ರೋಮಾಪುರದವರಿಗೆ ಬರೆದ ಪತ್ರಿಕೆಯ 14 ಮತ್ತು 15 ನೇ ಅಧ್ಯಾಯಗಳಲ್ಲಿ, ಕ್ರಿಸ್ತನ ದೇಹದಲ್ಲಿ ಒಬ್ಬರು ಮತ್ತೊಬ್ಬರನ್ನು ಸ್ವೀಕರಿಸುವುದರ ಬಗ್ಗೆ, ಅಂದರೆ ಅವರೊಂದಿಗಿನ ಹೊಂದಾಣಿಕೆಯ ಬಗ್ಗೆ ತಿಳಿಸಲಾಗಿದೆ. ವಿಶ್ವಾಸಿಗಳಾದ ನಾವೆಲ್ಲರೂ ಪ್ರತಿಯೊಂದು ವಿಷಯದಲ್ಲೂ ಒಂದೇ ರೀತಿ ಯೋಚಿಸುವುದಿಲ್ಲ. ಮುಂದೆ ಒಂದು ದಿನ ಕ್ರಿಸ್ತನು ಹಿಂದಿರುಗಿ ಬರುವಾಗ ಮತ್ತು ನಮ್ಮ ಮನಸ್ಸುಗಳು ಪರಿಪೂರ್ಣವಾದಾಗ, ನಾವೆಲ್ಲರೂ ಪ್ರತಿಯೊಂದು ಧಾರ್ಮಿಕ ಬೋಧನೆಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಒಮ್ಮತವನ್ನು ಹೊಂದುತ್ತೇವೆ ಮತ್ತು ನಿಜವಾದ ಆತ್ಮಿಕತೆ ಯಾವುದು ಮತ್ತು ಭಾವನಾತ್ಮಕವಾದ ಧಾರ್ಮಿಕತೆ ಹಾಗೂ ಲೌಕಿಕತನ ಯಾವುದು ಎಂಬುದನ್ನು ಗುರುತಿಸುವುದನ್ನು ಕಲಿಯುತ್ತೇವೆ. ಆದರೆ ಈಗ ನಮ್ಮಲ್ಲಿ ಈ ವಿಷಯಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ, ಏಕೆಂದರೆ ನಮ್ಮಲ್ಲಿ ಯಥಾರ್ಥತೆ ಹಾಗೂ ಸಂಪೂರ್ಣ ಶ್ರದ್ಧೆಯಿದ್ದರೂ, ಪಾಪದ ಪರಿಣಾಮವಾಗಿ ವಿರೂಪಗೊಂಡಿರುವ ಮನಸ್ಸುಗಳು ಇನ್ನೂ ನಮ್ಮಲ್ಲಿವೆ. ಯಾರಿಗೂ ಯಾವುದೇ ವಿಷಯದಲ್ಲಿ ಸಂಪೂರ್ಣ ಸ್ಪಷ್ಟವಾದ ತಿಳುವಳಿಕೆ ಇರುವುದಿಲ್ಲ. ನಾವು ಮಸುಕಾದ ಕನ್ನಡಿಯ ಮೂಲಕ ಎಲ್ಲವನ್ನೂ ಮೊಬ್ಬಾಗಿ ಕಾಣುತ್ತೇವೆ (1 ಕೊರಿ. 13:12). ಹಾಗಾಗಿ ನಾವು ಇತರರಲ್ಲಿ ಏನಾದರೂ ವಿಭಿನ್ನತೆಯನ್ನು ಕಂಡಾಗ, ನಾವು ಸರಿ ಮತ್ತು ಅವರು ತಪ್ಪೆಂಬ ಮೊಂಡುತನದ ಯೋಚನೆ ನಮ್ಮ ಮನಸ್ಸಿನಲ್ಲಿ ಮೂಡಬಾರದು. ಇಂತಹ ಯೋಚನೆಗಳಿಂದಾಗಿಯೇ ಕ್ರಿಸ್ತನ ದೇಹದಲ್ಲಿ ವಿಭಜನೆಗಳು ಉಂಟಾಗುತ್ತವೆ. ಕೆಲವು ಪ್ರಮುಖ ಸತ್ಯಾಂಶಗಳನ್ನು, ವಿಶೇಷವಾಗಿ ಕ್ರಿಸ್ತನ ವ್ಯಕ್ತಿತ್ವ ಮತ್ತು ಆತನ ರಕ್ಷಣೆಯ ಕಾರ್ಯವನ್ನು ಸತ್ಯವೇದವು ಸ್ಪಷ್ಟವಾಗಿ ತೋರಿಸುತ್ತದೆ. ಯೇಸು ಕ್ರಿಸ್ತನು ಸಂಪೂರ್ಣವಾಗಿ ದೇವರಾಗಿದ್ದಾನೆ ಮತ್ತು ಸಂಪೂರ್ಣವಾಗಿ ಮಾನವನೂ ಆಗಿದ್ದಾನೆ ಮತ್ತು ಆತನು ಲೋಕದ ಪಾಪಗಳಿಗಾಗಿ ಮರಣವನ್ನು ಹೊಂದಿದನು ಮತ್ತು ಜೀವಿತನಾಗಿ ಎದ್ದುಬಂದನು ಮತ್ತು ಆತನು ಮಾತ್ರವೇ ತಂದೆಯಾದ ದೇವರ ಬಳಿಗೆ ಬರುವುದಕ್ಕೆ ಮಾರ್ಗವಾಗಿದ್ದಾನೆ. ಇಂತಹ ಧಾರ್ಮಿಕ ಬೋಧನೆಗಳ ವಿಚಾರವಾಗಿ ನಾವು ಒಂದಿಷ್ಟೂ ಬದಲಾವಣೆಗೆ ಒಪ್ಪುವುದಿಲ್ಲ. ಆದರೆ ಇವುಗಳಿಗೆ ಹೊರತಾದ ಮತ್ತು ಅಷ್ಟು ಮುಖ್ಯವಲ್ಲದ ಇತರ ಕೆಲವು ಧಾರ್ಮಿಕ ಬೋಧನೆಗಳಿವೆ.
ನೀರಿನ ದೀಕ್ಷಾಸ್ನಾನವು ರಕ್ಷಣೆಗೆ ಅನಿವಾರ್ಯವಲ್ಲದೇ ಇದ್ದರೂ, ಅದು ಸ್ಥಳೀಯ ಸಭೆಗಳಿಗೆ ಒಂದು ಪ್ರಮುಖ ಬೋಧನೆಯಾಗಿರುತ್ತದೆ. ಮಕ್ಕಳಿಗೆ ದೀಕ್ಷಾಸ್ನಾನ ಕೊಡುವ ಬೋಧನೆಯನ್ನು ನಂಬುವ ಒಬ್ಬ ವಿಶ್ವಾಸಿಯು, ಮಕ್ಕಳ ದೀಕ್ಷಾಸ್ನಾನವು ಸತ್ಯವೇದದ ಬೋಧನೆಗೆ ವಿರುದ್ಧವಾದದ್ದೆಂದು ನಂಬುವ ಇನ್ನೊಬ್ಬ ವಿಶ್ವಾಸಿಯೊಂದಿಗೆ ಒಂದೇ ಸಭೆಯಲ್ಲಿ ಒಟ್ಟಾಗಿ ಕೆಲಸ ಮಾಡುವುದು ಅಸಾಧ್ಯವಾದ ಸಂಗತಿಯಾಗಿದೆ - ಏಕೆಂದರೆ ಅವರಿಬ್ಬರ ನಡುವೆ ಪದೇಪದೇ ವಾದ-ವಿವಾದಗಳು ಉಂಟಾಗುತ್ತವೆ. ನಮಗೆ ಇಂತಹ ಸಹೋದರನೊಟ್ಟಿಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೂ, ಆತನು ಕ್ರಿಸ್ತನಲ್ಲಿ ಹೊಸದಾಗಿ ಹುಟ್ಟಿದ್ದರೆ, ನಾವು ಆತನನ್ನು ಕ್ರಿಸ್ತನಲ್ಲಿ ಸಹೋದರನೆಂದು ಸ್ವೀಕರಿಸಬೇಕು - ಏಕೆಂದರೆ ದೇವರು ಆತನನ್ನು ಸ್ವೀಕರಿಸಿದ್ದಾರೆ. ಆತನೊಂದಿಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೂ, ನಾವು ಆತನ ಅನ್ಯೋನ್ಯತೆಯನ್ನು ಉಳಿಸಿಕೊಳ್ಳಬಹುದು. ಆದರೆ ಇಂದಿನ ದಿನದ ದುರಂತವೇನೆಂದರೆ, ಒಬ್ಬ ವ್ಯಕ್ತಿಯ ಜೊತೆಯಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಆತನೊಂದಿಗೆ ಅನ್ಯೋನ್ಯತೆಯನ್ನು ಸಹ ಇರಿಸಿಕೊಳ್ಳಬಾರದು, ಎಂಬುದಾಗಿ ಅನೇಕ ವಿಶ್ವಾಸಿಗಳು ಅಂದುಕೊಳ್ಳುತ್ತಾರೆ. ಈ ಸಂದರ್ಭದಲ್ಲೇ ನಮಗೆ ರೋಮಾಪುರದವರಿಗೆ ಬರೆದ ಪತ್ರಿಕೆಯ 14 ಮತ್ತು 15 ನೇ ಅಧ್ಯಾಯಗಳು ಸಹಾಯಕರವಾಗಿವೆ.
ನಂಬಿಕೆಯಲ್ಲಿ ಬಲಹೀನನಾದ ಒಬ್ಬ ಸಹೋದರನನ್ನು ನೀವು ನೋಡಿದ್ದೀರಾ? ಆತನನ್ನು ಸ್ವೀಕರಿಸಿರಿ. "ಕ್ರಿಸ್ತನು ನಿಮ್ಮನ್ನು ಸೇರಿಸಿಕೊಂಡ ಹಾಗೆ"(ರೋಮಾ. 15:7). ನೀವು ದೋಷರಹಿತರು ಆಗಿದ್ದಾಗ ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿದನೇ? ಇಲ್ಲ. ಹಾಗಾದರೆ ನೀವು ನಿಮ್ಮ ಸಹೋದರನನ್ನು ಸ್ವೀಕರಿಸುವ ಮೊದಲು ಆತನು ದೋಷರಹಿತನು ಆಗಿರಬೇಕೆಂದು ಏಕೆ ನಿರೀಕ್ಷಿಸುತ್ತೀರಿ? ನಾವು ಹೊಸದಾಗಿ ಹುಟ್ಟಿದ ದಿನದಲ್ಲಿ ನಾವು ಎಷ್ಟು ಬಲಹೀನರು ಮತ್ತು ಮೂರ್ಖರು ಆಗಿದ್ದೆವು. ನಮಗೆ ದೇವರ ಬಗ್ಗೆ ಏನೂ ತಿಳಿದಿರಲಿಲ್ಲ ಮತ್ತು ನಾವು ಪಾಪದಿಂದ ಸೋತುಹೋಗಿದ್ದೆವು. ಆದಾಗ್ಯೂ ದೇವರು ನಮ್ಮನ್ನು ಸ್ವೀಕರಿಸಿಕೊಂಡರು. ಅವರು ನಮ್ಮಲ್ಲಿ ಅನೇಕ ತಪ್ಪು ಸಂಗತಿಗಳನ್ನು ಕಂಡರು, ಹಾಗಿದ್ದರೂ ಅವರು ನಮ್ಮನ್ನು ಸ್ವೀಕರಿಸಿದರು. ದೇವರು ಅಂಗೀಕರಿಸಿದ ಇತರರನ್ನು ನಾವು ಸ್ವೀಕರಿಸದಿದ್ದರೆ, ನಾವು ಅಹಂಕಾರಿಗಳಾಗಿದ್ದೇವೆ ಮತ್ತು ನಾವು ಸ್ವತಃ ದೇವರಿಗಿಂತ ಹೆಚ್ಚು ಆತ್ಮಿಕರೆಂದು ಯೋಚಿಸುತ್ತಿದ್ದೇವೆ! ಈ ರೀತಿಯಾಗಿ ತಪ್ಪಾದ ಧಾರ್ಮಿಕ ದಾರಿಯಲ್ಲಿ ಸಾಗುವ ಕ್ರೈಸ್ತ ಪಂಗಡಗಳು ತಪ್ಪು ಬೋಧನೆಗಳಿಂದ ಮಾತ್ರವಲ್ಲದೆ, ದೇವರ ಇತರ ಮಕ್ಕಳ ಬಗ್ಗೆ ತಪ್ಪಾದ ಮನೋಭಾವಗಳನ್ನು ಇರಿಸಿಕೊಳ್ಳುವುದರ ಮೂಲಕವೂ ಸಹ ಕಟ್ಟಲ್ಪಡುತ್ತವೆ. ನಾವು ಕ್ರಿಸ್ತನ ದೇಹದ ಸದಸ್ಯರಾಗಿ ಇತರರನ್ನು ಸ್ವೀಕರಿಸುವುದಕ್ಕೆ ನಮ್ಮದೇ ಆದ ಕ್ಷುಲ್ಲಕ ನಿಯಮಗಳನ್ನು ಮತ್ತು ಕಾನೂನುಗಳನ್ನು ಇರಿಸಿಕೊಳ್ಳಬಾರದು.
"ದೇವರು ಅಂಗೀಕರಿಸಿದ ಇತರರನ್ನು ನಾವು ಸ್ವೀಕರಿಸದಿದ್ದರೆ, ನಾವು ಅಹಂಕಾರಿಗಳಾಗಿದ್ದೇವೆ ಮತ್ತು ನಾವು ಸ್ವತಃ ದೇವರಿಗಿಂತ ಹೆಚ್ಚು ಆತ್ಮಿಕರೆಂದು ಯೋಚಿಸುತ್ತಿದ್ದೇವೆ!"
"ನಿನ್ನ ಸಹೋದರನ ವಿಷಯವಾಗಿ ನೀನು ತೀರ್ಪುಮಾಡುವುದೇಕೆ?"(ರೋಮಾ. 14:10, ಮೊದಲ ಭಾಗ). ಇದೊಂದು ಬಾಹ್ಯ ಕ್ರಿಯೆಯಾಗಿದೆ. "ನಿನ್ನ ಸಹೋದರನನ್ನು ನೀನು ಏಕೆ ಹೀನೈಸುವೆ?" (ರೋಮಾ. 14:10, ವಚನದ ನಡುವಿನ ಭಾಗ). ಇದು ಒಳಗಿರುವ ಮನೋಭಾವ. ನಾವು ಇವೆರಡರಿಂದಲೂ ದೂರವಿರಬೇಕು. ದೇವರು ಸ್ವೀಕರಿಸಿರುವ ಎಲ್ಲರನ್ನೂ ಅವರು ಹೇಗಿದ್ದಾರೋ ಹಾಗೆಯೇ ಸ್ವೀಕರಿಸುವ ವಿಶಾಲ ಹೃದಯಗಳನ್ನು ನಾವು ಹೊಂದಿದಾಗ, ನಾವು ಸುವಾರ್ತಾ ಸಂದೇಶದ ಅತ್ಯುನ್ನತ ಮಟ್ಟವನ್ನು ತಲುಪುತ್ತೇವೆ. ಹೀಗೆ ನಾವು ಒಂದೇ ಮನಸ್ಸು ಉಳ್ಳವರಾಗಿ (ಕ್ರಿಸ್ತನ ದೇಹಕ್ಕೆ ಸೇರಿದ ಇತರರೊಂದಿಗೆ), ಒಂದೇ ಧ್ವನಿಯಿಂದ ದೇವರನ್ನು ಕೊಂಡಾಡುತ್ತೇವೆ (ರೋಮಾ. 15:6).
ರೋಮಾಪುರದವರಿಗೆ ಬರೆದ ಪತ್ರಿಕೆಯ ಕೊನೆಯ ಅಧ್ಯಾಯ, ಅಂದರೆ 16 ನೇ ಅಧ್ಯಾಯವು ರೋಮಾಪುರದ ವಿಭಿನ್ನ ವಿಶ್ವಾಸಿಗಳಿಗೆ ಅಪೊಸ್ತಲ ಪೌಲನ ವಂದನೆಗಳನ್ನು ಒಳಗೊಂಡಿದೆ. ರೋಮಾಪುರದ ಸಭೆಯು ಮನೆಗಳಲ್ಲಿ ಸೇರಿಬರುತ್ತಿದ್ದ ಐದು ಸಭೆಗಳನ್ನು ಹೊಂದಿತ್ತು (ರೋಮಾ. 16:5-15). ಅವರೆಲ್ಲರು ಒಂದು ಬಹಳ ದೊಡ್ಡ ಸಭೆಯಾಗಿ ಒಂದು ಸಭಾಂಗಣದಲ್ಲಿ ಸೇರುತ್ತಿರಲಿಲ್ಲ. ರೋಮಾಪುರದ ಸಭೆಯು ಬಹಳ ದೊಡ್ಡದಾಗಿತ್ತು, ಆದರೆ ಅವರು ಚಿಕ್ಕ ಚಿಕ್ಕ ಗುಂಪುಗಳಾಗಿ ಮನೆಗಳಲ್ಲಿ ಸೇರಿಬರುತ್ತಿದ್ದರು. ಪೌಲನು ಯಾವತ್ತೂ ರೋಮಾ ನಗರಿಗೆ ಹೋಗಿರಲಿಲ್ಲ, ಆದರೂ ಆತನು ಆ ಸಭೆಯ ವಿವಿಧ ಜನರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯನ್ನು ಹೊಂದಿದ್ದನು ಮತ್ತು ಅವರನ್ನು ಅಭಿನಂದಿಸಿದನು.
ಅಂತಿಮವಾಗಿ: "ನಂಬಿಕೆಯೆಂಬ ವಿಧೇಯತ್ವ" ಎಂಬ ಪದಪ್ರಯೋಗವು ಈ ಪತ್ರಿಕೆಯ ಆರಂಭದಲ್ಲಿ ಕಂಡುಬರುವಂತೆ, ಇಲ್ಲಿ ಪತ್ರಿಕೆಯ ಕೊನೆಯಲ್ಲೂ ಕಂಡುಬರುತ್ತದೆ (ರೋಮಾ. 16:25-26). ದೇವರು ಪೌಲನಿಗೆ ನೀಡಿದ್ದ ಕರೆಯು, ಜನರನ್ನು ನಂಬಿಕೆಗೆ ನಡೆಸುವುದಕ್ಕೆ ಮಾತ್ರವಲ್ಲದೆ, ಅವರು ನಂಬಿದ್ದ ಸಂಗತಿಯನ್ನು ಪಾಲಿಸುವಂತೆ ಮಾಡುವುದಕ್ಕೂ ಆಗಿತ್ತು. ಕ್ರಿಯೆಗಳಿಲ್ಲದ ನಂಬಿಕೆಯು ಸತ್ತ ನಂಬಿಕೆಯಾಗಿದೆ - ಅದು ಸತ್ತಿರುವ ದೇಹಕ್ಕೆ ಸಮನಾಗಿದೆ. ಹಳೆಯ ಒಡಂಬಡಿಕೆಯಲ್ಲಿ, ವಿಧೇಯತೆಗೆ ಒತ್ತು ನೀಡಲಾಗಿತ್ತು. ಹೊಸ ಒಡಂಬಡಿಕೆಯ ಕೆಳಗೆ, ನಂಬಿಕೆಯ ವಿಧೇಯತೆಗೆ ಒತ್ತು ನೀಡಲಾಗಿದೆ. ಈಗ ಪ್ರತಿಯೊಂದು ಆಜ್ಞೆಯು ನಮ್ಮನ್ನು ಪ್ರೀತಿಸುವ ತಂದೆಯಿಂದ ಬಂದಿದೆ ಮತ್ತು ನಮಗೆ ಅತ್ಯಂತ ಉತ್ತಮವಾದ ಫಲವನ್ನು ನೀಡುವುದಕ್ಕಾಗಿ ಯೋಜಿಸಲಾಗಿದೆಯೆಂದು ನಾವು ಅರಿತುಕೊಂಡು, ದೇವರಿಗೆ ವಿಧೇಯರಾಗುತ್ತೇವೆ.