ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಕ್ರಿಸ್ತನ ದೇಹವನ್ನು ಒಂದು ಆಸ್ಪತ್ರೆಗೆ ಹೋಲಿಸಬಹುದು. ಒಬ್ಬ ಮನುಷ್ಯನು ಕಾಯಿಲೆಯಿಂದ ವಾಸಿಯಾಗುವುದಕ್ಕಾಗಿ ಒಂದು ಆಸ್ಪತ್ರೆಗೆ ಹೋಗುತ್ತಾನೆ, ಮತ್ತು ಅಲ್ಲಿ ಆತನ ಚಿಕಿತ್ಸೆಗಾಗಿ ಹಲವು ವಿಭಾಗಗಳು ಇರುತ್ತವೆ. ಆತನ ಅವಶ್ಯಕತೆ ಚುಚ್ಚುಮದ್ದು ಆಗಿರಬಹುದು, ಅಥವಾ ಶಾರೀರಿಕ ಉಪಚಾರ ('physiotherapy'), ಅಥವಾ ಶಸ್ತ್ರಚಿಕಿತ್ಸೆ ಇರಬಹುದು. ಆತನು ಕಣ್ಣಿನ ವೈದ್ಯನನ್ನು ಭೇಟಿ ಮಾಡಬಹುದು ಅಥವಾ ಕಿವಿಯ ವೈದ್ಯನನ್ನು ನೋಡಬಹುದು. ಹೀಗೆ ಆಸ್ಪತ್ರೆಯಲ್ಲಿ ಅನೇಕ ವಿಭಾಗಗಳಿರುತ್ತವೆ. ಕಣ್ಣಿನ ವೈದ್ಯನು ಯಾವಾಗಲೂ ಜನರ ಕಣ್ಣುಗಳನ್ನು ಮಾತ್ರ ಪರೀಕ್ಷಿಸುತ್ತಾನೆ ಮತ್ತು ಬೇರೆ ಏನನ್ನೂ ನೋಡುವುದಿಲ್ಲ. ಆ ವೈದ್ಯನು ಮಾನವ ದೇಹದ ಇತರ ಅಂಗಗಳು ಪ್ರಧಾನವಲ್ಲವೆಂದು ಭಾವಿಸುವುದಿಲ್ಲ, ಆದರೆ ಆತನು ಕಣ್ಣಿನ ವಿಷಯದಲ್ಲಿ ವಿಶೇಷ ತಜ್ಞನಾಗಿದ್ದಾನೆ. ಕ್ರಿಸ್ತನ ದೇಹದಲ್ಲೂ ಸಹ, ಒಬ್ಬೊಬ್ಬ ವಿಶ್ವಾಸಿಯೂ ಒಂದೊಂದು ವಿಭಿನ್ನವಾದ ವರ ಹಾಗೂ ಕರೆಯನ್ನು ಪಡೆದಿರುತ್ತಾನೆ. ಅದಲ್ಲದೆ ಪ್ರತಿಯೊಬ್ಬನು ತಾನಾಗಿ ಸಮತೋಲನವಿಲ್ಲದವನು ಆಗಿರುತ್ತಾನೆ. ಭೂಲೋಕದಲ್ಲಿ ಜೀವಿಸಿರುವ ಎಲ್ಲಾ ಜನರಲ್ಲಿ ಕರ್ತನಾದ ಯೇಸು ಕ್ರಿಸ್ತನೊಬ್ಬನೇ ಪರಿಪೂರ್ಣವಾದ ಸಮತೋಲನವನ್ನು ಹೊಂದಿದ್ದನು. ಮಿಕ್ಕವರಾದ ನಾವೆಲ್ಲರೂ - ನಮ್ಮ ನಡುವೆ ಇರುವ ಅತಿ ಶ್ರೇಷ್ಠರೂ ಸಹ - ಸಮತೋಲನ ಇಲ್ಲದವರಾಗಿದ್ದೇವೆ. ನಾವು ಸಮತೋಲನವನ್ನು ಕಂಡುಕೊಳ್ಳಲು ಸಾಧ್ಯವಾಗುವುದು ನಾವು ಇತರ ಸಹೋದರರು ಹಾಗೂ ಸಹೋದರಿಯರೊಂದಿಗೆ - ಕರ್ತನ ಆಸ್ಪತ್ರೆಯ ಇತರ ವಿಭಾಗಗಳೊಂದಿಗೆ - ಸೇರಿಕೊಂಡು ಕೆಲಸ ಮಾಡಿದಾಗ ಮಾತ್ರ. ಹಾಗಾಗಿ ಈ ಆಸ್ಪತ್ರೆಯಲ್ಲಿ ವೈಯಕ್ತಿಕವಾಗಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ!

ಒಂದು ಉತ್ತಮ ಆಸ್ಪತ್ರೆಯಲ್ಲಿ ಜನರ ವಿವಿಧ ಅವಶ್ಯಕತೆಗಳನ್ನು ಪೂರೈಸಲು ಅನೇಕ ವಿಭಾಗಗಳಿರುತ್ತವೆ. ಹಾಗೆಯೇ, ಕ್ರಿಸ್ತನ ದೇಹದಲ್ಲೂ ಜನರ ಸಹಾಯಕ್ಕಾಗಿ ಹಲವು ವಿಧವಾದ ಸೇವೆಗಳು ಮತ್ತು ಅನೇಕ ಆತ್ಮಿಕ ವರಗಳು ಇವೆ. ಯಾವುದೇ ಒಂದು ಕ್ರೈಸ್ತ ಸಭೆ ಅಥವಾ ಪಂಗಡದಲ್ಲಿ ಎಲ್ಲಾ ಆತ್ಮಿಕ ವರಗಳು ಇರುವುದಿಲ್ಲ. ಆದರೆ ಕ್ರಿಸ್ತನ ಸಂಪೂರ್ಣ ದೇಹವನ್ನು ಪರಿಗಣಿಸಿದಾಗ, ಅದರಲ್ಲಿ ಎಲ್ಲವೂ ಇವೆ. ನಾವು ಕ್ರಿಸ್ತನ ದೇಹದಲ್ಲಿ ನಮ್ಮ ಸ್ವಂತದ ವಿಶಿಷ್ಟ ಕರೆ ಏನೆಂದು ಅರಿಯಬೇಕು.

ಲೋಕದಲ್ಲಿ ಎಲ್ಲೆಡೆ ಬಹಳಷ್ಟು ಜನ ಆತ್ಮಿಕ ರೋಗಿಗಳು ಇದ್ದಾರೆ. ಆದಾಗ್ಯೂ ಯಾರ ಪರಿಸ್ಥಿತಿಯೂ ನಿರಾಶಾದಾಯಕವಾಗಿಲ್ಲ. ಪ್ರತಿಯೊಬ್ಬನೂ ಕರ್ತನಿಂದ ತನ್ನ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು. ನಾವು ಸುವಾರ್ತೆಯ ಈ ಶುಭ ಸಮಾಚಾರವನ್ನು ಸಾರುತ್ತೇವೆ. ಕರ್ತನ ಆಸ್ಪತ್ರೆಯಲ್ಲಿ ಅತ್ಯಂತ ಹೀನ ಪಾಪಿ ಮತ್ತು ಅತಿ ಭ್ರಷ್ಟನಾದ ವ್ಯಕ್ತಿಯ ಕಾಯಿಲೆಗೆ ಸೂಕ್ತವಾದ ಚಿಕಿತ್ಸೆ ಸಿಗುತ್ತದೆ. ಒಂದು ಉತ್ತಮ ಆಸ್ಪತ್ರೆಯು ಗಂಭೀರವಾದ ಕಾಯಿಲೆ ಇರುವ ಒಬ್ಬ ರೋಗಿಯನ್ನು ಸೇರಿಸಿಕೊಳ್ಳಲು ನಿರಾಕರಿಸುವುದಿಲ್ಲ. ಕಳಪೆ ಆಸ್ಪತ್ರೆಗಳು ಹಾಗೆ ಮಾಡುತ್ತವೆ, ಏಕೆಂದರೆ ಅವುಗಳು ಗಂಭೀರವಾದ ಕಾಯಿಲೆಯ ಚಿಕಿತ್ಸೆ ಮಾಡುವುದಕ್ಕೆ ಸುಸಜ್ಜಿತವಾಗಿಲ್ಲ. ಇದರಂತೆಯೇ, ಒಂದು ಉತ್ತಮವಾದ ಕ್ರೈಸ್ತಸಭೆಯು ಈ ಲೋಕದ ಅತ್ಯಂತ ದೊಡ್ಡ ಪಾಪಿಗೂ ಸಹ ಆತನ ಪರಿಸ್ಥಿತಿಯು ನಿರಾಶಾದಾಯಕವಾಗಿದೆ ಎಂದು ಯಾವತ್ತೂ ಹೇಳುವುದಿಲ್ಲ!

ಒಂದು ಉತ್ತಮ ಸಭೆಯು ಅತ್ಯಂತ ದೊಡ್ಡ ಪಾಪಿಗಳನ್ನು ಅತಿ ಶ್ರೇಷ್ಠ ದೇವಭಕ್ತರನ್ನಾಗಿ ಬದಲಾಯಿಸಲು ಸಮರ್ಥವಾಗಿರುತ್ತದೆ - ಆದರೆ ಇದು ಸಫಲವಾಗುವುದಕ್ಕೆ ಆ ಪಾಪಿಯು ತನಗೆ ನಿಗದಿ ಮಾಡಿದ ಚಿಕಿತ್ಸೆಯನ್ನು ಪಡೆಯಲು ಸಿದ್ಧನಾಗಿರಬೇಕು. ನಾವು ಸಭೆಯನ್ನು ಮಾನವ ಶರೀರಕ್ಕೂ ಹೋಲಿಸಬಹುದು. ಮಾನವ ಶರೀರದಲ್ಲಿ, ಪ್ರತಿಯೊಂದು ಅಂಗಕ್ಕೆ ಒಂದು ಕಾರ್ಯಭಾರ ಅಥವಾ ಕರ್ತವ್ಯ ಇರುತ್ತದೆ; ಮತ್ತು ಒಂದು ಅಂಗವು ತನ್ನ ಸ್ವಂತ ಕರ್ತವ್ಯವನ್ನು ಮಾತ್ರ ಪೂರೈಸುವುದರ ಕಡೆಗೆ ಗಮನ ಕೊಡುತ್ತದೆ. ಆದಾಗ್ಯೂ ಅದು ಬೇರೆ ಬೇರೆ ಕಾರ್ಯಗಳನ್ನು ಪೂರೈಸುವ ಇತರ ಅಂಗಗಳಿಗೆ ಮೆಚ್ಚುಗೆ, ಮಹತ್ವ ಮತ್ತು ಸಹಕಾರವನ್ನು ನೀಡುತ್ತದೆ. ನಾವು ಕ್ರಿಸ್ತನ ದೇಹದಲ್ಲೂ ಇತರ ಸೇವೆಗಳನ್ನು ಮಾಡುವವರೊಂದಿಗೆ ಕೆಲಸ ಮಾಡುವಾಗ, ಇದೇ ಭಾವನೆಯನ್ನು ಹೊಂದಿರಬೇಕು. 1ಕೊರಿಂಥದವರಿಗೆ 12ನೇ ಅದ್ಯಾಯದಲ್ಲಿ, ಪವಿತ್ರಾತ್ಮನು ಕ್ರಿಸ್ತನ ದೇಹದಲ್ಲಿ ಆತ್ಮಿಕ ವರಗಳ ಕಾರ್ಯಾಚರಣೆಯನ್ನು ವಿವರಿಸುವುದಕ್ಕಾಗಿ ಕಣ್ಣುಗಳು, ಕಿವಿಗಳು, ಕೈಗಳು ಮತ್ತು ಕಾಲುಗಳ ಚಿತ್ರಣವನ್ನು ಉಪಯೋಗಿಸಿಕೊಂಡಿದ್ದಾನೆ.

ನಾನು ಸತ್ಯವೇದದ ಕೆಲವು ವಿಶಿಷ್ಟ ಸಂಗತಿಗಳನ್ನು ಪದೇ ಪದೇ ಒತ್ತಿ ಹೇಳುತ್ತೇನೆ. ಇದಕ್ಕೆ ಕಾರಣವೇನೆಂದರೆ, ಕರ್ತನು ನನಗೆ ಈ ಭಾರವನ್ನು ಕೊಟ್ಟಿದ್ದಾನೆ. ನಾನು ಕರ್ತನು ನನ್ನನ್ನು ಕರೆದಿರುವ ಸೇವೆಗೆ ಮಾತ್ರವೇ ಕೈಹಾಕಿದ್ದೇನೆ, ಏಕೆಂದರೆ ನಾನು ಅದೊಂದು ಸೇವೆಯಲ್ಲಿ ಮಾತ್ರ ಕರ್ತನಿಗೆ ಉಪಯೋಗಕ್ಕೆ ಬರುತ್ತೇನೆಂದು ನನಗೆ ತಿಳಿದಿದೆ. ನಾನು ಬೇರೇನನ್ನೋ ಮಾಡಲು ಪ್ರಯತ್ನಿಸಿದರೆ, ಕರ್ತನು ನನಗಾಗಿ ಇರಿಸಿರುವ ಯೋಜನೆಗೆ ತಡೆಯೊಡ್ಡಿದಂತೆ ಆಗುತ್ತದೆ. ಆದರೆ ನಾನು ಇತರ ಸೇವೆಗಳನ್ನು ವಿರೋಧಿಸುವುದಿಲ್ಲ. ಅವುಗಳು ಬಹಳ ಅಮೂಲ್ಯವೆಂದು ನಾನು ಭಾವಿಸುತ್ತೇನೆ. ಹೊಟ್ಟೆಯು ಕೈಗೆ ಬಹಳ ಮಹತ್ವ ನೀಡುತ್ತದೆ, ಆದರೆ ಅದು ಕೈಯ ಕೆಲಸವನ್ನು ತಾನೇ ಮಾಡಲು ಎಂದಿಗೂ ಪ್ರಯತ್ನಿಸುವುದಿಲ್ಲ. ಉದಾಹರಣೆಗಾಗಿ, ಅದು ಬಟ್ಟಲಿನಿಂದ ಆಹಾರವನ್ನು ಎತ್ತಿಕೊಳ್ಳಲು ಯಾವತ್ತೂ ಪ್ರಯತ್ನಿಸುವುದಿಲ್ಲ. ಆ ಕೆಲಸವನ್ನು ಅದು ಕೈಗೆ ಬಿಡುತ್ತದೆ ಮತ್ತು ಕೈಯು ಆಹಾರವನ್ನು ಎತ್ತಿಕೊಂಡು ತನಗೆ ತಲುಪಿಸಿದಾಗ, ಅದನ್ನು ಜೀರ್ಣಿಸುವ ಕೆಲಸವನ್ನು ಅದು ಮಾಡುತ್ತದೆ! ಇದು ಕ್ರಿಸ್ತನ ದೇಹದಲ್ಲಿ ನಾವು ಒಬ್ಬರು ಇನ್ನೊಬ್ಬರೊಂದಿಗೆ ಹೊಂದಿಕೊಳ್ಳುವುದನ್ನು ಚಿತ್ರಿಸುತ್ತದೆ. ಹೆಚ್ಚಿನ ವಿಶ್ವಾಸಿಗಳಿಗೆ ಕ್ರಿಸ್ತನ ದೇಹದ ಸೇವೆಗಳ ವಿಭಿನ್ನತೆಯ ಕುರಿತಾದ ಈ ಸತ್ಯಾಂಶ ತಿಳಿದಿಲ್ಲ. ಆದರೆ ನೀವು ಈ ಸತ್ಯಾಂಶವನ್ನು ಕಂಡುಕೊಳ್ಳದೇ ಹೋದರೆ, ನೀವು ಮಾಡಬೇಕೆಂದು ದೇವರು ಬಯಸುವ ಪ್ರತಿಯೊಂದನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ದೇವರು ನಮ್ಮನ್ನು ಯಾವ ಕೆಲಸಕ್ಕಾಗಿ ಕರೆದಿದ್ದಾರೆ ಎಂಬುದನ್ನು ನಾವೆಲ್ಲರೂ ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿ ತಿಳಿದರೆ ಬಹಳ ಒಳ್ಳೆಯದು. ಸಾಮಾನ್ಯವಾಗಿ ಕರ್ತನು ನಮ್ಮ ಹೃದಯಗಳಿಗೆ ಕೊಡುವ ಭಾರವು ಅವರು ತನ್ನ ದೇಹದಲ್ಲಿ ನಮಗಾಗಿ ಯಾವ ಸೇವೆಯನ್ನು ಇರಿಸಿದ್ದಾರೆಂದು ಸೂಚಿಸುತ್ತದೆ. ಕ್ರಿಸ್ತನ ದೇಹದಲ್ಲಿ ಬೇರೆ ಯಾರೂ ಮಾಡಲಾರದ ಒಂದು ವಿಶಿಷ್ಟ ಮತ್ತು ಅಸಾಮಾನ್ಯ ಸೇವೆ ನಿಮಗಾಗಿ ಇದೆ. ಮತ್ತು ಯಾವತ್ತೂ ಆ ಸೇವೆಯು ಸಮತೋಲನವನ್ನು ಹೊಂದಿರುವುದಿಲ್ಲ. ಅದು ಸಮತೋಲನ ಇಲ್ಲದ್ದಾಗಿರುತ್ತದೆ. ನೀವು ಸಮತೋಲನವನ್ನು ಹೊಂದುವುದಕ್ಕಾಗಿ, ದೇಹದಲ್ಲಿ ವಿಭಿನ್ನ ಸೇವೆಗಳಲ್ಲಿ ತೊಡಗಿರುವ ಇತರರೊಂದಿಗೆ ಅನ್ಯೋನ್ಯತೆಯಿಂದ ಕೆಲಸ ಮಾಡಬೇಕಾಗುತ್ತದೆ. ದೇವರು ಈ ರೀತಿಯಾಗಿ - ನಾವು ಇತರರರನ್ನು ಅವಲಂಬಿಸುವಂತೆ ಮಾಡುವ ಮೂಲಕ - ನಮ್ಮನ್ನು ದೀನತೆಯಲ್ಲಿ ಇರಿಸುತ್ತಾರೆ. ಕರ್ತರಿಗೆ ಸ್ತೋತ್ರವಾಗಲಿ! ನಾವೆಲ್ಲರೂ ನಮ್ಮ ಜೀವನದಲ್ಲಿ ಕೆಲವು ಕ್ಷೇತ್ರಗಳಲ್ಲಿ ಸಮರ್ಥರಾಗಿದ್ದೇವೆ, ಆದರೆ ಬೇರೆ ಕ್ಷೇತ್ರಗಳಲ್ಲಿ ದುರ್ಬಲರಾಗಿದ್ದೇವೆ - ಒಬ್ಬ ವಿದ್ಯಾರ್ಥಿಯು ಆಂಗ್ಲ ಭಾಷಾ ಜ್ಞಾನದಲ್ಲಿ ಸಮರ್ಥನಾಗಿದ್ದು, ಗಣಿತದ ಜ್ಞಾನದಲ್ಲಿ ದುರ್ಬಲನಾಗಿ ಇರುವಂತೆ. ಆದರೆ ನಾವು ಯಾವುದರಲ್ಲಿ ದುರ್ಬಲರಾಗಿದ್ದೇವೆ ಎಂಬುದನ್ನು ತಿಳಿದುಕೊಂಡು, ಆ ವಿಷಯಗಳನ್ನು ಬಲಪಡಿಸಿಕೊಳ್ಳಬೇಕು. ನಿಮ್ಮ ಸಭೆಯು ಸುವಾರ್ತಾ ಪ್ರಸಾರಕ್ಕೆ ಪ್ರಬಲವಾದ ಪ್ರಾಧಾನ್ಯತೆ ಕೊಡುತ್ತಿರಬಹುದು, ಆದರೆ ಪರಿಶುದ್ಧತೆಗೆ ಒತ್ತು ಕೊಡುವುದರಲ್ಲಿ ಕ್ಷೀಣವಾಗಿರಬಹುದು. ಒಂದು ವೇಳೆ ಹಾಗಿದ್ದರೆ, ನಿಮ್ಮ ಸಭೆಯು ಯಾವ ವಿಧವಾದ ಸೇವೆಗೆ ಹೆಚ್ಚಿನ ಗಮನ ಕೊಡಬೇಕೆಂದು ನಿಮಗೆ ಗೊತ್ತಾಗುತ್ತದೆ.