ನಾವು ಹಿಂದಿನ ಕೆಲವು ವಾರಗಳಿಂದ ಶಿಷ್ಯತ್ವದ ಷರತ್ತುಗಳ ಪರಿಚಯ ಮಾಡಿಕೊಳ್ಳುತ್ತಿದ್ದೇವೆ. ಈ ಷರತ್ತುಗಳನ್ನು ದೀಕ್ಷಾಸ್ನಾನಕ್ಕೆ ಮುಂಚೆ ಪೂರೈಸಬೇಕಾಗುತ್ತದೆ. ಮತ್ತಾಯನು 28:19ರ ಶ್ರೇಷ್ಠ ಆಜ್ಞೆಯನ್ನು ಮತ್ತೊಮ್ಮೆ ನೋಡುವುದಾದರೆ, ಅಲ್ಲಿ ಯೇಸುವು ಹೀಗೆ ಹೇಳಿದ್ದಾರೆ, "ಅವರನ್ನು ಶಿಷ್ಯರನ್ನಾಗಿ ಮಾಡಿದ ನಂತರ, ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಬೇಕು."
ಬೇರೊಂದು ರೀತಿಯಲ್ಲಿ ಹೇಳುವುದಾದರೆ, ನಾವು ಯಾವುದೇ ವ್ಯಕ್ತಿಗೆ ದೀಕ್ಷಾಸ್ನಾನ ಮಾಡಿಸುವುದಕ್ಕೆ ಮುನ್ನ, ಅವರಿಗೆ ಶಿಷ್ಯತ್ವದ ವಿಧಿ-ನಿಯಮಗಳನ್ನು ಈ ರೀತಿಯಾಗಿ ವಿವರಿಸಬೇಕು, "ನೀವು ಕ್ರಿಸ್ತನ ಬಳಿಗೆ ಬರುವುದರ ಅರ್ಥ, ಮುಂದೆ ಮರಣದ ನಂತರ ನೀವು ನೇರವಾಗಿ ಪರಲೋಕವನ್ನು ಪ್ರವೇಶಿಸುತ್ತೀರಿ ಎಂದಲ್ಲ. ನಿಮ್ಮನ್ನು ನಾವು ಆಹ್ವಾನಿಸುತ್ತಿರುವುದು ಕೇವಲ ನಿಮ್ಮ ಪಾಪ ಕ್ಷಮಾಪಣೆಗಾಗಿ ಅಲ್ಲ. ನಿಮ್ಮ ಜೀವನದಲ್ಲಿ ಯೇಸುವನ್ನು ಒಡೆಯನಾಗಿ ಸ್ವೀಕರಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ನೀವು ಆತನನ್ನು ಯಾವಾಗಲಾದರೂ ವಾರಕ್ಕೊಮ್ಮೆ ಭೇಟಿ ಮಾಡುವುದಲ್ಲ, ಆತನು ಇನ್ನು ಮುಂದೆ ನಿಮ್ಮ ಗಂಡನಾಗಿರುತ್ತಾನೆ."
ಒಬ್ಬ ಹೆಣ್ಣುಮಗಳು ಮದುವೆಯಾದಾಗ, ಆಕೆಯು ತನ್ನ ಹೆತ್ತವರು ಕೊಟ್ಟ ಉಪ ನಾಮವನ್ನು ಸಹ ಬದಲಾಯಿಸಿಕೊಳ್ಳುತ್ತಾಳೆ, ಮತ್ತು ಸಂಪೂರ್ಣವಾಗಿ ತನ್ನ ಗಂಡನೊಂದಿಗೆ ಸೇರಿಕೊಳ್ಳುತ್ತಾಳೆ. ಆಕೆ ಮಾಡುವುದು ಸರಿಯಾದದ್ದು, ಮತ್ತು ಇದೇ ರೀತಿಯ ಸಂಬಂಧವನ್ನು ಕ್ರಿಸ್ತನು ನಮ್ಮಲ್ಲಿ ಪ್ರತಿಯೊಬ್ಬನೊಂದಿಗೂ ಸಹ ಇರಿಸಿಕೊಳ್ಳಲು ಬಯಸುತ್ತಾನೆ. ಶಿಷ್ಯನಾಗುವುದು ಎಂದರೆ ಇದೇ ಆಗಿದೆ. ಒಬ್ಬ ಸ್ತ್ರೀಯು ಮದುವೆ ಮಾಡಿಕೊಳ್ಳುವಾಗ, "ನಾನು ವಾರಕ್ಕೆ ಒಂದು ದಿನ ನನ್ನ ಗಂಡನೊಂದಿಗೆ ಇದ್ದರೆ ಸಾಕು," ಅಥವಾ, "ನಾನು ಮೊದಲಿನಂತೆಯೇ ಜೀವಿಸುತ್ತೇನೆ ಮತ್ತು ಒಮ್ಮೊಮ್ಮೆ ಯಾವಾಗಲಾದರೂ ನನ್ನ ಗಂಡನನ್ನು ಭೇಟಿಯಾಗುತ್ತೇನೆ,"ಎಂಬ ಭಾವನೆಯಿಂದ ಮದುವೆಯಾಗುವುದು ಸರಿಯಲ್ಲ. ಮದುವೆಯ ಕುರಿತಾದ ಈ ಸತ್ಯಾಂಶವನ್ನು - ಆಕೆ ಯಾರನ್ನು ಮದುವೆ ಮಾಡಿಕೊಳ್ಳುತ್ತಾಳೋ, ಆ ಪುರುಷನಿಗೆ ಆಕೆ ತನ್ನನ್ನು ಸಂಪೂರ್ಣವಾಗಿ ಒಪ್ಪಿಸಿಕೊಳ್ಳಬೇಕು ಎಂಬುದನ್ನು - ಆಕೆಗೆ ಮದುವೆಗೆ ಮುನ್ನ ವಿವರಿಸಿ ಹೇಳುವುದು ಅವಶ್ಯವಾಗಿದೆ.
ನಾವು ಸುವಾರ್ತೆ ಸಾರುವಾಗಲೂ ಸಹ ಜನರಿಗೆ ಕೊಡುವ ವಿವರಣೆಯಲ್ಲಿ, ಕ್ರೈಸ್ತ ಜೀವಿತದಲ್ಲಿ ಸಂಪೂರ್ಣ ಬದ್ಧತೆಯು ಅವಶ್ಯವಾಗಿದೆ, ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಡಬೇಕು. ಇದರ ಅರ್ಥ ಶಿಷ್ಯತ್ವ. ಇದರ ಅರ್ಥ ಕರ್ತನನ್ನು ಹಿಂಬಾಲಿಸುವುದು. ಇದನ್ನು ಯಾರು ಒಪ್ಪಿಕೊಳ್ಳುತ್ತಾರೋ, ಅವರು ದೀಕ್ಷಾಸ್ನಾನಕ್ಕೆ ಅರ್ಹರಾಗಿದ್ದಾರೆ. ನಾವು ದೀಕ್ಷಾಸ್ನಾನ ಕೊಡಲು ಒಬ್ಬ ವ್ಯಕ್ತಿ ಪರಿಪೂರ್ಣನಾಗಬೇಕೆಂದು ಕಾಯುವುದಿಲ್ಲ, ಆದರೆ ಆತನಿಗೆ ಶಿಷ್ಯತ್ವದ ವಿಧಿ-ನಿಯಮಗಳನ್ನು ಸ್ಪಷ್ಟವಾಗಿ ತಿಳಿಸುವುದಕ್ಕೆ ನಾವು ಒತ್ತು ನೀಡುತ್ತೇವೆ. ದೀಕ್ಷಾಸ್ನಾನದ ನಂತರ ಕ್ರಿಸ್ತನು ಆತನ ರಕ್ಷಕನೂ, ಒಡೆಯನೂ ಆಗಿರುತ್ತಾನೆ ಎಂಬ ನಿಬಂಧನೆಯನ್ನು ಆತನು ಸ್ವೀಕರಿಸಿದ್ದಾದರೆ, ಆಗ ನಾವು ಆತನಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮನ ನಾಮದಲ್ಲಿ ದೀಕ್ಷಾಸ್ನಾನವನ್ನು ನೀಡುತ್ತೇವೆ. ಅದಕ್ಕಾಗಿಯೇ ದೀಕ್ಷಾಸ್ನಾನಕ್ಕೆ ಮುನ್ನ, ಒಬ್ಬ ವ್ಯಕ್ತಿ ಕರ್ತನನ್ನು ಹಿಂಬಾಲಿಸಲು ಸಿದ್ಧನಾಗಿದ್ದಾನೋ ಎಂದು ತಿಳಿಯಲು ನಮ್ಮ ಸಭೆಗಳಲ್ಲಿ ಸ್ವಲ್ಪ ಸಮಯ ಕಾಯಲು ಬಯಸುತ್ತೇವೆ.
"ದೀಕ್ಷಾಸ್ನಾನವು ಒಬ್ಬ ವ್ಯಕ್ತಿಯು ಈಗಾಗಲೇ ಮಾಡಿರುವ ಆಯ್ಕೆಯನ್ನು ಸೂಚಿಸುವ ಒಂದು ಸಂಕೇತ ಮಾತ್ರವಾಗಿದೆ - ಆತನು ತನ್ನ ಸ್ವಂತ ಚಿತ್ತಕ್ಕೆ ಸಾಯುತ್ತೇನೆಂದು ತೀರ್ಮಾನಿಸಿರುತ್ತಾನೆ."
ಕ್ರೈಸ್ತರು ಹಿಂಸೆಗೆ ಒಳಗಾಗಿರುವ ದೇಶಗಳಲ್ಲಿ, ಅಥವಾ ಕ್ರೈಸ್ತನಾಗಿರುವುದು ಜನಪ್ರಿಯವಲ್ಲದ ಪ್ರದೇಶಗಳಲ್ಲಿ, ನಾವು ದೀಕ್ಷಾಸ್ನಾನ ನೀಡಲು ಹೆಚ್ಚು ಸಮಯ ಕಾಯಬೇಕಿಲ್ಲ. ಕ್ರೈಸ್ತತ್ವದ ಆರಂಭದ ದಿನಗಳಲ್ಲಿ, ಒಬ್ಬ ಯೆಹೂದ್ಯನು ಕ್ರೈಸ್ತನಾಗಲು ಅಪಾರ ತ್ಯಾಗವನ್ನು ಮಾಡಬೇಕಾಗಿತ್ತು (ಇಂದಿಗೂ ಸಹ ಇದು ಬದಲಾಗಿಲ್ಲ) ಹಾಗಾಗಿ ಒಬ್ಬ ಯೆಹೂದ್ಯನಿಗೆ ಯಾವುದೇ ವಿಳಂಬವಿಲ್ಲದೆ ದೀಕ್ಷಾಸ್ನಾನ ಮಾಡಿಸುತ್ತಿದ್ದರು (ಅಪೊಸ್ತಲರ ಕೃತ್ಯಗಳಲ್ಲಿ ನಾವು ಇದನ್ನು ಕಾಣುತ್ತೇವೆ). ಒಬ್ಬ ವಿಗ್ರಹಾರಾಧಕನು ವಿಗ್ರಹಾರಾಧನೆಯನ್ನು ತ್ಯಜಿಸಿ ಕ್ರೈಸ್ತನಾಗುವುದಕ್ಕೆ ತನ್ನ ಸಂಬಂಧಿಕರ ಸಂಪೂರ್ಣ ಬಹಿಷ್ಕಾರವನ್ನು ಎದುರಿಸಬೇಕಿತ್ತು. ಹೀಗಾಗಿ ಆತನಿಗೆ ಶಿಷ್ಯನಾಗಲು ಮನಸ್ಸಿದೆಯೆಂದು ಸುಲಭವಾಗಿ ತಿಳಿದುಬರುತ್ತಿತ್ತು, ಆದಕಾರಣ ಆತನಿಗೆ ಒಡನೆಯೇ ದೀಕ್ಷಾಸ್ನಾನ ಮಾಡಿಸಬಹುದಾಗಿತ್ತು. ಆದರೆ ಇಂದಿನ ದಿನದಲ್ಲಿ ಹಲವಾರು ದೇಶಗಳಲ್ಲಿ ಶೋಷಣೆ ಇಲ್ಲದಿರುವಾಗ, ಒಬ್ಬ ವ್ಯಕ್ತಿಯು ಶಿಷ್ಯತ್ವದ ನಿಬಂಧನೆಗಳನ್ನು ಅರ್ಥ ಮಾಡಿಕೊಂಡಿದ್ದಾನೆಯೇ ಎಂದು ತಿಳಿಯುವುದು ಸುಲಭವಲ್ಲ. ಅವನು ಪರಲೋಕಕ್ಕೆ ಹೋಗುವದಕ್ಕಾಗಿ ಕ್ರಿಸ್ತನನ್ನು ಸುಮ್ಮನೆ ಅಂಗೀಕರಿಸಿರಬಹುದು. ಅವನಿಗೆ ಶಿಷ್ಯತ್ವದ ನಿಬಂಧನೆಗಳನ್ನು ಪ್ರಸ್ತುತಪಡಿಸದೇ ಇದ್ದಿರಬಹುದು, ಅಥವಾ ಅವನು ಅವುಗಳ ಅರ್ಥವನ್ನು ಅರಿತುಕೊಳ್ಳದೇ ಇದ್ದಿರಬಹುದು, ಅಥವಾ ಅರಿತಿದ್ದರೂ ಸಹ, ಅವನು ಆ ಷರತ್ತುಗಳನ್ನು ಪೂರೈಸಲು ಸಿದ್ಧನಿಲ್ಲದೇ ಇದ್ದಿರಬಹುದು. ಅಂತಹ ಜನರಿಗೆ ದೀಕ್ಷಾಸ್ನಾನ ಮಾಡಿಸಲು ನಮಗೆ ಯಾವುದೇ ಹಕ್ಕಿಲ್ಲ.
ಒಬ್ಬ ವ್ಯಕ್ತಿಯು ದೀಕ್ಷಾಸ್ನಾನದ ನಂತರವೂ ಸಹ ಹಿಂಜಾರುವ ಸಾಧ್ಯತೆಯಿದೆ - ಅದು ಬೇರೊಂದು ವಿಷಯ - ಆದರೆ ಶಿಷ್ಯತ್ವದ ನಿಬಂಧನೆಗಳನ್ನು ಜನರಿಗೆ ಪ್ರಾರಂಭದಲ್ಲಿಯೇ ಸ್ಪಷ್ಟವಾಗಿ ತಿಳಿಸಬೇಕು. ಯೇಸುವು ಯಾವಾಗಲೂ ಸತ್ಯವನ್ನು ಈ ರೀತಿ ಸಾರುತ್ತಿದ್ದರು. ಒಬ್ಬ ಐಶ್ವರ್ಯವಂತ ಯೌವನಸ್ಥ ಅಧಿಕಾರಿಯು ಯೇಸುವಿನ ಬಳಿಗೆ ಬಂದು, "ನಾನು ನಿತ್ಯಜೀವವನ್ನು ಪಡೆದುಕೊಳ್ಳ ಬೇಕಾದರೆ ಏನು ಮಾಡಬೇಕು?" ಎಂದು ಕೇಳಿದಾಗ, ಯೇಸುವು ಯಥಾರ್ಥವಾಗಿ ಆ ಐಶ್ವರ್ಯವಂತ ಯುವ ಅಧಿಕಾರಿಗೆ, ಆತನ ಬಳಿ ಇದ್ದ ಎಲ್ಲವನ್ನು ತ್ಯಜಿಸುವಂತೆ ಹೇಳಿದನು. ಅವನು ಅದನ್ನು ಇಷ್ಟಪಡದೆ ಹಿಂದಿರುಗಿ ಹೋದಾಗ, ಕರ್ತನು ಎಂದಿಗೂ ಅವನ ಹಿಂದೆ ಹೋಗಲಿಲ್ಲ. ಕರ್ತನು ಎಂದಿಗೂ ಅನುಕೂಲಕ್ಕಾಗಿ ನಿಯಮವನ್ನು ಸಡಿಲಿಸಲಿಲ್ಲ. ಆ ಯುವಕನಿಗೆ ಹಂತ ಹಂತವಾಗಿ ಬರವಂತೆ ಸಲಹೆಯನ್ನೂ ಸಹ ನೀಡಲಿಲ್ಲ. ಆತನು, "ಇದು ಖಚಿತವಾದದ್ದು. ನಿನಗೆ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ. ನೀನು ಎಲ್ಲವನ್ನು ಬಿಟ್ಟುಕೊಡಬೇಕು," ಎಂದು ಹೇಳಿದನು.
ದೀಕ್ಷಾಸ್ನಾನವು ಅರ್ಥಗರ್ಭಿತವಾದದ್ದು, ಏಕೆಂದರೆ ನಾವು ರೋಮಾ 6ನೇ ಅಧ್ಯಾಯದಲ್ಲಿಹೀಗೆ ಓದಿಕೊಳ್ಳುತ್ತೇವೆ, ದೀಕ್ಷಾಸ್ನಾನವು ಹಳೆಯ ಸ್ವಾರ್ಥವನ್ನು ಹೂಣಿಡುವ ಸಂಕೇತವಾಗಿದೆ: ನನ್ನ ಹಳೆಯ ಜೀವಿತ, ಅಂದರೆ ಮುಖ್ಯವಾಗಿ ಸ್ವಂತ ಚಿತ್ತವನ್ನು ಮಾಡುವಂತದ್ದು, ನನಗೆ ಇಷ್ಟವಿದ್ದುದನ್ನು ಮಾಡುವುದು, ನನ್ನನ್ನೇ ಅಥವಾ ಇತ್ತರ ಜನರನ್ನು ಮೆಚ್ಚಿಸುವಂತದ್ದು. ಅಂತಹ ವ್ಯಕ್ತಿಯು, ಅಂದರೆ ನನ್ನೊಳಗೆ ವಾಸಿಸುತ್ತಿರುವ ಆ ಆದಾಮನ ಸ್ವಭಾವವು, ಈಗ ಸತ್ತಿದೆ. ನಾನು ಕ್ರಿಸ್ತನೊಟ್ಟಿಗೆ ಶಿಲುಬೆಯಲ್ಲಿ ನನ್ನ ಸ್ಥಳವನ್ನು ತೆಗೆದುಕೊಂಡಿದ್ದೇನೆ ಮತ್ತು ಆ ವ್ಯಕ್ತಿಯು (ನನ್ನ ಹಳೆಯ ಸ್ವಭಾವ) ಸತ್ತಿದ್ದಾನೆ. ನಾನು ಈ ಪರಿಸ್ಥಿತಿಯನ್ನು ಸ್ವೀಕರಿಸಿದಾಗ, ನಾನು ದೀಕ್ಷಾಸ್ನಾನವನ್ನು ತೆಗೆದುಕೊಳ್ಳಬಹುದು. ನಾನು ನೀರಿನ ದೀಕ್ಷಾಸ್ನಾನದಿಂದ ಹೊರಗೆ ಬರುವಾಗ, ಈಗ ನಾನು ಹೊಸ ವ್ಯಕ್ತಿಯಾಗಿದ್ದೇನೆ ಎಂಬುದಾಗಿ ಸಾಕ್ಷಿ ನೀಡುತ್ತಿದ್ದೇನೆ. ದೀಕ್ಷಾಸ್ನಾನ ಅಥವಾ ನೀರಿನಲ್ಲಿ ಮುಳುಗುವಿಕೆಯ ಅರ್ಥ ಇದಾಗಿದೆ. ಒಬ್ಬ ಪರಿವರ್ತನೆಯಾದ ವ್ಯಕ್ತಿಯಲ್ಲಿ ಇಂತಹ ಸಾಕ್ಷಿಯು ಇಲ್ಲವಾದರೆ, ಆಗ ದೀಕ್ಷಾಸ್ನಾನವು ಅರ್ಥವಿಲ್ಲದ್ದಾಗುತ್ತದೆ.
ಸಾಯದಿರುವ ಒಬ್ಬ ವ್ಯಕ್ತಿಯನ್ನು ಹೂಣಿಡಲು ಸಾಧ್ಯವಿಲ್ಲ, ಮತ್ತು ದೀಕ್ಷಾಸ್ನಾನವನ್ನು ತೆಗೆದುಕೊಂಡಿರುವ ಅನೇಕ ಜನರು ಸತ್ತಿಲ್ಲ, ಏಕೆಂದರೆ ಅವರು ತಮ್ಮ (ಹಳೆಯ) ಜೀವವನ್ನು ಸಾಯಿಸುವ ಆಯ್ಕೆಯನ್ನು ಮಾಡಿಲ್ಲ. ಇದಕ್ಕೆ ಬದಲಾಗಿ, ಅವರು ಒಂದು ಪ್ರಾಪಂಚಿಕ ಆಚಾರಕ್ಕೆ ಅನುಸಾರವಾಗಿ ನೀರಿನ ದೀಕ್ಷಾಸ್ನಾನವನ್ನು ತೆಗೆದುಕೊಳ್ಳುತ್ತಾರೆ. ಅನೇಕ ತಂದೆತಾಯಂದಿರು ತಮ್ಮ ಸ್ವಂತ ಗೌರವಕ್ಕಾಗಿ ತಮ್ಮ ಮಕ್ಕಳನ್ನು ದೀಕ್ಷಾಸ್ನಾನ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾರೆ. ಅಥವಾ ದೀಕ್ಷಾಸ್ನಾನವು ಯಾವುದೋ ರೀತಿಯಲ್ಲಿ ತಮ್ಮ ಮಕ್ಕಳನ್ನು ಕಾಪಾಡುತ್ತದೆ ಎಂದು ತಂದೆತಾಯಂದಿರು ಯೋಚಿಸುತ್ತಾರೆ. ಆದರೆ ಇದು ಆ ರೀತಿಯಾಗಿ ಅವರನ್ನು ಕಾಪಾಡುವುದಿಲ್ಲ.
ದೀಕ್ಷಾಸ್ನಾನವು ಒಬ್ಬ ವ್ಯಕ್ತಿಯು ಈಗಾಗಲೇ ತೀರ್ಮಾನವನ್ನು ಕೈಗೊಂಡಿರುವುದರ - ತನ್ನ ಚಿತ್ತಕ್ಕೆ ಸಾಯುತ್ತೇನೆಂಬ ತೀರ್ಮಾನ - ಆಯ್ಕೆಯ ಗುರುತಾಗಿದೆ. ಒಂದು ವೇಳೆ ಆತನು ಈ ಆಯ್ಕೆಯನ್ನು ಮಾಡಿರದಿದ್ದರೆ, ಆಗ ಅದು ಒಂದು ಅರ್ಥವಿಲ್ಲದ ಪ್ರಾಪಂಚಿಕ ಆಚಾರವಾಗುತ್ತದೆ.