ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ಆದಿಕಾಂಡ 14ನೇ ಅಧ್ಯಾಯದಲ್ಲಿ ಅಬ್ರಹಾಮನು ಯುದ್ಧವನ್ನು ಮುಗಿಸಿ ಹಿಂದಿರುಗುವಾಗ, ಆಯಾಸಗೊಂಡಿದ್ದನು ಮತ್ತು ತನ್ನ ಕೇವಲ 318 ಸೇವಕರೊಂದಿಗೆ ಯುದ್ದಕ್ಕೆ ಹೋಗಿ, ಅನೇಕ ಅರಸರ ಸೈನ್ಯಗಳನ್ನು ನಾಶಮಾಡಿದಂತ ವಿಷಯವಾಗಿ ಗರ್ವಿಯಾಗಿದ್ದಿರಲೂಬಹುದು. ಯುದ್ಧವನ್ನು ಗೆಲ್ಲುವ ಮುಖಾಂತರ ತಾನು ಪಡೆದುಕೊಂಡ ಸಂಪತ್ತನ್ನು ಸಂಗ್ರಹಿಸಿಕೊಳ್ಳುವ ಅಪಾಯದಲ್ಲಿಯೂ ಸಹ ಅಬ್ರಹಾಮನು ಇದ್ದನು. ಆ ದಿನಗಳಲ್ಲಿ ನೀವು ಯುದ್ಧದಲ್ಲಿ ಗೆದ್ದರೆ ಶತ್ರುಗಳ ಬೆಳ್ಳಿ ಬಂಗಾರವೆಲ್ಲ ನಿಮ್ಮದಾಗುತ್ತಿತ್ತು. ಆ ಸಮಯದಲ್ಲಿ ದೇವರು ತನ್ನ ಸೇವಕನನ್ನು ಅಬ್ರಹಾಮನ ಬಳಿಗೆ ಕಳುಹಿಸಿದನು. ಇದನ್ನು ಗಮನಿಸುವುದು ಅದ್ಬುತವಲ್ಲವೇ? ಯಾರಿಗೂ ಗೊತ್ತಿಲ್ಲದ ಮತ್ತು ಮರುಭೂಮಿಯಲ್ಲಿದ್ದ (ಅರಣ್ಯದಲ್ಲಿದ್ದ) ಮೆಲ್ಕಿಚೆದೇಕನು ದೇವರೊಂದಿಗೆ ಸಂಪರ್ಕವನ್ನು ಹೊಂದಿದ್ದನು (ಆದಿಕಾಂಡ 14:18). ಮೆಲ್ಕಿಚೆದೇಕನು ಪ್ರಮುಖನಾಗಿರುವ ಕಾರಣವೇನೆಂದರೆ, ಕೀರ್ತನೆಗಳು 110:4ರಲ್ಲಿ ಯೇಸು ”ಮೆಲ್ಕಿಚೆದೇಕನ ತರಹದ ಯಾಜಕನು” ಎಂಬುದಾಗಿ ಕರೆಯಲ್ಪಟ್ಟಿದ್ದಾನೆ ಮತ್ತು ಇಬ್ರಿಯ 7ನೇ ಅಧ್ಯಾಯದಲ್ಲಿ ಇದು ದೃಢೀಕರಿಸಲಟ್ಟಿದೆ. ಆದಿಕಾಂಡ 14:18-20ರ ಮೂರು ವಚನಗಳಲ್ಲಿ ಮಾತ್ರ ಮೆಲ್ಕಿಚೆದೇಕನು ಕಾಣಸಿಗುತ್ತಾನೆ. ಮೆಲ್ಕಿಚೆದೇಕನು ಕಾಣಿಸಿಕೊಂಡು, ತನ್ನ ಸೇವೆಯನ್ನು ಪೂರೈಸಿ, ಕಣ್ಮರೆಯಾದನು ಮತ್ತು ದೇವರು ತನ್ನ ಮಗನಿಗೆ ಈ ರೀತಿ ಹೇಳಿದರು, ”ನೀನು ಸದಾಕಾಲವೂ ಮೆಲ್ಕಿಚೆದೇಕನ ತರಹದ ಯಾಜಕನು” ಎಂಬುದಾಗಿ. ಲೇವಿಯ ತರಹದ ಯಾಜಕನು ಎಂಬುದಾಗಿ ಹೇಳಿಲ್ಲ - ಲೇವಿಯು ಹಳೆ ಒಡಂಬಡಿಕೆಯ ಮಹಾಯಾಜಕನಾಗಿದ್ದನು. ಸತ್ಯವೇದದ ಕೇವಲ ಮೂರು ವಚನಗಳಲ್ಲಿ ಮಾತ್ರ ಕಾಣಿಸಿಕೊಂಡ ಮೆಲ್ಕಿಚೆದೇಕನು ಹೇಗೆ ತುಂಬಾ ಪ್ರಮುಖನಾದನು? ಇದರ ಕಾರಣವನ್ನು ನಾವು ತಿಳಿದುಕೊಳ್ಳುವುದು ತುಂಬಾ ಒಳ್ಳೇದು.

ಮೊದಲನೇಯದಾಗಿ ಮೆಲ್ಕಿಚೆದೇಕನು ಸಾಲೇಮಿನ ಅರಸನಾಗಿದ್ದನು (ಆದಿಕಾಂಡ 14:18) - ಅಂದರೆ ಯೆರುಸಲೇಮಿನಲ್ಲಿ ಅರಸನಾಗಿದ್ದನು. ಯೆರುಸಲೇಮ್ ನಿಜವಾದ ಸಭೆಯ ಚಿತ್ರಣವಾಗಿದ್ದು, ಬಾಬಿಲೋನಿಗೆ ವಿರುದ್ಧವಾದುದಾಗಿದೆ. ಮೆಲ್ಕಿಚೆದೇಕನ ತರಹ ಸಭೆಯಲ್ಲಿ ಯೇಸು ಮಹಾಯಾಜಕರಾಗಿದ್ದರು ಮತ್ತು ನಾವು ಕೂಡ ಅದೇ ತರಹದಲ್ಲಿ ಯಾಜಕರಾಗಿದ್ದೇವೆ - ಯೇಸು ಯೆರುಸಲೇಮಿನಲ್ಲಿ ಅರಸನಾಗಿದ್ದನು ಮತ್ತು ನಾವು ಕೂಡ ಅರಸರುಗಳು ಎಂಬುದಾಗಿಯೇ ಕರೆಯಲ್ಪಟ್ಟಿದ್ದೇವೆ. ನಮ್ಮ ಕರ್ತನು ನಮ್ಮನ್ನು ರಾಜರುಗಳನ್ನಾಗಿ ಮಾಡಿದ್ದಾನೆ ಮತ್ತು ಈ ಭೂಲೋಕವನ್ನು ನಾವು ಆಳುವಂತೆ ಮಾಡಿದ್ದಾನೆ. ನಾವು ನಮ್ಮ ಪಾಪದ ಮತ್ತು ನಮ್ಮ ಅಭಿಲಾಷೆಗಳ ಮೇಲೆ ಆಳ್ವಿಕೆ ನಡೆಸಲು ಕರೆಯಲ್ಪಟ್ಟಿದ್ದೇವೆ.

ಹಾಗಿದ್ದಲ್ಲಿ ಮೆಲ್ಕಿಚೆದೇಕನು ಮಾಡಿದ್ದೇನು? ಆತನು ಮೊದಲನೆಯದಾಗಿ ಅಬ್ರಹಾಮನಿಗೆ ಮತ್ತು ಆತನ 318 ಸೇವಕರಿಗೆ ಆಹಾರವನ್ನು ತಂದನು. ಕ್ರೈಸ್ತತ್ವವು ಪ್ರಾಯೋಗಿಕವಾದುದಾಗಿದೆ. ಒಬ್ಬ ಮನುಷ್ಯನು ದಣಿದಾಗ, ಆತನಿಗೆ ಬೇಕಾಗಿರುವಂತದ್ದು ಆಹಾರವೇ ಹೊರತು, ಉಪದೇಶವಲ್ಲ! ಹಸಿದ ಮನುಷ್ಯನಿಗೆ ಊಟ ಕೂಡುವುದು ಆತ್ಮಿಕತೆಯಲ್ಲ ಎಂದು ನೀವು ಅಂದುಕೊಳ್ಳಬಾರದು. ಹಸಿದ ಮನುಷ್ಯನಿಗೆ ನೀವು ಮಾಡಬಹುದಾದ ಅತಿ ಹೆಚ್ಚಿನ ಆತ್ಮಿಕ ಕಾರ್ಯ ಇದೇ ಆಗಿದೆ. ಎಲೀಯನು ದಣಿದಾಗ, ದೂತನು ಪರಲೋಕದಿಂದ ಇಳಿದು ಬಂದು, ಎರಡು ಬಾರಿ ಆಹಾರವನ್ನು ಕೊಟ್ಟನು (1 ಅರಸು 19:6-8). ಯೇಸುವು ಪುನರುತ್ಥಾನ ಹೊಂದಿದ ಮೇಲೆ, ಇಡೀ ರಾತ್ರಿ ಮೀನು ಹಿಡಿದು ದಣಿದಿರುವ ತನ್ನ ಶಿಷ್ಯರನ್ನು ಬೆಳಗ್ಗಿನ ಸಮಯದಲ್ಲಿ ಯೇಸು ನೋಡಿದಾಗ, ಅವರಿಗಾಗಿ ಊಟವನ್ನು ಸಿದ್ಧಮಾಡಿದನು (ಯೋಹಾನ 21:19). ಅಗತ್ಯವಿರುವಲ್ಲಿ ಇತರರಿಗೆ ಆಹಾರ ಮತ್ತು ಅವರ ಭೌತಿಕ ವಸ್ತುಗಳನ್ನು ಒದಗಿಸುವುದು, ನಿಜವಾದ ಆತ್ಮಿಕತೆಯಾಗಿದೆ. ಮೆಲ್ಕಿಚೇದಕನ ಯಾಜಕತ್ವದ ಮೊದಲ ಭಾಗ ಇದಾಗಿದೆ.

ಮೆಲ್ಕಿಚೆದೇಕನು ಅಬ್ರಹಾಮನನ್ನು ಆಶೀರ್ವದಿಸಿದನು ಎಂಬುದಾಗಿ ಮುಂದೆ ಹೇಳಲ್ಪಟ್ಟಿದೆ (ಆದಿಕಾಂಡ14:19) . ಆತನು ಅಬ್ರಹಾಮನನ್ನು ಟೀಕಿಸಲಿಲ್ಲ. ಮೆಲ್ಕಿಚೆದೇಕನಲ್ಲಿ ದೂಷಿಸುವಂತ ಆತ್ಮ ಇರಲಿಲ್ಲ. ಇಲ್ಲ. ಕೇವಲ ಆಶೀರ್ವದಿಸುವಂತ ಆತ್ಮ ಮಾತ್ರ ಇತ್ತು. ಹಾಗಿದ್ದಲ್ಲಿ ಆತನು ಅಬ್ರಹಾಮನನ್ನು ಹೇಗೆ ಆಶೀರ್ವದಿಸಿದನು? ಆತನು ಹೇಳಿದ್ದೇನೆಂದರೆ, ”ಭೂಮ್ಯಾಕಾಶಗಳನ್ನು ನಿರ್ಮಾಣ ಮಾಡಿದ ಪರಾತ್ಮರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ಆಗಲಿ”. ಪರಲೋಕ ಮತ್ತು ಭೂಲೋಕವೇ ದೇವರದ್ದಾಗಿರುವುದರಿಂದ, ಯುದ್ದದಲ್ಲಿ ಗೆದ್ದ ಸ್ವಲ್ಪ ಬಂಗಾರ ಮತ್ತು ಬೆಳ್ಳಿಯನ್ನು ತೆಗೆದುಕೊಳ್ಳಬಾರದು ಎಂದು ಮೆಲ್ಕಿಚೆದೇಕನು ಅಬ್ರಹಾಮನಿಗೆ ನೆನಪಿಸಿದನು. ಅಬ್ರಹಾಮನು ದುರಾಶೆಯುಳ್ಳವನಾಗುವಂತದ್ದರಿಂದ ರಕ್ಷಿಸಲು ಮೆಲ್ಕಿಚೆದೇಕನು ಪ್ರಯತ್ನಿಸಿದನು. ನಂತರ ಆತನು ಹೇಳಿದ್ದೇನೆಂದರೆ - ”ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ್ದಕ್ಕಾಗಿ ದೇವರಿಗೆ ಸ್ತೋತ್ರ''. ಮತ್ತು ಅಬ್ರಹಾಮನನ್ನು ಗರ್ವದಿಂದ ರಕ್ಷಿಸುವ ಸಲುವಾಗಿ, ದೇವರು ಈ ಜಯವನ್ನು ಕೊಟ್ಟನು ಎಂಬುದಾಗಿ ಮೆಲ್ಕಿಚೆದೇಕನು ಅಬ್ರಹಾಮನಿಗೆ ನೆನಪಿಸಿದನು.

ಅಬ್ರಹಾಮನಿಗೆ ಈ ಮೂರು ಸಮಸ್ಯೆಗಳು ಅಂದರೆ - ಅಬ್ರಹಾಮನು ದಣಿದಿದ್ದನು, ಅವನಿಗೆ ಆಹಾರ ಬೇಕಿತ್ತು ಮತ್ತು ಅವನು ಗರ್ವ ಮತ್ತು ಅತ್ಯಾಶೆ ಪಡುವಂತಹ ಅಪಾಯದಲ್ಲಿದ್ದನು ಎಂದು ಮೆಲ್ಕಿಚೆದೇಕನಿಗೆ ಹೇಗೆ ಗೊತ್ತಾಯಿತು? ಹಾಗಿದ್ದಲ್ಲಿ ಮೆಲ್ಕಿಚೆದೇಕನ ಸೇವೆಯು ಅಬ್ರಹಾಮನ ಈ ಮೂರು ಅಗತ್ಯತೆಗಳನ್ನು ಸರಿಯಾಗಿ ಹೇಗೆ ಪೂರೈಸಿತು? ಮೆಲ್ಕಿಚೆದೇಕನ ಸೇವೆಯು ಗುರಿಯ ಮಧ್ಯಭಾಗಕ್ಕೆ ಬಾಣವು ನಾಟುವಂತಿತ್ತು . ಮೆಲ್ಕಿಚೆದೇಕನ ರಹಸ್ಯ ಏನಾಗಿತ್ತೆಂದರೆ - ಈತನು ಪ್ರತಿದಿನ ದೇವರ ಮಾತನ್ನು ಕೇಳಿಸಿಕೊಳ್ಳುವಂತ ಹವ್ಯಾಸವನ್ನು ಹೊಂದಿದ್ದನು. ಮೆಲ್ಕಿಚೆದೇಕನು ತನ್ನ ಚಾಣಕ್ಷತನದ ಅಲೋಚನೆಯಿಂದ ಜೀವಿಸಲಿಲ್ಲ. ಬದಲಾಗಿ ದೇವರ ವಾಕ್ಯದಿಂದ ಜೀವಿಸಿದನು. ಜನರ ಅಗತ್ಯತೆಗಳನ್ನು ಪೂರೈಸುವ ಎಲ್ಲಾ ಪ್ರವಾದನಾ ಸೇವೆಯ ರಹಸ್ಯ ಇದೇ ಆಗಿದೆ.

ಒಂದು ದಿನ ಮೆಲ್ಕಿಚೆದೇಕನು ದೇವರಿಗಾಗಿ ಕಾಯುತ್ತಿದ್ದಾಗ, ದೇವರು ಆತನಿಗೆ ಹೇಳಿದ್ದೇನೆಂದರೆ, ”ಎದ್ದೇಳು, 400 ಜನರಿಗಾಗುವಷ್ಟು ಆಹಾರವನ್ನು ತೆಗೆದುಕೊಂಡು ಹೋಗು". ಮತ್ತು ಈ ಎರಡು ವಾಕ್ಯಗಳ ಸಂದೇಶವನ್ನು ತೆಗೆದುಕೊಂದು ಹೋಗಿ ನೀನು ಇದುವರೆಗೂ ಭೇಟಿಯಾಗದ, ಇಂತಿಂತ ರಸ್ತೆಯಲ್ಲಿ ಪ್ರಯಾಣಿಸುತ್ತಿರುವ ನನ್ನ ಸೇವಕನಿಗೆ ಕೊಡು” ಎಂದು ದೇವರು ಮೆಲ್ಕಿಚೆದೇಕನಿಗೆ ಹೇಳಿದರು. ಪಿಲಿಪ್ಪನು ಇತಿಯೋಪಿಯಾದ ನಪುಂಸಕನನ್ನು ಗಾಜಕ್ಕೆ ಹೋಗುವ ರಸ್ತೆಯಲ್ಲಿ ಭೇಟಿಯಾಗಲು ಹೋದಂತೆ, ತಾನು ಯಾರನ್ನು ಭೇಟಿಯಾಗಲು ಹೊರಟಿದ್ದೇನೆ ಎಂದು ತಿಳಿಯದೆ ಮೆಲ್ಕಿಚೆದೇಕನು ಅಬ್ರಹಾಮನನ್ನು ಸಂಧಿಸಲು ಹೋದನು. ದೇವರು ಆತನಿಗೆ ಹೇಳಿದ ಸ್ಥಳಕ್ಕೆ ಮೆಲ್ಕಿಚೆದೇಕನು ಹೋದಾಗ, ಅಲ್ಲಿ ಅಬ್ರಹಾಮನನ್ನು ಆತನು ಭೇಟಿಯಾದನು. ಆತನಿಗೆ ಆಹಾರ ಮತ್ತು ಸಂದೇಶವನ್ನು ಕೊಟ್ಟನು. ನಂತರ ಮನೆಗೆ ಹಿಂತಿರುಗಿದನು. ಉಡುಗೊರೆ ಅಥವಾ ಹೊಗಳಿಕೆಗಾಗಿ ಕಾಯದೇ, ಜನರನ್ನು ಆಶೀರ್ವದಿಸಿ ಮತ್ತು ನಂತರ ಕಣ್ಮರೆ ಆಗುವಂತದ್ದು ಎಂತಹ ಅದ್ಭುತ ಸೇವೆ ಇದು. ಮೆಲ್ಕಿಚೆದೇಕನ ಯಾಜಕರು ಈ ರೀತಿ ಸೇವೆ ಮಾಡುವಂತವರು ಮತ್ತು ಸೇವೆ ಮಾಡಿ ಕಣ್ಮರೆಯಾಗುವಂತವರಾಗಿದ್ದಾರೆ. ಯೆರುಸಲೇಮ್ ಇಂತಹ ಯಾಜಕರ ಮೂಲಕ ಕಟ್ಟಲ್ಪಟ್ಟಿದೆ. ಇಂದು ಯೆರೂಸಲೇಮಿನ ನಿಜವಾದ ರಾಜರುಗಳು ಇವರಾಗಿದ್ದಾರೆ.