WFTW Body: 

"ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆ ಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು" (ಮತ್ತಾ. 5:11). ಇದರ ಹಿಂದಿನ ವಚನವು ಇದಕ್ಕೆ ಹೋಲುತ್ತದೆ, "ನೀತಿಯ ನಿಮಿತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು;" ಆದರೆ ಇಲ್ಲಿ ಯೇಸುವು ಹೇಳಿರುವುದರಲ್ಲಿ ಒಂದು ಪ್ರಮುಖ ವ್ಯತ್ಯಾಸವಿದೆ.

10ನೇ ವಚನ ಮತ್ತು 11ನೇ ವಚನದ ನಡುವಿನ ವ್ಯತ್ಯಾಸವೆಂದರೆ, 10ನೇ ವಚನದಲ್ಲಿ, ನೀವು ನೀತಿಯ ಪರವಾಗಿ ಧೃಢವಾಗಿ ನಿಲ್ಲುತ್ತೀರಿ. ಕೆಲವೊಮ್ಮೆ ಕ್ರೈಸ್ತರಲ್ಲದ ಅವಿಶ್ವಾಸಿಗಳು ಸಹ ಸತ್ಯದ ಪರವಾಗಿ ಧೃಢವಾಗಿ ನಿಲ್ಲುತ್ತಾರೆ. ಸತ್ಯದ ಪರವಾಗಿ ನಿಂತದ್ದಕ್ಕಾಗಿ ಜನರು ನೌಕರಿಯನ್ನು ಕಳೆದುಕೊಂಡಿದ್ದಾರೆ, ನ್ಯಾಯವಾದ ತೀರ್ಪನ್ನು ನೀಡಿದ್ದಕ್ಕಾಗಿ ನ್ಯಾಯಾಧೀಶರು ಕೊಲ್ಲಲ್ಪಟ್ಟಿದ್ದಾರೆ, ಉದ್ಯಮಿಗಳು, ರಾಜಕಾರಣಿಗಳು ಮತ್ತು ಇತರರು, ಇದಕ್ಕಾಗಿ ತಮ್ಮ ವೈರಿಗಳಿಂದ ಕೊಲ್ಲಲ್ಪಟ್ಟಿದ್ದಾರೆ. ಕೇವಲ ಕ್ರೈಸ್ತರು ಈ ರೀತಿಯಾಗಿ ನಡೆಯುತ್ತಾರೆಂದು ಹೇಳಲು ಬರುವುದಿಲ್ಲ, ಏಕೆಂದರೆ ಕೆಲವೊಮ್ಮೆ ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರಿಗಿಂತ ಹೆಚ್ಚಿನ ಪ್ರಾಮಾಣಿಕತೆಯನ್ನು ಕ್ರೈಸ್ತರಲ್ಲದ ಅವಿಶ್ವಾಸಿಗಳು ತೋರಿಸುವುದು ಕ್ರೈಸ್ತರನ್ನು ನಾಚಿಕೆಗೊಳಿಸುವ ವಿಷಯವಾಗಿದೆ. ನ್ಯಾಯತೀರ್ಪಿನ ದಿನದಂದು ನಿಮಗೆ ಬಹಳಷ್ಟು ಆಶ್ಚರ್ಯಗಳು ಎದುರಾಗಲಿವೆ, ಮತ್ತು ತಾವು ದೇವರ ರಾಜ್ಯವನ್ನು ಪ್ರವೇಶಿಸುತ್ತೇವೆಂದು ಭಾವಿಸಿದ್ದ ಕೆಲವು ಕ್ರೈಸ್ತರು, ಆ ದಿನದಲ್ಲಿ ರಾಜಿ ಮಾಡಿಕೊಂಡವರು ಮತ್ತು ಹಿಂಜಾರಿದವರು ಎಂದು ತೋರಿಸಲ್ಪಡುತ್ತಾರೆ ಎಂಬುದಾಗಿ ನಾನು ನಂಬುತ್ತೇನೆ. ನೀವು ನೀತಿವಂತರಾಗಿದ್ದರೆ ಮತ್ತು ನೀತಿಗಾಗಿ ಹಿಂಸಿಸಲ್ಪಡಲು ಸಿದ್ಧರಾಗಿದ್ದರೆ, ಸ್ವರ್ಗದ ರಾಜ್ಯವು ನಿಮ್ಮದಾಗಿದೆ; ಇಲ್ಲವಾದರೆ ಇಲ್ಲ.

"ಹಳೆಯ ಒಡಂಬಡಿಕೆಯಲ್ಲಾಗಲೀ, ಹೊಸ ಒಡಂಬಡಿಕೆಯಲ್ಲಾಗಲೀ ಯಾವ ಯಥಾರ್ಥ ಪ್ರವಾದಿಯನ್ನೂ ಜನರು ಮೆಚ್ಚಿಕೊಳ್ಳಲಿಲ್ಲ"

"ಮತ್ತಾಯನು 5:11"ರಲ್ಲಿ ಯೇಸುವಿನ ನಿಮಿತ್ತ ಹಿಂಸಿಸಲ್ಪಡುವುದನ್ನು ಪ್ರಸ್ತಾಪಿಸಲಾಗಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಯೇಸುವಿನ ಶಿಷ್ಯರೆಂಬ ಅಂಶವನ್ನು ಮರೆಮಾಚಿದರೆ, ಅದರಿಂದ ಕೆಲವು ಅನುಕೂಲಗಳನ್ನು ಪಡೆಯಲು ಸಾಧ್ಯವಾಗಬಹುದು. ಬಹುಶಃ ನೀತಿವಂತರಾಗಿ ನಡೆದುಕೊಂಡು ಅದಕ್ಕಾಗಿ ನೀವು ಜನರ ಪ್ರಶಂಸೆಯನ್ನು ಗಳಿಸಬಹುದು, ಆದರೆ ಯೇಸು ಕ್ರಿಸ್ತನು ರಕ್ಷಣೆಯ ಮಾರ್ಗವಾಗಿದ್ದಾನೆಂಬ ನಿಮ್ಮ ನಂಬಿಕೆಯನ್ನು ಇತರರಿಗೆ ತಿಳಿಸಿದರೆ ಕೆಲಸದಲ್ಲಿ ಬಡ್ತಿ ಪಡೆಯುವ ಅವಕಾಶ ತಪ್ಪಿಹೋಗುತ್ತದೆಂಬ ಭಯದಿಂದ ನೀವು ಆ ವಿಷಯವನ್ನು ಯಾರಿಗೂ ತಿಳಿಸದೇ ಸುಮ್ಮನಿರಬಹುದು. ಬಹುಶಃ ನೀವು ಕ್ರಿಸ್ತನ ಒಬ್ಬ ಸಾಕ್ಷಿಯಾಗಲಿಕ್ಕೆ ನಾಚಿಕೊಳ್ಳಬಹುದು, ಮತ್ತು ನಿಮ್ಮ ಮೇಲಾಧಿಕಾರಿಗಳು ಅವಿಶ್ವಾಸಿಗಳಾಗಿರುವುದರಿಂದ, ಇತರರ ಮುಂದೆ ನೀವು ಅವಿಶ್ವಾಸಿಗಳಂತೆ ತೋರಿಕೆ ಮಾಡಲು ಪ್ರಯತ್ನಿಸಬಹುದು. ನಾನು ಹಲವಾರು ಸರ್ಕಾರಿ ಕಛೇರಿಗಳಲ್ಲಿ ಮತ್ತು ಬ್ಯಾಂಕುಗಳಲ್ಲಿ ನೋಡಿದ್ದೇನೆ, ಅವಿಶ್ವಾಸಿಗಳು ತಮ್ಮ ಇಷ್ಟದೇವತೆಯ ಚಿತ್ರವಿರುವ ಕ್ಯಾಲೆಂಡರ್‌ಗಳನ್ನು ನೇತುಹಾಕುತ್ತಾರೆ, ಆದರೆ ಒಬ್ಬ ಕ್ರೈಸ್ತನು ತನ್ನ ನಂಬಿಕೆಯನ್ನು ಪ್ರಕಟಿಸುವ ಸತ್ಯವೇದದ ವಾಕ್ಯಗಳುಳ್ಳ ಕ್ಯಾಲೆಂಡರನ್ನು ನೇತುಹಾಕಲು ಇಷ್ಟಪಡುವುದು ಬಹಳ ಅಪರೂಪ. ಏಕೆಂದರೆ ಜನರು ತನ್ನ ಬಗ್ಗೆ ಏನು ಮಾತನಾಡುತ್ತಾರೋ ಎಂಬ ಭಯ ಅವನಲ್ಲಿದೆ. "ನನ್ನ ಮೇಲಾಧಿಕಾರಿ ಇದನ್ನು ನೋಡಿ ನನ್ನ ಬಡ್ತಿಯನ್ನು ತಡೆಯುತ್ತಾರೋ ಅಥವಾ ಯಾವುದಾದರೂ ರೀತಿಯಲ್ಲಿ ನನಗೆ ಕಿರುಕುಳ ನೀಡುತ್ತಾರೋ?" ಎಂದು ಅವರು ಭಯಪಡುತ್ತಾರೆ.

"ನನ್ನ ನಿಮಿತ್ತ ಹಿಂಸೆ ಅನುಭವಿಸುವವರು, ನನ್ನ ಹೆಸರನ್ನು ಪ್ರಕಟಿಸಲು ನಾಚಿಕೆಪಡದವರು ಧನ್ಯರು." ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಯೇಸುವಿನ ಕುರಿತು ನಾಚಿಕೆಪಡುತ್ತೀರಾ? ನಿಮ್ಮ ಹೊರಗಣ ಜೀವಿತದ ನೀತಿವಂತಿಕೆಗಾಗಿ ಹೆಮ್ಮೆಪಡಬೇಡಿ, ಏಕೆಂದರೆ ಅನೇಕ ಕ್ರೈಸ್ತರಲ್ಲದ ಅವಿಶ್ವಾಸಿಗಳೂ ತಮ್ಮ ಹೊರಗಣ ಜೀವಿತದಲ್ಲಿ ನೀತಿವಂತರಾಗಿದ್ದಾರೆ. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರಿ, "ನಾನು ಕ್ರೈಸ್ತನೂ ಆಗಿದ್ದೇನೆ, ನಾನು ಯೇಸು ಕ್ರಿಸ್ತನ ಶಿಷ್ಯನಾಗಿದ್ದೇನೆ,” ಎಂದು ಸ್ಪಷ್ಟವಾಗಿ ಘೋಷಿಸಿರಿ. ನೀವು ದೇವರಿಗಾಗಿ ಮತ್ತು ಆತನ ವಾಕ್ಯಕ್ಕಾಗಿ ಧೃಢವಾಗಿ ನಿಂತರೆ (ಇದು ಕೇವಲ ನಿಮ್ಮ ಕೆಲಸದ ಸ್ಥಳದಲ್ಲಿ ಅಲ್ಲ, ನಿಮ್ಮ ಜೀವಿತದಲ್ಲಿ ದೇವರ ವಾಕ್ಯದ ಬೋಧಕನಾಗಿ ವಾಕ್ಯದಿಂದ ನೀವು ಉಪದೇಶಿಸುವಂತ ಪ್ರತಿಯೊಂದು ಸತ್ಯಾಂಶಕ್ಕಾಗಿ ಧೃಢವಾಗಿ ನಿಂತರೆ), ಕ್ರೈಸ್ತತ್ವದ ಸಂಘಟನೆಗಳಲ್ಲಿ ಹರಡಿರುವ ವಂಚನೆಯನ್ನು ಬಹಿರಂಗಪಡಿಸಲು ನೀವು ಉತ್ಸುಕರಾಗಿದ್ದರೆ, ಜನರು ನಿಮ್ಮನ್ನು ಅವಮಾನಪಡಿಸುತ್ತಾರೆ, ಹಿಂಸಿಸುತ್ತಾರೆ ಮತ್ತು ನಿಮ್ಮ ಕುರಿತಾಗಿ ಎಲ್ಲಾ ರೀತಿಯ ಸುಳ್ಳು ಕಟ್ಟುಕಥೆಗಳನ್ನು ಹರಡಿಸುತ್ತಾರೆ, ಏಕೆಂದರೆ ನೀವು ದೇವರ ಸತ್ಯಕ್ಕಾಗಿ ದೃಢವಾಗಿ ನಿಂತಿದ್ದೀರಿ.

ಇಂತಹ ಸಂದರ್ಭಗಳಲ್ಲಿ ನೀವು ಏನು ಮಾಡಬೇಕು? ನಾವು ನಮ್ಮ ಪರಿಸ್ಥಿತಿಯ ಬಗ್ಗೆ ವಿಷಾದಿಸಬೇಕೇ? ಖಂಡಿತವಾಗಿಯೂ ಇಲ್ಲ! ಈ ವಚನವು ಹೇಳುವಂತೆ, "ಸಂತೋಷಪಡಿರಿ, ಉಲ್ಲಾಸಪಡಿರಿ; ಏಕೆಂದರೆ ನಿಮಗೆ ಪರಲೋಕದಲ್ಲಿ ಬಹಳ ಫಲ ಸಿಕ್ಕುವುದು"(ಮತ್ತಾ. 5:12). ಈ ಲೋಕದಲ್ಲಿ ನಿಮಗೆ ಪ್ರತಿಫಲ ಅಥವಾ ಸನ್ಮಾನ ಸಿಗುವುದಿಲ್ಲ - ಒಂದು ವೇಳೆ ನೀವು ಹಿಂಸೆಯನ್ನು ಅನುಭವಿಸಬಹುದು ಮತ್ತು ಹೊರಹಾಕಲ್ಪಡಬಹುದು - ಆದರೆ ನೀವು ಪರಲೋಕದಲ್ಲಿ ಪಡೆಯುವಂತ ಬಹುಮಾನವು ಶ್ರೇಷ್ಠವಾದದ್ದು, ಏಕೆಂದರೆ ನಿಮಗಿಂತ ಮುಂಚೆ ಇದ್ದ ಎಲ್ಲಾ ಪ್ರವಾದಿಗಳನ್ನೂ ಅವರು ಹೀಗೆಯೇ ಹಿಂಸಿಸಿದರು. ನೀವು ಹಳೆಯ ಒಡಂಬಡಿಕೆಯ ಪ್ರವಾದಿಗಳನ್ನು ಗಮನಿಸಿದರೆ, ದೇವರ ನಿಜವಾದ ಪ್ರವಾದಿಗಳು ಹಿಂಸಿಸಲ್ಪಟ್ಟದ್ದನ್ನು ಕಾಣುತ್ತೀರಿ. ಕೆಲವೊಮ್ಮೆ ಅವರು ಅನುಭವಿಸಿದ ಹಿಂಸೆಗಳ ಸ್ಪಷ್ಟ ವಿವರಣೆಯು ಕೊಡಲ್ಪಟ್ಟಿಲ್ಲ. ಉದಾಹರಣೆಗೆ, ಇಸ್ರಾಯೇಲ್ಯರ ವಿರುದ್ಧವಾಗಿ ಬಿರುಸಾಗಿ ಮಾತನಾಡಿದ ಯೆಶಾಯನಂತ ಒಬ್ಬ ಮನುಷ್ಯನನ್ನು ಪರಿಗಣಿಸಿರಿ. ಯೆಶಾಯನ ಗ್ರಂಥದಲ್ಲಿ ಆತನು ಯಾವ ರೀತಿ ಸತ್ತುಹೋದನು ಎಂಬುದಾಗಿ ತಿಳಿಸಲಾಗಿಲ್ಲ, ಆದರೆ ಜಾನಪದ ಸಂಪ್ರದಾಯದ ಪ್ರಕಾರ ನಮಗೆ ತಿಳಿಯುವುದು ಏನೆಂದರೆ, ಆತನು ಒಂದು ಮರದ ಟೊಳ್ಳು ದಿಮ್ಮಿಯೊಳಗೆ ಅಡಗಿದ್ದನು ಮತ್ತು ಅವನನ್ನು ಹಿಂಸಿಸಿದ ಜನರು ಅವನನ್ನು ಗರಗಸದಿಂದ ಎರಡು ಹೋಳಾಗಿ ಕತ್ತರಿಸಿಬಿಟ್ಟರು.

"ಇಬ್ರಿಯರಿಗೆ 11"ನೇ ಅಧ್ಯಾಯದಲ್ಲಿ ಉಲ್ಲೇಖಿಸಲ್ಪಟ್ಟ ಜನರಲ್ಲಿ ಯೆಶಾಯನು ಒಬ್ಬನು, ಮತ್ತು ಅವನನ್ನು "ಗರಗಸದಿಂದ ಕೊಯ್ದು ಕೊಂದರು" ಎಂದು ಹೇಳಲಾಗಿದೆ. ಕ್ರಿಸ್ತನ ನಾಮಕ್ಕಾಗಿ ಧೃಢವಾಗಿ ನಿಲ್ಲುವ ಪ್ರತಿಯೊಬ್ಬನೂ ಹಿಂಸಿಸಲ್ಪಡುತ್ತಾನೆ. "ಅಪೊಸ್ತಲರ ಕೃತ್ಯಗಳು 7"ನೇ ಅಧ್ಯಾಯದಲ್ಲಿ, ಸ್ತೆಫನನು ಮಹಾಯಾಜಕರ ಮುಂದೆ ನಿಂತಾಗ, ಆತನು ಅಲ್ಲಿ ನೆರೆದಿದ್ದ ಜನಸಮೂಹಕ್ಕೆ ವಿಸ್ತಾರವಾದ ಸಂದೇಶವನ್ನು ನೀಡಿದ ನಂತರ, "ಅಪೋಸ್ತಲರ ಕೃತ್ಯಗಳು 7:52"ರಲ್ಲಿ ಒಂದು ಬಹಳ ಪ್ರಮುಖ ಪ್ರಶ್ನೆಯನ್ನು ಹಾಕುತ್ತಾನೆ, "ಪ್ರವಾದಿಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿದ್ದಾರೆ? ನಿಮ್ಮ ಪಿತೃಗಳು ಆ ನೀತಿಸ್ವರೂಪನಾದ ಯೇಸುವಿನ ಆಗಮನದ ವಿಷಯವನ್ನು ಮುಂದಾಗಿ ಸಾರಿದವರನ್ನು ಕೊಂದರು. ಇಸ್ರಾಯೇಲಿನ ಪ್ರವಾದಿಗಳಲ್ಲಿ ಅವರು ಹಿಂಸಿಸದೇ ಬಿಟ್ಟವರು ಯಾರಿದ್ದಾರೆ? ಒಬ್ಬನನ್ನಾದರೂ ಹೆಸರಿಸಬಲ್ಲಿರಾ?" ಇಲ್ಲಿ ಸ್ತೆಫನನು ಇಸ್ರಾಯೇಲ್ಯರ ಈ ಇತಿಹಾಸವನ್ನು ವಿಸ್ತಾರವಾಗಿ ಹೇಳಿದನು. ಆತನು ಇಸ್ರಾಯೇಲಿನ ಇತಿಹಾಸವನ್ನು ಅಧ್ಯಯನ ಮಾಡಿದ್ದನು ಮತ್ತು ಇಸ್ರಾಯೇಲ್ಯರ ಸಂಪೂರ್ಣ ಇತಿಹಾಸದಲ್ಲಿ ಹಿಂಸೆಗೆ ಒಳಗಾಗದ ಒಬ್ಬನೇ ಒಬ್ಬ ಪ್ರವಾದಿಯೂ ಇರಲಿಲ್ಲವೆಂದು ಅರಿತಿದ್ದನು. ಹಳೆಯ ಒಡಂಬಡಿಕೆಯಲ್ಲಾಗಲೀ, ಹೊಸ ಒಡಂಬಡಿಕೆಯಲ್ಲಾಗಲೀ ಯಾವ ಯಥಾರ್ಥ ಪ್ರವಾದಿಯನ್ನೂ ಜನರು ಮೆಚ್ಚಿಕೊಳ್ಳಲಿಲ್ಲ.

ಸಭಾಪಾಲಕರನ್ನು ಜನರು ಮೆಚ್ಚಿಕೊಳ್ಳಬಹುದು, ಸೌವಾರ್ತಿಕರನ್ನು ಜನರು ಮೆಚ್ಚಿಕೊಳ್ಳಬಹುದು, ಮತ್ತು ಕೆಲವೊಮ್ಮೆ ಅಪೊಸ್ತಲರು ಸಹ ಜನಪ್ರಿಯರು ಆಗಬಹುದು. ಉಪದೇಶಕರು ಸಭೆಯಲ್ಲಿ ಬಹಳ ಜನಪ್ರಿಯತೆಯನ್ನು ಗಳಿಸಬಹುದು, ಆದರೆ ಒಬ್ಬ ಪ್ರವಾದಿಯನ್ನು ಜನರು ಮೆಚ್ಚಿಕೊಳ್ಳುವುದು ಸಾಮಾನ್ಯವಾಗಿ ಇಲ್ಲವೇ ಇಲ್ಲವೆನ್ನಬಹುದು, ಏಕೆಂದರೆ ಆತನು ಒಂದು ಸಭೆಯನ್ನು ಅಥವಾ ಅದರಲ್ಲಿರುವ ಜನರನ್ನು ಪರೀಕ್ಷಿಸಿ ನೋಡಿ ಅವರ ತಪ್ಪುಗಳನ್ನು ಗುರುತಿಸಿ ಅವುಗಳನ್ನು ಬೆಳಕಿಗೆ ತರುವುದಕ್ಕಾಗಿ ಬರುತ್ತಾನೆ. ಆತನು ಸಭೆಗೆ ಬರುವ ಉದ್ದೇಶ ಅವರು ಕೇಳಬೇಕಾಗಿರುವುದನ್ನು ಬೋಧಿಸುವುದಕ್ಕಾಗಿ ಮತ್ತು ಅವರು ಇಷ್ಟಪಡುವುದನ್ನು ಬೋಧಿಸುವುದಕ್ಕಾಗಿ ಅಲ್ಲ. ಅವರು ದೇವರ ವಾಕ್ಯದ ಯಾವ ಅಂಶಗಳನ್ನು ನಿರ್ಲಕ್ಷಿಸುತ್ತಿದ್ದಾರೆಂದು ಅವನು ಅವರಿಗೆ ತೋರಿಸುತ್ತಾನೆ. ಆ ಜನರ ಜೀವನದಲ್ಲಿ ಯಾವ ಕ್ಷೇತ್ರಗಳಲ್ಲಿ ಅವರು ದೇವರ ಗುಣಮಟ್ಟವನ್ನು ತಲುಪಿಲ್ಲವೆಂಬುದನ್ನು ಅವನು ತೋರಿಸಿಕೊಡುತ್ತಾನೆ, ಮತ್ತು ಇದಕ್ಕಾಗಿ ಹಿಂಸೆಗೆ ಗುರಿಯಾಗುತ್ತಾನೆ. ಇದು ಇಂದಿಗೂ ನಡೆಯುತ್ತಿದೆ. "ಯೇಸುವಿನ ನಿಮಿತ್ತವಾಗಿ ಮತ್ತು ಯೇಸುವಿನ ಬೋಧನೆಯ ನಿಮಿತ್ತವಾಗಿ" ಧೃಢವಾಗಿ ನಿಲ್ಲುವುದು ಎಂಬುದರ ಅರ್ಥ ಇದೇ ಆಗಿದೆ. ನೀನು ಹಿಂಸೆಗೆ ಒಳಗಾದರೆ ಧನ್ಯನು ಮತ್ತು ಅದು ಶ್ರೇಷ್ಠ ಗೌರವವಾಗಿದೆ. ಸತ್ಯವೇದದ ಮತ್ತೊಂದು ಆವೃತ್ತಿಯಲ್ಲಿ ಈ ವಚನ "ಸಂತೋಷದಿಂದ ಕುಣಿದಾಡಿರಿ" ಎಂದು ಬರೆಯಲ್ಪಟ್ಟಿದೆ! ಇದಕ್ಕಾಗಿ ನೀನು ಉಲ್ಲಾಸಿಸಬೇಕು ಏಕೆಂದರೆ ನೀನು ಪ್ರವಾದಿಗಳು ಮತ್ತು ಯೇಸು ಕ್ರಿಸ್ತನು ನಡೆದ ದಾರಿಯಲ್ಲಿ ಸಾಗುತ್ತಿರುವೆ.