ಬರೆದಿರುವವರು :   Joji Samuel ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

(ಈ ಕೆಳಗಿನ ಲೇಖನವು ಕೇರಳದ ಕೊಟ್ಟಾಯಮ್‍ನ CFC ಸಭೆಯ ಹಿರಿಯ ಸಹೋದರ ಜೋಜಿ ಸ್ಯಾಮುವೇಲ್‍ರವರು, ಬೆಂಗಳೂರಿನಲ್ಲಿ 2015ರಲ್ಲಿ ನಡೆದ CFC ಅಖಿಲ-ಭಾರತ ಸಮ್ಮೇಳನದಲ್ಲಿ ನೀಡಿದ ಒಂದು ಸಂದೇಶದ ಮುಖ್ಯಾಂಶವಾಗಿದೆ)

(ಈ ಸಂದೇಶವನ್ನು ನಿಧಾನವಾಗಿ ಮತ್ತು ಗಮನವಿಟ್ಟು ಓದಿಕೊಳ್ಳಿರಿ)
--------

ಕ್ರಿಸ್ತನ ಹಿಂದಿರುಗುವಿಕೆಯ ತನಕ ನಾವು ನಮ್ಮ ಕ್ರೈಸ್ತಸಭೆಗಳಲ್ಲಿ ದೇವರ ಮಹಿಮೆಯನ್ನು ಹೇಗೆ ಕಾಪಾಡಿಕೊಳ್ಳಬಹುದು?

ನಾವು ನಮ್ಮ ಮಧ್ಯದಲ್ಲಿ ದೇವರ ಮಹಿಮೆಯನ್ನು ಕಾಪಾಡಿಕೊಳ್ಳಲು ಬಯಸುತ್ತೇವೆಂದು ಹೇಳುವಾಗ, ಈಗಾಗಲೇ ನಮ್ಮ ಮಧ್ಯೆ ದೇವರ ಮಹಿಮೆಯು ಇದೆಯೆಂದು ನಾವು ಅಂದುಕೊಂಡಂತೆ ಆಗುತ್ತದೆ. ನಾವು ಇದನ್ನು ಹೇಗೆ ಖಚಿತ ಪಡಿಸಿಕೊಳ್ಳಬಹುದು?

ಹಿಂದಿನ ವರ್ಷಗಳಲ್ಲಿ, ನಮಗೆ ಪಾಪದಿಂದ ಬಿಡುಗಡೆ ತಂದಿರುವ ಮತ್ತು ಅಪಾರವಾದ ಸ್ವಾತಂತ್ರ್ಯವನ್ನು ಕೊಟ್ಟಿರುವ ಕೆಲವು ಮಹಿಮಾನ್ವಿತ ಸತ್ಯಾಂಶಗಳನ್ನು ನಮ್ಮ ಸಭೆಗಳಲ್ಲಿ ನಾವು ಕೇಳಿಸಿಕೊಂಡಿದ್ದೇವೆ. ದೇವರು ನಮ್ಮ ಜೊತೆಯಲ್ಲಿದ್ದಾರೆಂದು ತಿಳಿದುಕೊಳ್ಳುವ ಒಂದು ವಿಧಾನ ಇದಾಗಿದೆ - ಏಕೆಂದರೆ ಯೇಸುವು ಹೇಳಿದಂತೆ, ನಾವು ಪಾಪದಿಂದ ಬಿಡುಗಡೆ ಹೊಂದಿದಾಗ, ದೇವರ ಸತ್ಯವನ್ನು ನಾವು ಪಡೆದುಕೊಂಡೆವೆಂದು ತಿಳಿಯಬಹುದು (ಯೋಹಾ. 8:31,32). ಆದರೆ ಈಗ ಈ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಮುಂದುವರಿಯುವುದು ಹೇಗೆಂದು ನಾವು ಗಮನಿಸಬೇಕಾಗಿದೆ.

ಪೌಲನು ತನ್ನ ಜೀವಿತದ ಅಂತ್ಯವನ್ನು ಸಮೀಪಿಸುತ್ತಿದ್ದಾಗ ತಿಮೊಥೆಯನಿಗೆ ಬರೆದ ಪತ್ರಿಕೆಯಲ್ಲಿ ಆತನನ್ನು ಈ ರೀತಿಯಾಗಿ ಎಚ್ಚರಿಸುತ್ತಾನೆ, "ನಿನ್ನ ವಿಷಯದಲ್ಲಿಯೂ, ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು; ನಿನ್ನ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು," (1ತಿಮೊಥೆಯನಿಗೆ 4:15,16). ಇದರ ನಂತರ ಆತನು ತಿಮೊಥೆಯನಿಗೆ, ಆತನು ಈ ಕಾರ್ಯಗಳಲ್ಲಿ ನಿರತನಾಗಿದ್ದರೆ, ಆತನು ತನ್ನ ರಕ್ಷಣೆಯನ್ನು ಮತ್ತು ತನ್ನ ಉಪದೇಶವನ್ನು ಕೇಳುವವರ ರಕ್ಷಣೆಯನ್ನು ಧೃಢಪಡಿಸಬಹುದು ಎಂದು ಹೇಳುತ್ತಾನೆ. ನಾವು ಸಹ ಈ ಹಿಂದಿನ ವರ್ಷಗಳಲ್ಲಿ ಬೋಧಿಸಲಾದ ಸತ್ಯಗಳು ನಮ್ಮನ್ನು ವಿಮೋಚನೆಗೊಳಿಸಿದ್ದನ್ನು ಯಥಾರ್ಥವಾಗಿ ಅನುಭವಿಸಿದ್ದೇವೆ, ಮತ್ತು ನಮ್ಮ ಕೂಟಗಳಲ್ಲಿ ದೇವರ ಪ್ರಸನ್ನತೆ ಇರುವುದನ್ನು ಅನುಭವಿಸಿ ನೋಡಿದ್ದೇವೆ. ನಮ್ಮ ಮಧ್ಯದಲ್ಲಿ ದೇವರ ಮಹಿಮೆ ಇರುವುದನ್ನು ಈ ಕೆಲವು ಸಂಗತಿಗಳು ಸಾಬೀತು ಪಡಿಸಿವೆ.

ನಾನು ಒಂದು ಪೆಂತಕೋಸ್ತ ಕುಟುಂಬದಲ್ಲಿ ಜನಿಸಿದೆ ಮತ್ತು ಒಂದು ಪೆಂತಕೋಸ್ತ ಸಭೆಗೆ ಹೊಗುತ್ತಿದ್ದೆ. ಆದರೆ ಸ್ವಲ್ಪ ಸಮಯದ ನಂತರ, ಇತರರ ಮಧ್ಯೆ ನಾನು ಹೇಳಿಕೊಳ್ಳುತ್ತಿದ್ದ ಸಂಗತಿಗಳು ನನ್ನ ಖಾಸಗಿ ಜೀವಿತದಲ್ಲಿ ಯಥಾರ್ಥವಾಗಿಲ್ಲವೆಂಬ ಅರಿವು ನನ್ನಲ್ಲಿ ಉಂಟಾಯಿತು. ನಾನು ಹೋಗುತ್ತಿದ್ದ ಆ ಸಭೆಯ ಇತರರ ಜೀವಿತಗಳಲ್ಲೂ ಈ ಸತ್ಯಾಂಶಗಳು ಫಲವನ್ನು ಕೊಡುತ್ತಿರುವುದನ್ನು ನಾನು ನೋಡಲಿಲ್ಲ - ಸಭೆಯ ಪಾಸ್ಟರ್‌ಗಳು ಮತ್ತು ನಾಯಕರುಗಳ ಜೀವಿತದಲ್ಲಿಯೂ ಇದು ಕಂಡುಬರಲಿಲ್ಲ. ಇದೇ ಸಮಯದಲ್ಲಿ ನಾನು ಒಂದು ಪುಸ್ತಕವನ್ನು ಓದಿದೆ "ಜಯದ ಜೀವಿತವನ್ನು ಜೀವಿಸುವುದು ಹೇಗೆ" ("How to Live the Victorious Life"). ಆ ಪುಸ್ತಕದಲ್ಲಿ, ಪಾಪದ ಮೇಲೆ ಜಯದ ಜೀವಿತವನ್ನು ಜೀವಿಸಲು ಸಾಧ್ಯವಿದೆ ಎಂಬುದಾಗಿ ನಾನು ಓದಿದೆ. ಆಗ ಈ ಪುಸ್ತಕದ ಬರಹಗಾರನನ್ನು ಭೇಟಿಯಾಗಬೇಕೆಂದು ನಾನು ಬಯಸಿದೆ. ಆದರೆ ಅದರ ಬರಹಗಾರನ ಹೆಸರು ಹೀಗೆ ಕೊಡಲಾಗಿತ್ತು: "ಯಾರಿಗೂ ತಿಳಿಯದ ಕ್ರೈಸ್ತನು". ನಾನು ಪಾಪದ ಮೇಲೆ ಜಯದ ಜೀವಿತವನ್ನು ಜೀವಿಸುವ ನಿರೀಕ್ಷೆಯನ್ನು ಮೊದಲಬಾರಿ ಈ ಪುಸ್ತಕದಿಂದ ಪಡೆದೆ. ಆದರೆ ಇದನ್ನು ಅಭ್ಯಾಸಿಸುವುದಕ್ಕೆ ನನಗೆ ನನ್ನ ಸುತ್ತಲಿದ್ದ ಯಾರಿಂದಲೂ ಸಹಾಯ ಸಿಗಲಿಲ್ಲ.

ಇದರ ನಂತರ ನನಗೆ ಸಹೋದರ ಝ್ಯಾಕ್ ಪೂನನ್‍ರ ಪರಿಚಯ ಚೆನ್ನಾಗಿ ಆಯಿತು ಮತ್ತು ಅವರು ಬರೆದಂತ ಪುಸ್ತಕಗಳನ್ನು ನಾನು ಓದಲು ಆರಂಭಿಸಿದೆ. ನಾನು ಅವರಿಂದ ಪಾಪದ ಮೇಲೆ ಜಯದ ಜೀವಿತದ ಸಂದೇಶವನ್ನು ಕೇಳಿಸಿಕೊಂಡದ್ದು ಮಾತ್ರವಲ್ಲದೆ, ಅವರಲ್ಲಿ ಕ್ರಿಸ್ತನ ಸಾರೂಪ್ಯದ ಜೀವಿತದ ಒಂದು ಉದಾಹರಣೆಯನ್ನು ಸಹ ನೋಡಿದೆ. ಯೇಸುವು "ನಮ್ಮಂತೆ ರಕ್ತಮಾಂಸಧಾರಿಯಾಗಿ ಬಂದು, ನಮ್ಮ ಮುಂದಾಗಿ ಓಡುವವನಾಗಿದ್ದು, ಎಲ್ಲಾ ವಿಷಯಗಳಲ್ಲಿ ನಮ್ಮಂತೆಯೇ ಶೋಧಿಸಲ್ಪಟ್ಟನು - ಮತ್ತು ಪಾಪವನ್ನು ಜಯಿಸಿದನು" ಎಂಬುದಾಗಿ ಅವರು ಬೋಧಿಸಿದರು. ಇದರಿಂದ ನನ್ನ ಕ್ರೈಸ್ತ ಜೀವಿತಕ್ಕೆ ಸಂಪೂರ್ಣ ಹೊಸದಾದ ಒಂದು ಗುರಿ ಅಥವಾ ಧ್ಯೇಯವು ಸಿಕ್ಕಿತು ಮತ್ತು ನಾನು ಸಹೋದರ ಝ್ಯಾಕ್‍ರವರ ಕ್ರೈಸ್ತಸಭೆಯೊಂದಿಗೆ ಸೇರಿಕೊಂಡು ಬೆರೆಯಲು ಪ್ರಾರಂಭಿಸಿದೆ (ಕ್ರಿಶ್ಚಿಯನ್ ಫೆಲೋಷಿಪ್ ಚರ್ಚ್). ಇದರ ನಂತರ ಬಹಳ ಶೀಘ್ರವೇ ನಾನು ಯಥಾರ್ಥವಾದ ಪವಿತ್ರಾತ್ಮನ ಅಭಿಷೇಕದ ಅನುಭವವನ್ನೂ ಪಡೆದೆ.

ಪೆಂತಕೋಸ್ತ ಆಂದೋಲನವು 20ನೇ ಶತಮಾನದ ಆರಂಭದ ಸಮಯದಲ್ಲಿ ದೇವರ ಕಾರ್ಯವಾಗಿ ಆರಂಭವಾಯಿತು. ನಮ್ಮೆಲ್ಲರಿಗೆ ತಿಳಿದಿರುವಂತೆ, ಅನೇಕ ಶತಮಾನಗಳ ವರೆಗೆ ಮುಚ್ಚಿಡಲ್ಪಟ್ಟಿದ್ದ ’ನಂಬಿಕೆಯ ಮೂಲಕ ನೀತೀಕರಣ’ದ ಸತ್ಯಾಂಶವನ್ನು ಮಾರ್ಟಿನ್ ಲೂಥರ್ ರವರು (16ನೇ ಶತಮಾನದಲ್ಲಿ) ತಿರುಗಿ ಪ್ರಕಟಪಡಿಸಿದರು. ಇದರ ನಂತರ "ಅನಾಬ್ಯಾಪ್ಟಿಸ್ತ ಆಂದೋಲನ"ವು ನೀರಿನ ದೀಕ್ಷಾಸ್ನಾನದ ಸತ್ಯಾಂಶವನ್ನು ಬಹಿರಂಗ ಪಡಿಸಿತು. ಇದರ ನಂತರ ಜಾನ್ ವೆಸ್ಲಿಯು, ಲೌಕಿಕ ಆಶೆಗಳಿಂದ ದೂರವಿದ್ದು ಪವಿತ್ರ ಜೀವಿತವನ್ನು ಜೀವಿಸುವುದು ಹೇಗೆಂಬ ಸತ್ಯವನ್ನು ತೋರಿಸಿಕೊಟ್ಟರು. ಇದರ ನಂತರ ಪೆಂತಕೋಸ್ತ ಆಂದೋಲನವು ಬಂತು ಮತ್ತು ಮೊದಲನೆಯ ಶತಮಾನದಲ್ಲಿ ಅಪೊಸ್ತಲರು ಘೋಷಿಸಿದ ಪವಿತ್ರಾತ್ಮನ ದೀಕ್ಷಾಸ್ನಾನದ ಕುರಿತಾದ ಸತ್ಯಾಂಶವನ್ನು ಅದು ಮತ್ತೊಮ್ಮೆ ಪ್ರಸ್ತುತಪಡಿಸಿತು.

ಆದರೆ ನಾವು ಪೆಂತಕೋಸ್ತ ಆಂದೋಲನವನ್ನು ಸೂಕ್ಷ್ಮವಾಗಿ ಪರೀಕ್ಷಿಸಿ ನೋಡುವಾಗ ಕಂಡುಬರುವುದು ಏನೆಂದರೆ, ಪೆಂತಕೋಸ್ತ ನಾಯಕರುಗಳು ಪವಿತ್ರಾತ್ಮನು ಮಾಡುವ ಕಾರ್ಯವನ್ನು ಪವಿತ್ರಾತ್ಮನ ವರಗಳನ್ನು ಉಪಯೋಗಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತಗೊಳಿಸಿ ಬೋಧಿಸುತ್ತಾರೆ. ಪವಿತ್ರಾತ್ಮನ ಬಲದ ಮೂಲಕ ಪವಿತ್ರ ಜೀವಿತವನ್ನು ಜೀವಿಸುವ ಒಂದು ಉದಾಹರಣೆಯೂ ಪೆಂತಕೋಸ್ತ ನಾಯಕರುಗಳಲ್ಲಿ ನನಗೆ ಕಾಣಿಸಲಿಲ್ಲ. ಅವರು ಪವಿತ್ರಾತ್ಮನ ವರಗಳಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಿದ್ದರು. ನಾನು ಗಮನಿಸಿದ ಮತ್ತೊಂದು ಸಂಗತಿಯೆಂದರೆ, ಅವರು ಪವಿತ್ರಾತ್ಮನ ಬಲಕ್ಕಾಗಿ ಬೇಡಿಕೊಂಡರೂ, ಅವರಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬನೂ ಹಣಕ್ಕಾಗಿ ಮತ್ತು ಗೌರವಾನ್ವಿತ ಪದವಿಗಳಿಗಾಗಿ ಹಂಬಲಿಸುತ್ತಿದ್ದನು. ಜಯಶಾಲಿ ಕ್ರೈಸ್ತರಾಗಿ ಜೀವಿಸುವುದರ ಬಗ್ಗೆ ಅವರಲ್ಲಿ ಒಬ್ಬನಾದರೂ ಮಾತನಾಡುತ್ತಿರಲಿಲ್ಲ. ಈ ವಿಪರ್ಯಾಸವನ್ನು ಇತರ ಜನರು ಸಹ ಗುರುತಿಸಿದರು - ಆದರೆ ಅವರು ಇದರಿಂದ ಬೇಸರಗೊಂಡಂತೆ ಕಾಣಿಸುತ್ತಿರಲಿಲ್ಲ.

"ಒಬ್ಬ ನಿಜವಾದ ಪ್ರವಾದಿಯು ದೊಡ್ಡ ಕೂಟಗಳನ್ನು ನಡೆಸುವುದರಲ್ಲಿ ಎಂದಿಗೂ ಆಸಕ್ತನಾಗಿರುವುದಿಲ್ಲ - ಅದಲ್ಲದೆ ಆತನು ಎಲ್ಲರಿಗೆ ಒಪ್ಪಿಗೆಯಾಗುವಂತೆ ಬೋಧಿಸುವುದಿಲ್ಲ"

ಇದಕ್ಕೆ ಸಂಬಂಧಿಸಿದಂತೆ ನನಗೆ ಒಂದು ಕಥೆ ನೆನಪಿಗೆ ಬರುತ್ತದೆ: ಒಬ್ಬ ವ್ಯಕ್ತಿಯು ಒಂದು ಸಂಸ್ಥೆಯಲ್ಲಿ ವ್ಯವಹಾರ ಸಂಚಾಲಕನ ನೌಕರಿಯಿಂದ ನಿವೃತ್ತನಾದನು. ಇದರ ನಂತರ ಆತನಲ್ಲಿ ಯಾವುದೋ ಮಾನಸಿಕ ಸಮಸ್ಯೆ ಉಂಟಾಯಿತು. ಆತನು ಹಿಂದೆ ತಾನು ಕೆಲಸಮಾಡುತ್ತಿದ್ದ ಸಂಸ್ಥೆಯ ವಾಹನ ನಿಲುಗಡೆಯ ಜಾಗಕ್ಕೆ ನಡೆದುಕೊಂಡೇ ಹೋಗುತ್ತಿದ್ದನು, ಆದರೆ ತಾನು ಈಗಲೂ ಒಂದು ಕಾರನ್ನು ಚಲಾಯಿಸುತ್ತಿರುವುದಾಗಿ ಆತನು ತನ್ನ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಿದ್ದನು. ಹಾಗಾಗಿ ಆತನು ಕಾರನ್ನು ಚಲಾಯಿಸುವಂತೆ ತನ್ನ ಕೈ-ಕಾಲುಗಳನ್ನು ಅಲುಗಾಡಿಸುತ್ತಿದ್ದನು - ಬ್ರೇಕನ್ನು ಒತ್ತುವಂತೆ ಮತ್ತು ತನ್ನ ಕಲ್ಪನೆಯ ಕಾರನ್ನು ಒಂದು ಖಾಲಿ ಜಾಗದಲ್ಲಿ ನಿಲ್ಲಿಸುವಂತೆ ನಟಿಸುತ್ತಿದ್ದನು. ನಂತರ ಆತನು ಕಾರಿನ ಬಾಗಿಲನ್ನು ತೆರೆದು ಹೊರಗೆ ಬಂದು "ಕಾರಿನ ಬಾಗಿಲನ್ನು ಹಾಕುವಂತೆ" ನಟಿಸುತ್ತಿದ್ದನು ಮತ್ತು ಅಲ್ಲಿದ್ದ ಭದ್ರತಾ ಸಿಬ್ಬಂದಿ ಅಥವಾ ವಾಚ್‍ಮನ್‍ನ ಬಳಿಗೆ ಹೋಗಿ "ನನ್ನ ಕಾರನ್ನು ನೋಡಿಕೋ" ಎಂದು ಹೇಳುತ್ತಿದ್ದನು! ಸ್ವಲ್ಪ ಸಮಯದ ನಂತರ ಆತನು ಹಿಂದಿರುಗಿ ಬಂದು ವಾಹನ ನಿಲುಗಡೆಯ ಜಾಗದಿಂದ ತನ್ನ ಕಾರನ್ನು ಏರಿದಂತೆ, ಅದನ್ನು ಹಿಂದಕ್ಕೆ ತೆಗೆದಂತೆ ಮತ್ತು ಚಲಾಯಿಸಿ ಹೊರಟು ಹೋಗುವಂತೆ ನಟಿಸುತ್ತಿದ್ದನು. ಇದನ್ನು ನೋಡಿದ ಕೆಲವು ಜನರು ಒಂದು ದಿನ ಅಲ್ಲಿದ್ದ ವಾಚ್‍ಮನ್‍ಅನ್ನು ಈ ವ್ಯಕ್ತಿಯ ಬಗ್ಗೆ ಪ್ರಶ್ನಿಸಿದರು. ಅವನು ಹೇಳಿದ್ದು ಏನೆಂದರೆ, ಈ ವ್ಯಕ್ತಿ ಒಬ್ಬ ಉನ್ನತ ಅಧಿಕಾರಿಯ ಹುದ್ದೆಯಲ್ಲಿದ್ದಾಗ ನಿಜವಾದ ಕಾರನ್ನು ಚಲಾಯಿಸುತ್ತಿದ್ದನು; ಆದರೆ ಈಗ ಈತನು ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದ್ದಾನೆ. "ಆದರೆ ಈತನು ಇತರರಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಆತನು ತನ್ನ ಕಲ್ಪನೆಯ ಕಾರನ್ನು ಇಲ್ಲಿ ನಿಲ್ಲಿಸುತ್ತಾನೆ ಮತ್ತು ಸ್ವಲ್ಪ ಸಮಯದ ನಂತರ ಅದನ್ನು ಏರಿ ಹೊರಟುಹೋಗುತ್ತಾನೆ! ಹಾಗಾಗಿ ನಾನು ಅವನನ್ನು ತಡೆಯುವುದಿಲ್ಲ" ಎಂದು ಆ ಭದ್ರತಾ ಸಿಬ್ಬಂದಿಯು ಹೇಳುತ್ತಾನೆ! ಆತನನ್ನು ಏಕೆ ತಿದ್ದುವುದಿಲ್ಲವೆಂದು ಇವರು ಆತನನ್ನು ಪ್ರಶ್ನಿಸಿದರು. ಅದಕ್ಕೆ ಆತನು ಅವರಿಗೆ ಹೇಳಿದ್ದು ಏನೆಂದರೆ, "ನಾನು ಆತನನ್ನು ಏಕೆ ಸರಿಪಡಿಸಲಿ, ಆತನು ನನಗೆ ಪ್ರತಿ ವಾರ ವಾಹನ ನಿಲುಗಡೆಯ ಶುಲ್ಕವನ್ನು ಕೊಡುತ್ತಾನೆ, ಮತ್ತು ಇದರ ಜೊತೆಗೆ, ಕಾರನ್ನು ತೊಳೆದದ್ದಕ್ಕಾಗಿ ಎರಡು ವಾರಕ್ಕೊಮ್ಮೆ 100 ರೂಪಾಯಿಯನ್ನೂ ಸಹ ಕೊಡುತ್ತಾನೆ"!!

ಇದು ಇಂದು ಅನೇಕ ಪೆಂತಕೋಸ್ತ ಸಭೆಗಳಲ್ಲಿ ನಡೆಯುತ್ತಿರುವುದರ ಒಂದು ಚಿತ್ರಣವಾಗಿದೆ: ಜನರು ಪವಿತ್ರಾತ್ಮನ ತುಂಬುವಿಕೆಯ ನಟನೆ ಮಾಡುತ್ತಾರೆ ಮತ್ತು ಅನೇಕ ವಿಧವಾದ ಚಾಲನೆಯನ್ನು ಮತ್ತು ಶಬ್ಧಗಳನ್ನು ಮಾಡುತ್ತಾರೆ. ಇವೆಲ್ಲವನ್ನು ನೋಡುವ ಆ ಸಭೆಗಳ ಪಾಸ್ಟರ್‌ಗಳು ಹೇಳುವುದು ಏನೆಂದರೆ, "ನಾವು ಇವರನ್ನು ಏಕೆ ತಡೆಯಬೇಕು? ಅವರು ಪ್ರತಿ ತಿಂಗಳು ದಶಮಾಂಶವನ್ನು ಸಲ್ಲಿಸುತ್ತಾರೆ ಮತ್ತು ಪಾಸ್ಟರ್‌ಗಳಾದ ನಮಗೆ ಕಾಣಿಕೆಗಳನ್ನು ತಪ್ಪದೆ ಕೊಡುತ್ತಾರೆ. ಹಾಗಿರುವಾಗ ಯಥಾರ್ಥ ಆತ್ಮಭರಿತ ಜಯಶಾಲಿ ಜೀವಿತದ ಸತ್ಯವನ್ನು ನಾವು ಅವರಿಗೆ ಏಕೆ ತಿಳಿಸಬೇಕು?" ಇದಲ್ಲದೆ, ಈ ಪಾಸ್ಟರ್‌ಗಳು ಸ್ವತಃ ತಾವೇ ಜಯಶಾಲಿ ಜೀವಿತವನ್ನು ಹೊಂದಿಲ್ಲ! ಅನೇಕ ಪೆಂತಕೋಸ್ತ ಸಭೆಗಳಲ್ಲಿ ಈ ಅಸತ್ಯದ ಭ್ರಮೆಯು ಹರಡಿದೆ.

ಅನೇಕ ಸಭೆಗಳಲ್ಲಿ ಇದ್ದಂತ ಈ ಶೋಚನೀಯ ಪರಿಸ್ಥಿತಿಯನ್ನು ನೋಡಿ, ದೇವರು ನಮ್ಮ ಮಧ್ಯೆ ಒಬ್ಬ ಮನುಷ್ಯನನ್ನು ಕಳುಹಿಸಿಕೊಟ್ಟರು - ಈತನು ದೇವರ ಸಭೆಯಲ್ಲಿ ಯಥಾರ್ಥತೆ ಇರಬೇಕೆಂಬ ಭಾರವನ್ನು ಹೊಂದಿದ್ದ ಮನುಷ್ಯನಾಗಿದ್ದನು.

ಲೂಕನು 12:56ರಲ್ಲಿ, ಫರಿಸಾಯರು ತಾವು ಜೀವಿಸುತ್ತಿದ್ದ ಪ್ರಸ್ತುತ ಕಾಲವನ್ನು ವಿವೇಚಿಸದೇ ಇದ್ದುದಕ್ಕಾಗಿ ಯೇಸುವು ಅವರನ್ನು ಗದರಿಸಿದರು. ನಾವು ಸಹ ನಾವು ಪ್ರಸ್ತುತ ಜೀವಿಸುತ್ತಿರುವ ಕಾಲದ ವಿವೇಚನೆಯನ್ನು ಹೊಂದಿರಬೇಕು - ಅದಲ್ಲದೆ, ಸ್ವತಃ ನಮ್ಮ ಸ್ಥಿತಿ ಹೇಗಿದೆಯೆಂದು ನಾವು ಅವಶ್ಯವಾಗಿ ಕಂಡುಕೊಳ್ಳಬೇಕು. ಅದಲ್ಲದೆ ನಾವು ಕರ್ತನೊಂದಿಗೆ ಮುಂದಕ್ಕೆ ಸಾಗಬೇಕು. ಯಾರು ಪ್ರಸ್ತುತ ಕಾಲವನ್ನು ವಿವೇಚಿಸುತ್ತಾನೋ ಮತ್ತು ಪ್ರಸ್ತುತ ಕಾಲಕ್ಕಾಗಿ ಕರ್ತನು ಕೊಡುವಂತ ಭಾರವನ್ನು ಸ್ವೀಕರಿಸುತ್ತಾನೋ ಮತ್ತು ಅದನ್ನು ಮಾಡುತ್ತಾ ಮುಂದುವರಿಯುತ್ತಾನೋ, ಅವನೇ ಒಬ್ಬ ನಿಜವಾದ ಪ್ರವಾದಿಯಾಗಿದ್ದಾನೆ.

ಸತ್ಯವೇದದಲ್ಲಿ ಉಲ್ಲೇಖಿಸಲಾಗಿರುವ ಅನೇಕ ಪ್ರವಾದಿಗಳು ಅವರ ಪ್ರಸ್ತುತ ಕಾಲಮಾನಕ್ಕಾಗಿ ಕರ್ತನಿಂದ ಒಂದು ಭಾರವನ್ನು ಹೊಂದಿದರು. ಸ್ನಾನಿಕನಾದ ಯೋಹಾನನು ಒಬ್ಬ ಪ್ರವಾದಿಯಾಗಿದ್ದನು ಮತ್ತು ಆತನು ದೇವರಿಂದ ಕಳುಹಿಸಲ್ಪಟ್ಟ ಒಬ್ಬ ಮನುಷ್ಯನಾಗಿದ್ದನು. ನಾವು ಆತನ ಜೀವಿತವನ್ನು ನೋಡುವಾಗ, ಆತನಲ್ಲಿ ಒಬ್ಬ ಯಥಾರ್ಥ ಪ್ರವಾದಿಯ ಕೆಲವು ವಿಶಿಷ್ಟ ಗುಣಲಕ್ಷಣಗಳನ್ನು ಕಾಣುತ್ತೇವೆ.

ಮೊದಲನೆಯದಾಗಿ, ಯೋಹಾನನ ಬಳಿ ಒಂದೇ ಒಂದು ಸಂದೇಶವಿತ್ತು. ಅದು "ದೇವರ ಕಡೆಗೆ ತಿರುಗಿಕೊಳ್ಳಿರಿ, ಪಶ್ಚಾತ್ತಾಪಪಡಿರಿ" ಎಂಬುದಾಗಿತ್ತು - ಇದನ್ನು ಆತನು ಹೆಚ್ಚಿನ ಭಾರದಿಂದ ಘೋಷಿಸಿದನು. ಯೋಹಾನನ ಸಂದೇಶವು ಸಮತೋಲನವುಳ್ಳದ್ದಾಗಿತ್ತೇ? ನಿಶ್ಚಯವಾಗಿ ಅದು ಸಮತೋಲನವನ್ನು ಹೊಂದಿರಲಿಲ್ಲ. ಅವನ ಬಳಿ ಒಂದೇ ಒಂದು ಸಂದೇಶವಿತ್ತು: "ಪಶ್ಚಾತ್ತಾಪಪಡಿರಿ." ಪ್ರತಿಯೊಬ್ಬ ನಿಜವಾದ ಪ್ರವಾದಿಯು ದೇವರಿಂದ ಕೊಡಲ್ಪಟ್ಟ ಒಂದು ಭಾರವನ್ನು ಹೊಂದಿರುತ್ತಾನೆ - ಮತ್ತು ಈ ಕಾರಣಕ್ಕಾಗಿ ಆತನ ಸಂದೇಶವು ಎಂದಿಗೂ ಸಮತೋಲನವನ್ನು ಹೊಂದಿರುವುದಿಲ್ಲ. ಸ್ನಾನಿಕನಾದ ಯೋಹಾನನ ಕಾಲದಲ್ಲಿ ಯಾರು ಸಮತೋಲನವುಳ್ಳ ಸಂದೇಶವನ್ನು ಕೊಡುತ್ತಿದ್ದರು? ಅವರು ಫರಿಸಾಯರಾಗಿದ್ದರು - ಅವರು ಧರ್ಮಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಅವರು ತಮ್ಮ ಸಭಾಮಂದಿರಗಳಲ್ಲಿ "ಸಮತೋಲನವುಳ್ಳ" ಸಂದೇಶವನ್ನು ಬೋಧಿಸುತ್ತಿದ್ದರು, ಆದರೆ ಅವರೆಲ್ಲರೂ ಆತ್ಮಿಕವಾಗಿ ಸತ್ತುಹೋಗಿದ್ದರು! ಮತ್ತು ಆ ಸಭಾಮಂದಿರಗಳಲ್ಲಿ ಕುಳಿತುಕೊಂಡು ಇಂತಹ "ಸಮತೋಲನವುಳ್ಳ" ಸಂದೇಶಗಳನ್ನು ಕೇಳಿಸಿಕೊಂಡ ಜನರು, ಫರಿಸಾಯರಂತೆಯೇ ಆತ್ಮಿಕವಾಗಿ ಸತ್ತುಹೋಗಿದ್ದರು. ಆದರೆ ಇವರ ನಡುವೆ ದೇವರಿಗಾಗಿ ಹಸಿದಿದ್ದ ಕೆಲವು ಜನರು ದೇವರ ನಿಜವಾದ ಪ್ರವಾದಿ - ಸ್ನಾನಿಕನಾದ ಯೋಹಾನನ - "ಸಮತೋಲನವಿಲ್ಲದ ಸಂದೇಶವನ್ನು" ಕೇಳಿಸಿಕೊಳ್ಳಲಿಕ್ಕಾಗಿ ಅಡವಿಯ ಪ್ರದೇಶಕ್ಕೆ ಹೋದರು. ಅವರು ಈ ರೀತಿಯಾಗಿ ಆತ್ಮಿಕ ವಿನಾಶದಿಂದ ರಕ್ಷಣೆಯನ್ನು ಪಡೆದರು.

ನಾವು ಯೋಹಾನನಲ್ಲಿ ನೋಡುವ ನಿಜ ಪ್ರವಾದಿಯ "ಮತ್ತೊಂದು ಗುಣಲಕ್ಷಣ"ವೆಂದರೆ, ಆತನ "ಬಿರುಸಾದ ಮಾತುಗಳು". ಅನೇಕ ಬೋಧಕರು ತಮ್ಮ ಸಂದೇಶಗಳನ್ನು ಆರಂಭಿಸುವ ಮೊದಲು ಕುಳಿತಿರುವ ಸಭಿಕರನ್ನು ಗೌರವಾನ್ವಿತವಾಗಿ ಸ್ವಾಗತಿಸುತ್ತಾರೆ. ಆದರೆ ಯೋಹಾನನಾದರೋ ತನ್ನ ಸಂದೇಶಗಳನ್ನು "ಎಲೈ ಸರ್ಪಜಾತಿಯವರೇ" ಎಂದು ಆರಂಭಿಸಿದನು! ಜನರ ಮನೋರಂಜನೆಯಲ್ಲ, ಆದರೆ ಜನರಿಗೆ ತಮ್ಮ ಪಾಪಗಳ ಅರಿವು ಉಂಟಾಗಬೇಕು, ಎಂಬುದು ಅವನ ಬೋಧನೆಯ ಗುರಿಯಾಗಿತ್ತು.

ಒಬ್ಬ ಯಥಾರ್ಥನಾದ ಪ್ರವಾದಿಯ "ಮೂರನೆಯ ಗುಣಲಕ್ಷಣ," ಆತನು ಎಂದಿಗೂ ಅನೀತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅರಸನಾದ ಹೆರೋದನು ಸ್ನಾನಿಕನಾದ ಯೋಹಾನನ ಬೋಧನೆಯನ್ನು ಸಂತೋಷವಾಗಿ ಕೇಳುತ್ತಿದ್ದನು ಮತ್ತು ಅವನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದನು. ಜನರು ನಮ್ಮ ಬೋಧನೆಯನ್ನು ಪ್ರಶಂಸಿಸುವಾಗ, ಅವರಿಗೆ ಅವರ ಆತ್ಮಿಕ ಸ್ಥಿತಿಯ ಬಗ್ಗೆ ನಿಜಾಂಶವನ್ನು ತೋರಿಸಿಕೊಡುವುದು ಕಷ್ಟಕರವಾಗಬಹುದು. ಆದರೆ ಯೋಹಾನನಿಗೆ ಇಂತಹ ಯಾವುದೇ ಅಡಚಣೆ ಇರಲಿಲ್ಲ. ಅವನು ಹೆರೋದನನ್ನು ನೇರವಾಗಿ ಗದರಿಸಿ, ಅವನು ತನ್ನ ಅಣ್ಣನ ಹೆಂಡತಿಯನ್ನು ಮದುವೆಯಾದದ್ದು ವ್ಯಭಿಚಾರವೆಂದು ಹೇಳಿದನು. ಅಧರ್ಮದೊಂದಿಗೆ ಹೊಂದಾಣಿಕೆ ಮಾಡುವುದು ಅಥವಾ ಜನರನ್ನು ಮೆಚ್ಚಿಸುವುದು, ಇವೆಲ್ಲಾ ಯೋಹಾನನಲ್ಲಿ ಇರಲಿಲ್ಲ. ಅವನು ಸತ್ಯವನ್ನು ನುಡಿದ ಕಾರಣಕ್ಕಾಗಿ ತನ್ನ ಜೀವವನ್ನು ಕಳೆದುಕೊಂಡನು. ಆದರೆ ದೇವರು ಆತನಿಗೆ ಕೊಟ್ಟಿದ್ದ ಸಂದೇಶದ ವಿಷಯದಲ್ಲಿ - ತನ್ನ ಜೀವಿತದ ಕೊನೆಯ ತನಕ - ಆತನು ನಂಬಿಗಸ್ತನಾಗಿ ಮುಂದುವರಿದನು. ಪ್ರತಿಯೊಬ್ಬ ನಿಜವಾದ ಪ್ರವಾದಿಯು ಇದೇ ರೀತಿ ಇರುತ್ತಾನೆ.

ಇಸ್ರಾಯೇಲ್ಯರಲ್ಲಿ ಕೆಲವರು ಯೋಹಾನನು ದೇವರ ಸಂದೇಶವನ್ನು ಹೊಂದಿದ್ದ ಒಬ್ಬ ನಿಜವಾದ ಪ್ರವಾದಿಯೆಂದು ಗ್ರಹಿಸಿದ್ದರು, ಮತ್ತು ಅವರು ಅರಣ್ಯ ಪ್ರದೇಶದಲ್ಲಿ ಆತನೊಂದಿಗೆ ಸೇರಿಕೊಂಡರು.

ನಾವು ಪ್ರಸ್ತುತ ಕಾಲಮಾನವನ್ನು ಮತ್ತು ನಾವು ಸೇರಿಕೊಂಡಿರುವ ಆತ್ಮಿಕ ಆಂದೋಲನವನ್ನು (CFC - ಕ್ರಿಶ್ಚಿಯನ್ ಫೆಲೋಷಿಪ್ ಚರ್ಚ್) ಗಮನಿಸಿ ನೋಡುವುದಾದರೆ, ಸ್ನಾನಿಕ ಯೋಹಾನನ ಸೇವೆ ಮತ್ತು CFCಯ ಗುಣಲಕ್ಷಣಗಳು ಇವೆರಡರ ನಡುವೆ ಹೆಚ್ಚಿನ ಹೋಲಿಕೆ ಇರುವುದನ್ನು ಕಾಣಬಹುದು.

ಮೊದಲನೆಯದಾಗಿ, ಯೋಹಾನನ ಹಾಗೆ, ನಾವು ಸಹ ಕೇವಲ ಒಂದೇ ಸಂದೇಶವನ್ನು ಬೋಧಿಸುತ್ತೇವೆ; "ಪವಿತ್ರಾತ್ಮನ ಬಲದಿಂದ ಕ್ರಿಸ್ತನ ಸಾರೂಪ್ಯವನ್ನು ಹೊಂದುವುದು". ನಮ್ಮ ಕೂಟಗಳಿಗೆ ಹೊಸದಾಗಿ ಬರುವಂತ ಜನರಲ್ಲಿ ಕೆಲವರು, ಪ್ರತೀ ಭಾನುವಾರವೂ ನಾವು ಒಂದೇ ವಿಷಯವನ್ನು ಯಾಕೆ ಮತ್ತೆ ಮತ್ತೆ ಬೋಧಿಸುತ್ತೇವೆ, ಎಂದು ನಮ್ಮನ್ನು ಕೇಳುತ್ತಾರೆ. ನಮ್ಮ ಸಂದೇಶದಲ್ಲಿ ಸಮತೋಲನ ಇಲ್ಲವೆಂದು ಅವರು ನಮಗೆ ಹೇಳುತ್ತಾರೆ! ಆದಾಗ್ಯೂ, ಈ ಕಾಲಮಾನದಲ್ಲಿ ಕರ್ತನ ಹೃದಯದಲ್ಲಿ ಆತನ ಜನರಿಗಾಗಿ ಇರುವಂತ ಭಾರ ಇದಾಗಿದೆ. ಆದರೆ ಈ ವೇಳೆಯಲ್ಲಿ ಕರ್ತನಿಗೆ ತನ್ನ ಜನರಿಗಾಗಿ ಇರುವಂತ ಭಾರ ಇದಾಗಿದೆಯೆಂದು - ಈ ಕಾಲಾವಧಿಗೆ ಕರ್ತನ ಸಂದೇಶ ಇದಾಗಿದೆ ಎಂಬುದನ್ನು ಎಷ್ಟು ಮಂದಿ ಕ್ರೈಸ್ತರು ಗುರುತಿಸುತ್ತಾರೆ? ಮತ್ತು ಕರ್ತನ ಪ್ರವಾದಿಯ ಜೊತೆಯಲ್ಲಿ "ಅರಣ್ಯ ಪ್ರದೇಶಗಳಿಗೆ ಹೋಗುವುದಕ್ಕೆ" ಬಯಸುವ ಕ್ರೈಸ್ತರು ಎಷ್ಟು ಮಂದಿ ಇದ್ದಾರೆ?

ಇನ್ನೂ ಮುಂದುವರಿಸಿದಾಗ: ಯೋಹಾನನ ಸಂದೇಶದ ಹಾಗೆ, CFCಯಲ್ಲಿ ನಾವು ಕೇಳಿಸಿಕೊಳ್ಳುವ ಬೋಧನೆಯೂ ಸಹ ಬಹಳ ಬಿರುಸಾಗಿ ಇರುತ್ತದೆ ಮತ್ತು ಯಾವುದೇ ಹೊಂದಾಣಿಕೆಯಿಂದ (ಲೌಕಿಕ ಮೌಲ್ಯಗಳಿಂದ) ಸಂಪೂರ್ಣವಾಗಿ ದೂರವಿರುತ್ತದೆ ಮತ್ತು ಯೋಹಾನನ ಕಾಲದ ದೇವಭಕ್ತರು ಮಾಡಿದ ಹಾಗೆ, ಈ ದಿನದಲ್ಲೂ ಕರ್ತನು ತನ್ನ ಜನರಿಗೆ, ಕ್ರಿಸ್ತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಂಡು, ಆತನೊಂದಿಗೆ ಪಾಳೆಯದ ಆಚೆ ಹೋಗುವ ಕರೆಯನ್ನು ನೀಡುತ್ತಾನೆ.

ಕರ್ತನು ಈ ದಿನದಲ್ಲಿ ತನ್ನ ಜನರಿಗಾಗಿ ಹೊಂದಿರುವ ಭಾರವನ್ನು ನೀವು "ಗ್ರಹಿಸಿದ್ದೀರಾ?" ಹಾಗಿದ್ದರೆ, ನೀವು ಕರ್ತನಿಗಾಗಿ - ಮತ್ತು ಕರ್ತನೊಂದಿಗೆ - ನಿಲ್ಲಲು ಸಿದ್ಧರಿದ್ದೀರಾ? ಆದರೆ ನೀವು ಇದಕ್ಕಾಗಿ ಒಂದು ಬೆಲೆಯನ್ನು ಪಾವತಿಸಬೇಕಿದೆ.

ನೀವು ಪಕ್ಷಿಗಳ ಒಂದು ಗುಂಪು ಹಾರಾಡುವುದನ್ನು ಗಮನಿಸಿದ್ದೀರಾ? ಆ ಗುಂಪಿನ ಮುಂದೆ ಒಂದು ಪಕ್ಷಿ ಇರುತ್ತದೆ - ಮತ್ತು ಇತರ ಎಲ್ಲಾ ಹಕ್ಕಿಗಳು ಒಂದು ಬಾಣದ ಆಕಾರದಲ್ಲಿ ಹಾರಾಡುತ್ತಾ ಅದನ್ನು ಹಿಂಬಾಲಿಸುತ್ತವೆ. ಮುಂದೆ ಹಾರುವ ಪಕ್ಷಿಯು ಇಡೀ ಗುಂಪಿಗೆ ಮಾರ್ಗದರ್ಶನ ನೀಡುತ್ತದೆ. ಆ ಗುಂಪಿನ ಮುಂದೆ ಅನೇಕ ಅಡೆತಡೆಗಳು ಬರಬಹುದು, ವಿದ್ಯುತ್ ತಂತಿಗಳು ಮತ್ತು ಗೋಪುರಗಳು ಹಾಗೂ ಇತರ ತಡೆಗಳು. ಮುಂದೆ ಹಾರುವ ಪಕ್ಷಿಯು ಈ ಅಪಾಯಗಳನ್ನು ಮೊದಲು ಎದುರಿಸುತ್ತದೆ. ಅದಲ್ಲದೆ ಅದು ಬರುವಂತ ಎಲ್ಲಾ ಅಪಾಯಗಳನ್ನು ಜಾಗರೂಕತೆಯಿಂದ ತಪ್ಪಿಸಿಕೊಂಡು ಹಾರುತ್ತದೆ. ಇತರ ಪಕ್ಷಿಗಳು ಅದನ್ನು ಹಿಂಬಾಲಿಸುತ್ತಾ ಸುರಕ್ಷಿತವಾಗಿ ಹಾರುತ್ತವೆ - ಈ ರೀತಿಯಾಗಿ ಅವು ಅಪಾಯಗಳಿಂದ ಪಾರಾಗುತ್ತವೆ. ನಮಗೂ ಇದು ಅನ್ವಯಿಸುತ್ತದೆ - ದೇವರ ಭಾರವನ್ನು ಹೊರುತ್ತಾ, ನಮ್ಮನ್ನು ಆತ್ಮಿಕ ಅಪಾಯಗಳಿಂದ ಪಾರುಮಾಡುತ್ತಾ ಹೋಗುವಂತ ಒಬ್ಬ ಮನುಷ್ಯನ ಜೊತೆಯಲ್ಲಿ ಸಾಗುವುದು ಮತ್ತು ಆತನ ಉದಾಹರಣೆಯನ್ನು ಅನುಸರಿಸುವುದು ನಮಗೆ ಲಭಿಸಿರುವ ಒಂದು ದೊಡ್ಡ ಸುಯೋಗವಾಗಿದೆ.

ಒಂದು ಸಲ "ವಾಚ್‌ಮನ್ ನೀ" ಅವರು ಹೀಗೆ ಹೇಳಿದರು: ನಾವು ನಮ್ಮ ಕಾಲಮಾನದಲ್ಲಿ ’ಪವಿತ್ರಾತ್ಮನ ಪ್ರಸ್ತುತ ಅಲೆಯೊಂದಿಗೆ’ ಮುಂದೆ ಸಾಗಬೇಕು. ನಾವು ಮಾರ್ಟಿನ್ ಲೂಥರ್‌ರ ಸಮಯದಲ್ಲಿ ಜೀವಿಸಿದ್ದರೆ, ಆಗ ಮಾರ್ಟಿನ್ ಲೂಥರ್‌ರೊಂದಿಗೆ ನಿಲ್ಲುವುದು ಸೂಕ್ತವಾದ ಕಾರ್ಯವಾಗಿತ್ತು. ಆದರೆ ನಾವು ಜಾನ್ ವೆಸ್ಲಿ‌ಯ ಕಾಲದಲ್ಲಿ ಜೀವಿಸಿದ್ದರೆ, ನಾವು ಕೇವಲ ಮಾರ್ಟಿನ್ ಲೂಥರ್‌ರ ಮೂಲತತ್ವಗಳೊಂದಿಗೆ ನಿಲ್ಲುವುದು ಸರಿಯಲ್ಲ. ಇದಕ್ಕೆ ಕಾರಣ, ಜಾನ್ ವೆಸ್ಲಿಯ ಮೂಲಕ ದೇವರು ಕ್ರೈಸ್ತಸಭೆಗೆ ತನ್ನ ಸತ್ಯಾಂಶಗಳಲ್ಲಿ ಇನ್ನೂ ಹೆಚ್ಚಿನದ್ದನ್ನು ಕೊಟ್ಟಿದ್ದರು. ಹಾಗಾಗಿ ಈಗ ನಾವು ಆ ಉನ್ನತ ಸತ್ಯಗಳಿಗಾಗಿ ಜಾನ್ ವೆಸ್ಲಿಯೊಂದಿಗೆ ನಿಲ್ಲಬೇಕಾಗುತ್ತಿತ್ತು. ನಾವು ಹಾಗೆ ಮಾಡದಿದ್ದರೆ ಆ ಕಾಲದ ’ಪವಿತ್ರಾತ್ಮನ ಅಲೆಯೊಂದಿಗೆ’ ಮುನ್ನಡೆಯದೆ ಉಳಿದುಕೊಳ್ಳುತ್ತಿದ್ದೆವು.

20ನೇ ಶತಮಾನದ ಆರಂಭದಲ್ಲಿ, ಪವಿತ್ರಾತ್ಮನ ದೀಕ್ಷಾಸ್ನಾನಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದ ಪೆಂತಕೋಸ್ತ ಆಂದೋಲನದೊಂದಿಗೆ ಪವಿತ್ರಾತ್ಮನು ಹೋಗಲು ಆರಂಭಿಸಿದನು. ಆದರೆ ಈಗಿನ ಸಮಯದಲ್ಲಿ ಕರ್ತನ ಆತ್ಮನು ದೇವಜನರನ್ನು ಇನ್ನೂ ಮುಂದಿನ ಹಂತಕ್ಕೆ - ಜಯದ ಜೀವಿತಕ್ಕೆ ಮತ್ತು ಪಾಪವನ್ನು ಸೋಲಿಸುವುದಕ್ಕೆ ನಡೆಸುತ್ತಿದ್ದಾನೆ. ಹಾಗಾಗಿ ನಾವೆಲ್ಲರೂ ಪವಿತ್ರಾತ್ಮನ ಪ್ರಸ್ತುತ ಮುನ್ನಡೆಯ ದಿಕ್ಕಿನಲ್ಲಿ ಚಲಿಸಬೇಕಿದೆ. ಹಾಗಿದ್ದಲ್ಲಿ ದೇವರಾತ್ಮನ ಪ್ರಸ್ತುತ ಮುನ್ನಡೆಯೊಂದಿಗೆ ಚಲಿಸುವ ನಿರ್ಧಾರವನ್ನು ಕೈಗೊಂಡಿರುವ ಜನರು ದೇವರ ಪ್ರವಾದಿಯೊಂದಿಗೆ ನಿಲ್ಲುತ್ತಾರೆ ಮತ್ತು "ಧಾರ್ಮಿಕ ಕ್ರೈಸ್ತರ ಗುಂಪು" ಎಂಬ ಜನಪ್ರಿಯ ಸ್ಥಳವನ್ನು ತ್ಯಜಿಸಿ, ನಿಂದೆಯನ್ನು ತಾಳಿಕೊಳ್ಳಲು ಸಿದ್ಧರಾಗಿರುತ್ತಾರೆ.

ಹಿಂದಿನ ತಲೆಮಾರುಗಳಲ್ಲಿ ದೇವರು ಒಂದು ಹೊಸ ದಾರಿಯಲ್ಲಿ ಸಾಗಿದ ಸಂದರ್ಭಗಳಲ್ಲಿ, ಆ ಹೊಸ ಆಂದೋಲನವನ್ನು ನಾಶಗೊಳಿಸಲು ಬಯಸಿದ ಮಿಕ್ಕ ಕ್ರೈಸ್ತರ ತೀವ್ರ ಟೀಕೆಗಳು ಯಾವಾಗಲೂ ಇರುತ್ತಿದ್ದವು. ದೇವರ ಹೊಸ ಚಾಲನೆಯನ್ನು ನಾಶಗೊಳಿಸುವ ಉದ್ದೇಶದ ಜನರು ಬಹಳ ಸಾಮಾನ್ಯವಾಗಿ ಬಳಸಿಕೊಳ್ಳುತ್ತಿದ್ದ ವಿಧಾನ, ಅದನ್ನು "ಸುಳ್ಳು ಬೋಧನೆ" ಎಂದು ಕರೆಯುವುದು. ದುರದೃಷ್ಟವಶಾತ್, ಹೆಚ್ಚಿನ ಕ್ರೈಸ್ತರಲ್ಲಿ ದೊಡ್ಡ ಪಾಪಗಳಿಗೆ ಗುರಿಯಾಗುವ ಭಯಕ್ಕಿಂತಲೂ ಹೆಚ್ಚಾಗಿ, ಸುಳ್ಳು ಸಿದ್ಧಾಂತಗಳ ಕುರಿತಾದ ಭಯವಿದೆ!! ಹಾಗಾಗಿ ನಮ್ಮ ದಿನದಲ್ಲಿ ಕೆಲವು ಸತ್ಯವೇದ ಶಿಕ್ಷಣ ಸಂಸ್ಥೆಗಳು ತಮ್ಮ ಪಠ್ಯಕ್ರಮದಲ್ಲಿ, "CFC ಸಭೆಗಳೆಂಬ ತಪ್ಪು ಧಾರ್ಮಿಕ ಸಿದ್ಧಾಂತಗಳ ಪಂಗಡ" ಎಂಬ ವಿಷಯವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ!!

ಹಿಂದಿನ ವರ್ಷಗಳಲ್ಲಿ, ಕ್ರೈಸ್ತತ್ವದಲ್ಲಿ ಒಬ್ಬ ನಿಜವಾದ ಪ್ರವಾದಿಯು ಎದ್ದು ಬಂದು ದೇವರ ಒಂದು ಹೊಸ ಚಾಲನೆಯನ್ನು ಆರಂಭಿಸಿದ ಪ್ರತಿಯೊಂದು ಸಂದರ್ಭದಲ್ಲಿ, ಯಾವಾಗಲೂ ಆ ಆಂದೋಲನವು "ಒಂದು ತಪ್ಪು ಧಾರ್ಮಿಕ ಸಿದ್ಧಾಂತಗಳ ಪಂಗಡ" ಎಂಬುದಾಗಿ ಪರಿಗಣಿಸಲ್ಪಟ್ಟಿತು. ಹಾಗಾಗಿ ಈ ದಿನವೂ ಸಹ ಕ್ರೈಸ್ತತ್ವದಲ್ಲಿ ಇದೇ ಸಂಗತಿಯು ನಡೆಯುತ್ತಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಅಪೊಸ್ತಲ ಯೋಹಾನನ ಕಾಲದಲ್ಲಿ - ಕ್ರಿ.ಶ. 100ರಲ್ಲಿ - ಕ್ರೈಸ್ತ ನಂಬಿಕೆಯ ಕುರಿತಾಗಿ ಬರೆಯಲ್ಪಟ್ಟ ಒಂದು ಪುಸ್ತಕದಲ್ಲಿ, ’ಒಬ್ಬ ಸುಳ್ಳು ಪ್ರವಾದಿಯ ಮೂರು ಗುರುತುಗಳನ್ನು’ (ಹೊಸ ಒಡಂಬಡಿಕೆಗೆ ಸಂಬಂಧಿಸಿದಂತೆ) ವಿವರಿಸಲಾಗಿದೆ.

ಮೊದಲನೆಯದಾಗಿ, ಅಲ್ಲಿ ಹೇಳಿರುವ ಪ್ರಕಾರ, ಒಬ್ಬ ಸುಳ್ಳು ಪ್ರವಾದಿಯು ತನ್ನ ಕೇಳುಗರಿಂದ ಯಾವಾಗಲೂ ಹಣವನ್ನು ನಿರೀಕ್ಷಿಸುತ್ತಾನೆ. 1ಕೊರಿಂಥದವರಿಗೆ ಮತ್ತು 2ಕೊರಿಂಥದವರಿಗೆ ಪತ್ರಿಕೆಗಳಲ್ಲಿ, ಪೌಲನು ಸಭೆಯಲ್ಲಿ ಹಣವನ್ನು ಸಂಗ್ರಹಿಸುವುದನ್ನು ಪ್ರಸ್ತಾಪಿಸಿದಾಗ, ಅದು ಯಾವಾಗಲೂ ಬಡ ವಿಶ್ವಾಸಿಗಳಿಗೆ ಸಹಾಯ ಮಾಡುವ ಸಲುವಾಗಿ ಆಗಿತ್ತು - ಮತ್ತು ಎಂದಿಗೂ ಆತನ ಸ್ವಂತಕ್ಕಾಗಿ ಆಗಿರಲಿಲ್ಲ. ನೀವು ದೇವರನ್ನು ಮತ್ತು ಧನವನ್ನು ಒಟ್ಟಿಗೆ ಸೇವೆಮಾಡಲಾರಿರಿ, ಎಂದು ಕರ್ತನಾದ ಯೇಸುವು ಸ್ಪಷ್ಟಪಡಿಸಿದರು. ಪ್ರತಿಯೊಬ್ಬ ಕ್ರೈಸ್ತನು ತಾನು ಯಾರ ಸೇವೆ ಮಾಡಬೇಕೆಂದು ಆರಿಸಿಕೊಳ್ಳಬೇಕು - ದೇವರನ್ನು ಅಥವಾ ಹಣವನ್ನು. ಆತನು ಒಂದನ್ನು ಪೂರ್ಣ ಹೃದಯದಿಂದ ಸೇವೆ ಮಾಡಬೇಕು ಮತ್ತು ಇನ್ನೊಂದರ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ಕ್ರೈಸ್ತ ಬೋಧಕರು ನಿರಂತರವಾಗಿ ಜನರಿಂದ ಹಣವನ್ನು ಕೇಳುವುದರ ಮೂಲಕ, ಭಾರತ ದೇಶದಲ್ಲಿ ದೇವರ ನಾಮವು ಎಷ್ಟು ಹೀನೈಸಲ್ಪಟ್ಟಿದೆಯೆಂದು ನಾವೆಲ್ಲರೂ ತಿಳಿದಿದ್ದೇವೆ. ಭಾರತದಲ್ಲಿ ಅನೇಕ ಬೋಧಕರು ಸುವಾರ್ತಾ ಬೋಧನೆಯ ಹೆಸರಿನಲ್ಲಿ ತಮ್ಮ ಸ್ವಂತಕ್ಕಾಗಿ ಅಪಾರ ಸಂಪತ್ತನ್ನು ಗಳಿಸಿದ್ದಾರೆ. ಇಂದು ಅವರು ಗಳಿಸುವ ಸಂಪಾದನೆ, ಒಂದು ವೇಳೆ ಅವರು ಲೌಕಿಕ ನೌಕರಿಯ ಮೂಲಕ ಗಳಿಸಬಹುದಾಗಿದ್ದ ಒಟ್ಟು ಸಂಪಾದನೆಗಿಂತ ಎಷ್ಟೋ ಪಟ್ಟು ಹೆಚ್ಚಾಗಿದೆ. ಇಂತಹ ಬೋಧಕರು ಬೋಧಿಸುವ ಸುವಾರ್ತೆಯಲ್ಲಿ ಬಹಳ ಗಂಭೀರವಾದ ಯಾವುದೋ ದೋಷವಿದೆಯೆಂದು ಇವೆಲ್ಲಾ ಸಂಗತಿಗಳು ಸ್ಪಷ್ಟವಾಗಿ ಸಾಬೀತುಪಡಿಸುತ್ತವೆ. ಅವರು ಹೇಳಿಕೊಳ್ಳುವುದು ಏನೆಂದರೆ, ಭೂಮ್ಯಾಕಾಶಗಳ ರಾಜನ ಮಕ್ಕಳಾದ ಅವರು ಈ ಲೋಕದ ರಾಜರಂತೆ ಜೀವಿಸಬೇಕು, ಎಂಬುದಾಗಿ!! ಈ ವಂಚನೆಯಿಂದ ಉಂಟಾಗಿರುವ ಕೆಟ್ಟ ವಾಸನೆಯು ಭಾರತ ದೇಶದಲ್ಲಿ ಕ್ರಿಸ್ತನ ಸಾಕ್ಷಿಯನ್ನು ಕೆಡಿಸಿಬಿಟ್ಟಿದೆ

ಮೇಲೆ ಉಲ್ಲೇಖಿಸಿದ ಪುಸ್ತಕದಲ್ಲಿ ಉಲ್ಲೇಖಿಸಿರುವ ಎರಡನೆಯ ಗುರುತು, ಒಬ್ಬ ನಿಜವಾದ ಪ್ರವಾದಿ (ಹೊಸ ಒಡಂಬಡಿಕೆಯ ಕಾಲದಲ್ಲಿ) ತನ್ನ ಸಂದೇಶವನ್ನು ಬೋಧಿಸುವುದಕ್ಕಾಗಿ ಯಾವಾಗಲೂ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಚಲಿಸುತ್ತಿರುತ್ತಾನೆ ಮತ್ತು ಒಂದೇ ಸ್ಥಳದಲ್ಲಿ ನೆಲೆಸುವುದಿಲ್ಲ. ಆದರೆ ಸುಳ್ಳು ಪ್ರವಾದಿಗಳು ಒಂದೇ ಸ್ಥಳದಲ್ಲಿ ಆರಾಮವಾಗಿ ನೆಲೆಸುತ್ತಾರೆ. ಜನರು ಯೇಸುವನ್ನು ತಮ್ಮೊಂದಿಗೆ ಇರಲು ಒತ್ತಾಯಿಸಿದ ಒಂದು ಸಂದರ್ಭದಲ್ಲಿ, ತಾನು ದೇವರ ಸುವಾರ್ತೆಯನ್ನು ಸಾರಲಿಕ್ಕಾಗಿ ಬೇರೆ ಊರುಗಳಿಗೂ ಹೋಗಬೇಕೆಂದು ಆತನು ಹೇಳಿದನು (ಲೂಕ. 4:42,43). ಯೇಸುವು ಯಾವಾಗಲೂ "ಉಪಕಾರಗಳನ್ನು ಮಾಡುತ್ತಾ ಸಂಚರಿಸುತ್ತಿದ್ದನು," ಎಂದು ಪೇತ್ರನು ಹೇಳಿದನು (ಅ.ಕೃ. 10:38). ಪ್ರತಿಯೊಬ್ಬ ಯಥಾರ್ಥನಾದ ಪ್ರವಾದಿಯು ಈ ರೀತಿಯಾಗಿ ಇರುತ್ತಾನೆ. ಕರ್ತನು ಆತನಿಗೆ ಕೊಟ್ಟಂತ ಭಾರದ ನಿಮಿತ್ತ, ಆತನು ಆ ಭಾರವನ್ನು ಜನರಿಗೆ ಸಾರುತ್ತಾ ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಾನೆ. ಒಬ್ಬ ಸುಳ್ಳು ಪ್ರವಾದಿಗೆ ಇಂತಹ ಯಾವ ಭಾರವೂ ಇರುವುದಿಲ್ಲ. ಅವನು ಒಂದು ಜಾಗದಲ್ಲಿ ನೆಲೆಸುತ್ತಾನೆ ಮತ್ತು ಲೋಕದ ದೃಷ್ಟಿಯಲ್ಲಿ ದೊಡ್ಡದಾಗಿ ಕಾಣುವಂತೆ, ತನ್ನ ಸೇವೆಯ ಪ್ರಧಾನ ಕೇಂದ್ರವನ್ನು ಸ್ಥಾಪಿಸುತ್ತಾನೆ! ಆದರೆ ಒಬ್ಬ ನಿಜವಾದ ಪ್ರವಾದಿಯು, "ನನ್ನ ರಾಜ್ಯವು ಈ ಲೋಕದ್ದಲ್ಲ," ಎಂದು ನುಡಿದ ತನ್ನ ಕರ್ತನನ್ನು ಹಿಂಬಾಲಿಸುತ್ತಾನೆ (ಯೋಹಾ. 18:36).

ಒಬ್ಬ ಸುಳ್ಳು ಪ್ರವಾದಿಯ ಮೂರನೆಯ ಗುರುತು (ಆ ಪುಸ್ತಕದಲ್ಲಿ ಹೇಳಿರುವಂತೆ) ಏನೆಂದರೆ, ಆತನ ಮಾತು ಹಾಗೂ ಆತನ ನಡತೆಯ ನಡುವೆ ಬಹಳ ದೊಡ್ಡ ಅಂತರವಿರುತ್ತದೆ - ಅಂದರೆ, ಆತನ ಬೋಧನೆ ಮತ್ತು ಆತನ ಜೀವನ ಶೈಲಿಯ ನಡುವಿನ ವ್ಯತ್ಯಾಸ. ಯೇಸುವಿನ ಜೀವಿತವು, ಆತನ ಮಾತನ್ನು ಹೋಲುತ್ತಿತ್ತು - ಇವೆರಡು ಜೊತೆಯಾಗಿ ಸಾಗಿದವು. ಅಪೋಸ್ತಲರ ಕೃತ್ಯಗಳು 1:1ರಲ್ಲಿ, ಮೊದಲು ಯೇಸುವು ಮಾಡಿದನು, ಅನಂತರ ಮಾತ್ರವೇ ತಾನು ಮಾಡಿದ್ದರ ಬಗ್ಗೆ ಉಪದೇಶಿಸಿದನು, ಎಂಬುದಾಗಿ ನಾವು ಓದುತ್ತೇವೆ. ಒಬ್ಬ ನಿಜ ಪ್ರವಾದಿಯ ವೈಯಕ್ತಿಕ ಜೀವನ ವಿಧಾನವು ಆತನು ಸಾರುವ ಸಂದೇಶಕ್ಕೆ ಒಂದು ಬಲವಾದ ಸಾಕ್ಷಿಯಾಗಿರುತ್ತದೆ. ಒಬ್ಬ ನಿಜವಾದ ಪ್ರವಾದಿಯು ತನ್ನ ಜೀವನದಲ್ಲಿ ಯಾವುದೋ ಸೋಲನ್ನು (ಪಾಪವನ್ನು) ಕಂಡುಕೊಂಡಾಗ, ಆತನಿಗೆ ಅದರಿಂದ ಬಹಳ ಬೇಸರ ಉಂಟಾಗುತ್ತದೆ. ಪ್ರವಾದಿಯಾದ ಯೆಶಾಯನು ಒಂದು ಸಲ, "ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ! ನಾಶವಾದೆನಲ್ಲಾ; ನಾನು ಹೊಲಸು ತುಟಿಯವನು; ... ನನ್ನ ಕಣ್ಣುಗಳು ರಾಜಾಧಿರಾಜನನ್ನು ಕಂಡವು," ಎಂದು ಕೂಗಿಕೊಂಡನು (ಯೆಶಾಯನು 6:5). ಒಂದು ಸಲ ಪೌಲನು, "ಅಯ್ಯೋ, ನಾನು ಎಂಥ ದುರಾವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವರು ಯಾರು?" ಎಂದು ಉದ್ಗರಿಸಿದನು (ರೋಮಾ. 7:24). ಯೇಸುವು ನಡೆದ ಹೆಜ್ಜೆಗಳ ದಾರಿಯನ್ನು ಹಿಂಬಾಲಿಸುವಂತ ಪ್ರತಿಯೊಬ್ಬ ನಿಜ ಪ್ರವಾದಿಯು ಈ ರೀತಿಯಾಗಿ ಶೋಕಿಸುತ್ತಾನೆ ಮತ್ತು ತಾನು ಬೋಧಿಸುವುದನ್ನು ನಿಖರವಾಗಿ ತನ್ನ ಜೀವನದಲ್ಲಿ ಜೀವಿಸಬೇಕೆಂಬ ಹಂಬಲವನ್ನು ತನ್ನ ಹೃದಯದಲ್ಲಿ ಹೊಂದಿರುತ್ತಾನೆ. ಆದರೆ ಒಬ್ಬ ಸುಳ್ಳು ಪ್ರವಾದಿಗೆ ತನ್ನ ಜೀವನ ಶೈಲಿಯು ತಾನು ಮಾಡುವ ಬೋಧನೆಗೆ ಸಂಪೂರ್ಣ ವ್ಯತ್ಯಾಸವುಳ್ಳದ್ದು ಎಂಬುದರಿಂದ ಯಾವುದೇ ಗಲಿಬಿಲಿ ಉಂಟಾಗುವುದಿಲ್ಲ. ಒಬ್ಬ ಸುಳ್ಳು ಪ್ರವಾದಿಯು ಜನರಿಗೆ ಹೇಳುವುದರ ಸಾರಾಂಶ ಏನೆಂದರೆ, "ನನಗೆ ಸತ್ಯವೇದವು ಬೋಧಿಸುವುದಕ್ಕಾಗಿ ಇದೆ - ಮತ್ತು ನಿಮ್ಮೆಲ್ಲರಿಗೆ ಅದು ಅಭ್ಯಾಸಿಸುವುದಕ್ಕಾಗಿ ಇದೆ"!

ಅಂತಿಮವಾಗಿ: ಒಬ್ಬ ಪ್ರವಾದಿಯು ಕೊನೆಯ ವರೆಗೆ ದೇವರಿಗೆ ನಂಬಿಗಸ್ತನಾಗಿ ಇದ್ದಾಗಲೂ ಸಹ, ಅವನ ಆಂದೋಲನವು ಸಮಯಾಂತರದಲ್ಲಿ ಕಳಪೆಯಾಗಿ ಕುಂದಿಹೋಗುವ ಸಾಧ್ಯತೆಯಿದೆ, ಏಕೆಂದರೆ ಆರಂಭದಲ್ಲಿ ಆತನ ಆಂದೋಲನಕ್ಕೆ ಬಹಳ ಯಥಾರ್ಥರಾಗಿ ಸೇರಿದ್ದ ಜನರು, ನಿಧಾನವಾಗಿ ಆತ್ಮಿಕ ಹೊಂದಾಣಿಕೆಯಲ್ಲಿ ತೊಡಗುತ್ತಾರೆ. ದೇವರ ಆಂದೋಲನದ ನಾಯಕತ್ವ ವಹಿಸುವ ಪ್ರವಾದಿಯು ಇದನ್ನು ಅರಿತಿರುತ್ತಾನೆ ಮತ್ತು ಸಾಧ್ಯವಿದ್ದಷ್ಟು ಮಟ್ಟಿಗೆ ಅಂತಹ "ಬೀಳುವಿಕೆಯನ್ನು" ತಡೆಯುವ ಭಾರವನ್ನು ಹೊಂದಿರುತ್ತಾನೆ. ಆದರೆ ಈ ಪತನ ಅಥವಾ ಬೀಳುವಿಕೆಯನ್ನು ತಡೆಯಲು ಆತನು ಅಸಮರ್ಥನಾಗಬಹುದು. ಪೌಲನ ಸಹಕಾರಿಯಾಗಿದ್ದ ದೇಮನು ಆತನನ್ನು ಬಿಟ್ಟುಹೋದನೆಂದು ನಾವು ಓದುತ್ತೇವೆ (2 ತಿಮೊಥೆಯನಿಗೆ 4:10). ದೇಮನು ಪೌಲನನ್ನು ಬಿಟ್ಟುಹೋಗಲು ಕಾರಣವೇನು? ಪೌಲನಿಗೆ ತನ್ನ ಕಾರ್ಯವು ಪರಿಶುದ್ಧತೆಯಲ್ಲಿ ಮುಂದುವರಿಯಬೇಕೆಂಬ ದೊಡ್ಡ ಭಾರವಿದ್ದುದು ಇದಕ್ಕೆ ಕಾರಣವಾಗಿರಬಹುದೇ? ಹೊಂದಾಣಿಕೆಯ ಮನಸ್ಸಿನ ದೇಮನಿಗೆ ಇದು ಹೊರಲಾರದ ಭಾರವಾಗಿತ್ತು. ಮುಂದೆ, ಆಸ್ಯಸೀಮೆಯ ಸಭೆಗಳಲ್ಲಿನ ಇನ್ನೂ ಬಹಳ ಮಂದಿ ಪೌಲನನ್ನು ಕೈಬಿಟ್ಟರು (2 ತಿಮೊಥೆಯನಿಗೆ 1:15). ಒಬ್ಬ ನಿಜ ಪ್ರವಾದಿಯ ಮೂಲಕ ದೇವರು ಕೈಗೊಳ್ಳುವ ಆಂದೋಲನಕ್ಕೆ ಸೇರಿಕೊಳ್ಳುವ ಜನರು, ಅನಂತರ ಆ ನಾಯಕನನ್ನು ಬಿಟ್ಟುಹೋಗುವುದೇಕೆ? ಇದಕ್ಕೆ ಕಾರಣ, ಆ ಪ್ರವಾದಿ ಲೋಕದ ಹೊಂದಾಣಿಕೆಯಿಂದ ಸಂಪೂರ್ಣವಾಗಿ ದೂರವಿದ್ದು, ದೇವರನ್ನು ಮಾತ್ರ ಮೆಚ್ಚಿಸಲು ಬಯಸುತ್ತಾನೆ, ಅದಕ್ಕಾಗಿ ಯಾವುದೇ ಬೆಲೆಯನ್ನು ತೆರಲು ಸಿದ್ಧನಾಗಿರುತ್ತಾನೆ, ಮತ್ತು ತನ್ನ ಹಿಂಬಾಲಕರಲ್ಲಿ ಯಾರನ್ನೂ ಅಥವಾ ಇತರ ಯಾವ ಮನುಷ್ಯನನ್ನೂ ಮೆಚ್ಚಿಸಲು ಪ್ರಯತ್ನಿಸುವುದಿಲ್ಲ. ಮುಂದೆ ಅವನ ಹಿಂಬಾಲಕರಲ್ಲಿ ಅನೇಕರು ಬಿಟ್ಟುಹೋಗುತ್ತಾರೆ, ಏಕೆಂದರೆ ಅವರಿಗೆ ಅದೇ ಭಾರೀ ಬೆಲೆಯನ್ನು ಪಾವತಿಸುವ ಮನಸ್ಸಿರುವುದಿಲ್ಲ.

ಒಬ್ಬ ನಿಜವಾದ ಪ್ರವಾದಿಯು ದೊಡ್ಡ ಕೂಟಗಳನ್ನು ಏರ್ಪಡಿಸಲು ಎಂದಿಗೂ ಶ್ರಮಿಸುವುದಿಲ್ಲ - ಅದಲ್ಲದೆ ಆತನು ಎಲ್ಲರಿಗೆ ಒಪ್ಪಿಗೆಯಾಗುವಂತೆ ಬೋಧಿಸುವುದಿಲ್ಲ. ಇಂತಹ ರಾಜತಾಂತ್ರಿಕ ಆಲೋಚನೆ ಮಾಡುವವರು ದೊಡ್ಡ ಕೂಟಗಳನ್ನು ಏರ್ಪಡಿಸುತ್ತಾರೆ - ಮತ್ತು ಯಾರೂ ತಮ್ಮ ಗುಂಪನ್ನು ಬಿಟ್ಟುಹೋಗಬಾರದೆಂದು ಅವರು ಬಯಸುತ್ತಾರೆ. ಯೇಸುವು ಎಂದಿಗೂ ಈ ರೀತಿ ಇರಲಿಲ್ಲ. ಆತನನ್ನು ಬಿಟ್ಟುಹೋಗಲು ಬಯಸುವವರು ಯಾವುದೇ ವೇಳೆಯಲ್ಲಿ ಹೋಗಬಹುದೆಂದು ಯಾವಾಗಲೂ ಆತನು ಜನರಿಗೆ ಹೇಳುತ್ತಿದ್ದನು. ಒಬ್ಬ ನಿಜ ಪ್ರವಾದಿಯು ಇದನ್ನೇ ಮಾಡುತ್ತಾನೆ. ಅವನಿಗಿರುವ ಭಾರ, ಆಂದೋಲನದ ಗುಣಮಟ್ಟವು ಯಾವತ್ತೂ ಕುಗ್ಗಬಾರದು ಎಂದಾಗಿದೆ. ಆತನ ರಾಜ್ಯವು ಈ ಲೋಕದ್ದಲ್ಲ - ಹಾಗಾಗಿ ಅವನು ಯಾವುದೇ ರಾಜ್ಯವನ್ನು ಕಾಪಾಡಬೇಕಿಲ್ಲ. ನಮ್ಮ ಕಾಲಮಾನದ ನಿಜವಾದ ಪ್ರವಾದಿಗಳನ್ನು ಕಂಡುಹಿಡಿಯುವದಕ್ಕೆ ಇದು ಇನ್ನೊಂದು ಗುರುತಾಗಿದೆ.

ನಾವು ಒಬ್ಬ ನಿಜ ಪ್ರವಾದಿಯನ್ನು ಸ್ವೀಕರಿಸುವುದು, ಯಥಾರ್ಥವಾಗಿ ನಾವು ಸ್ವತಃ ಯೇಸುವನ್ನು ಸ್ವೀಕರಿಸಿದಂತೆ, ಎಂದು ಯೇಸುವು ಹೇಳಿದ ಮಾತನ್ನು ಜ್ಞಾಪಕದಲ್ಲಿ ಇರಿಸಿಕೊಳ್ಳಿರಿ. ಹಾಗಾಗಿ ನಾವು ನಮ್ಮ ಕಾಲದ ನಿಜ ಪ್ರವಾದಿಗಳನ್ನು ಗುರುತಿಸಿ, ಅವರನ್ನು ಪೂರ್ಣ ಹೃದಯದಿಂದ ಸ್ವೀಕರಿಸಬೇಕು. ಯೇಸುವು ಇನ್ನೂ ಮುಂದುವರಿದು ಹೀಗೆ ಹೇಳಿದರು, "ಒಬ್ಬ ನಿಜವಾದ ಪ್ರವಾದಿಯನ್ನು ಸೇರಿಸಿಕೊಳ್ಳುವವನು ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು (ಮತ್ತಾ. 10:40,41).

ನಮ್ಮಲ್ಲಿ ಪ್ರತಿಯೊಬ್ಬರಿಗೆ ಪ್ರವಾದಿಗಳಾಗುವ ಕರೆ ಕೊಡಲ್ಪಟ್ಟಿಲ್ಲ. ಆದರೆ ನಾವು ಒಬ್ಬ ಯಥಾರ್ಥ ಪ್ರವಾದಿಯನ್ನು ಕಂಡಾಗ, ಆತನ ಜೊತೆಯಲ್ಲಿ ನಾವು ನಿಂತುಕೊಳ್ಳಬೇಕು ಮತ್ತು ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಂಡು, ನಾವು ಪಾಳಯದ ಆಚೆ ಆತನ ಬಳಿಗೆ ಹೊರಟುಹೋಗಬೇಕು (ಇಬ್ರಿಯರಿಗೆ 13:13). ಹಾಗೆ ಮಾಡಿದರೆ ನಾವೂ ಸಹ ಒಬ್ಬ ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವೆವು.

ನಾವು ಇವೆಲ್ಲಾ ಸತ್ಯಾಂಶಗಳನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ಜೀವಿತಗಳಲ್ಲಿ ಅವುಗಳನ್ನು ಯೋಗ್ಯವಾದ ರೀತಿಯಲ್ಲಿ ಪಾಲಿಸೋಣ. ಹೀಗೆ ಮಾಡುವುದರಿಂದ ನಾವು ನಮ್ಮನ್ನು ವಂಚನೆಯ ದಾರಿಯಿಂದ ಕಾಪಾಡಿಕೊಳ್ಳುವುದು ಅಲ್ಲದೆ, ನಮ್ಮ ಸುತ್ತಲಿರುವ ಇತರ ಅನೇಕರನ್ನೂ ರಕ್ಷಣೆಗೆ ನಡೆಸುತ್ತೇವೆ.

ಹೀಗೆಯೇ ಆಗಲಿ.

"ಕಿವಿಯುಳ್ಳವನು ಕೇಳಲಿ"