WFTW Body: 

ಒಬ್ಬ ಆತ್ಮಿಕ ನಾಯಕನು ಮೊಟ್ಟ ಮೊದಲನೆಯದಾಗಿ ದೇವರಿಂದ ಕರೆಯಲ್ಪಟ್ಟವನಾಗಿರಬೇಕು. ಆತನು ಕೈಗೊಳ್ಳುವ ಆತ್ಮಿಕ ಕಾರ್ಯವು ಆತನ ವೃತ್ತಿ ಅಥವಾ ನೌಕರಿ ಆಗಿರದೆ, ಅದು ಆತನ ಕರೆಯಾಗಿರುತ್ತದೆ.

ಯಾವ ವ್ಯಕ್ತಿಯೂ ತನ್ನನ್ನು ತಾನೇ ಒಬ್ಬ ಆತ್ಮಿಕ ನಾಯಕನನ್ನಾಗಿ ನೇಮಿಸಿಕೊಳ್ಳಲು ಸಾಧ್ಯವಿಲ್ಲ. "ಈ ಕಾರ್ಯಕ್ಕಾಗಿ ಆತನು ದೇವರ ಕರೆಯನ್ನು ಹೊಂದಿರಬೇಕು"(ಇಬ್ರಿಯರಿಗೆ 5:4 -'LIVING BIBLE'). ಈ ಮೂಲತತ್ವವನ್ನು ಬದಲಾಯಿಸಲು ಸಾಧ್ಯವಿಲ್ಲ. ಮೇಲೆ ಪ್ರಸ್ತಾಪಿಸಿದ ವಾಕ್ಯದ ಮುಂದಿನ ವಚನವು ತಿಳಿಸುವ ಹಾಗೆ, ಸ್ವತಃ ಯೇಸುವು ಸಹ ತನ್ನನ್ನು ನಮ್ಮ ಮಹಾಯಾಜಕನನ್ನಾಗಿ ನೇಮಿಸಿಕೊಳ್ಳಲಿಲ್ಲ. ತಂದೆಯಾದ ದೇವರು ಆತನನ್ನು ನೇಮಿಸಿದರು. ಹಾಗಿದ್ದಲ್ಲಿ, ನಮ್ಮ ಕರೆಯ ವಿಷಯದಲ್ಲಿ ಈ ಸತ್ಯಾಂಶವು ಇನ್ನೂ ಎಷ್ಟೋ ಹೆಚ್ಚಾಗಿ ಅನ್ವಯಿಸುತ್ತದೆ.

ಈ ದಿನದ ದುರಂತದ ಸಂಗತಿಯೆಂದರೆ, ಭಾರತದ ಬಹುತೇಕ "ಕ್ರೈಸ್ತ ಕಾರ್ಯಕರ್ತರು"ತಮ್ಮ ಹೊಟ್ಟೆಪಾಡಿಗಾಗಿ ಈ ಕೆಲಸಕ್ಕೆ ಕೈಹಾಕುತ್ತಾರೆ. ಅವರಿಗೆ ಇದು ಒಂದು ವೃತ್ತಿಯಾಗಿದೆ. ಅವರು ಇದಕ್ಕಾಗಿ ದೇವರಿಂದ ಕರೆಯಲ್ಪಟ್ಟಿಲ್ಲ.

"ಒಂದು ವೃತ್ತಿ" ಮತ್ತು "ಒಂದು ಕರೆ"ಇವುಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ನಾನು ಈ ವ್ಯತ್ಯಾಸವನ್ನು ತೋರಿಸಿಕೊಡಲು ಬಯಸುತ್ತೇನೆ. ಒಂದು ವೇಳೆ ಒಂದು ಮಗುವು ಅನಾರೋಗ್ಯದಿಂದ ಒಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಆ ಮಗುವನ್ನು ಒಬ್ಬ ದಾದಿಯು ದಿನದ 8 ಘಂಟೆಗಳ ತನ್ನ ಕೆಲಸದ ಅವಧಿಯಲ್ಲಿ ನೋಡಿಕೊಳ್ಳುತ್ತಾಳೆ. ಇದರ ನಂತರ ಆಕೆ ತನ್ನ ಮನೆಗೆ ಹೋಗುತ್ತಾಳೆ ಮತ್ತು ಆಕೆ ಆ ಮಗುವಿನ ಬಗ್ಗೆ ಯೋಚಿಸುವುದಿಲ್ಲ. ಆಕೆ ಆ ಮಗುವಿನ ಆರೈಕೆ ಮಾಡುವ ಅವಧಿ ದಿನಕ್ಕೆ 8 ಘಂಟೆಗಳ ಸಮಯ ಮಾತ್ರವಾಗಿದೆ. ಇದರ ನಂತರ ಆಕೆ ಇತರ ಸಂಗತಿಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ; ಆಕೆ ಒಂದು ಚಲನಚಿತ್ರವನ್ನು ನೋಡಬಹುದು ಅಥವಾ ಇನ್ಯಾವುದೋ ಮನೋರಂಜನೆಯ ಕಾರ್ಯಕ್ರಮವನ್ನು ನೋಡಬಹುದು. ಆಕೆ ಮರುದಿನ ಕೆಲಸಕ್ಕೆ ಹಿಂದಿರುಗುವವರೆಗೆ ಆ ಮಗುವಿನ ಬಗ್ಗೆ ಯೋಚಿಸುವ ಅವಶ್ಯಕತೆಯಿಲ್ಲ. ಆದರೆ ಆ ಮಗುವಿನ ತಾಯಿಯು 8 ಘಂಟೆಗಳ ಅವಧಿಯ ಆರೈಕೆಯನ್ನು ಮಾಡುವುದಿಲ್ಲ! ಆಕೆಯು ತನ್ನ ಮಗು ಅನಾರೋಗ್ಯವಾದಾಗ ಚಲನಚಿತ್ರವನ್ನು ನೋಡುವ ಬಗ್ಗೆ ಯೋಚಿಸುವುದಿಲ್ಲ. ಒಂದು ವೃತ್ತಿ ಮತ್ತು ಒಂದು ಕರೆ ಇವುಗಳ ನಡುವಿನ ವ್ಯತ್ಯಾಸ ಇದೇ ಆಗಿದೆ.

ನಿಮ್ಮ ಸಭೆಯ ವಿಶ್ವಾಸಿಗಳ ಬಗ್ಗೆ ನಿಮ್ಮಲ್ಲಿ ಎಷ್ಟು ಕಾಳಜಿಯಿದೆ, ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ನೀವು ಮೇಲಿನ ಉದಾಹರಣೆಯನ್ನು ನೋಡಿದರೆ, ಆಗ ನೀವು ಒಬ್ಬ ದಾದಿಯೋ ಅಥವಾ ಒಬ್ಬ ತಾಯಿಯೋ ಎಂಬುದನ್ನು ಕಂಡುಕೊಳ್ಳುವಿರಿ!

"ಪೌಲನು ಆ ಕ್ರೈಸ್ತರಿಗೆ ದೇವರ ಸುವಾರ್ತೆಯನ್ನು ನೀಡಿದ್ದು ಮಾತ್ರವೇ ಅಲ್ಲದೆ, ಆತನು ತನ್ನ ಪ್ರಾಣವನ್ನು ಸಹ ಅವರಿಗೆ ನೀಡಿದನು"

ಪೌಲನು 1 ಥೆಸಲೋನಿಕದವರಿಗೆ 2:7-8'ರಲ್ಲಿ ಹೀಗೆ ಹೇಳಿದನು, "ತಾಯಿಯು ತನ್ನ ಮಕ್ಕಳನ್ನು ಹೇಗೆ ಪೋಷಿಸುತ್ತಾಳೋ ಹಾಗೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡೆದುಕೊಂಡೆವು. ನೀವು ನಮಗೆ ಅತಿ ಪ್ರಿಯರಾದ ಕಾರಣ, ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವುದಕ್ಕೆ ಮಾತ್ರವಲ್ಲದೆ, ನಿಮಗೋಸ್ಕರ ಪ್ರಾಣವನ್ನೇ ಕೊಡುವುದಕ್ಕೆ ಸಂತೋಷಿಸುವವರಾದೆವು."

ಪೌಲನು ಆ ಕ್ರೈಸ್ತ ವಿಶ್ವಾಸಿಗಳಿಗೆ ನೀಡಿದ್ದು ದೇವರ ಸುವಾರ್ತೆ ಮಾತ್ರವಲ್ಲ, ಆದರೆ ಆತನು ಅವರಿಗೆ ತನ್ನ ಪ್ರಾಣವನ್ನೂ ಸಹ ನೀಡಿದನು. ಈ ರೀತಿಯಾಗಿ ಮಾಡದ ಸೇವೆಯು ನಿಜವಾದ ಕ್ರೈಸ್ತ ಸೇವೆ ಎನಿಸಿಕೊಳ್ಳುವುದಿಲ್ಲ. ಪೌಲನು ಈ ರೀತಿಯಾಗಿ ದೇವರ ಸೇವೆ ಮಾಡಲು ಕಾರಣವೇನೆಂದರೆ, ಆತನು ಸೇವೆಯ ಕರೆಯನ್ನು ಹೊಂದಿದ್ದನು. ಆತನು ಅದನ್ನು ಒಂದು ವೃತ್ತಿ ಅಥವಾ ನೌಕರಿಯಾಗಿ ಪರಿಗಣಿಸಲಿಲ್ಲ.

ಕರ್ತರಿಗೆ ಸೇವೆ ಸಲ್ಲಿಸುವುದು ಒಂದು ಅದ್ಭುತವಾದ ಕಾರ್ಯವಾಗಿದೆ. ಇದು ಈ ಲೋಕದಲ್ಲಿ ಅತ್ಯಂತ ಶ್ರೇಷ್ಠವಾದ ಸಂಗತಿಯಾಗಿದೆ. ಇದನ್ನು ಇತರ ಯಾವುದೇ ಸಂಗತಿಯೊಂದಿಗೆ ಹೋಲಿಸಲು ಸಾಧ್ಯವಿಲ್ಲ - ಆದರೆ ನೀವು ಈ ಕರೆಯನ್ನು ಹೊಂದಿದ್ದರೆ ಮಾತ್ರ ಈ ಹೇಳಿಕೆಯು ಅನ್ವಯಿಸುತ್ತದೆ. ಕರ್ತರ ಸೇವೆಯನ್ನು ಒಂದು ವೃತ್ತಿ ಅಥವಾ ಒಂದು ನೌಕರಿಯ ಮಟ್ಟಕ್ಕೆ ಇಳಿಸಬಾರದು.

1964ನೇ ಇಸವಿ, ಮೇ ತಿಂಗಳ 6ನೇ ತಾರೀಖಿನಂದು, ನಾನು ಭಾರತೀಯ ನೌಕಾಪಡೆಯ ಒಬ್ಬ ಅಧಿಕಾರಿಯಾಗಿದ್ದಾಗ, ದೇವರು ನನ್ನನ್ನು ಅವರ ಸೇವೆ (ಪೂರ್ಣಾವಧಿಯ ಸೇವೆ) ಮಾಡುವುದಕ್ಕಾಗಿ ಕರೆದರು. ನಾನು ನೌಕಾಪಡೆಯ ನನ್ನ ಹಿರಿಯ ಅಧಿಕಾರಿಗಳಿಗೆ ನನ್ನ ರಾಜೀನಾಮೆಯನ್ನು ಒಪ್ಪಿಸಿ, ನನ್ನನ್ನು ನೌಕರಿಯಿಂದ ಬಿಡುಗಡೆ ಮಾಡುವಂತೆ ಕೇಳಿಕೊಂಡೆನು. ಆದರೆ ಇದು ಮೋಶೆಯು ಇಸ್ರಾಯೇಲ್ಯರು ಐಗುಪ್ತದಿಂದ ಹೋಗುವುದಕ್ಕೆ ಅಪ್ಪಣೆ ಕೊಡುವುದಕ್ಕಾಗಿ ಫರೋಹನನ್ನು ಕೇಳಿದಂತೆ ಆಗಿತ್ತು! ಭಾರತೀಯ ನೌಕಾಪಡೆಯು ನನ್ನನ್ನು ಬಿಡುಗಡೆ ಮಾಡಲಿಲ್ಲ. 2 ವರ್ಷಗಳ ನಂತರ, ನಾನು ಸತತವಾಗಿ ವಿಜ್ಞಾಪಿಸಿದ ಮೇಲೆ - ದೇವರ ಪರಿಪೂರ್ಣ ಸಮಯದಲ್ಲಿ - ಅದ್ಭುತಕರವಾದ ರೀತಿಯಲ್ಲಿ - ಅವರು ಅಂತಿಮವಾಗಿ ನನ್ನನ್ನು ಬಿಡುಗಡೆಮಾಡಲು ಒಪ್ಪಿದರು.

ನಾನು ದೇವರಿಂದ ಪಡೆದ ಕರೆಯು ನನ್ನ ಜೀವನದಲ್ಲಿ ಸಂಪೂರ್ಣ ಬದಲಾವಣೆಯನ್ನು ತಂದಿದೆ.

ಎಲ್ಲಕ್ಕೂ ಮೊದಲು, ನನ್ನ ಬಗ್ಗೆ ಅಥವಾ ನನ್ನ ಸೇವೆಯ ಬಗ್ಗೆ ಜನರು ಏನು ಯೋಚಿಸುತ್ತಾರೆ ಎಂಬುದು ಈಗ ನನಗೆ ಪ್ರಾಮುಖ್ಯವಾಗಿಲ್ಲ; ಈಗ ಬೇರೊಬ್ಬರು (ಅಂದರೆ, ದೇವರು) ನನ್ನ ಯಜಮಾನರಾಗಿದ್ದಾರೆ ಮತ್ತು ನಾನು ಅವರಿಗೆ ಮಾತ್ರ ಜವಾಬು ನೀಡಬೇಕು.

ಎರಡನೆಯದಾಗಿ, ನನ್ನ ಸೇವೆಯ ನಡುವೆ ನಾನು ಯಾವುದೇ ಶೋಧನೆಯನ್ನು ಅಥವಾ ವಿರೋಧವನ್ನು ಎದುರಿಸುವಾಗ (ಇದು ಆಗಾಗ್ಗೆ ಸಂಭವಿಸುತ್ತದೆ), ದೇವರು ನನ್ನೊಂದಿಗೆ ಇದ್ದಾರೆ ಮತ್ತು ನನಗೆ ಕೃಪೆಯನ್ನು ನೀಡುತ್ತಾರೆ, ಎಂಬ ನಂಬಿಕೆ ಈಗ ನನ್ನಲ್ಲಿದೆ.

ಮೂರನೆಯದಾಗಿ,ನಾನು ಯಾವುದೇ ಹಣವನ್ನು ಪಡೆಯುತ್ತೇನೋ ಇಲ್ಲವೋ ಎಂಬ ಚಿಂತೆಯಾಗಲೀ ಮತ್ತು ನನಗೆ ತಿನ್ನಲು ಊಟ ದೊರಕುತ್ತದೆಯೋ ಇಲ್ಲವೋ ಎಂಬ ಯೋಚನೆಯಾಗಲೀ ಈಗ ನನ್ನಲ್ಲಿಲ್ಲ. ನನಗೆ ಊಟವಾಗಲೀ ಹಣವಾಗಲೀ ದೊರೆತರೆ ಒಳ್ಳೆಯದು ಮತ್ತು ಸಂತೋಷ. ನನಗೆ ಊಟ ಮತ್ತು ಹಣ ದೊರಕದಿದ್ದರೆ, ಆಗಲೂ ಸಹ ನಾನು ನಿಶ್ಚಿಂತನಾಗಿ ಇರುತ್ತೇನೆ. ಊಟ ಅಥವಾ ಹಣ ಸಿಗಲಿಲ್ಲವೆಂದು ನಾನು ಕರ್ತರ ಸೇವೆಯನ್ನು ನಿಲ್ಲಿಸಲಾರೆ - ಏಕೆಂದರೆ ದೇವರು ನನ್ನನ್ನು ಕರೆದಿದ್ದಾರೆ.

ನಾನು ನನಗೆ ಕೊಡಲ್ಪಟ್ಟ ಕರೆಯನ್ನು ನಿರಾಕರಿಸಲಾರೆ. ನಾನು ಊಟ ಸಿಗದಿದ್ದರೆ ಅಥವಾ ಸಂಬಳ ಬರದಿದ್ದರೆ ಕೆಲಸವನ್ನು ನಿಲ್ಲಿಸುವಂತ, ಮತ್ತು ಸಂಬಳಕ್ಕಾಗಿ ದುಡಿಯುವಂತ ಒಬ್ಬ ನೌಕರನಲ್ಲ! ನನ್ನ ಸ್ಥಿತಿ ಒಬ್ಬ ತಾಯಿ ಮತ್ತು ಆಕೆಯ ಮಗುವಿನ ಹಾಗಿದೆ. ಆಸ್ಪತ್ರೆಯ ಒಬ್ಬ ದಾದಿಯು ಒಂದು ತಿಂಗಳ ಸಂಬಳವನ್ನು ಪಡೆಯದಿದ್ದರೆ, ಆಕೆ ಕೆಲಸಕ್ಕೆ ಹಾಜರಾಗುವುದಿಲ್ಲ. ಆದರೆ ಒಬ್ಬ ತಾಯಿಯು ಎಂದಿಗೂ ಹಾಗೆ ಮಾಡಲಾರಳು. ನಿಜಸ್ಥಿತಿ ಏನೆಂದರೆ, ತಾಯಿಗೆ ಸಂಬಳವೇ ಇಲ್ಲ! ಮತ್ತು ಆಕೆ ತನಗೆ ಊಟ ಅಥವಾ ಹಣ ಸಿಗದಿದ್ದರೂ ಸಹ ತನ್ನ ಮಗುವಿನ ಆರೈಕೆಯನ್ನು ಮಾಡುವಳು! ಅಪೊಸ್ತಲರು ಇದೇ ರೀತಿ ಕರ್ತನ ಸೇವೆಯನ್ನು ಮಾಡಿದರು.

ದೇವರಿಂದ ಕರೆಯಲ್ಪಡುವುದು ಎಂಥಹ ಮಹಿಮೆಯುಳ್ಳ ಸಂಗತಿಯಾಗಿದೆ!