’ಪ್ರಕಟನೆ 2:12-17'ರಲ್ಲಿ ನಾವು ಹೀಗೆ ಓದಿಕೊಳ್ಳುತ್ತೇವೆ, "ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಬರೆ: ಹದವಾದ ಇಬ್ಬಾಯಿ ಕತ್ತಿಯನ್ನು ಹಿಡಿದಾತನು ಹೇಳುವುದೇನಂದರೆ: ’ನೀನು ವಾಸಮಾಡುವ ಸ್ಥಳವನ್ನು ಬಲ್ಲೆನು; ಅದು ಸೈತಾನನ ಸಿಂಹಾಸನವಿರುವ ಸ್ಥಳವಾಗಿದೆ. ನೀನು ನನ್ನ ಹೆಸರನ್ನು ಬಿಡದೇ ಹಿಡಿದುಕೊಂಡಿದ್ದೀ; ನೀನು ಇರುವ ಸೈತಾನನ ನಿವಾಸದಲ್ಲಿ ನನಗೆ ನಂಬಿಗಸ್ತನೂ ಸಾಕ್ಷಿಯೂ ಆದ ಅಂತಿಪನು ಕೊಲ್ಲಲ್ಪಟ್ಟ ದಿನಗಳಲ್ಲಿಯಾದರೂ ನೀನು ನನ್ನಲ್ಲಿಟ್ಟಿರುವ ನಂಬಿಕೆಯನ್ನು ಮರೆಮಾಡಲಿಲ್ಲ ...."
ಪೆರ್ಗಮ ಪಟ್ಟಣವು ಎಂತಹ ನಗರವಾಗಿತ್ತೆಂದರೆ, ಅದು ಎಷ್ಟರ ಮಟ್ಟಿಗೆ ಕೆಟ್ಟತನದಿಂದ ತುಂಬಿತ್ತು ಎಂದರೆ, ಅದು ಸೈತಾನನ ಭೂಲೋಕದ ಕೇಂದ್ರಸ್ಥಾನವಾಗಿತ್ತು. ಇದನ್ನು ’ಪ್ರಕಟನೆ 2:13'ರಲ್ಲಿ ಎರಡು ಬಾರಿ ಉಲ್ಲೇಖಿಸಲಾಗಿದೆ. ಆದಾಗ್ಯೂ ಕರ್ತನು ತನ್ನ ಸಭೆಯನ್ನು ಇದೇ ಪಟ್ಟಣದ ನಡುವೆ ಸ್ಥಾಪಿಸಿದ್ದನು.
ಕರ್ತನು ಅವರಿಗೆ, "ನೀವು ವಾಸಿಸುವ ಸ್ಥಳ ಎಲ್ಲಿದೆಯೆಂದು ನಾನು ಬಲ್ಲೆನು," ಎಂದು ಹೇಳುತ್ತಾನೆ. ನಾವು ಎಲ್ಲಿ ಮತ್ತು ಎಂತಹ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದೇವೆ ಎಂಬುದು ಕರ್ತರಿಗೆ ನಿಖರವಾಗಿ ತಿಳಿದಿದೆ. ನಾವು ವಾಸಿಸುವ ಸ್ಥಳದಲ್ಲೇ ಸೈತಾನನ ಕೇಂದ್ರಸ್ಥಾನವಿದ್ದರೂ, ಕರ್ತರು ನಮ್ಮನ್ನು ಪರಿಶುದ್ಧರು ಮತ್ತು ಜಯಶಾಲಿಗಳಾಗಿ ಕಾಪಾಡಬಲ್ಲರು. ಪವಿತ್ರಾತ್ಮನ ಕತ್ತಿಯನ್ನು (ದೇವರ ವಾಕ್ಯದ ಕತ್ತಿ) ಬಳಸಿಕೊಂಡು ನಾವು ಕೂಡ ಜಯಶಾಲಿಗಳಾಗಬಹುದು.
ಯಾವ ದೀಪಸ್ತಂಭವೂ ತಾನು ಬೆಳಗುವ ಪರಿಸರವು ತುಂಬಾ ಕತ್ತಲಾಗಿದೆಯೆಂದು ಎಂದಿಗೂ ಗುಣಗುಟ್ಟುವುದಿಲ್ಲ. ದೀಪಸ್ತಂಭದ ಬೆಳಕಿನ ಪ್ರಕಾಶವು ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲಂಬಿಸುವುದಿಲ್ಲ. ಅದರ ಪ್ರಕಾಶವು ಅದರಲ್ಲಿ ಎಷ್ಟು ಎಣ್ಣೆ ಇದೆ ಎಂಬುದನ್ನು ಮಾತ್ರ ಅವಲಂಬಿಸುತ್ತದೆ.
"ಅಂತಿಪನು ದೇವರ ಸತ್ಯತೆಯ ಪರವಾಗಿ ದೃಢವಾಗಿ ನಿಂತನು; ತಾನು ಒಬ್ಬಂಟಿಗನಾಗಿ ನಿಲ್ಲಬೇಕಾಗಿ ಬಂದರೂ ಆತನು ಸತ್ಯವನ್ನು ಬಿಟ್ಟುಕೊಡಲಿಲ್ಲ."
ಯಾವುದೇ ಸ್ಥಳಿಯ ಕ್ರೈಸ್ತಸಭೆಯೂ ಕೂಡ ನಿಖರವಾಗಿ ಹೀಗೆಯೇ ಇರುತ್ತದೆ. ಅದರ ಸುತ್ತಮುತ್ತ ದುಷ್ಟತನ ಇರಬಹುದು. ಆ ಪಟ್ಟಣದಲ್ಲಿ ಸೈತಾನನ ಸಿಂಹಾಸನವೂ ಇರಬಹುದು. ಆದರೆ ಆ ಸಭೆಯು ಪವಿತ್ರಾತ್ಮನ ಎಣ್ಣೆಯಿಂದ ತುಂಬಿದ್ದರೆ, ಅದರ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತದೆ. ವಾಸ್ತವವಾಗಿ, ಅಂಧಕಾರವು ಹೆಚ್ಚಿದಂತೆಲ್ಲಾ, ಆ ಪರಿಸರದಲ್ಲಿ ಬೆಳಕಿನ ಪ್ರಕಾಶವು ಇನ್ನೂ ಹೆಚ್ಚಾಗಿ ಕಂಡುಬರುತ್ತದೆ! ನಕ್ಷತ್ರಗಳು ರಾತ್ರಿಯ ಸಮಯದಲ್ಲಿ ಕಾಣಿಸುತ್ತವೆ - ಹಗಲಿನಲ್ಲಿ ಅಲ್ಲ.
ಈ ಸಭೆಯು ಹಿಂಸೆಯ ಸಮಯದಲ್ಲೂ ಕರ್ತರ ಹೆಸರನ್ನು ಧೃಢವಾಗಿ ಹಿಡಿದುಕೊಂಡದ್ದಕ್ಕಾಗಿ ಮತ್ತು ನಂಬಿಕೆಯನ್ನು ಬಿಡದೇ ಕಾಪಾಡಿಕೊಂಡದ್ದಕ್ಕಾಗಿ ಕರ್ತರು ಅದನ್ನು ಹೊಗಳುತ್ತಾರೆ. ನಂಬಿಗಸ್ತ ಸಾಕ್ಷಿಯಾಗಿ ತನ್ನ ದೃಢವಾದ ನಂಬಿಕೆಯ ನಿಮಿತ್ತ ಪ್ರಾಣವನ್ನೇ ಸಮರ್ಪಿಸಿದ ಅಂತಿಪನ ಹೆಸರನ್ನು ಕರ್ತರು ಇಲ್ಲಿ ವಿಶೇಷವಾಗಿ ಪ್ರಸ್ತಾಪಿಸುತ್ತಾರೆ.
ಅಂತಿಪನು ದೇವರ ಸತ್ಯತೆಯ ಪರವಾಗಿ ದೃಢವಾಗಿ ನಿಂತನು, ತಾನು ಒಬ್ಬಂಟಿಗನಾಗಿ ನಿಲ್ಲಬೇಕಾಗಿ ಬಂದರೂ ಆತನು ಸತ್ಯವನ್ನು ಬಿಟ್ಟುಕೊಡಲಿಲ್ಲ. ಅವನು ದೃಢನಿಶ್ಚಯವುಳ್ಳ ವ್ಯಕ್ತಿಯಾಗಿದ್ದನು ಮತ್ತು ಆತನು ಜನರನ್ನು ಮೆಚ್ಚಿಸಲು ಪ್ರಯತ್ನಿಸಲಿಲ್ಲ. ದೇವರನ್ನು ಅರಿತವರು ತಾವು ನಂಬಿದ್ದನ್ನು ತಮ್ಮ ಸುತ್ತ ಮುತ್ತಲಿನ ಎಷ್ಟು ಮಂದಿ ನಂಬುತ್ತಾರೆಂದು ತಿಳಿಯಲು ತವಕಿಸಬೇಕಿಲ್ಲ. ಅವರು ಕರ್ತರಿಗಾಗಿ ಇಡೀ ಲೋಕವನ್ನು ಎದುರಿಸಿ ಒಂಟಿಯಾಗಿ ನಿಲ್ಲಬೇಕಾಗಿ ಬಂದರೂ, ಹಾಗೆ ನಿಲ್ಲಲು ಸಿದ್ಧರಾಗಿರುತ್ತಾರೆ. ಅಂತಿಪನು ಇಂತಹ ಒಬ್ಬ ಮನುಷ್ಯನಾಗಿದ್ದನು. ಮತ್ತು ಇದರ ಸಲುವಾಗಿ ಆತನು ಕೊಲ್ಲಲ್ಪಟ್ಟನು.
ಆತನು ಜನರನ್ನು ಮೆಚ್ಚಿಸುವವನಾಗಿದ್ದರೆ, ಮರಣವನ್ನು ತಪ್ಪಿಸಿಕೊಳ್ಳಬಹುದಾಗಿತ್ತು. ಆತನು ತನಗೆ ಪ್ರಕಟಿಸಲ್ಪಟ್ಟ ದೇವರ ಸತ್ಯತೆಗಾಗಿ ಇತರರೊಡನೆ ರಾಜಿ ಮಾಡಿಕೊಳ್ಳದೆ ದೃಢವಾಗಿ ನಿಂತದ್ದಕ್ಕಾಗಿ ಕೊಲ್ಲಲ್ಪಟ್ಟನು. ಜನರು ಆತನನ್ನು ಸಂಕುಚಿತ ಮನೋಭಾವದವನು, ಮೊಂಡನು, ಇತರೊಂದಿಗೆ ಬೆರೆಯದವನು ಮತ್ತು ತಲೆ ಕೆಟ್ಟವನೆಂದು ಕರೆದಿರಬಹುದು. ಆದರೆ ಆತನು ಇವನ್ನೆಲ್ಲ ಗಮನಿಸಲೇ ಇಲ್ಲ. ಆತನಲ್ಲಿ ಕರ್ತನಿಗಾಗಿ ಸರಳ ಯಥಾರ್ಥತೆಯಿತ್ತು, ಮತ್ತು ಎಲ್ಲಾ ಪಾಪ, ಲೌಕಿಕತೆ, ಸತ್ಯವನ್ನು ಅದಲು-ಬದಲು ಮಾಡುವುದು, ದೇವರ ವಾಕ್ಯಕ್ಕೆ ಅವಿಧೇಯತೆ ಇವೆಲ್ಲಕ್ಕೂ ವಿರೋಧವಿತ್ತು, ಮತ್ತು ಆತನು ಪಿಶಾಚನನ್ನು ವಿರೋಧಿಸಿದನು. ಇವನು ಸೈತಾನನ ರಾಜ್ಯವನ್ನು ನಡುಗಿಸುವ ಒಬ್ಬ ಮನುಷ್ಯನಾಗಿದ್ದನು.
ಬಹುಶಃ ಅಂತಿಪನು ಪೆರ್ಗಮದಲ್ಲಿ ಇದ್ದುದರಿಂದ ಸೈತಾನನು ಅಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಲು ತೀರ್ಮಾನಿಸಿರಬಹುದು. ಸೈತಾನನನ್ನೇ ನಡುಗಿಸಿದ ಅಂತಿಪನು ಎಂತಹ ಮನುಷ್ಯನಾಗಿದ್ದನು ಎಂದು ಆಲೋಚಿಸಿರಿ!
ಇಂದು ಲೋಕದ ಪ್ರತಿಯೊಂದು ಭಾಗದಲ್ಲೂ ದೇವರಿಗೆ ಅಂತಿಪನಂತಹ ಜನರ ಅವಶ್ಯಕತೆಯಿದೆ. ಅತಿ ಶೀಘ್ರ ಬರಲಿರುವ ಮುಂದಿನ ದಿನಗಳಲ್ಲಿ ನಾವು ನಮ್ಮ ನಂಬಿಕೆಯನ್ನು ಕಾಯ್ದುಕೊಳ್ಳಲು ಒಂದು ಬೆಲೆಯನ್ನು ತೆರಬೇಕಾಗುತ್ತದೆ. ನಮ್ಮ ಸುತ್ತಲಿನ ಬಾಬೆಲ್‌ನ ಕ್ರೈಸ್ತಪ್ರಪಂಚವು ಆತ್ಮಿಕ ವಿಷಯಗಳಲ್ಲಿ ಲೋಕದೊಂದಿಗೆ ರಾಜಿಮಾಡಿಕೊಂಡು, ಕ್ರಿಸ್ತವಿರೋಧಿಗೆ ತಲೆಬಾಗಲಿದೆ. ಆ ದಿನದಲ್ಲಿ ನಾವು ಅಂತಿಪನಂತೆ ದೃಢವಾಗಿ ನಿಲ್ಲುತ್ತೇವೆಯೇ? ಅಥವಾ ನಮ್ಮ ಜೀವವನ್ನು ಉಳಿಸಿಕೊಳ್ಳಲು ಸೈತಾನನ ಮುಂದೆ ಮೊಣಕಾಲು ಊರುತ್ತೇವೆಯೇ? ದೇವರ ಸತ್ಯದ ನಿಮಿತ್ತ ನಮ್ಮ ಜೀವವನ್ನು ಸಮರ್ಪಿಸುವುದು ಯೋಗ್ಯವೆಂದು ನಮಗೆ ಮನವರಿಕೆಯಾಗಿದೆಯೇ?
ಇಂದು, ಸಣ್ಣ ಶೋಧನೆಗಳ ಮೂಲಕ ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾರೆ. ಈ ಸಣ್ಣ ಪರೀಕ್ಷೆಗಳಲ್ಲಿ ನಾವು ನಂಬಿಗಸ್ತರಾಗಿ ನಡೆದುಕೊಂಡರೆ ಮಾತ್ರ, ಭವಿಷ್ಯದಲ್ಲಿ ಬರಲಿರುವ ದೊಡ್ಡ ಶೋಧನೆಗಳಲ್ಲಿ ನಾವು ನಂಬಿಗಸ್ತರಾಗಿ ನಡೆಯಲು ಸಾಧ್ಯವಾಗುತ್ತದೆ. ನೀವು ಸೈತಾನನ ರಾಜ್ಯಕ್ಕೆ ಎಷ್ಟು ದೊಡ್ಡ ಬೆದರಿಕೆಯೆಂದು ಆತನು ಪರಿಗಣಿಸಬೇಕೆಂದರೆ, ಆತನು ತನ್ನ ಸಿಂಹಾಸನವನ್ನು ನೀವು ವಾಸಿಸುವ ಪಟ್ಟಣಕ್ಕೆ ಸ್ಥಳಾಂತರಿಸುವಂತೆ ಮಾಡಬೇಕು.
ದುಃಖಕರ ವಿಷಯವೆಂದರೆ, ಅಂತಿಪನ ಮರಣದ ನಂತರ ಪೆರ್ಗಮದ ಸಭೆಯು ತನ್ನ ಆತ್ಮಿಕ ತೀಕ್ಷ್ಣತೆಯನ್ನು ಕಳಕೊಂಡಿತು. ಅಂತಿಪನು ತನ್ನ ಜೀವಿತಕಾಲದಲ್ಲಿ ಬಹುಶಃ ಆ ಸಭೆಯ ದೂತನಾಗಿದ್ದನು (ಅಂದರೆ ನಾಯಕನು). ಅವನ ಮರಣಾನಂತರ, ಬೇರೊಬ್ಬನು ಸಭೆಯ ನಾಯಕತ್ವವನ್ನು ವಹಿಸಿಕೊಂಡನು ಮತ್ತು ಸಭೆಯು ಕೆಳಕ್ಕೆ ಜಾರಿತು. ಇದು ಅನೇಕ ಕ್ರೈಸ್ತಸಭೆಗಳ ದುಃಖಕರ ಇತಿಹಾಸವಾಗಿದೆ.