WFTW Body: 

ನಾವು 1ಕೊರಿಂಥದವರಿಗೆ 12:27,28ರಲ್ಲಿ, "ನೀವು ಕ್ರಿಸ್ತನ ದೇಹವು, ಮತ್ತು ಒಬ್ಬೊಬ್ಬರಾಗಿ ಅದಕ್ಕೆ ಅಂಗಗಳಾಗಿದ್ದೀರಿ. ದೇವರು ತನ್ನ ಸಭೆಯಲ್ಲಿ ಮೊದಲನೇದಾಗಿ ಅಪೊಸ್ತಲರನ್ನು, ಎರಡನೇದಾಗಿ ಪ್ರವಾದಿಗಳನ್ನು, ಮೂರನೇದಾಗಿ ಉಪದೇಶಕರನ್ನು ಇಟ್ಟಿದ್ದಾರೆ. ಆ ಮೇಲೆ ಮಹಾತ್ಕಾರ್ಯ ಮಾಡುವ ಶಕ್ತಿಯನ್ನೂ, ನಾನಾ ರೋಗಗಳನ್ನು ವಾಸಿಮಾಡುವ ವರವನ್ನೂ, ಪರಸಹಾಯ ಮಾಡುವ ಗುಣವನ್ನೂ, ಕಾರ್ಯಗಳನ್ನು ನಿರ್ವಹಿಸುವ ಜ್ಞಾನವನ್ನೂ, ವಿವಿಧ ವಾಣಿಗಳನ್ನಾಡುವ ವರವನ್ನೂ ಅವರವರಿಗೆ ಕೊಟ್ಟಿದ್ದಾರೆ".

ಮೇಲಿನ ವಚನಗಳಲ್ಲಿ ಉಲ್ಲೇಖಿಸಲಾಗಿರುವ ಪ್ರತಿಯೊಬ್ಬ ವ್ಯಕ್ತಿಯೂ ದೇವರ ಸಭೆಯನ್ನು ಕಟ್ಟಲು ಸಹಾಯಕನಾಗುವಂತೆ, ದೇವರಿಂದ ಯಾವುದೋ ಒಂದು ದೈವಿಕ ಸಾಮರ್ಥ್ಯವನ್ನು ಹೊಂದಿದ್ದಾನೆ. ಇವರಲ್ಲಿ ಅಪೊಸ್ತಲರು ಮತ್ತು ಪ್ರವಾದಿಗಳು ಮತ್ತು ಮಹತ್ಕಾರ್ಯಗಳನ್ನು ಮಾಡುವಂತ ಮತ್ತು ಗುಣಪಡಿಸುವಂತ ದೈವಿಕ ಸಾಮರ್ಥ್ಯವನ್ನು ಹೊಂದಿರುವವರ ವರಗಳು ಎಲ್ಲರಿಗೂ ಕಾಣಿಸುತ್ತವೆ - ಮತ್ತು ಅವರಿಗೆ ಈ ಸಾಮರ್ಥ್ಯವನ್ನು ದೇವರೇ ಕೊಟ್ಟಿದ್ದಾರೆ. ಈ ಸತ್ಯಾಂಶವು ಇಲ್ಲಿ ನಮೂದಿಸಿರುವ ಇತರರಿಗೂ ಅನ್ವಯಿಸಬೇಕು - ಸಭೆಗಳಲ್ಲಿ ಇರುವಂತ ಶಿಕ್ಷಕರು, ಸಹಾಯಕರು ಮತ್ತು ಆಡಳಿತ ನಡೆಸುವವರಿಗೆ - ಅವರವರ ಕಾರ್ಯಕ್ಕಾಗಿ ಬೇಕಾಗುವ ದೈವಿಕ ಸಾಮರ್ಥ್ಯವನ್ನು ನಿಜವಾಗಿ ದೇವರೇ ಕೊಡುತ್ತಾರೆ; ಹಾಗಾಗಿ ಇವರೆಲ್ಲರೂ ಅವರವರ ಕಾರ್ಯಕ್ಷೇತ್ರದಲ್ಲಿ ಕೇವಲ ಸ್ವಾಭಾವಿಕ ಸಾಮರ್ಥ್ಯವನ್ನು ಹೊಂದಿರುವಂತ ಜನರಲ್ಲ.

ಒಂದು ಉದಾಹರಣೆಗಾಗಿ, ಸಭೆಯಲ್ಲಿ "ಸಹಾಯಕರು" ಎಂಬ ಹೆಸರನ್ನು ಹೊಂದಿ ದೇವರಿಂದ ನೇಮಿಸಲ್ಪಟ್ಟವರ ಬಗ್ಗೆ ಆಲೋಚಿಸೋಣ. ಇವರು ಸಭೆಯ ನೆಲವನ್ನು ಸ್ವಚ್ಛಗೊಳಿಸುವುದು ಅಥವಾ ಶೌಚಾಲಯಗಳನ್ನು ಶುಚಿಗೊಳಿಸುವುದು, ಇತ್ಯಾದಿಗಳನ್ನು ಮಾಡಲು ಮುಂದೆ ಬರುವ ಸ್ವಯಂ ಸೇವಕರಲ್ಲ. ಈ ಮಾಮೂಲಿ ಕೆಲಸಗಳನ್ನು ಮಾಡಲು ಸಿದ್ಧರಿರುವ ಇಂತಹ ಸ್ವಯಂಸೇವಕರು ಪ್ರತಿಯೊಂದು ಸಭೆಯಲ್ಲೂ ನಮಗೆ ಬಹಳ ಅವಶ್ಯವಾಗಿ ಬೇಕು. ಆದರೆ ಇಂತಹ ಕೆಲಸಗಳನ್ನು ಯಾರಾದರೂ ನಿರ್ವಹಿಸಬಹುದು ಮತ್ತು ಇದಕ್ಕಾಗಿ ಯಾವುದೇ ದೈವಿಕ ವರವು ಬೇಕಿಲ್ಲ. ಆದರೆ ಮೇಲಿನ ವಚನದಲ್ಲಿ ನಮೂದಿಸಿರುವ ’ಸಹಾಯಕರು’ ಇತರರಿಗೆ ಸಹಾಯ ಒದಗಿಸುವುದಕ್ಕಾಗಿ ದೇವರಿಂದ ದೈವಿಕ ಸಾಮರ್ಥ್ಯವನ್ನು ಪಡೆದಿರುವ ಜನರು ಆಗಿದ್ದಾರೆ. ಪ್ರತಿಯೊಂದು ಸಭೆಯಲ್ಲಿ ಇಂತಹ ಜನರ ಅವಶ್ಯಕತೆ ಬಹಳ ಅಧಿಕವಾಗಿದೆ - ಮತ್ತು ನಾವೆಲ್ಲರೂ ದೇವರಿಂದ ಇಂತಹ ಸೇವೆಯ ಸಾಮರ್ಥ್ಯವನ್ನು ಪಡೆಯಲು ಉತ್ಸುಕರಾಗಿರಬೇಕು. ಇಂತಹ "ಸಹಾಯಕರು" ಯಾರೆಂದರೆ, ಸಭೆಗಳಲ್ಲಿ ಬಲಹೀನರು ಮತ್ತು ಕೊರತೆಯುಳ್ಳವರನ್ನು "ಆತ್ಮಿಕವಾಗಿ ಬಲಪಡಿಸಿ ಅವರಿಗೆ ಸಹಾಯವನ್ನು ಒದಗಿಸುವಂತವರು".

ಪವಿತ್ರಾತ್ಮನಿಗೆ ’ಸಹಾಯಕ’ನು ಎಂಬ ಹೆಸರು ಕೊಡಲ್ಪಟ್ಟಿದೆ (ಯೋಹಾ. 14:16) - ಮತ್ತು ಆತನು ಯಾರಿಗೂ ಕಾಣಿಸದಂತೆ ನಮಗೆ ಸಹಾಯವನ್ನು ಒದಗಿಸುತ್ತಾನೆ. ಇದೇ ರೀತಿ ಕ್ರಿಸ್ತನ ದೇಹದಲ್ಲಿರುವ ಈ "ಸಹಾಯಕರು" ಸಹ - ಸದ್ದಿಲ್ಲದೆ ಮತ್ತು ತೆರೆಯ ಹಿಂದೆ, ಯಾವುದೇ ಆಡಂಬರ ಅಥವಾ ತೋರಿಕೆ ಇಲ್ಲದೆ, ಮತ್ತು ಅದರ ಬಗ್ಗೆ ಯಾರಿಗೂ ತಿಳಿಸದೆ ಅಥವಾ ಅದಕ್ಕಾಗಿ ಯಾರಿಂದಲೂ ಹೊಗಳಿಕೆಯನ್ನು ಬಯಸದೆ - ’ಶ್ರೇಷ್ಠ ಸಹಾಯಕ’ನಾಗಿರುವ ಪವಿತ್ರಾತ್ಮನಂತೆಯೇ ಕಾರ್ಯ ನಿರ್ವಹಿಸುತ್ತಾರೆ. ಇವರು ಸಹೋದರರು ಅಥವಾ ಸಹೋದರಿಯರು ಆಗಿರಬಹುದು. ಇಂತಹ ವಿಶ್ವಾಸಿಗಳಿಗೆ ದೇವರಿಂದ ಒಂದು ವಿಶಿಷ್ಟವಾದ ವರವು ಕೊಡಲ್ಪಟ್ಟಿದೆ (ಇದು ರೋಗಿಗಳನ್ನು ಗುಣಪಡಿಸುವಷ್ಟೇ ವಿಶಿಷ್ಟವಾದ ವರವಾಗಿದೆ) - ಸಭೆಯಲ್ಲಿ ಸಂದೇಹಗಳು ಹಾಗೂ ಭಯಗಳೊಂದಿಗೆ ಹೆಣಗಾಡುತ್ತಾ, ತಮ್ಮ ಕಷ್ಟವನ್ನು ಯಾರೊಂದಿಗೂ ಹಂಚಿಕೊಳ್ಳಲಾರದೆ ಪ್ರಯಾಸ ಪಡುತ್ತಿರುವಂತ ಜನರ ಅವಶ್ಯಕತೆಗಳನ್ನು ಅರಿತುಕೊಂಡು, ಅವರಿಗೆ ಸಹಾಯ ಮಾಡುವಂಥದ್ದು ಈ ವರದ ವಿಶೇಷವಾಗಿದೆ. ಈ ವರ ಹೊಂದಿರುವಂತವರು, ತಾವು ಸಹಾಯಕ್ಕಾಗಿ ಆಹ್ವಾನಿಸಲ್ಪಡಲಿ ಎಂದು ಕಾಯುವುದಿಲ್ಲ. ಆದರೆ ಅವರು ಪವಿತ್ರಾತ್ಮನಿಂದ ಮುನ್ನೆಡೆಸಲ್ಪಟ್ಟ ಮೇರೆಗೆ, ಅವರು ಪ್ರಯಾಸ ಪಡುತ್ತಿರುವ ಜನರನ್ನು ಖುದ್ದಾಗಿ ಭೇಟಿ ಮಾಡಿ, ಅವರಲ್ಲಿ ನಂಬಿಕೆಯನ್ನು ಮತ್ತು ಉತ್ತೇಜನವನ್ನು ತುಂಬಿಸುವ ಮೂಲಕ ಸಹಾಯ ಮಾಡುತ್ತಾರೆ. ಜನರು ತಮ್ಮ ಮಾತನ್ನು ಕೇಳಲು ಇಷ್ಟಪಡದಿದ್ದಲ್ಲಿ, ತಮ್ಮ ಮಾತನ್ನು ಕೇಳುವಂತೆ ಯಾರ ಮೇಲೂ ಒತ್ತಡವನ್ನು ಹಾಕುವುದಿಲ್ಲ. ಆದರೆ ಅವರು ಪ್ರತಿದಿನ ದೇವರ ಮಾತನ್ನು ಆಲಿಸುತ್ತಾರೆ ಮತ್ತು ಅವರಿಗೆ "ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವುದಕ್ಕೆ ಬಲ್ಲವರಾಗುವಂತೆ" ಸೂಕ್ತವಾದ ಮಾತುಗಳು ದಯಪಾಲಿಸಲ್ಪಡುತ್ತವೆ (ಯೆಶಾ. 50:4).

ನಮ್ಮ ಮಧ್ಯದಲ್ಲಿ ಇಂತಹ ವರವನ್ನು ಪಡೆದಿರುವ ಜನರ ಬಹಳ ದೊಡ್ಡ ಅವಶ್ಯಕತೆಯಿದೆ, ಏಕೆಂದರೆ ಪ್ರತಿಯೊಂದು ಕ್ರೈಸ್ತಸಭೆಯಲ್ಲಿ ಅನೇಕ ಮಂದಿ ತಮ್ಮ ಜೀವಿತದ ಹೋರಾಟಗಳಿಂದ ನಿರಾಶೆ, ಬೇಸರ, ಚಿಂತೆ ಮತ್ತು ಬಳಲಿಕೆಗೆ ಒಳಗಾಗಿದ್ದಾರೆ. ಯಾರಾದರೂ ಅವರ ಹತ್ತಿರ ಹೋಗಿ ಅವರನ್ನು ಪ್ರೋತ್ಸಾಹಿಸುವ ಅವಶ್ಯಕತೆಯಿದೆ. ಈ ಕಾರಣಕ್ಕಾಗಿ, ಅನೇಕ ಸಹೋದರರು ಮತ್ತು ಸಹೋದರಿಯರು ಕರ್ತನಿಂದ ಈ ವರವನ್ನು ಕೇಳಿಕೊಳ್ಳಬೇಕು, ಮತ್ತು ಇದರ ಮೂಲಕ ಅವರು ಕ್ರಿಸ್ತನ ದೇಹಕ್ಕೆ ರಹಸ್ಯವಾಗಿ ಮತ್ತು ಸದ್ದಿಲ್ಲದೆ ಆಶೀರ್ವಾದವನ್ನು ಒದಗಿಸಬಹುದು.