WFTW Body: 

"ನಾನು ನನ್ನ ಚಿತ್ತದಂತೆ ನಡೆಯುವುದಕ್ಕಾಗಿ ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವುದಕ್ಕೆ ಪರಲೋಕದಿಂದ ಬಂದೆನು" (’ಯೋಹಾ. 6:38'). ಇಲ್ಲಿ ಯೇಸುವು ಭೂಲೋಕಕ್ಕೆ ಬಂದ ಕಾರಣವನ್ನು ಆತನು ತನ್ನ ಸ್ವಂತ ಮಾತಿನಲ್ಲಿ ನಮಗೆ ತಿಳಿಸುತ್ತಾನೆ. ಹಾಗಾಗಿ ಯೇಸುವು ತನ್ನ ಈ ಲೋಕದ ಜೀವಿತದ ಪ್ರತಿಯೊಂದು ದಿನವನ್ನು ಹೇಗೆ ಜೀವಿಸಿದನೆಂಬ ವಿವರಣೆಯು ನಮಗೆ ಈ ಒಂದು ವಾಕ್ಯದಲ್ಲಿ ಸಿಗುತ್ತದೆ. ಯೇಸುವು ನಜರೇತಿನಲ್ಲಿ ಜೀವಿಸಿದ 30 ವರ್ಷಗಳನ್ನು ಅಜ್ಞಾತ ವರ್ಷಗಳೆಂದು ಉಲ್ಲೇಖಿಸಲಾಗಿದೆ. ಅದರೆ ಯೇಸುವು ಇಲ್ಲಿ ಆ 30 ವರ್ಷಗಳ ಪ್ರತಿಯೊಂದು ದಿನ ತಾನು ಏನು ಮಾಡಿದೆನೆಂದು ತೋರಿಸಿದ್ದಾನೆ. ಆತನ ತನ್ನ ಸ್ವಚಿತ್ತವನ್ನು ನಿರಾಕರಿಸಿದನು ಮತ್ತು ತನ್ನ ತಂದೆಯ ಚಿತ್ತದಂತೆ ನಡೆದನು.

ಯೇಸುವು ಅನಾದಿ ಕಾಲದ ನಿತ್ಯತ್ವದಿಂದ ಪರಲೋಕದಲ್ಲಿ ತನ್ನ ತಂದೆಯ ಜೊತೆಯಲ್ಲಿದ್ದಾಗ, ಆತನು ಯಾವತ್ತೂ ತನ್ನ ಸ್ವ-ಚಿತ್ತವನ್ನು ನಿರಾಕರಿಸ ಬೇಕಾಗಲಿಲ್ಲ, ಏಕೆಂದರೆ ಆತನ ಸ್ವಚಿತ್ತವು ತಂದೆಯ ಚಿತ್ತವೇ ಆಗಿತ್ತು. ಆದರೆ ಆತನು ನಮ್ಮಂತೆ ಶರೀರಧಾರಿಯಾಗಿ ಭೂಮಿಗೆ ಬಂದಾಗ, ಆ ಶರೀರದ ಸ್ವ-ಚಿತ್ತವು ತಂದೆಯ ಚಿತ್ತಕ್ಕೆ ಸ್ವಲ್ಪವೂ ಹೋಲದೆ, ಒಂದೊಂದು ವಿಷಯದಲ್ಲೂ ಅದಕ್ಕೆ ವಿರುದ್ಧವಾದದ್ದಾಗಿತ್ತು. ಹಾಗಾಗಿ ತಂದೆಯ ಚಿತ್ತವನ್ನು ನೆರವೇರಿಸಲಿಕ್ಕಾಗಿ, ಪ್ರತಿ ಕ್ಷಣವೂ ಸ್ವ-ಚಿತ್ತವನ್ನು ನಿರಾಕರಿಸುವುದೇ ಯೇಸುವಿಗಿದ್ದ ಒಂದೇ ಮಾರ್ಗವಾಗಿತ್ತು. ಈ ಲೋಕದ ಜೀವಿತದ ಉದ್ದಕ್ಕೂ ಯೇಸುವು ಹೊತ್ತಿದ್ದ ಹೊರೆ ಈ ಶಿಲುಬೆಯಾಗಿತ್ತು - ತನ್ನ ಸ್ವಚಿತ್ತವನ್ನು ಶಿಲುಬೆಗೆ ಹಾಕುವುದು - ಮತ್ತು ನಾವು ಆತನನ್ನು ಹಿಂಬಾಲಿಸುವುದಾದರೆ, ನಾವು ಈಗ ಪ್ರತಿ ದಿನ ಇದನ್ನು ಹೊರಬೇಕೆಂದು ಆತನು ಹೇಳುತ್ತಾನೆ. ಆತನು ನಿರಂತರವಾಗಿ ತನ್ನ ಸ್ವ-ಚಿತ್ತವನ್ನು ನಿರಾಕರಿಸುವ ಮೂಲಕ ಒಬ್ಬ ಆತ್ಮಿಕ ಮನುಷ್ಯನಾದನು. ಹಾಗೆಯೇ ನಾವು ನಮ್ಮ ಸ್ವ-ಚಿತ್ತವನ್ನು ನಿರಾಕರಿಸಿದರೆ, ಅದು ನಮ್ಮನ್ನು ಸಹ ಆತ್ಮಿಕರಾಗಿ ಮಾಡುತ್ತದೆ.

ಆತ್ಮಿಕತೆ ಉಂಟಾಗುವುದು ಒಂದು ಸಲ ದೇವರನ್ನು ಸಂಧಿಸುವುದರಿಂದ ಅಲ್ಲ. ಅದು ’ನಿರಂತರವಾಗಿ’ ದಿನದಿನವೂ, ವಾರವಾರವೂ, ಮತ್ತು ಪ್ರತಿ ವರ್ಷವೂ ದೇವರ ಚಿತ್ತದಂತೆ ನಡೆಯಲು ನಿಶ್ಚಯಿಸುವುದರ ಫಲಿತಾಂಶವಾಗಿದೆ. ಇಬ್ಬರು ಸಹೋದರರ ಆತ್ಮಿಕ ಸ್ಥಿತಿಯ ಬಗ್ಗೆ (ಜೊತೆಯಾಗಿ ಕ್ರಿಸ್ತನನ್ನು ಸ್ವೀಕರಿಸಿದ ಇಬ್ಬರು ಸಹೋದರರು), ಅವರು ಮಾನಸಾಂತರ ಹೊಂದಿದ ಹತ್ತು ವರ್ಷಗಳ ನಂತರ ವಿಚಾರ ಮಾಡೋಣ. ಒಬ್ಬನು ಈಗ ಆತ್ಮಿಕ ತಿಳುವಳಿಕೆಯನ್ನು ಹೊಂದಿ ಬೆಳೆದಿದ್ದಾನೆ, ಮತ್ತು ದೇವರು ಆತನಿಗೆ ಸಭೆಯಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಕೊಡಲು ಸಾಧ್ಯವಾಗಿದೆ. ಮತ್ತೊಬ್ಬನು ಹೆಚ್ಚಿನ ತಿಳುವಳಿಕೆ ಇಲ್ಲದೆ ಇನ್ನೂ ಚಿಕ್ಕ ಮಗುವಿನಂತಿದ್ದಾನೆ, ಮತ್ತು ಇತರರು ಆತನನ್ನು ಪದೇ ಪದೇ ಬಲಪಡಿಸಿ ನಡೆಸ ಬೇಕಾಗುತ್ತದೆ.

ಇವರಿಬ್ಬರ ನಡುವೆ ಇಷ್ಟೊಂದು ಅಂತರವಿರಲು ಕಾರಣವೇನು? ಅದಕ್ಕೆ ಉತ್ತರ, ಕ್ರೈಸ್ತ ಜೀವಿತದ ಹತ್ತು ವರ್ಷಗಳಲ್ಲಿ ಪ್ರತಿ ದಿನವೂ ಅವರು ಮಾಡಿದ ಚಿಕ್ಕ-ಪುಟ್ಟ ನಿರ್ಧಾರಗಳೇ ಆಗಿವೆ. ಅವರು ಹೀಗೆಯೇ ಮುಂದುವರೆದರೆ, ಇನ್ನೂ ಹತ್ತು ವರ್ಷಗಳ ನಂತರ ಅವರಿಬ್ಬರ ನಡುವಿನ ಅಂತರ ಇನ್ನೂ ಬಹಳ ಹೆಚ್ಚುತ್ತದೆ. ಆ ಮೇಲೆ ನಿತ್ಯತ್ವದಲ್ಲಿ, ಅವರಿಬ್ಬರ ಮಹಿಮೆಯ ನಡುವೆ ಎಷ್ಟು ಅಂತರವಿರುತ್ತದೆ ಎಂದರೆ, 2000-ವಾಟ್ ಪ್ರಕಾಶದ ವಿದ್ಯುತ್ ಬಲ್ಬ್ ಮತ್ತು 5-ವಾಟ್ ಪ್ರಕಾಶದ ವಿದ್ಯುತ್ ಬಲ್ಬಿನ ನಡುವಿನ ವ್ಯತ್ಯಾಸದಂತೆ!! "ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಹೆಚ್ಚು ಕಡಿಮೆಯುಂಟಷ್ಟೇ" (’ 1 ಕೊರಿ. 15:41').

ನೀವು ಒಂದು ಮನೆಗೆ ಭೇಟಿ ನೀಡುವ ಸನ್ನಿವೇಶದ ಬಗ್ಗೆ ಯೋಚಿಸಿರಿ, ಮತ್ತು ಅಲ್ಲಿನ ಸಂಭಾಷಣೆಯಲ್ಲಿ ಬೇರೊಬ್ಬ ಸಹೋದರನ ಬಗ್ಗೆ (ಆತನು ನಿಮಗೆ ಇಷ್ಟವಿಲ್ಲದವನು), ಆತನು ಅಲ್ಲಿ ಇಲ್ಲದಿರುವಾಗ, ಕೆಟ್ಟದಾಗಿ ಮಾತನಾಡುವ ಒಂದು ದುಷ್ಪ್ರೇರಣೆ ನಿಮಗೆ ಬರುತ್ತದೆ ಅಂದುಕೊಳ್ಳೋಣ. ನೀವು ಏನು ಮಾಡುತ್ತೀರಿ? ಆ ಪ್ರೇರಣೆಯ ಪ್ರಭಾವಕ್ಕೆ ಒಳಗಾಗಿ ಆತನನ್ನು ನಿಂದಿಸುತ್ತೀರೋ, ಅಥವಾ ದುಷ್ಪ್ರೇರಣೆಯನ್ನು ನಿರಾಕರಿಸಿ ನಿಮ್ಮ ಬಾಯನ್ನು ಮುಚ್ಚಿಕೊಳ್ಳುತ್ತೀರೋ? ಯಾರ ಬಗ್ಗೆಯೋ ಕೆಟ್ಟ ಮಾತನ್ನು ನುಡಿದಕ್ಕಾಗಿ ದೇವರು ಯಾರಿಗೂ ಕ್ಯಾನ್ಸರ್ ಅಥವಾ ಕುಷ್ಟ ರೋಗವನ್ನು ಕೊಡುವುದಿಲ್ಲ. ದೇವರು ಹಾಗೆ ಮಾಡುವುದಿಲ್ಲ. ಮತ್ತು ಇದರಿಂದಾಗಿ, ಅನೇಕರು ಇಂತಹ ಪಾಪ ತಮ್ಮ ಜೀವನವನ್ನು ಹಾಳು ಮಾಡುವುದಿಲ್ಲವೆಂದು ತಿಳಿಯುತ್ತಾರೆ. ಆಯ್ಯೋ, ಅನೇಕ ಸಹೋದರರು ಮತ್ತು ಸಹೋದರಿಯರು ನಿತ್ಯತ್ವಕ್ಕೆ ತಲುಪಿದಾಗ ಮಾತ್ರ ಕಂಡುಕೊಳ್ಳುವ ಸತ್ಯಾಂಶವೆಂದರೆ, ಪ್ರತೀ ಸಲ ತಾವು ತಮಗೆ ಇಷ್ಟವಿದ್ದಂತೆ ನಡೆದಾಗ ತಮ್ಮನ್ನು ಸ್ವಲ್ಪ ಸ್ವಲ್ಪವಾಗಿ ಕೆಡಿಸಿಕೊಂಡೆವು, ಎನ್ನುವುದನ್ನು. ಆಗ ಅವರು ತಮ್ಮ ಭೂಲೋಕದ ಜೀವಿತವನ್ನು ಹಾಳು ಮಾಡಿಕೊಂಡೆವು, ಎಂದು ಬಹಳ ವ್ಯಥೆ ಪಡುತ್ತಾರೆ.

ಯೇಸುವು ಸಹ 30 ವರ್ಷಗಳ ಕಾಲ ನಜರೇತಿನಲ್ಲಿ ಇಂತಹ ಸನ್ನಿವೇಶಗಳನ್ನು ಎದುರಿಸಿದನು. ಪ್ರಕಟಗೊಳ್ಳದೆ ಮರೆಯಾಗಿರುವ ಆ 30 ವರ್ಷಗಳ ಬಗ್ಗೆ ಹೀಗೆ ಬರೆಯಲಾಗಿದೆ, "ಕ್ರಿಸ್ತನು ಯಾವತ್ತೂ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ" (’ ರೋಮಾ. 15:3'). ಆತನು ಯಾವಾಗಲೂ ತನ್ನ ಚಿತ್ತವನ್ನು ನಿರಾಕರಿಸಿದನು. ಹೀಗೆ ಎಲ್ಲಾ ವೇಳೆಯಲ್ಲಿ ಆತನು ತಂದೆಯನ್ನು ಮೆಚ್ಚಿಸಿದನು.

ಜೀವನದಲ್ಲಿ ಸ್ವತಃ ನಮ್ಮನ್ನೇ ಮೆಚ್ಚಿಸಿಕೊಳ್ಳುವ ಅನೇಕ ಕಾರ್ಯಗಳನ್ನು - ಉದಾಹರಣೆಗೆ, ಆಹಾರದ ವಿಷಯದಲ್ಲಿ - ನಾವು ಮಾಡಬಹುದು. ಹಸಿವೆ ಇಲ್ಲದಿದ್ದರೂ ನೀವು ರುಚಿಕರ ತಿಂಡಿ ತಿನಿಸುಗಳನ್ನು ಖರೀದಿಸಲು ನಿರ್ಧರಿಸುವ ಒಂದು ಸನ್ನಿವೇಶದ ಬಗ್ಗೆ ಆಲೋಚಿಸಿರಿ. ಇಂತಹ ನಿರ್ಧಾರ ತಪ್ಪು ಅಥವಾ ಪಾಪಕರ ಎಂದು ಹೇಳುವುದು ಖಂಡಿತವಾಗಿ ಸರಿಯಲ್ಲ. ಆದರೆ ಅದು ಒಂದು ಜೀವನ ಶೈಲಿಯನ್ನು ಸೂಚಿಸುತ್ತದೆ. ಕೈಯಲ್ಲಿ ಹಣವಿರುವಾಗ ನಿಮಗೆ ಇಷ್ಟವಾದುದನ್ನು ಕೊಂಡುಕೊಳ್ಳುತ್ತೀರಿ, ಅದು ಅಗತ್ಯವಿದೆಯೋ ಇಲ್ಲವೋ ಎಂದು ನೋಡುವುದಿಲ್ಲ. ನೀವು ನಿಮ್ಮ ಇಷ್ಟವಿದ್ದಂತೆ ಮಾಡುತ್ತೀರಿ. ಏನನ್ನೋ ಕೊಂಡುಕೊಳ್ಳಬೇಕೆಂದು ನಿಮಗೆ ಅನ್ನಿಸಿದಾಗ, ನೀವು ಖರೀದಿ ಮಾಡುತ್ತೀರಿ. ಎಲ್ಲಿಗೋ ಹೋಗಬೇಕೆಂದು ನಿಮಗೆ ಮನಸ್ಸಾದಾಗ, ನೀವು ಹೋಗುತ್ತೀರಿ. ಹೆಚ್ಚು ನಿದ್ರೆ ಮಾಡಬೇಕೆಂದು ನಿಮಗೆ ಅನ್ನಿಸಿದರೆ, ನೀವು ತಡವಾಗಿ ಏಳುತ್ತೀರಿ. ನೀವು ಸಭಾ ಕೂಟಗಳಿಗೆ ತಪ್ಪದೆ ಹಾಜರಾದರೂ ಮತ್ತು ದಿನಾಲೂ ಸತ್ಯವೇದವನ್ನು ಓದಿದರೂ, ಹೀಗೆ ಜೀವಿಸುವುದರ ಅಂತಿಮ ಪರಿಣಾಮವೇನು? ಹೊಂದಿರುವ ರಕ್ಷಣೆಯನ್ನು ನೀವು ಕಳಕೊಳ್ಳದೇ ಇರಬಹುದು, ಆದರೆ ದೇವರು ತನಗಾಗಿ ಜೀವಿಸಿರಿ ಎಂದು ಹೇಳಿ ನಿಮಗೆ ಕೊಟ್ಟ ಒಂದು ಜೀವಿತವನ್ನು ನೀವು ಪೋಲು ಮಾಡುವುದು ಖಂಡಿತ.

ಆದರೆ ಇನ್ನೊಬ್ಬ ಸಹೋದರ ನಿಮಗಿಂತ ವಿಭಿನ್ನವಾಗಿ ನಡೆಯುತ್ತಾನೆ. ಆತನು ತನ್ನ ದೇಹವನ್ನು ಶಿಸ್ತಿಗೆ ಒಳಪಡಿಸಲು ನಿರ್ಧರಿಸುತ್ತಾನೆ. ಅವನಿಗೆ ಹಸಿವೆ ಇಲ್ಲದಿದ್ದಾಗ, ಅನಾವಶ್ಯಕವಾಗಿ ಏನನ್ನೂ ತಿನ್ನುದಿಲ್ಲವೆಂದು ಅವನು ತೀರ್ಮಾನಿಸುತ್ತಾನೆ. ಅವನು ತನಗೆ ಅವಶ್ಯವಿಲ್ಲದ ಸಾಮಾನನ್ನು ಖರೀದಿ ಮಾಡುವುದಿಲ್ಲವೆಂದು ನಿಶ್ಚಯಿಸುತ್ತಾನೆ. ಪ್ರತಿ ಮುಂಜಾನೆ ದೇವರೊಂದಿಗೆ ಸಮಯ ಕಳೆಯಲಿಕ್ಕಾಗಿ ಅವನು ಮೊದಲಿಗಿಂತ 15 ನಿಮಿಷ ಮೊದಲು ನಿದ್ರೆಯಿಂದ ಏಳುವ ತೀರ್ಮಾನ ಮಾಡುತ್ತಾನೆ. ಯಾರಾದರೂ ಅವನೊಂದಿಗೆ ಕಠಿಣವಾಗಿ ಮಾತನಾಡಿದಾಗ, ಅವನು ಮೃದುವಾದ ಪ್ರತ್ಯುತ್ತರ ನೀಡಲು ನಿಶ್ಚಯಿಸುತ್ತಾನೆ. ಅವನು ಯಾವಾಗಲೂ ಪ್ರೀತಿ ಮತ್ತು ಒಳ್ಳೇತನದ ಹಾದಿಯಲ್ಲೇ ನಡೆಯಲು ನಿರ್ಧರಿಸುತ್ತಾನೆ. ವಾರ್ತಾ ಪತ್ರಿಕೆಗಳಲ್ಲಿ ಬರುವ ಕೆಲವು ಕಾಮೋತ್ತೇಜಕ ಸಮಾಚಾರಗಳನ್ನು ಓದುವುದನ್ನು ಬಿಟ್ಟುಬಿಡಲು ಅವನು ನಿರ್ಧರಿಸುತ್ತಾನೆ. ಯಾವುದೇ ಸಂದರ್ಭದಲ್ಲಿ, ತನ್ನನ್ನು ಸಮರ್ಥಿಸಿಕೊಳ್ಳುವ ಬದಲಾಗಿ, ತನ್ನನ್ನು ತಗ್ಗಿಸಿಕೊಳ್ಳಲು ಅವನು ನಿರ್ಧರಿಸುತ್ತಾನೆ. ಅವನನ್ನು ಲೋಕದ ಕಡೆಗೆ ಸೆಳೆಯುವ ಕೆಲವು ಗೆಳೆತನಗಳನ್ನು ಬಿಟ್ಟುಬಿಡಲು ಅವನು ನಿಶ್ಚಯಿಸುತ್ತಾನೆ.

ಹೀಗೆ ಸ್ವ-ಚಿತ್ತವನ್ನು (ತನ್ನನ್ನೇ ಮೆಚ್ಚಿಸುವ ಸಂಗತಿಗಳನ್ನು) ಸತತವಾಗಿ ನಿರಾಕರಿಸುವ ನಿರ್ಣಯದ ಮೂಲಕ, ಅವನು ಕೇವಲ ದೇವರನ್ನು ಮೆಚ್ಚಿಸುವ ತನ್ನ ಸಂಕಲ್ಪದಲ್ಲಿ ಬಲಗೊಳ್ಳುತ್ತಾನೆ. ಅವನು ಯಾವುದೇ ಅನಾವಶ್ಯಕ ಸಾಮಾನನ್ನು ಖರೀದಿಸದೇ ಇದ್ದುದರಿಂದ, ಅಥವಾ ಬೆಳಿಗ್ಗೆ 15 ನಿಮಿಷ ಮೊದಲು ಎದ್ದೇಳುವುದರಿಂದ, ಅಥವಾ ತನ್ನ ಸಹಜ ಮಾನವ ಆತ್ಮಗೌರವವನ್ನು ಬಿಟ್ಟುಕೊಟ್ಟು, ಇತರರಿಂದ ಕ್ಷಮೆ ಕೇಳಿದ್ದರಿಂದ ಏನನ್ನು ಕಳಕೊಂಡನು? ಏನೂ ಇಲ್ಲ. ಆದರೆ ಅವನು ಏನನ್ನು ಗಳಿಸಿದನೆಂದು ಯೋಚಿಸಿರಿ! ಚಿಕ್ಕ ಪುಟ್ಟ ವಿಷಯಗಳಲ್ಲಿ ತಪ್ಪದೆ ಯಥಾರ್ಥನಾಗಿ ನಡೆಯುವ ಇಂತಹ ಮನುಷ್ಯನು, ಕೆಲವು ವರ್ಷಗಳಲ್ಲಿ ದೇವರಿಗೆ ನಂಬಿಗಸ್ತ ಮನುಷ್ಯನಾಗುತ್ತಾನೆ - ಅವನ ಸತ್ಯವೇದ ಜ್ಞಾನದ ಫಲವಾಗಿ ಅಲ್ಲ, ಆದರೆ ಅವನ ಜೀವನದ ಚಿಕ್ಕ ಪುಟ್ಟ ನಿರ್ಣಯಗಳಲ್ಲಿ ತನ್ನನ್ನೇ ಮೆಚ್ಚಿಸಿಕೊಳ್ಳದೆ, ದೇವರ ಮೆಚ್ಚುಗೆಯನ್ನು ಬಯಸಿದ ಫಲವಾಗಿ. ಹಾಗಾಗಿ ದುರ್ಬಲ-ಚಿತ್ತರು ಆಗಬೇಡಿರಿ. ಎಲ್ಲಾ ವೇಳೆಯಲ್ಲಿ ನಿಮ್ಮ ಸ್ವಚಿತ್ತದಿಂದ ದೇವರನ್ನು ಮೆಚ್ಚಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿರಿ.

ಚೆನ್ನಾಗಿ ವಿಕಾಸಗೊಂಡಿರುವ ಕ್ರೈಸ್ತರು ಯಾರೆಂದರೆ, "ಸಾಧನೆಯಿಂದ (ಹಲವಾರು ವರ್ಷ ಸ್ವ-ಚಿತ್ತವನ್ನು ಸರಿಯಾದ ರೀತಿಯಲ್ಲಿ ತರಬೇತು ಗೊಳಿಸುವುದರಲ್ಲಿ) ಜ್ಞಾನೇಂದ್ರಿಯಗಳನ್ನು ಶಿಕ್ಷಿಸಿಕೊಂಡು, ಇದು ಒಳ್ಳೇದು, ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರು" (’ ಇಬ್ರಿ. 5:14'). ನೀವು ನಿಜವಾದ ದೇವ-ಪುರುಷ/ ದೇವ-ಸ್ತ್ರೀ ಆಗುವಿರೆಂದು ದೃಢವಾದ ನಿಶ್ಚಯ ಮಾಡಿರಿ.