WFTW Body: 

ದೇವರು ಒಂದು ಸಮತೋಲನವುಳ್ಳ ಕ್ರಿಸ್ತನ ಚಿತ್ರಣವನ್ನು ಈ ಲೋಕಕ್ಕೆ ಒದಗಿಸುವುದಕ್ಕಾಗಿ, ದೇವಸಭೆಯಲ್ಲಿರುವ ನಮ್ಮ ವಿವಿಧ ಸ್ವಭಾವಗಳನ್ನು ಮತ್ತು ವರಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ನಾವಾಗಿಯೇ ಕ್ರಿಸ್ತನ ಚಿತ್ರಣವನ್ನು ಮಾಡುವುದಾದರೆ, ನಾವು ಒಂದು ವಿರೂಪವಾದ ಮತ್ತು ಸಮತೋಲನವಿಲ್ಲದ ಚಿತ್ರವನ್ನಷ್ಟೇ ಚಿತ್ರಿಸಬಹುದು. ಯಾವನಾದರೂ ಒಬ್ಬ ವ್ಯಕ್ತಿಯು ಒಂಟಿಯಾಗಿ ಮಾಡುವ ಸೇವೆಯಿಂದ ಸಮತೋಲನವಿಲ್ಲದ ಕ್ರೈಸ್ತರನ್ನು ಸಿದ್ಧಪಡಿಸಬಹುದು. ಕ್ರಿಸ್ತನ ದೇಹದಲ್ಲಿ ನಮಗಿಂತ ವ್ಯತ್ಯಾಸವಾದ ಪ್ರಾಧಾನ್ಯತೆಗಳನ್ನು ಮತ್ತು ಪ್ರವೃತ್ತಿಗಳನ್ನು ಹೊಂದಿರುವ ಇತರರು ಇರುವುದಕ್ಕಾಗಿ ನಾವು ಎಷ್ಟು ಕೃತಜ್ಞತೆಯುಳ್ಳವರು ಆಗಿರಬೇಕು. ಉದಾಹರಣೆಗೆ, ವಿಶ್ವಾಸಿಗಳ ಒಂದು ಸಮೂಹಕ್ಕೆ ದೇವರ ವಾಕ್ಯದ ಸೇವೆ ಮಾಡುತ್ತಿರುವ ಇಬ್ಬರು ಸಹೋದರರಲ್ಲಿ, ಒಬ್ಬನ ಬೋಧನೆಯು ಈ ರೀತಿಯಾಗಿ ಒತ್ತು ನೀಡಬಹುದು, "ನೀವು ಪವಿತ್ರಾತ್ಮನಿಂದ ತುಂಬಲ್ಪಟ್ಟಿರುವುದಾಗಿ ನಿಶ್ಚಯಿಸುವುದಕ್ಕೆ ಮೊದಲು, ನೀವು ಮೋಸಹೋಗಿಲ್ಲವೆಂದು ಖಚಿತ ಪಡಿಸಿಕೊಳ್ಳಿರಿ"; ಅದೇ ವೇಳೆ, ಇನ್ನೊಬ್ಬ ಸಹೋದರನು ಮಾಡುವ ಬೋಧನೆಯ ಮುಖ್ಯಾಂಶ ಹೀಗಿರಬಹುದು, "ನಿಮ್ಮಲ್ಲಿ ಪವಿತ್ರಾತ್ಮನು ತುಂಬಲ್ಪಟ್ಟಿರುವ ವಿಚಾರವಾಗಿ ಸಂದೇಹ ಪಡಬೇಡಿರಿ". ಮೇಲ್ನೋಟಕ್ಕೆ ಅವರಿಬ್ಬರ ಬೋಧನೆಗಳು ಒಂದಕ್ಕೊಂದು ವಿರೋಧವಾಗಿ ಭಾಸವಾಗಬಹುದು. ಆದರೆ ಎರಡು ರೀತಿಯ ಒತ್ತುಗಳೂ ಅವಶ್ಯವಾಗಿವೆ - ಹಾಗಾಗಿ ಇವರಿಬ್ಬರ ಸೇವೆಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬಹುದು.

ಕ್ರಿಸ್ತನ ದೇಹದಲ್ಲಿ, ’ಕೆಲ್ವಿನ’ನ ಪ್ರತಿಪಾದಕರು ಹಾಗೂ ’ಆರ್ಮೇನಿಯನರು’ (Calvinists and Armenians) ಒಂದಾಗಿ ಕೆಲಸ ಮಾಡಲು ಸಾಧ್ಯವಿದೆ - ಏಕೆಂದರೆ, ಸತ್ಯವೇದವು ಇವೆರಡೂ ದೃಷ್ಟಿಕೋನಗಳನ್ನು ಸಮರ್ಥಿಸುತ್ತದೆ. ಒಂದು ಸಲ ಚಾರ್ಲ್ಸ್ ಸಿಮಿಯೋನನು ಹೇಳಿದ ಹಾಗೆ, "ಸತ್ಯವು ಮಧ್ಯ ಭಾಗದಲ್ಲಿ ಇರುವುದಿಲ್ಲ ಮತ್ತು ಒಂದು ಕೊನೆಯಲ್ಲಿಯೂ ಇರುವುದಿಲ್ಲ, ಆದರೆ ಸತ್ಯವು ಕಟ್ಟಕಡೆಯ ಎರಡು ತುದಿಗಳಲ್ಲಿ ಇರುತ್ತದೆ." ಹಾಗಾಗಿ ಎರಡು ಅಂತಿಮ ತುದಿಗಳನ್ನು ಸಮರ್ಥಿಸುವ ಜನರು ಇರುವುದು ನಮಗೆ ಅವಶ್ಯವಾಗಿದೆ.

ಅದೇ ರೀತಿ, ’ಸಂಕೋಚವಿಲ್ಲದ ಪ್ರವೃತ್ತಿಯವರು’ ಮತ್ತು ’ಜನರೊಂದಿಗೆ ಸೇರಲು ಹಿಂಜರಿಯುವವರು’, ಇವರಿಬ್ಬರಿಗೂ ಸಭೆಯಲ್ಲಿ ಜಾಗವಿರುತ್ತದೆ. ವಿಭಿನ್ನ ಪ್ರವೃತ್ತಿ ಉಳ್ಳವರು ಪರಸ್ಪರ ಹೊಂದಿಕೊಂಡು ಸಭೆಯನ್ನು ಬಲಪಡಿಸಬಹುದು. ಕೆಲವರಲ್ಲಿ ಅತಿ ಮುಂಜಾಗ್ರತೆಯ ಸ್ವಭಾವ ಇರಬಹುದು; ಅವರು ಒಂದೊಂದು ಹೆಜ್ಜೆ ಇರಿಸಲು ಬಹಳ ಸಮಯ ತೆಗೆದುಕೊಳ್ಳಬಹುದು, ’ಸರಿ-ತಪ್ಪು’ಗಳನ್ನು ಮತ್ತೆ ಮತ್ತೆ ಪರೀಕ್ಷಿಸಿ ನೋಡುತ್ತಾ, ಒಂದು ನಿರ್ಣಯಕ್ಕೆ ಬರಲು ಬಹಳ ಸಮಯ ತೆಗೆದುಕೊಳ್ಳಬಹುದು. ಇನ್ನು ಕೆಲವರು ನಿಶ್ಚಿಂತೆಯ ಮನೋಭಾವ ಹೊಂದಿದ್ದು, ತಾವು ಕೈಗೊಳ್ಳುವ ನಿರ್ಣಯದ ಪರಿಣಾಮದ ಬಗ್ಗೆ ಹೆಚ್ಚು ಯೋಚಿಸದೆ, ಆಗಿಂದಾಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳಲು ತವಕಿಸುತ್ತಾರೆ. ಕ್ರಿಸ್ತನ ದೇಹದಲ್ಲಿ ಇವೆರಡು ವ್ಯಕ್ತಿತ್ವಗಳು (ಮತ್ತು ಜೊತೆಗೆ ಇನ್ನೂ ಕೆಲವು) ಇರುವುದರಿಂದ, ಅಲ್ಲಿ ಒಂದು ಸಮತೋಲನ ಕಂಡುಬರುತ್ತದೆ. ಆಳವಾಗಿ ಯೋಚಿಸಿ, ಹೆಜ್ಜೆ ಇಡಲು ಹಿಂಜರಿಯುವ ವ್ಯಕ್ತಿತ್ವದವರು ಮಾತ್ರ ಸಭೆಯಲ್ಲಿದ್ದರೆ, ಮುನ್ನಡೆ ಬಹಳ ನಿಧಾನವಾಗಬಹುದು. ಅದಕ್ಕೆ ಪ್ರತಿಯಾಗಿ, ದುಡುಕುವ, ಅತಿ ಹುರುಪಿನ ಜನರು ಮಾತ್ರ ಅಲ್ಲಿದ್ದರೆ, ಅನೇಕ ಯೋಜನೆಗಳು ಕೊನೆಗೊಳ್ಳದೆ ಅರ್ಧಕ್ಕೇ ನಿಂತುಹೋಗಬಹುದು.

ಪ್ರತಿಯೊಂದು ಸ್ವಭಾವಕ್ಕೆ ತನ್ನದೇ ಆದ ಬಲ ಮತ್ತು ದೌರ್ಬಲ್ಯಗಳು ಇರುತ್ತವೆ. ವಿವಿಧ ಸ್ವಭಾವದ ಜನರು ತಮ್ಮ ಸ್ವಭಾವವನ್ನು ಇರಿಸಿಕೊಂಡು, ಇತರ ಕ್ರೈಸ್ತರೊಂದಿಗೆ ಹೊಂದಾಣಿಕೆಯಿಂದ ನಡೆಯುತ್ತಾ, ಲೋಕಕ್ಕೆ ಒಂದು ಪರಿಪೂರ್ಣವಾದ ಮತ್ತು ಸರಿಯಾದ ಕ್ರಿಸ್ತನ ಚಿತ್ರಣವನ್ನು ಒದಗಿಸಲು ಸಾಧ್ಯವಾಗುತ್ತದೆ. ಹಾಗಾಗಿ ನಾವು ಕ್ರಿಸ್ತನ ದೇಹದ ಪ್ರತಿಯೊಬ್ಬರನ್ನೂ ನಮ್ಮ ಹಾಗೆ ಬದಲಾಯಿಸಲು ಪ್ರಯಾಸಪಡುತ್ತಾ ನಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ಪ್ರತಿಯೊಬ್ಬನು ಅವನ ಪ್ರವೃತ್ತಿಗೆ ತಕ್ಕಂತೆ ಇರುವುದಕ್ಕೆ ನಾವು ಅವಕಾಶ ಕೊಡಬೇಕು. ನಮ್ಮ ಬಲವು ಮತ್ತೊಬ್ಬನ ಬಲಹೀನತೆಯಲ್ಲಿ ಹೇಗೆ ಸಹಾಯ ನೀಡಬಹುದು, ಎಂಬ ವಿಷಯಕ್ಕೆ ನಾವು ಗಮನ ಹರಿಸಬೇಕು. ಹಾಗೆಯೇ, ಆತನ ಬಲವು ನಮ್ಮ ಬಲಹೀನತೆಯಲ್ಲಿ ನೆರವಾಗಬಹುದು.

ಪೇತ್ರ ಮತ್ತು ಯೋಹಾನರು (ಅವರ ಪ್ರವೃತ್ತಿಗಳು ವಿಭಿನ್ನವಾಗಿದ್ದವು) ಜೊತೆಯಾಗಿ ಕೆಲಸ ಮಾಡುವ ಮೂಲಕ ದೇವರಿಗೆ ತಂದ ಮಹಿಮೆಯು, ಅವರು ಪ್ರತ್ಯೇಕವಾಗಿ ದುಡಿದು ತರಬಹುದಾಗಿದ್ದ ಮಹಿಮೆಗಿಂತ ಬಹಳ ಹೆಚ್ಚಿನದಾಗಿತ್ತು. ಪೌಲನು ಮತ್ತು ತಿಮೊಥೆಯನು - ಇಬ್ಬರೂ ಬಹಳ ವಿಭಿನ್ನವಾದ ಪ್ರವೃತ್ತಿಗಳನ್ನು ಹೊಂದಿದ್ದರೂ - ಸುವಾರ್ತಾ ಪ್ರಸಾರಕ್ಕಾಗಿ ಒಂದು ಪ್ರಬಲ ಜೋಡಿಯಾಗಿ ದುಡಿಯಲು ಸಾಧ್ಯವಾಯಿತು.

ಸಭೆಯಲ್ಲಿ ಬಹಳ ಚುರುಕಾದ ಬುದ್ಧಿಶಕ್ತಿ ಉಳ್ಳವರು ಇರುತ್ತಾರೆ ಮತ್ತು ಸಾಮಾನ್ಯ ಬುದ್ಧಿ ಸಾಮರ್ಥ್ಯ ಇರುವವರು ಸಹ ಇರುತ್ತಾರೆ. ಸ್ವಾಭಾವಿಕವಾಗಿ, ಇವರಿಬ್ಬರು ದೇವರ ಕುರಿತಾದ ಸತ್ಯಗಳನ್ನು ಇತರರಿಗೆ ಹಂಚುವ ರೀತಿಯಲ್ಲಿ ವ್ಯತ್ಯಾಸ ಇರುತ್ತದೆ. ಆದರೆ ಒಂದು ಪಂಗಡವು ಮತ್ತೊಂದನ್ನು ಕೀಳಾಗಿ ನೋಡುವುದು ಅಥವಾ ಅವರ ತಪ್ಪುಗಳನ್ನು ಎತ್ತಿತೋರಿಸುವುದು ಸರಿಯಲ್ಲ, ಏಕೆಂದರೆ ಬುದ್ಧಿಜೀವಿಗಳು ಹಾಗೂ ಸಾಮಾನ್ಯ ಜನರು, ತತ್ವಜ್ಞಾನಿಗಳು ಮತ್ತು ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ರೈತರು, ಇವರೆಲ್ಲರೂ ಇರುವ ಈ ಲೋಕಕ್ಕೆ ಸುವಾರ್ತೆಯನ್ನು ನೀಡಲು ಕ್ರಿಸ್ತನ ದೇಹದಲ್ಲಿ ಇವರಿಬ್ಬರೂ ಬೇಕಾಗಿದ್ದಾರೆ. ದೇವರ ಕೆಲಸಕ್ಕಾಗಿ ಅವರಿಗೆ ಮೇಧಾವಿಯಾಗಿದ್ದ ಒಬ್ಬ ಪೌಲನಂತಹ ವಿದ್ವಾಂಸನೂ, ಹೆಚ್ಚು ಓದು-ಬರಹವಿಲ್ಲದ ಮೀನುಗಾರನಾಗಿದ್ದ ಒಬ್ಬ ಪೇತ್ರನೂ ಬೇಕಾಗಿದ್ದರು. ಅವರಿಬ್ಬರು ಒಂದೇ ಸುವಾರ್ತೆಯನ್ನು ಬೇರೆ ಬೇರೆ ರೀತಿಯಲ್ಲಿ ಸಾರಿದರು, ಆದರೆ ಇಬ್ಬರಿಗೂ ಅವರವರ ವಿಶಿಷ್ಟ ಸೇವೆಯಿತ್ತು, ಮತ್ತು ಒಬ್ಬನು ಇರದಿದ್ದಲ್ಲಿ ಅವನ ಪಾಲಿನ ಸೇವೆಯನ್ನು ಸರಿಯಾಗಿ ಮಾಡಲು ಇನ್ನೊಬ್ಬನಿಗೆ ಆಗುತ್ತಿರಲಿಲ್ಲ.

ಮಾನಸಾಂತರದ ಮೂಲಕ ಒಬ್ಬ ಮನುಷ್ಯನ ಬುದ್ಧಿಶಕ್ತಿಯು ಬದಲಾಗುವುದಿಲ್ಲ. ಅದಲ್ಲದೆ, ಮಾನಸಾಂತರವು ಆತನು ತನ್ನ ಸಾಮಾಜಿಕ ಸ್ಥಾನಮಾನಗಳನ್ನು ಬದಲಾಯಿಸುವಂತೆ ಅವನನ್ನು ಒತ್ತಾಯ ಪಡಿಸುವುದಿಲ್ಲ. ಸುವಾರ್ತೆಯು ಇಹಲೋಕದ ಸಾಮಾಜಿಕ ಅಂತರಗಳನ್ನು ತೆಗೆದು ಹಾಕುವುದಿಲ್ಲ, ಆದರೆ ಕ್ರಿಸ್ತನಲ್ಲಿ ಸಾಮಾಜಿಕ ಅಂತಸ್ತುಗಳಿಗೆ ಯಾವ ಪ್ರಾಮುಖ್ಯತೆಯೂ ಇರುವುದಿಲ್ಲ. ದೇವರಿಗೆ ಫಿಲೆಮೋನನಂತ ಒಬ್ಬ ಧನಿಕನು ಬೇಕಾಗಿದ್ದನು, ಅದಲ್ಲದೆ ಫಿಲೆಮೋನನ ಮನೆಯ ಆಳಾಗಿದ್ದ ಓನೇಸಿಮನು ಸಹ ಬೇಕಾಗಿದ್ದನು. ಅವರ ಸಾಮಾಜಿಕ ಮಟ್ಟಗಳು ಹಾಗೂ ಜೀವನ ಶೈಲಿಗಳು ಬದಲಾಗಲಿಲ್ಲ, ಆದರೆ ಕ್ರಿಸ್ತನ ದೇಹಕ್ಕೆ ಅವರಿಬ್ಬರು ತಾವು ಮಾತ್ರವೇ ಕೊಡಬಹುದಾಗಿದ್ದ ವಿಶಿಷ್ಟ ಕೊಡುಗೆಗಳು ಇದ್ದವು; ಈ ರೀತಿಯಾಗಿ ಇವರಿಬ್ಬರೂ ಜೊತೆಯಾಗಿ ಸುವಾರ್ತಾ ಸೇವೆಯನ್ನು ಮಾಡಲು ಸಾಧ್ಯವಾಯಿತು.

ಮೋಟಾರ್ ಕಾರುಗಳನ್ನು ತಯಾರಿಸುವ ಒಂದು ಕಾರ್ಖಾನೆಯಲ್ಲಿ ಒಂದು ಮಾದರಿಯ ಅನೇಕ ಕಾರುಗಳು ತಯಾರಾಗುವ ಹಾಗೆ - ಗುಣಲಕ್ಷಣದಲ್ಲಿ ಎಲ್ಲಾ ರೀತಿಯಲ್ಲಿ ಒಬ್ಬರಿಗೊಬ್ಬರು ಹೋಲುವಂತ ಜನರನ್ನು ದೇವಸಭೆಯಲ್ಲಿ ಸಿದ್ಧಪಡಿಸುವುದು ಯಾವತ್ತೂ ದೇವರ ಉದ್ದೇಶವಾಗಿರಲಿಲ್ಲ. ಹಾಗಲ್ಲ. ಸಭೆಯ ಸೇವೆಯು ಉತ್ತಮವಾಗಿ ನಡೆಯಬೇಕಾದರೆ, ಅದರಲ್ಲಿ ಸದಸ್ಯರ ವೈವಿಧ್ಯತೆ ಅವಶ್ಯವಾಗಿ ಇರಬೇಕು. ಪ್ರತಿಯೊಬ್ಬನು ಒಂದೇ ಅಚ್ಚಿನಲ್ಲಿ ತಯಾರಾಗಿದ್ದರೆ ಅಲ್ಲಿ ಬೆಳವಣಿಗೆ ಕುಂಠಿತವಾಗಿ, ಆತ್ಮಿಕ ಮರಣ ಉಂಟಾಗುತ್ತಿತ್ತು.

ನಮ್ಮ ನಡುವೆ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ಸಹ ದೇವರು ಉಪಯೋಗಿಸಿಕೊಂಡು, ನಮ್ಮ ನಡುವಿನ ಅನ್ಯೋನ್ಯತೆಯನ್ನು ಬೆಳೆಸಿ, ಆತ್ಮಿಕ ಪರಿಪೂರ್ಣತೆಯ ಕಡೆಗೆ ನಮ್ಮನ್ನು ನಡೆಸಬಲ್ಲರು. ಜ್ಞಾನೋಕ್ತಿಗಳು 27:17 ('Living') ಭಾಷಾಂತರದ ನುಡಿಯಂತೆ, "ಕಬ್ಬಿಣದ ಕಂಬಿಗಳ ತಿಕ್ಕಾಟದಿಂದ ಬೆಂಕಿಯ ಕಿಡಿಗಳು ಹಾರುವ ಹಾಗೆ, ಮಿತ್ರರ ಸ್ನೇಹ-ಸಂವಾದವು ಅವರಿಗೆ ಉತ್ತೇಜನ ನೀಡುತ್ತದೆ," ಮತ್ತು ಬೆಂಕಿಯ ಕಿಡಿಗಳು ಹಾರಿದರೂ, ಅ ಎರಡು ಕಬ್ಬಿಣದ ಕಂಬಿಗಳು ಹರಿತಗೊಳ್ಳುತ್ತವೆ. ಕೆಲವು ಸಲ ದೇವರು ಇಬ್ಬರು ವಿಭಿನ್ನ ಸ್ವಭಾವದ ಜನರನ್ನು ತನ್ನ ಕಾರ್ಯಕ್ಕಾಗಿ ಜೊತೆಗೂಡಿಸುತ್ತಾರೆ ಮತ್ತು ಅವರು ಜೊತೆಯಾಗಿ ಕೆಲಸ ಮಾಡುವಾಗ, ಅವರ ನಡುವೆ ಬೆಂಕಿಯ ಕಿಡಿಗಳಂತೆ ವಾಗ್ವಾದ ಉಂಟಾಗಬಹುದು, ಆದರೆ ಇದು ದೇವರು ಅವರನ್ನು "ಚುರುಕಾಗಿಸುವ" ವಿಧಾನ ಆಗಿರಬಹುದು. ಒಬ್ಬನು ಕಬ್ಬಿಣದಂತೆ ಮತ್ತೊಬ್ಬನು ಜೇಡಿಮಣ್ಣಿನಂತೆ ಇದ್ದರೆ, ಆಗ ಕಿಡಿಗಳು ಉಂಟಾಗುವುದಿಲ್ಲ, ಆದರೆ ಅವರು ಚೂಪಾಗುವುದೂ ಇಲ್ಲ. ಅದಕ್ಕೆ ಬದಲಾಗಿ ಜೇಡಿಮಣ್ಣಿನಲ್ಲಿ ಕಬ್ಬಿಣದ ಅಚ್ಚು ಕಾಣಿಸುತ್ತದೆ - ಬಲಿಷ್ಠ ವ್ಯಕ್ತಿತ್ವದ ವ್ಯಕ್ತಿಯ ಅಭಿಪ್ರಾಯವು ಬಲಹೀನ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಆದರೆ ದೇವರ ಉದ್ದೇಶ ಒಬ್ಬನು ತನ್ನ ಅಭಿಪ್ರಾಯವನ್ನು ಇನ್ನೊಬ್ಬನ ಮೇಲೆ ಹೇರುವುದು ಅಲ್ಲ, ಆದರೆ ಅವರು ಪರಸ್ಪರ ಒಬ್ಬನು ಇನ್ನೊಬ್ಬನಿಂದ ಕಲಿತುಕೊಳ್ಳುವುದು ಆಗಿದೆ. ನಮ್ಮ ನಡುವೆ ಭಿನ್ನಾಭಿಪ್ರಾಯವಿದ್ದರೂ ನಮ್ಮಲ್ಲಿ ಐಕ್ಯತೆ ಇರಬಹುದು, ಮತ್ತು ನಮ್ಮ ನಡುವಿನ ಪ್ರೀತಿಯು ಕ್ಷೀಣಿಸುವುದಿಲ್ಲ - ನಿಜವಾಗಿ, ನಮ್ಮ ನಡುವಿನ ಪ್ರೀತಿಯು ಮೊದಲಿಗಿಂತ ಹೆಚ್ಚು ಗಾಢವಾಗಿ ಬೆಳೆಯುತ್ತದೆ.