WFTW Body: 

ಪರ್ವತದ ಮೇಲೆ ಮಾಡಿದ ಪ್ರಸಂಗದಲ್ಲಿ ಯೇಸು ತನ್ನ ಶಿಷ್ಯಂದಿರಿಗೆ ಹೇಳಿದ್ದೇನೆಂದರೆ, ”ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾಗುತ್ತಾನೆ” ಎಂಬುದಾಗಿ. ಮುಂದೆ ಯೇಸು ಹೇಳುತ್ತಾ ಹೋಗುವುದೇನೆಂದರೆ, ಮೋಹಿಸುವಂತ ಮನುಷ್ಯನು ಎರಡು ಕಣ್ಣುಗಳುಳ್ಳವನಾಗಿದ್ದುಕ್ಕೊಂಡು, ನರಕಕ್ಕೆ ಹೋಗುವುದಕ್ಕಿಂತ, ಕಣ್ಣುಗಳನ್ನು ಕಿತ್ತೊಗೆಯುವುದು ಲೇಸು ಎಂಬುದಾಗಿ. ಯೇಸು ನಮಗೆ ತಿಳಿಸಿಕೊಟ್ಟಿದ್ದೇನೆಂದರೆ, ಸತತವಾಗಿ ಒಂದು ಕಣ್ಣಿನಲ್ಲಿ ಪರಸ್ತ್ರಿಯನ್ನು ನೋಡಿ ಮೋಹಿಸಿದರೆ ಸಾಕು, ಅದು ಕೊನೆಯದಾಗಿ ಆ ಮನುಷ್ಯನನ್ನು ನರಕಕ್ಕೆ ಕಳುಹಿಸುತ್ತದೆ.

ಮನುಷ್ಯನ ಹೃದಯದಲ್ಲಿನ ಮೋಹಿಸುವಿಕೆಯೆಂಬ ಬೆಂಕಿಯು, ಆದಮನ ಅವಧಿಯಿಂದ ಹಿಡಿದು ಇಂದಿನ ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿ ನರಕದ ಬೆಂಕಿಗೆ ಸಮನಾಗಿ ದಹಿಸುತ್ತಿರುತ್ತದೆ. ಇದನ್ನು ಕೇವಲ ಪವಿತ್ರಾತ್ಮನ ಬೆಂಕಿಯೊಂದೇ ನಾಶ ಮಾಡಲು ಸಾಧ್ಯ. ಒಂದು, ನಿಮ್ಮ ಹೃದಯವು ಪಾಪಕ್ಕೆ ಒಳಪಟ್ಟು ಮೋಹಿಸುವುದರ ಜೊತೆ ದಹಿಸುತ್ತದೆ, ಇಲ್ಲವಾದಲ್ಲಿ, ಯೇಸುವಿಗಾಗಿ ನೀವು ಇಟ್ಟಿರುವ ಪ್ರೀತಿಯ ಜೊತೆ ದಹಿಸುತ್ತದೆ. ನಿಮ್ಮ ಆಯ್ಕೆಯು ಇವೆರೆಡರಲ್ಲಿ ಯಾವುದಾದರೂ ಒಂದಾಗಿರುತ್ತದೆ : ಒಂದು, ಪ್ರಸ್ತುತ ಶೋಧಿಸುವಂತಹ ಬೆಂಕಿ ಅಥವಾ ಭವಿಷ್ಯದಲ್ಲಿನ ನರಕದ ಬೆಂಕಿ. ಮೂರನೇ ಅವಕಾಶ ಇರುವುದಿಲ್ಲ.

ಯೆಹೂದಿ ಜನರಿಗೆ ಕರ್ತನು ಧರ್ಮಶಾಸ್ತ್ರಗಳ ಮೂಲಕ ಈಗಾಗಲೇ ಉನ್ನತವಾದ ನೈತಿಕ ಗುಣಮಟ್ಟವನ್ನು ಹೊಂದಿರುವುದಾಗಿ ಮಾತಾಡಿದನು. ಅವರು ಕಠಿಣವಾದ ನಿಯಮಗಳಿಂದ ಜೀವಿಸಿದರು, ಅಂದರೆ ಮದುವೆ ಹೊರಗಡೆಯ ಲೈಂಗಿಕತೆಗೆ ಯಾವಾಗಲೂ ಸಾವಿನ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಆ ದಿನಗಳಲ್ಲಿ ಜನರನ್ನು ಜಾರತ್ವಕ್ಕೆ ಶೋಧಿಸಲು, ಯಾವುದೇ ಆಶ್ಲಿಲ ವಿಷಯಗಳನ್ನೊಳಗೊಂಡ ಪುಸ್ತಕ ಅಥವಾ ಪುರವಾಣಿಗಳು ಅಥವಾ ದೂರದರ್ಶನ ಕಾರ್ಯಕ್ರಮಗಳು ಇರಲಿಲ್ಲ. ಸಮಾಜದಲ್ಲಿ ಅಂದಿನ ಪ್ರತಿ ಹೆಣ್ಣು ಮಕ್ಕಳು ಮೈತುಂಬಾ ಉಡುಗೆ ತೊಡಿಗೆ ಗಳನ್ನು ಹಾಕಿಕೊಳ್ಳುತ್ತಿದ್ದರು ಮತ್ತು ಪುರುಷ ಹಾಗೂ ಸ್ತ್ರೀ ಇಬ್ಬರೂ ಒಬ್ಬರಿಗೊಬ್ಬರೂ ಹೆಚ್ಚು ಮಾತನಾಡುತ್ತಿರಲಿಲ್ಲ. ಹಾಗಿದ್ದರೂ, ಅಂಥಹ ಸಮಾಜದಲ್ಲಿ, ಈ ಎಲ್ಲಾ ನಿರ್ಬಂಧಗಳನ್ನು ಹೇರಿದ್ದರೂ ಸಹ, ದೇವರಿಗೆ ಗೊತ್ತಿತ್ತು, ಪುರುಷನು ಸ್ತ್ರಿಯನ್ನು ಮೋಹಿಸುತ್ತಾನೆ ಎಂಬುದಾಗಿ. ಅದಕ್ಕಾಗಿ ಆತನು ತನ್ನ ಶಿಷ್ಯಂದಿರಿಗೆ ಇದರ ವಿರುದ್ಧವಾಗಿ ಎಚ್ಚರಿಸಿದ್ದನು. ಅಂಥಹ ಕಠಿಣ ನಿಯಮವಿದ್ದಂತ ಸಮಾಜದಲ್ಲೂ ಸಹ ಲೈಂಗಿಕ ಪಾಪವು ಇದ್ದದ್ದೇ ಆದಲ್ಲಿ, ಇಂದು ನಾವು ಜೀವಿಸುವಂತ ಸಮಾಜದಲ್ಲಿರುವ ಅಶ್ಲೀಲದ ಬಗ್ಗೆ ಯೌವನಸ್ಥ್ರರನ್ನು ಎಷ್ಟು ಎಚ್ಚರಿಸಬಹುದು.

ನಮ್ಮ ಲೈಂಗಿಕ ಅಭಿಲಾಷೆಗಳನ್ನು ಪೋಷಿಸುವ ಸಲುವಾಗಿ, ಇಂದಿನ ಸಮಾಜವು ಪ್ರತಿಯೊಂದು ಅವಕಾಶದ ಮೂಲಕ ನಮ್ಮ ಮನಸ್ಸಿನೊಳಗೆ ಲೈಂಗಿಕತೆಯ ಬೆಂಕಿಯನ್ನು ಹಾಕಲು ಇಂಧನ, ಕಟ್ಟಿಗೆಯನ್ನು ಒಗೆಯುತ್ತದೆ. ಇದಕ್ಕಾಗಿ ನಮ್ಮ ಈ ದಿನಮಾನಗಳಲ್ಲಿ ನಾವೆಲ್ಲರೂ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಮೋಹಿಸುವಿಕೆಯ ಬೆಂಕಿಯನ್ನು ನೀವು ಹೊರಗೆ ಹಾಕುವುದರ ಬಗ್ಗೆ ಗಂಭೀರವಾಗಿರುವುದಾದರೆ, ಮನಸ್ಸಿನೊಳಗೆ ಹೊಕ್ಕುವಂತಹ ಕಟ್ಟಿಗೆ, ಇಂಧನ (ಲೈಂಗಿಕತೆಗೆ ಸಂಬಂಧಪಟ್ಟ ಕೆಟ್ಟ ಸಂಗತಿಗಳನ್ನು) ತಡೆಯುವುದರ ಬಗ್ಗೆ ಗಂಭೀರವುಳ್ಳವರಾಗಿರಬೇಕು ಮತ್ತು ಆ ಇಂಧನದ ಮೂಲಗಳನ್ನು ಕತ್ತರಿಸಬೇಕು, ಉಗ್ರವಾಗಿ ಮತ್ತು ತೀವ್ರವಾಗಿ, ಯಾವುದೇ ದಯೆ ತೋರಿಸದ ಹಾಗೇ. ಕಣ್ಣನ್ನು ಕಿತ್ತು ಹಾಕುವುದು ಮತ್ತು ಕೈಯನ್ನು ಕತ್ತರಿಸಿಕೊಳ್ಳುವುದರ ಅರ್ಥ ಇದೇ ಆಗಿದೆ. ಪಾಪವನ್ನು ಮಾಡುವುದಕ್ಕೆ ನಮಗೆ ಪ್ರೇರೇಪಿಸುವಂತವುಗಳನ್ನು ನಾವು ನಾಶಮಾಡಬೇಕೆಂದು ಯೇಸು ನಮಗೆ ಆದೇಶಿಸಿದ್ದಾರೆ. ಪಾಪದ ಅಪಾಯ ಮತ್ತು ನರಕದ ಬೆಂಕಿಯ ನಿಜತ್ವದ ಬಗ್ಗೆ, ಎಲ್ಲರಿಗಿಂತ ಹೆಚ್ಚಾಗಿ ಯೇಸು ಹೆಚ್ಚು ಅರಿವುಳ್ಳವರಾಗಿದ್ದಾರೆ, ಅದಕ್ಕಾಗಿಯೇ ಯೇಸು, ನಾವು ಪಾಪದಿಂದ ರಕ್ಷಣೆ ಹೊಂದುವ ಸಲುವಾಗಿ, ನಮಗೆ ತೀವ್ರವಾದಂತ ಆತ್ಮೀಕ ಶಸ್ತ್ರ ಚಿಕಿತ್ಸೆಯ ಬಗ್ಗೆ ಒತ್ತಾಯಿಸಿದ್ದಾರೆ.

ಇಂದು ನಮಗೆ ಕರ್ತನ ಆದೇಶವು ಹೇಗೆ ಅನ್ವಯಿಸುತ್ತದೆ ಎಂದರೆ, ”ನಿಮ್ಮ ಮನೆಯಲ್ಲಿನ ದೂರದರ್ಶನವು ನಿಮ್ಮನ್ನು ಪಾಪಕ್ಕೆ ನಡೆಸುತ್ತದೆ ಎಂದರೆ, ಅದರಿಂದ ತಕ್ಷಣವೇ ಹೊರಬನ್ನಿ”. ನೀವು ಪರದೆಯ ಮೇಲೆ ನೋಡಿದಂತ ದೂರದರ್ಶನದ ತಾರೆಗಳ ಜೊತೆಗೆ ನರಕಕ್ಕೆ ಹೋಗುವುದಕ್ಕಿಂತ, ದೂರದರ್ಶನ ತಪ್ಪಿಸಿಕೊಂಡು ಪರಲೋಕಕ್ಕೆ ಹೋಗುವುದು ಉತ್ತಮ ಅಥವಾ ಕೆಲವು ಪುರವಾಣಿಗಳು ಅಥವಾ ವಿಶೇಷ ರೀತಿಯ ಸಂಗೀತಗಳು ಪ್ರೇರೇಪಿಸುವುದರಿಂದ, ನಿಮ್ಮನ್ನು ಪಾಪಕ್ಕೆ ನಡೆಸುತ್ತದೆ ಎಂದರೆ, ಆ ಪುರವಾಣಿಗಳಿಂದ ಮತ್ತು ಕ್ಯಾಸೇಟ್ ಟೇಪ್ ಗಳಿಂದ ಹೊರಬನ್ನಿ. ನಿಶ್ಚಯವಾಗಿ ಈ ಲೋಕದಲ್ಲಿರುವ ಸಂಗತಿಗಳು ನಿಮಗೆ ಅಮೂಲ್ಯವಲ್ಲ, ಈ ಲೋಕದ ಸಂಗತಿಗಳನ್ನು ನೀವು ಹಿಡಿದಿಟ್ಟುಕ್ಕೊಂಡರೆ, ಕೊನೆಯದಾಗಿ ಇದರ ಫಲಿತಾಂಶ, ನೀವು ಪರಲೋಕವನ್ನು ತಪ್ಪಿಸಿಕ್ಕೊಂಡು, ನರಕಕ್ಕೆ ಹೋಗುವವರಾಗುತ್ತೀರಿ.

ಇದನ್ನು ನೀವು ಓದಿದಾಗ್ಯೂ ಸಹ, ಸೈತಾನನು ನಿಮಗೆ ತಕ್ಷಣವೇ ಈ ರೀತಿಯಾಗಿ ಕಿವಿ ಊದೂತ್ತಾನೆ - ”ಈ ಕೆಲ ಸಣ್ಣ ವಿಷಯಗಳಿಂದ ನೀವು ನಿಶ್ಚಯವಾಗಿ ಸಾಯುವುದಿಲ್ಲ (ನರಕಕ್ಕೆ ಹೋಗುವುದಿಲ್ಲ)” ಎಂಬುದಾಗಿ. ಆತನು ತನ್ನ ಚಾಣಕ್ಷತನದಿಂದ ನಿಮಗೆ ಹೇಳುವುದೇನೆಂದರೆ, ಪುರವಾಣಿಯಲ್ಲಿ ಮತ್ತು ದೂರದರ್ಶನದಲ್ಲಿ ನೀವು ಯಾರನ್ನಾದರೂ ನೋಡಿ ಮೋಹಿಸುವುದು ವ್ಯಭಿಚಾರವಲ್ಲವೆಂದು ನಿಮಗೆ ಹೇಳುತ್ತಾನೆ. ಆತನಿಗೆ ಕಿವಿಗೊಡಬೇಡಿ - ಯೇಸು ನಮಗೆ ಎಚ್ಚರಿಸಿದ್ದೇನೆಂದರೆ, ಸೈತಾನನು ಪ್ರಾರಂಭದಿಂದಲೂ ಸುಳ್ಳುಗಾರನು ಎಂಬುದಾಗಿ.

ಈ ಪಾಪಕ್ಕೆ ಸಂಬಂಧಪಟ್ಟಂತೆ ಈ ರೀತಿ ಹೇಳಬೇಡಿ, ”ಭವಿಷ್ಯದಲ್ಲಿ ನಾನು ಈ ವಿಷಯದಲ್ಲಿ ಉತ್ತಮವಾಗಿ ಪ್ರಯತ್ನಿಸುತ್ತೇನೆ” ಅಥವಾ ”ಅದನ್ನು ಬಿಟ್ಟುಕೊಡಲು ಪ್ರಯತ್ನಿಸುತ್ತೇನೆ” ಎಂಬುದಾಗಿ. ಸತ್ಯವೇದ ನಮಗೆ ಎಚ್ಚರಿಸುವುದೇನೆಂದರೆ, ಕೆಟ್ಟದ್ದರ ಹೊರನೋಟದಿಂದಲೂ ಸಹ ದೂರವಿರಿ ಎಂಬುದಾಗಿ. ಈ ಪಾಪವನ್ನು ನೀವು ತಕ್ಷಣವೇ ಮತ್ತು ಶಾಶ್ವತವಾಗಿ ಬಿಟ್ಟುಕೊಡಲು ಸಾಧ್ಯವಾಗುವಂತೆ ದೇವರು ಸಹಾಯಿಸುತ್ತಾನೆ ಎಂದು ನಂಬಿರಿ. ಇಂದಿನಿಂದ ಯುದ್ದವನ್ನು ಕೈಗೆತ್ತಿಕೊಳ್ಳಿರಿ ಮತ್ತು ಗೋಲಾತ್ಯನ ತಲೆಯನ್ನು ಕತ್ತರಿಸಿ ಹಾಕುವ ತನಕ ಬಿಟ್ಟು ಕೊಡಬೇಡಿ, ಅದು, ನೀವು ಜೀವವುಳ್ಳಂತ ದೇವರ ಸೈನ್ಯದ ಸೈನಿಕ ಎಂಬುದನ್ನು ಸ್ಪಷ್ಟ ಪಡಿಸುತ್ತದೆ.

ದೇವರು ಮತ್ತೊಮ್ಮೆ ತನ್ನ ದೇವಾಲಯವನ್ನು ತೊಳೆಯುತ್ತಿದ್ದಾನೆ. ಆತನ ದೇವಾಲಯವು ಈಗ ನಿಮ್ಮ ದೇಹವಾಗಿದೆ. ಆತನು ಒಂದೇ ಸಲಕ್ಕೆ ಪೂರ್ಣ ಕೆಲಸವನ್ನು ಮಾಡುವಂತೆ ಆತನನ್ನು ನಿಮ್ಮ ಜೀವಿತಕ್ಕೆ ಅನುಮತಿಸಿ.

1 ಕೊರಿಂಥ 7:1 ನಮಗೆ ಎಚ್ಚರಿಸುವುದೇನೆಂದರೆ, ಸ್ತ್ರಿಯರೊಟ್ಟಿಗೆ ಸಂಪರ್ಕವಿಟ್ಟುಕೊಳ್ಳಬಾರದು ಎಂಬುದರ ಬಗ್ಗೆ. ”ಇದು ಒಳ್ಳೆಯದಲ್ಲ” ಎಂದು ಪವಿತ್ರಾತ್ಮವು ಹೇಳುವಾಗ (ಅಲ್ಲಿ ಆತನು ಹೇಳಿರುವ ಪ್ರಕಾರ), ಯಾವುದೇ ಶಿಷ್ಯನಿಗಾಗಿ ಈ ಪವಿತ್ರಾತ್ಮನ ಮಾತು ಸಾಕು ಅದರಿಂದ ದೂರವಿರಲು. ಧಾರ್ಮಿಕರು ಪತ್ರಿಕೆಗಳಿಂದ ಜೀವಿಸುತ್ತಾರೆ, ಅದರಂತೆ ಶಿಷ್ಯಂದಿರು ಆತ್ಮದ ಆದೇಶಗಳಿಂದ ಜೀವಿಸುತ್ತಾರೆ. ಉದಹರಣೆಗೆ : ಒಬ್ಬನ ಹೃದಯದಲ್ಲಿ ಒಬ್ಬ ಸ್ತ್ರಿಯನ್ನು ಮೋಹಿಸುವುದು ವ್ಯಭಿಚಾರ ಎಂದು ಯೇಸು ಅರಿತಿದ್ದಾರೆ, ಏಕೆಂದರೆ ಆತನು ಆತ್ಮದ ಏಳನೇ ಆದೇಶವನ್ನು ಅರ್ಥಮಾಡಿಕೊಳ್ಳಲು ಇಚ್ಛಿಸಿದನು. ಅದೇ ರೀತಿಯಾಗಿ, ನೀವು ಪೂರ್ಣ ಹೃದಯದವರಾಗಿದ್ದರೆ, ದೇವರ ಎಲ್ಲಾ ಆದೇಶಗಳ ಬೇರಿನಲ್ಲಿ ಏನೇನು ಇದೆ ಎಂಬುದನ್ನು ನೀವು ನೋಡುತ್ತೀರಿ. ಪೌಲನು ತಿಮೊಥೆಯನಿಗೆ ಏನು ಹೇಳಿದನು ಎಂಬುದನ್ನು ನೋಡಿರಿ : ”ನೀನು ಯೌವನದ ಇಚ್ಛೆಗಳಿಂದ ದೂರವಾಗಿರು” (”ಯೌವನಸ್ಥನು ಸಾಮಾನ್ಯವಾಗಿ ಎದುರಿಸುವ ಶೋಧನೆಗಳಿಂದ ಓಡಿಹೋಗು” - ಲೀವಿಂಗ್ ಬೈಬಲ್ ಅನುವಾದ) (2 ತಿಮೊಥೆ 2:22). ಶೋಧನೆಯ ಎಲ್ಲಾ ಸಾಧ್ಯತೆಗಳಿಂದ ನೀವು ದೂರವಿರಬೇಕು (ಓಡಿಹೋಗಬೇಕು).

(ಈ ಸಂದೇಶವನ್ನು ಸಹೋದರ ಜ್ಯಾಕ್ ಪೂನನ್ ರವರು ಹೊಸದಾಗಿ ಬರೆದಿರುವ ”ಹಿಯರ್ ಓ ಮೈ ಸನ್ಸ್” ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. (ಸಹೋದರ ಜ್ಯಾಕ್ ಪೂನನ್ ರವರು ತಮ್ಮ ಮಕ್ಕಳು ಕಾಲೇಜ್ ನಲ್ಲಿ ಓದುವಾಗ, ಅಂದರೆ 25 ವರುಷಗಳ ಹಿಂದೆ ಇ-ಮೇಲ್ ಮಾಡಿರುವ ಸಂಗ್ರಹದಿಂದ ಈ ಸಂದೇಶವನ್ನು ಆಯ್ದುಕೊಳ್ಳಲಾಗಿದೆ. ಈ ಪುಸ್ತಕವು ಆಂಗ್ಲ ಭಾಷೆಯಲ್ಲಿ ಲಭ್ಯವಿದೆ).