WFTW Body: 

ನೀನು ಒಬ್ಬ ದೇವಭಕ್ತನಾಗುವ ನಿರ್ಧಾರವನ್ನು ಕೈಗೊಂಡರೆ, ಇನ್ನು ಮುಂದೆ ನಿನ್ನ ಜೀವನದ ಪ್ರತಿಯೊಂದು ಹೆಜ್ಜೆಯೂ ದೇವರಿಂದ ನಡೆಸಲ್ಪಡುತ್ತದೆ. ಜೀವನದಲ್ಲಿ ದೇವರನ್ನು ಗೌರವಿಸುವ ವ್ಯಕ್ತಿಯು ಅತ್ಯುತ್ತಮವಾದ ಫಲವನ್ನು ಹೊಂದುತ್ತಾನೆ. ಇಂತಹ ಭಾಗ್ಯವು ಒಬ್ಬ ಬುದ್ಧಿವಂತನಿಗೆ, ಅಥವಾ ಐಶ್ವರ್ಯವಂತನಿಗೆ, ಅಥವಾ ವಿಶಿಷ್ಠ ಪ್ರತಿಭಾಶಾಲಿಗೆ, ಅಥವಾ ಅದೃಷ್ಟದಿಂದ ಜೀವನದಲ್ಲಿ ಯಶಸ್ಸುಗಳನ್ನು ಪಡೆದವನಿಗೆ ಸಿಗುವುದಿಲ್ಲ. ದೇವಭಕ್ತಿಯನ್ನು ಆಧರಿಸಿದ ಜೀವನ ವಿಧಾನವನ್ನು ಆರಿಸಿಕೊಳ್ಳದಿದ್ದಾಗ, ನಮ್ಮಲ್ಲಿ ಭವಿಷ್ಯತ್ತಿನ ಕುರಿತಾದ ಪ್ರತಿಯೊಂದು ಅನಿಶ್ಚಿತತೆ ಹಾಗೂ ಅಭದ್ರತೆಯು ತಲೆದೋರುತ್ತದೆ. ಹಾಗಾಗಿ ನೀನು ಎಲ್ಲಾ ವೇಳೆಯಲ್ಲಿ ದೇವರನ್ನು ಗೌರವಿಸುವ ನಿರ್ಧಾರವನ್ನು ಮಾಡು. ಅವರು ನಿನಗೆ ಆತ್ಮಿಕವಾಗಿ ಅತೀ ಶ್ರೇಷ್ಠವಾದುದನ್ನು ಕೊಡುವುದು ಮಾತ್ರವಲ್ಲದೆ, ಅದರ ಜೊತೆಗೆ, ಈ ಲೋಕದ ಲೌಕಿಕ ಮತ್ತು ಶಾರೀರಿಕ ಅವಶ್ಯಕತೆಗಳನ್ನು ಪೂರೈಸಲು ಬೇಕಾದ ಎಲ್ಲವನ್ನೂ ಸಹ ಒದಗಿಸುತ್ತಾರೆ. ಈ ಮಾತಿನ ಸತ್ಯತೆಯನ್ನು ನಾನು ಕಳೆದ 50 ವರ್ಷಗಳ ನನ್ನ ಜೀವನದಲ್ಲಿ ಅನುಭವಿಸಿ ನೋಡಿದ್ದೇನೆ. ದೇವರು ನಿನಗೆ ಪ್ರತಿಯೊಂದು ವಿಷಯದಲ್ಲಿ - ಕಾಲೇಜಿನ ವಿದ್ಯಾಭ್ಯಾಸದಿಂದ ಆರಂಭಿಸಿ ಸೂಕ್ತವಾದ ಉದ್ಯೋಗವನ್ನು ಆರಿಸಿಕೊಳ್ಳುವುದರಲ್ಲಿ, ನೌಕರಿ ಮತ್ತು ಮುಂದೆ ವಿವಾಹ ಜೀವನದಲ್ಲಿ ಮಾರ್ಗದರ್ಶನ ಒದಗಿಸುತ್ತಾರೆ; ಇದಕ್ಕಾಗಿ ನೀನು ಈಗ ಮಾಡಬೇಕಾದ ಒಂದು ನಿರ್ಧಾರವೆಂದರೆ, ಎಲ್ಲಾ ವಿಷಯಗಳಲ್ಲಿ ದೇವರನ್ನು ಗೌರವಿಸಿ, ಒಬ್ಬ ದೈವಿಕ ವ್ಯಕ್ತಿಯಾಗಿ ಜೀವಿಸಲು ನಿರ್ಧರಿಸುವುದು.

ಇದಕ್ಕಾಗಿ, ನೀನು ಚಿಕ್ಕ ಪುಟ್ಟ ವಿಷಯಗಳಲ್ಲಿ ನಿಷ್ಠೆಯಿಂದಿರಬೇಕು. ಎಂದಿಗೂ ನಿನಗೆ ಸೇರದ ಯಾವುದೇ ಸ್ವತ್ತನ್ನೂ ತೆಗೆದುಕೊಳ್ಳಬೇಡ. ಬೇರೊಬ್ಬ ವ್ಯಕ್ತಿಯಿಂದ, ಒಂದು ಮನೆಯಿಂದ, ಒಂದು ಕಾಲೇಜು ಅಥವಾ ಕಚೇರಿಯಿಂದ ಅಥವಾ ಬೇರೆಲ್ಲಿಂದಲೂ, ಅತಿ ಕಡಿಮೆ ಬೆಲೆಯ ಒಂದು ಲೇಖನಿ ಅಥವಾ ಬಳಪವನ್ನೂ ಕೂಡ ತೆಗೆದುಕೊಳ್ಳಬೇಡ. ಚಿಕ್ಕ ಚಿಕ್ಕ ವಿಷಯಗಳಲ್ಲಿ ಯಾರಿಗೂ ಮೋಸ ಮಾಡಬೇಡ. ಅದೇ ರೀತಿ ನಿನ್ನ ಶಾಲಾ ದಿನಗಳಲ್ಲಿ ನಾವು ನಿನಗೆ ಕಲಿಸಿದಂತೆ, ನಿನ್ನ ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಮೋಸ ಮಾಡಬೇಡ. ಮೋಸದಿಂದ ಉತ್ತೀರ್ಣನಾಗುವುದಕ್ಕಿಂತ ಅನುತ್ತೀರ್ಣನಾಗುವುದು ಉತ್ತಮ. ಮೋಸದಿಂದ ಶ್ರೀಮಂತನಾಗುವುದಕ್ಕಿಂತ ಬಡವನಾಗಿರುವುದು ಮೇಲು. ನಿನ್ನ ಮನಸ್ಸನ್ನು ಕಲ್ಮಶಗೊಳಿಸುವ ವಿಷಯಗಳನ್ನು ಓದುವುದು ಮತ್ತು ಅಂತಹ ಟಿವಿ ಕಾರ್ಯಕ್ರಮಗಳನ್ನು ನೋಡುವುದನ್ನು ನಿಲ್ಲಿಸು. ಎಲ್ಲಾ ವಿಷಯಗಳಲ್ಲಿ ನಿನ್ನ ಮನಸಾಕ್ಷಿಯನ್ನು ನೂರಕ್ಕೆ ನೂರರಷ್ಟು ಶುದ್ಧವಾಗಿ ಇಟ್ಟುಕೋ. ಎಲ್ಲಾ ಪೀಳಿಗೆಯಲ್ಲೂ ಈ ರೀತಿ ಜೀವಿಸುವವರು ತಮ್ಮ ಜೀವನದಲ್ಲಿ - ಸಂಕಟದ ಸ್ಥಿತಿ ಬಂದು ಬೆಲೆಗಳು ದುಬಾರಿಯಾದಾಗಲೂ, ದೇವರಿಂದ ಅತ್ಯುತ್ತಮವಾದುದನ್ನು ಪಡೆಯುತ್ತಾರೆ.

ಇದರ ಅರ್ಥ ನೀನು ಎಂದಿಗೂ ಬೀಳುವುದಿಲ್ಲ ಅಥವಾ ವಿಫಲನಾಗುವುದಿಲ್ಲ ಎಂದಲ್ಲ. ಆದರೆ ನೀನು ಪ್ರತಿ ಬಾರಿ ಪಾಪ ಮಾಡಿದಾಗ ಶೋಕಿಸಬೇಕು. ಯಾವುದೇ ವಿಷಯದಲ್ಲಿ (ಆತ್ಮಿಕ ವಿಷಯದಲ್ಲಿ ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ವಿಷಯದಲ್ಲಿ) ನೀನು 1000 ಸಲ ಸೋತುಹೋದರೂ, ನೀನು ಬಿದ್ದಲ್ಲಿಂದ ಎದ್ದು ಮತ್ತೆ ಓಡಬೇಕು. ಹಿಂದಿನ ವಿಫಲತೆಗಳು ನಿನ್ನನ್ನು ಕಾಡಲು ನೀನು ಅವಕಾಶ ಕೊಡಬಾರದು. ಸೋಲಿನ ಭಯವು ಬೆನ್ನುಹತ್ತಿ ಕಾಡಿಸುವ ಒಂದು ಭಯವಾಗಿದೆ, ಮತ್ತು ನೀನು ಅದನ್ನು ಕೆಡವಿಹಾಕಬೇಕು. ಹಿಂದಿನ ವಿಫಲತೆಗಳ ಯೋಚನೆಗಳು ಮನಸ್ಸಿಗೆ ಬಂದಾಗ ನೀನು ಮಾಡಬೇಕಾದದ್ದು ಏನೆಂದರೆ, ದೃಢ ಸಂಕಲ್ಪದಿಂದ ಅಂತಹ ಪ್ರತಿಯೊಂದು ವಿಚಾರವನ್ನು ತಿರಸ್ಕರಿಸಬೇಕು. ನೀನು ಇದನ್ನು ಶ್ರದ್ಧೆಯಿಂದ ಮಾಡಿದರೆ, ಸ್ವಲ್ಪ ಸಮಯದ ನಂತರ ಅಂತಹ ಆಲೋಚನೆಗಳು ನಿನಗೆ ಬರುವುದು ಅಪರೂಪವಾಗುತ್ತದೆ ಮತ್ತು ಕೊನೆಗೆ ಅವು ಸಂಪೂರ್ಣವಾಗಿ ನಿಂತುಹೋಗುತ್ತವೆ. "ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿಯುವುದು" ಎಂಬ ಮಾತಿನ ಅರ್ಥ ಇದಾಗಿದೆ (2 ಕೊರಿ. 10:5).

ನೀನು ನಂಬಿಕೆಯಿಲ್ಲದ ಒಂದು ಪೀಳಿಗೆಗೆ, ’ನೀತಿವಂತನ ಜೀವನ ಚೆನ್ನಾಗಿ ಸಾಗುತ್ತದೆ ಮತ್ತು ದೇವರನ್ನು ಗೌರವಿಸುವವನನ್ನು ಅವರು ಗೌರವಿಸುತ್ತಾರೆ’, ಎಂಬ ಹೇಳಿಕೆಗೆ ಒಂದು ಜೀವಂತ ನಿದರ್ಶನವಾಗಬಹುದು. ನೀನು ಸ್ವಂತ ಬುದ್ಧಿವಂತಿಕೆಯಿಂದ ಮತ್ತು ಸಾಧನೆಗಳಿಂದ ಈ ಜಗತ್ತನ್ನು ಮೆಚ್ಚಿಸುವ ಬದಲು, ಮೇಲೆ ಹೇಳಿದಂತಹ ಒಂದು ಜೀವಂತ ಸಾಕ್ಷಿಯಾಗಿರಲು ಮನಸಾರೆ ಹಂಬಲಿಸು. ಇನ್ನೊಂದು ವಿಷಯ, ನಿನ್ನ ಜೀವನದಲ್ಲಿ ಹೊರಗಿನ ಚಟುವಟಿಕೆಗಳು ಅತಿ ಹೆಚ್ಚಿನ ಪ್ರಾಮುಖ್ಯತೆ ಪಡೆದು, ನಿನಗೆ ಅವುಗಳು "ವಿಗ್ರಹ"ಗಳಾಗದಂತೆ ಎಚ್ಚರಿಕೆವಹಿಸು!

ದೇವರು ನಿನ್ನಿಂದ ಬಯಸುವುದು ಏನೆಂದರೆ, ನಿನ್ನ ಇಡೀ ಜೀವಿತದ ಮೂಲಕ ನೀನು ಪಾಪದ ಮೇಲಿನ ಜಯವನ್ನು ಮತ್ತು ಶರೀರಭಾವದ ಮರಣವನ್ನು ಘೋಷಿಸಬೇಕು (ನಿನ್ನ ಜೀವನದಲ್ಲಿ ಇವೆಲ್ಲವನ್ನು ನೀನೇ ಯಥಾರ್ಥವಾಗಿ ಅನುಭವಿಸುವ ಮೂಲಕ), ಮತ್ತು ಒಂದು ಸಾಂಸಾರಿಕ ಉದ್ಯೋಗವನ್ನು ಮಾಡುತ್ತಾ ನಿನ್ನ ಸ್ವಂತ ಅವಶ್ಯಕತೆಗಳನ್ನು ಪೂರೈಸಿಕೊಂಡು, ಅಪೊಸ್ತಲ ಪೌಲನು ಮಾಡಿದಂತೆ ಬೇರೆ ಯಾರನ್ನೂ ಅವಲಂಬಿಸದೆ ನಿನ್ನ ಸ್ವಂತ ಖರ್ಚಿನಲ್ಲಿ ಕರ್ತನ ಸೇವೆಯನ್ನು ಸಹ ಮಾಡುತ್ತಾ, ಕ್ರಿಸ್ತನ ದೇಹವಾದ ಸಭೆಯಲ್ಲಿ ದೇವರಿಂದ ನಿನಗಾಗಿ ನೇಮಿಸಲ್ಪಟ್ಟ ಸೇವಾಕಾರ್ಯವನ್ನು (ಅದು ಎಂಥದ್ದೇ ಆಗಿರಲಿ) ಮಾಡುತ್ತಿರುವುದು. ಈ ಲೋಕವು ಇದನ್ನೇ ನೋಡಬೇಕು ಮತ್ತು ನಿಮ್ಮೆಲ್ಲರಿಗಾಗಿ ನನ್ನ ಬಹಳ ದೊಡ್ಡ ಹಂಬಲವೂ ಇದೇ ಆಗಿದೆ. ಯಾರು ಸತತವಾಗಿ ದೇವರ ರಾಜ್ಯವನ್ನು ಮತ್ತು ಆತನ ನೀತಿಯನ್ನು ಮೊದಲು ಹುಡುಕಾಡುತ್ತಾರೋ, ಯೇಸುವು ಹಿಂದಿರುಗಿ ಬರುವಾಗ ಅವರಿಗೆ ಮಾತ್ರ ಯಾವುದೇ ಪಶ್ಚಾತ್ತಾಪ ಇರುವುದಿಲ್ಲವೆಂದು ನನಗೆ ತಿಳಿದಿದೆ.