WFTW Body: 

ಇಬ್ರಿ. 1:9, ಯೇಸುವು ಭೂಲೋಕದಲ್ಲಿ ಒಬ್ಬ ಮಾನವನಾಗಿ ಯಾವ ರೀತಿ ಜೀವಿಸಿದರೆಂದು ನಮಗೆ ತೋರಿಸುವ ವಚನವಾಗಿದೆ: "ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ; ಆದದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಉನ್ನತಸ್ಥಾನಕ್ಕೆ ಏರಿಸಿ, ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾರೆ."

ಯೇಸುವು ಭೂಲೋಕದ ತನ್ನ ಜೀವಿತದಲ್ಲಿ, ನಮ್ಮಂತಹ ಸಾಮಾನ್ಯ ಮನುಷ್ಯರಂತೆಯೇ ಎಲ್ಲಾ ಇತಿಮಿತಿಗಳೊಂದಿಗೆ ಜೀವಿಸಿದರು. ಇದಕ್ಕಾಗಿ ಅವರು ಪವಿತ್ರಾತ್ಮನ ಅಭಿಷೇಕವನ್ನು ಹೊಂದುವುದು ಅವಶ್ಯವಾಗಿತ್ತು. ತಂದೆಯಾದ ದೇವರು ಅಭಿಷೇಕಿಸಲ್ಪಡುವ ಅವಶ್ಯಕತೆಯಿಲ್ಲ. ಯೇಸುವು ಪರಲೋಕದಲ್ಲಿದ್ದಾಗ, ಆತನಿಗೆ ಅಭಿಷೇಕಿಸಲ್ಪಡುವ ಅವಶ್ಯಕತೆ ಇರಲಿಲ್ಲ. ಆದರೆ ಆತನು ಭೂಮಿಯ ಮೇಲೆ ಜೀವಿಸಿದಾಗ, ನಮಗೆ ಜೀವಿಸುವ ಮಾದರಿಯನ್ನು ತೋರಿಸುವುದಕ್ಕಾಗಿ ಅಭಿಷೇಕ ಹೊಂದುವದು ಅವಶ್ಯವಾಗಿತ್ತು. ಮೇಲೆ ಉಲ್ಲೇಖಿಸಿದ ದೇವರ ವಾಕ್ಯದಲ್ಲಿ, ದೇವರು ಯೇಸುವನ್ನು ಆತನ ಜೊತೆಗಾರರಾದ ನಮ್ಮೆಲ್ಲರಿಗಿಂತ ಹೆಚ್ಚಾಗಿ ಏಕೆ ಪರಮಾನಂದ (ಉಲ್ಲಾಸದಾಯಕ) ತೈಲದಿಂದ ಅಭಿಷೇಕಿಸಿದರು ಎಂಬುದನ್ನು ನಮಗೆ ತೋರಿಸಲಾಗಿದೆ. ಹಾಗೆ ಮಾಡುವುದಕ್ಕೆ ಒಂದು ಪ್ರಮುಖ ಕಾರಣವಿತ್ತು - ಆತನು ದೇವರ ನೀತಿಯನ್ನು ಪ್ರೀತಿಸಿ, ಅನೀತಿಯನ್ನು ದ್ವೇಷಿಸಿದನು. ಆತನು ಪರಿಶುದ್ಧತೆಯನ್ನು ಪ್ರೀತಿಸಿದನು ಮತ್ತು ಪಾಪವನ್ನು ದ್ವೇಷಿಸಿದನು.

ನೀತಿಯನ್ನು ’ಆಚರಿಸುವುದು’ ಮತ್ತು ನೀತಿಯನ್ನು ’ಪ್ರೀತಿಸುವುದು’ ಇವೆರಡು ಬೇರೆ ಬೇರೆ ಸಂಗತಿಗಳಾಗಿವೆ. ಒಬ್ಬ ಬಾಲಕನು ತನ್ನ ತಂದೆಗೆ ವಿಧೇಯನಾಗಿ ನಡೆದರೂ, ಆತನ ವಿಧೇಯತೆ ಮನಸ್ಸಿಲ್ಲದ ವಿಧೇಯತೆ ಆಗಿರಬಹುದು. ಯೇಸುವು ನೀತಿಯನ್ನು ಆಚರಿಸಿದ್ದು ಮಾತ್ರವಲ್ಲದೆ, ನೀತಿಯನ್ನು ಪ್ರೀತಿಸಿದರು. ಅದೇ ರೀತಿಯಾಗಿ, ಯೇಸುವು ಅನೀತಿಯನ್ನು ದೂರಮಾಡಿದ್ದು ಅಷ್ಟೇ ಅಲ್ಲದೆ, ಅನೀತಿಯನ್ನು ದ್ವೇಷಿಸಿದರು.

ಈಗಿನ ದಿನಗಳಲ್ಲಿ ಜನರಿಗೆ ಸೋಂಕುವ ಮಾರಕ ರೋಗಗಳಲ್ಲಿ, ಲೈಂಗಿಕ ಪಾಪದ ಮೂಲಕ ತಗಲುವ "ಏಡ್ಸ್" ರೋಗವೂ ಸೇರಿದೆ. ಅನೇಕರು ವ್ಯಭಿಚಾರದಿಂದ ದೂರ ಸರಿಯುವುದಕ್ಕೆ ಕಾರಣ ಏನೆಂದರೆ, "ಏಡ್ಸ್" ರೋಗದ ಭಯ ಅವರಲ್ಲಿದೆ. ಅವರು ಲೈಂಗಿಕ ಪಾಪವನ್ನು ದ್ವೇಷಿಸುವುದಿಲ್ಲ; ಆದರೆ "ಏಡ್ಸ್" ರೋಗದ ಭಯವು ಅವರನ್ನು ತಡೆಯುತ್ತದೆ, ಅಷ್ಟೇ. ಇದರಂತೆಯೇ, ಅನೇಕರು ಕಳ್ಳತನ ಮಾಡಲು ಇಷ್ಟಪಟ್ಟರೂ ಅದರಿಂದ ದೂರವಿರಲು ಕಾರಣ, ತಾವು ಸಿಕ್ಕಿಬೀಳುತ್ತೇವೆ ಎಂಬ ಭಯದಿಂದ - ಆದರೆ ಕಳ್ಳತನವನ್ನು ದ್ವೇಷಿಸುವುದರಿಂದಾಗಿ ಅಲ್ಲ. ಹೀಗೆಯೇ, ನೀವು ಬೇರೆ ಯಾವುದೋ ಪಾಪದಿಂದ ದೂರವಿದ್ದರೂ, ಆ ಪಾಪವನ್ನು ನೀವು ದ್ವೇಷಿಸದೇ ಇರಬಹುದು.

ಆದರೆ ನೀವು ಆನಂದ ತೈಲದ ಅಭಿಷೇಕವನ್ನು ಬಯಸಿದರೆ, ನೀವು ನೀತಿಯನ್ನು ಪ್ರೀತಿಸಬೇಕು ಮತ್ತು ಅನೀತಿಯನ್ನು ದ್ವೇಷಿಸಬೇಕು. ಈ ವಚನವು ತೋರಿಸುವಂತೆ, ಯೇಸುವು ಇತರರಿಗಿಂತ ಹೆಚ್ಚಾಗಿ ಪರಮಾನಂದ ತೈಲದ ಅಭಿಷೇಕವನ್ನು ಪಡೆಯಲು ಕಾರಣ ಇದಾಗಿತ್ತು.

ದೇವರಲ್ಲಿ ಪಕ್ಷಪಾತವಿಲ್ಲ. ಒಬ್ಬ ಒಳ್ಳೆಯ ತಂದೆಯು ಎಂದಿಗೂ ತನ್ನ ಹಿರಿಯ ಮಗನನ್ನು ಇತರ ಮಕ್ಕಳಿಗಿಂತ ಹೆಚ್ಚಾಗಿ ಆಶೀರ್ವದಿಸುವುದಿಲ್ಲ - ಆತನಲ್ಲಿ ಭೇದಭಾವ ಇರುವುದಿಲ್ಲ. ಒಳ್ಳೆಯ ತಂದೆಯು ತನ್ನ ಹಿರಿಯ ಮಗನಿಗೆ ಮಾಡಿದ್ದನ್ನೇ ಇತರ ಮಕ್ಕಳಿಗೂ ಸಹ ಮಾಡುತ್ತಾನೆ. ತಂದೆಯಾದ ದೇವರಲ್ಲಿಯೂ ಸಹ ಇದೇ ಸ್ವಭಾವ ಇದೆ. ಯೇಸುವು ಅನೇಕ ಮಂದಿ ಸಹೋದರರಲ್ಲಿ ಹಿರಿಯವನೆಂದು ಕರೆಯಲ್ಪಟ್ಟಿದ್ದಾರೆ. ಹೊಸದಾಗಿ ಹುಟ್ಟಿರುವ ನಾವೆಲ್ಲರೂ ಆತನ ಕಿರಿಯ ಸಹೋದರರಾಗಿದ್ದೇವೆ. ಯೇಸುವು ಹಿರಿಯ ಮಗನಾಗಿದ್ದಾನೆ. ಪಕ್ಷಪಾತವಿಲ್ಲದ ದೇವರು, ಹಿರಿಯ ಮಗನಾದ ಯೇಸುವಿಗೆ ಮಾಡಿದ ಪ್ರತಿಯೊಂದನ್ನು ನಮಗಾಗಿ ಮಾಡುವರು. ನಾನು ಯೇಸುವು ಪೂರೈಸಿದ ಷರತ್ತುಗಳನ್ನು ಪೂರೈಸಿದರೆ, ದೇವರು ಯೇಸುವಿಗಾಗಿ ಮಾಡಿದ ಪ್ರತಿಯೊಂದು ಸಂಗತಿಯನ್ನು ನನಗಾಗಿಯೂ ಮಾಡುವರು. ನಾವು ಯೇಸುವಿನ ಮನುಷ್ಯತ್ವನ್ನು ಅರಿತಾಗ ಕಂಡುಕೊಳ್ಳುವ ಅದ್ಭುತ ಸತ್ಯಗಳಲ್ಲಿ ಇದು ಒಂದಾಗಿದೆ.

ಒಂದು ವೇಳೆ ಯೇಸುವು ದೇವರ ಮಗನಾಗಿದ್ದ ಕಾರಣಕ್ಕಾಗಿ ಪರಮಾನಂದ ತೈಲದಿಂದ ಅಭಿಷೇಕಿಸಲ್ಪಟ್ಟರೆಂದು ಬರೆಯಲ್ಪಟ್ಟಿದ್ದರೆ, ಆ ಮಾತು ನಮಗೆ ಯಾವುದೇ ಪ್ರೋತ್ಸಾಹವನ್ನು ಕೊಡುತ್ತಿರಲಿಲ್ಲ ಅಥವಾ ಸವಾಲನ್ನು ಒಡ್ಡುತ್ತಿರಲಿಲ್ಲ. ಆದರೆ ಮೇಲಿನ ವಚನದಲ್ಲಿ, ಆತನು ದೇವರ ನೀತಿಯನ್ನು ಪ್ರೀತಿಸಿ, ಅನೀತಿಯನ್ನು ದ್ವೇಷಿಸಿದ್ದಕ್ಕಾಗಿ ಪರಮಾನಂದ ತೈಲದಿಂದ ಅಭಿಷೇಕಿಸಲ್ಪಟ್ಟನೆಂದು ನಾವು ಓದುವಾಗ, ನಾವು ಸಹ ಅದೇ ರೀತಿಯಾಗಿ ನೀತಿಯನ್ನು ಪ್ರೀತಿಸಿ, ಅನೀತಿಯನ್ನು ದ್ವೇಷಿಸಿದರೆ ನಮಗೆ ಪವಿತ್ರಾತ್ಮನಿಂದ ಅದೇ ರೀತಿಯ ಅಭಿಷೇಕ ಸಿಗುವ ನಿರೀಕ್ಷೆ ಉಂಟಾಗುತ್ತದೆ. ಹಾಗಾಗಿ ನಾವು ಮಾಡಬೇಕಾದ ಪ್ರಾರ್ಥನೆ ಇದು, "ಕರ್ತನೇ, ನಾನು ದೇವರ ನೀತಿಯನ್ನು ಕೈಗೊಳ್ಳುವುದು ಮಾತ್ರವಲ್ಲದೆ ಅದನ್ನು ಪ್ರೀತಿಸುವಂತೆ; ಹಾಗೆಯೇ ಪಾಪದಿಂದ ದೂರವಿರುವುದು ಮಾತ್ರವಲ್ಲದೆ ಪಾಪವನ್ನು ದ್ವೇಷಿಸುವಂತೆ, ಪವಿತ್ರಾತ್ಮನ ಮೂಲಕ ನನ್ನ ಹೃದಯದಲ್ಲಿ ಕಾರ್ಯಮಾಡಿ."

ಜೀವನದಲ್ಲಿ ನಾವು ನೀತಿವಂತಿಕೆಯನ್ನು ಹೆಚ್ಚಾಗಿ ಪ್ರೀತಿಸಿ ಪಾಪವನ್ನು ಹೆಚ್ಚಾಗಿ ದ್ವೇಷಿಸುವಾಗ, ನಮ್ಮಲ್ಲಿ ಪವಿತ್ರಾತ್ಮನ ಆನಂದವು ಹೆಚ್ಚುಹೆಚ್ಚಾಗಿ ತುಂಬಲ್ಪಡುತ್ತದೆ. ದೇವರ ರಾಜ್ಯವೆಂದು ವಿವರಿಸಲ್ಪಟ್ಟಿರುವ ನೀತಿ ಮತ್ತು ಪವಿತ್ರಾತ್ಮನಿಂದ ಉಂಟಾಗುವ ಆನಂದ ಇವುಗಳನ್ನು ನಾವು ಪಡೆಯುತ್ತೇವೆ ಮತ್ತು ಇವುಗಳು ನಮ್ಮ ಹೃದಯಗಳನ್ನು ತುಂಬುತ್ತವೆ (ರೋಮಾ. 14:17). ಆಗ ನಾವು ನಮಗೆ ನೀಡಲಾಗಿರುವ ಈ ಆಜ್ಞೆಗೆ ವಿಧೇಯರಾಗಲು ಸಾಧ್ಯವಾಗುತ್ತದೆ, "ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ" (ಫಿಲಿ. 4:4).