ನಾವು ವರ್ಷಾಂತ್ಯಕ್ಕೆ ಬಂದಿರುವಾಗ, ನಮ್ಮ ಜೀವನ ಹೇಗೆ ಸಾಗಿದೆಯೆಂದು ಪರೀಕ್ಷಿಸಿ ನೋಡುವುದು ಒಳ್ಳೆಯದು. ಹಗ್ಗಾಯ ಪ್ರವಾದಿಯು ತನ್ನ ಕಾಲದ ಜನರನ್ನು "ನಿಮ್ಮ ಮಾರ್ಗಗಳನ್ನು ಪರಿಶೀಲಿಸಿರಿ"ಎಂದು ಎಚ್ಚರಿಸಿದನು. ಹಗ್ಗಾಯನು 1:5,6ರಲ್ಲಿ ಹೀಗೆ ಬರೆಯಲ್ಪಟ್ಟಿದೆ: ಸೇನಾಧೀಶ್ವರನಾದ ಕರ್ತನು ಇಂತೆನ್ನುತ್ತಾನೆ, "ನಿಮ್ಮ ಸ್ಥಿತಿಗತಿಗಳನ್ನು ಮನಸ್ಸಿಗೆ ತಂದುಕೊಳ್ಳಿರಿ."
"ನೀವು ಬಹಳ ಬಿತ್ತಿದ್ದೀರಿ, ಆದರೆ ಕೊಯ್ದದ್ದು ಸ್ವಲ್ಪವೇ; ನೀವು ಉಣ್ಣುತ್ತೀರಿ, ಆದರೆ ನಿಮಗೆ ತೃಪ್ತಿಯಿಲ್ಲ; ನೀವು ಕುಡಿಯುತ್ತೀರಿ, ಆದರೆ ನಿಮ್ಮ ದಾಹ ತೀರದು; ನೀವು ಬಟ್ಟೆಗಳನ್ನು ಹಾಕಿಕೊಳ್ಳುತ್ತೀರಿ, ಆದರೆ ಯಾರಿಗೂ ಬೆಚ್ಚಗಿರುವುದಿಲ್ಲ; ಮತ್ತು ಸಂಪಾದಿಸುವವನು ಸಂಪಾದಿಸಿದ ಹಣವನ್ನು ತೂತಿರುವ ಚೀಲದಲ್ಲಿ ಹಾಕುತ್ತಾನೆ." ಈ ವಿಚಾರವಾಗಿ ನಾವು ನಮ್ಮನ್ನೇ ಹೀಗೆ ಪರೀಕ್ಷಿಸಿಕೊಳ್ಳಬಹುದು: ಕರ್ತನು ನಮಗೆ ಹೀಗೆ ಸವಾಲು ಹಾಕುತ್ತಾನೆ: "ನಿಮ್ಮ ಜೀವಿತದಲ್ಲಿ ವಿಷಯಗಳು ಹೇಗೆ ಸಾಗುತ್ತಿವೆಯೆಂದು ಯೋಚಿಸಿ ನೋಡಿ."
ನಿಮ್ಮ ಆತ್ಮಿಕ ಫಲ ಹೇಗಿದೇ? ನೀವು ಬಹಳಷ್ಟು ಬಿತ್ತಿದ್ದೀರಿ, ಆದರೆ ಕೊಯ್ಲು ಮಾಡಿದ್ದು ಮಾತ್ರ ಸ್ವಲ್ಪವೇ. ನೀವು ಅನೇಕ ಸಭಾಕೂಟಗಳಿಗೆ ಹೋಗಿರಬಹುದು, ಅನೇಕ ಕ್ರೈಸ್ತ ಪುಸ್ತಕಗಳನ್ನು ಓದಿರಬಹುದು ಮತ್ತು ಅನೇಕ ಕ್ರೈಸ್ತ ಪ್ರಸಂಗಗಳನ್ನು ಕೇಳಿರಬಹುದು. ಆದರೆ, ಇಂದು ನಿಮ್ಮ ಮನೆ ಒಂದು ದೈವಿಕವಾದ ಮತ್ತು ಶಾಂತಿಯುತವಾದ ಮನೆಯಾಗಿದೆಯೇ? ನಿಮ್ಮ ಹೆಂಡತಿ/ ಗಂಡನ ಮೇಲೆ ಕೋಪಗೊಂಡು ನೀವು ಕೂಗಾಡುವ ಒಂದು ಸಣ್ಣ ವಿಷಯವನ್ನಾದರೂ ನೀವು ಕೊನೆಗೊಳಿಸಿದ್ದೀರಾ? ಇಲ್ಲದಿದ್ದರೆ, ನೀವು ಬಹಳವಾಗಿ ಬಿತ್ತಿದ್ದರೂ, ಅತ್ಯಲ್ಪ ಫಲವನ್ನು ಹೊಂದಿದ್ದೀರಿ. ನೀವು ಬಟ್ಟೆಗಳನ್ನು ಧರಿಸುತ್ತೀರಿ, ಆದರೆ ನಿಮಗೆ ಇನ್ನೂ ಬೆಚ್ಚಗೆ ಅನಿಸುತ್ತಿಲ್ಲ. ನೀವು ಸಾಕಷ್ಟು ಹಣವನ್ನು ಗಳಿಸಿದ್ದೀರಿ, ಆದರೆ ನಿಮ್ಮ ಜೇಬಿನಲ್ಲಿ ತೂತುಗಳಿವೆ; ಹಾಗಾಗಿ ನಿಮ್ಮ ಸಂಪಾದನೆಯ ಹೆಚ್ಚಿನ ಭಾಗ ವ್ಯರ್ಥವಾಗುತ್ತಿದೆ.
ದೇವರಿಗೆ ಯಾವುದೂ ಅಸಾಧ್ಯವಲ್ಲ - ನಾವು ಪದೇ ಪದೇ ಹೀನಾಯವಾಗಿ ವಿಫಲರಾದ ನಂತರವೂ ನಮ್ಮನ್ನು ಅವರ ಪರಿಪೂರ್ಣ ಚಿತ್ತಕ್ಕೆ ನಡೆಸಲು ದೇವರು ಶಕ್ತರಾಗಿದ್ದಾರೆ. ಅವರನ್ನು ನಮ್ಮ ಅಪನಂಬಿಕೆಯು ಮಾತ್ರ ತಡೆಯುತ್ತದೆ. ನೀವು ಹೀಗೆ ಹೇಳಿದರೆ, "ನಾನು ನನ್ನ ಜೀವಿತದಲ್ಲಿ ಅನೇಕ ಬಾರಿ ತಪ್ಪು ಮಾಡಿದ್ದೇನೆ. ಈಗ ದೇವರು ನನ್ನನ್ನು ತನ್ನ ಪರಿಪೂರ್ಣ ಯೋಜನೆಗೆ ನಡೆಸಲಾರರು,"ಆಗ ಅದು ದೇವರಿಗೆ ಅಸಾಧ್ಯವಾಗುತ್ತದೆ, ಏಕೆಂದರೆ ಅವರು ನಿಮಗಾಗಿ ಏನು ಮಾಡಬಲ್ಲರೋ ಅದರ ಬಗ್ಗೆ ನಿಮಗೆ ನಂಬಿಕೆಯಿಲ್ಲ. ಆದರೆ - ನಾವು ನಂಬಿಕೆಯನ್ನು ಕಾಪಾಡಿಕೊಂಡರೆ - ನಮಗಾಗಿ ಏನನ್ನಾದರು ಮಾಡುವುದೂ ದೇವರಿಗೆ ಅಸಾಧ್ಯವಲ್ಲವೆಂದು ಯೇಸುವು ಹೇಳಿದರು.
"ನೀವು ನಂಬಿದಂತೆ ನಿಮಗೆ ಆಗಲಿ,"ಎಂಬುದು ಎಲ್ಲಾ ವಿಷಯಗಳಲ್ಲಿ ದೇವರ ನಿಯಮವಾಗಿದೆ (ಮತ್ತಾ. 9:29). ನಾವು ಯಾವುದಕ್ಕಾಗಿ ನಂಬುತ್ತೇವೋ, ಅದನ್ನು ಪಡೆಯುತ್ತೇವೆ. ದೇವರು ನಮಗಾಗಿ ಯಾವುದನ್ನಾದರೂ ಮಾಡುವುದು ಅಸಾಧ್ಯವೆಂದು ನಮ್ಮ ನಂಬಿಕೆಯಾಗಿದ್ದರೆ, ನಮ್ಮ ಜೀವಿತದಲ್ಲಿ ಅದು ಈಡೇರುವುದಿಲ್ಲ. ಮತ್ತೊಂದೆಡೆ, ಕ್ರಿಸ್ತನ ನ್ಯಾಯಾಸನದ ಮುಂದೆ ನೀವು ಕಂಡುಕೊಳ್ಳುವುದು ಏನೆಂದರೆ, ನಿಮಗಿಂತ ಹೆಚ್ಚು ಅಸ್ತವ್ಯಸ್ತ ಜೀವಿತವನ್ನು ಜೀವಿಸಿದ್ದ ಇನ್ನೊಬ್ಬನು ತನ್ನ ನಂಬಿಕೆಯಿಂದ - ದೇವರು ತನ್ನ ಮುರಿದ ಜೀವಿತವನ್ನು ತೆಗೆದುಕೊಂಡು, ಅದನ್ನು "ಅತ್ಯುತ್ತಮವಾಗಿ"ಮಾರ್ಪಡಿಸಲು ಶಕ್ತರಾಗಿದ್ದಾರೆಂದು ನಂಬಿದ್ದರಿಂದಲೇ - ತನ್ನ ಜೀವಿತದಲ್ಲಿ ದೇವರ ಪರಿಪೂರ್ಣ ಯೋಜನೆಯನ್ನು ಪೂರೈಸಿದನು ಎಂಬುದಾಗಿ. ಆ ದಿನದಲ್ಲಿ, ನಿನ್ನ ಜೀವನದಲ್ಲಿ ದೇವರ ಯೋಜನೆಯು ನಿಷ್ಫಲವಾದದ್ದು ನಿನ್ನ ಸೋಲುಗಳಿಂದಲ್ಲ (ಅವು ಲೆಕ್ಕವಿಲ್ಲದಷ್ಟು ಇದ್ದರೂ ಸಹ), ನಿನ್ನ ಅಪನಂಬಿಕೆಯಿಂದ, ಎಂದು ನೀನು ಕಂಡುಕೊಂಡಾಗ, ನಿನ್ನ ಜೀವನದಲ್ಲಿ ಎಷ್ಟೊಂದು ವಿಷಾದವಿರುತ್ತದೆ!
ಯೇಸುವು ಹೇಳಿದ್ದು ಏನೆಂದರೆ, "ನಾವು ನಂಬಿಕೆಯನ್ನು ಕಾಪಾಡಿಕೊಂಡರೆ - ನಮಗಾಗಿ ಏನನ್ನಾದರು ಮಾಡುವುದೂ ದೇವರಿಗೆ ಅಸಾಧ್ಯವಲ್ಲ."
"ದೇವರ ಮಗನು ಪ್ರತ್ಯಕ್ಷನಾದ ಉದ್ದೇಶ, ಸೈತಾನನ ಕೆಲಸಗಳನ್ನು ಲಯಮಾಡಲು (ತೆಗೆದುಹಾಕಲು)"(1 ಯೋಹಾ. 3:8, Amplified Bible). ಆ ವಚನದ ನಿಜವಾದ ಅರ್ಥ, ಯೇಸುವು ಬಂದದ್ದು ನಮ್ಮ ಜೀವಿತದಲ್ಲಿ ಸೈತಾನನು ಉಂಟುಮಾಡಿದ ಪ್ರತಿಯೊಂದು ಗಂಟನ್ನು ಬಿಡಿಸುವುದಕ್ಕಾಗಿ, ಎಂದು. ಇದನ್ನು ಈ ರೀತಿ ಚಿತ್ರಿಸಿಕೊಳ್ಳಿ: ನಾವು ಹುಟ್ಟಿದಾಗ, ನಮ್ಮಲ್ಲಿನ ಪ್ರತಿಯೊಬ್ಬರಿಗೂ ದೇವರು ಪರಿಪೂರ್ಣವಾಗಿ ಸುತ್ತಲ್ಪಟ್ಟ ಒಂದು ದಾರದ ಉಂಡೆಯನ್ನು ಕೊಟ್ಟರೆಂದು ಅಂದುಕೊಳ್ಳಬಹುದು. ನಮ್ಮ ಪ್ರತಿದಿನದ ಜೀವಿತದಲ್ಲಿ, ನಾವು ಆ ಉಂಡೆಯ ದಾರವನ್ನು ಬಿಚ್ಚುತ್ತಾ ಮುಂದುವರಿದಾಗ, ಅದರಲ್ಲಿ ಗಂಟುಗಳು ಉಂಟಾದವು (ನಮ್ಮ ಪಾಪಗಳು). ಈಗ, ಹಲವು ವರ್ಷಗಳು ಆ ದಾರವು ಬಿಚ್ಚಿಕೊಳ್ಳುತ್ತಾ ಹೋಗಿರುವಾಗ, ಆ ಉಂಡೆಯಲ್ಲಿ ಸಾವಿರಾರು ಗಂಟುಗಳನ್ನು ಕಂಡು ನಾವು ಹತಾಶರಾಗುತ್ತೇವೆ. ಆದಾಗ್ಯೂ ಯೇಸುವು "ಸೈತಾನನು ಹಾಕಿದ ಗಂಟುಗಳನ್ನು ಬಿಡಿಸುವುದಕ್ಕಾಗಿ" ಬಂದಿದ್ದಾರೆ. ಹಾಗಾಗಿ ದಾರದ ಉಂಡೆಯಲ್ಲಿ ಲೆಕ್ಕವಿಲ್ಲದಷ್ಟು ಗಂಟುಗಳನ್ನು ಹೊಂದಿರುವ ವ್ಯಕ್ತಿಗೂ ಉತ್ತಮ ಭರವಸೆಯಿದೆ.
ಕರ್ತರು ಪ್ರತಿಯೊಂದು ಗಂಟನ್ನು ಬಿಚ್ಚಿ, ಮತ್ತೊಮ್ಮೆ ನಿಮ್ಮ ಕೈಯಲ್ಲಿ ಪರಿಪೂರ್ಣವಾದ ದಾರದ ಉಂಡೆಯನ್ನು ನೀಡಬಲ್ಲರು. ಸುವಾರ್ತೆಯ ಸಂದೇಶ ಇದೇ ಆಗಿದೆ: ನೀವು ಹೊಸ ಆರಂಭವನ್ನು ಮಾಡಬಹುದು. "ಅದು ಅಸಾಧ್ಯ"ಎಂದು ನೀವು ಹೇಳಬಹುದು. ಸರಿ, ಹಾಗೆ ಅಂದುಕೊಳ್ಳುವುದಾದರೆ, ನಿಮ್ಮ ನಂಬಿಕೆಯ ಪ್ರಕಾರ ನಿಮಗೆ ಹಾಗೆಯೇ ಆಗುತ್ತದೆ. ನಿಮ್ಮ ವಿಷಯದಲ್ಲಿ ಅದು ಅಸಾಧ್ಯವಾಗಿರುತ್ತದೆ. ಆದರೆ ನಿಮಗಿಂತ ಕೆಟ್ಟದಾಗಿ ಜೀವಿಸಿದ ಮತ್ತೊಬ್ಬನು, "ಹೌದು, ದೇವರು ನನ್ನಲ್ಲಿ ಅದನ್ನು ಮಾಡುತ್ತಾರೆಂದು ನಾನು ನಂಬುತ್ತೇನೆ,"ಎಂದು ಹೇಳುವುದು ನನಗೆ ಕೇಳಿಸಿದೆ. ಅವನಿಗೂ ಅದು ಅವನ ನಂಬಿಕೆಯ ಪ್ರಕಾರವೇ ಆಗುತ್ತದೆ. ಅವನ ಜೀವನದಲ್ಲಿ ದೇವರ ಪರಿಪೂರ್ಣ ಯೋಜನೆಯು ಈಡೇರುತ್ತದೆ.
ನಿಮ್ಮ ಜೀವಿತದ ಎಲ್ಲಾ ವೈಫಲ್ಯಗಳ ನಿಮಿತ್ತ ನೀವು ದೈವಿಕ ದುಃಖವುಳ್ಳವರಾಗಿದ್ದರೆ - ಆಗ ಹಳೆಯ ಒಡಂಬಡಿಕೆಯ ವಾಗ್ದಾನದ ಪ್ರಕಾರ - "ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು; ಕಿರಮಂಜಿಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು"(ಯೆಶಾ. 1:18); ಅಷ್ಟೇ ಅಲ್ಲದೆ, ದೇವರು ಹೊಸ ಒಡಂಬಡಿಕೆಯಲ್ಲಿ "ಅವರ ಪಾಪಗಳನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ" ಎಂದು ವಾಗ್ದಾನವನ್ನು ನಿಮಗೆ ನೀಡಿದ್ದಾರೆ (ಇಬ್ರಿ. 8:12). ನಿಮ್ಮ ತಪ್ಪುಗಳು ಅಥವಾ ವೈಫಲ್ಯಗಳು ಏನೇ ಇರಲಿ, ನೀವು ದೇವರೊಂದಿಗೆ ಹೊಸ ಆರಂಭವನ್ನು ಮಾಡಬಹುದು ಮತ್ತು ನೀವು ಹಿಂದೆ ಸಾವಿರ ಹೊಸ ಆರಂಭಗಳನ್ನು ಮಾಡಿ ವಿಫಲರಾಗಿದ್ದರೂ ಸಹ, ನೀವು ಇಂದು 1001ನೇ ಹೊಸ ಆರಂಭವನ್ನು ಮಾಡಬಹುದು. ದೇವರು ಇನ್ನೂ ನಿಮ್ಮ ಜೀವಿತದಿಂದ ಏನಾದರೂ ಅದ್ಭುತವಾದದ್ದನ್ನು ಮಾಡಲು ಶಕ್ತರಾಗಿದ್ದಾರೆ. ನಾವು ಜೀವಂತವಾಗಿ ಇರುವವರೆಗೂ, ಈ ಭರವಸೆಯು ಕೊನೆಗೊಳ್ಳುವುದಿಲ್ಲ. ಆದ್ದರಿಂದ, ದೇವರನ್ನು ನಂಬುವುದರಲ್ಲಿ ಎಂದಿಗೂ ವಿಫಲರಾಗಬೇಡಿ. ದೇವರು ತನ್ನ ಹಲವಾರು ಮಕ್ಕಳಿಗೆ ಅನೇಕ ಅದ್ಭುತ ಕಾರ್ಯಗಳನ್ನು ಮಾಡಲು ಸಾಧ್ಯವಾಗದೆ ಇರುವುದಕ್ಕೆ ಕಾರಣ, ಅವರು ಹಿಂದೆ ದೇವರ ಕಾರ್ಯವನ್ನು ವಿಫಲಗೊಳಿಸಿದರು ಎಂದಲ್ಲ, ಆದರೆ ಅವರು ಈಗ ದೇವರ ಬಗ್ಗೆ ನಂಬಿಕೆ ಇರಿಸಿಲ್ಲ. ಹಾಗಾದರೆ ನಾವು "ದೃಢನಂಬಿಕೆಯುಳ್ಳವರಾಗಿ ದೇವರನ್ನು ಘನಪಡಿಸೋಣ"(ರೋಮಾ. 4:21). ನಾವು ಇಲ್ಲಿಯ ವರೆಗೆ ಅಸಾಧ್ಯವೆಂದು ಪರಿಗಣಿಸಿದ ವಿಷಯಗಳಿಗಾಗಿ ಮುಂಬರುವ ದಿನಗಳಲ್ಲಿ ಆತನನ್ನು ನಂಬೋಣ. ಎಲ್ಲಾ ಜನರು - ಯುವಕರು ಹಾಗೂ ಹಿರಿಯರು - ಹಿಂದೆ ಎಷ್ಟೇ ವಿಫಲರಾಗಿದ್ದರೂ, ಕೇವಲ ನಮ್ಮ ನಮ್ಮ ವೈಫಲ್ಯಗಳನ್ನು ಒಪ್ಪಿಕೊಂಡು, ದೀನತೆಯುಳ್ಳವರಾಗಿ ಮತ್ತು ದೇವರಲ್ಲಿ ಭರವಸೆ ಇಟ್ಟಾಗ, ನಾವು ನಿರೀಕ್ಷೆಯನ್ನು ಹೊಂದಬಹುದು.