WFTW Body: 

ಒಂದು ಸಲ ಯೇಸುವು 5 ರೊಟ್ಟಿಗಳ ಮೂಲಕ ಜನರ ಒಂದು ದೊಡ್ಡ ಗುಂಪಿಗೆ ಊಟ ಒದಗಿಸಿದರು. ಅವರು ಮೊದಲು ರೊಟ್ಟಿಗಳನ್ನು ’ಆಶೀರ್ವದಿಸಿದರು’. ಆದರೆ ಆ 5 ರೊಟ್ಟಿಗಳು ಬದಲಾಗಲಿಲ್ಲ, ಇದ್ದಂತೆಯೇ ಇದ್ದವು - ಮತ್ತು ಹಸಿದ ಜನರಿಗೆ ಊಟ ದೊರಕಲಿಲ್ಲ. ಜನರಿಗೆ ಆಹಾರ ನೀಡಲು ಸಾಧ್ಯವಾದದ್ದು ಆ ರೊಟ್ಟಿಗಳು ’ಮುರಿಯಲ್ಪಟ್ಟ’ ನಂತರವೇ. ಹಾಗಾದರೆ, ನಮಗೆ ಪವಿತ್ರಾತ್ಮನ ’ಆಶೀರ್ವಾದ’ (ಅಭಿಷೇಕ) ಇದ್ದರೆ ಸಾಲದು. ನಾವು ಕರ್ತನಿಂದ ’ಮುರಿಯಲ್ಪಡುವದು’ ಅವಶ್ಯ. ಇದರ ನಂತರ ನಾವು ನಮ್ಮ ಮುಖವನ್ನು ನೆಲದ ಧೂಳಿನಲ್ಲಿ ಮುಚ್ಚಿಡುತ್ತೇವೆ ಮತ್ತು ದೇವರ ಬಲವು ನಮ್ಮ ಮೂಲಕ ತಡೆಯಿಲ್ಲದೆ ಹರಿಯುತ್ತದೆ.

ವಿಮೋಚನಕಾಂಡ 4ನೇ ಅಧ್ಯಾಯದಲ್ಲಿ, ಮೋಶೆ ಮತ್ತು ಆರೋನರು ಜೊತೆಯಾಗಿ ದೇವಜನರ ನಾಯಕರಾಗಿ ನೇಮಕಗೊಂಡರು. ಆರೋನನು ಚೆನ್ನಾಗಿ ಮಾತಾಡ ಬಲ್ಲವನಾಗಿದ್ದನು, ಆದರೆ ಮೋಶೆಯಲ್ಲಿ ವಾಕ್ಚಾತುರ್ಯ ಇರಲಿಲ್ಲ (ವಿಮೋ. 4:10,14) . ಆದರೆ ದೇವರು ಉಪಯೋಗಿಸಿದ್ದು ಮೋಶೆಯನ್ನು, ಮತ್ತು ಆರೋನನನ್ನು ಅಲ್ಲ - ಏಕೆಂದರೆ ಮೋಶೆಯು ಒಬ್ಬ ಮುರಿಯಲ್ಪಟ್ಟ ಮನುಷ್ಯನಾಗಿದ್ದನು, ಆದರೆ ಆರೋನನು ಹಾಗಿರಲಿಲ್ಲ. ದೇವರು ಮೋಶೆಗೆ 40 ವರ್ಷಗಳ ಕಾಲ ಅರಣ್ಯದಲ್ಲಿ ಮುರಿಯುವಿಕೆಯ ಶಿಕ್ಷಣವನ್ನು ನೀಡಿದ್ದರು. ಅವನನ್ನು ದೇವರು ಅರಮನೆಯ ರಾಜಕುಮಾರನ ಸ್ಥಾನದಿಂದ ಇಳಿಸಿ, ಮರಳುಗಾಡಿನಲ್ಲಿ ಕುರುಬನನ್ನಾಗಿ ಮಾಡಿ, ಅವನನ್ನು ದೀನತೆಗೆ ನಡೆಸಿದರು. ಅದಲ್ಲದೆ ಅವರು 40 ವರ್ಷಗಳ ಕಾಲ ಅವನು ತನ್ನ ಮಾವನ ಮನೆಯಲ್ಲಿ ನೆಲೆಸಿ, ಒಬ್ಬ ಆಳಾಗಿ ದುಡಿಯುವಂತೆ ಮಾಡಿದರು! ಇದು ಅವನನ್ನು ಸಂಪೂರ್ಣವಾಗಿ ಮುರಿದುಬಿಟ್ಟಿತು. ಆರೋನನು ಇಂತಹ ಯಾವುದೇ ಮುರಿಯುವಿಕೆಯನ್ನು ಅನುಭವಿಸಲಿಲ್ಲ. ಇವರಿಬ್ಬರ ನಡುವಿನ ವ್ಯತ್ಯಾಸ ಇದೇ ಆಗಿತ್ತು.

ವಿಮೋಚನಕಾಂಡ 32ನೇ ಅಧ್ಯಾಯದಲ್ಲಿ, ಈ ಇಬ್ಬರು ನಾಯಕರ ಕಾರ್ಯಶೀಲತೆಯಲ್ಲಿ ಎಷ್ಟು ವ್ಯತ್ಯಾಸ ಇತ್ತೆಂದು ನಾವು ನೋಡಬಹುದು. ’ಮುರಿಯಲ್ಪಟ್ಟಿದ್ದ’ ಮನುಷ್ಯನಾದ ಮೋಶೆಯು ಜನರ ಮಧ್ಯೆ ಇದ್ದಷ್ಟು ಸಮಯ ಇಸ್ರಾಯೇಲ್ಯರು ಕರ್ತನನ್ನು ಹಿಂಬಾಲಿಸಿದರು. ಆದರೆ ಮೋಶೆಯು ಕೇವಲ 40 ದಿನಗಳು ಅವರನ್ನು ಅಗಲಿದಾಗ, ಆರೋನನು ತಾತ್ಕಾಲಿಕವಾಗಿ ಅವರ ನಾಯಕನಾದ ಒಡನೆಯೇ, ಅವರು ವಿಗ್ರಹಾರಾಧನೆಯಲ್ಲಿ ತೊಡಗಿದರು ಮತ್ತು ಒಂದು ಚಿನ್ನದ ಬಸವನನ್ನು ಆರಾಧಿಸಲು ಸಿದ್ಧರಾದರು. ಆರೋನನು ಚೆನ್ನಾಗಿ ಮಾತಾಡ ಬಲ್ಲವನಾಗಿದ್ದನು. ಆದರೆ ದೇವಜನರನ್ನು ಪರಿಶುದ್ಧರಾಗಿ ಇರಿಸಿಕೊಳ್ಳಲು ಅವನಿಂದ ಆಗಲಿಲ್ಲ, ಏಕೆಂದರೆ ಅವನು ಜನರನ್ನು ಮೆಚ್ಚಿಸಲು ಬಯಸಿದನು. ಯಾವಾಗಲೂ ಮುರಿಯಲ್ಪಡದ ಸಭಾ ಹಿರಿಯರು ತಮ್ಮ ಸ್ವಂತ ಮಾನ್ಯತೆಯನ್ನು ಬಯಸುತ್ತಾರೆ ಮತ್ತು ಸಭೆಯ ಜನರನ್ನು ಮೆಚ್ಚಿಸಲು ತವಕಿಸುತ್ತಾರೆ. ಇದರ ಪರಿಣಾಮವಾಗಿ ಅವರ ಕೆಳಗಿನ ಜನರು ಕರ್ತನಿಂದ ದೂರ ಸರಿಯುತ್ತಾರೆ.

20 ಲಕ್ಷ ಜನರು ದೇವರ ಆಜ್ಞೆಗಳನ್ನು 40 ವರ್ಷಗಳ ಕಾಲ ಅನುಸರಿಸಿ ನಡೆಯುವಂತೆ ಅವರನ್ನು ಕಾಪಾಡಿದ್ದು ಮುರಿಯಲ್ಪಟ್ಟ ಒಬ್ಬ ವ್ಯಕ್ತಿಯಾದ ಮೋಶೆ. ದೇವಸಭೆಯ ಹಲವಾರು ಶತಕಗಳ ಇತಿಹಾಸದಲ್ಲಿ ಹೀಗೆಯೇ ನಡೆಯುತ್ತಾ ಬಂದಿದೆ. ದೇವರು ತನ್ನ ಸಭೆಯನ್ನು ತಾನು ನಿಯಮಿಸಿದ ಮಾರ್ಗದಲ್ಲಿ ಉಳಿಸಿಕೊಳ್ಳಲು ’ಮುರಿಯಲ್ಪಟ್ಟ ಜನರನ್ನು’ ಉಪಯೋಗಿಸಿದ್ದಾರೆ.

ನಮ್ಮ ಸಭಾ ಹಿರಿಯರಿಗೆ ವಿಧೇಯರಾಗಬೇಕು, ಎಂಬ ಆದೇಶದ ಮೂಲಕ ದೇವರು ನಮ್ಮನ್ನು ಮುರಿಯುತ್ತಾರೆ. ನಾವು ಒಬ್ಬ ’ದೈವಿಕ ಮನುಷ್ಯನಿಗೆ’ ವಿಧೇಯರಾದಾಗ ಅದು ನಮ್ಮನ್ನು ಅನೇಕ ಮೂರ್ಖತನದ ಕಾರ್ಯಗಳಿಂದ ರಕ್ಷಿಸುವದು ಮಾತ್ರವಲ್ಲದೆ, ಆತನಿಂದ ಶ್ರೇಷ್ಠವಾದ ಜ್ಞಾನವನ್ನು ಕಲಿತುಕೊಳ್ಳುವ ಅವಕಾಶವನ್ನು ಸಹ ನಮಗೆ ನೀಡುತ್ತದೆ. ನಮಗೆ ತಿಳಿಯದಂತ ಅನೇಕ ಅಪಾಯಗಳನ್ನು ಆತನು ಎದುರಿಸಿರುವ ಕಾರಣ, ಆತನು ಅವುಗಳ ಬಗ್ಗೆ ನಮ್ಮನ್ನು ಎಚ್ಚರಿಸಲು ಸಾಧ್ಯವಾಗುತ್ತದೆ. ನಾವು ಆತ್ಮಿಕ ಅಧಿಕಾರದ ಕೆಳಗೆ ಇರುವಂಥದ್ದು, ಮಕ್ಕಳು ತಮ್ಮ ತಂದೆತಾಯಂದಿರ ಕೆಳಗೆ ಇರುವಂತೆ ನಮಗೆ ಒಂದು ರಕ್ಷಣೆಯನ್ನು ಕೊಡುತ್ತದೆ. ನಾವು 1 ಪೇತ್ರ. 5:5 ರಲ್ಲಿ ಓದುವಂತೆ, ’ಯೌವನಸ್ಥರು ಹಿರಿಯರಿಗೆ ಅಧೀನರಾಗಿ ಇರಬೇಕು, ಏಕೆಂದರೆ ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ ಮತ್ತು ದೀನರಿಗೆ ಕೃಪೆಯನ್ನು ಅನುಗ್ರಹಿಸುತ್ತಾನೆ’. ಈ ವಚನದಲ್ಲಿ ಆತ್ಮಿಕ ಅಧಿಕಾರವನ್ನು ದೇವರಿಂದ ಹೇಗೆ ಗಳಿಸುವದು, ಎಂಬುದರ ಬಗ್ಗೆ ಒಂದು ದೊಡ್ಡ ರಹಸ್ಯವನ್ನು ನಾವು ನೋಡುತ್ತೇವೆ.

ನನಗೆ ಪರಿಚಿತರಾದ ಅನೇಕ ಉತ್ತಮ ಕ್ರೈಸ್ತ ಸಹೋದರರಿಗೆ ಆತ್ಮಿಕ ಅಧಿಕಾರವನ್ನು ಕೊಡಲು ದೇವರು ನಿರಾಕರಿಸಿದ್ದು ಒಂದೇ ಒಂದು ಕಾರಣಕ್ಕಾಗಿ: ’ಅವರು ತಮ್ಮ ಜೀವನವಿಡೀ ಯಾರಿಗೂ ವಿಧೇಯರಾಗುವುದನ್ನು ಕಲಿಯಲಿಲ್ಲ. ಹೀಗಾಗಿ ಅವರ ಗಡುಸಾದ ಚಿತ್ತವು ಮುರಿಯಲ್ಪಡಲೇ ಇಲ್ಲ’. ಒಬ್ಬ ’ಮುರಿಯದಿರುವ’ ವ್ಯಕ್ತಿಯ ಕೈಯಲ್ಲಿ ಅಧಿಕಾರವು ಬಹಳ ಅಪಾಯಕಾರಿ ಆಗುತ್ತದೆ. ನೀವು ಮುರಿಯಲ್ಪಡುವ ಮೊದಲು, ನೀವು ಜನರ ಮೇಲೆ ಅಧಿಕಾರ ಚಲಾಯಿಸಲು ಪ್ರಯತ್ನಿಸಿದರೆ, ಅವರನ್ನು ನಾಶಗೊಳಿಸುತ್ತೀರಿ ಮತ್ತು ಜೊತೆಗೆ ಸ್ವತಃ ನೀವು ನಾಶಗೊಳ್ಳುತ್ತೀರಿ. ನಮ್ಮಲ್ಲಿ ಯಾರಿಗಾದರೂ ಆತ್ಮಿಕ ಅಧಿಕಾರವನ್ನು ನೀಡುವ ಮೊದಲು, ದೇವರು ನಮ್ಮ ಹೆಮ್ಮೆಯ ಬಲವನ್ನು ಮುರಿಯುವದು ಅವಶ್ಯವಾಗಿದೆ.

ನಾನು ನನ್ನ ಸ್ವಂತ ಅನುಭವವನ್ನು ನಿಮ್ಮೊಂದಿಗೆ ಚುಟುಕಾಗಿ ಹಂಚಿಕೊಳ್ಳಲು ಬಯಸುತ್ತೇನೆ. ನನ್ನ 20 ಮತ್ತು 30ನೇ ವಯಸ್ಸಿನ ನಡುವೆ, ನನ್ನ ಸೇವೆಯ ಬಗ್ಗೆ ಅಸೂಯೆಗೊಂಡಿದ್ದ ಹಲವು ಸಭೆಗಳ ಹಿರಿಯರ ಮೂಲಕ ನಾನು ಕೆಳಕ್ಕೆ ದಬ್ಬಲ್ಪಟ್ಟು, ಎಲ್ಲರ ಮುಂದೆ 10 ವರ್ಷಗಳ ಕಾಲ ಅವಮಾನಕ್ಕೆ ಈಡಾಗುವದನ್ನು ದೇವರು ಅನುಮತಿಸಿದರು. ಈ ಪ್ರತಿಯೊಂದು ಸಂದರ್ಭದಲ್ಲೂ, ನಾನು ನನ್ನ ಬಾಯಿಯನ್ನು ಮುಚ್ಚಿಕೊಂಡು, ಅವರನ್ನು ವಿರೋಧಿಸದೆ ಅವರಿಗೆ ಅಧೀನನಾಗುವಂತೆ ಕರ್ತರು ನನಗೆ ಹೇಳಿದರು. ನಾನು ಹಾಗೆಯೇ ಮಾಡಿದೆ. ನಾನು ಅವರ ಸಭೆಗಳಲ್ಲಿ ಇದ್ದಾಗ ಅವರೊಂದಿಗೆ ಉತ್ತಮ ಸಂಬಂಧವನ್ನು ಇರಿಸಿಕೊಂಡೆನು, ಮತ್ತು ’ಅವರ ಸಭೆಗಳನ್ನು ಬಿಟ್ಟ ನಂತರವೂ’ ಹಾಗೆಯೇ ಮುಂದುವರಿದೆನು. ಆ ವರ್ಷಗಳಲ್ಲಿ, ದೇವರು ನನಗಾಗಿ ಮುಂದೆ ಯಾವ ಸೇವೆಯನ್ನು ಕಾದಿರಿಸಿದ್ದಾರೆ ಎಂಬ ತಿಳುವಳಿಕೆ ನನ್ನಲ್ಲಿ ಇರಲಿಲ್ಲ. ಆದರೆ ದೇವರು ನನ್ನನ್ನು ಹಲವಾರು ವರ್ಷಗಳ ವರೆಗೆ ಮುರಿಯುವುದರ ಮೂಲಕ, ಆತ್ಮಿಕ ಅಧಿಕಾರವನ್ನು ಉಪಯೋಗಿಸುವುದಕ್ಕೆ ನನ್ನನ್ನು ಸಿದ್ಧಗೊಳಿಸಿದರು. ಈಗಲೂ ನನ್ನಲ್ಲಿ ದೇವರ ಮುರಿಯುವಿಕೆ ಪೂರ್ತಿಯಾಗಿಲ್ಲ. ಹಿಂದಿನ ಕೆಲವು ವರ್ಷಗಳಲ್ಲಿ, ನಾನು ಹಿಂದೆಂದೂ ನೋಡಿರದ ಹೊಸ ಶೋಧನೆಗಳ ಮೂಲಕ ದೇವರು ನನ್ನನ್ನು ನಡೆಸಿದ್ದಾರೆ - ಉದಾಹರಣೆಗಾಗಿ, ಧಾರ್ಮಿಕ ಜನರು ಸುಳ್ಳು ದೂಷಣೆಯ ಮೂಲಕ ನನ್ನನ್ನು 10 ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಡಿಸಿದರು. ಆದರೆ ನನ್ನ ಜೀವನದಲ್ಲಿ ದೇವರ ಉದ್ದೇಶ ಬದಲಾಗಿಲ್ಲ - ’ನನ್ನನ್ನು ಇನ್ನೂ ಹೆಚ್ಚಾಗಿ ಮುರಿಯುವುದು, ಮತ್ತು ಅದರ ಮೂಲಕ ನನಗೆ ಅವರ ಜೀವ ಮತ್ತು ಅವರ ಅಧಿಕಾರವನ್ನು ಇನ್ನೂ ಹೆಚ್ಚಾಗಿ ಒದಗಿಸುವುದು’.

ದೇವರು ನಮ್ಮ ಬಲ ಮತ್ತು ನಮ್ಮ ಹೆಮ್ಮೆಯನ್ನು ಮುರಿಯುವುದಕ್ಕಾಗಿ, ನಮ್ಮ ನಾಯಕರ ಮೂಲಕ ನಮ್ಮನ್ನು ತಿದ್ದುತ್ತಾರೆ. ಸಾಮಾನ್ಯವಾಗಿ ಪ್ರತಿಯೊಬ್ಬ ವಿಶ್ವಾಸಿಗೂ ತಿದ್ದುವಿಕೆಯನ್ನು ಸ್ವೀಕರಿಸುವದು ಬಹಳ ಕಷ್ಟ ಎನಿಸುತ್ತದೆ. ಎರಡು ವರ್ಷ ವಯಸ್ಸಿನ ಒಂದು ಚಿಕ್ಕ ಮಗುವಿಗೂ ತಿದ್ದುವಿಕೆಯು - ಮುಖ್ಯವಾಗಿ ’ಅದು ಇತರರ ಮುಂದೆ ಕೊಡಲ್ಪಟ್ಟಾಗ’ - ಅದನ್ನು ಸ್ವೀಕರಿಸುವುದು ಸುಲಭವಲ್ಲ. ನೀವು ಯಾವಾಗಲಾದರೂ ’ಸಾರ್ವಜನಿಕ’ ತಿದ್ದುವಿಕೆಯನ್ನು ಸಂತೋಷವಾಗಿ ಸ್ವೀಕರಿಸಿದ್ದೀರಾ? ಜೀವಮಾನದಲ್ಲಿ ಒಂದು ಬಾರಿಯಾದರೂ ಅದನ್ನು ಸ್ವೀಕರಿಸಿದ್ದೀರಾ? ಇಲ್ಲವಾದಲ್ಲಿ, ನಿಮ್ಮಲ್ಲಿ ಆತ್ಮಿಕ ಅಧಿಕಾರವಿಲ್ಲ ಎನ್ನುವದು ಆಶ್ಚರ್ಯಕರವೇನೂ ಅಲ್ಲ. "ಮುರಿಯಲ್ಪಡದ ಜನರು ಹೆಚ್ಚಾಗಿ ಏಕಾಂಗಿಗಳಾಗಿ ಇರುತ್ತಾರೆ." ಅವರು ಯಾರಿಗೂ ತಲೆ ಬಾಗುವುದಿಲ್ಲ. ಅವರು ’ಬಯಸಿದ ಕಡೆಗೆ’ ಹೋಗುತ್ತಾರೆ ಮತ್ತು ’ತಮ್ಮ ಇಷ್ಟದ ಪ್ರಕಾರ’ ನಡೆಯುತ್ತಾರೆ. ಇಂತಹ ಮುರಿಯಲ್ಪಡದ ವಿಶ್ವಾಸಿಗಳು ತಮಗೆ ವಿಧೇಯರಾಗಿ, ತಮ್ಮ ಮಾತನ್ನು ಒಪ್ಪಿಕೊಳ್ಳುವ ಜನರೊಂದಿಗೆ ಮಾತ್ರ ಹೊಂದಿಕೊಂಡು ಕೆಲಸಮಾಡುತ್ತಾರೆ. ದೇವರು ಇಂತಹ "ಏಕಾಂಗಿಗಳಿಗೆ" ಆತ್ಮಿಕ ಅಧಿಕಾರವನ್ನು ಎಂದಿಗೂ ಒಪ್ಪಿಸುವುದಿಲ್ಲ, ಏಕೆಂದರೆ ದೇವರು ಕ್ರಿಸ್ತನ ದೇಹವನ್ನು ನಿರ್ಮಿಸುತ್ತಿದ್ದಾರೆ, ವಿಶ್ವಾಸಿಗಳ ವೈಯಕ್ತಿಕ ಅಭಿರುಚಿಯ ಒಂದು ಗುಂಪನ್ನಲ್ಲ!