WFTW Body: 

ಪ್ರಕಟನೆ 22:1-2ರಲ್ಲಿ ನಾವು ಹೀಗೆ ಓದಿಕೊಳ್ಳುತ್ತೇವೆ -

"ಪಟ್ಟಣದ ಬೀದಿಯ ಮಧ್ಯದಲ್ಲಿ ನದಿಯು ಹರಿಯುತ್ತಿತ್ತು ಮತ್ತು ಆ ನದಿಯ ಉಭಯ ಪಾರ್ಶ್ವಗಳಲ್ಲಿ ಜೀವವೃಕ್ಷವಿತ್ತು; ಅದು ತಿಂಗಳು ತಿಂಗಳಿಗೆ ಫಲವನ್ನು ಫಲಿಸುತ್ತಾ, ಹನ್ನೆರಡು ತರದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿ ಮಾಡುವದಕ್ಕೆ ಪ್ರಯೋಜನವಾಗಿವೆ."

ಆದಿ. 2 ಮತ್ತು ಪ್ರಕ. 22ರ ನಡುವೆ ನಾವು ಬಹಳಷ್ಟು ಹೊಂದಾಣಿಕೆಯನ್ನು ಕಾಣುತ್ತೇವೆ. ಜೀವವೃಕ್ಷವು ಸ್ವತಃ ದೇವರ ಜೀವವನ್ನು - ನಾವು ಈಗ ಪಾಲ್ಗೊಳ್ಳಬಹುದಾದ ನಿತ್ಯಜೀವ ಅಥವಾ ದೇವರ ಸ್ವಭಾವವನ್ನು - ಸಾಂಕೇತಿಕವಾಗಿ ಸೂಚಿಸುತ್ತದೆ. ನಿತ್ಯಜೀವದ ಅರ್ಥ "ಯಾವಾಗಲೂ ಜೀವಿಸುವುದು" ಎಂದಲ್ಲ, ಏಕೆಂದರೆ ಬೆಂಕಿಯ ಕೆರೆಗೆ ದೊಬ್ಬಲ್ಪಡುವವರು ಸಹ ಯುಗ ಯುಗಾಂತರಗಳಲ್ಲಿಯೂ ಜೀವಿಸುತ್ತಾರೆ. ಆದರೆ ಅವರಲ್ಲಿ ನಿತ್ಯಜೀವವಿಲ್ಲ. ನಿತ್ಯಜೀವವೆಂದರೆ, ’ಆರಂಭವಿಲ್ಲದ’ ಮತ್ತು ’ಅಂತ್ಯವಿಲ್ಲದ’ ಒಂದು ಜೀವ. ಇದು ಸ್ವತಃ ದೇವರ ಜೀವವಾಗಿದೆ. ಜೀವವೃಕ್ಷವು ಇದನ್ನೇ ಸಂಕೇತಿಸುತ್ತದೆ.

ಆದಾಮನು ಮಾಡಿದ ಮೂರ್ಖತನವೆಂದರೆ, ಅವನು ಜೀವವೃಕ್ಷದ ಬಳಿಗೆ ಹೋಗುವ ಬದಲು, ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಬಳಿಗೆ ಹೋದನು; ಇಂದು ಸಹ ಅನೇಕರು ಹೀಗೆ ಮಾಡುತ್ತಾರೆ - ಜೀವವನ್ನು ಪಡೆಯುವ ಬದಲಾಗಿ ಸತ್ಯವೇದದ ಜ್ಞಾನವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರವು ಪ್ರಕ. 22ರಲ್ಲಿ ಕಂಡುಬರುವುದಿಲ್ಲ. ಅದು ಅದೃಶ್ಯವಾಗಿದೆ. ದೇವರು ಜೀವವೃಕ್ಷಕ್ಕೆ ಹೋಗುವ ದಾರಿಯಲ್ಲಿ ಒಂದು ಧಗಧಗನೆ ಪ್ರಜ್ವಲಿಸುವ ಕತ್ತಿಯನ್ನು ಇರಿಸಿದರು (ಆದಿ. 3:24). ಜೀವವೃಕ್ಷದಲ್ಲಿ ಪಾಲ್ಗೊಳ್ಳುವದಕ್ಕಾಗಿ ನಮ್ಮ ಸ್ವೇಚ್ಛಾಜೀವದ ಮೇಲೆ ಕತ್ತಿಯು ಬೀಳುವುದು ಅವಶ್ಯವೆಂದು ಇದು ನಮಗೆ ಕಲಿಸುತ್ತದೆ.

ಈ ಕಾರಣಕ್ಕಾಗಿ ಹೆಚ್ಚಿನ ಕ್ರೈಸ್ತರು ಒಳ್ಳೇದರ ಕೆಟ್ಟದ್ದರ ತಿಳುವಳಿಕೆಯನ್ನು ಹುಟ್ಟಿಸುವ ಮರದ ಬಳಿಗೆ ಹೋಗುತ್ತಾರೆ, ಏಕೆಂದರೆ ಆ ದಾರಿಯಲ್ಲಿ ಅವರನ್ನು ಕತ್ತಿಯು ತಡೆಯುವುದಿಲ್ಲ. ಸತ್ಯವೇದದ ಜ್ಞಾನವನ್ನು ಸಂಪಾದಿಸುವುದಕ್ಕೆ, ನಮ್ಮ ಸ್ವೇಚ್ಛಾಜೀವವನ್ನು ಕೊನೆಗೊಳಿಸಬೇಕಿಲ್ಲ ಅಥವಾ ದಿನಾಲೂ ಶಿಲುಬೆಯನ್ನು ಹೊರಬೇಕಿಲ್ಲ. ಆದರೆ ದೇವರ ಸ್ವಭಾವವನ್ನು ಪಡೆಯುವುದಕ್ಕೆ, ನಾವು ಯಾವಾಗಲೂ "ದೇಹದಲ್ಲಿ ಯೇಸುವಿನ ಮರಣಾವಸ್ಥೆಯನ್ನು ಅನುಭವಿಸ ಬೇಕಾಗುತ್ತದೆ" (2 ಕೊರಿ. 4:10). ನಮ್ಮ ಮೇಲೆ ಕತ್ತಿಯು ಬೀಳುವುದನ್ನು ನಾವು ಅನುಮತಿಸ ಬೇಕಾಗುತ್ತದೆ. ಶಿಲುಬೆಯ ದಾರಿಯು ಜೀವವೃಕ್ಷದ ದಾರಿಯಾಗಿದೆ. ಯೇಸುವಿನ ಮೇಲೆ ಆ ಕತ್ತಿಯು ಬಿದ್ದಿತು ಮತ್ತು ಅವರು ಶಿಲುಬೆಗೆ ಹಾಕಲ್ಪಟ್ಟರು. ನಾವು ಸಹ ಆತನೊಂದಿಗೆ ಶಿಲುಬೆಗೆ ಹಾಕಿಸಲ್ಪಟ್ಟದ್ದರಿಂದ, ನಮ್ಮ ಮೇಲೆಯೂ ಕತ್ತಿಯು ಬೀಳಬೇಕು. ಈ ಮೂಲಕ ನಾವು ಜೀವವೃಕ್ಷದಲ್ಲಿ ಪಾಲ್ಗೊಂಡು, ಒಂದೊಂದು ತಿಂಗಳಿನಲ್ಲಿಯೂ ಹೊಸ ವಿಧವಾದ ಫಲವನ್ನು ನೀಡಿ, ಆ ಮರದ ಎಲೆಗಳಿಂದ ಜನರನ್ನು ವಾಸಿ ಮಾಡಬಹುದು.

ಪ್ರಕಟನೆ 22:7ರಲ್ಲಿ ನಾವು ಹೀಗೆ ಓದಿಕೊಳ್ಳುತ್ತೇವೆ -

"ಇಗೋ, ತ್ವರಿತವಾಗಿ ಬರುತ್ತೇನೆ. ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನೆಯ ಮಾತನ್ನು ಕೈಕೊಂಡು ನಡೆಯುವವನು ಧನ್ಯನು."

ಇಲ್ಲಿ ಕರ್ತನು ’ಬೇಗನೆ’ ಬರುವುದಾಗಿ ಹೇಳುತ್ತಿಲ್ಲ. ಅವನು ’ತ್ವರಿತವಾಗಿ’ ಬರುವುದಾಗಿ ಹೇಳುತ್ತಾನೆ - ’ಹಠಾತ್ತಾಗಿ’ - ಅದು ಹೇಗೆಂದರೆ, ಕಳ್ಳನು ಮುನ್ಸೂಚನೆಯಿಲ್ಲದೆ ರಾತ್ರಿಕಾಲದಲ್ಲಿ ಹಠಾತ್ತಾಗಿ ಬರುವ ಹಾಗೆ.

ಪ್ರಕ. 22:8,9ರಲ್ಲಿ ನಾವು ಹೀಗೆ ಓದಿಕೊಳ್ಳುತ್ತೇವೆ -

"ಈ ಸಂಗತಿಗಳನ್ನು ಕೇಳಿ ಕಂಡವನು ಯೋಹಾನನೆಂಬ ನಾನೇ. ನಾನು ಕೇಳಿ ಕಂಡಾಗ ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನಿಗೆ ನಮಸ್ಕಾರ ಮಾಡಬೇಕೆಂದು ಅವನ ಪಾದಕ್ಕೆ ಬಿದ್ದೆನು. ಅವನು ನನಗೆ - ’ಹಾಗೆ ಮಾಡಬೇಡ ನೋಡು; ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ, ಈ ಪುಸ್ತಕದಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವವರಿಗೂ ನಾನು ನಿನ್ನ ಜೊತೆಯ ದಾಸನಾಗಿದ್ದೇನೆ; ದೇವರಿಗೇ ನಮಸ್ಕಾರ ಮಾಡು’, ಎಂದು ಹೇಳಿದನು."

ಯೋಹಾನನು ತನಗೆ ಅನೇಕ ಸತ್ಯಾಂಶಗಳನ್ನು ಕಲಿಸಲು ದೇವರು ಉಪಯೋಗಿಸಿದ್ದ ವ್ಯಕ್ತಿಯಿಂದ ಪ್ರಭಾವಿತನಾಗಿ, ಅವನಿಗೆ ತಗಲಿಬಿದ್ದು ತಪ್ಪು ಮಾಡಿದನು. ಯೋಹಾನನು ತನಗೆ ಅನೇಕ ಸಂಗತಿಗಳನ್ನು ತೋರಿಸಿದ್ದ ದೇವದೂತನಿಗೆ ಆಭಾರಿಯಾಗಿದ್ದನು, ಮತ್ತು ಅವನ ಪಾದಕ್ಕೆ ಅಡ್ಡಬಿದ್ದು ಅವನನ್ನು ಆರಾಧಿಸಲು ಪ್ರಯತ್ನಿಸಿದನು. ಆದರೆ ದೇವದೂತನು ಒಡನೆಯೇ, "ಹಾಗೆ ಮಾಡಬೇಡ; ನಾನು ನಿನ್ನ ಜೊತೆಯ ದಾಸನಾಗಿದ್ದೇನೆ; ದೇವರನ್ನು ಮಾತ್ರ ಆರಾಧಿಸು," ಎಂದು ಹೇಳಿದನು.

ದೇವರ ನಿಜವಾದ ಸೇವಕನ ಒಂದು ಗುರುತು, ಯಾರಾದರೂ ಅವನಿಗೆ ಅಂಟಿಕೊಳ್ಳಲು ಪ್ರಯತ್ನಿಸುವಾಗ, ಅವನು ಒಡನೆಯೇ ಆತನಿಂದ ದೂರ ಸರಿಯುತ್ತಾನೆ; ಅವನು ಹೀಗೆ ಮಾಡಿದಾಗ ಆ ವ್ಯಕ್ತಿಯು ಕರ್ತನಿಗೆ ಅಂಟಿಕೊಳ್ಳ ಬೇಕಾಗುತ್ತದೆ, ಮತ್ತು ಮನುಷ್ಯನಿಗಲ್ಲ! ಪರಲೋಕದಲ್ಲಿ ಎಲ್ಲರೂ ಕೇವಲ ಒಂದು ಹಾಡನ್ನು ಹಾಡುತ್ತಾರೆ - ಹೊಸ ಕೀರ್ತನೆಯನ್ನು - "ನೀನೊಬ್ಬನೇ ಸ್ತೋತ್ರಕ್ಕೆ ಯೋಗ್ಯನು". ಈ ದೇವದೂತನು ಆ ಕೀರ್ತನೆಯನ್ನು ಕಲಿತಿದ್ದನು, ಹಾಗಾಗಿ ಅವನು ಯೋಹಾನನನ್ನು ತನ್ನಿಂದ ದೂರ ತಳ್ಳಿದನು ಮತ್ತು ದೇವರನ್ನು ಮಾತ್ರ ಸ್ತೋತ್ರ ಮಾಡು, ಎಂದು ಆತನಿಗೆ ಹೇಳಿದನು.

ಪ್ರಕ. 22:11ರಲ್ಲಿ ನಾವು ಹೀಗೆ ಓದಿಕೊಳ್ಳುತ್ತೇವೆ -

"ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ; ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆ ಮಾಡಿಕೊಳ್ಳಲಿ; ನೀತಿವಂತನು ಇನ್ನೂ ನೀತಿಯನ್ನು ಅನುಸರಿಸಲಿ; ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ."

ಇದು ನಮಗೆ ಸತ್ಯವೇದದ ಕೊನೆಯ ಪುಟದಲ್ಲಿ ಸಿಗುವ ಒಂದು ಅದ್ಭುತ ಪ್ರೋತ್ಸಾಹಕರ ಮಾತಾಗಿದೆ. "ಹೇಸಿಕೆಯಾಗಿ ಜೀವಿಸುವವನು" ಮತ್ತು "ಅನ್ಯಾಯ ಮಾಡುವವನು" ಹಾಗೆಯೇ ಮುಂದುವರಿಯಲಿ, ಎಂದು ಜನರಿಗೆ ಹೇಳಲಾಗಿದೆ. ಇದರ ಒಳಾರ್ಥ ಹೀಗಿದೆ: "ನೀನು ಇಡೀ ಸತ್ಯವೇದವನ್ನು ಕೊನೆಯ ಪುಟದ ವರೆಗೆ ಓದಿ, ಮಾನಸಾಂತರ ಹೊಂದಲು ಅಥವಾ ನಿನ್ನ ಪಾಪಗಳನ್ನು ಬಿಟ್ಟುಬಿಡಲು ಇನ್ನೂ ಸಿದ್ಧವಿಲ್ಲವಾದರೆ, ಹಾಗೆಯೇ ಹೊಲಸು ಜೀವನವನ್ನು ಮುಂದುವರಿಸಿ, ತಪ್ಪು ಮಾಡುತ್ತಾ ಹೋಗು. ನಿನಗೆ ಇನ್ನು ಯಾವ ನಿರೀಕ್ಷೆಯೂ ಇಲ್ಲ". ಪ್ರಕಟನೆ ಪುಸ್ತಕದಲ್ಲಿ ಪಾಪದ ವಿರುದ್ಧ ದೇವರ ನ್ಯಾಯತೀರ್ಪಿನ ಬಗ್ಗೆ ಓದಿದ ನಂತರವೂ, ನೀನು ನಿನ್ನ ಲಾಲಸೆಗಳನ್ನು ಬಿಡದಿದ್ದರೆ ಮತ್ತು ಪಾಪಭೋಗಗಳನ್ನು ಅನುಭವಿಸಲು ಹಾತೊರೆದರೆ, ಮತ್ತು ಅಶ್ಲೀಲ ಪುಸ್ತಕಗಳನ್ನು ಹಾಗೂ ಚಲನಚಿತ್ರಗಳನ್ನು ಆಶಿಸುವುದಾದರೆ, ಇನ್ನೊಬ್ಬನ ವಿರುದ್ಧವಾದ ನಿನ್ನ ಹಳೆಯ ಕೋಪ ದ್ವೇಷಗಳನ್ನು ಬಿಡದೆ, ಕ್ಷಮಿಸಲು ಒಪ್ಪಿಕೊಳ್ಳದಿದ್ದರೆ, ಇನ್ನೂ ಹೊಲಸು ಭಾಷೆಯನ್ನು ಮತ್ತು ಚಾಡಿ ಹೇಳುವುದನ್ನು ಬಿಡದಿದ್ದರೆ, ಹೊಟ್ಟೆಕಿಚ್ಚು ಪಟ್ಟು, ಸ್ವಾರ್ಥಕ್ಕಾಗಿ ಮತ್ತು ಈ ಹೊಲಸು ಲೋಕಕ್ಕಾಗಿ ಜೀವಿಸುವುದಾದರೆ, ಹೋಗು, ಹಾಗೆಯೇ ಮಾಡು. ದೇವರು ನಿನಗೆ ಅಡ್ಡಿಯಾಗುವುದಿಲ್ಲ.

ಆದರೆ ’ನೀತಿವಂತನಿಗಾಗಿ’ ಪ್ರಕ. 22:11b (ಎರಡನೇ ಭಾಗ) ಹೇಳಿರುವದನ್ನು ಗಮನಿಸಿರಿ. "ನೀತಿವಂತನು ಇನ್ನೂ ನೀತಿಯನ್ನು ಅನುಸರಿಸಲಿ; ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ." ಈ ನೀತಿವಂತಿಕೆಯ ಅನುಕರಣೆ ಎಂದಿಗೂ ಕೊನೆಗೊಳ್ಳುವುದಿಲ್ಲ. ಹಾಗಾಗಿ ಇನ್ನೂ ಹೆಚ್ಚಿನ ನೀತಿವಂತಿಕೆ ಮತ್ತು ಪವಿತ್ರತೆಗಾಗಿ ತವಕಿಸಿರಿ. ನಾವು ನಮ್ಮ ಜೀವಿತದ ಅಂತ್ಯದಲ್ಲಿ ಸಾಧಿಸುವ ನೀತಿವಂತಿಕೆಯ ಮಟ್ಟಕ್ಕೆ ತಕ್ಕಂತೆ, ನಾವು ನಿತ್ಯತ್ವದಲ್ಲಿ ಹೇಗೆ ಜೀವಿಸುವೆವು ಎಂಬುದನ್ನು ನಿರ್ಧರಿಸಲಾಗುತ್ತದೆ. ನಾವು ಪಾಪ ಮಾಡುತ್ತಾ, ದರಿದ್ರ ಜೀವನವನ್ನು ಜೀವಿಸಿದ್ದರೆ, ನಾವು ಯುಗ ಯುಗಾಂತರಕ್ಕೂ ಬೆಂಕಿಯ ಕೆರೆಯಲ್ಲಿ ಪಾಪ, ದರಿದ್ರತೆ ಮತ್ತು ಅಧರ್ಮದ ಜೀವನವನ್ನು ಜೀವಿಸುತ್ತೇವೆ. ಈ ಜೀವನದಲ್ಲಿ ನಾವು ನೀತಿ ಮತ್ತು ಪವಿತ್ರತೆಯನ್ನು ಹಿಂಬಾಲಿಸಿ ನಡೆದರೆ, ನಿತ್ಯತ್ವದಲ್ಲಿಯೂ ಸಹ ನಾವು ಅದನ್ನೇ ಹಿಂಬಾಲಿಸುತ್ತೇವೆ. ನಾವು ಸಾಯುವಾಗ ಇರುವ ಸ್ಥಿತಿಯು ನಮ್ಮ ಇಡೀ ನಿತ್ಯತ್ವವನ್ನು ನಿಗದಿಗೊಳಿಸುತ್ತದೆ. "ಒಂದು ಮರವು ತೆಂಕಣಕ್ಕಾಗಲೀ ಬಡಗಣಕ್ಕಾಗಲೀ (ದಕ್ಷಿಣಕ್ಕೆ ಅಥವಾ ಉತ್ತರಕ್ಕೆ) ಬಿದ್ದರೆ, ಅದು ಬಿದ್ದ ಸ್ಥಳದಲ್ಲಿ ಹಾಗೆಯೇ ಇರುವುದು" (ಪ್ರಸಂಗಿ 11:3).

ಪ್ರಕ. 22:21ರಲ್ಲಿ ನಾವು ಹೀಗೆ ಓದಿಕೊಳ್ಳುತ್ತೇವೆ -

"ಕರ್ತನಾದ ಯೇಸುವಿನ ಕೃಪೆಯು ಎಲ್ಲರೊಂದಿಗೆ ಇರಲಿ. ಆಮೆನ್."

ದೇವರ ವಾಕ್ಯವು ಕೊನೆಗೊಳ್ಳುವ ರೀತಿ ಎಷ್ಟು ರೋಮಾಂಚಕವಾಗಿದೆ. ನಾವು ದೇವರ ’ಕೃಪೆಯಿಂದ ಮಾತ್ರ’ ಹೊಸ ಯೆರೂಸಲೇಮ್ ಪಟ್ಟಣದಲ್ಲಿ ಭಾಗಿಗಳಾಗಬಹುದು. ನಾವು ಕೇವಲ ದೇವರ ಬಲ ಮತ್ತು ಸಹಾಯದಿಂದ, ನಮ್ಮನ್ನು ಹಲವಾರು ವರ್ಷಗಳಿಂದ ಬಂಧಿಸಿ, ದಾಸರನ್ನಾಗಿ ಇರಿಸಿಕೊಂಡಿದ್ದ ಗುಲಾಮತನಗಳಿಂದ ಬಿಡುಗಡೆ ಹೊಂದಬಹುದು. ’ಕೃಪೆಯು’ ನಮ್ಮ ಪಾಪಗಳನ್ನು ಮನ್ನಿಸುತ್ತದೆ! ಅದಲ್ಲದೆ ’ಕೃಪೆಯು’ ನಮಗೆ ಪಾಪ, ಈ ಲೋಕ ಮತ್ತು ಸೈತಾನನನ್ನು ಜಯಿಸಲು ಸಹಾಯ ನೀಡುತ್ತದೆ! ಈ ಪದವನ್ನು ’ಹಳೆಯ ಒಡಂಬಡಿಕೆಯ’ ಕೊನೆಯ ಪದದೊಂದಿಗೆ ಹೋಲಿಸಿ ನೋಡಿರಿ - ಅಲ್ಲಿ "ಶಾಪ" ಎಂಬ ಪದವಿದೆ. ಮಲಾ. 4:5ರಲ್ಲಿ, "ನಾನು ಬಂದು ದೇಶವನ್ನು ’ಶಾಪದಿಂದ’ ಹತಮಾಡದಂತೆ," ಎಂದು ದೇವರು ಹೇಳುತ್ತಾರೆ. ’ಹೊಸ ಒಡಂಬಡಿಕೆಯು’ ಯೇಸುವಿನ ಜನನದಿಂದ ಆರಂಭಗೊಳ್ಳುತ್ತದೆ ಮತ್ತು ಕೊನೆಯಲ್ಲಿ, "ಕರ್ತನಾದ ಯೇಸುವಿನ ಕೃಪೆಯು ಎಲ್ಲರೊಂದಿಗೆ ಇರಲಿ," ಎಂಬ ಶುಭಕಾಮನೆಯನ್ನು ನೀಡುತ್ತದೆ.

ನಾವು ಹಳೆಯ ಒಡಂಬಡಿಕೆಯ ಅಂತ್ಯದಲ್ಲಿ ನೀಡಲಾಗಿರುವ ಶಾಪದಿಂದ ಮುಕ್ತರಾಗಿ, ಹೊಸ ಒಡಂಬಡಿಕೆಯ ಕೃಪೆಯ ಕೆಳಗೆ ಬರಬಹುದು, ಮತ್ತು ಸಂಪೂರ್ಣ ನಿತ್ಯತ್ವದಲ್ಲಿ ನಮ್ಮ ಜೀವಿತಗಳ ಪ್ರತಿಯೊಂದು ಕ್ಷೇತ್ರದಲ್ಲಿ ದೇವರ ಆಶೀರ್ವಾದವನ್ನು ಅನುಭವಿಸಬಹುದು, ಮತ್ತು ದೇವರ ವಾಸಸ್ಥಾನದಲ್ಲಿ ಅವರ ಜೊತೆಗೆ ಇರಬಹುದು, ಎಂಬ ಸಂಗತಿಯು ಎಷ್ಟು ಅದ್ಭುತವಾದದ್ದಾಗಿದೆ. ಹಲ್ಲೆಲೂಯಾ! ಎಲ್ಲಾ ಪ್ರಭಾವ, ಸ್ತೋತ್ರ ಮತ್ತು ಸಮ್ಮಾನವು ದೇವರಿಗೆ ಮತ್ತು ನಮ್ಮ ಪಾಪಗಳಿಗಾಗಿ ಯಜ್ಞದ ಕುರಿಯಾದಾತನಿಗೆ ಸಲ್ಲಲಿ. , ಆಮೆನ್ ಮತ್ತು ಆಮೆನ್!