ನಮ್ಮ ಕರ್ತನು ನೀಡಿರುವ ಪ್ರತಿಯೊಂದು ಆಜ್ಞೆಗೆ ವಿಧೇಯರಾಗಿ, ಅವುಗಳನ್ನು ಹೇಗೆ ಪಾಲಿಸಬೇಕು ಎಂಬುದನ್ನು ಶಿಷ್ಯರಿಗೆ ಕಲಿಸಬೇಕೆಂದು ಮತ್ತಾ. 28:20ರಲ್ಲಿ ಹೇಳಲಾಗಿದೆ. ಇದು ಶಿಷ್ಯತ್ವದ ಮಾರ್ಗವಾಗಿದೆ. "ಮತ್ತಾ. 5, 6 ಮತ್ತು 7ನೇ ಅಧ್ಯಾಯ"ಗಳನ್ನು ಓದಿಕೊಂಡರೆ, ಯೇಸುವಿನ ಕೆಲವು ಆಜ್ಞೆಗಳು ಯಾವುವೆಂದು ನಮಗೆ ತಿಳಿಯುತ್ತದೆ. ಆದರೆ ಹೆಚ್ಚಿನ ವಿಶ್ವಾಸಿಗಳು ಈ ಆಜ್ಞೆಗಳನ್ನು ಪಾಲಿಸುವುದರ ಬಗ್ಗೆ ಗಮನ ಹರಿಸುವುದಿಲ್ಲ. ಶಿಷ್ಯನೆಂದರೆ ಕಲಿಯುವವನೂ ಮತ್ತು ಹಿಂಬಾಲಿಸುವವನೂ ಆಗಿರುತ್ತಾನೆ.
ಕ್ರಿಸ್ತನ ದೇಹವನ್ನು ಕಟ್ಟಲು ಅವಶ್ಯವಾಗಿ ಬೇಕಾಗಿರುವ ಜನರು ಯಾರೆಂದರೆ, ದೇವರ ವಿಸ್ತಾರವಾದ ಸಂಕಲ್ಪವನ್ನು ತಿಳಿದುಕೊಂಡು, ಅದನ್ನು ಸಾರಬೇಕೆಂಬ ಕರೆಯಿಂದ ಬಹಳ ಪ್ರೇರಿತರಾಗಿ, ಯೇಸುವಿನ ಪ್ರತಿಯೊಂದು ಆಜ್ಞೆಯನ್ನು ತಾವು ಸ್ವತಃ ಕೈಗೊಂಡು, ಆನಂತರ ಇತರರಿಗೂ ಯೇಸುವಿನ ಎಲ್ಲಾ ಆಜ್ಞೆಗಳಿಗೆ ವಿಧೇಯತೆಯನ್ನು ಕಲಿಸುವುದಕ್ಕೆ ಉತ್ಸುಕರಾಗಿರುವವರು.
ಯೇಸುವು ಹೇಳಿದ ಮಾತೇನೆಂದರೆ, ತನ್ನ ಎಲ್ಲಾ ಶಿಷ್ಯರು ಒಂದು ಚಿಹ್ನೆಯ ಮೂಲಕ - ಒಬ್ಬರ ಮೇಲೊಬ್ಬರಿಗೆ ಇರುವ ಪ್ರೀತಿಯ ಮೂಲಕ ಗುರುತಿಸಲ್ಪಡುತ್ತಾರೆ (ಯೋಹಾ. 13:35). ಇದನ್ನು ಗಮನಿಸಿರಿ! ಯೇಸು ಕ್ರಿಸ್ತನ ಶಿಷ್ಯರು ತಮ್ಮ ಬೋಧನೆ ಅಥವಾ ಸಂಗೀತದ ಗುಣಮಟ್ಟದಿಂದ ಅಥವಾ "ಅನ್ಯ ಭಾಷೆ" ಮಾತನಾಡುವುದರಿಂದ ಅಥವಾ ಕೈಯಲ್ಲಿ ಸತ್ಯವೇದವನ್ನು ಹಿಡಿದುಕೊಂಡು ಕೂಟಗಳಲ್ಲಿ ಭಾಗವಹಿಸುವುದರಿಂದ ಅಥವಾ ಕೂಟಗಳಲ್ಲಿ ತಾವು ಮಾಡುವ ತುಂಬಾ ಸದ್ದಿನಿಂದ ಗುರುತಿಸಲ್ಪಡುವುದಿಲ್ಲ!! ತಮ್ಮಲ್ಲಿ ಒಬ್ಬರ ಮೇಲೊಬ್ಬರಿಗೆ ಹೊಂದಿರುವ ಅತೀವ ಪ್ರೀತಿಯಿಂದ ಅವರು ಗುರುತಿಸಲ್ಪಡುತ್ತಾರೆ.
ಯೇಸುವಿನ ಬಳಿಗೆ ಜನರನ್ನು ಕರೆತರುವ ಸುವಾರ್ತಾ ಕೂಟವು ತನ್ನ ಕಾರ್ಯವನ್ನು ಮುಂದುವರಿಸಿ, ಆ ಸ್ಥಳದಲ್ಲಿ ಒಂದು ಸಭೆಯನ್ನು ಸ್ಥಾಪಿಸಬೇಕು ಮತ್ತು ಅದರಲ್ಲಿರುವ ಶಿಷ್ಯರು ಪರಸ್ಪರ ಪ್ರೀತಿಸುವವರಾಗಿರಬೇಕು. ಆದರೆ ದುಃಖಕರ ಸಂಗತಿಯೆಂದರೆ, ವರ್ಷ ವರ್ಷವೂ ತಪ್ಪದೇ ಸುವಾರ್ತಾ ಕೂಟಗಳು ನಡೆಸಲ್ಪಡುವ ಅನೇಕ ಸ್ಥಳಗಳಲ್ಲಿ, ಸಭೆಗಳ ಸದಸ್ಯರು ಪರಸ್ಪರ ಜಗಳಾಟ ಅಥವಾ ಪರಸ್ಪರ ನಿಂದೆ ಮಾಡದೇ, ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆಂದು ಹೇಳಬಹುದಾದ ಒಂದೇ ಒಂದು ಸಭೆಯನ್ನಾದರೂ ಕಂಡುಹಿಡಿಯುವುದು ಕಷ್ಟವೆನಿಸುತ್ತದೆ.
ಹೊಸ ವಿಶ್ವಾಸಿಗಳು ತಕ್ಷಣವೇ ಇಂತಹ ಜಯದ ಜೀವಿತವನ್ನು ನಡೆಸಲು ಸಾಧ್ಯವಾಗದೇ ಇರಬಹುದು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಮ್ಮ ದೇಶದ ಸಭೆಗಳ ಹಿರಿಯರು ಮತ್ತು ಕ್ರೈಸ್ತ ನಾಯಕರಲ್ಲೂ ಜಗಳ ಮತ್ತು ಅಪ್ರಬುದ್ಧತೆ (ಬೆಳವಣಿಗೆಯಿಲ್ಲದಿರುವುದು) ಕಂಡುಬರುವುದಾದರೆ, ನಾವು ಏನು ಹೇಳೋಣ?
ಮಹಾ ಆದೇಶದ ಎರಡನೆಯ ಮತ್ತು ಅತ್ಯಂತ ಮುಖ್ಯ ಭಾಗವಾದ (ಮತ್ತಾ. 28:19,20ರಲ್ಲಿ ಉಲ್ಲೇಖಿಸಿದ್ದು) ಶಿಷ್ಯತ್ವ ಮತ್ತು ಯೇಸುವಿನ ಆಜ್ಞೆಗಳಿಗೆ ಸಂಪೂರ್ಣ ವಿಧೇಯತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ, ಎಂಬುದನ್ನು ಇದು ಬಹಳ ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ.
ಸಾಮಾನ್ಯವಾಗಿ ಎಲ್ಲಡೆ ಮಹಾ ಆದೇಶದ ಮೊದಲ ಭಾಗಕ್ಕೆ ಮಾತ್ರ (ಮಾರ್ಕ. 16:15) ಒತ್ತು ನೀಡಲಾಗುತ್ತದೆ. ಆ ವಚನದಲ್ಲಿ, ಕರ್ತನು ಮಾಡುವ ಸೂಚಕ ಕಾರ್ಯಗಳ ಮತ್ತು ಅದ್ಭುತ ಕಾರ್ಯಗಳ ಮೂಲಕ ದೃಢಪಡಿಸುವ ಸುವಾರ್ತಾ ಪ್ರಚಾರಕ್ಕೆ ಒತ್ತು ನೀಡಲಾಗಿದೆ.
ಆದಾಗ್ಯೂ, ಮತ್ತಾ. 28:19,20ರಲ್ಲಿ, ಶಿಷ್ಯತ್ವಕ್ಕೆ ಮಹತ್ವ ನೀಡಲಾಗಿದೆ. ಯೇಸುವಿನ ಆಜ್ಞೆಗಳಿಗೆ ಸಂಪೂರ್ಣ ವಿಧೇಯತೆಯ ಮೂಲಕ ಒಬ್ಬ ಶಿಷ್ಯನ ಜೀವಿತವು ವ್ಯಕ್ತವಾಗುತ್ತದೆ. ಕ್ರೈಸ್ತರಲ್ಲಿ ಬಹು ಮಂದಿ ಮಹಾ ಆದೇಶದ ಮೊದಲ ಭಾಗದಲ್ಲಿ ಅತಿಯಾದ ಆಸಕ್ತಿ ಹೊಂದಿರುತ್ತಾರೆ, ಆದರೆ ಅತ್ಯಂತ ಕೆಲವೇ ಜನ ಈ ಆದೇಶದ ಎರಡನೆಯ ಭಾಗದಲ್ಲಿ ಆಸಕ್ತರಾಗಿರುತ್ತಾರೆ. ಮೊದಲನೆಯದು ಮಾತ್ರ ಇದ್ದು, ಎರಡನೆಯದು ಇಲ್ಲದಿರುವುದು ಮನುಷ್ಯನ ಅರ್ಧ ದೇಹದಷ್ಟೇ ಅಪೂರ್ಣ ಮತ್ತು ನಿಷ್ಪ್ರಯೋಜಕವಾಗಿದೆ. ಆದರೆ ಎಷ್ಟು ಮಂದಿ ಈ ಸಂಗತಿಯನ್ನು ಅರಿತಿದ್ದಾರೆ?
"ನಿತ್ಯಜೀವಕ್ಕೆ ಹೋಗುವ ದಾರಿಯು ಇಕ್ಕಟ್ಟಾಗಿದೆ, ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ."
ಯೇಸುವಿನ ಸೇವೆಯಲ್ಲಿ, ಆತನ ಸುವಾರ್ತಾ ಪ್ರಚಾರ ಮತ್ತು ಗುಣಪಡಿಸುವ ಸೇವೆಯಿಂದಾಗಿ ಜನಸಮೂಹವು ಆತನನ್ನು ಹಿಂಬಾಲಿಸಿತು ಎಂದು ನಾವು ಓದುತ್ತೇವೆ. ಆತನು ಯಾವಾಗಲೂ ಜನರ ಕಡೆಗೆ ತಿರುಗಿ ಅವರಿಗೆ ಶಿಷ್ಯತ್ವದ ಬಗ್ಗೆ ಕಲಿಸಿದನು (ಲೂಕ. 14:25,26ನ್ನು ನೋಡಿರಿ). ಇಂದಿನ ಸುವಾರ್ತಾ ಪ್ರಚಾರಕರೂ ಸಹ ಇದೇ ರೀತಿ ಮಾಡುವರೇ - ತಾವು ಆರಂಭಿಸಿದ ಕೆಲಸವನ್ನು ಸ್ವತ: ತಾವೇ ಅಥವಾ ಅಪೊಸ್ತಲರು, ಪ್ರವಾದಿಗಳು, ಶಿಕ್ಷಕರು ಅಥವಾ ಕುರುಬರ (ಸಭಾ-ಹಿರಿಯರ) ಸಹಕಾರದಿಂದ ಪೂರ್ಣಗೊಳಿಸುವರೇ? .
ಶಿಷ್ಯತ್ವದ ಸಂದೇಶವನ್ನು ಸಾರಲು ಬೋಧಕರು ಏಕೆ ಹಿಂಜರಿಯುತ್ತಾರೆ? ಏಕೆಂದರೆ ಅದು ಅವರ ಸಭೆಗಳಲ್ಲಿ ಸದಸ್ಯರ ಸಂಖ್ಯೆಯನ್ನು ಕುಗ್ಗಿಸುತ್ತದೆ. ಆದರೆ ಅವರಿಗೆ ಅರಿಯದಿರುವ ಸಂಗತಿಯೇನೆಂದರೆ, ಅವರ ಸಭೆಗಳ ಗುಣಮಟ್ಟವು ತುಂಬಾ ಉತ್ತಮವಾಗುತ್ತದೆ.
ಯೇಸುವು ಜನರ ದೊಡ್ಡ ಸಮೂಹಕ್ಕೆ ಶಿಷ್ಯತ್ವದ ಬೋಧನೆ ಮಾಡಿದಾಗ, ಜನರ ಸಂಖ್ಯೆಯು ಶೀಘ್ರವೇ ಕುಗ್ಗಿ, ಕೇವಲ 11ಮಂದಿ ಶಿಷ್ಯರು ಉಳಿದುಕೊಂಡರು (ಯೋಹಾ. 6:2ನ್ನು ಯೋಹಾ. 6:70ರೊಂದಿಗೆ ಹೋಲಿಸಿ ನೋಡಿರಿ). ಆತನ ಸಂದೇಶವು ತುಂಬಾ ಕಠಿಣವೆಂದು ಅನೇಕರು ಭಾವಿಸಿದರು ಮತ್ತು ಆತನನ್ನು ತೊರೆದರು (ಯೋಹಾ. 6:60,66ನ್ನು ನೋಡಿರಿ). ಆದರೆ ಅಂತಿಮವಾಗಿ ದೇವರು ಜಗತ್ತಿನಲ್ಲಿ ತನ್ನ ಉದ್ದೇಶಗಳನ್ನು ಸಾಧಿಸಿದ್ದು ಆತನೊಂದಿಗೆ ಉಳಿದುಕೊಂಡ ಆ 11 ಮಂದಿ ಶಿಷ್ಯರ ಮೂಲಕವೇ ಆಗಿತ್ತು.
ಇಂದು ಭೂಮಿಯ ಮೇಲೆ ಕ್ರಿಸ್ತನ ದೇಹವಾಗಿರುವ ನಾವು, ಮೊದಲನೇ ಶತಮಾನದಲ್ಲಿ ಆ 11 ಮಂದಿ ಅಪೊಸ್ತಲರು ಪ್ರಾರಂಭಿಸಿದ ಸೇವೆಯನ್ನೇ ಮುಂದುವರಿಸಬೇಕು. ಜನರನ್ನು ಕ್ರಿಸ್ತನ ಬಳಿಗೆ ಕರೆತಂದ ನಂತರ, ಅವರನ್ನು ಶಿಷ್ಯತ್ವ ಮತ್ತು ವಿಧೇಯತೆಗೆ ನಡೆಸಬೇಕು. ಈ ರೀತಿಯಾಗಿ ಮಾತ್ರವೇ ಕ್ರಿಸ್ತನ ದೇಹವು ಕಟ್ಟಲ್ಪಡುತ್ತದೆ.
ನಿತ್ಯಜೀವದ ಮಾರ್ಗವು ಕಿರಿದಾಗಿದೆ ಮತ್ತು ಅದನ್ನು ಕಂಡುಕೊಳ್ಳುವ ಜನರು ಬಹಳ ಕಡಿಮೆ.
ಕಿವಿಯುಳ್ಳವನು ಕೇಳಲಿ!