ಅನೇಕ ಜನರು ಕೋಪವನ್ನು, ಹಣದ ವ್ಯಾಮೋಹವನ್ನು, ಮನುಷ್ಯರಿಂದ ಗೌರವವನ್ನು ಬಯಸುವುದನ್ನು, ತಮ್ಮ ಶತ್ರುವನ್ನು ದ್ವೇಷಿಸುವುದನ್ನು, ಸಣ್ಣ ಪುಟ್ಟ ಸುಳ್ಳು ಹೇಳುವುದನ್ನು ಪಾಪವೆಂದು ಪರಿಗಣಿಸದಿರುವ ಹಾಗೆಯೇ, ಚಿಂತೆಯ ಮನೋಭಾವವನ್ನೂ ಸಹ ಅವರು ಪಾಪವೆಂದು ಪರಿಗಣಿಸುವುದಿಲ್ಲ.
ಇಂತಹ ವಿಷಯಗಳನ್ನು ಅನೇಕರು ಹಗುರವಾಗಿ "ದೌರ್ಬಲ್ಯ" ಅಥವಾ "ಬಲಹೀನತೆ" ಎಂದು ಕರೆಯುತ್ತಾರೆ. ನೀವು ಎಲ್ಲಿಯವರೆಗೆ ಇದನ್ನು "ದೌರ್ಬಲ್ಯ" ವೆಂದು ಕರೆಯುತ್ತೀರೋ, ಅಲ್ಲಿಯವರೆಗೆ ನೀವು ಇದರಿಂದ ಮುಕ್ತರಾಗಲು ಸಾಧ್ಯವಿಲ್ಲ. ಯೇಸು ನಮ್ಮನ್ನು "ದೌರ್ಬಲ್ಯ" ಗಳಿಂದ ರಕ್ಷಿಸಲು ಬರಲಿಲ್ಲ; ಆತನು ನಮ್ಮನ್ನು ಪಾಪದಿಂದ ರಕ್ಷಿಸಲು ಬಂದನು. ನಾವು ಯಾವುದನ್ನಾದರೂ ಪಾಪವೆಂದು ಅರಿಕೆ ಮಾಡಿದರೆ, ಯೇಸುವು ನಮ್ಮನ್ನು ಅದರಿಂದ ರಕ್ಷಿಸುತ್ತಾನೆ. ಆದರೆ ನೀವು ಪಾಪಕ್ಕೆ ನಯವಾದ (ಹಗುರವಾದ) ಒಂದು ಹೆಸರನ್ನು ನೀಡಲು ಪ್ರಯತ್ನಿಸಿದರೆ, ನೀವು ಅದರಿಂದ ಎಂದಿಗೂ ಬಿಡುಗಡೆ ಹೊಂದುವುದಿಲ್ಲ. ಇಂತಹ ಯಾವುದೇ ನಡವಳಿಕೆಯನ್ನು ನಿಮಗೆ ತಿಳಿದಿರುವ ಅತ್ಯಂತ ಕೆಟ್ಟ ಹೆಸರಿನಿಂದ ಕರೆಯಿರಿ. ಕಾಮವನ್ನು "ವ್ಯಭಿಚಾರ" ಎಂದು ಕರೆಯಿರಿ, ಕೋಪವನ್ನು "ಕೊಲೆ" ಎಂದು ಕರೆಯಿರಿ, ಹಣವನ್ನು ಪ್ರೀತಿಸುವುದನ್ನು "ದೇವರನ್ನು ದ್ವೇಷಿಸುವುದು" ಎಂದು ಕರೆಯಿರಿ; ಆಗ ಅದರಲ್ಲಿ ಎಷ್ಟು ಕೆಟ್ಟತನವಿದೆ ಎಂದು ನಿಮಗೆ ಅರ್ಥವಾಗುವುದರಿಂದ, ನೀವು ಅದರಿಂದ ಬಿಡುಗಡೆ ಹೊಂದುತ್ತೀರಿ.
ಏಡ್ಸ್ ಮತ್ತು ಕ್ಯಾನ್ಸರ್ ರೋಗಗಳನ್ನು ಕೇವಲ ಕೆಮ್ಮು ಅಥವಾ ನೆಗಡಿಯಷ್ಟೇ ಅಪಾಯಕರವೆಂದು ನೀವು ಅಂದುಕೊಂಡರೆ, ಆಗ ನೀವು ಖಂಡಿತವಾಗಿಯೂ ಈ ರೋಗಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮೇಲೆ ಉಲ್ಲೇಖಿಸಿದ ಪಾಪಗಳ ವಿರುದ್ಧ ಯೇಸುವು ಬಹಳ ಕಠಿಣವಾಗಿ ಮಾತನಾಡಿದ್ದರೂ, ಅನೇಕ ಜನರು ಇವನ್ನು ಬಹಳ ಹಗುರವಾಗಿ ತೆಗೆದುಕೊಳ್ಳುತ್ತಾರೆ. ನಾನು ಅವರನ್ನು ದೂಷಿಸುವುದಿಲ್ಲ. ಏಕೆಂದರೆ ಅವರ ನಾಯಕರು ಮತ್ತು ಬೋಧಕರು ಅವರಿಗೆ ಈ ವಿಷಯಗಳನ್ನು ಕಲಿಸಿಲ್ಲ ಎಂದು ನನಗೆ ಮನವರಿಕೆಯಾಗಿದೆ. ದೇವರ ಸಂಪೂರ್ಣ ಸತ್ಯವನ್ನು ಬೋಧಿಸುವ ಮತ್ತು ಮನುಷ್ಯರ ಗೌರವವನ್ನು ಬಯಸದ ಕ್ರೈಸ್ತ ಬೋಧಕರು ಹಾಗೂ ಶಿಕ್ಷಕರ ದೊಡ್ಡ ಅಭಾವವಿದೆ. ಯಾರ ಹಣವನ್ನೂ ಬಯಸದೆ, ದೇವಜನರಿಗೆ ಆತ್ಮಿಕ ಸಹಾಯ ನೀಡುವುದಕ್ಕಾಗಿ ಸತ್ಯವನ್ನು ಬೋಧಿಸುವ ಬೋಧಕರು ಬಹಳ ಕೆಲವರು ಮಾತ್ರ. ನಿಮ್ಮ ಹಣದ ಮೇಲೆ ಆಸಕ್ತನಾಗಿರದೆ, ನಿಮ್ಮನ್ನು ಆರೋಗ್ಯಕ್ಕೆ ನಡೆಸಲು ಆಸಕ್ತಿ ಹೊಂದಿರುವ ಒಬ್ಬ ವೈದ್ಯನಿಗೆ ಇವರನ್ನು ಹೋಲಿಸಬಹುದು. ಅಂತಹ ಬೋಧಕರು ತುಂಬಾ ಕಡಿಮೆ ಇದ್ದಾರೆ.
ಜನರು ಚಿಂತೆಯನ್ನೂ ಒಂದು ಬಲಹೀನತೆ ಎಂಬುದಾಗಿ ಕರೆಯುತ್ತಾರೆ. ಆದರೆ ಇದು ಕೇವಲ ಬಲಹೀನತೆಯಲ್ಲ.
ಸಕಲ ಸೃಷ್ಟಿಯ ಕರ್ತನಾದ ಯೇಸು ಕ್ರಿಸ್ತನು, ಮತ್ತಾ. 6:25-34ರಲ್ಲಿ ಮೂರು ಸಾರಿ "ಚಿಂತೆ ಮಾಡಬೇಡಿರಿ" ಎಂದು ಹೇಳುತ್ತಾನೆ. ಕೇವಲ ಹತ್ತು ವಾಕ್ಯಗಳ ಅಂತರದಲ್ಲಿ ಕರ್ತನು ಮೂರು ಸಾರಿ "ಚಿಂತೆ ಮಾಡಬೇಡಿರಿ" ಎಂದು ಹೇಳಿದನು. ಈ ರೀತಿ ನಮಗೆ ಚಿಂತೆ ಮಾಡಬೇಡಿರಿ ಎಂಬುದಾಗಿ ಆಜ್ಞೆ ನೀಡಿದ ಕರ್ತನೇ, ಕೊಲೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕಳ್ಳತನ ಮಾಡಬಾರದು ಎಂಬುದಾಗಿಯೂ ಆಜ್ಞಾಪಿಸಿದನು. ಇವೆಲ್ಲವುಗಳನ್ನು ಒಟ್ಟಿಗೆ ಸೇರಿಸಿ ನಾವು ಈ ರೀತಿ ನೋಡಬೇಕು. "ಕೊಲೆ ಮಾಡಬೇಡಿರಿ, ವ್ಯಭಿಚಾರ ಮಾಡಬೇಡಿರಿ, ಕದಿಯಬೇಡಿರಿ, ಮತ್ತು ಚಿಂತೆ ಮಾಡಬೇಡಿರಿ." ಈ ನಾಲ್ಕರಲ್ಲಿ ಯಾವುದು ಪಾಪವಲ್ಲ? "ಓ, ನಾನು ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಚಿಂತೆ ಮಾಡುತ್ತೇನೆ, ಅಷ್ಟೇ," ಎಂದು ನೀವು ಹೇಳಿದರೆ ಅದು ಸರಿಯೇ? ಇದು ಯಾವುದಕ್ಕೆ ಹೋಲುತ್ತದೆ ಎಂದರೆ, "ಓ, ನಾನು ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಜನರನ್ನು ಕೊಲೆ ಮಾಡುತ್ತೇನೆ, ಅಷ್ಟೇ" ಅಥವಾ, "ನಾನು ವಾರದಲ್ಲಿ ಒಂದೆರಡು ಬಾರಿ ವ್ಯಬಿಚಾರ ಮಾಡುತ್ತೇನೆ, ಅದಕ್ಕಿಂತ ಹೆಚ್ಚೇನೂ ಮಾಡುವುದಿಲ್ಲ" ಎಂದು ಹೇಳಿದ ಹಾಗೆ.
ನಾವು ಕೆಲವು ಪಾಪಗಳನ್ನು ಮಾತ್ರ ಯಾಕೆ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ, ಆದರೆ ಬೇರೆಯವುಗಳನ್ನು ಪಾಪವೆಂದು ಯಾಕೆ ನೋಡುವುದಿಲ್ಲ? ಯಾಕೆಂದರೆ ನಿಮ್ಮ ಬೋಧಕರು ನಿಮಗೆ ಸರಿಯಾಗಿ ಕಲಿಸಿಲ್ಲ. ಕೊಲೆಯು ಪಾಪವಾಗಿರುವ ಹಾಗೆಯೇ, ಭಯವು ಪಾಪವಾಗಿದೆ. ಅದು ಬಲಹೀನತೆಯಲ್ಲ, ಅದೊಂದು ಪಾಪವಾಗಿದೆ. ನಾವು ಪಾಪವನ್ನು ಹೇಗೆ ಗುರುತಿಸಬಹುದು? ಒಂದು ವೇಳೆ ದೇವರು ನಿಮಗೆ ಅದನ್ನು ಮಾಡಬಾರದು ಎಂದು ಹೇಳಿದ್ದರೆ, ಆಗ ಅದೊಂದು ಪಾಪವಾಗಿದೆ. ನಿಮ್ಮ ಹೆಂಡತಿ ಎಷ್ಟೇ ಕೆಟ್ಟ ಹೆಂಗಸಾಗಿದ್ದರೂ ಸಹ ಅವಳನ್ನು ಪ್ರೀತಿಸಬೇಕೆಂದು ದೇವರು ನಿಮಗೆ ಹೇಳಿದ್ದರೆ, ನೀವು ಅವಳನ್ನು ಪ್ರೀತಿಸಬೇಕು. ಯಾಕೆಂದರೆ ದೇವರು ಹಾಗೆ ಮಾಡಲು ಹೇಳಿದ್ದಾರೆ. ಒಂದು ವೇಳೆ ದೇವರು ಒಂದು ಸಂಗತಿಯನ್ನು ಮಾಡಬಾರದೆಂದು ಹೇಳಿದ್ದರೆ, ನಿಮಗೆ ಅದು ಕೆಟ್ಟದೆಂದು ಅನಿಸದಿದ್ದರೂ ಸಹ, ಅದನ್ನು ಮಾಡಬೇಡಿರಿ. ಅದು ಕೆಟ್ಟದ್ದು. ನಾನು ವ್ಯಭಿಚಾರವನ್ನು ಕೆಟ್ಟದ್ದೆಂದು ಯೋಚಿಸಿದ ಕಾರಣಕ್ಕಾಗಿ ಅಲ್ಲ, ಆದರೆ ದೇವರು "ಅದನ್ನು ಮಾಡಬೇಡ" ಎಂದು ಹೇಳಿದ್ದರಿಂದ, ನಾನು ಅದನ್ನು ಮಾಡುವುದಿಲ್ಲ. ದೇವರು "ಚಿಂತೆ ಮಾಡಬೇಡಿರಿ ಮತ್ತು ಭಯ ಪಡಬೇಡಿರಿ," ಎಂದು ಹೇಳಿದ್ದಾರೆ. ದೇವರು "ಮಾಡಬೇಡ" ಎಂಬುದಾಗಿ ಹೇಳಿದ ಸಂಗತಿಗಳನ್ನು ನಾನು ಕೆಟ್ಟದ್ದು ಎಂಬುದಾಗಿ ನೋಡಲು ಬಯಸುತ್ತೇನೆ.
ಚಿಂತೆಯು ದೇವರೊಂದಿಗೆ ನನ್ನ ಅನ್ಯೋನ್ಯತೆಯನ್ನು ನಾಶಮಾಡುತ್ತದೆ. ಚಿಂತೆಯ ಮನೋಭಾವವು, ದೇವರು ನನಗಾಗಿ ಚಿಂತಿಸುವುದಿಲ್ಲ ಎಂಬುದಾಗಿ ಹೇಳುತ್ತದೆ. ಇಂತಹ ಮನೋಭಾವವು ದೇವರಿಗೆ ನಾವು ಅವಮಾನ ಮಾಡುವುದಾಗಿದೆ. ಒಂದು ನಾಲ್ಕು ವರ್ಷ ವಯಸ್ಸಿನ ಮಗುವು ಕಸದ ತೊಟ್ಟಿಯ ಹೊಲಸನ್ನು ತಿನ್ನುತ್ತಿದ್ದರೆ, ನಿಮಗೆ ಹೇಗೆ ಅನಿಸುತ್ತದೆ? ನಮ್ಮ ದೇಶದಲ್ಲಿ ಬಹಳ ಮಂದಿ ಮಕ್ಕಳು ಇಂತಹ ದುಃಸ್ಥಿತಿಯಲ್ಲಿ ಇದ್ದಾರೆ. ದೌರ್ಭಾಗ್ಯವೆಂದರೆ, ಅವರನ್ನು ಕಾಳಜಿಯಿಂದ ನೋಡಿಕೊಳ್ಳುವ ಪೋಷಕರು ಅವರಿಗಿಲ್ಲ. ನಮ್ಮ ಪರಲೋಕದ ತಂದೆಯು ಅವರಂತೆ ಇದ್ದಾರೆಯೇ? ನಮ್ಮ ಪರಲೋಕದ ತಂದೆಯು ನಮಗಾಗಿ ಚಿಂತಿಸುವುದಿಲ್ಲವೇ? ಆ ಕಸದ ತೊಟ್ಟಿಯಿಂದ ತಿನ್ನುವ ಮಕ್ಕಳ ತಂದೆಗಳ ವರ್ಗಕ್ಕೆ ನಮ್ಮ ಪರಲೋಕದ ತಂದೆಯನ್ನು ಸೇರಿಸುವುದು, ದೇವರನ್ನು ಅವಮಾನಪಡಿಸುವುದಾಗಿದೆ. ಈ ಮಕ್ಕಳಿಗೆ ತಮ್ಮ ಮುಂದಿನ ಊಟ ಎಲ್ಲಿಂದ ಬರುತ್ತದೆ ಎಂಬುದು ಗೊತ್ತಿಲ್ಲ. ಆದ್ದರಿಂದ ಅವರು ಚಿಂತಿಸುವುದು ಸಹಜ, ಯಾಕೆಂದರೆ ಅವರ ಭೂಲೋಕದ ತಂದೆಗಳು ಅವರಿಗಾಗಿ ಚಿಂತಿಸುವುದಿಲ್ಲ. ಆದರೆ ನಿಮಗೆ ಪರಲೋಕದ ತಂದೆ ಇದ್ದಾಗ್ಯೂ ನೀವು ಚಿಂತೆ ಮಾಡಿದರೆ, ನಿಮ್ಮ ಪರಲೋಕದ ತಂದೆಯೂ ಕಾಳಜಿಯಿಲ್ಲದ ಜನರ ವರ್ಗಕ್ಕೆ ಸೇರಿದವರೆಂದು ನೀವು ಹೇಳುತ್ತಿದ್ದೀರಿ.
"ಈ ಕಾರಣಕ್ಕಾಗಿ ನಿಮ್ಮ ಪ್ರಾಣಧಾರಣೆಗೆ ಚಿಂತೆ ಮಾಡಬೇಡಿರಿ, ಎಂಬುದಾಗಿ ನಾನು ಹೇಳುತ್ತೇನೆ" (ಮತ್ತಾ. 6:25). ನಿಮ್ಮ ಜೀವನದ ಬಗ್ಗೆ - ಏನು ಊಟ ಮಾಡಬೇಕು, ಏನು ಕುಡಿಯಬೇಕು, ಅಥವಾ ದೇಹ ರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂಬುದಾಗಿ - ಚಿಂತೆ ಮಾಡಬೇಡಿರಿ. ಊಟಕ್ಕಿಂತ ಪ್ರಾಣವು ಮತ್ತು ಉಡುಪಿಗಿಂತ ದೇಹವು ಮೇಲಾದದ್ದಲ್ಲವೇ? ಇಲ್ಲಿ ಮತ್ತಾಯನು ಉದಾಹರಣೆಯಾಗಿ ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ತೆಗೆದುಕೊಳ್ಳುತ್ತಾನೆ: ಆ ಪಕ್ಷಿಗಳು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವುದಿಲ್ಲ, ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ? ನೀವು ಎಷ್ಟು ಬಾರಿ ರಸ್ತೆಯಲ್ಲಿ ಸತ್ತಿರುವ ಒಂದು ಹಕ್ಕಿಯನ್ನು ನೋಡಿದ್ದೀರಿ? ಅದು ಎಷ್ಟು ಅಪರೂಪವೆಂದರೆ, ನಾನು ನನ್ನ ಇಡೀ ಜೀವಿತದಲ್ಲಿ ರಸ್ತೆಯ ಬದಿಯಲ್ಲಿ ಸತ್ತು ಬಿದ್ದಿರುವ ಪಕ್ಷಿಯನ್ನು ನೋಡಿದ್ದು ಕೇವಲ ಬೆರಳೆಣಿಕೆಯಷ್ಟು ಮಾತ್ರ ಎಂದು ಭಾವಿಸುತ್ತೇನೆ. ಭೂಮಿಯ ಮೇಲೆ ಕೋಟ್ಯಾನುಕೋಟಿ ಪಕ್ಷಿಗಳಿವೆ, ಮತ್ತು ಅವು ಬಿತ್ತನೆ ಮಾಡದೆ, ಕೊಯ್ಯದೆ, ಅಲ್ಲಿ ಇಲ್ಲಿ ಹುಡುಕುತ್ತಾ ಅಲೆಯದೆ ಆಹಾರವನ್ನು ಕಂಡುಕೊಳ್ಳುತ್ತವೆ. ಅವುಗಳಿಗೆ ಆಹಾರ ನೀಡುವವರು ಯಾರು? ಯೇಸುವು ಹೇಳಿದ್ದು ಏನೆಂದರೆ, ನಿಮ್ಮ ಪರಲೋಕದ ತಂದೆಯು ಅವುಗಳಿಗೆ ಆಹಾರ ನೀಡುತ್ತಾರೆ. ಅವುಗಳಿಗೆ ಆತನು ಪರಲೋಕದ ತಂದೆಯಲ್ಲ; ಆತನು ನಿಮ್ಮ ಪರಲೋಕದ ತಂದೆಯಾಗಿದ್ದಾನೆ. ಆ ಪಕ್ಷಿಗಳಿಗೆ ಆತನು ಸೃಷ್ಟಿಕರ್ತನು, ಮತ್ತು ಆತನು ಅವುಗಳನ್ನು ಪೋಷಿಸುತ್ತಾನೆ. ಆದರೆ ನಿನ್ನ ಪಾಲಿಗೆ ಆತನು ಕೇವಲ ಸೃಷ್ಟಿಕರ್ತನಲ್ಲ, ಆತನು ನಿನ್ನ ತಂದೆಯಾಗಿದ್ದಾನೆ. ನೀನು ಆ ಪಕ್ಷಿಗಳಿಗಿಂತ ಎಷ್ಟೋ ಬೆಲೆಯುಳ್ಳವನಲ್ಲವೇ?
"ಚಿಂತೆಯು ದೇವರೊಂದಿಗಿನ ನನ್ನ ಅನ್ಯೋನ್ಯತೆಯನ್ನು ನಾಶಪಡಿಸುತ್ತದೆ. ನನ್ನ ಚಿಂತೆಯು ದೇವರು ನನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಹೇಳುತ್ತದೆ. ಇದು ದೇವರಿಗೆ ನಾವು ಮಾಡುವ ಅವಮಾನವಾಗಿದೆ.
ಒಂದು ಸಲ ನಾನು ಬಹಳ ಅಂದವಾದ ಒಂದು ಸಣ್ಣ ಕವಿತೆಯನ್ನು ಓದಿದೆ. ಎರಡು ಸಣ್ಣ ಹಕ್ಕಿಗಳು ಪರಸ್ಪರ ಮಾತನಾಡಿಕೊಳ್ಳುತ್ತಿದ್ದವು. ಒಂದು ರಾಬಿನ್ ಪಕ್ಷಿಯು (ಚಿಕ್ಕ ಗಾತ್ರದ ಮಡಿವಾಳ ಹಕ್ಕಿ) ಗುಬ್ಬಚ್ಚಿಗೆ, "ಈ ಮನುಷ್ಯರು ಏಕೆ ಇಷ್ಟೊಂದು ಚಿಂತಿಸುತ್ತಾ ಅಲ್ಲಿಲ್ಲಿ ಓಡಾಡುತ್ತಾರೆ?" ಎಂದು ಕೇಳಿತು. ಗುಬ್ಬಚ್ಚಿಯು ರಾಬಿನ್‍ಗೆ, "ಗೆಳೆಯಾ, ನಿನಗೆ ಮತ್ತು ನನಗೆ ಇರುವಂತೆ ಕಾಳಜಿ ವಹಿಸುವ ಪರಲೋಕದ ತಂದೆ ಅವರಿಗೆ ಇಲ್ಲದಿರಬಹುದೆಂದು ನಾನು ಭಾವಿಸುತ್ತೇನೆ," ಎಂದಿತು.
ಇದು ಕೇವಲ ಒಂದು ಸುಂದರ ಕಥೆಯಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ದೇವರು ನಮ್ಮ ಪ್ರತಿಯೊಂದು ಚಿಂತೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಭಾವಿಸುವುದು ದೇವರಿಗೆ ನಾವು ಮಾಡುವ ಅವಮಾನವಾಗಿದೆ.
ಇದಕ್ಕೆ ಪರಿಹಾರವೇನು? ಸತ್ಯವೇದವು ಯಾವ ವಿಷಯದಲ್ಲೂ ಚಿಂತಿಸಬಾರದೆಂದು ಫಿಲಿಪ್ಪಿ. 4:6ರಲ್ಲಿ ಹೇಳುತ್ತದೆ. ಇದೊಂದು ಖಚಿತವಾದ ಹೇಳಿಕೆಯಾಗಿದೆ. "ಯಾವ ಸಂಬಂಧವಾಗಿಯೂ ಚಿಂತಿಸಬೇಡಿರಿ" . ಆದಾಗ್ಯೂ ಚಿಂತೆಯ ಮೂಲ ಕಾರಣದ ಬಗ್ಗೆ ನಾವು ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ. ಈ ಕ್ಷಣದಲ್ಲಿ ನೀವು ಯಾವುದೋ ಸಮಸ್ಯೆಯನ್ನು ಎದುರಿಸುತ್ತಿರಬಹುದು, ಮತ್ತು ಅದರ ಪರಿಹಾರದ ಬಗ್ಗೆ ನಿಮಗೆ ತಿಳುವಳಿಕೆ ಇಲ್ಲದಿರಬಹುದು. ನೀವು ಏನು ಮಾಡಬೇಕು? ಏನೂ ಮಾಡದೆ ಸುಮ್ಮನಿರಿ, ಎಂದು ದೇವರು ಹೇಳುವುದಿಲ್ಲ; ಅದರ ಕುರಿತಾಗಿ ಪ್ರಾರ್ಥಿಸಿರಿ ಎಂದು ಅವರು ಹೇಳುತ್ತಾರೆ. ವಿಜ್ಞಾಪನೆ ಎಂದರೆ, ದೇವರಿಗೆ ಒಂದು ನಿರ್ದಿಷ್ಟ ವಿನಂತಿಯನ್ನು ಮಾಡುವುದು ಮತ್ತು ನಮ್ಮ ಸಮಸ್ಯೆಯನ್ನು ದೇವರಿಗೆ ಸ್ಪಷ್ಟವಾಗಿ ತಿಳಿಸುವುದು. ವಿಜ್ಞಾಪನೆಯ ನಂತರ ನಿಮ್ಮ ಪ್ರಾರ್ಥನೆಯನ್ನು ಕೃತಜ್ಞತಾಸ್ತುತಿಯೊಂದಿಗೆ ಪೂರ್ಣಗೊಳಿಸುವುದನ್ನು ಮರೆಯಬೇಡಿರಿ. ಕೃತಜ್ಞತೆ ಸಲ್ಲಿಸುವಾಗ, "ತಂದೆಯೇ, ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕಾಗಿ ಧನ್ಯವಾದಗಳು. ನನ್ನ ಬಗ್ಗೆ ನಿಮ್ಮಲ್ಲಿರುವ ಕಾಳಜಿಗಾಗಿ ಧನ್ಯವಾದಗಳು", ಎಂದು ಹೇಳಿರಿ. ದೇವರಿಗೆ ಧನ್ಯವಾದ ಸಮರ್ಪಣೆಯು ಪಾವತಿಯ ರಸೀದಿಯಂತಿದೆ. ಅದು, ನನ್ನ ಪ್ರಾರ್ಥನಾ ಪತ್ರವು ದೇವರ ಸನ್ನಿಧಿಗೆ ತಲುಪಿದೆ ಮತ್ತು ಅವರು ಅದನ್ನು ಪಡೆದಿದ್ದಾರೆ ಎಂಬ ವಿಶ್ವಾಸದ ಘೋಷಣೆಯಾಗಿದೆ. "ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕಾಗಿ ನಿಮಗೆ ಧನ್ಯವಾದಗಳು" ಎಂಬುದೇ ನನ್ನ ಮಾತಿನ ಅರ್ಥವಾಗಿದೆ.
ಈ ಎರಡು ಕಾರ್ಯಗಳನ್ನು ನಾವು ಮಾಡಿದ ನಂತರ, ಫಿಲಿಪ್ಪಿ. 4:7'ರಲ್ಲಿ ಹೇಳಿರುವಂತೆ, "ಎಲ್ಲಾ ತಿಳುವಳಿಕೆಯನ್ನು ಮೀರುವ, ಗ್ರಹಿಕೆಗೆ ಬಾರದ ದೇವಶಾಂತಿಯು, ಕ್ರಿಸ್ತ ಯೇಸುವಿನಲ್ಲಿ ನಿಮ್ಮ ಹೃದಯವನ್ನೂ ಯೋಚನೆಯನ್ನೂ ಕಾಯುವದು (ಈ ಕಾವಲು ಎಂಬ ಪದವು ಸೇನಾಪಡೆಗೆ ಸಂಬಂಧಿಸಿದೆ; ಅದನ್ನು ಒಂದು ಕೋಟೆಗೆ ಹೋಲಿಸಬಹುದು)".
"ಚಿಂತಿಸದಿರುವುದು" ನಾವು ಪಾಲಿಸಬೇಕಾದ ಒಂದು ಆಜ್ಞೆಯಾಗಿದೆ. ನಾನು ಚಿಂತೆಯಿಂದ ಮುಕ್ತನಾದಾಗ, ನಿರಾಶೆಯಿಂದಲೂ ಬಿಡುಗಡೆ ಹೊಂದುತ್ತೇನೆ. ನಾವು ತೆಗೆದುಕೊಳ್ಳಬೇಕಾದ ಒಂದು ಅದ್ಭುತಕರವಾದ ಹೆಜ್ಜೆ ಇದಾಗಿದೆ.