WFTW Body: 

"ನಿನ್ನ ಹೃದಯವು ಪರಸ್ತ್ರೀಯ ಬೆಡಗನ್ನು ಮೋಹಿಸದಿರಲಿ, ಅವಳು ತನ್ನ ಕಣ್ಣು ರೆಪ್ಪೆಗಳಿಂದ ನಿನ್ನನ್ನು ವಶಮಾಡಿಕೊಂಡಾಳು, ನೋಡಿಕೋ. ವೇಶ್ಯೆಯಿಂದ ಯಾವನಾದರೂ ಒಂದು ತುಂಡು ರೊಟ್ಟಿಯನ್ನು ಹುಡುಕುವ ಸ್ಥಿತಿಗೆ ತಲುಪುವನು, ಮತ್ತು ಪರಸ್ತ್ರೀಯೋ ಅಮೂಲ್ಯ ಜೀವವನ್ನೇ ಬೇಟೆಯಾಡುವಳು" ಜ್ಞಾನೋಕ್ತಿಗಳು 6:25-26 (ಭಾವಾನುವಾದ).

"ನೀನು ಪರಸ್ತ್ರೀಯನ್ನು ನೋಡಿ ಹೃದಯದಲ್ಲಿ ವ್ಯಭಿಚಾರ ಮಾಡಬೇಡ," ಎಂಬ ’ಮತ್ತಾಯನು 5:28'ರ ವಚನಕ್ಕೆ ಇಡೀ ಸತ್ಯವೇದದಲ್ಲಿ ಅತ್ಯಂತ ಹೆಚ್ಚಾಗಿ ಹೋಲುವ ವಚನ ಇದಾಗಿದೆ. ಇಡೀ ಸತ್ಯವೇದದಲ್ಲಿ ಜ್ಞಾನೋಕ್ತಿಗಳು 6:25-26ರ ವಾಕ್ಯದಷ್ಟು ನಿಕಟವಾಗಿ ಮತ್ತಾಯನು 5:28ಕ್ಕೆ ಹೋಲುವ ಮತ್ತೊಂದು ವಚನ ಸಿಗಲಾರದು. ಈ ವಚನವು ಹೊಸ ಒಡಂಬಡಿಕೆಯ ಮುನ್ಸೂಚಕವಾಗಿದೆ. ವ್ಯಭಿಚಾರವು ಹೃದಯದಲ್ಲಿ ಶುರುವಾಗುತ್ತದೆ ಎಂಬುದಾಗಿ ಜ್ಞಾನವು ಎಚ್ಚರಿಕೆ ನೀಡುತ್ತದೆ. ಅದು ವಿರುದ್ಧ ಲಿಂಗದವರ ಸೌಂದರ್ಯವನ್ನು ಕೇವಲ ಮೆಚ್ಚಿಕೊಳ್ಳುವುದರ ಮೂಲಕ ಆರಂಭವಾಗುತ್ತದೆ. ನಾನು ಈ ಅಂಶವನ್ನು ಒತ್ತಿ ಹೇಳುವುದಕ್ಕೆ ಕಾರಣ, ಸೌಂದರ್ಯವನ್ನು ಮೆಚ್ಚಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲವೆಂದು ಕ್ರೈಸ್ತರು (ವಿಶ್ವಾಸಿಗಳು) ಬೊಧನೆ ಮಾಡುತ್ತಿದ್ದಾರೆ. ಅವರ ಹೃದಯದಲ್ಲಿ ದೇವಭಯ ಇಲ್ಲದಿರುವುದರಿಂದ ಹೀಗೆ ಹೇಳುತ್ತಾರೆ. ದೇವರ ವಾಕ್ಯ "ಆಕೆಯ ಬೆಡಗನ್ನು ಮೋಹಿಸಬೇಡ" ಎನ್ನುತ್ತದೆ.

ಶಾರೀರಿಕ ಸೌಂದರ್ಯದ ಬಗ್ಗೆ ನಿಮ್ಮಲ್ಲಿ ತಪ್ಪಾದ ತಿಳುವಳಿಕೆ ಇದೆಯೇ? ಜ್ಞಾನೋಕ್ತಿಗಳು 31:30ರಲ್ಲಿ ಹೇಳಿರುವಂತೆ, ಶಾರೀರಿಕ ಸೌಂದರ್ಯ ಟೊಳ್ಳು ಮತ್ತು ಬರೀ ತೋರಿಕೆಯಾಗಿದೆ. ಯೌವನಸ್ಥರೇ, ನಾನು ನಿಮಗೆ ಹೇಳಲು ಬಯಸುವುದು ಏನೆಂದರೆ, ಸೌಂದರ್ಯ ಬರೀ ಟೊಳ್ಳು, ಪೊಳ್ಳು ಹಾಗೂ ಉಪಯೋಗವಿಲ್ಲದ್ದು ಎಂಬುದನ್ನು ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳದಿದ್ದರೆ, ಒಂದು ದಿನ ಅದು ನಿಮ್ಮನ್ನು ವಂಚಿಸುತ್ತದೆ. ನೀವು ತಪ್ಪು ವ್ಯಕ್ತಿಯನ್ನು ವಿವಾಹವಾಗುತ್ತೀರಿ ಮತ್ತು ಅದರಿಂದಾಗಿ ಜೀವಮಾನವಿಡೀ ಪ್ರಯಾಸ ಪಡುತ್ತೀರಿ. ಒಬ್ಬಾಕೆಯ ರೂಪವನ್ನು ತಿರುಗಿ ನೋಡುತ್ತಾ, "ನಾನು ಮೋಹಿಸುತ್ತಿಲ್ಲ; ಸೌಂದರ್ಯವನ್ನು ಪ್ರಶಂಸಿಸುತ್ತಿದ್ದೇನೆ," ಎನ್ನಬೇಡಿ. ಇದೊಂದು ದೊಡ್ಡ ವಂಚನೆಯಾಗಿದೆ ಮತ್ತು ದೇವರು ಇದನ್ನು ನೋಡುತ್ತಾರೆ! ಒಂದು ವೇಳೆ ದೇವರು ಇಂತಹ ಪುರುಷರನ್ನು ತನ್ನ ಸೇವೆಗಾಗಿ ಕರೆದಿದ್ದರೂ ಸಹ, ಅವರನ್ನು ಆರಿಸಿಕೊಳ್ಳದೆ ಬದಿಗಿರಿಸುತ್ತಾರೆ. ದೇವರು ಹೀಗೆನ್ನುತ್ತಾರೆ, "ನೀನು ನನ್ನ ಸೇವೆಗೆ ಯೋಗ್ಯನಲ್ಲ. ನಾನು ನಿನಗೆ ಸೇವೆಯ ಅವಕಾಶವನ್ನು ಕೊಡಬೇಕೆಂದು ಬಯಸಿದೆ, ಆದರೆ ನೀನು ವಿಶ್ವಾಸಿಯೆಂದು ಹೇಳಿಕೊಳ್ಳುತ್ತಾ, ಹೊಸ ಮತ್ತು ಜೀವವುಳ್ಳ ಮಾರ್ಗದ ಬಗ್ಗೆ ಮಾತನಾಡುತ್ತಾ, ನಿನ್ನ ಕಣ್ಣಿನ ಚಪಲತೆಯನ್ನು ಮಾತ್ರ ಬಿಡಲಿಲ್ಲ ಮತ್ತು ಈ ಕ್ಷೇತ್ರದಲ್ಲಿ ಪೂರ್ಣ ಹೃದಯದಿಂದ ನಡೆಯಲಿಲ್ಲ!" ಆಕೆಯ ಸೌಂದರ್ಯವನ್ನು ನಿನ್ನ ಹೃದಯದಲ್ಲೂ ಸಹ ಮೆಚ್ಚಿಕೊಳ್ಳಬೇಡ! ಇಲ್ಲಿ ವ್ಯಭಿಚಾರದ ಕುರಿತಾಗಿ ಮಾತನಾಡುತ್ತಿಲ್ಲ. ಕೇವಲ ಒಬ್ಬ ಯುವತಿಯ ಶಾರೀರಿಕ ಸೌಂದರ್ಯವನ್ನು ಪ್ರಶಂಸಿಸುವುದರ ಬಗ್ಗೆ ಮಾತನಾಡುತ್ತಿದೆ! ರೂಪವನ್ನು ಮೆಚ್ಚಲೇ ಬಾರದು. ಹೌದು, ನೀನು ಈ ಮಾತನ್ನು ಸ್ವೀಕರಿಸುವುದಾದರೆ, ಇದೇ ಜ್ಞಾನವಾಗಿದೆ. ಎಚ್ಚರವಾಗಿರು.

ನಂತರ ಆ ವಚನ, "ಆಕೆ ತನ್ನ ಕಣ್ಣು ರೆಪ್ಪೆಗಳಿಂದ ನಿನ್ನನ್ನು ವಶಪಡಿಸದಂತೆ ನೋಡಿಕೋ," ಎಂದು ಹೇಳುತ್ತದೆ. ದೇವರ ವಾಕ್ಯದಲ್ಲಿ ವಿಶೇಷವಾಗಿ ವ್ಯವಹರಿಸುವಂತ ಜ್ಞಾನವಿದೆ. ಒಬ್ಬ ಸ್ತ್ರೀಯ ಕಣ್ನೋಟದಲ್ಲಿ ಒಬ್ಬ ಯುವಕನನ್ನು ಸೆಳೆಯುವ ಶಕ್ತಿಯನ್ನು ಹೊಂದಿದೆಯೆಂದು ಈ ಮಾತಿನ ಅರ್ಥ. ಇದಕ್ಕಾಗಿಯೇ ಸೈತಾನನು ಇತ್ತೀಚಿನ ದಿನಗಳಲ್ಲಿ ಹುಡುಗಿಯರಿಗೆ ತಮ್ಮ ಕಣ್ಣು ರೆಪ್ಪೆಗಳನ್ನು ಅಲಂಕರಿಸಿ ಅವನ್ನು ಹೆಚ್ಚು ಆಕರ್ಷಕ ಗೊಳಿಸುವುದನ್ನು ಕಲಿಸಿಕೊಟ್ಟಿರುವುದನ್ನು ನಾವು ನೋಡುತ್ತೇವೆ - ಹಚ್ಚಿಕೊಳ್ಳುವುದಕ್ಕೆ ವಿಚಿತ್ರ ಬಣ್ಣಗಳಿವೆ; ಇನ್ನೂ ಮುಂದುವರಿದು, ನಿಮ್ಮಲ್ಲಿ ಯಾರಾದರೂ ನಿಮ್ಮ ಕೈಯ ಮೇಲೆ ಮೃಗದ ಗುರುತನ್ನು ಹಾಕಿಸಿಕೊಂಡು, ದೇವಸಭೆಯಲ್ಲಿ ಒಳ್ಳೆಯ ಸಾಕ್ಷಿಯನ್ನು ಸಹ ಉಳಿಸಿಕೊಳ್ಳಬೇಕೆಂದು ಬಯಸಿದರೆ, ನಿಮ್ಮ ಕಣ್ಣುಗಳಿಗೆ ಮತ್ತು ತುಟಿಗಳಿಗೆ ಮತ್ತು ಇನ್ನೂ ಬೇರೆ ಕಡೆಗೂ ಸಹ ಬಣ್ಣವಿಲ್ಲದ ಅಲಂಕಾರ ಸಾಮಾಗ್ರಿಯನ್ನು ಬಳಿದುಕೊಂಡು ನಿಮ್ಮ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ನಾನು ಅಂದುಕೊಳ್ಳುತ್ತೇನೆ. ಇಲ್ಲಿ ನೀಡಿರುವ ಎಚ್ಚರಿಕೆ, "ಆಕೆ ತನ್ನ ಕಣ್ಣು ರೆಪ್ಪೆಗಳಿಂದ ನಿನ್ನನ್ನು ವಶಪಡಿಕೊಳ್ಳುವುದಕ್ಕೆ ಅವಕಾಶ ಕೊಡಬೇಡ."

ಒಬ್ಬ ಸ್ತ್ರೀಯು ತನ್ನನ್ನು ಅಲಂಕರಿಸಿಕೊಳ್ಳುವುದರ ಬಗ್ಗೆ ಒಂದು ವಚನವನ್ನು 2 ಅರಸುಗಳು 9:30ರಲ್ಲಿ ನಾನು ನಿಮಗೆ ತೋರಿಸಲು ಬಯಸುತ್ತೇನೆ. ಆಕೆಯ ಹೆಸರು ಯೆಜೆಬೇಲಳು. ನೀವು ಆಕೆಯ ಬಗ್ಗೆ ಪ್ರಕಟನೆ 2ನೇ ಅಧ್ಯಾಯದಲ್ಲೂ ಓದುತ್ತೀರಿ. ಅಲ್ಲಿ ಥುವತೈರದ ಸಭೆಯಲ್ಲಿ ಒಬ್ಬ ಯೆಜೆಬೇಲಳು ಕುಳಿತಿದ್ದಳು. 2ಅರಸುಗಳು 9ನೇ ಅಧ್ಯಾಯದಲ್ಲಿ ಹೇಳಿರುವಂತೆ, ಯೇಹು ಎಂಬಾತನು ಇಜ್ರೇಲಿಗೆ ಬಂದಿರುವುದನ್ನು ಯೆಜೆಬೇಲಳು ಕೇಳಿಸಿಕೊಂಡಾಗ, ಆಕೆ ತನ್ನ ಕಣ್ಣಿಗೆ ಕಾಡಿಗೆ ಹಚ್ಚಿಕೊಂಡಳು. ಕ್ರಿಸ್ತನು ಬರುವುದಕ್ಕೆ ನೂರಾರು ವರ್ಷಗಳ ಮುಂಚೆಯೇ ಕಣ್ಣಿಗೆ ಕಾಡಿಗೆಯನ್ನು ಬಳಸುತ್ತಿದ್ದರೆಂದು ನಿಮಗೆ ತಿಳಿದಿದೆಯೇ? ಅದು 21ನೇ ಶತಮಾನದ ಸಂಶೋಧನೆಯಲ್ಲ. ಯೆಜೆಬೇಲಳೇ ಈ ಕಾಡಿಗೆಯ ಉಪಯೋಗವನ್ನು ಆರಂಭಿಸಿದಳು. ಅವಳು ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ತಲೆಯನ್ನು ಆಭರಣಗಳಿಂದ ಅಲಂಕರಿಸಿಕೊಂಡಳು. ಆಕೆ ತನ್ನ ಇಡೀ ಮುಖಕ್ಕೆ ಬಣ್ಣ ಹಚ್ಚಿಕೊಂಡಿದ್ದಳು ಮತ್ತು ಕಿಟಿಕಿಯಿಂದ ನೋಡುತ್ತಾ ನಿಂತಿದ್ದಳು ಎಂಬುದಾಗಿ ನಾನು ನಿಶ್ಚಯವಾಗಿ ಹೇಳಬಲ್ಲೆ. ಮುಂದಿನ ವಚನದಲ್ಲಿ (2 ಅರಸುಗಳು 9:33) ಯೇಹುವು, "ಆಕೆಯನ್ನು ಕೆಳಗೆ ತಳ್ಳಿರಿ!" ಎಂದು ಆಜ್ಞಾಪಿಸಿದಾಗ, ಅವರು ದೊಬ್ಬಿದರು ಮತ್ತು ಆಕೆಯನ್ನು ಕೊಂದರು. ಯೇಹುವು ಬಣ್ಣ ಬಳಿದುಕೊಂಡ ಮುಖವನ್ನು ನೋಡಿ ಮರುಳಾಗಲಿಲ್ಲ, ಮತ್ತು ನೀವು ಕೂಡ ಮರುಳಾಗಬಾರದು. ಯೇಹುವು ದೇವರಿಗೆ ಭಯಪಡುವ ಮನುಷ್ಯನಾಗಿರಲಿಲ್ಲ, ಆದಾಗ್ಯೂ ಆತನು ಆಕೆಯ ವಿಶೇಷ ಆಕರ್ಷಣೆಯನ್ನು ವಿರೋಧಿಸಿ ನಿಂತನು. ಈ ಬಣ್ಣ ಬಳಿದುಕೊಂಡ ಮುಖ ಮತ್ತು ವಿಶೇಷವಾಗಿ ಕಣ್ಣು ರೆಪ್ಪೆಗಳ ಆಕರ್ಷಣೆಯ ಬಗ್ಗೆ ಎಚ್ಚರವಾಗಿರಿ.

ಸೊಲೊಮೋನನು ಜ್ಞಾನೋಕ್ತಿಗಳಲ್ಲಿ ಹೇಳಿರುವಂತೆ, ನಾನು ಸಹ ಯುವಜನರಿಗೆ ವಿರುದ್ಧ ಲಿಂಗದ ವ್ಯಕ್ತಿಗಳೊಂದಿಗಿನ ಸಂಬಂಧದಲ್ಲಿ ವಿಶೇಷವಾಗಿ ಜಾಗರೂಕರಾಗಿ ಇರಬೇಕೆಂದು ಎಚ್ಚರಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ನೀವು ದೇವರ ಮಾತಿಗೆ ಭಯಪಡುವುದಾದರೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸುವುದಾದರೆ, ಒಬ್ಬ ಸ್ತ್ರೀಯು ಸೈತಾನನ ದಲ್ಲಾಳಿಯಂತೆ ನಿಮ್ಮ ಜೀವನವನ್ನು ಹಾಳು ಮಾಡಿ ನಾಶಗೊಳಿಸದಂತೆ ಅದು ನಿಮ್ಮನ್ನು ಸಂರಕ್ಷಿಸುತ್ತದೆ! ಒಂದು ವೇಳೆ ಸೈತಾನನು ನಿಮ್ಮ ಜೀವನವನ್ನು ಹಾಳುಮಾಡಿ ನಾಶಗೊಳಿಸಲು ವಿಫಲನಾದರೆ, ಕಡಿಮೆ ಪಕ್ಷ ನೀವು ದೇವಮನುಷ್ಯನಾಗಿ, ದೇವರು ನಿಮ್ಮನ್ನು ಆತ್ಮಿಕವಾಗಿ ಉಪಯೋಗಿಸುವುದನ್ನು ವಿಫಲಗೊಳಿಸಿ ಹಾಳುಮಾಡಲು ಆತನು ಪ್ರಯತ್ನಿಸುತ್ತಾನೆ! ಅನೇಕ ಜನರು ರಕ್ಷಣೆ ಹೊಂದಿದ ನಂತರವೂ ಸ್ತ್ರೀಯರೊಂದಿಗೆ ಹುಚ್ಚಾಟ ವಾಡುತ್ತಾರೆ, ಮತ್ತು ಈ ರೀತಿಯಾಗಿ ದೇವರು ಅವರಿಗೆ ನೀಡಬಹುದಾಗಿದ್ದ ಸಂಪೂರ್ಣ ಸೇವೆಯನ್ನೇ ಕಳಕೊಳ್ಳುತ್ತಾರೆ! ಈ ವಿಷಯದಲ್ಲಿ ನಾವು ಗಂಭೀರವಾಗಿರಬೇಕು. "ನನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ," ಎಂದು ಹೇಳಿದರೆ ಸಾಲದು. ನೀವು ನಿತ್ಯತ್ವದಲ್ಲಿ ಎದ್ದು ನಿಂತಾಗ, ದೇವರು ನಿಮಗಾಗಿ ಒಂದು ಸೇವೆಯನ್ನು ನೇಮಿಸಿದ್ದರು, ಮತ್ತು ನೀವು ವಿರುದ್ಧ ಲಿಂಗದೊಂದಿಗೆ ನಿಮ್ಮ ಸಂಬಂಧಗಳಲ್ಲಿ ಎಚ್ಚರಿಕೆ ವಹಿಸದೇ ಇದ್ದುದರಿಂದ ಇದನ್ನು ಕಳಕೊಂಡಿರಿ, ಎಂದು ತಿಳಿದಾಗ ನಿಮಗೆ ಎಷ್ಟು ನಿರಾಶೆಯಾಗುತ್ತದೆಂದು ಆಲೋಚಿಸಿರಿ. ನಿತ್ಯತ್ವದಲ್ಲಿ ನಿಂತುಕೊಳ್ಳುವುದನ್ನು ಕಲ್ಪಿಸಿಕೊಳ್ಳಿರಿ ಮತ್ತು ನೀವು ಒಬ್ಬ ಹುಚ್ಚು ಹುಡುಗಿಯೊಂದಿಗೆ ಯಾವುದೋ ಕ್ಷಣಿಕ ಸುಖದ ಅನುಭವಕ್ಕಾಗಿ, ನೀವು ಭೂಲೋಕ ಜೀವಿತದಲ್ಲಿ ಮಾಡಿದ ಹುಚ್ಚು ಕೆಲಸದ ನಿಮಿತ್ತವಾಗಿ, ನಿಮ್ಮ ಸಂಪೂರ್ಣ ನಿತ್ಯತ್ವವನ್ನು ಉಜ್ವಲವಾಗಿಸುತ್ತಿದ್ದ ಒಂದು ಸೇವೆಯ ಅವಕಾಶವನ್ನು ಕಳೆದುಕೊಂಡಿರಿ, ಎಂದು ಕಂಡುಕೊಳ್ಳುವುದರ ಬಗ್ಗೆ ಯೋಚಿಸಿರಿ. ಆ ದಿನದಲ್ಲಿ ಲೆಕ್ಕವಿಲ್ಲದಷ್ಟು ಜನರ ಹೃದಯಗಳಲ್ಲಿ ಉಂಟಾಗಲಿರುವ ನಿರಾಶೆಯ ಕುರಿತಾಗಿ ಯೋಚಿಸಿರಿ.

ನಿಮ್ಮ ಯೌವನದ ದಿನಗಳಲ್ಲಿ ವಿಶೇಷವಾಗಿ ಎಚ್ಚರವಾಗಿರಿ .