WFTW Body: 

ಹೊಸ ವರ್ಷದಲ್ಲಿ ಆತ್ಮಿಕ ಭಾವದಲ್ಲಿ ಬೆಳೆಯುವುದು
ಸಂತುಲಿತವಾದ ಒಂದು ಕ್ರಿಸ್ತೀಯ ಜೀವಿತವು ಮೂರು ದೆಸೆಗಳಲ್ಲಿ ದೃಷ್ಟಿ ಹರಿಸಬೇಕಾಗುತ್ತದೆ:
1. ಮೇಲ್ಮುಖ ನೋಟ - ದೇವರನ್ನು ಮತ್ತು ಕರ್ತನಾದ ಯೇಸು ಕ್ರಿಸ್ತನನ್ನು ಭಕ್ತಿಪೂರ್ವಕವಾಗಿ ಆರಾಧಿಸುವುದು.
2. ಒಳಮುಖ ನೋಟ - ಕ್ರಿಸ್ತನ ಮಹಿಮೆಯನ್ನು ನೋಡಿರುವದರ ಫಲವಾಗಿ, ನಮ್ಮ ಜೀವಿತದಲ್ಲಿ ಕ್ರಿಸ್ತನಿಗೆ ಹೋಲಿಕೆಯಾಗದ ಅಂಶಗಳನ್ನು ಕಂಡುಕೊಂಡು, ಅವುಗಳಿಂದ ತಿರುಗಿಕೊಳ್ಳುವುದು.
3. ಸುತ್ತಲಿನ ನೋಟ - ಇತರರಿಗೆ ಆಶೀರ್ವಾದದ ಸಾಧನಗಳಾಗಿ, ಈ ಲೋಕದಲ್ಲಿ ದೇವರ ಚಿತ್ತವು ನೆರವೇರುವಂತೆ ಪ್ರಯತ್ನಿಸುವುದು.

ಮೇಲ್ಮುಖ ನೋಟ

ದೇವರು ನಮ್ಮನ್ನು ಕರೆದಿರುವುದು ಪ್ರಾಥಮಿಕವಾಗಿ ಆತನ ಆರಾಧಕರಾಗುವದಕ್ಕೆ - ಆತನಿಗಾಗಿ ಹಸಿದು ಬಾಯಾರುವುದಕ್ಕಾಗಿ. ಒಬ್ಬ ಆತ್ಮಿಕ ಭಾವದ ವ್ಯಕ್ತಿಯು ದೇವರನ್ನು ಆರಾಧಿಸುತ್ತಾನೆ. ಆತನಲ್ಲಿರುವ ಏಕೈಕ ಆಸೆ ದೇವರಿಗಾಗಿ ಇರುತ್ತದೆ. ದೇವರನ್ನು ಹೊರತಾಗಿ ಆತನು - ಈ ಲೋಕದಲ್ಲಿ ಅಥವಾ ಪರಲೋಕದಲ್ಲಿ - ಯಾವುದನ್ನೂ ಅಥವಾ ಯಾರನ್ನೂ ಬಯಸುವುದಿಲ್ಲ (ಕೀರ್ತನೆ 73:25ನ್ನು ನೋಡಿರಿ). ಬಾಯಾರಿಕೆಯಿಂದ ದಣಿದು ಸಾಯುತ್ತಿರುವ ಒಬ್ಬ ಮನುಷ್ಯನು ನೀರಿಗಾಗಿ ಹವಣಿಸುವದಕ್ಕಿಂತಲೂ ಹೆಚ್ಚಾಗಿ ಅವನು ದೇವರಿಗಾಗಿ ಹವಣಿಸುತ್ತಾನೆ. ಆತನು ಅತಿ ಹೆಚ್ಚಾಗಿ ಬಯಸುವುದು ದೇವರ ಸಾನ್ನಿಧ್ಯವನ್ನೇ ಹೊರತು, ಈ ಲೋಕದ ಯಾವುದೇ ಸೌಕರ್ಯ, ಅನುಕೂಲಗಳನ್ನಲ್ಲ. ಇದಲ್ಲದೆ, ಆತನು ಪ್ರತಿದಿನವೂ ದೇವರ ಧ್ವನಿಯನ್ನು ಆಲಿಸಲಿಕ್ಕಾಗಿ ಕಾದಿರುತ್ತಾನೆ.

ಸಂಪತ್ತು, ಲೌಕಿಕ ಸುಖ-ಸಾಧನಗಳು ಮತ್ತು ಸ್ವಂತದ ಅನುಕೂಲವನ್ನು ಹುಡುಕುವ ಜನರಿಗೆ, ಯಾವಾಗಲೂ ದೂರುವುದಕ್ಕೆ ಒಂದಲ್ಲ ಒಂದು ವಿಷಯ ಸಿಗುತ್ತದೆ. ಆದರೆ ಆತ್ಮಿಕ ಮನಸ್ಸು ಇರುವಾತನಲ್ಲಿ ದೂರುಗಳು ಇರುವದಿಲ್ಲ, ಏಕೆಂದರೆ ಆತನಿಗೆ ದೇವರೊಬ್ಬನೇ ಬೇಕಾಗಿದ್ದಾರೆ ಮತ್ತು ಅವರು ಯಾವಾಗಲೂ ಆತನ ಬಳಿ ಇರುತ್ತಾರೆ. ಜೀವನದ ಪರಿಸ್ಥಿತಿಗಳ ವಿಷಯವಾಗಿ ಅವನಲ್ಲಿ ಯಾವ ವಿಷಾದವೂ ಇರುವುದಿಲ್ಲ, ಏಕೆಂದರೆ ಆತನು ತನ್ನ ಎಲ್ಲಾ ಪರಿಸ್ಥಿತಿಗಳು ದೇವರ ಹಸ್ತದಲ್ಲಿ ಇರುವುದನ್ನು ನೋಡಿದ್ದಾನೆ ಮತ್ತು ಆತನು ಯಾವಾಗಲೂ ಉಲ್ಲಾಸಭರಿತನಾಗಿ ತನ್ನನ್ನು ದೇವರ ಹಸ್ತದ ಕೆಳಗೆ ತಗ್ಗಿಸಿಕೊಳ್ಳುತ್ತಾನೆ.

ಇಂತಹ ಮನುಷ್ಯನ ಜೀವನವನ್ನು ನಿಯಂತ್ರಿಸಲು ಕಾನೂನು, ಕಾಯಿದೆಗಳ ಅವಶ್ಯಕತೆಯಿಲ್ಲ - ಏಕೆಂದರೆ ಎಲ್ಲಾ ವೇಳೆಯಲ್ಲೂ ಆತನ ಆತ್ಮವು ಪವಿತ್ರಾತ್ಮನ ನಿರ್ದೇಶನದ ಮೂಲಕ ನಡೆಸಲ್ಪಡುತ್ತದೆ. ಮಾನವ ತಿಳುವಳಿಕೆಯ ಪ್ರಕಾರವಾದ "ಒಳಿತು-ಕೆಡುಕುಗಳು" ಆತನಿಗೆ ದಾರಿ ತೋರಿಸುವುದಿಲ್ಲ. ಇದಕ್ಕೆ ಕಾರಣ, ಆತನಿಗೆ ಇಂತಹ ಚಿಕ್ಕ ಪುಟ್ಟ ಸಂಗತಿಗಳು ಪ್ರಾಮುಖ್ಯವಲ್ಲ, ಅವನು ಕ್ರಿಸ್ತನ ಸರಳ, ಯಥಾರ್ಥ ಭಕ್ತಿಗೆ ಮಾತ್ರ ಪ್ರಾಮುಖ್ಯತೆಯನ್ನು ಕೊಡುತ್ತಾನೆ. ಇಂತಹ ವ್ಯಕ್ತಿಯು ಯೇಸುವನ್ನು ದೃಷ್ಟಿಸುತ್ತಾ, ಹೆಚ್ಚು ಹೆಚ್ಚಾಗಿ ತನ್ನ ಕರ್ತನ ಸಾರೂಪ್ಯಕ್ಕೆ ಬದಲಾಗುತ್ತಾನೆ.

ದೇವರ ಕಡೆಗೆ ತಿರುಗಿರುವ ಇಂತಹ ಮನುಷ್ಯನ ದೃಷ್ಟಿಯು ಯಾವಾಗಲೂ ಸ್ವತಃ ತನ್ನನ್ನು ತಗ್ಗಿಸಿಕೊಳ್ಳುವಂತೆ ಮಾಡುತ್ತದೆ. ಆತನು ತನ್ನ ಸತ್ಕಾರ್ಯಗಳನ್ನು ಮಾನವರ ಕಣ್ಣಿಗೆ ಕಾಣಿಸದಿರುವಂತೆ ಬಚ್ಚಿಡುತ್ತಾನೆ. ಅವನ ಮೇಲೆ ದೇವರ ಕೃಪೆಯು ಸದಾ ಇರುತ್ತದೆ, ಹಾಗಾಗಿ ಅವನು ಪಾಪದ ಮೇಲೆ ಜಯಹೊಂದಿ, ತನ್ನ ಸ್ವರ್ಗೀಯ ತಂದೆಯ ನೀಕಟ ಅನ್ಯೋನ್ಯತೆಗೆ ಹೆಚ್ಚು ಹೆಚ್ಚಾಗಿ ಸೆಳೆಯಲ್ಪಡುತ್ತಾನೆ.

ಒಳಮುಖ ನೋಟ

ಮೇಲ್ಮುಖ ದೃಷ್ಟಿಯ ಮೂಲಕವಾಗಿ ಒಬ್ಬ ವ್ಯಕ್ತಿಯು, ತನ್ನ ಹೃದಯವನ್ನು ಪರೀಕ್ಷಿಸುವ ಒಳಮುಖ ದೃಷ್ಟಿಗೆ ನಡೆಸಲ್ಪಡುತ್ತಾನೆ. ಯೆಶಾಯನು ಕರ್ತನಾದ ದೇವರ ಮಹಿಮಾ ಪ್ರಭಾವವನ್ನು ನೋಡಿದ ಒಡನೆಯೇ, ಆತನಿಗೆ ತನ್ನ ಸ್ವಂತ ಪಾಪಗಳ ಅರಿವು ಉಂಟಾಯಿತು (ಯೆಶಾಯ 6:1-5). ಇದೇ ಅನುಭವ ಯೋಬ, ಪೇತ್ರ ಮತ್ತು ಯೋಹಾನರಿಗೂ ಉಂಟಾಯಿತು (ಯೋಬ 42:5,6; ಲೂಕ 5:8; ಪ್ರಕಟನೆ 1:17). ಹಾಗೆಯೇ ನಾವು ದೇವರ ಸನ್ನಿಧಿಯಲ್ಲಿ ಜೀವಿಸುವಾಗ, ನಮ್ಮ ಜೀವನದಲ್ಲಿ ನಮಗೆ ಸಾಮಾನ್ಯವಾಗಿ ಕಾಣಿಸದಿರುವ, ಕ್ರಿಸ್ತನ ಗುಣಗಳಿಂದ ವಿಭಿನ್ನವಾದ, ಅನೇಕ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಹೀಗೆ ಆತ್ಮಿಕ ಮನಸ್ಸುಳ್ಳ ಮನುಷ್ಯನು ತನ್ನ ಜೀವನದಲ್ಲಿ - ನಿತ್ಯವೂ - ಗೋಚರವಾಗದೇ ಅಡಗಿರುವ ಗುಪ್ತ ಪಾಪಗಳ ವಿಷಯವಾಗಿ ಬೆಳಕನ್ನು ಕಾಣುತ್ತಾನೆ. ಆತನು ಸ್ವಯಂ ತನ್ನನ್ನು ಪರೀಕ್ಷಿಸಿಕೊಳ್ಳುವದಿಲ್ಲ. ಹಾಗೆ ಮಾಡುವುದರಿಂದ ಆತನಲ್ಲಿ ನಿರುತ್ಸಾಹ ಉಂಟಾಗುತ್ತದೆ. ಆತನು ದೇವರ ಕಡೆಗೆ ನೋಡುವುದರ ಮೂಲಕ, ಆ ಬೆಳಕಿನಲ್ಲಿ ತನ್ನ ಜೀವನದಲ್ಲಿ ತನಗೆ ಕಾಣಿಸದಿದ್ದ ಪಾಪಗಳನ್ನು ಕಂಡುಕೊಳ್ಳುತ್ತಾನೆ. ಇದರಿಂದ ಆತನು ಉತ್ಸಾಹಗೊಳ್ಳುತ್ತಾನೆ - ಎಂದಿಗೂ ನಿರುತ್ಸಾಹಗೊಳ್ಳುವುದಿಲ್ಲ.

ಇಂತಹ ಮನುಷ್ಯನು, "ದೇವರ ವಿಷಯದಲ್ಲಿಯೂ, ಮನುಷ್ಯರ ವಿಷಯದಲ್ಲಿಯೂ, ತಾನು ನಿರ್ದೋಷಿ ಎಂದು ಸಾಕ್ಷಿ ಹೇಳುವ ಮನಸ್ಸು ತನ್ನಲ್ಲಿ ಯಾವಾಗಲೂ ಇರುವಂತೆ ಅಭ್ಯಾಸ ಮಾಡಿಕೊಳ್ಳುತ್ತಾನೆ" (ಅ. ಕೃ. 24: 16) . ಹೇಗೆ ಒಬ್ಬ ವ್ಯಾಪಾರಿಯು ಹೆಚ್ಚು ಹಣ ಸಂಪಾದಿಸಲು ಬಹಳವಾಗಿ ಪ್ರಯತ್ನಿಸುತ್ತಾನೋ, ಮತ್ತು ಒಬ್ಬ ಸಂಶೋಧಕ ವಿಜ್ಞಾನಿಯು ಹೊಸ ವಿಷಯಗಳನ್ನು ಕಂಡುಹಿಡಿಯಲು ಹೆಚ್ಚಾಗಿ ಶ್ರಮಿಸುತ್ತಾನೋ, ಹಾಗೆಯೇ ಆತ್ಮಿಕ ಮನಸ್ಸುಳ್ಳ ಒಬ್ಬ ವ್ಯಕ್ತಿಯು ತನ್ನ ಮನಸ್ಸಾಕ್ಷಿಯನ್ನು ಶುದ್ಧವಾಗಿ ಇರಿಸಿಕೊಳ್ಳಲು ಎಲ್ಲಾ ಸಮಯದಲ್ಲೂ ಪ್ರಯಾಸ ಪಡುತ್ತಾನೆ.

ಇಂತಹ ಮನುಷ್ಯನು ತನ್ನನ್ನು ನಿರಂತರವಾಗಿ ಪರೀಕ್ಷಿಸಿಕೊಳ್ಳುತ್ತಾನೆ, ಏಕೆಂದರೆ ತನ್ನ ಜೀವನದಲ್ಲಿ ಶುಚಿಗೊಳ್ಳಬೇಕಾದ ಹಲವು ಸಂಗತಿಗಳು ಆತನ ಗಮನಕ್ಕೆ ಬರುತ್ತವೆ - ಆದರೆ ಇತರ ವಿಶ್ವಾಸಿಗಳು ಇಂತಹ ಸಂಗತಿಗಳಿಗೆ ಸ್ವಲ್ಪವೂ ಗಮನ ಕೊಡುವುದಿಲ್ಲ.

ಇಂತಹ ಮನುಷ್ಯನು, ದೇವರ ಚಿತ್ತದಂತೆ ನಡೆಯುವುದಕ್ಕೆ ಅಡ್ಡಿಯಾಗುವ ಅನೇಕ ಸಂಗತಿಗಳಿಗೆ ತಾನು ಪ್ರತಿ ದಿನವೂ ಸಾಯಬೇಕಾಗುತ್ತದೆ, ಎನ್ನುವದನ್ನು ಗ್ರಹಿಸಿದ್ದಾನೆ. ಇದಕ್ಕಾಗಿ ಆತನ ಜೀವನಶೈಲಿಯು ದಿನಾಲೂ ಶಿಲುಬೆಯನ್ನು ಹೊತ್ತುಕೊಂಡು ಸಾಗುವದನ್ನು ಒಳಹೊಂಡಿರುತ್ತದೆ - ಅಂದರೆ "ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ಅನುಭವಿಸುವುದು" (2 ಕೊರಿಂಥ. 4:10).

ಆತನು ಇನ್ನೊಬ್ಬರ ಎದುರು ತನ್ನನ್ನು ತಗ್ಗಿಸಿಕೊಳ್ಳುವುದಕ್ಕೆ, ಅಥವಾ ಯಾರಿಂದಲಾದರೂ ಕ್ಷಮಾಪಣೆಯನ್ನು ಕೇಳುವುದಕ್ಕೆ - ಆ ಇನ್ನೊಬ್ಬನು ತನಗಿಂತ ಹಿರಿಯನಾಗಿರಲಿ ಅಥವಾ ಕಿರಿಯನೇ ಆಗಿರಲಿ - ಯಾವ ಸಂಕೋಚವೂ ಇಲ್ಲದೆ ಸಿದ್ಧನಾಗಿದ್ದಾನೆ. ಒಬ್ಬನೇ ಒಬ್ಬ ವ್ಯಕ್ತಿಯನ್ನು ತಾನು ಯಾವುದೋ ರೀತಿಯಲ್ಲಿ ನೋಯಿಸಿದ್ದರೂ ಸಹ - ಅದು ಪತ್ನಿ, ಸಹೋದರ ಅಥವಾ ನೆರೆಯವನು ಆಗಿರಬಹುದು - ತನ್ನ ಪ್ರಾರ್ಥನೆಗಳನ್ನು ಮತ್ತು ಸೇವೆಯನ್ನು ದೇವರು ಸ್ವೀಕರಿಸುವುದಿಲ್ಲವೆಂದು ಆತನಿಗೆ ಖಚಿತವಾಗಿ ತಿಳಿದಿದೆ. ಹಾಗಾಗಿ, ತಾನು ಯಾರನ್ನೋ ನೋಯಿಸಿದ್ದೇನೆಂದು ಆತನಿಗೆ ಭಾಸವಾದೊಡನೆ, ಆತನು "ತನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ, ಮೊದಲು ತನ್ನ ಸಹೋದರನ ಸಂಗಡ ಒಂದಾಗುತ್ತಾನೆ; ಅಮೇಲೆ ಬಂದು ತನ್ನ ಕಾಣೆಕೆಯನ್ನು ಕೊಡುತ್ತಾನೆ" (ಮತ್ತಾಯ 5:23,24).

ಸುತ್ತಲಿನ ನೋಟ

ಮೇಲ್ಮುಖ ನೋಟ ಮತ್ತು ಒಳಮುಖ ನೋಟಗಳ ನಂತರ ಸುತ್ತಲಿನ ನೋಟವು ಸ್ಪಷ್ಟವಾಗಿ ಕಾಣಿಸುತ್ತದೆ.

ಒಬ್ಬ ಆತ್ಮಿಕ ಮನಸ್ಸುಳ್ಳ ಮನುಷ್ಯನು, ದೇವರು ತನ್ನನ್ನು ಆಶೀರ್ವದಿಸಿರುವ ಉದ್ದೇಶ, ತನ್ನ ಮೂಲಕ ಇತರರಿಗೆ ಆಶೀರ್ವಾದ ಸಿಗುವದಕ್ಕಾಗಿ, ಎನ್ನುವದನ್ನು ಅರಿತಿದ್ದಾನೆ. ದೇವರು ಆತನನ್ನು ಬಹಳವಾಗಿ ಕ್ಷಮಿಸಿರುವದರಿಂದ, ಆತನಿಗೆ ಕೆಡುಕನ್ನು ಉಂಟುಮಾಡಿರುವ ಎಲ್ಲರನ್ನು ಆತನು ಒಡನೆಯೇ ಸಂತೋಷದಿಂದ ಕ್ಷಮಿಸುತ್ತಾನೆ. ದೇವರು ಆತನಿಗೆ ಬಹಳ ಒಳ್ಳೆಯದನ್ನು ಮಾಡಿರುವದರಿಂದ, ಆತನೂ ಸಹ ಇತರರಿಗೆ ಒಳ್ಳೆಯದನ್ನು ಮಾಡಲು ಬಯಸುತ್ತಾನೆ. ಆತನು ದೇವರಿಂದ ಬಹಳವನ್ನು ಪಡೆದಿದ್ದಾನೆ - ಮತ್ತು ಅದೇ ರೀತಿಯಾಗಿ ಆತನು ಇತರರಿಗೆ ಧಾರಾಳವಾಗಿ ಕೊಡುತ್ತಾನೆ. ಆತನ ಜೀವನದಲ್ಲಿ ಸಿಕ್ಕಿರುವ ದೇವರ ಆಶೀರ್ವಾದವು ಆತನನ್ನು ಎಲ್ಲಾ ಜನರ ಸಾಲಗಾರನನ್ನಾಗಿ ಮಾಡಿದೆ.

ದೇವರಿಗೆ ಬಿದ್ದುಹೋಗಿರುವ ಮನುಷ್ಯನ ಬಗ್ಗೆ ಕಾಳಜಿ ಇದೆ - ಅವನಿಗೆ ಸಹಾಯ ಮಾಡಿ, ಆಶೀರ್ವದಿಸಿ, ಮೇಲಕ್ಕೆ ಎತ್ತಿ, ಅವನನ್ನು ಸೈತಾನನ ಗುಲಾಮತನದಿಂದ ಬಿಡುಗಡೆಗೊಳಿಸಬೇಕೆಂದು. ಆತ್ಮಿಕ ಮನಸ್ಸುಳ್ಳ ಮನುಷ್ಯನಲ್ಲಿಯೂ ಅದೇ ಕಾಳಜಿ ಇದೆ. ಹಾಗಾಗಿ, ಯೇಸುವಿನ ಹಾಗೆ ಆತನು ತನ್ನ ಸುತ್ತಮುತ್ತಲಿನ ಜನರ ಸೇವೆ ಮಾಡಲು ಉತ್ಸುಕನಾಗಿರುತ್ತಾನೆ, ಆದರೆ ಅವರಿಂದ ತನ್ನ ಸೇವೆ ಮಾಡಿಸಿಕೊಳ್ಳುವದು ಅವನಿಗೆ ಇಷ್ಟವಿಲ್ಲ. ಯೇಸುವು ಉಪಕಾರಗಳನ್ನು ಮಾಡುತ್ತಾ, ಸೈತಾನನಿಂದ ಬಾಧಿಸಲ್ಪಡುತ್ತಿದ್ದ ಎಲ್ಲರನ್ನು ಗುಣಮಾಡುತ್ತಾ ಸಂಚರಿಸಿದನು (ಅ. ಕೃ. 10:38) . ಒಬ್ಬ ಆತ್ಮಿಕ ಮನುಷ್ಯನೂ ಇದನ್ನೇ ಮಾಡುತ್ತಾನೆ.

ಇಂತಹ ಮನುಷ್ಯನು ಇತರರ ಸೇವೆಯ ಮೂಲಕ ಯಾವುದೇ ರೀತಿಯ ಸಂಪಾದನೆಯನ್ನು ಗಳಿಸಲು ಇಷ್ಟಪಡುವದಲ್ಲ - ಸಂಪತ್ತು ಅಥವಾ ಜನರ ಮಾನ್ಯತೆಗಳು ಅವನಿಗೆ ಬೇಕಾಗಿಲ್ಲ. ಆತನು ದೇವರಂತೆಯೇ, ತನ್ನ ಜೀವನ ಮತ್ತು ಶ್ರಮೆಯ ಮೂಲಕ ಇತರರಿಗೆ ಒಬ್ಬ ಆಶೀರ್ವಾದ ನಿಧಿಯಾಗಬೇಕು ಎಂದು ಮಾತ್ರ ಇಚ್ಛಿಸುತ್ತಾನೆ. ಆತನು ಯಾರಿಂದಲೂ ಯಾವುದೇ ಕೊಡುಗೆಗಳನ್ನು ಖಂಡಿತವಾಗಿ ನಿರೀಕ್ಷಿಸುವದಿಲ್ಲ - ಏಕೆಂದರೆ ಆತನು ತನ್ನ ಎಲ್ಲಾ ಅವಶ್ಯಕತೆಗಳಿಗಾಗಿ ದೇವರ ಮೇಲೆ ಮಾತ್ರ ಭರವಸೆ ಇರಿಸುತ್ತಾನೆ.

ಹಾಗಾಗಿ ನಾವು ನೋಡುವುದು ಏನೆಂದರೆ, ಒಬ್ಬ ನಿಜವಾದ ಆತ್ಮಿಕ ಮನಸ್ಸುಳ್ಳ ವ್ಯಕ್ತಿಯು, ಮೇಲಕ್ಕೆ, ಒಳಕ್ಕೆ ಮತ್ತು ಸುತ್ತಮುತ್ತ ನೋಡುತ್ತಾನೆ.
ಮೇಲಕ್ಕೆ ಮಾತ್ರ ನೋಡುವ ಮನುಷ್ಯನು, ಅವ್ಯವಹಾರಿಕನಾಗಿರುತ್ತಾನೆ - ಆತನದು "ಎಂಥಾ ಪರಲೋಕ-ಚಿತ್ತವೆಂದರೆ, ಭೂಲೋಕದಲ್ಲಿ ಯಾವುದೇ ಉಪಯೋಗಕ್ಕೆ ಬಾರದ್ದು".
ತನ್ನೊಳಕ್ಕೆ ಮಾತ್ರ ನೋಡುವ ಮನುಷ್ಯನು, ನಿರುತ್ಸಾಹದಿಂದ ಕುಗ್ಗಿಹೋಗುತ್ತಾನೆ.
ಮತ್ತು ತನ್ನ ಸುತ್ತಲು ಮಾತ್ರ ನೋಡುವವನು, ಕೈಗೊಳ್ಳುವ ಕಾರ್ಯವು ಆಳವಿಲ್ಲದ್ದು ಮತ್ತು ಬಾಹ್ಯ ತೋರಿಕೆಯದ್ದು ಆಗಿರುತ್ತದೆ.
ಆದರೆ ಒಬ್ಬ ಆತ್ಮಿಕ ಮನಸ್ಸಿನ ವ್ಯಕ್ತಿಯು ಈ ಮೂರು ದೆಶೆಗಳಲ್ಲೂ ಎಡೆಬಿಡದೆ ನೋಡುತ್ತಾನೆ.
ಈ ಹೊಸ ವರ್ಷದಲ್ಲಿ, ನೀವು ಈ ಸಂತುಲಿತ ಕ್ರಿಸ್ತೀಯ ಜೀವನವನ್ನು ಜೀವಿಸಿ, ಹೆಚ್ಚು ಹೆಚ್ಚಾಗಿ ಅಭಿವೃದ್ಧಿಗೊಳ್ಳಬೇಕೆಂದು ದೇವರನ್ನು ಪ್ರಾರ್ಥಿಸಿರಿ.
ಆಮೆನ್ (ಹಾಗೆಯೇ ಆಗುವದು)!