ಕ್ರೈಸ್ತಸಭೆಗಳನ್ನು ಮುನ್ನಡೆಸುತ್ತಿರುವ ಸಭಾ ಹಿರಿಯರು ಅಥವಾ ನಾಯಕರಾದ ನಾವು, ಶಿಲುಬೆಯ ದಾರಿಯಲ್ಲಿ ನಡೆಯುವ ಮೂಲಕ ನಮ್ಮ ಸಭೆಯಲ್ಲಿರುವ ಇತರರಿಗೆ ಮಾದರಿಗಳಾಗಬೇಕು. ಸ್ವತಃ ಯೇಸುವಿನ ಮಾದರಿಯಂತೆ, ನಾವು ಸಭೆಯಲ್ಲಿ ಇತರರ ಸೇವಕರಾಗಲು ಹೆಚ್ಚಿನ ಹಂಬಲ ಹೊಂದಿರಬೇಕೇ ಹೊರತು, ನಾಯಕರು ಎಂದು ಎನಿಸಿಕೊಳ್ಳಲು ಅಲ್ಲ. ಯೇಸುವು ಕಲಿಸಿದಂತೆ, "ಲೋಕದ ಅರಸರು ಮತ್ತು ದೊಡ್ಡ ಮನುಷ್ಯರು ಜನರ ಮೇಲೆ ಅಧಿಕಾರ ಚಲಾಯಿಸುತ್ತಾರೆ; ಆದರೆ ನಿಮ್ಮಲ್ಲಿ ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಲು ಬಯಸುವವನು ನಿಮ್ಮೆಲ್ಲರ ಸೇವಕನಾಗಿರಬೇಕು. ಎಲ್ಲರಿಗಿಂತ ಶ್ರೇಷ್ಠನಾಗಲು ಬಯಸುವವನು ಎಲ್ಲರಿಗೂ ದಾಸನಾಗಬೇಕು. ಏಕೆಂದರೆ ರಕ್ಷಕನಾಗಿ ಬಂದ ಮನುಷ್ಯಕುಮಾರನಾದ ನಾನೂ ಸಹ ಸೇವೆ ಮಾಡಿಸಿಕೊಳ್ಳಲು ಬರಲಿಲ್ಲ, ಬದಲಾಗಿ ಸೇವೆ ಮಾಡುವುದಕ್ಕಾಗಿಯೇ ಬಂದಿದ್ದೇನೆ" (ಮಾರ್ಕ. 10:42-45) ಎಂದು ಯೇಸು ಹೇಳಿದರು.
ನಾವು ಎಂದಿಗೂ ನಮ್ಮ ಪದವಿಯನ್ನು ಅಥವಾ ನಾಯಕ ಅಥವಾ ಗುರು ಎಂಬ ಬಿರುದನ್ನು ಪ್ರೀತಿಸಬಾರದು (ಮತ್ತಾ. 23:10). ನಾವು ಸಭೆಯ ಇತರ ಸಹೋದರ ಸಹೋದರಿಯರಿಗಿಂತ ಯಾವುದೇ ರೀತಿಯಲ್ಲಿ ಶ್ರೇಷ್ಠರು ಎಂಬುದಾಗಿ ಭಾವಿಸಬಾರದು. ವಾಸ್ತವವಾಗಿ, ಸಭೆಯಲ್ಲಿರುವ ಇತರ ಎಲ್ಲರೂ ನಮಗಿಂತ ಪ್ರಮುಖರೆಂದು ಪರಿಗಣಿಸುವಂತೆ ನಮಗೆ ಆಜ್ಞಾಪಿಸಲಾಗಿದೆ. ನಮಗಿಂತ ಆತ್ಮಿಕವಾಗಿ ಶ್ರೇಷ್ಠರೆಂದು ಅಲ್ಲ (ಅದು ಅಸಾಧ್ಯ), ಆದರೆ ಹೆಚ್ಚು ಪ್ರಾಮುಖ್ಯರು ಎಂಬುದಾಗಿ ನಾವು ತಿಳಿಯಬೇಕು (ಫಿಲಿ. 2:3).
ನಾವು ಇತರರ ಮುಖಂಡರು(ನಾಯಕರು)ಎಂದು ಎನಿಸಿಕೊಳ್ಳುವುದಕ್ಕೆ ಮೊದಲು, ನಾವು ಇತರರ ಒಡನಾಡಿ ಸಹೋದರರು ಆಗಬೇಕು. ಅಪೊಸ್ತಲನಾದ ಯೋಹಾನನು ತನ್ನ 95ನೇ ವಯಸ್ಸಿನಲ್ಲಿ ಸಭೆಗಳಿಗೆ ಪತ್ರ ಬರೆಯುವಾಗ "ನಿಮ್ಮ ಸಹೋದರನಾದ ಯೋಹಾನನು ..." ಎಂದು ತನ್ನನ್ನು ಕರೆದುಕೊಳ್ಳುತ್ತಾನೆ (ಪ್ರಕ. 1:9). ದುರದೃಷ್ಟವಶಾತ್, ಅನೇಕ ನಾಯಕರು ತಮ್ಮನ್ನು ಕೇವಲ ನಾಯಕರು ಎಂದು ಮಾತ್ರ ಪರಿಗಣಿಸುತ್ತಾರೆ. ನಾವು ಎಲ್ಲಾ ವೇಳೆಯಲ್ಲಿ ಸಭೆಯಲ್ಲಿ ಸಾಮಾನ್ಯ ಸಹೋದರರಾಗಿ ಇರುವುದಕ್ಕೆ ದೇವರ ಕೃಪೆಯನ್ನು ಬೇಡಿಕೊಳ್ಳಬೇಕು. ನಾವು ಹೀಗೆ ಜೀವಿಸುವುದಕ್ಕಾಗಿ ದೇವರೊಂದಿಗೆ ಪ್ರತಿ ಕ್ಷಣವೂ ನೇರವಾದ "ಮುಖಾಮುಖಿ" ಸಂಬಂಧವನ್ನು ಹೊಂದಿರಬೇಕು.
ನಾವು ದೇವರಿಂದ ಹೊಂದಿರುವಂತ ಆತ್ಮಿಕ ಅಧಿಕಾರವನ್ನು ಇತರರ ಮೇಲೆ ಎಂದಿಗೂ ಬಲವಂತವಾಗಿ ಹೇರಬಾರದು ಅಥವಾ ನಮಗೆ ಅಧೀನರಾಗುವಂತೆ ಇತರರನ್ನು ಒತ್ತಾಯಿಸಬಾರದು. ನಮಗೆ ವಿಧೇಯರಾಗಬೇಕೆಂದು ನಾವು ಇತರರನ್ನು ಎಂದಿಗೂ ಒತ್ತಾಯಿಸಬಾರದು; ಮತ್ತು ನಮಗೆ ಯಾರೊಂದಿಗೂ ಪೈಪೋಟಿ ಅಥವಾ ಸ್ಪರ್ಧೆ ಇರಬಾರದು (2 ತಿಮೊ. 2:24,25). ದೇವರು ನಮ್ಮನ್ನು ಬೆಂಬಲಿಸುವುದಾದರೆ, ನಾವು ನಮ್ಮ ದೃಷ್ಟಿಕೋನವನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ, ಏಕೆಂದರೆ ಸ್ವತಃ ದೇವರೇ ನಮ್ಮನ್ನು ಸಮರ್ಥಿಸುತ್ತಾರೆ ಮತ್ತು ನಮ್ಮ ಅಧಿಕಾರವನ್ನು ಸ್ಥಿರಪಡಿಸುತ್ತಾರೆ. ಇತರರ ಮೇಲೆ ಅಧಿಕಾರವನ್ನು ಸ್ಥಾಪಿಸಲು ಯಾರಾದರೂ ತಾನಾಗಿಯೇ ಪ್ರಯತ್ನಿಸುತ್ತಿದ್ದರೆ, ಅದು ಆತನ ಅಧಿಕಾರ ದೇವರಿಂದ ಪ್ರಾಪ್ತವಾಗಿಲ್ಲ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ.
ಒಬ್ಬ ಆತ್ಮಿಕ ನಾಯಕನು ಇತರರಿಂದ ತೀವ್ರವಾಗಿ ವಿರೋಧಿಸಲ್ಪಟ್ಟಾಗ ಅಥವಾ ನಿಂದನೆಗೆ ಒಳಗಾದಾಗ, ಎಂದಿಗೂ ತನ್ನನ್ನು ಸಮರ್ಥಿಸಿಕೊಳ್ಳುವುದಿಲ್ಲ ಆಥವಾ ತಾನು ಸರಿಯೆಂದು ತೋರಿಸಿಕೊಳ್ಳಲು ಬಯಸುವುದಿಲ್ಲ. ಸತ್ಯವೇದವು ಹೀಗೆ ಹೇಳುತ್ತದೆ, "ಕ್ರಿಸ್ತನು ನಿಮಗೆ ಮಾದರಿಯಾಗಿದ್ದಾನೆ. ಆತನ ಹೆಜ್ಜೆಯ ಜಾಡಿನಲ್ಲಿ ನಡೆಯಿರಿ ... ಆತನು ಅವಮಾನಿಸಲ್ಪಟ್ಟಾಗ ಪ್ರತಿಯಾಗಿ ಯಾರನ್ನೂ ನಿಂದಿಸಲಿಲ್ಲ; ಆತನು ಬಾಧೆಯನ್ನು ಅನುಭವಿಸಿದಾಗ ಪ್ರತಿಯಾಗಿ ಯಾರನ್ನೂ ಬೆದರಿಸಲಿಲ್ಲ; ಬದಲಾಗಿ ನ್ಯಾಯವಾಗಿ ತೀರ್ಪು ನೀಡುವ ದೇವರ ಕೈಗೆ ತನ್ನ ಕಾರ್ಯವನ್ನು ಒಪ್ಪಿಸಿದನು"(1 ಪೇತ್ರ. 2:21,23).
ಯೇಸುವು ಎಂದಿಗೂ ತನ್ನ ಆಡಳಿತವನ್ನು ಜನರ ಮೇಲೆ ಸ್ಥಾಪಿಸಲಿಕ್ಕಾಗಿ ಅವರೊಂದಿಗೆ ಹೋರಾಡಲಿಲ್ಲ. ಆತನು ತನ್ನ ಸಂರಕ್ಷಣೆಗಾಗಿ ಮತ್ತು ತನ್ನನ್ನು ಸಮರ್ಥಿಸುವುದಕ್ಕಾಗಿ ದೇವರನ್ನು ಆತುಕೊಂಡಿದ್ದನು. ಸಭೆಯ ಎಲ್ಲಾ ನಾಯಕರುಗಳು ನಡೆಯಬೇಕಾದ ಹಾದಿ ಇದೇ ಆಗಿದೆ. ನಾವು ಸ್ವತಃ ದೇವರ ಅಧಿಕಾರಕ್ಕೆ ಒಳಗಾಗಿದ್ದರೆ, ನಾವು ನಿಶ್ಚಿಂತರಾಗಿ ನಮ್ಮ ಸಕಲ ಸಂರಕ್ಷಣೆಯನ್ನು ದೇವರ ಕೈಗೆ ಒಪ್ಪಿಸಬಹುದು. ನಮ್ಮ ವಿರುದ್ಧವಾಗಿರುವ ಎಲ್ಲಾ ನಿಂದನೆ, ಟೀಕೆ ಮತ್ತು ಚಾಡಿಮಾತುಗಳನ್ನು ನಾವು ನಿರ್ಲಕ್ಷಿಸಬಹುದು. ಏಕೆಂದರೆ ಸ್ವತಃ ದೇವರು ತನ್ನ ಸೇವಕರನ್ನು ಇಂತಹ ದಾಳಿಗಳಿಂದ ರಕ್ಷಿಸುವ ವಾಗ್ದಾನ ಮಾಡಿದ್ದಾರೆ. ಒಬ್ಬ ಆತ್ಮಿಕ ನಾಯಕನ ಮೇಲೆ ದಾಳಿಮಾಡುವ ಯಾವ ಆಯುಧವೂ ಜಯಿಸದು (ಯೆಶಾ. 54:17). ನಾನು ನನ್ನ ಜೀವನದಲ್ಲಿ ಈ ಸತ್ಯಾಂಶವನ್ನು ಪದೇ ಪದೇ ಅನುಭವಿಸಿದ್ದೇನೆ. ಇಂತಹ ಅನುಭವಗಳು ಆಶೀರ್ವಾದಕರವಾಗಿವೆ.
"ನಾವು ಭಕ್ತಿಯಿಂದಲೂ, ಭಯದಿಂದಲೂ ದೇವರ ಸೇವೆಯನ್ನು ಮಾಡಬೇಕು. ಏಕೆಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.
ಇಂದು ಇಂತಹ ಆತ್ಮಿಕ ಮನೋಭಾವವುಳ್ಳ ನಾಯಕರು ಇಲ್ಲದಿರುವುದರಿಂದ ಕ್ರೈಸ್ತಸಭೆಯು ಬಹಳ ತೊಂದರೆ ಅನುಭವಿಸುತ್ತಿದೆ. ಒಮ್ಮೆ ಯೇಸುವು ತನ್ನ ಬಳಿಗೆ ಬಂದ ಜನರ ಗುಂಪನ್ನು ನೋಡಿ ಅವರ ಮೇಲೆ ಕನಿಕರಪಟ್ಟನು. "ಜನರು ಕುರುಬನಿಲ್ಲದ ಕುರಿಗಳಂತಿದ್ದರು ಮತ್ತು ಅವರ ಸಮಸ್ಯೆಗಳು ಎಷ್ಟು ದೊಡ್ಡದಾಗಿದ್ದವು ಎಂದರೆ, ಏನು ಮಾಡಬೇಕು ಮತ್ತು ಸಹಾಯಕ್ಕಾಗಿ ಎಲ್ಲಿಗೆ ಹೋಗಬೇಕೆಂದು ಅವರಿಗೆ ತಿಳಿದಿರಲಿಲ್ಲ" (ಮತ್ತಾ. 9:36 - Living Bible). ಇಂದು ಕೂಡ ಪರಿಸ್ಥಿತಿ ಅದೇ ರೀತಿ ಇದೆ. ಸಭೆಗಳಲ್ಲಿ ಅಗತ್ಯತೆಯುಳ್ಳ ಜನರಿಗೆ ಸಹಾಯ ಒದಗಿಸಲು ಕುರುಬನ ಹೃದಯ ಮತ್ತು ಸೇವಕನ ಆತ್ಮವನ್ನು ಹೊಂದಿರುವಂತ, ದೇವಭಯವುಳ್ಳ ಮತ್ತು ದೇವರ ವಾಕ್ಯಕ್ಕೆ ನಡುಗುವಂತ ನಾಯಕರು ನಮಗೆ ತುರ್ತಾಗಿ ಬೇಕಾಗಿದ್ದಾರೆ.
ಜನರು ನಮ್ಮನ್ನು ಮೆಚ್ಚಿಕೊಂಡು, ನಮ್ಮ ಅಭಿಮಾನಿಗಳು ಆಗದಿರುವಂತೆ ನಾವು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ, ಜನರು ತಮ್ಮ ಶಿರಸ್ಸಾದ ಕ್ರಿಸ್ತನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು ಎಂದಿಗೂ ಸಾಧ್ಯವಾಗುವುದಿಲ್ಲ. ಯಾರೂ ಸಹ ನಮಗೆ ಅಂಟಿಕೊಳ್ಳದಂತೆ ನಾವು ನೋಡಿಕೊಳ್ಳಬೇಕು. ಇದಕ್ಕೆ ಬದಲಾಗಿ, ಪ್ರತಿಯೊಬ್ಬನೂ ದೇವರ ಮುಖದ ಮುಂದೆ (ದೇವರ ಸನ್ನಿಧಿಯಲ್ಲಿ) ಮಾತ್ರ ಜೀವಿಸುವದನ್ನು ನಾವು ಪ್ರೋತ್ಸಾಹಿಸಬೇಕು. ಅವರು ಕೈಗೊಳ್ಳುವ ಕೆಲಸಗಳಲ್ಲಿ ಅವರು ನಮ್ಮ ಮೆಚ್ಚುಗೆಗಾಗಿ ಹಾರೈಸಬಾರದು. ಯಾರಾದರೂ ನಮಗೆ ಅಂಟಿಕೊಳ್ಳುವುದನ್ನು ನಾವು ಕಂಡ ಕೂಡಲೇ, ಅವರನ್ನು ನಾವು ದೂರ ಸರಿಸಬೇಕು. ನಾವು ಜನರಿಗೆ ಸಲಹೆ ನೀಡುವಾಗ, ನಮ್ಮೊಂದಿಗೆ ಅಸಮ್ಮತಿ ಸೂಚಿಸುವುದಕ್ಕೆ ಮತ್ತು ಅವರಿಗೆ ಸರಿಯೆನಿಸುವಂತೆ ನಿರ್ಧಾರ ಕೈಗೊಳ್ಳುವುದಕ್ಕೂ ಸಹ ಅವರಿಗೆ ಸ್ವಾತಂತ್ರ್ಯ ನೀಡಬೇಕು. ಒಂದು ವೇಳೆ ಇದರ ಪರಿಣಾಮವಾಗಿ ಅವರು ತಪ್ಪು ಮಾಡಿದರೂ ಸಹ, ನಾವು ಅವರಿಗೆ ಸಹಾಯ ಮಾಡಲು ಸಿದ್ಧರಿರಬೇಕು, ಮತ್ತು "ನಾನು ನಿನಗೆ ಮೊದಲೇ ಹೇಳಿದ್ದೆನಲ್ಲವೇ?" ಎಂದು ಯಾವತ್ತೂ ಹೇಳಬಾರದು. ಒಬ್ಬ ಯಥಾರ್ಥ ಆತ್ಮಿಕ ನಾಯಕನು ಈ ರೀತಿ ನಡೆದುಕೊಳ್ಳುತ್ತಾನೆ.
"ಪವಿತ್ರಾತ್ಮಭರಿತರಾಗಿರಿ ... ಕ್ರಿಸ್ತನ ಭಯದಲ್ಲಿ ಒಬ್ಬರಿಗೊಬ್ಬರು ವಿನಯತೆಯಿಂದ ನಡೆದುಕೊಳ್ಳಿರಿ" (ಎಫೆ. 5:19,21).
ಯೇಸುವು 30 ವರ್ಷಗಳ ಕಾಲ ತನ್ನ ಲೌಕಿಕ ಪರಿಸ್ಥಿತಿಗಳಿಗೂ ತನ್ನ ತಂದೆತಾಯಿಯ ಅಧಿಕಾರಕ್ಕೂ ಒಳಪಟ್ಟು ನಡೆದ ಉದಾಹರಣೆಯು ನಮ್ಮ ಮಾದರಿಯಾಗಿದೆ>. ಆತನು ಈ ಕ್ಷೇತ್ರಗಳಲ್ಲಿ ನಂಬಿಗಸ್ತನಾಗಿ ಜೀವಿಸಿದ ನಂತರವೇ ತಂದೆಯಾದ ದೇವರು ಆತನ ದೀಕ್ಷಾಸ್ನಾನದ ವೇಳೆ ಆತನಿಗೆ, "ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಸಂಪೂರ್ಣವಾಗಿ ಮೆಚ್ಚಿದ್ದೇನೆ!" ಎಂಬ ಪ್ರಮಾಣಪತ್ರವನ್ನು ನೀಡಿದರು. ಸಭಾ ನಾಯಕರಾದ ನಮಗೂ ಸಹ ಇದು ಸೂಕ್ತವಾದ ಹಾದಿಯಾಗಿದೆ.
ಸತ್ಯವೇದವು ಹೇಳುವುದೇನೆಂದರೆ, "ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ, ಮತ್ತು ಅಧೀನರಾಗಿರಿ; ಅವರು ನಿಮ್ಮ ಲೆಕ್ಕ ಒಪ್ಪಿಸಬೇಕಾಗಿದ್ದು, ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿಕೊಳ್ಳಿರಿ. ಇಲ್ಲವಾದರೆ ಅದು ನಿಮಗೆ ಲಾಭದಾಯಕವಲ್ಲ" (ಇಬ್ರಿ. 13:17 - ಭಾವಾನುವಾದ). ಈ ಆಜ್ಞೆಯು ನಾಯಕರಿಗೂ ಅನ್ವಯಿಸುತ್ತದೆ. ನಾವು ದೇವರು ನಮ್ಮನ್ನು ಒಳಪಡಿಸುವ ಪರಿಸ್ಥಿತಿಗಳಿಗೆ ಮತ್ತು ಲೋಕದಲ್ಲಿ ಹಾಗೂ ಸಭೆಯಲ್ಲಿ ದೇವರು ನಮ್ಮ ಮೇಲೆ ಇರಿಸುವಂತ ಅಧಿಕಾರಕ್ಕೆ ಒಳಪಡಬೇಕು. ಆಗ ಯೇಸುವು ದೇವರಿಂದ ಪಡೆದಂತ ಸಾಕ್ಷಿಯನ್ನೇ. ಅಂದರೆ, ನಾವು ದೇವರಿಗೆ ಮೆಚ್ಚುಗೆಯಾಗಿದ್ದೇವೆ, ಎಂಬುದಾಗಿ ನಾವು ಸಹ ಪಡೆಯಬಹುದು.
ನಮಗೆ ಅಧೀನರಾಗುವಂತೆ ನಾವು ಯಾರನ್ನೂ ಎಂದಿಗೂ ಒತ್ತಾಯಿಸಬಾರದು. ನಾವು ನಾಯಕರಾಗಿದ್ದೇವೆ ಎಂಬ ಕಾರಣಕ್ಕಾಗಿ ನಾವು ಇತರರಿಂದ ವಿಧೇಯತೆಯನ್ನು ಅಪೇಕ್ಷಿಸಿದರೆ, ಅದು ನಮ್ಮಲ್ಲಿರುವ ಅಭದ್ರತೆಯನ್ನು ಮತ್ತು ದೇವರ ಬಗ್ಗೆ ತಿಳುವಳಿಕೆಯ ಕೊರತೆಯನ್ನು ಸೂಚಿಸುತ್ತದೆ. ಏಕೆಂದರೆ ದೇವರು ಜನರಿಗೆ ತನಗೆ ಅಧೀನರಾಗುವ ಇಲ್ಲವೇ ತನ್ನ ಅಧಿಕಾರವನ್ನು ತಿರಸ್ಕರಿಸುವ ಸ್ವಾತಂತ್ರ್ಯ ನೀಡುತ್ತಾರೆ ಮತ್ತು ನಾವು ದೇವರಿಗಿಂತ ದೊಡ್ಡವರಲ್ಲ. ಹಾಗಾಗಿ ನಾಯಕರಾದ ನಾವು, ಇತರರು ನಮಗೆ ವಿಧೇಯರಾಗಬೇಕೆಂದು ಹೇಳುವ ಹಕ್ಕು ನಮಗಿಲ್ಲ. ನಾವು ಸೇವೆಗಾಗಿ ಕರೆಯಲ್ಪಟ್ಟಿದ್ದೇವೆ, ಅಧಿಕಾರ ಚಲಾಯಿಸುವುದಕ್ಕಾಗಿ ಅಲ್ಲ.
ನಾವು ನಮ್ಮ ವ್ಯಕ್ತಿತ್ವದ ಪ್ರಭಾವದಿಂದ ಯಾರನ್ನೂ ನಮಗೆ ಅಧೀನರಾಗಿ ಮಾಡಿಕೊಳ್ಳದಂತೆ ಜಾಗರೂಕರಾಗಿ ಇರಬೇಕು. ದೃಢ ಮನಸ್ಸಿನ ಒಬ್ಬ ಮುಖಂಡನು ತನ್ನ ವ್ಯಕ್ತಿತ್ವದ ಬಲದಿಂದ ಸಭೆಯಲ್ಲಿ ಇತರರ ಮೇಲೆ ಹಿಡಿತವನ್ನು ಸಾಧಿಸುವುದು ತುಂಬಾ ಸುಲಭ! ಅದು ಕೆಟ್ಟತನವಾಗಿದೆ. ಇಂತಹ ಆತ್ಮ-ಬಲದ (soul-power) ಉಪಯೋಗವನ್ನು ಸಾಯಿಸಬೇಕು. ನಮ್ಮ ಸಭೆಯ ಜನರು ನಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳದೇ ಇರುವ ಸ್ವಾತಂತ್ರ್ಯ ಹೊಂದಿರಬೇಕು. ಯಾರೂ ನಮಗೆ ಭಯಪಡಬಾರದು. ಪೇತ್ರನು ತನ್ನನ್ನು ಗದರಿಸುವುದನ್ನು ಸಹ ಯೇಸುವು ಅನುಮತಿಸಿದರು(ಮತ್ತಾ. 16:22). ನಿಮ್ಮ ಸಭೆಯ ಸಹೋದರರು ನಿಮ್ಮನ್ನು ತಿದ್ದುವ ಅಥವಾ ಗದರಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆಯೇ, ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿರಿ. ಇಲ್ಲವಾದರೆ, ನಿಮ್ಮ ಸ್ವಂತ ಹೆಚ್ಚಳ ಪಡಿಸುವಿಕೆಯಿಂದ ನೀವು ಬಿಡುಗಡೆ ಹೊಂದುವುದಕ್ಕಾಗಿ ಕ್ರಮವನ್ನು ಕೈಗೊಳ್ಳಬೇಕು ಮತ್ತು ಯೇಸುವು ಭೂಲೋಕದಲ್ಲಿ ನಡೆದ ಮಾದರಿಯ ಪ್ರಕಾರ ನಿಮ್ಮನ್ನು ತಗ್ಗಿಸಿಕೊಳ್ಳಬೇಕು.
ನಾವು ಕ್ರೈಸ್ತಸಭೆಯನ್ನು ಎಂದಿಗೂ ಒಂದು ಸರ್ವಾಧಿಕಾರದಂತೆ ನಡೆಸಬಾರದು, ಮತ್ತು ಸಭೆಯಲ್ಲಿ ಸಹೋದರ-ಸಹೋದರಿಯರು ಅನೇಕ ನಿಯಮ ನಿಬಂಧನೆಗಳ ಹೊರೆಯೊಂದಿಗೆ ಜೀವಿಸುವ ವಾತಾವರಣ ಇರಬಾರದು. ಇಂತಹ ವಾತಾವರಣವು ಸಭೆಯನ್ನು ಒಂದು ಕಾನೂನಿನ ಸಂಘವನ್ನಾಗಿ ಮಾಡುತ್ತದೆ, ಆದರೆ ಅಲ್ಲಿ ನಿಜವಾದ ದೇವಭಕ್ತರಾದ ಸಹೋದರ-ಸಹೋದರಿಯರು ನೆಮ್ಮದಿಯನ್ನು ಕಂಡುಕೊಳ್ಳುವುದಿಲ್ಲ. ಇದಕ್ಕೆ ಬದಲಾಗಿ, "ಹೌದು ಸ್ವಾಮೀ" ಎನ್ನುವವರು (ಕುರುಡು ವಿಧೇಯತೆಯ ಜನರು) ಪ್ರಭಾವಶಾಲಿಗಳಾಗುತ್ತಾರೆ. ಇದು ಕೆಟ್ಟತನವಾಗಿದೆ.
ನಾವು ನಮ್ಮ ಸಭೆಗಳಲ್ಲಿ ಅನೇಕ ನಿಯಮಗಳನ್ನು ಜಾರಿಗೊಳಿಸುವುದರ ಮೂಲಕ ಇತರರನ್ನು ಪವಿತ್ರರನ್ನಾಗಿ ಮಾಡಲಾರೆವು. ನಾವು ದೇವರ ವಾಕ್ಯವನ್ನು ಬೋಧಿಸಬೇಕು, ಆದರೆ ಜನರು ಒಂದು ನಿರ್ದಿಷ್ಟ ಚೌಕಟ್ಟಿಗೆ ಹೊಂದಿಕೊಳ್ಳುವಂತೆ ಅವರನ್ನು ಬಲವಂತ ಪಡಿಸಬಾರದು. ಜನರು ವ್ಯಕ್ತಿಗತ ತಿಳುವಳಿಕೆಯಿಲ್ಲದೆ ಕೇವಲ ನಮ್ಮ ಮೆಚ್ಚುಗೆಗಾಗಿ ಕೆಲಸಗಳನ್ನು ಮಾಡುವುದಾದರೆ, ಆ ಕಾರ್ಯಗಳು ಜನರ ಕಣ್ಣಿಗೆ "ನೀತಿವಂತಿಕೆ" ಮತ್ತು ಒಳ್ಳೆಯದೆಂದು ತೋರಿಬಂದರೂ, ಅವು ಕೇವಲ ನಿರ್ಜೀವ ಕರ್ಮಗಳು ಆಗಿರುತ್ತವೆ.
ನಿರ್ಜೀವ ಕರ್ಮಗಳು ಜನರ ಮೆಚ್ಚುಗೆಗಾಗಿ ಅಥವಾ ಅವರ ಮೇಲೆ ಪ್ರಭಾವ ಬೀರುವುದಕ್ಕಾಗಿ ಮಾಡುವ ಕಾರ್ಯಗಳಾಗಿವೆ, ಆದರೆ ದೇವರು ಯಾವುದೇ ನಿರ್ಜೀವ ಕರ್ಮವನ್ನು ಒಪ್ಪಿಕೊಳ್ಳುವುದಿಲ್ಲ. ದೇವರು ಸ್ವೀಕರಿಸುವ ಕಾರ್ಯಗಳೆಂದರೆ, ಕೇವಲ ದೇವರ ಮೆಚ್ಚುಗೆಗಾಗಿ ಮಾಡುವ ಕೆಲಸಗಳು. ನಾವು ಈ ಹಾದಿಯಲ್ಲಿ ಸಹೋದರ-ಸಹೋದರಿಯರನ್ನು ನಡೆಸಬೇಕಾದರೆ, ಅವರಿಗೆ ಸ್ವಾತಂತ್ರ್ಯವನ್ನು ಕೊಡಬೇಕು. ಸ್ವತಃ ದೇವರು ಆದಾಮ ಮತ್ತು ಹವ್ವಳನ್ನು ಏದೆನ್ ತೋಟದಲ್ಲಿ ಸ್ವತಂತ್ರರಾಗಿ ಬಿಟ್ಟ ಹಾಗೆ. ಕೇವಲ ದೇವಭಯದ ಮೂಲಕ ನಿಜವಾದ ಪವಿತ್ರತೆಯು ಸಿದ್ಧಿಗೆ ಬರುತ್ತದೆ (2 ಕೊರಿಂಥ. 7:1), ಮತ್ತು ಯಾವುದೇ ಸಭಾಹಿರಿಯನ ಭಯದ ಮೂಲಕವಲ್ಲ.
ಒಂದು ವೇಳೆ ದೇವರು ನಿಮ್ಮ ಸಭೆಯಲ್ಲಿ ಯುವ ಸಹೋದರರಿಗೆ ಸೇವೆಯ ಅವಕಾಶ ನೀಡಿದರೆ ಮತ್ತು ಸಭಾ ಸದಸ್ಯರಿಗೆ ನಿಮಗಿಂತ ಈ ಸಹೋದರರ ಮೇಲೆ ಹೆಚ್ಚಿನ ಭರವಸೆ ಇದ್ದರೆ, ಇದನ್ನು ದೇವರ ಕಾರ್ಯವೆಂದು ನೀವು ಅಂಗೀಕರಿಸಬೇಕು ಮತ್ತು ಸಭೆಯಲ್ಲಿ ಇಂತಹ ಅಭಿಷಿಕ್ತ ಯುವ ಸಹೋದರರಿಗೆ ದೀನತೆಯಿಂದ ಪ್ರಾಮುಖ್ಯತೆಯನ್ನು ನೀಡಬೇಕು. ಇಲ್ಲವಾದರೆ ನೀವು ಸ್ವತಃ ದೇವರ ವಿರುದ್ಧ ಹೋರಾಡಿದಂತೆ ಆಗುತ್ತದೆ.
ನೀವು ಭೂಲೋಕದ ಪ್ರೀತಿಯುಳ್ಳ ತಂದೆಯಾಗಿದ್ದರೆ, ನಿಮ್ಮ ಮಕ್ಕಳು ನಿಮಗಿಂತ ಹೆಚ್ಚು ಶಿಕ್ಷಣ ಪಡೆಯಲಿ ಎಂದು ಖಂಡಿತವಾಗಿ ಹಂಬಲಿಸುತ್ತೀರಿ. ಒಬ್ಬ ನಿಜವಾದ ಆತ್ಮಿಕ ತಂದೆಗೂ ತನ್ನ ಆತ್ಮಿಕ ಮಕ್ಕಳ ಕುರಿತಾಗಿ ಇದೇ ಹಂಬಲವಿರುತ್ತದೆ - ತನ್ನ ಆತ್ಮಿಕ ಮಕ್ಕಳು ತನಗಿಂತ ಆತ್ಮಿಕವಾಗಿ ಹೆಚ್ಚು ಉನ್ನತ ಮಟ್ಟಕ್ಕೆ ತಲುಪಬೇಕು, ಎಂಬುದಾಗಿ. ನೀವು ಸೇವೆ ಮಾಡುವ ಜನರ ಬಗ್ಗೆ ನಿಮ್ಮಲ್ಲಿ ಇಂತಹ ಹಂಬಲ ಇಲ್ಲವಾದರೆ, ನೀವು ಒಬ್ಬ ಆತ್ಮಿಕ ತಂದೆಯಲ್ಲ. ಹಾಗಿದ್ದಲ್ಲಿ ನೀವು ಒಬ್ಬ ನಾಯಕನ ಸ್ಥಾನಕ್ಕೆ ಅಯೋಗ್ಯರು. ನೀವಿರುವ ಸ್ಥಳದಲ್ಲಿ ಕ್ರಿಸ್ತನ ದೇಹವನ್ನು ಕಟ್ಟುವುದಕ್ಕೆ ನೀವು ಅಡ್ಡಿಯಾಗುತ್ತೀರಿ.
ಸಭೆಯಲ್ಲಿ ಸರ್ವಾಧಿಕಾರಿ ಮನೋಭಾವ ಹೊಂದಿರುವಂತ ಮತ್ತು ತಮ್ಮ ಸ್ನೇಹಿತರಿಗೆ ಪಕ್ಷಪಾತ ತೋರಿಸುವಂತ ನಾಯಕರು, ತಾವು ಇಂತಹ ಪಾಪಕರ ನಡವಳಿಕೆಗಾಗಿ ದೇವರ ನ್ಯಾಯತೀರ್ಪಿಗೆ ಒಳಗಾಗುವುದಿಲ್ಲವೆಂದು ಭಾವಿಸಬಹುದು. ಆದರೆ ಕರ್ತನು ಪ್ರತಿಯೊಂದನ್ನೂ ಗಮನಿಸುತ್ತಾನೆ ಮತ್ತು ಇವೆಲ್ಲವುಗಳ ನಿಖರವಾದ ದಾಖಲೆಯನ್ನು ಇಟ್ಟುಕೊಂಡಿರುತ್ತಾನೆ. ಆತನು ತನ್ನ ನಿಗದಿತ ವೇಳೆಯಲ್ಲಿ ಇಂತಹ ನಂಬಿಗಸ್ತಿಕೆಯಿಲ್ಲದ ನಾಯಕರನ್ನು ಕಠಿಣ ನ್ಯಾಯತೀರ್ಪಿಗೆ ಒಳಪಡಿಸುತ್ತಾನೆ. ಆಗ ಸಭಾನಾಯಕರಲ್ಲಿ ಕಪಟಿಗಳು, ಅಥವಾ ಹಿಂಡಿನ ಮೇಲೆ ಅಧಿಕಾರ ಚಲಾಯಿಸುವವರು, ಅಥವಾ ಇತರರೊಂದಿಗೆ ಕಠಿಣವಾಗಿ ನಡೆದುಕೊಳ್ಳುವವರನ್ನು ಕರ್ತನು ಸುಮ್ಮನೆ ಬಿಡುವುದಿಲ್ಲವೆಂದು ಎಲ್ಲರೂ ಕಂಡುಕೊಳ್ಳುತ್ತಾರೆ. ದೇವರಲ್ಲಿ ಯಾವುದೇ ಪಕ್ಷಪಾತವಿಲ್ಲ! ಆದ್ದರಿಂದ, "ನಿಂತಿದ್ದೇನೆಂದು ಭಾವಿಸುವ ಪ್ರತಿಯೊಬ್ಬನೂ ಬೀಳದಿರುವಂತೆ ಎಚ್ಚರವಾಗಿರಲಿ" (1 ಕೊರಿಂಥ. 10:12).
ಇಬ್ರಿ. 12:26-28'ರ ವಚನಗಳು ನಮಗೆ ತಿಳಿಸುವಂತೆ, "ದೇವರು ಕದಲುವ ವಸ್ತುಗಳನ್ನು ಅಲುಗಾಡಿಸಿ ತೆಗೆದುಹಾಕುತ್ತಾರೆ; ಆಗ ಕದಲದಿರುವ ವಸ್ತುಗಳು ಸ್ಥಿರವಾಗಿ ನಿಲ್ಲುವವು."
ನಮ್ಮ ಸುತ್ತಲಿನ ಕ್ರೈಸ್ತ ಪ್ರಪಂಚದಲ್ಲಿ, ಒಳ್ಳೆಯ ಹೆಸರು ಗಳಿಸಿರುವ ಬೋಧಕರು ಪಾಪದಲ್ಲಿ ಸಿಕ್ಕಿಕೊಳ್ಳುವುದನ್ನು, ಮತ್ತು ಹೊಸ ಒಡಂಬಡಿಕೆಯ ಮಾದರಿಯನ್ನು ಅನುಸರಿಸುವಂತೆ ಕಂಡುಬರುತ್ತಿದ್ದ ಕ್ರೈಸ್ತಸಭೆಗಳು ವಿಭಜನೆಯಾಗುವುದನ್ನು ಮತ್ತು ಸಂಪೂರ್ಣವಾಗಿ ಅಲುಗಾಡಿಸಲ್ಪಡುವುದನ್ನು ನಾವು ನೋಡುತ್ತೇವೆ. ಇಂದು ಕ್ರೈಸ್ತ ಪ್ರಪಂಚದಲ್ಲಿ ಕಾಣಿಸುತ್ತಿರುವ ಅಸ್ಥಿರತೆಯ ನಡುವೆ, ಒಂದು ಪಕ್ಕದಲ್ಲಿ ಲೌಕಿಕ ಮನೋಭಾವ ಹಾಗೂ ಲೋಕರೂಢಿಗೆ ಹೊಂದಿಕೊಳ್ಳುವ ಆಚರಣೆಗಳು, ಹಾಗೂ ಇನ್ನೊಂದು ಪಕ್ಕದಲ್ಲಿ ಅತಿಯಾದ ಕಾನೂನುಬದ್ಧತೆ ಮತ್ತು ಫರಿಸಾಯಿತನದ ಮಧ್ಯೆ ನಾವು ಅಲುಗಾಡದಂತ ಕ್ರಿಸ್ತನ ದೇಹವನ್ನು ಕಟ್ಟಬೇಕಾದರೆ, "ದೇವರು ದಹಿಸುವ ಅಗ್ನಿಯಾಗಿದ್ದಾನೆಂದು ತಿಳಿದುಕೊಂಡು, ನಾವು ದೇವರ ಸೇವೆಯನ್ನು ಭಕ್ತಿಯಿಂದಲೂ, ಭಯದಿಂದಲೂ ಮಾಡಬೇಕು" (ಇಬ್ರಿ. 12:28-29).
ನಾವು ನಮ್ಮ ಜೀವಿತದ ಅಂತ್ಯದವರೆಗೆ, ಎಲ್ಲಾ ವೇಳೆಯಲ್ಲಿ ದೀನತೆಯ ಹಾದಿಯಲ್ಲಿ ನಡೆಯೋಣ. ಆಮೆನ್.