WFTW Body: 

"ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಅದು ದೇವರ ವರವೇ." (ಎಫೆ. 2:8).

ನಾವು ನಮ್ಮ ಕ್ರೈಸ್ತ ಜೀವಿತವನ್ನು ಆರಂಭಿಸಿದ್ದು - ಪಾಪಗಳ ಕ್ಷಮೆಯನ್ನು ಪಡೆದದ್ದು ಮತ್ತು ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಹೊಂದಿದ್ದು - ಕೃಪೆಯಿಂದ, ನಂಬಿಕೆಯ ಮೂಲಕವಾಗಿತ್ತು. ಮುಂದೆ ಒಂದು ದಿನ ನಮ್ಮ ಕರ್ತನಾದ ಯೇಸು ಕ್ರಿಸ್ತನು ಮಹಿಮೆಯೊಂದಿಗೆ ಹಿಂದಿರುಗಿ ಬರುವಾಗ, ನಾವು ಆತನನ್ನು ಮೇಘಗಳಲ್ಲಿ ಎದುರುಗೊಳ್ಳುವುದಕ್ಕಾಗಿ ಫಕ್ಕನೆ ಒಯ್ಯಲ್ಪಡುವೆವು. ಅದೂ ಸಹ ಕೃಪೆಯಿಂದ ಮತ್ತು ನಂಬಿಕೆಯ ಮೂಲಕ ನೆರವೇರುತ್ತದೆ. ಹಾಗಾಗಿ, ಭೂಮಿಯ ಮೇಲೆ ನಮ್ಮ ಕ್ರೈಸ್ತ ಜೀವಿತದ ಆರಂಭ ಮತ್ತು ಅಂತ್ಯ ಇವೆರಡೂ ಕೃಪೆಯಿಂದ ಮತ್ತು ನಂಬಿಕೆಯ ಮೂಲಕ ನೆರವೇರುತ್ತವೆ. ನಾವು ತಿಳಿದು ಕೊಳ್ಳಬೇಕಾದ ವಿಷಯ ಏನೆಂದರೆ, ಇವೆರಡು ಘಟನೆಗಳ ನಡುವಿನ ಪ್ರತಿಯೊಂದು ಸಂಗತಿಯನ್ನೂ ಸಹ ನಾವು ಇದೇ ಮೂಲ ತತ್ವದ ಆಧಾರದ ಮೇಲೆ ಪಡೆಯುತ್ತೇವೆ. ಕೃಪೆಯಿಂದ ಮತ್ತು ನಂಬಿಕೆಯ ಮೂಲಕ, ನಾವು ಪ್ರತಿಯೊಂದು ದುಷ್ಟತನವನ್ನು ಜಯಿಸಬಹುದು, ಮತ್ತು ಈ ಲೋಕದಲ್ಲಿ ದೇವರು ನಮಗಾಗಿ ನಿಯೋಜಿಸಿರುವ ಕಾರ್ಯವನ್ನು ಪೂರೈಸಬಹುದು. ದೇವರು ಸಂಪೂರ್ಣ ಭವಿಷ್ಯವನ್ನು ಅರಿತಿದ್ದಾರೆ. ನಮಗೆ ನಾಳೆಯ ದಿವಸ ಅಥವಾ ಮುಂದಿನ ವಾರ ಅಥವಾ ಮುಂದಿನ ವರ್ಷ ನಡೆಯಲಿರುವ ಯಾವುದೇ ಸಂಗತಿಯು ದೇವರಿಗೆ ಅನಿರೀಕ್ಷಿತವಾದದ್ದು ಅಥವಾ ಆಶ್ಚರ್ಯ ಪಡಿಸುವಂಥದ್ದು ಆಗಿರುವುದಿಲ್ಲ. ಅವರಿಗೆ ಆರಂಭದಲ್ಲೇ ಅಂತ್ಯವು ತಿಳಿದಿದೆ. ಇದು ನಮಗೆ ಬಹಳ ನೆಮ್ಮದಿಯನ್ನು ಕೊಡಬೇಕು. ಏಕೆಂದರೆ ನೀವು ನಾಳೆ ಅಥವಾ ಮುಂದಿನ ವಾರ ಒಂದು ಅತಿ ದೊಡ್ಡ ತೊಂದರೆಯನ್ನು ಅಥವಾ ಒಂದು ಮಹಾ ಶೋಧನೆಯನ್ನು ಎದುರಿಸುತ್ತೀರೆಂದು ದೇವರು ತಿಳಿದಿರುವುದರಿಂದ, ಅದನ್ನು ಎದುರಿಸಲು ಬೇಕಾಗುವ ಕೃಪೆಯನ್ನು ಅವರು ನಿಮಗೆ ನಿಶ್ಚಯವಾಗಿ ಒದಗಿಸುತ್ತಾರೆ.

ಕರ್ತರು ಅಪೊಸ್ತಲ ಪೌಲನಿಗೆ, "ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ," ಎಂದು ಹೇಳಿದರು (2 ಕೊರಿ. 12:9). ಅವರ ಕೃಪೆಯು ಎಲ್ಲಾ ಅಗತ್ಯತೆಗಳನ್ನು ನಿಶ್ಚಯವಾಗಿ ಪೂರೈಸುತ್ತದೆ. "ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತರಾದದ್ದರಿಂದ, ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆಯುಳ್ಳವರಾಗಿ, ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರುವಿರಿ." (2 ಕೊರಿ. 9:8). ದೇವರ ಕೃಪೆಯು ನಮ್ಮ ಅಗತ್ಯತೆಯ ಸಮಯದಲ್ಲಿ ನಮಗೆ ಸಹಾಯ ಮಾಡಲು ಹೇರಳವಾಗಿ ಲಭ್ಯವಿದೆ. "ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ, ಆತನ ಕೃಪೆಯಿಂದ ನಮಗೆ ಸಮಯೋಚಿತವಾದ ಸಹಾಯವು ದೊರೆಯುವಂತೆಯೂ, ಧೈರ್ಯದಿಂದ ಕೃಪಾಸನದ ಮುಂದೆ ಬರೋಣ" (ಇಬ್ರಿ. 4:16). ಯಾವುದೇ ರೀತಿಯ ಅಗತ್ಯತೆ ನಿಮ್ಮದಾಗಿದ್ದರೂ, ಅದನ್ನು ಸಂಧಿಸಲು ನಿಮಗೆ ದೇವರ ಕೃಪೆಯು ಲಭ್ಯವಿದೆ. ಆದುದರಿಂದ ನಾವು ಧೈರ್ಯದಿಂದ ಕೃಪಾಸನ ಮುಂದೆ ಹೋಗಿ ಆ ಕೃಪೆಯನ್ನು ಪಡೆದುಕೊಳ್ಳಲು ಆಹ್ವಾನಿಸಲ್ಪಟ್ಟಿದ್ದೇವೆ. ನಾವು ಈ ಕೃಪೆಯನ್ನು ಹೊಂದಿಕೊಳ್ಳದೇ ಇದ್ದುದರಿಂದ, ನಮ್ಮ ಹಿಂದಿನ ಜೀವಿತದಲ್ಲಿ ಸೋಲನ್ನು ಅನುಭವಿಸಿದ್ದೇವೆ. ನಮ್ಮ ಮುಂದಿನ ಜೀವಿತದ ಕಥೆ ಬೇರೆಯದೇ ರೀತಿಯಾಗಲು ಸಾಧ್ಯವಿದೆ. ನಮ್ಮ ಅಗತ್ಯತೆಯ ಸಮಯದಲ್ಲಿ ನಾವು ನಮ್ಮನ್ನು ತಗ್ಗಿಸಿಕೊಂಡು ಕೃಪೆಗಾಗಿ ಮೊರೆಯಿಟ್ಟರೆ, ದೇವರು ನಮ್ಮನ್ನು ನಿರಾಸೆಗೊಳಿಸುವುದಿಲ್ಲ.

ಸತ್ಯವೇದವು ತಿಳಿಸುವದು ಏನೆಂದರೆ, ಯಾರು ಅತಿಶಯವಾದ ಕೃಪೆಯನ್ನು ಪಡೆಯುತ್ತಾರೋ, ಅವರು ಯೇಸು ಕ್ರಿಸ್ತನ ಮೂಲಕ ತಮ್ಮ ಜೀವನದ ಪರಿಸ್ಥಿತಿಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳುತ್ತಾರೆ. "ಮರಣವು ಒಬ್ಬನು ಮಾಡಿದ ಅಪರಾಧದಿಂದ ಉಂಟಾಗಿ, ಆ ಒಬ್ಬನ ದೆಸೆಯಿಂದಲೇ ಆಳುವುದಾದರೆ, ದೇವರು ಧಾರಾಳವಾಗಿ ಅನುಗ್ರಹಿಸುವ ಕೃಪಾದಾನವನ್ನೂ ನೀತಿಯೆಂಬ ವರವನ್ನೂ ಹೊಂದಿದಂಥವರು, ಯೇಸು ಕ್ರಿಸ್ತನೆಂಬ ಈ ಒಬ್ಬ ಪುರುಷನ ಮೂಲಕ ಜೀವಭರಿತರಾಗಿ ಆಳುವುದು ಮತ್ತೂ ನಿಶ್ಚಯವಲ್ಲವೇ?"(ರೋಮಾ. 5:17). ಆದಾಮನಿಗಾಗಿ ದೇವರ ಚಿತ್ತ ಇದಾಗಿತ್ತು - ಎಲ್ಲವುಗಳ ಮೇಲೆ ಆತನು ಅಧಿಕಾರವನ್ನು ಮತ್ತು ದೊರೆತನವನ್ನು ಹೊಂದಲಿ, ಎಂಬುದಾಗಿ. ಆದಿಕಾಂಡ 1:26ರಲ್ಲಿ ಹೀಗೆ ಹೇಳಲಾಗಿದೆ, "ಆ ಮೇಲೆ ದೇವರು ಹೀಗೆಂದರು - ’ನಮ್ಮ ಸ್ವರೂಪದಲ್ಲಿ, ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; ಎಲ್ಲಾ ಭೂಮಿಯ ಮೇಲೆಯೂ ಅವರು ದೊರೆತನ ಮಾಡಲಿ.’" ಆದಾಮನ ಅವಿಧೇಯತೆಯಿಂದಾಗಿ ಈ ವಾಗ್ದಾನವು ಅವನ ಜೀವನದಲ್ಲಿ ಈಡೇರಲಿಲ್ಲ. ಆದರೆ ಈಗ ದೇವರು ಭೂಮಿಯ ಮೇಲೆ ಒಂದು ಹೊಸ ಜನಾಂಗವನ್ನು ಮೇಲೆ ಎಬ್ಬಿಸಿದ್ದಾರೆ - ಯೇಸು ಕ್ರಿಸ್ತನ ಮೇಲೆ ನಂಬಿಕೆ ಇರಿಸಿ ಜೀವಿಸುವ ದೇವರ ಮಕ್ಕಳು - ಅವರು ರಾಜರಂತೆ ಗಾಂಭೀರ್ಯವನ್ನು ಹೊಂದಿರುತ್ತಾರೆ, ಮತ್ತು ಭೂಮಿಯ ಮೇಲೆ ಆಳ್ವಿಕೆಯನ್ನು ನಡೆಸುತ್ತಾರೆ.

ನೀವು ದೀನತೆಯಿಂದ ನಡೆದು ದೇವರ ಕೃಪೆಗೆ ಪಾತ್ರರಾದರೆ, ಇನ್ನು ಮೇಲೆ ಯಾವುದೇ ಪಾಪವು ನಿಮ್ಮ ಮೇಲೆ ಅಧಿಕಾರ ಚಲಾಯಿಸಲು ಆಗುವುದಿಲ್ಲ. ಇನ್ನು ಮೇಲೆ ಯಾವುದೇ ವಿಧವಾದ ಅಂಜಿಕೆ ಅಥವಾ ಕಳವಳವು ನಿಮ್ಮ ಹೃದಯವನ್ನು ಪ್ರವೇಶಿಸುವದಕ್ಕೆ ಅವಕಾಶ ಇರುವುದಿಲ್ಲ. ಇನ್ನು ಮುಂದೆ ನಿಮ್ಮ ಭೂಲೋಕದ ಜೀವನದಲ್ಲಿ ಯಾರೂ ಸಹ - ನಿಮ್ಮ ಮೇಲಧಿಕಾರಿ, ನಿಮ್ಮ ನೆರೆಹೊರೆಯವರು, ನಿಮ್ಮ ಬಂಧು-ಬಳಗ, ನಿಮ್ಮ ಶತ್ರುಗಳು ಮತ್ತು ಸೈತಾನನೂ ಸಹ - ನಿಮಗೆ ದುರ್ಗತಿಯನ್ನು ಉಂಟುಮಾಡಲಾರರು. ನಮ್ಮನ್ನು ಯಾವಾಗಲೂ ಕ್ರಿಸ್ತನ ಅನ್ಯೋನ್ಯತೆಯಲ್ಲಿ ಜಯೋತ್ಸವದಲ್ಲಿ ಮೆರೆಸುವ ದೇವರಿಗೆ ಸ್ತೋತ್ರವಾಗಲಿ. ದೇವರು ಹೊಸ ಒಡಂಬಡಿಕೆಯಲ್ಲಿ ಒದಗಿಸುವ ಕೃಪೆಯ ಕೆಳಗೆ ಜೀವಿಸುವುದು ಎಷ್ಟು ಭಾಗ್ಯಕರವಾಗಿದೆ! ವಾಗ್ದಾನ ಮಾಡಲ್ಪಟ್ಟಿರುವ ದೇಶದ ಪ್ರವೇಶದ್ವಾರವು ನಿಮಗಾಗಿ ತೆರೆಯಲ್ಪಟ್ಟಿದೆ!

ಮುಂದೆ ನಡೆಯಿರಿ ಮತ್ತು ಅದನ್ನು ಸ್ವಾಧೀನ ಪಡಿಸಿಕೊಳ್ಳಿರಿ!