ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಪುರುಷರಿಗೆ
WFTW Body: 

ಎಫೆಸದವರಿಗೆ 4'ನೇ ಅಧ್ಯಾಯದಲ್ಲಿ, "ಕೋಪ ಮಾಡಬೇಕಾದರೂ ಪಾಪ ಮಾಡಬೇಡಿರಿ," ಎಂಬ ಆಜ್ಞೆಯು ನಮಗೆ ಕೊಡಲ್ಪಟ್ಟಿದೆ (ಎಫೆ. 4:26). ಇದರ ಅರ್ಥ ಹೀಗಿದೆ, ಯಾವ ರೀತಿಯ ಕೋಪ ನಿಮ್ಮ ಜೀವಿತದಲ್ಲಿ ಇರಬೇಕೆಂದರೆ, ಆ ಕೋಪದಲ್ಲಿ ಪಾಪವಿರಬಾರದು. ಹಾಗಾಗಿ ಹಳೆಯ ಒಡಂಬಡಿಕೆಯ ದೇವರ ನೀತಿವಂತಿಕೆಯ ಮಟ್ಟವಾದ, "ನರಹತ್ಯೆ ಅಥವಾ ಕೊಲೆ ಮಾಡಬಾರದು," ಎಂಬ ಹಂತದಿಂದ, "ಕೋಪ ಮಾಡಬಾರದು," ಎಂಬ ಹಂತಕ್ಕೆ ಯೇಸುವು ಏರಿಸಿರುವುದರಿಂದ, ಯಾವುದು ಸರಿಯಾದ ಕೋಪ ಮತ್ತು ಯಾವುದು ತಪ್ಪಾದ ಕೋಪ ಎಂಬುದನ್ನು ನಾವು ತಿಳಿದುಕೊಳ್ಳುವುದು ಅವಶ್ಯವಾಗಿದೆ.

ನಮಗೆ ಯಾವುದೋ ಒಂದು ವಚನದ ಅರ್ಥವು ಸರಿಯಾಗಿ ತಿಳಿಯದೇ ಇದ್ದಾಗ, ನಾವು ನಮ್ಮ ಆತ್ಮಿಕ ನಿಘಂಟನ್ನು ನೋಡಿಕೊಳ್ಳಬೇಕು: ಅದು ಯಾವುದೆಂದರೆ, ನರಾವತಾರವನ್ನು ಧರಿಸಿದ ದೇವರ ವಾಕ್ಯ - ಅಂದರೆ ಯೇಸು ಕ್ರಿಸ್ತನ ಮಾನವ ಜೀವಿತ. ಯೇಸುವು ತಾನು ಲೋಕಕ್ಕೆ ಬೆಳಕಾಗಿದ್ದೇನೆಂದು ತನ್ನ ಬಗ್ಗೆ ಹೇಳಿಕೊಂಡರು ಮತ್ತು ದೇವರ ವಾಕ್ಯದಲ್ಲಿ ಆತನ ಕುರಿತಾಗಿ ಹೀಗೆ ಹೇಳಲ್ಪಟ್ಟಿದೆ, "ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು"(ಯೋಹಾ. 1:4). ನಮ್ಮ ಕರ್ತನಾದ ಯೇಸುವಿನ ಜೀವವು ದೇವರ ವಾಕ್ಯದ ಪ್ರತಿಯೊಂದು ವಚನವನ್ನು ನಮಗೆ ವಿವರಿಸಿ ತೋರಿಸುವ ಬೆಳಕಾಗಿದೆ. ಹಾಗಾಗಿ "ಕೋಪ ಮಾಡಬೇಕಾದರೂ ಪಾಪ ಮಾಡಬೇಡಿರಿ," ಎಂಬ ವಚನವನ್ನು ನಾವು ಓದಿಕೊಂಡು ಪಾಪವುಳ್ಳ ಕೋಪ ಮತ್ತು ಪಾಪವಲ್ಲದ ಕೋಪ ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಲು ಪ್ರಯತ್ನಿಸುವಾಗ, ಯೇಸುವಿನ ಜೀವಿತದಲ್ಲಿದ್ದ ಬೆಳಕನ್ನು ನಾವು ನೋಡಬೇಕಿದೆ.

ಯೇಸುವು ಯಾವಾಗ ಕೋಪಗೊಂಡರು ಮತ್ತು ಯಾವಾಗ ಕೋಪಗೊಳ್ಳಲಿಲ್ಲ? ನಾವು ’ಮಾರ್ಕನು 3:1-5'ರಲ್ಲಿ ಯೇಸುವು ಯೆಹೂದ್ಯರ ಒಂದು ಸಭಾಮಂದಿರದಲ್ಲಿ ಇದ್ದಾಗ, ಕೈಗೆ ಲಕ್ವ ಹೊಡೆದಿದ್ದ ಒಬ್ಬ ವ್ಯಕ್ತಿಯನ್ನು ವಾಸಿಮಾಡುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದ ಕೆಲವು ಜನರನ್ನು ನೋಡಿ ಕೋಪಗೊಂಡರು. ಫರಿಸಾಯರು ಆ ಪಾರ್ಶ್ವವಾಯು ಹೊಡೆದಿದ್ದ ಮನುಷ್ಯನನ್ನು ಗುಣಪಡಿಸುವುದಕ್ಕಿಂತ ಹೆಚ್ಚಾಗಿ ಸಬ್ಬತ್ ದಿನದ ಆಚರಣೆಯ ಬಗ್ಗೆ ಆಸಕ್ತಿ ವಹಿಸಿದ್ದನ್ನು ನೋಡಿ ಯೇಸುವು ಕೋಪಗೊಂಡರು. ಇದು ಸರಿಯಾದ ಕೋಪ - ಧಾರ್ಮಿಕ ನಾಯಕರು ಮತ್ತು ಧಾರ್ಮಿಕ ಜನರು ಜನರ ಬಗ್ಗೆ ಕಾಳಜಿ ವಹಿಸದೆ, ತಮ್ಮ ಸಂಪ್ರದಾಯವನ್ನು ಆಚರಿಸುವುದರಲ್ಲಿ ಹೆಚ್ಚು ಶ್ರದ್ಧೆ ವಹಿಸಿ, ಲಕ್ವ ಹೊಡೆದಿದ್ದ ಜನರನ್ನು ಬಿಡುಗಡೆಗೊಳಿಸುವುದನ್ನು ಕಡೆಗಣಿಸಿದ್ದರ ಬಗ್ಗೆ ಕೋಪ.

ಇಂದು ಕ್ರೈಸ್ತರು ಪಾಪಗಳಿಂದ ಸೋತಿರುವಾಗ, ಅಂಥವರನ್ನು ಪಾಪದಿಂದ ಬಿಡುಗಡೆ ಮಾಡುವುದರ ಬದಲಾಗಿ ಅವರಿಂದ ದಶಮಾಂಶ ಪಡೆಯುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಧಾರ್ಮಿಕ ಮುಖಂಡರು ಇರುವುದರಿಂದ ಈ ಜನರು ಪಾರ್ಶ್ವವಾಯು ಹೊಡೆದವರಂತೆ ಇದ್ದಾರೆ. ಇಂತಹ ಮುಖಂಡರನ್ನು ಮೇಲೆ ಪ್ರಸ್ತಾಪಿಸಿದ ಸಂದರ್ಭದಲ್ಲಿ ಪಾಶ್ವವಾಯು ಹೊಡೆದಿದ್ದ ಮನುಷ್ಯನನ್ನು ಗುಣಪಡಿಸುವುದಕ್ಕಿಂತ ಹೆಚ್ಚಾಗಿ ದಶಮಾಂಶವನ್ನು ಪಡೆಯುವುದು ಹಾಗೂ ಸಬ್ಬತ್ ದಿನದ ಆಚರಣೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ ಆ ಫರಿಸಾಯರಿಗೆ ಹೋಲಿಸಬಹುದು. ಇಂದು ಅನೇಕ ಬೋಧಕರು ಮತ್ತು ಪಾಸ್ಟರ್‌ಗಳು ಈ ರೀತಿಯಾಗಿ ತಮ್ಮ ಸಭೆಯ ಹಿಂಡನ್ನು ಪಾಪದ ಹಿಡಿತದಿಂದ ಬಿಡಿಸುವುದರ ಬದಲಾಗಿ ಜನರಿಂದ ದಶಮಾಂಶವನ್ನು ಪಡೆಯುವುದರಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ. ಯೇಸುವು ಇಂದು ಇಂತಹ ಜನರನ್ನು ನೋಡಿ ಕೋಪಗೊಳ್ಳುತ್ತಾರೆ, ಏಕೆಂದರೆ ಯೇಸುವು ಭೂಲೋಕಕ್ಕೆ ಬಂದದ್ದು ಜನರಿಗೆ ದಶಮಾಂಶವನ್ನು ಕೊಡುವ ಬಗ್ಗೆ ಬೋಧಿಸುವುದಕ್ಕೆ ಅಲ್ಲ. ಅವರು ಜನರನ್ನು ಪಾಪದಿಂದ ರಕ್ಷಿಸುವುದಕ್ಕಾಗಿ ಬಂದರು. ಜನರು ದಶಮಾಂಶವನ್ನು ಪಾವತಿಸುವಂತೆ ಮಾಡಲು ಅವರು ಶಿಲುಬೆಯ ಮೇಲೆ ಸಾಯಲಿಲ್ಲ. ಅವರು ನಮ್ಮ ಪಾಪಗಳಿಂದ ನಮ್ಮನ್ನು ಬಿಡಿಸಲು ಶಿಲುಬೆಯ ಮರಣವನ್ನು ಅನುಭವಿಸಿದರು.

"ಇಂದು ಭೂಲೋಕದಲ್ಲಿ ದೇವರ ಹೆಸರು ಗೌರವಿಸಲ್ಪಡುತ್ತಿಲ್ಲ, ಎಂಬ ಭಾರ ನಮಗಿರಬೇಕು"

ನಮ್ಮ ರಕ್ಷಕನ ಹೆಸರು ಯೇಸು ಎಂದಾಗಿದೆ ಮತ್ತು ಅವರು ನಮ್ಮನ್ನು ನಮ್ಮ ಪಾಪಗಳಿಂದ ರಕ್ಷಿಸುವುದಕ್ಕಾಗಿ ಬಂದರು (ಮತ್ತಾ. 1:21).ಇತರರು ಪಾಪಗಳಿಂದ ಬಿಡುಗಡೆ ಹೊಂದುವುದಕ್ಕೆ ಕೆಲವರು ತಡೆಯೊಡ್ಡಿ, "ಪಾಪದ ಮೇಲೆ ಜಯಿಸುವುದರ ಬಗ್ಗೆ ಬೋಧಿಸುವ ಈ ವ್ಯಕ್ತಿಯ ಬೋಧನೆಯನ್ನು ಕೇಳಬೇಡ, ಬದಲಾಗಿ ನಾನು ಹೇಳುವುದನ್ನು ಕೇಳಿಸಿಕೋ, ದಶಮಾಂಶವನ್ನು ಹೇಗೆ ಕೊಡಬೇಕೆಂದು ನಾನು ನಿನಗೆ ಕಲಿಸಿಕೊಡುತ್ತೇನೆ," ಎಂದು ಹೇಳುವಾಗ ಯೇಸುವು ಇವರ ಮೇಲೆ ನಿಶ್ಚಯವಾಗಿ ಕೋಪಗೊಳ್ಳುತ್ತಾರೆಂದು ನಮಗೆ ತಿಳಿದಿದೆ. ಹಾಗಾಗಿ ನೀವು ಯೇಸುವಿನೊಂದಿಗೆ ಅನ್ಯೋನ್ಯತೆ ಹೊಂದಿದ್ದರೆ, ಇತರರು ಬಿಡುಗಡೆ ಹೊಂದುವುದಕ್ಕೆ ಅಡ್ದಿಯಾಗುವ ಇಂತಹ ಜನರ ಬಗ್ಗೆ ದೇವರ ಸೇವಕನಾಗಿರುವ ನೀವು ಸಹ ಕೋಪಗೊಳ್ಳಬೇಕು.

ಯೇಸುವು ಕೋಪಗೊಂಡದ್ದಕ್ಕೆ ಇನ್ನೊಂದು ಉದಾಹರಣೆ ’ಯೋಹಾನನು 2'ನೇ ಅಧ್ಯಾಯದಲ್ಲಿದೆ: ಯೇಸುವು ದೇವಾಲಯಕ್ಕೆ ಹೋಗಿ ಅಲ್ಲಿ ವ್ಯಾಪಾರ ಮಾಡುತ್ತಿದ್ದ ಚಿನಿವಾರರನ್ನು ಹೊರಕ್ಕೆ ಓಡಿಸಿದ ಸಂದರ್ಭ. ಅವರು ಹಗ್ಗದ ಚಾಟಿಯನ್ನು ಮಾಡಿ ಚಿನಿವಾರರ ಹಣವನ್ನು ಚೆಲ್ಲಿ ಅವರ ಮೇಜುಗಳನ್ನು ಉರುಳಿಸಿ, "ಇವುಗಳನ್ನು ಇಲ್ಲಿಂದ ತೆಕ್ಕೊಂಡು ಹೋಗಿರಿ!" ಎಂದು ಹೇಳಿದರು. ಯೇಸುವು ಬಹಳ ಸಿಟ್ಟಾಗಿದ್ದರು ಮತ್ತು ಶಿಷ್ಯರು ಧರ್ಮಶಾಸ್ತ್ರದಲ್ಲಿ ಹೇಳಲಾಗಿದ್ದ ಮಾತನ್ನು ನೆನಪಿಸಿಕೊಂಡರು, "ನಿನ್ನ ಆಲಯದ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತದೆ," (ಯೋಹಾ. 2:15-17). ಜನರು ಧಾರ್ಮಿಕತೆಯ ಹೆಸರಿನಲ್ಲಿ ಅಥವಾ ಕ್ರಿಸ್ತನ ಹೆಸರಿನಲ್ಲಿ ಬಡ ಜನರನ್ನು ಶೋಷಿಸಿ ಹಣವನ್ನು ಗಳಿಸುವುದನ್ನು ನೋಡುವಾಗ, ದೇವಾಲಯದ ಪರಿಶುದ್ಧತೆಯ ಬಗ್ಗೆ ಅಭಿಮಾನವು ನಮ್ಮನ್ನು ಕೋಪಗೊಳಿಸಬೇಕು. ಮೇಲಿನ ಸಂದರ್ಭದಲ್ಲಿ ಚಿನಿವಾರರು ದನ ಕುರಿ ಪಾರಿವಾಳಗಳನ್ನು ಮಾರಾಟ ಮಾಡಿ, "ನೀವು ಬಲಿ ಕೊಡುವುದಕ್ಕಾಗಿ ಕುರಿ ಪಾರಿವಾಳಗಳನ್ನು ನಾವು ತಂದಿದ್ದೇವೆ, ಇದು ಮಾರುಕಟ್ಟೆಯ ಬೆಲೆಗಿಂತ ಸ್ವಲ್ಪ ಹೆಚ್ಚಾಗಿದೆ, ಏಕೆಂದರೆ ನಾವು ಸ್ವಲ್ಪ ಲಾಭವನ್ನು ಗಳಿಸಬೇಕು," ಎಂದು ಬಡ ಜನರನ್ನು ಶೋಷಿಸುತ್ತಿದ್ದರು.

ಯಾವ ಸಂದರ್ಭದಲ್ಲಿ ಯೇಸುವು ಸಿಟ್ಟಾಗಲಿಲ್ಲ? ಇದಕ್ಕೆ ಒಂದು ಉದಾಹರಣೆ ಆತನು "ಬೆಲ್ಜೆಬೂಲ" (ದೆವ್ವಗಳ ಒಡೆಯ) ಎಂಬ ಹೆಸರಿನಿಂದ ಕರೆಯಲ್ಪಟ್ಟ ಸಂದರ್ಭ (ಮತ್ತಾ. 12:22-24). ಯೇಸುವು ಕುರುಡನೂ ಮೂಕನೂ ಆಗಿದ್ದ ಒಬ್ಬ ಮನುಷ್ಯನಿಂದ ದೆವ್ವವನ್ನು ಬಿಡಿಸಿದಾಗ ಇದು ನಡೆಯಿತು. ಇದನ್ನು ನೋಡಿದ ಜನರೆಲ್ಲರೂ ಬೆರಗಾಗಿ, "ಈತನು ದಾವೀದಕುಮಾರನು. ಎಷ್ಟು ದೊಡ್ಡ ಚಮತ್ಕಾರದ ಮೂಲಕ ಈತನು ಈ ವ್ಯಕ್ತಿಯನ್ನು ಬಿಡುಗಡೆ ಮಾಡಿದ್ದಾನೆ!" ಎಂದು ಹೇಳಲು ಪ್ರಾರಂಭಿಸಿದರು. ಆದರೆ ಫರಿಸಾಯರು ತಕ್ಷಣ ಅಸೂಯೆಗೊಂಡು, "ಈತನು ದೆವ್ವಗಳ ಅಧಿಪತಿಯ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆ," ಎಂದು ಹೇಳಿದರು (ಮತ್ತಾ. 12:24). ಅವರು ಯೇಸುವನ್ನು ಸೈತಾನನೆಂದು ಕರೆದರು. ನೀವು ಕರ್ತನ ಸೇವೆ ಮಾಡುತ್ತಿರುವಾಗ ಯಾರಾದರೂ ನಿಮ್ಮನ್ನು ಸೈತಾನನು ಎಂದು ಕರೆದರೆ ಹೇಗಿರುತ್ತದೆ ಎಂದು ಯೋಚಿಸಿರಿ. ಆದರೆ ಯೇಸುವು, "ನಾನು ಕೇವಲ ಮನುಷ್ಯಕುಮಾರನು. ನಾನು ಬಹಳ ಸಾಮಾನ್ಯ ಮನುಷ್ಯನು. ನೀವು ನನ್ನ ವಿರುದ್ಧವಾಗಿ ಮಾತನಾಡಿದರೆ ಅದು ಕ್ಷಮಿಸಲ್ಪಡುವುದು, ಆದರೆ ಪವಿತ್ರಾತ್ಮನಿಗೆ ವಿರೋಧವಾಗಿ ಮಾತನಾಡದಂತೆ ಎಚ್ಚರವಾಗಿರಿ,"ಎಂದು ಜವಾಬು ನೀಡಿದರು (ಮತ್ತಾ. 12:32).

ಜನರು ತನ್ನನ್ನು ’ಸೈತಾನನು’ ಎಂದು ಕರೆದಾಗ ಆತನು ಕೋಪಗೊಳ್ಳಲಿಲ್ಲ. ಆತನು ಉತ್ತರಿಸಿ, "ನೀವು ನನ್ನ ವಿರುದ್ಧವಾಗಿ ಮಾತನಾಡಿದರೆ ಪರವಾಗಿಲ್ಲ. ನಾನು ಕೇವಲ ಸಾಮಾನ್ಯ ಮನುಷ್ಯಕುಮಾರನು. ನೀವು ಕ್ಷಮಿಸಲ್ಪಡುವಿರಿ," ಎಂದು ಹೇಳಿದನು. ಅವರು ಆತನನ್ನು ಸೈತಾನನೆಂದು ಕರೆದಾಗ ಆತನು ಸರ್ವಶಕ್ತನಾದ ದೇವರಾಗಿದ್ದನು, ಆದರೆ ಆತನು ಬೇಸರಪಟ್ಟುಕೊಳ್ಳಲಿಲ್ಲ. ಆತನು ಅವರನ್ನು ಕ್ಷಮಿಸಿದನು. ಒಬ್ಬ ನಿಜವಾದ ಕ್ರೈಸ್ತನು ಜನರು ತನ್ನನ್ನು ಸೈತಾನ, ಹಂದಿ, ನಾಯಿ ಇತ್ಯಾದಿ ಕೆಟ್ಟ ಹೆಸರಿನಿಂದ ಕರೆದರೆ, ಎಂದಿಗೂ ಬೇಸರಪಟ್ಟುಕೊಳ್ಳುವುದಿಲ್ಲ. ಅದರಿಂದ ಏನೂ ಆಗುವುದಿಲ್ಲ. ಆತನು ಕ್ರಿಸ್ತನಂತಿದ್ದರೆ, ಅವರನ್ನು ಕ್ಷಮಿಸುತ್ತಾನೆ ಮತ್ತು ಕೋಪಗೊಳ್ಳುವುದಿಲ್ಲ. ಆ ಜನರು ಮಾಡಿದ್ದಕ್ಕಾಗಿ ಅವನು ತನ್ನ ಮನಸ್ಸಿನಲ್ಲಿ ಯಾವುದೇ ಕಹಿತನವನ್ನು ಅಥವಾ ಕೋಪವನ್ನು ಉಳಿಸಿಕೊಳ್ಳುವುದಿಲ್ಲ.

ಬಹಳ ಕೆಲವೇ ಕ್ರೈಸ್ತರು ಯೇಸುವಿನಂತೆ ಜೀವಿಸಲು ಬಯಸುತ್ತಾರೆ, ಆದರೆ ಅವರಲ್ಲಿ ಪ್ರತಿಯೊಬ್ಬನೂ ಸತ್ತ ಮೇಲೆ ಪರಲೋಕಕ್ಕೆ ಹೋಗಲು ಬಯಸುತ್ತಾನೆ. ಪ್ರತಿಯೊಬ್ಬ ಕ್ರೈಸ್ತನು ಸತ್ತ ನಂತರ ಪರಲೋಕಕ್ಕೆ ಹೋಗಬೇಕೆಂದು ಬಯಸುತ್ತಾನೆ. ಆದರೆ ಅವರಲ್ಲಿ ಎಷ್ಟು ಮಂದಿ ಪರಲೋಕಕ್ಕೆ ಹೋಗುವುದಕ್ಕೆ ಮೊದಲು ಭೂಲೋಕದಲ್ಲಿ ಯೇಸು ಕ್ರಿಸ್ತನಂತೆ ಜೀವಿಸಲು ಬಯಸುತ್ತಾರೆ? ಬಹಳ ಕಡಿಮೆ ಜನ. ಇದೇ ಒಂದು ಸಮಸ್ಯೆಯಾಗಿದೆ. ಇಂತಹ ಹೆಚ್ಚಿನ ಜನರು ನಿಜವಾದ ಕ್ರೈಸ್ತರಲ್ಲ. ಅವರು ಹೆಸರಿಗೆ ಕ್ರೈಸ್ತರಾಗಿದ್ದಾರೆ, ಏಕೆಂದರೆ ಅವರು ಒಂದು ಕ್ರೈಸ್ತ ಕುಟುಂಬದಲ್ಲಿ ಜನಿಸಿದ್ದಾರೆ, ಆದರೆ ಅವರು ತಮ್ಮ ಜೀವಿತದಲ್ಲಿ ಯೇಸುವಿನ ಅಧಿಕಾರಕ್ಕೆ ಶರಣಾಗಿಲ್ಲ, ಆದ್ದರಿಂದ ದೇವರ ದೃಷ್ಟಿಯಲ್ಲಿ ಅವರು ಕ್ರೈಸ್ತರಲ್ಲ. ಕ್ರಿಸ್ತನ ಎರಡನೇ ಬರೋಣದಲ್ಲಿ ಅವರಿಗೆ ಒಂದು ದೊಡ್ಡ ಆಶ್ಚರ್ಯವು ಕಾದಿದೆ ಮತ್ತು ಅವರು ತಾವು ಕ್ರೈಸ್ತರು ಅಲ್ಲವೇ ಅಲ್ಲವೆಂದು ಕಂಡುಕೊಳ್ಳುತ್ತಾರೆ; ಏಕೆಂದರೆ, ನೀವು ಕ್ರೈಸ್ತ ಕುಟುಂಬದಲ್ಲಿ ಜನಿಸಿದ ಮಾತ್ರಕ್ಕೆ ಕ್ರೈಸ್ತರಾಗುವುದಿಲ್ಲ. ನೀವು ವೈಯಕ್ತಿಕವಾಗಿ ಕ್ರೈಸ್ತರಾಗುವ ಆಯ್ಕೆಯನ್ನು ಮಾಡಬೇಕು.

ನಾವು ಇದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಪ್ರಾಮುಖ್ಯವಾಗಿದೆ. "ಕೋಪ ಮಾಡಿದರೂ ಪಾಪ ಮಾಡಬೇಡಿರಿ," ಎಂಬ ’ಎಫೆಸದವರಿಗೆ 4:26' ರ ವಾಕ್ಯದ ಅರ್ಥ ಇದೇ ಆಗಿದೆ. ಈ ವಾಕ್ಯದ ಐದು ವಚನಗಳ ನಂತರ ’ಎಫೆಸದವರಿಗೆ 4:31' ರಲ್ಲಿ ಹೀಗೆ ಹೇಳಲಾಗಿದೆ, "ಎಲ್ಲಾ ಕೋಪವನ್ನು ನಿಮ್ಮಿಂದ ದೂರ ಮಾಡಿರಿ." ಇವೆರಡು ವಚನಗಳು ಒಂದಕ್ಕೊಂದು ವಿರುದ್ಧವಾದವುಗಳಂತೆ ಕಾಣುತ್ತವೆ; ಒಂದರಲ್ಲಿ "ಕೋಪ ಮಾಡಿದರೂ ಪಾಪ ಮಾಡಬೇಡಿರಿ," ಎಂದು ಹೇಳಿದರೆ ಇನ್ನೊಂದರಲ್ಲಿ, "ಎಲ್ಲಾ ಕೋಪವನ್ನು ನಿಮ್ಮಿಂದ ದೂರ ಮಾಡಿರಿ," ಎಂದು ಹೇಳಲಾಗಿದೆ. ನಾವು ಯಾವ ಕೋಪವನ್ನು ಬಿಟ್ಟುಬಿಡಬೇಕು? ಸ್ವಾರ್ಥವುಳ್ಳ ಮತ್ತು ಪಾಪದಿಂದ ಕೂಡಿದ ಕೋಪವನ್ನು ಬಿಟ್ಟುಬಿಡಬೇಕು. ನಮ್ಮಲ್ಲಿ ಎಂತಹ ಕೋಪ ಇರಬೇಕು? ದೇವರ ಮೇಲೆ ಕೇಂದ್ರಿತವಾದದ್ದು, ಮತ್ತು ದೇವರ ನಾಮದ ಮಹಿಮೆಗೆ ಸಂಬಂಧಿಸಿದ್ದು ಇರಬೇಕು. ಇಂದು ಲೋಕದಲ್ಲಿ ದೇವರ ನಾಮವು ಗೌರವಿಸಲ್ಪಡುತ್ತಿಲ್ಲ, ಎಂಬ ಭಾರ ನಮ್ಮಲ್ಲಿರಬೇಕು.