WFTW Body: 

ನಾವು ಪ್ರತಿದಿನ ಹಲವಾರು ವಿಷಯಗಳ ಕುರಿತಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ನಾವು ಹಣವನ್ನು ಹೇಗೆ ವ್ಯಯಿಸಬೇಕೆಂದು, ಅಥವಾ ಬಿಡುಸಮಯದಲ್ಲಿ ಏನು ಮಾಡಬೇಕೆಂದು, ಅಥವಾ ಇತರರೊಂದಿಗೆ ಹೇಗೆ ಮಾತಾಡಬೇಕು ಅಥವಾ ಅವರ ಕುರಿತಾಗಿ ಏನು ಮಾತಾಡಬೇಕು ಎಂಬುದನ್ನು, ಅಥವಾ ಒಂದು ಪತ್ರವನ್ನು ಹೇಗೆ ಬರೆಯುವುದೆಂದು, ಅಥವಾ ಇನ್ನೊಬ್ಬರೊಂದಿಗೆ ಹೇಗೆ ವರ್ತಿಸಬೇಕು ಎನ್ನುವದನ್ನು, ಅಥವಾ ಎಷ್ಟು ಸಮಯವನ್ನು ದೇವರ ವಾಕ್ಯದ ಅಭ್ಯಾಸ, ಪ್ರಾರ್ಥನೆ, ಅಥವಾ ಸಭೆಯ ಕಾರ್ಯಗಳಿಗಾಗಿ ಬದಿಗಿರಿಸಬೇಕು ಎನ್ನುವದನ್ನು, ಹೀಗೆ ಹಲವಾರು ನಿರ್ಧಾರಗಳನ್ನು ನಾವು ಮಾಡುತ್ತೇವೆ. ಅದೇ ರೀತಿಯಾಗಿ, ನಮ್ಮ ಸುತ್ತಲಿನ ಜನರ ನಡವಳಿಕೆಗೆ ಪ್ರತಿಯಾಗಿ ನಾವು ಹೇಗೆ ವರ್ತಿಸಬೇಕು ಎನ್ನುವದನ್ನು ಸಹ ನಾವು ಬೆಳಗ್ಗೆಯಿಂದ ರಾತ್ರಿಯ ವರೆಗೂ ನಿರ್ಧರಿಸುತ್ತೇವೆ. ನಮಗೆ ತಿಳಿದೋ, ತಿಳಿಯದೆಯೋ, ಅಂತೂ ನಾವು ಪ್ರತಿಯೊಂದು ದಿನವೂ ಕಡಿಮೆ ಪಕ್ಷ ನೂರು ನಿರ್ಣಯಗಳನ್ನು ಮಾಡುತ್ತೇವೆ - ಮತ್ತು ಆ ಪ್ರತಿಯೊಂದು ನಿರ್ಣಯದ ಮೂಲಕ ನಾವು ನಮ್ಮನ್ನೇ ಮೆಚ್ಚಿಸಿಕೊಳ್ಳಲು ಅಥವಾ ದೇವರನ್ನು ಮೆಚ್ಚಿಸಲು ಪ್ರಯತ್ನಿಸುತ್ತೇವೆ.

ಅನೇಕ ಬಾರಿ ನಾವು ನಿರ್ಧಾರಗಳನ್ನು ಬಹಳ ಹೆಚ್ಚಾಗಿ ಯೋಚಿಸದೇ ಕೈಗೊಳ್ಳಬಹುದು. ಆದರೂ ಸಹ, ನಾವು ಎರಡು ವಿಧವಾದ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ - ನಮ್ಮನ್ನೇ ಮೆಚ್ಚಿಸುವಂಥವು ಅಥವಾ ದೇವರನ್ನು ಮಹಿಮೆ ಪಡಿಸುವಂಥವು. ನಾವು "ತಿಳಿಯದೇ ಕೈಗೊಳ್ಳುವ ನಿರ್ಣಯಗಳೂ" ಸಹ, ನಾವು "ಯೋಚಿಸಿ ಕೈಗೊಳ್ಳುವ ನಿರ್ಣಯಗಳ" ಅಧಾರದ ಮೇಲೆ ನಿರ್ಧರಿಸಲ್ಪಟ್ಟವು ಆಗಿವೆ. ನಮ್ಮ ಇಂತಹ "ಎಲ್ಲಾ ನಿರ್ಧಾರಗಳ ಒಟ್ಟಾರೆ ಮೊತ್ತ" (ಅಂತಿಮ ಪರಿಣಾಮ) ಏನೆಂದರೆ, ಅವುಗಳ ಮೂಲಕ ನಾವು "ಆತ್ಮಿಕ ಮನುಷ್ಯರೋ" ಅಥವಾ "ಪ್ರಾಪಂಚಿಕ ಮನುಷ್ಯರೋ" ಎನ್ನುವದು ನಿಶ್ಚಯಿಸಲ್ಪಡುತ್ತದೆ.

ನಾವು ಮಾನಸಾಂತರ ಹೊಂದಿದ ಸಮಯದಿಂದ ಇಂದಿನ ವರೆಗೆ ಮಾಡಿರುವ ಲಕ್ಷಾಂತರ ನಿರ್ಣಯಗಳ ಬಗ್ಗೆ ಗಮನ ಹರಿಸಿರಿ. ದೇವರ ಚಿತ್ತವನ್ನು ಪಾಲಿಸುವುದಕ್ಕಾಗಿ, ಯಾರು ಯಥಾರ್ಥರಾಗಿ ಮತ್ತು ನಿರಂತರವಾಗಿ ಪ್ರತಿದಿನ ಹಗಲಿರುಳು ಸ್ವಚಿತ್ತವನ್ನು ನಿರಾಕರಿಸಿದ್ದಾರೋ ಅವರು ಆತ್ಮಿಕರು ಆಗಿದ್ದಾರೆ. ಇನ್ನೊಂದು ಪಕ್ಕದಲ್ಲಿ, ಯಾರು ತಮಗೆ ಪಾಪ ಕ್ಷಮಾಪಣೆ ಸಿಕ್ಕಿದೆಯೆಂದು ಮಾತ್ರ ಸಂತೋಷಿಸಿದ್ದಾರೋ, ಮತ್ತು ಹೆಚ್ಚಿನ ವಿಷಯಗಳಲ್ಲಿ ತಮ್ಮ ಇಷ್ಟ ಪ್ರಕಾರ ನಡೆದಿದ್ದಾರೋ, ಅವರು ಪ್ರಾಪಂಚಿಕ ಮನುಷ್ಯರಾಗಿ ಉಳಕೊಂಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ನಿರ್ಧಾರಗಳು ಅಂತಿಮವಾಗಿ ಆತನು ಹೇಗೆ ಬದಲಾಗುತ್ತಾನೆ ಎಂಬುದನ್ನು ನಿರ್ಣಯಿಸುತ್ತವೆ.

ನೀವು ಹಿಂದಿನ ಹಲವಾರು ವರ್ಷಗಳ ನಿಮ್ಮ ಜೀವಿತದ ವಿವಿಧ ಸನ್ನಿವೇಷಗಳಲ್ಲಿ ಮಾಡಿರುವ ಸಾವಿರಾರು ನಿರ್ಣಯಗಳು, ಇಂದು ನೀವು ಎಷ್ಟು ವಿನಯಶೀಲರು, ಎಷ್ಟು ಪವಿತ್ರರು ಮತ್ತು ಎಷ್ಟು ಪ್ರೀತಿಯುಳ್ಳವರು ಆಗಿದ್ದೀರಿ ಎಂಬುದನ್ನು ನಿಶ್ಚಯಪಡಿಸಿವೆ. ಇಬ್ಬರು ಸಹೋದರರನ್ನು (ಒಂದೇ ಸಮಯದಲ್ಲಿ ಜೊತೆಯಾಗಿ ಕ್ರಿಸ್ತನನ್ನು ಸ್ವೀಕರಿಸಿರುವವರು) ಹೋಲಿಸಿ ನೋಡುವುದಾದರೆ, ಅವರ ಆತ್ಮಿಕ ಮಟ್ಟವು ಮಾನಸಾಂತರದ 10 ವರ್ಷಗಳ ನಂತರ ಹೇಗಿದೆಯೆಂದು ಯೋಚಿಸೋಣ. ಅವರಲ್ಲಿ ಒಬ್ಬನು ಈಗ ಉತ್ತಮ ತಿಳುವಳಿಕೆ ಮತ್ತು ವಿವೇಚನೆಯುಳ್ಳ ಸಹೋದರನು ಆಗಿರುತ್ತಾನೆ, ಮತ್ತು ಆತನಿಗೆ ದೇವರು ಸಭೆಯ ಕಾರ್ಯಗಳನ್ನು ವಹಿಸಿಕೊಡಲು ಸಾಧ್ಯವಾಗುತ್ತದೆ. ಅವರಲ್ಲಿ ಇನ್ನೊಬ್ಬನು ಇನ್ನೂ ಮಗುವಿನಂತೆ ಜ್ಞಾನಹೀನನೂ, ಆಗಾಗ ಎಡವಿ ಬೀಳುತ್ತಾ, ಯಾವಾಗಲೂ ಇತರರ ಸಹಾಯದಿಂದ ಜೀವನ ಸಾಗಿಸುವವನು ಆಗಿರುತ್ತಾನೆ. ಇವರಿಬ್ಬರ ನಡುವೆ ಇಷ್ಟು ಅಂತರವಿರಲು ಕಾರಣವೇನು? ಇದಕ್ಕೆ ಸಿಗುವ ಜವಾಬು: ಕ್ರಿಸ್ತೀಯ ಜೀವಿತದ ಹಿಂದಿನ 10 ವರ್ಷಗಳ ಪ್ರತಿಯೊಂದು ದಿನದಲ್ಲಿ ಅವರು ಮಾಡಿರುವ ಚಿಕ್ಕ ಪುಟ್ಟ ನಿರ್ಣಯಗಳು.

ಇವರಿಬ್ಬರು ಮುಂದಿನ 10 ವರ್ಷಗಳಲ್ಲಿ ಇದೇ ರೀತಿ ಮುಂದುವರಿದರೆ, ಅವರ ನಡುವಿನ ಅಂತರ ಇನ್ನಷ್ಟು ಎದ್ದು ಕಾಣಲಿದೆ. ಮುಂದೆ ಅವರಿಬ್ಬರನ್ನು ನಿತ್ಯತ್ವದಲ್ಲಿ ಹೋಲಿಸಿ ನೋಡುವುದಾದರೆ, ಒಬ್ಬನು "2000-ವಾಟ್" ಪ್ರಕಾಶದ ವಿದ್ಯುತ್ ಬಲ್ಬಿನಂತೆಯೂ, ಮತ್ತೊಬ್ಬನು "5-ವಾಟ್" ಪ್ರಕಾಶದ ವಿದ್ಯುತ್ ಬಲ್ಬಿನಂತೆಯೂ ಮಹಿಮೆ ಹೊಂದಿರುತ್ತಾನೆ!! "ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಮಹಿಮೆಯಲ್ಲಿ ಹೆಚ್ಚು ಕಡಿಮೆಯುಂಟಷ್ಟೇ" (1 ಕೊರಿ 15:41). ಹಾಗಾಗಿ ನಿಮ್ಮ ಚಿತ್ತವು ಬಲಹೀನವಾಗದಂತೆ ಎಚ್ಚರ ವಹಿಸಿರಿ. ನಿಮ್ಮ ಚಿತ್ತವು ಯಾವಾಗಲೂ ದೇವರನ್ನು ಮೆಚ್ಚಿಸಲು ತವಕಿಸಲಿ. ನೀವು ಇನ್ನು ಮುಂದೆ ಯಥಾರ್ಥರಾಗಿ ಇರಲು ದೃಢನಿಶ್ಚಯ ಮಾಡಿದರೆ, ಈಗಾಗಲೇ ನೀವು ಹಿಂದಿನ ಜೀವನದಲ್ಲಿ ಎಷ್ಟೋ ಬಾರಿ ಎಡವಿ ಬಿದ್ದಿದ್ದರೂ, ನಿತ್ಯತ್ವದಲ್ಲಿ ನೀವು ದುಃಖಿಸಿ ಮರುಗುವುದಿಲ್ಲ. ನಿಮ್ಮ ಅಕ್ಕ ಪಕ್ಕದಲ್ಲಿ ಇಂತಹ ಶಿಸ್ತಿನ, ಪೂರ್ಣ ಹೃದಯದ ಜೀವನಕ್ಕಾಗಿ ತವಕಿಸದಿರುವ ಬಹಳಷ್ಟು ಮಂದಿ ವಿಶ್ವಾಸಿಗಳು ಕಾಣಸಿಗುತ್ತಾರೆ. ಅವರನ್ನು ನ್ಯಾಯತೀರ್ಪು ಮಾಡಬೇಡಿರಿ. ಅವರನ್ನು ಕೀಳಾಗಿ ನೋಡಿ ತಿರಸ್ಕರಿಸಿ, ಫರಿಸಾಯರಂತೆ ವರ್ತಿಸದಿರಿ. ನೀವು ನಿಮ್ಮ ಕೆಲಸಗಳನ್ನು ನೋಡಿಕೊಳ್ಳಿರಿ ಮತ್ತು ಅವರ ಗೊಡವೆಗೆ ಹೋಗದಿರಿ. ನಿಮ್ಮ ಮಾದರಿ ಇತರರಿಗಿಂತ ವಿಭಿನ್ನವಾಗಿರಲಿ. ನೀವು ಯೇಸುವಿನ ಮೇಲೆ ಮಾತ್ರ ದೃಷ್ಟಿ ಇರಿಸಿರಿ. ಮುಂದೆ ಒಂದು ದಿನ ಕ್ರಿಸ್ತನ ನ್ಯಾಯಾಸನದ ಮುಂದೆ ನಿಂತು, ನಿಮ್ಮ ಜೀವನದ ಲೆಕ್ಕ ಒಪ್ಪಿಸುವ ಸಮಯವನ್ನು ನೀವು ಆಗಿಂದಾಗ್ಗೆ ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ.