WFTW Body: 

ನಾವು ಪ್ರಕಟನೆ 15:3,4ರಲ್ಲಿ ಈ ರೀತಿಯಾಗಿ ಓದುತ್ತೇವೆ: ಅವರು ದೇವರ ದಾಸನಾದ ಮೋಶೆಯ ಹಾಡನ್ನೂ, ಯಜ್ಞದ ಕುರಿಯಾದಾತನ ಹಾಡನ್ನೂ ಹಾಡುತ್ತಾ, ’ದೇವರಾದ ಕರ್ತನೇ, ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಸರ್ವ ಜನಾಂಗಗಳ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ; ಕರ್ತನೇ, ನಿನ್ನ ನಾಮಕ್ಕೆ ಭಯಪಡದವರೂ, ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ? ನೀನೊಬ್ಬನೇ ಪರಿಶುದ್ಧನು; ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಾಶಕ್ಕೆ ಬಂದದರಿಂದ, ಎಲ್ಲಾ ಜನಾಂಗಗಳು ಬಂದು ನಿನ್ನ ಸನ್ನಿಧಾನದಲ್ಲಿ ನಮಸ್ಕಾರ ಮಾಡುವರು’.

ಹಳೆಯ ಒಡಂಬಡಿಕೆಯಲ್ಲಿ ಮೋಶೆಯ ಎರಡು ಹಾಡುಗಳು ನಮೂದಿಸಲ್ಪಟ್ಟಿವೆ - ಮೊದಲನೆಯದು ವಿಮೋಚನಕಾಂಡ 15:1-18 ರಲ್ಲಿ, ಇಸ್ರಾಯೇಲ್ಯರು ಕೆಂಪುಸಮುದ್ರವನ್ನು ದಾಟಿದಾಗ ಮತ್ತು ಫರೋಹ ಮತ್ತು ಆತನ ಸೇನೆಯು ಸಮುದ್ರದ ನೀರಿನಲ್ಲಿ ಮುಳುಗಿ ಹೋದ ಸಂದರ್ಭದಲ್ಲಿ ಹಾಡಿದಂತದ್ದು. ಆಗ ಮೋಶೆಯು ಹೀಗೆ ಹಾಡಿದನು, "ಕರ್ತನ ಸ್ತೋತ್ರವನ್ನು ಗಾನ ಮಾಡೋಣ; ಆತನು ಮಹಾ ಜಯಶಾಲಿಯಾದನು. ಆತನು ಕುದುರೆಗಳನ್ನೂ ಅವುಗಳ ಸವಾರರನ್ನೂ ಸಮುದ್ರದಲ್ಲಿ ಕೆಡವಿ ನಾಶ ಮಾಡಿದ್ದಾನೆ." ನಾವು ಪ್ರಕಟನೆ 6ನೇ ಅಧ್ಯಾಯದಲ್ಲಿ ಕ್ರಿಸ್ತ ವಿರೋಧಿಯು ಸಹ ಬಿಳಿ ಕುದುರೆಯ ಮೇಲೆ ಸವಾರಿ ಮಾಡುತ್ತಾ ಬರುವುದನ್ನು ನೋಡುತ್ತೇವೆ. ಆಗ ಜಯಶಾಲಿಗಳು ಹಾಡುತ್ತಾ, ಆ ಕುದುರೆಯನ್ನು ಮತ್ತು ಅದರ ಸವಾರನನ್ನು ಸೋಲಿಸಿ ಕೆಡವಿದ ದೇವರಿಗೆ ಸ್ತೋತ್ರ ಸಲ್ಲಿಸುವುದು ನಮಗೆ ಕಂಡುಬರುತ್ತದೆ. ಮುಂದೆ ನಡೆಯಲಿರುವ ಅಂತಿಮ ಮಹಾ ಸಂಗ್ರಾಮದಲ್ಲಿ, ಕ್ರಿಸ್ತ ವಿರೋಧಿ ಮತ್ತು ಆತನ ಸೇನಾಪಡೆಗಳು ಇಸ್ರಾಯೇಲ್ ದೇಶವನ್ನು ಪ್ರವೇಶಿಸಿ ಅದರ ಮೇಲೆ ದಾಳಿ ಮಾಡುತ್ತವೆ. ಆ ಕ್ಷಣದಲ್ಲಿ ಕರ್ತನಾದ ಯೇಸು ಕ್ರಿಸ್ತನು ತನ್ನ ಪವಿತ್ರ ಜನರೊಂದಿಗೆ ಕೆಳಗಿಳಿದು ಪ್ರತ್ಯಕ್ಷನಾಗುತ್ತಾನೆ. ಆತನ ಪಾದಗಳು ಎಣ್ಣೆಯ ಮರಗಳ ಗುಡ್ಡದ ಮೇಲೆ ನಿಂತಿರುತ್ತವೆ, ಮತ್ತು ಆತನು ಕ್ರಿಸ್ತ ವಿರೋಧಿ ಶಕ್ತಿಗಳನ್ನು ಸಂಹಾರ ಮಾಡುವನು. ದೇವಜನರು ಎಲ್ಲವನ್ನು ನೋಡುತ್ತಾ, ಯಾವುದೇ ಹೋರಾಟ ಮಾಡದೇ ಜಯೋತ್ಸವದಲ್ಲಿ ಪಾಲ್ಗೊಳ್ಳುವರು. ಹಾಗೆಯೇ ಈ ದಿನವೂ ಸಹ ನಾವು ಪ್ರತಿಯೊಂದು ಹೋರಾಟದಲ್ಲಿ ಇಂತಹ ಜಯವನ್ನು ಹೊಂದಬೇಕು. ಕಾಳಗದಲ್ಲಿ ನಾವು ಮಾನವನ ಆಯುಧಗಳ ಮೂಲಕ ಜಯವನ್ನು ಹೊಂದುವುದಿಲ್ಲ. ನಾವು ಸುಮ್ಮನೆ ನಿಂತುಕೊಂಡು ಕರ್ತನ ಮೇಲೆ ಭರವಸೆಯಿಡುತ್ತೇವೆ ಮತ್ತು ಕರ್ತನು ನಮ್ಮ ವೈರಿಗಳನ್ನು ನಾಶಗೊಳಿಸುತ್ತಾನೆ. ಹಾಗಾಗಿ, ಈ ದಿನವೂ ಸಹ ಇಂತಹ ನಂಬಿಕೆಯುಳ್ಳವರು ಮೋಶೆಯ ಹಾಡನ್ನು ಹಾಡಬಹುದು!! ನಾವು ಜೀವನದ ಹೋರಾಟಗಳಲ್ಲಿ ಮೋಶೆಯ ಹಾಡನ್ನು ಹಾಡಬಹುದು. ನಾವು "ಸುಮ್ಮನೆ ನಿಂತುಕೊಂಡು" ಕರ್ತನು ನಮ್ಮ ವೈರಿಗಳಿಗೆ ಏನು ಮಾಡುತ್ತಾನೆಂದು ನೋಡಬಹುದು.

ಮೋಶೆಯ ಎರಡನೇ ಹಾಡು ಧರ್ಮೊಪದೇಶಕಾಂಡ 31:30 -32:43ರಲ್ಲಿ ಬರೆಯಲ್ಪಟ್ಟಿದೆ. ಆ ಹಾಡಿನಲ್ಲೂ ಆತನು ಈ ರೀತಿಯಾಗಿ ಹಾಡುತ್ತಾನೆ, "ಜನಾಂಗಗಳಿರಾ, ದೇವರ ಜನರನ್ನು ಹೊಗಳಿರಿ. ಕರ್ತನು ತನ್ನ ಸೇವಕರ ರಕ್ತವನ್ನು ಚೆಲ್ಲಿದ ಶತ್ರುಗಳಿಗೆ ಪ್ರತಿದಂಡನೆ ಮಾಡುತ್ತಾನೆ; ಅವರಿಗೆ ಮುಯ್ಯಿ ತೀರಿಸುತ್ತಾನೆ; ತನ್ನ ಜನರಿಗೋಸ್ಕರವೂ ದೇಶಕ್ಕೋಸ್ಕರವೂ ದೋಷ ಪರಿಹಾರ ಮಾಡುತ್ತಾನೆ" (ಧರ್ಮೋ. 32:43). ಮೇಲಿನ ಎರಡು ಹಾಡುಗಳಲ್ಲೂ ನಾವು ಒಂದು ಸತ್ಯವನ್ನು ಕಾಣುತ್ತೇವೆ: ದೇವಜನರು ತಮ್ಮ ಶತ್ರುಗಳ ಮೇಲೆ ಮುಯ್ಯಿ ತೀರಿಸುವುದಿಲ್ಲ. ಅವರು ಹಿಂದೆ ಸರಿದು ನಿಲ್ಲುತ್ತಾರೆ ಮತ್ತು ದೇವರು ಅವರಿಗಾಗಿ ಹೋರಾಡುತ್ತಾರೆ ಮತ್ತು ಅವರಿಗಾಗಿ ಮುಯ್ಯಿ ತೀರಿಸುತ್ತಾರೆ.

ಈ ಹಾಡನ್ನು ಮುಂದೊಂದು ದಿನ ನಾವು ದೇವರ ಕಿನ್ನರಿಯೊಂದಿಗೆ ಹಾಡಿ ದೇವರನ್ನು ಮಹಿಮೆ ಪಡಿಸುವುದಕ್ಕಾಗಿ, ನಾವು ಈಗ ಈ ಹಾಡನ್ನು ಕಲಿಯಬೇಕಿದೆ. ನಾವು ಪ್ರತಿದಿನದ ಜೀವನದಲ್ಲಿ ವಿವಿಧ ಸನ್ನಿವೇಶಗಳನ್ನು ಎದುರಿಸುವದನ್ನು, ಒಂದು ಗಾನವೃಂದ ಅಥವಾ ಒಂದು ಭಜನಾ ಮಂಡಲಿ ಈ ಹಾಡನ್ನು ಅಭ್ಯಾಸ ಮಾಡುವದಕ್ಕೆ ಹೋಲಿಸಬಹುದು. ಜಯಶಾಲಿಗಳು ದೇವರ ಮಾರ್ಗಗಳು ದೋಷರಹಿತವಾದವು ಎಂದು ಹಾಡುತ್ತಾರೆ. ನಾವು ಪರಲೋಕದಲ್ಲಿ, "ಯೇಸುವು ಎಲ್ಲಾ ಸಂಗತಿಗಳನ್ನು ಹಿತಕರವಾಗಿ ಮಾಡಿದ್ದಾನೆ" ಎಂದು ಹಾಡುತ್ತೇವೆ. ಆ ದಿನದಲ್ಲಿ, ಭೂಮಿಯ ಮೇಲೆ ದೇವರು ನಮ್ಮನ್ನು ನಡೆಸಿದ ರೀತಿಯನ್ನು ನೆನಪಿಸಿಕೊಂಡಾಗ, ಎಲ್ಲವೂ - ಹೌದು, ಒಂದೊಂದು ಸಂಗತಿಯೂ - ನಮ್ಮ ಶ್ರೇಷ್ಠ ಹಿತಕ್ಕಾಗಿ ದೇವರಿಂದ ಆಜ್ಞಾಪಿಸಲ್ಪಟ್ಟಿತೆಂದು ನಾವು ಅರಿತುಕೊಳ್ಳುತ್ತೇವೆ. ಈ ದಿನ ಅನೇಕ ಸಂಗತಿಗಳು ಏಕೆ ಸಂಭವಿಸುತ್ತವೆ ಎಂದು ನಮಗೆ ಅರ್ಥವಾಗುವುದಿಲ್ಲ. ಆದರೆ ಆ ದಿನ, ನಾವು ಎಲ್ಲವನ್ನು ತಿಳಿದುಕೊಳ್ಳುತ್ತೇವೆ. ಅದಲ್ಲದೆ ನಂಬಿಕೆಯುಳ್ಳ ಮನುಷ್ಯನು ಆ ದಿನ ಬರುವುದಕ್ಕಾಗಿ ಕಾಯಬೇಕಿಲ್ಲ. ಆತನು ನಂಬುತ್ತಾನೆ ಮತ್ತು ಅದು ನಿಜವೆಂದು ಈಗಲೇ ತಿಳಿದಿದ್ದಾನೆ. ಆತನು ಭೂಮಿಯ ಮೇಲಿನ ತನ್ನ ಜೀವಿತದಲ್ಲಿ ನಡೆದ ಪ್ರತಿಯೊಂದು ಸನ್ನಿವೇಶಕ್ಕೆ ದೇವರಿಂದ ವಿವರಣೆ ಪಡೆಯಲು ಕಾಯುವುದಿಲ್ಲ. ಆತನು ಈಗಲೇ "ಕರ್ತರೇ! ನಿಮ್ಮ ಮಾರ್ಗಗಳು ಪರಿಪೂರ್ಣವಾಗಿವೆ," ಎಂದು ಹಾಡುತ್ತಿದ್ದಾನೆ!