ಹೊಸ ಒಡಂಬಡಿಕೆಯಲ್ಲಿ ಇಬ್ಬರು ವ್ಯಕ್ತಿಗಳು "ನನ್ನನ್ನು ಹಿಂಬಾಲಿಸಿರಿ" ಎಂದು ಹೇಳಿದರು. ಹಳೆಯ ಒಡಂಬಡಿಕೆಯ ಯಾವ ಪ್ರವಾದಿಯೂ ತನ್ನನ್ನು ಹಿಂಬಾಲಿಸುವಂತೆ ಹೇಳಲು ಎಂದಿಗೂ ಸಾಧ್ಯವಿರಲಿಲ್ಲ. ಅವರ ಜೀವಿತವು ಇತರರು ಅನುಸರಿಸಲು ಸೂಕ್ತ ಮಾದರಿಯಾಗಿರಲಿಲ್ಲ. ಯೆಶಾಯನಾಗಲೀ ಅಥವಾ ಮೋಶೆಯಾಗಲೀ, ಹಾಗೆ ಹೇಳಲಾಗಲಿಲ್ಲ. ಅವರು ಕೇವಲ ಒಂದು ಮಾತನ್ನು ಹೇಳಬಹುದಾಗಿತ್ತು. "ನನ್ನ ಮೂಲಕ ದೇವರು ಹೇಳುವುದನ್ನು ಕೇಳಿಸಿಕೊಳ್ಳಿರಿ, ದೇವರು ಹೀಗೆ ಹೇಳುತ್ತಿದ್ದಾರೆ." ಆದರೆ ಅವರಲ್ಲಿ ಯಾರೂ ಸಹ, "ನನ್ನ ಮಾದರಿಯನ್ನು ಅನುಸರಿಸಿರಿ" ಎಂದು ಹೇಳಲು ಸಾಧ್ಯವಿರಲಿಲ್ಲ. ಮೋಶೆಯು ತನ್ನ ಹೆಂಡತಿಯೊಟ್ಟಿಗೆ ಜಗಳವಾಡಿದನು ಮತ್ತು ತನ್ನ ಮಗನಿಗೆ ಸುನ್ನತಿ ಮಾಡದೆ ದೇವರ ವಾಕ್ಯಕ್ಕೆ ಅವಿಧೇಯನಾದನು. ಅವರೆಲ್ಲರೂ ತಮ್ಮ ಜೀವಿತದ ಮೂಲಕ ನಮಗೆ ಒಳ್ಳೆಯ ಮಾದರಿಯನ್ನು ನೀಡಲಿಲ್ಲ. ಆದರೆ, ಅವರು ದೇವರ ಮಾತನ್ನು- ಇದ್ದುದನ್ನು ಇದ್ದಂತೆ ಅಂದರೆ, "ದೇವರು ಹೀಗೆ ಹೇಳುತ್ತಾರೆ" ಎಂದು ಸಾರಿದರು. ಆದರೆ ಹೊಸ ಒಡಂಬಡಿಕೆಯಲ್ಲಿ, ನಾವು ಕೇವಲ "ದೇವರು ಹೀಗೆ ಹೇಳಿದ್ದಾರೆ," ಎಂದು ಸಾರುವುದಿಲ್ಲ. ನಾವು, "ಬನ್ನಿರಿ, ದೇವರು ಹೇಳುವುದನ್ನು ಕೇಳಿಸಿಕೊಳ್ಳಿರಿ" ಎಂದು ಮಾತ್ರ ಹೇಳುವುದಿಲ್ಲ.
ಹೊಸ ಒಡಂಬಡಿಕೆಯಲ್ಲಿ ನಾವು ಹೀಗೆ ಸಾರುತ್ತೇವೆ, "ಬನ್ನಿರಿ, ದೇವರು ಮಾಡಿರುವುದನ್ನು ನೋಡಿರಿ," ಮತ್ತು ಇದು ಹಳೆಯ ಒಡಂಬಡಿಕೆಯ ಪ್ರವಾದಿಗಳು, "ಬನ್ನಿರಿ, ದೇವರು ಏನು ಹೇಳುತ್ತಾರೆಂದು ಕೇಳಿಸಿಕೊಳ್ಳಿರಿ," ಎನ್ನುವ ಮಾತಿಗಿಂತ ವಿಭಿನ್ನವಾಗಿದೆ. ಹೊಸ ಒಡಂಬಡಿಕೆಯ ಪ್ರವಾದಿಯು ಹೀಗೆ ಹೇಳುತ್ತಾನೆ, "ಬನ್ನಿರಿ, ದೇವರು ನನ್ನ ಜೀವಿತದಲ್ಲಿ ಏನು ಮಾಡಿದ್ದಾರೆಂದು ನೋಡಿರಿ. ನನ್ನ ಕುಟುಂಬ ಜೀವಿತದಲ್ಲಿ ದೇವರು ಏನು ಮಾಡಿದ್ದಾನೋ ಬಂದು ನೋಡಿರಿ; ನನ್ನ ವೈಯಕ್ತಿಕ ಜೀವಿತದಲ್ಲಿ ದೇವರು ಏನು ಮಾಡಿದ್ದಾನೆಂದು ಬಂದು ನೋಡಿರಿ; ಯೇಸು ಆಜ್ಞಾಪಿಸಿದ್ದನ್ನು ಕೈಗೊಂಡು ನಡೆಯುವುದನ್ನು ನಾನು ನಿಮಗೆ ಕಲಿಸ ಬಯಸುತ್ತೇನೆ; ಆಗ ಆತನು ನನ್ನ ಜೀವಿತದಲ್ಲಿ ಮಾಡಿರುವುದನ್ನು ನಿಮ್ಮ ಜೀವಿತದಲ್ಲೂ ಮಾಡುತ್ತಾನೆ. ನನ್ನನ್ನು ಹಿಂಬಾಲಿಸಿರಿ."
ಸತ್ಯವೇದದಲ್ಲಿ "ನನ್ನನ್ನು ಹಿಂಬಾಲಿಸಿರಿ" ಎಂದು ಹೇಳಿದ ಮೊದಲ ವ್ಯಕ್ತಿ ಯೇಸುವೇ ಆಗಿದ್ದರು. ಇದರ ನಂತರ ಪೌಲನು, "ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸಿರಿ," ಎಂದು ಹೇಳುವುದನ್ನು ನಾವು ನೋಡುತ್ತೇವೆ (1 ಕೊರಿ. 11:1). ಆತನು ಫಿಲಿಪ್ಪಿ. 3:17ರಲ್ಲಿ, "ಸಹೋದರರೇ, ನೀವೆಲ್ಲಾ ನನ್ನನ್ನು ಅನುಸರಿಸುವವರಾಗಿರಿ. ಅದು ಮಾತ್ರವೇ ಅಲ್ಲ, ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ. ನೀವು ಅವರ ಮಾದರಿಯನ್ನು ಸಹ ಅನುಸರಿಸಬಹುದು. ಏಕೆಂದರೆ ನಾನು ಕ್ರಿಸ್ತನ ಮಾದರಿಯನ್ನು ಅನುಸರಿಸುತ್ತಿದ್ದೇನೆ." ಒಂದು 10,000 ಮೀಟರ್ ಎತ್ತರದ ಪರ್ವತವನ್ನು ಏರಿರುವ ಒಬ್ಬ ವ್ಯಕ್ತಿಯಂತೆ ಕ್ರಿಸ್ತನು ಇದ್ದಾನೆ. ಅವರು ಪರ್ವತದ ಶಿಖರವನ್ನು ತಲುಪಿದ್ದಾರೆ, ಮತ್ತು ನಾವು ಹಿಂಬಾಲಿಸುತ್ತಿದ್ದೇವೆ. ಪೌಲನು ಬಹುಶಃ ನಮಗಿಂತ ಮುಂದೆ ಹೋಗಿದ್ದಾನೆ. ಬಹುಶಃ ಅವನು 3,000-4,000 ಮೀಟರ್ ಎತ್ತರಕ್ಕೆ ಏರಿರಬಹುದು. ಅವನು ತನ್ನ ಹಿಂದೆ ಇರುವವರಿಗೆ, "ನನ್ನನ್ನು ಹಿಂಬಾಲಿಸಿರಿ" ಎಂದು ಹೇಳುತ್ತಾನೆ. ಬಹುಶಃ ನಾನು 500 ಮೀಟರ್ ವರೆಗೆ ಮಾತ್ರ ಏರಿರಬಹುದು. ಪರ್ವತದ ಇನ್ನೂ ಕೆಳಗೆ ನನ್ನ ಹಿಂದಿರುವ ಜನರಿಗೆ ನಾನು "ನನ್ನನ್ನು ಹಿಂಬಾಲಿಸಿರಿ," ಎಂದು ಹೇಳಬಲ್ಲೆ. ಶಿಖರದ ಮೇಲಿರುವ ಕ್ರಿಸ್ತನನ್ನು ಹಿಂಬಾಲಿಸುತ್ತಾ ನನ್ನ ಮುಂದೆ ಹೋಗಿರುವ ಇತರರ ಮಾದರಿಯನ್ನು ನಾನು ಅನುಸರಿಸಬಲ್ಲೆನು. ಕ್ರಿಸ್ತನ ಸಂಪೂರ್ಣ ಸಾರೂಪ್ಯವು ಆ ಶಿಖರವಾಗಿದೆ. ಅದೇ ನಮ್ಮೆಲ್ಲರ ಗುರಿಯಾಗಿದೆ. ನಮ್ಮ ಗುರಿಯು ಲೋಕದಲ್ಲಿ ಪ್ರತಿಯೊಬ್ಬ ರೋಗಿಯನ್ನು ಗುಣಪಡಿಸುವುದಲ್ಲ. ಬದಲಿಗೆ ನಾವು ನಮ್ಮ ಜೀವನದಲ್ಲಿ ಸಂಪೂರ್ಣವಾಗಿ ಯೇಸು ಕ್ರಿಸ್ತನಂತೆ ಬದಲಾಗುವುದು. ಮತ್ತು ಆ ಜೀವಿತದಿಂದ ಸೇವೆಯು ತಾನಾಗಿ ಉಕ್ಕಿ ಹರಿಯುತ್ತದೆ.
"ಯೇಸುವಿನ ಕಾರ್ಯಗಳನ್ನು" ಚುಟುಕಾಗಿ ವಿವರಿಸುವುದಾದರೆ, ಆತನು ತನ್ನ ಸ್ವಂತ ಚಿತ್ತಕ್ಕೆ "ಇಲ್ಲ" ಎನ್ನುವುದಕ್ಕಾಗಿ ಮತ್ತು ತನ್ನ ತಂದೆಯ ಚಿತ್ತವನ್ನು ನೆರವೇರಿಸುವುದಕ್ಕಾಗಿ ಬಂದನು".
ನಾವು ಈ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಯೇಸುವು ತಾನು ಮಾಡಿದ ಸೇವೆಯನ್ನೇ ಜನರಿಗೆ ಕಲಿಸಿಕೊಡಬೇಕೆಂದು ನಮಗೆ ಅಪ್ಪಣೆ ನೀಡಲಿಲ್ಲ. ಪೌಲನು "ನನ್ನನ್ನು ಹಿಂಬಾಲಿಸಿರಿ," ಎಂದು ತನ್ನ ಸೇವೆಯ ಬಗ್ಗೆ ನಮಗೆ ಹೇಳಿದ್ದರೆ, ನಾವು ಆತನನ್ನು ಹಿಂಬಾಲಿಸಲು ಸಾಧ್ಯವಾಗುತ್ತಿರಲಿಲ್ಲ. ಅವನು ನಮಗೆ ಅಪೊಸ್ತಲರಾಗಲು ಹೇಳಲಿಲ್ಲ. ಎಲ್ಲರೂ ಅಪೊಸ್ತಲರಾಗಲು ಹೇಗೆ ಸಾಧ್ಯ? ಎಲ್ಲರೂ ಪೌಲನಂತೆ ಪ್ರವಾದಿಗಳು ಅಥವಾ ಸುವಾರ್ತಾ ಬೋಧಕರಾಗಲು ಹೇಗೆ ಸಾಧ್ಯ? ಅವನು "ನನ್ನ ಜೀವಿತವನ್ನು ಅನುಸರಿಸಿರಿ, ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ" ಎಂದು ಹೇಳುತ್ತಿದ್ದನು. ಅಪೊಸ್ತಲ ಪೌಲನೇ ಆದರೂ ಎಲ್ಲಾ ರೋಗಿಗಳನ್ನು ಗುಣಪಡಿಸುವ, ನೀರಿನ ಮೇಲೆ ನಡೆಯುವ ಅಥವಾ ಐದು ರೊಟ್ಟಿಗಳಿಂದ 5,000 ಜನರಿಗೆ ಆಹಾರವನ್ನು ನೀಡುವ ಕ್ರಿಸ್ತನ ಸೇವೆಯನ್ನು ಅನುಕರಿಸಲು ಸಾಧ್ಯವಿರಲಿಲ್ಲ. ಸ್ವತಃ ಪೌಲನೇ ಹಸಿವೆ ಬಾಯಾರಿಕೆಗಳನ್ನು ಅನುಭವಿಸಿದ ಸಂದರ್ಭಗಳು (2 ಕೊರಿ. 11:27), ಕೊರತೆಯಲ್ಲಿದ್ದ ಸಂದರ್ಭಗಳು, ಚಳಿಯಲ್ಲಿ ನಡುಗುತ್ತಾ ಕಂಬಳಿಯನ್ನು ತರುವಂತೆ ತಿಮೊಥೆಯನನ್ನು ಕೇಳಿಕೊಂಡ ಸಂದರ್ಭಗಳಿದ್ದವು (2 ತಿಮೋ. 4:13). ಆದಿಯಲ್ಲಿನ ಕ್ರೈಸ್ತರು ಅನೇಕ ರೀತಿಯ ಹಿಂಸೆಗೆ ಒಳಗಾದರು. ಅವರು ಸಿಂಹಗಳ ಗವಿಗೆ ಹಾಕಲ್ಪಟ್ಟಾಗ ಅವರಿಗೆ ರಕ್ಷಣೆ ಸಿಗಲಿಲ್ಲ, ಆದಾಗ್ಯೂ ಶಿಲುಬೆಗೆ ಏರಿಸಲ್ಪಟ್ಟಾಗ ರಕ್ಷಣೆಯನ್ನು ನಿರಾಕರಿಸಿದ ಯೇಸುವನ್ನು ಅವರು ಹಿಂಬಾಲಿಸಿದರು. ನಾವು ಅನುಸರಿಸಬೇಕಾದದ್ದು ಕ್ರಿಸ್ತನ ಜೀವಿತವಾಗಿದೆ. ನಾವು ಯೇಸುವನ್ನು ಆತನ ಸೇವೆಯಲ್ಲಿ ಅನುಸರಿಸಲು ಸಾಧ್ಯವಿಲ್ಲ.
ಇದನ್ನು ಸ್ಪಷ್ಟಪಡಿಸುವ ಒಂದು ಉದಾಹರಣೆ ಎಂದರೆ, ಲೋಕದ ಜನರ ಪಾಪಗಳಿಗಾಗಿ ಪ್ರಾಣವನ್ನು ಅರ್ಪಿಸುವುದು ಯೇಸುವಿನ ಸೇವೆಯ ಒಂದು ಅಂಶವಾಗಿತ್ತು. ನಾವು ಸಹ ಯಾವುದೇ ರೀತಿ ಆ ಸೇವೆಯನ್ನು ಅನುಸರಿಸಲು ಸಾಧ್ಯವಿದೆಯೇ? ಅದು ಅಸಾಧ್ಯವಾಗಿದೆ. ಆದ್ದರಿಂದ, ನಾವು ಅನುಕರಣೆ ಮಾಡುವಂಥದ್ದು ಆತನ ಜೀವಿತವಾಗಿದೆ. ನಾವು ಯೇಸುವಿನ ಜೀವಿತ ಮತ್ತು ಆತನ ಸೇವೆ ಇವೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕು. ಒಂದೇ ವಾಕ್ಯದಲ್ಲಿ ಯೇಸುವು ಹೇಳಬೇಕಿದ್ದರೆ, ನಾನು ತಂದೆಯ ಚಿತ್ತವನ್ನು ನನ್ನ ಜೀವಿತ ಹಾಗೂ ಸೇವೆಯಲ್ಲಿ ನೆರವೇರಿಸಿದೆನು, ಎಂದು ಹೇಳಬಹುದಾಗಿತ್ತು. ನಾವು ಸಹ ನಮ್ಮ ಜೀವಿತ ಮತ್ತು ಸೇವೆಯಲ್ಲಿ ದೇವರ ಚಿತ್ತವನ್ನು ಮಾಡಬಹುದು. ನಮ್ಮ ಜೀವಿತದಲ್ಲಿ, ನಾವು ಯೇಸುವಿನ ಮಾದರಿಯನ್ನು ನಿಖರವಾಗಿ ಅನುಸರಿಸಬೇಕು. ಪೌಲನು ಅದನ್ನೇ ಮಾಡಿದನು. ನಮ್ಮ ಸೇವೆಯಲ್ಲಿ, ನಮಗೆ ನಿರ್ದಿಷ್ಟವಾಗಿ ಕೊಡಲ್ಪಟ್ಟಿರುವ ಕ್ರಿಸ್ತನ ದೇಹದ ಕಾರ್ಯವನ್ನು ನಾವು ಪೂರೈಸಬೇಕು. ನಾವು ಯೇಸುವಿನ ಜೀವಿತ ಹಾಗೂ ಸೇವೆಯ ನಡುವಿನ ಈ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡರೆ, ವಂಚನೆಯಿಂದ ಹೊರಬರುತ್ತೇವೆ ಮತ್ತು ಅನಗತ್ಯ ಕಾರ್ಯಗಳಿಂದ ಮತ್ತು ಕಪಟತನದಿಂದ ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ. ಯೇಸುವು ಮಾಡಿದ ಕಾರ್ಯಗಳನ್ನು ಮಾಡುವುದಾಗಿ ತೋರಿಕೆ ಮಾಡುವಂತ ಕ್ರೈಸ್ತ ವಿಶ್ವಾಸಿಗಳ ನಡುವೆ ಬಹಳಷ್ಟು ಕಪಟತನವಿದೆ.
ಕೆಲವೊಮ್ಮೆ ಜನರು ಕೇಳುವ ಪ್ರಶ್ನೆ ಏನೆಂದರೆ, "ಕೊನೆಯ ಭೋಜನದ ಕೊನೆಯಲ್ಲಿ ಯೇಸುವು ಹೇಳಿದ ಈ ಮಾತಿನ ಅರ್ಥವೇನು? "ನಾನು ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವನು, ನಾನು ಮಾಡುವ ಕ್ರಿಯೆಗಳನ್ನು ಸಹ ಮಾಡುವನು; ಇವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ಅವನು ಮಾಡುವನು; ಯಾಕೆಂದರೆ ನಾನು ನನ್ನ ತಂದೆಯ ಬಳಿಗೆ ಹೋಗುತ್ತೇನೆ ಮತ್ತು ಪವಿತ್ರಾತ್ಮನನ್ನು ಕಳುಹಿಸಲು ತಂದೆಯ ಬಳಿ ಕೇಳಿಕೊಳ್ಳುತ್ತೇನೆ"(ಯೋಹಾ. 14:12,16). ಅವರು ಹೇಳಿರುವುದು ಏನೆಂದರೆ ಪವಿತ್ರಾತ್ಮನು ಬಂದ ನಂತರ ಯೇಸುವು ಮಾಡಿದ ಕಾರ್ಯಗಳನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಅವುಗಳಿಗಿಂತ ಮಹತ್ತಾದ ಕಾರ್ಯಗಳನ್ನು ನೀವು ಮಾಡಬಹುದು. ನಾವು ಇದನ್ನು ಅರ್ಥಮಾಡಿಕೊಳ್ಳಬೇಕು.
ಯೇಸು ಮಾಡಿದ ಕಾರ್ಯಗಳು ಯಾವುವು ಎಂದು ನೀವು ಯಾರನ್ನಾದರೂ ಕೇಳಿದರೆ, ಒಡನೆಯೇ ಅವರು, ರೋಗಿಗಳನ್ನು ಸ್ವಸ್ಥ ಮಾಡುವುದು, ಸತ್ತವರನ್ನು ಎಬ್ಬಿಸುವುದು, ನೀರಿನ ಮೇಲೆ ನಡೆಯುವುದು, 5000 ಜನರಿಗೆ 5 ರೊಟ್ಟಿಗಳಿಂದ ಊಟ ಮಾಡಿಸುವುದು ಎಂದು ಹೇಳುತ್ತಾರೆ. ಆದರೆ ಅದು ಯೇಸುವಿನ ಜೀವಿತದ ಕೊನೆಯ 10% ದ ಬಗ್ಗೆ ಮಾತ್ರ ಹೇಳಿದಂತೆ ಆಯಿತು! ಅವರು ಜೀವಿತದ ಕೊನೆಯ ಮೂರುವರೆ ವರ್ಷಗಳಲ್ಲಿ ಇವೆಲ್ಲವನ್ನು ಮಾಡಿದರು. ಅವರು ಇಷ್ಟು ಮಾತ್ರವೇ ಮಾಡಿದರೇ? ಅವರ ಜೀವಿತದ ಮಿಕ್ಕ 90% ರ ಬಗ್ಗೆ ಏನು ಹೇಳಬಹುದು? ಅವರು ತಮ್ಮ ಮೊದಲಿನ 90% ಜೀವಿತದಲ್ಲಿ ಏನು ಮಾಡಿದರು? ಅವರು ತಮ್ಮ ಇಡೀ ಜೀವಿತದ ಕಾಲಾವಧಿಯಲ್ಲಿ ಏನು ಮಾಡಿದರು? ಒಂದು ವಾಕ್ಯದಲ್ಲಿ ಹೇಳುವುದಾದರೆ, ಅವರು ತನ್ನ ತಂದೆಯ ಚಿತ್ತವನ್ನು ನೆರವೇರಿಸಿದರು. ಯೇಸು ಸ್ವತ "ಯೋಹಾನನು 6:38"ರಲ್ಲಿ, "ನಾನು ಪರಲೋಕದಿಂದ ಬಂದಿರುವುದು ಸತ್ತವರನ್ನು ಎಬ್ಬಿಸಲು, ರೋಗಿಗಳನ್ನು ಸ್ವಸ್ಥ ಮಾಡಲು, ಮತ್ತು ನೀರಿನ ಮೇಲೆ ನಡೆಯಲು ಅಲ್ಲ," ಎಂದು ಹೇಳಿದರು. "ನಾನು ನನ್ನ ಚಿತ್ತದ ಪ್ರಕಾರ ನಡೆಯುವುದಕ್ಕಾಗಿ ಬಂದಿಲ್ಲ, ನನ್ನ ತಂದೆಯ ಚಿತ್ತವನ್ನು ನೆರವೇರಿಸುವುದಕ್ಕಾಗಿ ನಾನು ಪರಲೋಕದಿಂದ ಬಂದಿದ್ದೇನೆ," ಎಂದು ಹೇಳಿದರು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಇವೇ "ಯೇಸುವಿನ ಕಾರ್ಯಗಳಾಗಿವೆ." ಆತನು ತನ್ನ ಸ್ವಂತ ಚಿತ್ತಕ್ಕೆ ಇಲ್ಲ ಎಂದು ಹೇಳುವುದಕ್ಕಾಗಿ ಮತ್ತು ತನ್ನ ತಂದೆಯ ಚಿತ್ತವನ್ನು ನೆರವೇರಿಸುವುದಕ್ಕಾಗಿ ಬಂದನು. ತಂದೆಯ ಚಿತ್ತವು ಏನಾಗಿತ್ತೆಂದರೆ, ಪರ್ವತದ ಮೇಲೆ ಪ್ರಸಂಗ ಮಾಡುವುದು, ರೋಗಿಗಳೆಲ್ಲರನ್ನು ವಾಸಿ ಮಾಡುವುದು, ಮತ್ತು ಕೆಲವೊಮ್ಮೆ ಬೇತ್ಸಥಾ ಕೊಳದ ಬಳಿ ಮಾಡಿದ ಹಾಗೆ, ಒಬ್ಬನೇ ವ್ಯಕ್ತಿಯನ್ನು ಸ್ವಸ್ಥ ಮಾಡುವುದು, ನೀರಿನ ಮೇಲೆ ನಡೆಯುವುದು, ಪೇತ್ರನು ನೀರಿನ ಮೇಲೆ ನಡೆಯುವಂತೆ ಮಾಡುವುದು ಮತ್ತು 5 ರೊಟ್ಟಿಗಳಿಂದ ಐದು ಸಾವಿರ ಜನರಿಗೆ ಊಟ ಮಾಡಿಸುವುದು ಅಥವಾ ಸತ್ತು ನಾಲ್ಕು ದಿನವಾಗಿದ್ದ ಲಾಜರನನ್ನು ಬದುಕಿಸುವುದು; ಆದರೆ ಇವೆಲ್ಲವುಗಳೂ ತಂದೆಯ ಚಿತ್ತವನ್ನು ನೆರವೇರಿಸುವ ಕಾರ್ಯಗಳಾಗಿದ್ದವು.
ಇದೇ ಗಮನಿಸಬೇಕಾದ ಅಂಶವಾಗಿದೆ. ಯೇಸುವು ಮಾಡಿದ ಕಾರ್ಯಗಳನ್ನು ಒಂದು ವಾಕ್ಯದಲ್ಲಿ ವಿವರಿಸುವುದಾದರೆ, ಅದು "ತಂದೆಯ ಚಿತ್ತ" ಎನ್ನಬಹುದು. ಪೌಲನು ಸಹ ಹಾಗೆಯೇ ಮಾಡಿದನು. ಆತನಿಗೆ ತಂದೆಯ ಚಿತ್ತವು ಸುತ್ತಲೂ ಪ್ರಯಾಣ ಮಾಡುವುದು, ಸಭೆಗಳನ್ನು ಕಟ್ಟುವುದು ಮತ್ತು ಸತ್ಯವೇದದ ಪತ್ರಿಕೆಗಳನ್ನು ಬರೆಯುವುದು ಆಗಿತ್ತು. ಯೇಸುವು ಯಾವುದೇ ಪತ್ರಿಕೆಗಳನ್ನು ಬರೆಯಲಿಲ್ಲ, ಆದರೆ ಪೌಲನು ಬರೆದನು. ನಾವು ಪತ್ರಿಕೆಗಳನ್ನು ಬರೆಯಲು ಕರೆಯಲ್ಪಟ್ಟಿಲ್ಲ. ಆದರೆ ನಾವು ತಂದೆಯ ಚಿತ್ತವನ್ನು ನೆರವೇರಿಸುವುದಕ್ಕಾಗಿ ಕರೆಯಲ್ಪಟ್ಟಿದ್ದೇವೆ. ಇದೇ ಯೇಸುವಿನ ಕಾರ್ಯವಾಗಿತ್ತು. ಇದು ಆತನು ತನ್ನ ಚಿಕ್ಕ ವಯಸ್ಸಿನಲ್ಲಿ ಯೋಸೇಫ ಮತ್ತು ಮರಿಯಳ ಮನೆಯಲ್ಲಿ ಅವರಿಗೆ ವಿಧೇಯನಾಗಿರುವುದನ್ನು ಒಳಗೊಂಡಿತ್ತು. ಮರಿಯಳು ಯೇಸುವಿಗೆ ಬಾವಿಯಿಂದ ಒಂದು ಬಾಲ್ದಿಯಷ್ಟು ನೀರು ತರಲು ಹೇಳಿದರೆ ಯೇಸುವು ಬಾಲ್ದಿಯಲ್ಲಿ ನೀರು ತುಂಬಿಸಿಕೊಂಡು ತಂದು ಕೊಡುತ್ತಿದ್ದನು. ಇದೇ ಯೇಸುವು ಮಾಡಿದ ಕಾರ್ಯ. ಚಿಕ್ಕ ವಿಷಯಗಳಲ್ಲಿ ಮತ್ತು ದೊಡ್ಡ ವಿಷಯಗಳಲ್ಲಿ ತಂದೆಗೆ ವಿಧೇಯನಾಗಿರುವುದು. ನಾವೆಲ್ಲರೂ ಇದನ್ನು ಮಾಡಬಹುದಾಗಿದೆ.