WFTW Body: 

ನಾವು ಅರಣ್ಯಕಾಂಡ 22ರಿಂದ 24ನೇ ಅಧ್ಯಾಯಗಳಲ್ಲಿ, ಬಿಳಾಮನ ಕುರಿತಾದ ಸಂಗತಿಯನ್ನು ಓದುತ್ತೇವೆ. ಇಲ್ಲಿ ನಾವು ಕೆಲವು ಮುಖ್ಯವಾದ ವಿಷಯಗಳನ್ನು ನೋಡಬಹುದು. ಅರಸನಾದ ಬಾಲಾಕನು ಬಿಳಾಮನನ್ನು ಆಹ್ವಾನಿಸಿ, ಇಸ್ರಾಯೇಲ್ಯರನ್ನು ಶಪಿಸಲು ಹೇಳಿದಾಗ, ಬಿಳಾಮನು "ದೇವರ ಚಿತ್ತವೇನೆಂದು ತಿಳಿಯಲು" ಬಯಸಿದನು. ದೇವರು ಅವನಿಗೆ ಬಾಲಾಕನ ಬಳಿಗೆ ಹೋಗಬಾರದೆಂದು ಸ್ಪಷ್ಟವಾಗಿ ತಿಳಿಸಿದರು. ಆದರೆ ಅರಸನಾದ ಬಾಲಾಕನು ಆತನನ್ನು ಮತ್ತೊಮ್ಮೆ ಆಹ್ವಾನಿಸಿ, ಬರಲು ಒಪ್ಪಿಕೊಂಡರೆ ಆತನಿಗೆ ಇನ್ನೂ ಹೆಚ್ಚಿನ ಗೌರವವನ್ನು ಮತ್ತು ಬೇಕಾದಷ್ಟು ಹಣವನ್ನು ಕೊಡುವುದಾಗಿ ಹೇಳಿದನು. ಇದಕ್ಕೆ ಬಿಳಾಮನ ಪ್ರತಿಕ್ರಿಯೆ ಏನಾಗಿತ್ತೆಂದರೆ, "ದೇವರ ಚಿತ್ತವನ್ನು ತಾನು ಮತ್ತೊಮ್ಮೆ ಕೇಳಲು" ಬಯಸಿದನು. ಆದಿಯಿಂದ ಅಂತ್ಯದ ವರೆಗೆ ಎಲ್ಲವನ್ನೂ ತಿಳಿದಿರುವ ದೇವರು ಹೋಗಬೇಡವೆಂದು ಈಗಾಗಲೇ ಹೇಳಿದ್ದಾಗ, ಎರಡನೇ ಬಾರಿ ದೇವರ ಚಿತ್ತವನ್ನು ಕೇಳುವ ಅವಶ್ಯಕತೆ ಇತ್ತೇ? ಇರಲಿಲ್ಲ, ಆದರೆ ಬಿಳಾಮನು ಹಣ ಮತ್ತು ಗೌರವದ ಸೆಳೆತಕ್ಕೆ ಒಳಗಾಗಿದ್ದನು. ಸತ್ಯವೇದವು ತಿಳಿಸುವ ಹಾಗೆ, "ಬಿಳಾಮನು ಅಧರ್ಮದಿಂದ ದೊರಕುವ ದ್ರವ್ಯವನ್ನು ಪ್ರೀತಿಸಿದನು" (2 ಪೇತ್ರನು 2:15).

ಕೆಲವೊಮ್ಮೆ ನಿಮಗೂ ಇಂತಹ ಅನುಭವ ಆಗಬಹುದು. ನೀವು ದೇವರನ್ನು ಮಾರ್ಗದರ್ಶನಕ್ಕಾಗಿ ಕೇಳಿಕೊಂಡಾಗ, ನೀವು ಹೋಗಲು ಬಯಸುವ ಜಾಗಕ್ಕೆ ಹೋಗುವುದು ಬೇಡ, ಎಂದು ಅವರು ಆತ್ಮನ ಮೂಲಕ ನಿಮಗೆ ಸ್ಪಷ್ಟವಾಗಿ ತೋರಿಸಬಹುದು. ಅದಾಗ್ಯೂ ನಿಮಗೆ ಅಲ್ಲಿ ಸಿಗುವ ಸಂಬಳ ಬಹಳ ಉತ್ತಮವಾಗಿ ಕಾಣಿಸಿ, ನೀವು "ದೇವರ ಚಿತ್ತ ಏನೆಂದು ಮತ್ತೊಮ್ಮೆ ಕೇಳಲು" ಬಯಸಬಹುದು!! ನೀವು ಯಾವಾಗಲಾದರೂ ಇಂತಹ ಶೋಧನೆಗೆ ಒಳಗಾದರೆ, ಬಿಳಾಮನನ್ನು ನೆನಪಿಸಿಕೊಳ್ಳಿರಿ.

ನಿಮಗೆ ಬಹಳ ಆಕರ್ಷಕ ಸಂಬಳ, ಅಥವಾ ಹೆಚ್ಚಿನ ಗೌರವ ಪ್ರಾಪ್ತವಾಗುವ ಅವಕಾಶ ಇರುವುದರಿಂದ, ದೇವರು ತನ್ನ ಚಿತ್ತವನ್ನು ಬದಲಾಯಿಸುವುದಿಲ್ಲ. ಹಾಗಿದ್ದರೂ, ಒಬ್ಬ ಮನುಷ್ಯನು ಸ್ವೇಚ್ಛೆಯ ಪ್ರಕಾರ ನಡೆಯ ಬಯಸುತ್ತಾನೆಂದು ದೇವರಿಗೆ ತಿಳಿದಾಗ, ಅವರು ಆತನನ್ನು ತಡೆಯುವುದಿಲ್ಲ. ಅವನ ಇಷ್ಟ ಪ್ರಕಾರ ಹೋಗಲು ಬಿಡುತ್ತಾರೆ. ಇದೇ ಕಾರಣಕ್ಕಾಗಿ ಬಿಳಾಮನು ಎರಡನೆ ಬಾರಿ ದೇವರನ್ನು ಕೇಳಿಕೊಂಡಾಗ, ದೇವರು ಆತನಿಗೆ ಹೋಗಲು ಆಜ್ಞಾಪಿಸಿದರು. ಅದು ದೇವರ "ಪರಿಪೂರ್ಣ" ಚಿತ್ತವಾಗಿರಲಿಲ್ಲ. ದೇವರು ಬಿಳಾಮನ ಸ್ವೇಚ್ಛೆಯ ನಿರ್ಣಯವನ್ನು ತಳ್ಳಿಹಾಕಿ, ಅವನನ್ನು ಒಂದು "ರಾಬೋಟ್ ಯಂತ್ರ"ದಂತೆ ಚಲಾಯಿಸಲು ಬಯಸಲಿಲ್ಲ. ಬಿಳಾಮನು ನಿಜವಾಗಿ ಆ ಅರಸನ ಬಳಿಗೆ ಹೋಗಲು ಇಚ್ಛಿಸುತ್ತಾನೆಂದು ತಿಳಿದ ದೇವರು, ಆತನಿಗೆ "ಹೋಗು" ಎಂದು ಅಜ್ಞಾಪಿಸಿದರು. ಇದು ಹೇಗೆಂದರೆ, ದುಂದುಗಾರನಾಗಿದ್ದ ಮಗನು ದೂರದೇಶಕ್ಕೆ ಹೋಗುವುದನ್ನು ಆತನ ತಂದೆಯು ಸಮ್ಮತಿಸಿದ ಹಾಗೆ (ಲೂಕ 15). ದೇವರು ನಮಗೆ ನಿರ್ಣಯದ ಸ್ವಾತಂತ್ರ್ಯ ನೀಡುತ್ತಾರೆ ಮತ್ತು ಅವರು ಯಾವತ್ತೂ ನಮ್ಮ ಸ್ವೇಚ್ಛಾ ನಿರ್ಣಯವನ್ನು ತಳ್ಳಿಹಾಕುವುದಿಲ್ಲ.

ಆದರೂ ದೇವರು ಬಿಳಾಮನನ್ನು ಹೋಗದಂತೆ ತಡೆಯಲು ತನ್ನ ದೇವದೂತನನ್ನು ಕಳುಹಿಸಿದರು. ಆ ದೂತನು ಬಿಳಾಮನ ಕಣ್ಣಿಗೆ ಕಾಣಿಸಲಿಲ್ಲ, ಆದರೆ ಅವನ ಕತ್ತೆಯು ಅವನನ್ನು ನೋಡಿತು. ಇದರಿಂದ ನಾವು ಏನು ಕಲಿಯಬಹುದು? ಇಷ್ಟು ಮಾತ್ರ: "ಒಬ್ಬ ಮನುಷ್ಯ ಹಣದಾಶೆಯಿಂದ ಕುರುಡನಾದಾಗ, ಆತ್ಮಿಕ ಸತ್ಯಾಂಶಗಳನ್ನು ಅವನಿಗಿಂತ ಚೆನ್ನಾಗಿ ಅರಿತುಕೊಳ್ಳಲು ಒಂದು ಕತ್ತೆಗೂ ಸಹ ಸಾಧ್ಯವಾಗಬಹುದು!" ಆ ಕತ್ತೆಯಲ್ಲಿ ಹಣದಾಶೆ ಇಲ್ಲವಾದುದರಿಂದ, ಅದು ಆ ದೇವದೂತನನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಯಿತು! ಬಿಳಾಮನ ಹಣದಾಶೆಯಿಂದಾಗಿ ಆತನು ದೇವದೂತನನ್ನು ನೋಡಲು ಸಾಧ್ಯವಾಗಲಿಲ್ಲ. ಮುಂದೆ ಈ ಬಿಳಾಮನು ದೇವರಾತ್ಮ ಪ್ರೇರಿತನಾಗುವ ಅನುಭವವನ್ನು ಪಡೆದನು; ಅಷ್ಟೇ ಅಲ್ಲದೆ, ಆತನು ಕ್ರಿಸ್ತನ ಬರುವಿಕೆಯ ಪ್ರವಾದನೆಯನ್ನು ಮಾಡಿದನು (ಅರಣ್ಯಕಾಂಡ 24:2, 17). ಆದರೆ ತನ್ನ ಹಣದಾಶೆಯ ದೆಶೆಯಿಂದಾಗಿ ಎಲ್ಲವನ್ನೂ ಕಳೆದುಕೊಂಡು ಬಿಕಾರಿಯಾದನು.

ಆ ಕತ್ತೆಯು ತನ್ನ ಯಜಮಾನನೊಂದಿಗೆ ಮಾತನಾಡಲು ಆರಂಭಿಸಿತು. ಇದು ಸತ್ಯವೇದದಲ್ಲಿ ಕಂಡುಬರುವ "ಅನ್ಯಭಾಷೆಯಲ್ಲಿ ಮಾತಾಡುವ" ಮೊದಲನೇ ಉದಾಹರಣೆಯಾಗಿದೆ - ಒಂದು ಕತ್ತೆಯು ತನಗೆ ತಿಳಿಯದ ಒಂದು ಭಾಷೆಯಲ್ಲಿ ಸರಾಗವಾಗಿ ಮಾತಾಡುವುದು - ಅಷ್ಟೇ ಅಲ್ಲ, ಅದು ಆ ಭಾಷೆಯನ್ನು ಕಲಿಯದೇ ಮಾತಾಡಿತು! ಇದೊಂದು ಅಲೌಕಿಕ ದೈವಿಕ ಅನುಭವವಾಗಿತ್ತು. ಖಂಡಿತವಾಗಿ ಇದು ದೇವರಿಂದ ಬಂದಿತ್ತು. ಆದರೆ ದೇವರ ವಾಕ್ಯದಲ್ಲಿ ಕಾಣಿಸುವ ಮೊದಲನೆಯ ಅನ್ಯಭಾಷೆಯ ಮಾತಿನ ಉದಾಹರಣೆಯಿಂದ ನಾವು ಒಂದು ವಿಷಯವನ್ನು ಕಲಿಯೋಣ: ಅನ್ಯಭಾಷೆಯಲ್ಲಿ ಮಾತಾಡುವುದು ಯಾರನ್ನೂ "ಆತ್ಮಿಕ" ಮನುಷ್ಯರಾಗಿ ಬದಲಾಯಿಸುವುದಿಲ್ಲ - ಏಕೆಂದರೆ ಆ ಕತ್ತೆಯು ಅನ್ಯಭಾಷೆ ಮಾತಾಡಿದ ನಂತರವೂ ಒಂದು ಮೂರ್ಖ ಕತ್ತೆಯಾಗಿಯೇ ಉಳಿಯಿತು, ತನ್ನ ನಾಲಿಗೆಯ ಮೂಲಕ ದೇವರ ದಿವ್ಯ ಪ್ರಭಾವದ ಅನುಭವವನ್ನು ಪಡೆದ ನಂತರವೂ ಸಹ! ''ಯಾವಾಗಲೂ ಇದನ್ನು ನೆನಪಿಡಿರಿ."