ಸತ್ಯವೇದವು ಎಲ್ಲಾ ಕಾರ್ಯಗಳಿಗಾಗಿ, ಎಲ್ಲಾ ಸನ್ನಿವೇಶಗಳಲ್ಲಿ ಮತ್ತು ಎಲ್ಲಾ ಜನರಿಗಾಗಿ ಕೃತಜ್ಞತೆ ಸಲ್ಲಿಸಬೇಕೆಂದು ನಮಗೆ ತಿಳಿಸುತ್ತದೆ.
"ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರಮಾಡುತ್ತಾ ಇರಿ" (ಎಫೆ. 5:20).
"ಎಲ್ಲಾದರಲ್ಲಿಯೂ ಕೃತಜ್ಞತಾ ಸ್ತುತಿ ಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಚಿತ್ತ"(1 ಥೆಸ. 5:18).
"ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ಕೃತಜ್ಞತಾ ಸ್ತುತಿಗಳನ್ನು ಮಾಡಬೇಕೆಂದು ಬೋಧಿಸುತ್ತೇನೆ"(1 ತಿಮೊ. 2:1).
ನಾವು ಇವೆಲ್ಲವನ್ನು ಸೂಕ್ತವಾದ ರೀತಿಯಲ್ಲಿ ಮಾಡಬೇಕಾದರೆ, ನಾವು ದೇವರ ಸಂಪೂರ್ಣ ಸಾರ್ವಭೌಮತ್ವವನ್ನು, ಅಂದರೆ ಅವರ ಪರಮ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು.
ದೇವರಲ್ಲಿ ಯೇಸುವಿನ ಬಗ್ಗೆ ಎಷ್ಟು ಕಾಳಜಿಯಿತ್ತೋ, ಅಷ್ಟೇ ಕಾಳಜಿ ನಮ್ಮ ಬಗ್ಗೆಯೂ ಇದೆ. ದೇವರ ಕೃಪೆಯು ಯೇಸುವಿಗೆ ಒದಗಿಸಿದ ಸಹಾಯ, ಪವಿತ್ರಾತ್ಮನ ಸಾಮರ್ಥ್ಯವು ಆತನಿಗೆ ಪಾಪದ ವಿರುದ್ಧ ಹೋರಾಡಲು ನೀಡಿದ ಬಲ, ಈಗ ನಮಗೂ ಸಹ ಲಭಿಸುತ್ತದೆ.
ಯೂದನು ಯೇಸುವಿನ ವಿರುದ್ಧ ದ್ರೋಹ ಮಾಡಿದನು, ಪೇತ್ರನು ಯೇಸುವನ್ನು ಅಲ್ಲಗಳೆದನು, ಯೇಸುವಿನ ಶಿಷ್ಯರು ಆತನನ್ನು ಬಿಟ್ಟು ಓಡಿಹೋದರು, ಜನಸಮೂಹವು ಆತನನ್ನು ವಿರೋಧಿಸಿತು, ಆತನು ಅನ್ಯಾಯವಾಗಿ ನ್ಯಾಯತೀರ್ಪಿಗೆ ಒಳಪಟ್ಟನು, ಆತನ ಮೇಲೆ ಸುಳ್ಳು ದೂಷಣೆ ಹೊರಿಸಲ್ಪಟ್ಟಿತು; ಈ ರೀತಿಯಾಗಿ ಆತನು ಶಿಲುಬೆಯ ಮರಣಕ್ಕೆ ನಡೆಸಲ್ಪಟ್ಟನು. ಇಷ್ಟೆಲ್ಲಾ ನಡೆದರೂ ಆತನು ಕಲ್ವಾರಿಯ ಹಾದಿಯಲ್ಲಿ ಜನಸಮೂಹವನ್ನು ಉದ್ದೇಶಿಸಿ, "ನೀವು ನನಗೋಸ್ಕರ ಅಳಬೇಡಿರಿ; ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ," ಎಂದು ಹೇಳಲು ಸಾಧ್ಯವಾಯಿತು (ಲೂಕ. 23:28).
ಆತನಲ್ಲಿ ತನಗಾಗಿ ಮರುಕಗೊಳ್ಳುವ ಸ್ವಾಭಿಮಾನದ ಸುಳಿವೂ ಸಹ ಇರಲಿಲ್ಲ.
ಆತನು ಕುಡಿಯಬೇಕಾಗಿದ್ದ ಸಂಕಟದ ಪಾತ್ರೆಯು ಆತನ ತಂದೆಯಿಂದ ಬಂದಿತ್ತೆಂದು ಆತನಿಗೆ ತಿಳಿದಿತ್ತು. ಇಸ್ಕರಿಯೋತ ಯೂದನು ಕೇವಲ ಆ ಪಾತ್ರೆಯನ್ನು ತಂದುಕೊಟ್ಟ ದೂತನಾಗಿದ್ದನು. ಹಾಗಾಗಿ ಯೇಸುವು ಯೂದನನ್ನು ಪ್ರೀತಿಯಿಂದ ದೃಷ್ಟಿಸಿ, ಆತನನ್ನು "ಗೆಳೆಯನೇ," ಎಂದು ಸಂಬೋಧಿಸಲು ಸಾಧ್ಯವಾಯಿತು. ನಿಮಗೆ ದೇವರ ಸಂಪೂರ್ಣ ಸಾರ್ವಭೌಮತ್ವದ ಕುರಿತಾಗಿ ನಂಬಿಕೆ ಇಲ್ಲವಾದರೆ, ನೀವು ಇಂತಹ ಮಾತನ್ನು ನುಡಿಯಲಾರಿರಿ.
ಯೇಸುವು ಪಿಲಾತನಿಗೆ, "ಮೇಲಿನಿಂದ ನಿನಗೆ ಅಧಿಕಾರವು ಕೊಡಲ್ಪಡದಿದ್ದರೆ, ನಿನಗೆ ನನ್ನ ಮೇಲೆ ಯಾವ ಅಧಿಕಾರವೂ ಇರುತ್ತಿರಲಿಲ್ಲ,"ಎಂದು ಹೇಳಿದನು (ಯೋಹಾ. 19:11).
ಯೇಸುವಿನಲ್ಲಿ ಈ ಭರವಸೆ ಇದ್ದುದರಿಂದಲೇ ಆತನ ಭೂಲೋಕದ ನಡತೆಯಲ್ಲಿ ಒಬ್ಬ ರಾಜನ ಘನತೆಯಿತ್ತು. ಆತನ ಜೀವಿತದಲ್ಲಿ ಆತ್ಮಿಕ ಸ್ಥೈರ್ಯವಿತ್ತು ಮತ್ತು ಅದೇ ಆತ್ಮಿಕ ಸ್ಥೈರ್ಯದಿಂದ ಆತನು ಮರಣವನ್ನು ಸ್ವೀಕರಿಸಿದನು.
"ದೇವರಲ್ಲಿ ಯೇಸುವಿನ ಬಗ್ಗೆ ಎಷ್ಟು ಕಾಳಜಿಯಿತ್ತೋ, ಅಷ್ಟೇ ಕಾಳಜಿ ನಮ್ಮ ಬಗ್ಗೆಯೂ ಇದೆ"
ನಾವು ಈಗ "ಯೇಸುವು ನಡೆದಂತೆ ನಡೆಯಲು"ಕರೆಯಲ್ಪಟ್ಟಿದ್ದೇವೆ. ಯೇಸುವು ಪಿಲಾತನ ಮುಂದೆ "ಶ್ರೇಷ್ಠ ಸಾಕ್ಷಿಯನ್ನು ನೀಡಿದಂತೆ," ನಾವು ಸಹ ನಂಬಿಕೆಯಿಲ್ಲದ ಜನಾಂಗದ ಮುಂದೆ ನಮ್ಮ ಸಾಕ್ಷಿ ನೀಡಲಿಕ್ಕಾಗಿ ಕರೆಯಲ್ಪಟ್ಟಿದ್ದೇವೆ.
'1 ತಿಮೊಥೆಯನಿಗೆ 6:13-14'ರಲ್ಲಿ, ಪೌಲನು ತಿಮೊಥೆಯನಿಗೆ, "ಸರ್ವಸೃಷ್ಟಿಗೆ ಜೀವಾಧಾರಕನಾದ ದೇವರ ಮುಂದೆಯೂ, ಪೊಂತ್ಯ ಪಿಲಾತನ ಕಾಲದಲ್ಲಿ ತಾನೇ ಶ್ರೇಷ್ಠ ಸಾಕ್ಷಿಯಾಗಿ ನಡೆದುಕೊಂಡ ಕ್ರಿಸ್ತ ಯೇಸುವಿನ ಮುಂದೆಯೂ, ನಾನು ನಿನಗೆ ಖಂಡಿತವಾಗಿ ಹೇಳುವುದೇನೆಂದರೆ, ನಿನಗೆ ನೀಡಲಾದ ಆಜ್ಞೆಗಳನ್ನು ನೀನು ನಮ್ಮ ಕರ್ತನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವ ತನಕ ನಿಷ್ಕಳಂಕವಾಗಿಯೂ, ನಿಂದಾರಹಿತವಾಗಿಯೂ ಕಾಪಾಡಬೇಕು."
ನಾವು ಈಗಾಗಲೇ ನೋಡಿಕೊಂಡಂತೆ, ದೇವರು ಅಂತಿಮವಾಗಿ ನಮ್ಮಲ್ಲಿ ನೆರವೇರಿಸಲು ಉದ್ದೇಶಿಸಿರುವ ತನ್ನ ಸುಚಿತ್ತ ಏನೆಂದರೆ, ನಾವು ದೇವರ ಪರಿಶುದ್ಧ ಸ್ವಭಾವದಲ್ಲಿಯೂ, ಆತನ ಪವಿತ್ರತೆಯಲ್ಲಿಯೂ ಪಾಲುಗಾರರಾಗಬೇಕು, ಎಂಬುದಾಗಿದೆ. ಅದ್ಭುತಕರ ಸರ್ವಶಕ್ತರಾಗಿರುವ ದೇವರು ನಮ್ಮ ಜೀವಿತದ ಹಾದಿಯಲ್ಲಿ ನಮ್ಮನ್ನು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯನ್ನು ದೇವರ ಚಿತ್ತಾನುಸಾರವಾಗಿ ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ಉಪಯೋಗಿಸುತ್ತಾರೆ. ಈ ಕಾರಣಕ್ಕಾಗಿಯೇ ನಾವು ಎಲ್ಲಾ ಜನರಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಲು ಸಾಧ್ಯವಾಗುತ್ತದೆ.
ದೇವರು ನಿನಗೆ ತೊಂದರೆ ಕೊಡುವ ನಿನ್ನ ನೆರೆಯವನನ್ನು, ಆ ಕಿರುಕುಳ ನೀಡುವ ನಿನ್ನ ಸಂಬಂಧಿಕನನ್ನು ಮತ್ತು ನಿನ್ನನ್ನು ಹಿಂಸಿಸುವ ನಿನ್ನ ಮೇಲಧಿಕಾರಿಯನ್ನು ಏಕೆ ಅನುಮತಿಸುತ್ತಾರೆ? ಅವರು ಇಂತಹ ಜನರನ್ನು ಸುಲಭವಾಗಿ ತಡೆಯಬಹುದು ಅಥವಾ ಅವರ ಪ್ರಾಣವನ್ನೂ ಸಹ ತೆಗೆಯಬಹುದು, ಮತ್ತು ಆ ಮೂಲಕ ನಿನ್ನ ತೊಂದರೆಯನ್ನು ನಿವಾರಿಸಬಹುದು. ಆದರೆ ದೇವರು ಇಂತಹ ಕಾರ್ಯವನ್ನು ಮಾಡುವುದಿಲ್ಲ, ಏಕೆ? ನಿನ್ನನ್ನು ಪರಿಶುದ್ಧಗೊಳಿಸಲು ಇಂತಹ ಜನರನ್ನು ಬಳಸಿಕೊಳ್ಳುವುದು ದೇವರ ಉದ್ದೇಶವಾಗಿದೆ. ದೇವರು - ನಿನ್ನ ಮೂಲಕ - ಇವರನ್ನು ರಕ್ಷಣೆಗೆ ನಡೆಸುವ ಉದ್ದೇಶವನ್ನೂ ಸಹ ಹೊಂದಿರಬಹುದು.