಿಸಿರಿ," ಎಂಬುದಾಗಿ. ಹಾಗಾದರೆ ಸಭೆಯ ಸದಸ್ಯರಿಂದ ಸಭಾ ಹಿರಿಯರಿಗೆ ಸಲ್ಲತಕ್ಕ ಪ್ರಾಥಮಿಕ ಸಂಬಳ ಮಾನ್ಯತೆಯಾಗಿದೆ (ಮೆಚ್ಚುಗೆ ಮತ್ತು ಕೃತಜ್ಞತೆ) - ಮತ್ತು ಹಣವಲ್ಲ.
ಇದು 1 ಥೆಸ. 5:12-13ರಲ್ಲಿ ಪೌಲನು ನೀಡಿರುವ ಬೋಧನೆಯನ್ನು ಹೋಲುತ್ತದೆ, "ನಿಮ್ಮ ನಡುವೆ ಪ್ರಯಾಸಪಟ್ಟು ಶ್ರಮಿಸುವಂತ ಮುಖ್ಯಸ್ಥರನ್ನು ಸನ್ಮಾನಿಸಿರಿ ... ಅವರಿಗೆ ಧಾರಾಳವಾಗಿ ಮೆಚ್ಚುಗೆ ಮತ್ತು ಪ್ರೀತಿಯನ್ನು ತೋರಿಸಿರಿ ("Messaage Bible"ನ ಭಾವಾನುವಾದ)."
ಹಾಗಿದ್ದರೂ, ಕ್ರೈಸ್ತ ಕಾರ್ಯಕರ್ತರಿಗೆ ಧನಸಹಾಯ ಮಾಡುವ ಕುರಿತಾಗಿ, ಪೌಲನು 1 ಕೊರಿ. 9:7-18ರಲ್ಲಿ ಹೇಳಿದ್ದಾನೆ. ಅಲ್ಲಿ ಆತನು ಹೇಳಿರುವಂತೆ, "ಯಾವ ಸಿಪಾಯಿಯಾದರೂ ಸ್ವಂತ ಖರ್ಚಿನಿಂದ ಯುದ್ಧಕ್ಕೆ ಹೋಗುವದುಂಟೇ? ದ್ರಾಕ್ಷೇತೋಟವನ್ನು ಮಾಡಿದವನು ಅದರ ಫಲವನ್ನು ತಿನ್ನದೆ ಇರುವದುಂಟೋ? ಪಶುಗಳನ್ನು ಸಾಕಿದವನು ಅವುಗಳ ಹೈನಿನಿಂದ ಜೀವಿಸದೆ ಇರುವದುಂಟೋ? ನಾವು ನಿಮಗೋಸ್ಕರ ಆತ್ಮ ಸಂಬಂಧವಾದ ಬೀಜವನ್ನು ಬಿತ್ತಿದ ಮೇಲೆ, ನಿಮ್ಮಿಂದ ಶರೀರ ಸಂಬಂಧವಾದ ಪೈರನ್ನು ಕೊಯ್ಯುವದು ದೊಡ್ಡದೋ?"
ಆದರೆ ಪೌಲನು ಇನ್ನೂ ಮಂದುವರಿಸಿ, ಹೀಗೆ ಹೇಳುತ್ತಾನೆ, "ಆದರೂ ನಾವು ಈ ಹಕ್ಕನ್ನು ಸಾಧಿಸದೆ, ಕ್ರಿಸ್ತನ ಸುವಾರ್ತೆಗೆ ಅಡ್ಡಿ ಮಾಡಬಾರದೆಂದು ಎಲ್ಲವನ್ನೂ ಸಹಿಸಿಕೊಂಡೆವು. ಹೌದು, ಕರ್ತನು ಸಹ ಸುವಾರ್ತೆಯನ್ನು ಸಾರುವವರು ಸುವಾರ್ತೆಯಿಂದಲೇ ಜೀವನ ಮಾಡಬೇಕೆಂದು ನೇಮಿಸಿದನು. ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ನಡಿಸಲಿಲ್ಲ; ಅದಕ್ಕಿಂತ ಸಾಯುವುದೇ ನನಗೆ ಲೇಸು, ಹೊಗಳಿಕೊಳ್ಳುವದಕ್ಕೆ ನನಗಿರುವ ಈ ಆಸ್ಪದವನ್ನು ಯಾರೂ ತೆಗೆದುಬಿಡಬಾರದು. ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇಬೇಕೆಂಬ ನಿರ್ಬಂಧ ನನಗುಂಟು. ಸಾರದಿದ್ದರೆ ನನ್ನ ಗತಿ ಏನು ಹೇಳಲಿ. ನಾನು ಸ್ವಂತ ಇಷ್ಟದಿಂದ ಈ ಕೆಲಸವನ್ನು ಮಾಡಿದರೆ ನನಗೆ ಬಹುಮಾನ ದೊರೆಯುವದು; ಮತ್ತೊಬ್ಬನ ಒತ್ತಾಯದಿಂದ ಮಾಡಿದರೆ, ಮನೆವಾರ್ತೆಯು ನನ್ನ ವಶಕ್ಕೆ ಕೊಡಲ್ಪಟ್ಟಿದೆ. ಹಾಗಾದರೆ ನನಗಾಗುವ ಬಹುಮಾನವೇನು (ನನ್ನ ಸಂಬಳ)? ಸುವಾರ್ತೆಯನ್ನು ಸಾರುವಾಗ, ಅದರಿಂದ ಜೀವನ ಮಾಡುವ ಹಕ್ಕನ್ನು ಸಾಧಿಸದೆ, ಉಚಿತಾರ್ಥವಾಗಿ ಅದನ್ನು ಎಲ್ಲರಿಗೂ ದಾನ ಮಾಡುವದೇ ನನಗೆ ಬಹುಮಾನ."
ಹಾಗಾಗಿ ಪೌಲನು ಯಾವತ್ತೂ ಒಂದು ವೇತನಕ್ಕಾಗಿ ಅಥವಾ ಬಹುಮಾನಗಳನ್ನು ಗಳಿಸುವದಕ್ಕಾಗಿ ದೇವರ ವಾಕ್ಯದ ಬೋಧನೆಯನ್ನು ಮಾಡಲಿಲ್ಲ, ಆದರೆ ಆತನು "ಕ್ರಿಸ್ತನ ಪ್ರೀತಿಯಿಂದ ಒತ್ತಾಯಿಸಲ್ಪಟ್ಟನು" ಮತ್ತು "ದೇವರು ಸುವಾರ್ತಾ ಪ್ರಸಾರದ ಕೆಲಸವನ್ನು ನಿರ್ವಹಿಸುವಂತೆ ಆತನಿಗೆ ವಹಿಸಿದ್ದರಿಂದ" ಅದನ್ನು ಮಾಡಿದನು. ಅದಲ್ಲದೆ, ಸುವಾರ್ತೆಯನ್ನು ಕೇಳಿಸಿಕೊಳ್ಳುವುದಕ್ಕೆ ದೇವರಿಗೆ ಹಣವನ್ನು ಕೊಡಬೇಕಾಗುತ್ತದೆ ಎಂಬ ಭಾವನೆ ಜನರಲ್ಲಿ ಉಂಟಾಗದಿರಲಿ ಎಂಬ ಉದ್ದೇಶದಿಂದ, ಆತನು ಸುವಾರ್ತೆಯನ್ನು ಉಚಿತವಾಗಿ, ಯಾವುದೇ ಶುಲ್ಕವಿಲ್ಲದೆ, ಇತರರಿಗೆ ಕೊಡಲು ಬಯಸಿದನು. ಮತ್ತು ಆತನ ಮಾದರಿಯನ್ನು ಇತರರು ಅನುಸರಿಸಬೇಕೆಂದು ಆತನು ಹೇಳಿದನು (1 ಕೊರಿ. 11:1 ಮತ್ತು ಫಿಲಿ. 3:17 ನೋಡಿರಿ).
ಹಾಗಾದರೆ ಹೊಸ ಒಡಂಬಡಿಕೆಯ ಬೋಧನೆಯಲ್ಲಿ ನಮಗೆ ಕಂಡುಬರುವುದು ಏನೆಂದರೆ, ಕರ್ತನ ಸೇವಕನು ತನ್ನ ಜೀವನ ನಿರ್ವಹಣೆಗಾಗಿ ಕೊಡುಗೆಗಳನ್ನು ಸ್ವೀಕರಿಸಬಹುದು (ಸ್ವತಃ ಯೇಸುವು ಸ್ವೀಕರಿಸಿದ ಹಾಗೆ). ಆದರೆ ಈ ವಿಷಯದಲ್ಲಿ, ನಾವು ಕೆಲವು ಅಂಶಗಳನ್ನು ಗಮನಿಸುತ್ತೇವೆ:
(1) ಯಾವ ಕ್ರೈಸ್ತ ಕಾರ್ಯಕರ್ತನಿಗೂ ಮಾಸಿಕ ವೇತನವು ಯಾವತ್ತೂ ಕೊಡಲ್ಪಡಲಿಲ್ಲ. ಯೇಸುವು ತನ್ನ ಶಿಷ್ಯರಿಗೆ ಯಾವುದೇ ಪಗಾರವನ್ನು ನೀಡುವ ವಾಗ್ದಾನ ಮಾಡಲಿಲ್ಲ. ಅಪೊಸ್ತಲರು ಯಾವ ಸಂಬಳವನ್ನೂ ಪಡೆಯಲಿಲ್ಲ. ಅವರ ಖರ್ಚುವೆಚ್ಚಗಳ ನಿರ್ವಹಣೆಗಾಗಿ ಜನರಿಂದ ಸಹಾಯ ಒದಗುವಂತೆ ಜನರ ಹೃದಯಗಳನ್ನು ಪ್ರೇರೇಪಿಸಲು, ಅವರು ತಮ್ಮ ಪರಲೋಕದ ತಂದೆಯನ್ನು ನಂಬಿದ್ದರು (ಯೇಸುವಿನ ಜೀವನದಲ್ಲಿ ಆದ ಹಾಗೆಯೇ). ಅವರು ಪ್ರಭಾವವುಳ್ಳ ಒಂದು ಸೇವಾಕಾರ್ಯವನ್ನು ಕೈಗೊಳ್ಳುವದಕ್ಕೆ, ಅವರಲ್ಲಿ ಇಂತಹ ನಂಬಿಕೆಯ ಜೀವನ ಅತಿ ಅವಶ್ಯಕವಾಗಿತ್ತು. ಅದಲ್ಲದೆ ಇದು ಅವರನ್ನು ಅತ್ಯಾಸೆಯಿಂದ ದೂರವಿರಿಸಿತು.
(2) ಜನರಿಂದ ಧನಸಹಾಯ ಪಡೆಯುವ ಈ ವ್ಯವಸ್ಥೆಯ ದುರುಪಯೋಗವನ್ನು ಅಪೊಸ್ತಲ ಪೌಲನು ಗಮನಿಸಿದಾಗ, ಆತನು ಯಾರಿಂದಲೂ ಹಣವನ್ನು ಪಡೆಯದಿರಲು ನಿಶ್ಚಯಿಸಿ, ತನ್ನ ಸ್ವಂತ ದುಡಿಮೆಯಿಂದ ತನ್ನ ವೆಚ್ಚವನ್ನು ನಿರ್ವಹಿಸಿ, ತಾನು ಸಾರುತ್ತಿದ್ದ ಸುವಾರ್ತೆಗೆ ಕೆಟ್ಟ ಹೆಸರು ಬಾರದಂತೆ ಕಾಪಾಡಿಕೊಂಡನು. ಅವನು 2 ಕೊರಿ. 11:7-13ರಲ್ಲಿ (‘Living Bible’ ಭಾಷಾಂತರ) ಹೀಗೆ ಹೇಳುತ್ತಾನೆ: "ನಾನು ದೇವರ ಸುವಾರ್ತೆಯನ್ನು ನಿಮಗೆ ಉಚಿತಾರ್ಥವಾಗಿ ಸಾರಿದೆನು. ನಾನು ಯಾವುದಕ್ಕೂ ನಿಮ್ಮ ಮೇಲೆ ಭಾರ ಹಾಕದೆ, ಮೆಕೆದೋನ್ಯದ ಸಹೋದರರ ಕೊಡುಗೆಯ ಮೂಲಕ ನನ್ನ ಖರ್ಚನ್ನು ನಿರ್ವಹಿಸಿದೆನು. ಇದು ವರೆಗೆ ನಾನು ನಿಮ್ಮಿಂದ ಒಂದು ಕಾಸನ್ನೂ ಪಡೆದಿಲ್ಲ, ಮತ್ತು ಪಡೆಯುವುದೂ ಇಲ್ಲ. ನಾನು ಈ ವಿಷಯವನ್ನು ಎಲ್ಲೆಡೆಯೂ ಸಾರುತ್ತೇನೆ! ಹೀಗೆ ಮಾಡಲು ಕಾರಣ, ನನ್ನಂತೆಯೇ ತಾವೂ ಸಹ ದೇವರ ಸೇವೆಯನ್ನು ಮಾಡುತ್ತೇವೆಂದು ಬಡಾಯಿ ಕೊಚ್ಚುವ ಕೆಲವರ ದೂಷಣೆಗೆ ಆಸ್ಪದ ಸಿಗಬಾರದು, ಎಂಬುದಕ್ಕಾಗಿ. ದೇವರು ಈ ಜನರನ್ನು ಕಳುಹಿಸಿಲ್ಲ, ಅವರು ನಿಮ್ಮ ಮುಂದೆ ಕ್ರಿಸ್ತನ ಅಪೊಸ್ತಲರ ವೇಷ ಹಾಕಿಕೊಂಡು ನಿಮ್ಮನ್ನು ಮೋಸಗೊಳಿಸಿದ್ದಾರೆ, ಅಷ್ಟೇ!"
ಪೌಲನು ಕೆಲವೊಮ್ಮೆ ಕಾಣಿಕೆಗಳನ್ನು ಸ್ವೀಕರಿಸುವುದನ್ನು ನಾವು ಇಲ್ಲಿ ನೋಡುತ್ತೇವೆ - ಮೆಕೆದೋನ್ಯ ಪ್ರಾಂತ್ಯದ (ಫಿಲಿಪ್ಪಿ ಪಟ್ಟಣ) ಕ್ರೈಸ್ತರು ಸ್ವ-ಪ್ರೇರಣೆಯಿಂದ ಆತನಿಗೆ ಸ್ವಲ್ಪ ಹಣವನ್ನು ಕಳುಹಿಸಿದ್ದರು. ಆದರೆ ಆತನು ಕೊರಿಂಥದ ಕ್ರೈಸ್ತರಿಂದ ಯಾವ ಕೊಡುಗೆಯನ್ನೂ ಪಡೆಯಲಿಲ್ಲ (ಇಲ್ಲಿ ನಾವು ನೋಡಿದಂತೆ), ಏಕೆಂದರೆ ಆ ಊರಿನ ಸುಳ್ಳು ಕ್ರೈಸ್ತ ಬೋಧಕರಿಂದ ತಾನು ವಿಭಿನ್ನನಾಗಿದ್ದೇನೆಂದು ಅವರಿಗೆ ತೋರಿಸಲು ಬಯಸಿದನು. ಪೌಲನು ಯಾರಿಂದಲೂ, ಯಾವುದೇ ಸಮಯದಲ್ಲೂ, ಧನಸಹಾಯವನ್ನು ಬೇಡಲಿಲ್ಲ - ಮತ್ತು ಆತನು ತನ್ನ ಆರ್ಥಿಕ ಅವಶ್ಯಕತೆಗಳ ಸುಳಿವನ್ನು ಯಾರಿಗೂ ನೀಡಲಿಲ್ಲ.
ಥೆಸಲೋನಿಕದ ಕ್ರೈಸ್ತರಿಂದಲೂ ಸಹ ಪೌಲನು ಯಾವತ್ತೂ ಹಣವನ್ನು ಸ್ವೀಕರಿಸಲಿಲ್ಲ. ಅವನು 2 ಥೆಸ. 3:8-10ರಲ್ಲಿ ಹೀಗೆ ಹೇಳಿದ್ದಾನೆ: "ನಾವು ಹಣ ಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ; ನಿಮ್ಮಲ್ಲಿ ಒಬ್ಬರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನ ಮಾಡಿಕೊಂಡೆವು. ನಿಮ್ಮಿಂದ ಪೋಷಣೆ ಹೊಂದುವದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ. ಸ್ವಂತ ಕೈಗಳಿಂದ ಕೆಲಸ ಮಾಡಿ ಊಟ ಮಾಡುವುದರಲ್ಲಿ ನೀವು ನಮ್ಮನ್ನು ಅನುಸರಿಸುವದಕ್ಕಾಗಿ, ನಿಮಗೆ ಮಾದರಿಯಾಗಿ ಇರೋಣವೆಂದೇ ಹೀಗೆ ಮಾಡಿದೆವು."
ಹಾಗೆಯೇ ಎಫೆಸದ ಕ್ರೈಸ್ತರಿಂದಲೂ ಪೌಲನು ಯಾವತ್ತೂ ಹಣವನ್ನು ಸ್ವೀಕರಿಸಲಿಲ್ಲ. ಅವನು ಅ.ಕೃ. 20:31-35ರಲ್ಲಿ ಹೇಳಿದಂತೆ, "ನಾನು ಮೂರು ವರುಷ ನಿಮ್ಮ ನಡುವೆ ಇದ್ದಾಗ, ನಿಮ್ಮಿಂದ ಬೆಳ್ಳಿ ಬಂಗಾರವನ್ನಾಗಲೀ, ಉಡಿಗೆ ತೊಡಿಗೆಯನ್ನಾಗಲೀ ಬಯಸಲಿಲ್ಲ. ನನ್ನ ಕೈಗಳೇ ಕೆಲಸ ಮಾಡಿ ನನ್ನ ಕೊರತೆಗಳನ್ನೂ, ನನ್ನ ಜೊತೆಯಲ್ಲಿದ್ದವರ ಕೊರತೆಗಳನ್ನೂ ನೀಗಿದ್ದನ್ನು ನೀವೇ ಬಲ್ಲಿರಿ. ಎಲ್ಲಾ ವಿಷಯಗಳಲ್ಲಿ ನಾನು ನಿಮಗೆ ಮಾದರಿ ತೋರಿಸಿದ್ದೇನೆ. ನೀವೂ ಹಾಗೆಯೇ ದುಡಿದು ಬಲವಿಲ್ಲದವರಿಗೆ ಉಪಕಾರ ಮಾಡಬೇಕು, ಮತ್ತು ’ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ’ ಎಂಬುದಾಗಿ ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು."
ಹಣಕಾಸಿನ ವಿಷಯದಲ್ಲಿ ಪೌಲನು ಮಾಡಿದಂತೆ, ಕರ್ತನ ಪ್ರತಿಯೊಬ್ಬ ಸೇವಕನೂ ಸಹ, ಕ್ರಿಸ್ತನ ಮನೋಭಾವವನ್ನು ತಾನು ಪ್ರಕಟಗೊಳಿಸುವದನ್ನು ಖಾತ್ರಿ ಮಾಡಿಕೊಳ್ಳಬೇಕು.
ದೇವರು ನೆಟ್ಟಿರುವ ನಮ್ಮ ಎಲ್ಲಾ CFC ಸಭೆಗಳಲ್ಲಿ, ಒಟ್ಟು ಸೇರಿ 150ಕ್ಕೂ ಹೆಚ್ಚಿನ ಮುಖ್ಯಸ್ಥರು/ ಹಿರಿಯ ಸಹೋದರರು ತಮ್ಮ ಅವಶ್ಯಕತೆಗಳನ್ನು ತಾವೇ ಪೂರೈಸಿಕೊಳ್ಳುತ್ತಾರೆ. ಅವರಲ್ಲಿ ಯಾರೊಬ್ಬರೂ ಸಭೆಯಿಂದ ಯಾವುದೇ ಪಗಾರವನ್ನು ಪಡೆದಿಲ್ಲ. ನಮ್ಮ ಸಭೆಯ ವಿಷಯದಲ್ಲಿ, ಈ ಹೊಸ-ಒಡಂಬಡಿಕೆಯ ಮಾದರಿಯು ಕಳೆದ 45 ವರ್ಷಗಳಲ್ಲಿ (1975ನೇ ಇಸವಿಯಲ್ಲಿ ಮೊದಲ CFC ಸಭೆಯ ಆರಂಭದಿಂದ, ಇಂದು 2020ನೇ ಇಸವಿಯ ವರೆಗೆ) - ವಿಶ್ವದಾದ್ಯಂತ ಮಹಾನಗರಗಳಿಂದ ಹಿಡಿದು ಭಾರತದ ಅತಿ ಹಿಂದುಳಿದ ಹಳ್ಳಿಯ ವರೆಗೆ - ಅತ್ಯುತ್ತಮವಾಗಿ ಕಾರ್ಯವೆಸಗಿದೆ. ನಮ್ಮ ಸಭೆಯ ಈ ನಿಲುವು, ಸತ್ಯವೇದದ ವಚನಗಳನ್ನು ಉಲ್ಲೇಖಿಸಿ ಜನರ ಜೇಬು ಕತ್ತರಿಸುವ ಅತ್ಯಾಸೆಯುಳ್ಳ ಬೋಧಕರು ನಮ್ಮ ನಡುವೆ ನುಸುಳಿ ಸೇರಿಕೊಳ್ಳದಂತೆ ತಡೆದಿದೆ.
ಮೇಲೆ ಹೇಳಿದ ಈ ನಿಲುವು ಹೊಸ ಒಡಂಬಡಿಕೆಯ ಅವಧಿಯಲ್ಲಿ ಕರ್ತನ ಎಲ್ಲಾ ಸೇವಕರು ಆರಿಸಿಕೊಂಡಿರುವ ನಿಲುವಾಗಿದೆ. ಆದರೆ ಶತಮಾನಗಳು ಸಾಗುತ್ತಿದ್ದಂತೆ, ಲೋಕದಲ್ಲಿನ ಕ್ರೈಸ್ತತ್ವವು ಈ ಮಾನದಂಡದಿಂದ ದೂರ ಸರಿದಿದೆ. ಇಂದು, ಅನೇಕ ’ಪಾಸ್ಟರ್’ಗಳು ಮತ್ತು ಬೋಧಕರು, ತಮಗೆ ಹಣ ಕೊಡುವಂತೆ ಜನರನ್ನು ಪ್ರಚೋದಿಸುತ್ತಾರೆ ಮತ್ತು ತಮ್ಮ ಆರ್ಥಿಕ ಬೆಂಬಲಿಗರಿಗೆ ಭಾವೋದ್ವೇಗವುಳ್ಳ ಪತ್ರಗಳನ್ನು ಬರೆದು (ಹಲವು ಬಾರಿ ಮತಾಂತರದ ಕುರಿತಾಗಿ ಸುಳ್ಳು ಅಂಕೆಸಂಖ್ಯೆಗಳನ್ನು ಸೇರಿಸಿ) ಹೆಚ್ಚು ಹೆಚ್ಚು ಆರ್ಥಿಕ ಸಹಾಯವನ್ನು ನಿರೀಕ್ಷಿಸುತ್ತಾರೆ.
ಹಣದ ವಿಚಾರದಲ್ಲಿ ಕ್ರೈಸ್ತ ಮುಖಂಡರ ತಪ್ಪಾದ ದೃಷ್ಟಿಕೋನದ ಫಲವಾಗಿ, ಇಂದಿನ ಬಹುತೇಕ ಕ್ರಿಸ್ತೀಯ ಸೇವೆಯಲ್ಲಿ ದೇವರ ಅಭಿಷೇಕವು ಇಲ್ಲವಾಗಿದೆ ಮತ್ತು ಹೆಚ್ಚಿನ ಬೋಧಕರು ಮಾಡುವ ಸೇವೆಯಲ್ಲಿ ಪರಲೋಕದ ಪ್ರಕಟನೆಯು ಇಲ್ಲವಾಗಿದೆ. ಯಾರೂ ಸಹ ದೇವರನ್ನು ಮತ್ತು ಧನವನ್ನು ಒಟ್ಟಾಗಿ ಸೇವೆ ಮಾಡಲಾರರು (ಲೂಕ 16:13).
ಹಣದ ವಿಷಯದಲ್ಲಿ ನಂಬಿಗಸ್ತರಾಗಿ ಇರುವವರಿಗೆ ಮಾತ್ರವೇ ನಿಜವಾದ ಧನವನ್ನು ಕೊಡುವುದಾಗಿ ಕರ್ತನು ಹೇಳಿದನು - ಅಂದರೆ, ದೈವಿಕ ಪ್ರಕಟನೆ ಮತ್ತು ಪವಿತ್ರಾತ್ಮನ ಅಭಿಷೇಕದ ಸಂಪತ್ತು (ಲೂಕ 16:11).
ನಾವು ಮನಸ್ಸಿನಲ್ಲಿ ಇರಿಸಿಕೊಳ್ಳಬೇಕಾದ ಇನ್ನೊಂದು ಪ್ರಮುಖ ಅಂಶ ಏನೆಂದರೆ:
ಕರ್ತನ ಒಬ್ಬ ಸೇವಕನು ಅವಿಶ್ವಾಸಿಗಳು ಅಥವಾ ತನಗಿಂತ ಬಡವರಾದ ಜನರಿಂದ ಹಣದ ಕಾಣಿಕೆಯನ್ನು ಎಂದಿಗೂ ಸ್ವೀಕರಿಸಬಾರದು. ಆತನಿಗಿಂತ ಬಡವನಾದ ಒಬ್ಬನು ಯಾವುದೇ ಕೊಡುಗೆಯನ್ನು ನೀಡಿದರೂ, ಅದನ್ನು ಸ್ವಂತ ಅವಶ್ಯಕತೆಗಳಿಗೆ ಯಾವತ್ತೂ ಉಪಯೋಗಿಸಬಾರದು ಮತ್ತು ಅದನ್ನು ಸಭೆಯ ಕಾಣಿಕೆ ಪೆಟ್ಟಿಗೆಗೆ ಹಾಕಬೇಕು.
ಬೆಂಗಳೂರಿನ CFC ಸಭೆಯ "ಕಾಣಿಕೆ ಪೆಟ್ಟಿಗೆ"ಗಳ ಮೇಲೆ ನಾವು ಒಂದು ತಪಾಸಣಾ ಪಟ್ಟಿಯನ್ನು ಇರಿಸಿದ್ದೇವೆ:
1. ನೀವು ದೇವರ ಮಗುವಾಗಿ ಹೊಸದಾಗಿ ಹುಟ್ಟಿದ್ದೀರಾ?
2. ನಿಮ್ಮ ಕುಟುಂಬದ ಅವಶ್ಯಕತೆಗಳಿಗಾಗಿ ನಿಮ್ಮಲ್ಲಿ ಸಾಕಷ್ಟು ಹಣವಿದೆಯೇ?
3. ನೀವು ಸಾಲದಿಂದ (ಮನೆಯ ಖರೀದಿಯ ಸಾಲದ ಹೊರತಾಗಿ) ಮುಕ್ತರಾಗಿದ್ದೀರಾ?
4. ನೀವು ಎಲ್ಲಾ ಜನರೊಂದಿಗೆ ಸಮಾಧಾನ ಮಾಡಿಕೊಂಡಿದ್ದೀರಾ?
5. ನೀವು ಸಂತೋಷವಾಗಿ ಕೊಡುತ್ತಿದ್ದೀರಾ?
ಸತ್ಯವೇದದಲ್ಲಿ ಈ ಮೇಲಿನ ಯೋಗ್ಯತಾ ಸೂಚಕದ ಮೂಲಾಧಾರವನ್ನು ಪರೀಕ್ಷಿಸಲು, ನೀವು ಈ ಕೆಳಗಿನ ’ಲಿಂಕ್’ಗೆ ಹೋಗಬಹುದು: http://www.cfcindia.com/our-financial-policy
ಈ ವಿಷಯಗಳಲ್ಲಿ ನಮ್ಮಿಂದ ವಿಭಿನ್ನವಾದ ರೀತಿಯಲ್ಲಿ ವ್ಯವಹರಿಸುವ ಇತರ ಸಭೆಗಳನ್ನಾಗಲೀ ಅಥವಾ ಬೋಧಕರುಗಳನ್ನಾಗಲೀ ನಾವು ತೀರ್ಪು ಮಾಡುವುದಿಲ್ಲ. ಹಾಗೆ ಮಾಡಿದರೆ ನಾವು ಫರಿಸಾಯರು ಆಗುತ್ತೇವೆ. ಆದರೆ ನಾವು ಯೇಸುವಿನ ಜೀವನದಲ್ಲಿ ಮತ್ತು ಅಪೊಸ್ತಲರ ಜೀವನಗಳಲ್ಲಿ ಕಂಡಿರುವ ಗುಣಲಕ್ಷಣಗಳನ್ನು ಸ್ವತಃ ನಾವು ಯಥಾರ್ಥವಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ.
ಕಿವಿಯುಳ್ಳವನು ಇದನ್ನು ಕೇಳಲಿ.
ಆಮೆನ್.