ಹಳೆಯ ಒಡಂಬಡಿಕೆಯಲ್ಲಿ, "ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು ಮತ್ತು ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ತೆಗಿಸಬೇಕು" ಎಂಬುದು ಧರ್ಮಶಾಸ್ತ್ರದ ಕಟ್ಟಳೆಯಾಗಿತ್ತು. ಈ ಕಟ್ಟಳೆಯನ್ನು ದೇವರು ’ಆದಿಕಾಂಡ 21,' ’ಯಾಜಕಕಾಂಡ 24' ಮತ್ತು ’ಧರ್ಮೋಪದೇಶಕಾಂಡ 19'ನೇ ಅಧ್ಯಾಯಗಳಲ್ಲಿ ನೀಡಿದ್ದರು. ಈ ವಚನಗಳಲ್ಲಿ ದೇವರು ಹೇಳಿದ್ದು, ಯಾರಾದರೂ ನಿಮ್ಮ ಕಣ್ಣನ್ನು ಕಿತ್ತುಕೊಂಡರೆ, ನೀವು ಅವರ ಕಣ್ಣನ್ನು ಕಿತ್ತುಕೊಳ್ಳಬೇಕು ಎಂದಲ್ಲ. ಅವರು ಇಲ್ಲಿ ತೋರಿಸಿಕೊಟ್ಟದ್ದು ಏನೆಂದರೆ, ಅವರು ನಿಮ್ಮ ಒಂದು ಕಣ್ಣನ್ನು ಕಿತ್ತುಕೊಂಡಾಗ ನೀವು ಅವರ ಎರಡೂ ಕಣ್ಣುಗಳನ್ನು ಕಿತ್ತುಕೊಳ್ಳಬೇಡಿ. ಈ ಮಾತಿನ ಮುಖ್ಯಾಂಶ ಏನೆಂದರೆ, ನೀವು ಅಪರಾಧಿಯನ್ನು ಕ್ಷಮಿಸಿ ಅವನನ್ನು ಹೋಗಲು ಬಿಡಬಹುದು ಮತ್ತು ಅವನ ಕಣ್ಣನ್ನು ಕಿತ್ತುಕೊಳ್ಳದೆ ಅವನನ್ನು ಬಿಡಬಹುದು. ಅದು ಉತ್ತಮ ಮಾರ್ಗವಾಗಿರುತ್ತದೆ. ದೇವರು "ಕಣ್ಣಿಗೆ ಕಣ್ಣು ಮತ್ತು ಹಲ್ಲಿಗೆ ಹಲ್ಲು" ಎಂಬುದರ ಮೂಲಕ ಶಿಕ್ಷೆಗೆ ಒಂದು ಪರಿಮಿತಿಯನ್ನು ಇಸಿದರು.
ಆದರೆ ಯೇಸುಸ್ವಾಮಿ ಈ ಮಾನದಂಡವನ್ನು ಇನ್ನೂ ಹೆಚ್ಚಿಸಿ, "ಕೆಡುಕನನ್ನು ಎದುರಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು. ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಒಳಂಗಿಯನ್ನು ತಕ್ಕೊಳ್ಳಬೇಕೆಂದು ಬಯಸುವವನಿಗೆ ಮೇಲಂಗಿಯನ್ನೂ ಬಿಡು. ಒಬ್ಬನು - ಒಂದು ಮೈಲು ದೂರ ಬಾ, ಎಂದು ನಿನ್ನನ್ನು ಬಿಟ್ಟೀಹಿಡಿದರೆ ಅವನ ಸಂಗಡ ಎರಡು ಮೈಲು ಹೋಗು" (ಮತ್ತಾ. 5:39-41). ರೋಮನ್ ಸೈನಿಕರು ಕೆಲವೊಮ್ಮೆ ತಮ್ಮ ಗುಲಾಮರಾಗಿದ್ದ ಯೆಹೂದ್ಯ ಜನರನ್ನು ತಮ್ಮ ಸಾಮಾನುಗಳನ್ನು ಮತ್ತು ಸೈನ್ಯದ ಉಪಕರಣಗಳನ್ನು ಒಂದು ಮೈಲಿ ದೂರ ಸಾಗಿಸಲು ಒತ್ತಾಯಿಸುತ್ತಿದ್ದರು. ಯೆಹೂದ್ಯರು ಗುಲಾಮರಾಗಿದ್ದ ಕಾರಣ, ಅವರು ಅದನ್ನು ಮಾಡಲೇ ಬೇಕಾಗಿತ್ತು. ಇಂತಹ ಸಂದರ್ಭಗಳಲ್ಲಿ ನಾವು ಆ ವ್ಯಕ್ತಿಯೊಂದಿಗೆ ಎರಡು ಮೈಲು ದೂರ ಹೋಗಬೇಕು, ಅದರ ವಿಷಯದಲ್ಲಿ ಅವನೊಂದಿಗೆ ಜಗಳವಾಡಬಾರದು, ನಿನ್ನ ಬಳಿ ಬೇಡುವವನಿಗೆ ಕೊಡಬೇಕು ಮತ್ತು ನಿನ್ನಿಂದ ಸಾಲ ಪಡೆಯಲು ಬಯಸುವವನಿಂದ ದೂರ ಸರಿಯಬಾರದು, ಎಂದು ಯೇಸು ನಮಗೆ ಹೇಳುತ್ತಾರೆ.
ನಾವು ಈ ಮಾತನ್ನು ಅದರ ಉದ್ದೇಶ ಅಂದರೆ ಅದು ಹೇಳಲ್ಪಟ್ಟ ಮನೋಭಾವದ ಆಧಾರದ ಮೇಲೆ ಸ್ವೀಕರಿಸಬೇಕು. ಯೇಸುಸ್ವಾಮಿ ನಿಖರವಾಗಿ ಏನನ್ನು ಹೇಳಲು ಬಯಸಿದರು, ಎಂಬುದನ್ನು ನಾವು ನೋಡಬೇಕು. ನಾವು ಗುಲಾಮರಂತೆ ಇರಬೇಕೆಂದು ಅವರು ಹೇಳಿದರೆ? ಜನರು ತಮಗೆ ಇಷ್ಟಬಂದಂತೆ ನಮ್ಮನ್ನು ನಡೆಸಿಕೊಳ್ಳಲು ನಾವು ಬಿಡಬೇಕೇ? ಅದು ಸಾಧ್ಯವಿಲ್ಲ. ನಿಮಗೆ ಸತ್ಯವೇದದ ವಚನಗಳು ಸರಿಯಾಗಿ ಅರ್ಥವಾಗದಿದ್ದಾಗ, ಅರ್ಥವನ್ನು ತಿಳಿಯಲು ಸ್ವತಃ ಯೇಸು ಕ್ರಿಸ್ತನ ಮಾದರಿಯನ್ನೇ ನೋಡಿ - ಏಕೆಂದರೆ ಅವರೇ ಶರೀರಧಾರಿಯಾಗಿ ಬಂದಂತ ವಾಕ್ಯವಾಗಿದ್ದಾರೆ. ಹಳೆ ಒಡಂಬಡಿಕೆಯಲ್ಲಿ, ಧರ್ಮಶಾಸ್ತ್ರದ ಪ್ರತಿಯೊಂದು ಅಕ್ಷರ ಮತ್ತು ಸಣ್ಣ ವಿಷಯಗಳನ್ನು ವಿವರಿಸಲು ಶಾಸ್ತ್ರಿಗಳಿದ್ದರು. ಆದರೆ ಹೊಸ ಒಡಂಬಡಿಕೆಯಲ್ಲಿ, ನಾವು ವಚನಗಳನ್ನು ಅಷ್ಟೊಂದು ವಿಶ್ಲೇಷಿಸುವ ಅಗತ್ಯವಿಲ್ಲ; ಬದಲಾಗಿ ನಾವು ಯೇಸುವಿನ ಕಡೆಗೆ ನೋಡಬೇಕು, ಏಕೆಂದರೆ ಈಗ ನಮಗೆ ಅವರ ಮಾದರಿ ಲಭ್ಯವಿದೆ.
"ಯಾರಾದರೂ ನಿನ್ನ ಬಲ ಕೆನ್ನೆಗೆ ಹೊಡೆದರೆ, ಅವರಿಗೆ ಇನ್ನೊಂದು ಕೆನ್ನೆಯನ್ನು ತೋರಿಸು," ಎಂದು ಯೇಸುವು ಹೇಳಿದ ಮಾತಿನ ಅರ್ಥವೇನು? ಯೇಸುಸ್ವಾಮಿ ಶಿಲುಬೆಗೆ ಏರುವ ಮುನ್ನ, ಪ್ರಧಾನ ಯಾಜಕರ ಮುಂದೆ ವಿಚಾರಣೆಗೆ ನಿಂತಿದ್ದಾಗ, ಅಲ್ಲಿದ್ದ ಒಬ್ಬ ಅಧಿಕಾರಿಯು ಆತನ ಕೆನ್ನೆಗೆ ಒಂದು ಏಟು ಹಾಕಿದನು. ಆಗ ಅವರು ತಮ್ಮ ಇನ್ನೊಂದು ಕೆನ್ನೆಯನ್ನು ತೋರಿಸಲಿಲ್ಲ ಎಂಬುದನ್ನು ನಾವು ನೋಡುತ್ತೇವೆ. ಅವರು ’ಯೋಹಾನನು 18:23'ರಲ್ಲಿ, "ನಾನು ಮಾತನಾಡಿದ್ದು ಸರಿಯಾಗಿದ್ದರೆ, ನನಗೇಕೆ ಹೊಡೆಯುತ್ತಿ?" ಎಂದು ಕೇಳಿದರು. ಅದಕ್ಕೆ ಆ ಅಧಿಕಾರಿಯು ಉತ್ತರಿಸಲಿಲ್ಲ (ಬಹುಶಃ ಆತನು ಮತ್ತೊಮ್ಮೆ ಹೊಡೆದಿರಬಹುದು ಮತ್ತು ಯೇಸು ತಿರುಗಿ ಹೊಡೆಯಲಿಲ್ಲ). ಅವರು ಹೊಡೆದಾಗ, ಯೇಸು ಹೊಡೆಯಲು ತನ್ನ ಇನ್ನೊಂದು ಕೆನ್ನೆಯನ್ನು ತೋರಿಸಲಿಲ್ಲ. ಆದ್ದರಿಂದ, ಕ್ರಿಸ್ತನು ಹೇಳಿದ ಮಾತಿನ ಆಶಯವನ್ನು ನಾವು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಯೇಸುವು ತಾನು ಬೋಧಿಸಿದ್ದನ್ನು ತಾನೇ ಪಾಲಿಸಲಿಲ್ಲ ಎಂದು ನಾವು ಆರೋಪಿಸ ಬೇಕಾಗುತ್ತದೆ.
ಇಲ್ಲಿ ಬಳಸಿಕೊಂಡಿರುವ ನಿಯಮ ಏನೆಂದರೆ: ನಾನು ಸೇಡು ತೀರಿಸಲು ಬಯಸುವುದಿಲ್ಲ; ನನಗೆ ಮಾಡಿದ್ದಕ್ಕೆ ಪ್ರತಿಯಾಗಿ ನಾನು ಅವರಿಗೆ ಕೇಡು ಮಾಡಲು ಹೋಗುವುದಿಲ್ಲ. ಯಾರಾದರೂ ನನ್ನನ್ನು ದೆವ್ವ ಎಂದು ಕರೆದರೆ, ನಾನು ಆ ವ್ಯಕ್ತಿಯನ್ನು ದೆವ್ವ ಎಂದು ಕರೆಯುವುದಿಲ್ಲ. ಯಾರಾದರೂ ನನಗೆ ಹೊಡೆದರೆ, ನಾನು ತಿರುಗಿ ಹೊಡೆಯುವುದಿಲ್ಲ. ಬದಲಾಗಿ, ನಾನು ಸುಮ್ಮನಿದ್ದು, ಜನರು ನನ್ನನ್ನು ದುರುಪಯೋಗ ಪಡಿಸಿಕೊಳ್ಳದಂತೆ ನನ್ನನ್ನು ದೇವರು ಕಾಪಾಡುತ್ತಾರೆ ಎಂದು ನಾನು ನಂಬುತ್ತೇನೆ.
"ನಿನ್ನ ಒಳಂಗಿಯನ್ನು ತೆಕ್ಕೊಳ್ಳಲು ವ್ಯಾಜ್ಯ ಮಾಡುವವನಿಗೆ ನಿನ್ನ ಮೇಲಂಗಿಯನ್ನೂ ಕೊಟ್ಟುಬಿಡು," ಎಂದು ಯೇಸುವು ಹೇಳಿದ್ದರ ಅರ್ಥವೇನು? ಉದಾಹರಣೆಗೆ, ಯಾರಾದರೂ ಅನ್ಯಾಯವಾಗಿ ಸುಳ್ಳು ಹೇಳಿಕೆ ನೀಡಿ, ನಿನ್ನ ಸ್ವಂತ ಸ್ವತ್ತಿಗಾಗಿ ಮೊಕದ್ದಮೆ ಹೂಡಿ, ಒಂದು ವೇಳೆ ನ್ಯಾಯಾಲಯಕ್ಕೆ ಸುಳ್ಳು ದಾಖಲೆಗಳನ್ನು ಕೊಡಬಹುದು, ಹಾಗೂ ನಿನ್ನಿಂದ ನಿನ್ನ ಮನೆಯನ್ನು ಕಸಿದುಕೊಳ್ಳಲು ಬಯಸಬಹುದು - ಆಗ ನೀನು ಏನು ಮಾಡಬೇಕು? ನೀನು ಆತನಿಗೆ ನಿನ್ನ ಮನೆಯನ್ನು ಕೊಟ್ಟು, ನಿನ್ನ ಮತ್ತೊಂದು ಮನೆಯನ್ನೂ ತೆಗೆದುಕೊಳ್ಳುವಂತೆ ಹೇಳಬೇಕೇ? ಇದು ಈ ಮಾತಿನ ಅರ್ಥವೇ?
ಯೇಸುವಿನ ಮಾತಿನ ಅರ್ಥ ಖಂಡಿತವಾಗಿ ಇದಲ್ಲ. ಈ ಸಂದರ್ಭದಲ್ಲಿ, ನಾವು ಮಾತಿನ ಒಳಾರ್ಥವನ್ನು ತಿಳಕೊಳ್ಳಬೇಕು. ಯಾರಾದರೂ ನಿಮ್ಮನ್ನು ಒಂದು ಮೈಲು ಹೋಗಲು ಒತ್ತಾಯಿಸಿದರೆ, ಅವನೊಂದಿಗೆ ಎರಡು ಮೈಲು ಹೋಗು. ಇನ್ನೊಂದು ರೀತಿ ಹೇಳುವುದಾದರೆ, ಯಾರಾದರೂ ನೀನು ಏನನ್ನಾದರೂ ಮಾಡುವಂತೆ ಒತ್ತಾಯಿಸಿದರೆ, ಅದಕ್ಕಿಂತ ಹೆಚ್ಚಿನದನ್ನು ಮಾಡು. ನೀನು ಇದರ ಮೂಲೋದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮಿಂದ ಯಾರಾದರೂ ಸಾಲ ಪಡೆಯಲು ಬಯಸಿದರೆ ನಿರಾಕರಿಸಬೇಡ, ಎಂದು ಯೇಸುವು ನಮಗೆ ಇನ್ನೊಂದು ಸೂಚನೆಯನ್ನು ನೀಡಿದ್ದಾರೆ. ನನ್ನಿಂದ ಸಾಲ ಪಡೆಯಲು ಬಯಸುವ ಪ್ರತಿಯೊಬ್ಬ ವ್ಯಕ್ತಿಗೆ ನಾನು ಸಾಲ ಕೊಡಬೇಕೆಂದು ಯೇಸು ಹೇಳುತ್ತಿದ್ದಾರೆಯೇ? ಭಾರತದ ನಿಜಸ್ಥಿತಿ ಏನೆಂದರೆ, ನೀನು ಯಾರಿಗಾದರೂ ಒಮ್ಮೆ ಹಣವನ್ನು ನೀಡಿ, ಹಣವನ್ನು ಎಲ್ಲರಿಗೂ ಸುಲಭವಾಗಿ ಕೊಡುತ್ತೀ ಎಂದು ತೋರಿಸಿಕೊಟ್ಟರೆ, ಬಹಳ ಬೇಗನೆ ನೀನು ಎಲ್ಲವನ್ನೂ ಕಳೆದುಕೊಳ್ಳುವೆ.
ನೀನು ಯೇಸುವಿನ ಮಾತಿನ ಮೂಲತತ್ವವನ್ನು ಅರ್ಥಮಾಡಿಕೊಳ್ಳದೆ, ಈ ಹೇಳಿಕೆಯನ್ನು ಕುರುಡಾಗಿ ಅಕ್ಷರಶವಾಗಿ ಪಾಲಿಸಿದರೆ, ನೀನು ದೊಡ್ಡ ತೊಂದರೆಗೆ ಒಳಗಾಗುತ್ತೀ. ನಾವು ಪಾಪವನ್ನು ತೀವ್ರವಾಗಿ ವಿರೋಧಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಯೇಸು ನಮಗೆ ಕಲಿಸುತ್ತಾರೆ; ಈ ನಿಟ್ಟಿನಲ್ಲಿ, ಯೇಸು ನಾವು ಒಬ್ಬ ಕುರುಡನಂತೆ ಆಗಬೇಕು ಅಥವಾ ಕೈ ಕತ್ತರಿಸಿದವನಂತೆ ಇರಬೇಕು ಎಂದು ಹೇಳಿದಾಗ, ನಾವು ಈ ಮಾತಿನ ಆತ್ಮವನ್ನು ಅರ್ಥಮಾಡಿಕೊಳ್ಳಬೇಕು: ಸೇಡು ತೀರಿಸಬೇಡ, ನಿನ್ನ ಒಳ್ಳೆತನವನ್ನು ಇನ್ನೊಬ್ಬನು ದುರುಪಯೋಗ ಮಾಡುವುದನ್ನು ಸ್ವೀಕರಿಸು. ಸ್ವಂತತನಕ್ಕೆ ಸಾಯುವುದಕ್ಕೂ ಸಿದ್ದನಾಗಿರು. ಆದರೆ ಇದರ ಅರ್ಥ ನನಗೆ ಯಾವುದೇ ಹಕ್ಕುಗಳಿಲ್ಲವೆಂದಲ್ಲ.
"ಇಲ್ಲಿ ಬಳಸಲಾಗಿರುವ ನಿಯಮ ಇದು: ನಾನು ಸೇಡು ತೀರಿಸಲು ಬಯಸುವುದಿಲ್ಲ; ನನಗೆ ಮಾಡಿದ್ದಕ್ಕೆ ಪ್ರತಿಯಾಗಿ ನಾನು ಅವರಿಗೆ ಕೆಟ್ಟದ್ದನ್ನು ಮಾಡಲು ಬಯಸುವುದಿಲ್ಲ”
ಸಾರಿಗೆ ವಾಹನದ ಚಾಲಕನಾಗಿ ನೌಕರಿ ಮಾಡುತ್ತಿದ್ದ ನಮ್ಮ ಸಭೆಯ ಒಬ್ಬ ಸಹೋದರನು ಒಂದು ಕೂಟದಲ್ಲಿ ನೀಡಿದ ಸಾಕ್ಷಿ ಹೀಗಿತ್ತು: ರಾತ್ರಿಯ ವೇಳೆಯಲ್ಲಿ ಆತನು ತನ್ನ ವಾಹನವನ್ನು ಓಡಿಸುವ ಸಮಯದಲ್ಲಿ, ಕೆಲವೊಮ್ಮೆ ಎದುರಿನಿಂದ ಬರುವ ಕಾರಿನ ಚಾಲಕರು ತಮ್ಮ ವಾಹನದ ಎದುರಿನ ದೀಪವನ್ನು ತುಂಬಾ ಪ್ರಕಾಶಮಯವಾಗಿ ಇರಿಸಿಕೊಂಡು ಬಂದಾಗ, ಆ ಬೆಳಕು ಈತನ ಕಣ್ಣಿಗೆ ಹೊಡೆಯುತ್ತಿತ್ತು. ಎದುರು ದಿಕ್ಕಿನಿಂದ ಮತ್ತೊಂದು ವಾಹನ ಬರುವಾಗ ಚಾಲಕರು ತಮ್ಮ ದೀಪಗಳನ್ನು ಮಂದಗೊಳಿಸುವ ವಾಡಿಕೆಯಿತ್ತು, ಆದರೆ ಅವರು ಹಾಗೆ ಮಾಡದೆ, ತಮ್ಮ ದೀಪಗಳ ಮೂಲಕ ಅವನ ಕಣ್ಣನ್ನು ಕುರುಡಾಗಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ತನ್ನ ವಾಹನದ ಎದುರಿನ ದೀಪವನ್ನೂ ಸಹ ಜೋರಾಗಿ ಹೊಳೆಯುವಂತೆ ಹಾಕಿ, ಎದುರಿನಿಂದ ಬರುತ್ತಿದ್ದ ಚಾಲಕನನ್ನು ಕುರುಡಾಗಿಸಿ ಅವರಿಗೂ ಪಾಠ ಕಲಿಸಬೇಕೆಂದು ಆತನಿಗೆ ಅನಿಸಿತು. ಆ ಕ್ಷಣದಲ್ಲಿ, ತಾನು ಒಬ್ಬ ಕ್ರೈಸ್ತನು ಮತ್ತು ಸೇಡು ತೀರಿಸಬಾರದು ಎಂದು ಆತನಿಗೆ ಅರಿವಾಗಿ, ಆತನು ಹಾಗೆ ಮಾಡದಿರಲು ನಿರ್ಧರಿಸಿದನು. ನಮ್ಮನ್ನು ಇತರರು ಹೇಗೆ ನೋಯಿಸುತ್ತಾರೋ, ನಾವು ಅವರನ್ನು ಅದೇ ರೀತಿ ನೋಯಿಸುವುದರ ಬಗ್ಗೆ, ಅಂದರೆ ಸೇಡು ತೀರಿಸುವುದರ ಬಗ್ಗೆ, ಆ ಸಹೋದರನು ಎಂತಹ ಪ್ರಕಟನೆಯನ್ನು ಪಡೆದನೆಂದು ಗಮನಿಸಿರಿ!
ನಾನು ಯೇಸು ಕಲಿಸಿದ ಮೂಲಸೂತ್ರವನ್ನು ಅರ್ಥಮಾಡಿಕೊಂಡರೆ, ರಸ್ತೆಯಲ್ಲಿ ಯಾರಾದರೂ ತಮ್ಮ ವಾಹನದ ಎದುರಿನ ದೀಪವನ್ನು ನನ್ನ ಕಣ್ಣನ್ನು ಕುಕ್ಕುವಂತೆ ಬೆಳಗಿಸುವಾಗ, ಆ ತತ್ವವನ್ನು ಪ್ರಾಯೋಗಿಕವಾಗಿ ಬಳಸುವುದು ಹೇಗೆಂದು ನಾನು ಕಂಡುಕೊಳ್ಳುತ್ತೇನೆ. ಸತ್ಯವೇದದಲ್ಲಿ ಈ ಸನ್ನಿವೇಶವು ನಿಖರವಾಗಿ ಪ್ರಸ್ತಾಪಿಸಲ್ಪಡದೇ ಇರಬಹುದು, ಆದರೆ ನಾನು ಈ ಮೂಲಸೂತ್ರವನ್ನು ಅರಿತುಕೊಂಡು, ಅದಕ್ಕೆ ವಿಧೇಯನಾಗಿ ನನ್ನ ಸಮಯ, ಹಣ ಮತ್ತು ಶಕ್ತಿಯು ಪ್ರಾಥಮಿಕವಾಗಿ ಕರ್ತನಿಗೆ ಸೇರಿದ್ದೆಂದು ಗುರುತಿಸಿ, ಅದಕ್ಕೆ ಅನುಗುಣವಾಗಿ ನಡೆಯಲು ಸಿದ್ಧನಿದ್ದೇನೆ. ನಾನು ಮನುಷ್ಯರ ಗುಲಾಮನಲ್ಲ ಮತ್ತು ಯಾರೂ ಬಂದು ನನ್ನನ್ನು ತನ್ನ ಗುಲಾಮನನ್ನಾಗಿಸಲು ನಾನು ಅವಕಾಶ ನೀಡುವುದಿಲ್ಲ. ನಾನು ಪ್ರಾಥಮಿಕವಾಗಿ ಕರ್ತನ ಒಬ್ಬ ಗುಲಾಮನಾಗಿದ್ದೇನೆ ಮತ್ತು ನಾನು ಮನುಷ್ಯರ ಗುಲಾಮನಾಗುವುದಿಲ್ಲ.
ಹಾಗಾಗಿ ನಾನು ಇದನ್ನು ನೆನಪಿರಿಸಿಕೊಂಡರೆ, ನಾನು ಈ ಮೂಲತತ್ವಗಳನ್ನು ಅರ್ಥಮಾಡಿಕೊಳ್ಳುತ್ತೇನೆ. ನಾನು ಎಂದಿಗೂ ಸೇಡು ತೀರಿಸಲು ಬಯಸುವುದಿಲ್ಲ, ಒಬ್ಬ ವ್ಯಕ್ತಿಯು ನನ್ನೊಂದಿಗೆ ವರ್ತಿಸುವುದಕ್ಕೆ ತಕ್ಕಂತೆ ನಾನು ಆತನೊಂದಿಗೆ ವರ್ತಿಸಲು ಎಂದಿಗೂ ಇಚ್ಛಿಸುವುದಿಲ್ಲ, ಮತ್ತು ಅವನು ನನ್ನೊಂದಿಗೆ ಮಾತನಾಡಿದ ರೀತಿಯಲ್ಲಿ ನಾನು ಅವನೊಂದಿಗೆ ಮಾತನಾಡಲು ಬಯಸುವುದಿಲ್ಲ. ನಾನು ತಗ್ಗಿಸಿಕೊಳ್ಳಲು ಬಯಸುತ್ತೇನೆ, ನಾನು ಕೃಪೆಯನ್ನು ತೋರಿಸಲು ಬಯಸುತ್ತೇನೆ ಮತ್ತು ನನ್ನ ಹಕ್ಕುಗಳನ್ನು ಬಿಟ್ಟುಕೊಡಲು ತಯಾರಾಗಿದ್ದೇನೆ.
========