WFTW Body: 

ಪೌಲನು ಬರೆದಂತ ಪತ್ರಿಕೆಗಳಲ್ಲಿ ’ಎಫೆಸದವರಿಗೆ ಬರೆದ ಪತ್ರಿಕೆ’ಯು ಬಹುಶಃ ಅತಿ ಹೆಚ್ಚು ಆತ್ಮಿಕವಾದದ್ದಾಗಿದೆ ಮತ್ತು ಇದು ಸೂಚಿಸುವದು ಏನೆಂದರೆ, ಆ ಸಮಯದಲ್ಲಿ ಎಫೆಸದ ಸಭೆಯು ಬಹಳ ಉತ್ತಮ ಆತ್ಮಿಕ ಸ್ಥಿತಿಯಲ್ಲಿತ್ತು, ಎಂಬುದನ್ನು. ಈ ಸಭೆಯು ಬಹಳ ಒಳ್ಳೆಯ ಸಭೆಯಾಗಿತ್ತು. ಈ ಸಭೆಯಲ್ಲಿ ಪೌಲನು ತಿದ್ದುವಂಥದ್ದು ಏನೂ ಇರಲಿಲ್ಲ. ಈ ಪತ್ರಿಕೆಯು ಇಹಲೋಕದಲ್ಲಿ ಪರಲೋಕದ ಜೀವಿತವನ್ನು ಜೀವಿಸುವದು ಹೇಗೆಂದು ನಮಗೆ ತೋರಿಸಿಕೊಡುತ್ತದೆ.

ಒಂದು ಸಭೆಯಾಗಲೀ, ಒಬ್ಬ ಕ್ರೈಸ್ತನಾಗಲೀ ಪರಲೋಕದ ಮನಸ್ಸು ಉಳ್ಳವರಾಗಿದ್ದಾಗ ಮಾತ್ರ ಇಹಲೋಕದಲ್ಲಿ ತಮ್ಮ ಕರ್ತವ್ಯವನ್ನು ಪೂರೈಸಲು ಸಾಧ್ಯವಾಗುತ್ತದೆ. ನೀವು ಹೆಚ್ಚು ಹೆಚ್ಚು ಪರಲೋಕದ ಮನಸ್ಸು ಉಳ್ಳವರಾದಾಗ, ಭೂಲೋಕದಲ್ಲಿ ನಿಮಗಾಗಿ ಇರಿಸಲಾದ ದೇವರ ಸಂಕಲ್ಪವನ್ನು ಹೆಚ್ಚು ಹೆಚ್ಚಾಗಿ ಪೂರೈಸುತ್ತೀರಿ. ಹಾಗೆಯೇ ನೀವು ಹೆಚ್ಚು ಹೆಚ್ಚಾಗಿ ಇಹಲೋಕದ ಮನಸ್ಸು ಉಳ್ಳವರಾದರೆ, ನೀವು ಸತ್ತಾಗ ಪರಲೋಕಕ್ಕೆ ಹೋಗುತ್ತೀರೆಂದು ಹೇಳಿಕೊಂಡರೂ ಸಹ, ದೇವರ ಸಂಕಲ್ಪಗಳನ್ನು ಪೂರೈಸುವುದರಲ್ಲಿ ನೀವು ಹೆಚ್ಚು ವಿಫಲರಾಗುತ್ತೀರಿ. ನಿಮ್ಮ ಮನೆ ಪರಲೋಕ ಭಾವವನ್ನು ಹೊಂದಿದ್ದರೆ ಮಾತ್ರ ಅದು ದೇವರಿಗಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತದೆ. "ನಿಮ್ಮ ಭೂಲೋಕದ ಜೀವಿತವನ್ನು ಪರಲೋಕದ ದಿನಗಳಂತೆ ಬಾಳುವಿರಿ," ಎಂಬುದು ನಮಗಾಗಿ ದೇವರ ಚಿತ್ತವಾಗಿದೆ (ಧರ್ಮೋಪದೇಶ ಕಾಂಡ 11:21 - KJV). ಹಳೆಯ ಒಡಂಬಡಿಕೆಯ ಕೆಳಗೆ ಇದು ಸಾಧ್ಯವಿರಲಿಲ್ಲ. ಆದರೆ ಹೊಸ ಒಡಂಬಡಿಕೆಯ ಅಡಿಯಲ್ಲಿ ನಾವು ಇಂತಹ ಜೀವನವನ್ನು ಹೇಗೆ ಜೀವಿಸಬಹುದು, ಎಂಬುದನ್ನು ಎಫೆಸದವರ ಪತ್ರಿಕೆ ನಮಗೆ ತಿಳಿಸಿಕೊಡುತ್ತದೆ.

ಎಫೆಸ 1:3 ಹೀಗೆ ಹೇಳುತ್ತದೆ, "ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ, ತಂದೆಯೂ ಆಗಿರುವಾತನಿಗೆ ಸ್ತೋತ್ರ. ಆತನು ಪರಲೋಕದಲ್ಲಿನ ಸಕಲ ಆತ್ಮೀಯ ವರಗಳನ್ನು ನಮಗೆ ಕ್ರಿಸ್ತ ಯೇಸುವಿನಲ್ಲಿ ಅನುಗ್ರಹಿಸಿದ್ದಾನೆ". ಇಲ್ಲಿ ನೀವು ಗಮನಿಸ ಬೇಕಾದದ್ದು ಏನೆಂದರೆ, ಈ ಎಲ್ಲಾ ವರಗಳು ಆತ್ಮಿಕ ವರಗಳಾಗಿವೆಯೇ ಹೊರತು ಭೌತಿಕ ವರಗಳಲ್ಲ.’ಇಹಲೋಕದ ಆಶೀರ್ವಾದಗಳ’ ವಾಗ್ದಾನ ಹಳೆ ಒಡಂಬಡಿಕೆಯ ಕೆಳಗೆ ಇಸ್ರಾಯೇಲ್ಯರಿಗೆ ಕೊಡಲ್ಪಟ್ಟಿತ್ತು. ಅದನ್ನು ನಾವು ಧರ್ಮೋಪದೇಶಕಾಂಡ 28ನೇ ಅಧ್ಯಾಯದಲ್ಲಿ ಓದಬಹುದಾಗಿದೆ. ಕ್ರಿಸ್ತನು ಅನುಗ್ರಹಿಸಿದ ’ಕೃಪೆ’ ಮತ್ತು ಮೋಶೆಯು ನೀಡಿದ ’ಧರ್ಮಶಾಸ್ತ್ರ’ದ ನಡುವಿನ ಅಂತರ ಇದೇ ಆಗಿದೆ. ಹಳೆ ಒಡಂಬಡಿಕೆಯಲ್ಲಿ ಇದಕ್ಕೆ ಹೋಲುವ ಒಂದು ವಚನ ಇದ್ದಿದ್ದರೆ, ಅದು ಹೀಗಿರುತ್ತಿತ್ತು - "ನಮ್ಮ ಸರ್ವಶಕ್ತನಾದ ದೇವರಿಗೆ (’ನಮ್ಮ ತಂದೆ’ ಅಲ್ಲ) ಸ್ತೋತ್ರ. ಆತನು ಇಹಲೋಕದಲ್ಲಿನ ಸಕಲ ಭೌತಿಕ ವರಗಳನ್ನು ನಮಗೆ ಮೋಶೆಯ ಮೂಲಕ ಅನುಗ್ರಹಿಸಿದ್ದಾನೆ." ಹಾಗಾಗಿ, ಪ್ರಾಥಮಿಕವಾಗಿ ದೈಹಿಕ ಸ್ವಾಸ್ಥ್ಯ ಮತ್ತು ಭೌತಿಕ ಆಶಿರ್ವಾದಗಳಿಗಾಗಿ ಹುಡುಕಾಡುವ ವಿಶ್ವಾಸಿಗಳು ವಾಸ್ತವವಾಗಿ ಹಳೆ ಒಡಂಬಡಿಕೆಗೆ ವಾಪಸು ಹೋಗುತ್ತಿದ್ದಾರೆ. ನಿಜವಾಗಿ ಇಂತಹ "ವಿಶ್ವಾಸಿಗಳನ್ನು" ’ಇಸ್ರಾಯೇಲ್ಯರು’ ಎನ್ನಬಹುದೇ ಹೊರತು ’ಕ್ರೈಸ್ತರು’ ಎಂದಲ್ಲ. ಅವರು ಕ್ರಿಸ್ತನ ಅನುಯಾಯಿಗಳಲ್ಲ, ಮೋಶೆಯ ಅನುಯಾಯಿಗಳು ಆಗಿದ್ದಾರೆ.  

ಹಾಗಿದ್ದಲ್ಲಿ, ದೇವರು ವಿಶ್ವಾಸಿಗಳನ್ನು ಇಂದು ಭೌತಿಕವಾಗಿ ಆಶಿರ್ವದಿಸುವುದಿಲ್ಲ ಎನ್ನಬಹುದೇ? ಆತನು ನಿಶ್ಚಯವಾಗಿ ಆಶೀರ್ವದಿಸುತ್ತಾನೆ - ಆದರೆ ಬೇರೊಂದು ರೀತಿಯಲ್ಲಿ. ವಿಶ್ವಾಸಿಗಳು ದೇವರ ರಾಜ್ಯ ಮತ್ತು ನೀತಿಗಾಗಿ ಮೊದಲು ತವಕಿಸಿದರೆ, ಅವರುಗಳಿಗೆ ಭೌತಿಕವಾಗಿ ಅವಶ್ಯವಿರುವ ಪ್ರತಿಯೊಂದು ಸಹ ಒದಗಿಸಲ್ಪಡುತ್ತದೆ. ಹಳೆಯ ಒಡಂಬಡಿಕೆಯ ಅಡಿಯಲ್ಲಿ ಜನರು ಇಂತಹ ಇಹಲೋಕದ ಸಂಗತಿಗಳಿಗಾಗಿ ಮಾತ್ರ ತವಕಿಸಿದರು ಮತ್ತು ಅವುಗಳನ್ನು ಹೇರಳವಾಗಿ ಪಡೆದುಕೊಂಡರು - ಅನೇಕ ಮಕ್ಕಳು, ಬೇಕಾದಷ್ಟು ಆಸ್ತಿ, ವಿಫುಲ ಸಂಪತ್ತು, ಶತ್ರುಗಳ ಮೇಲೆ ಜಯ, ಲೋಕದ ದೃಷ್ಟಿಯಲ್ಲಿ ಮಾನ್ಯತೆ ಮತ್ತು ಸ್ಥಾನಮಾನಗಳು, ಇತ್ಯಾದಿ. ಆದರೆ ಹೊಸ ಒಡಂಬಡಿಕೆಯ ಕೆಳಗೆ ನಾವು ಆತ್ಮಿಕ ಆಶೀರ್ವಾದಗಳಿಗಾಗಿ ತವಕಿಸುತ್ತೇವೆ - ಆತ್ಮಿಕ ಮಕ್ಕಳು, ಆತ್ಮಿಕ ಅಭಿವೃದ್ಧಿ, ಆತ್ಮಿಕ ಗೌರವ, ಆತ್ಮಿಕ ಜಯಗಳು (ಸೈತಾನನ ಮೇಲೆ ಮತ್ತು ಪಾಪಾಧೀನ ಸ್ವಭಾವದ ಮೇಲೆ ಜಯವನ್ನು ಗಳಿಸುವುದೇ ಹೊರತು, ಫಿಲಿಷ್ಟಿಯರು ಅಥವಾ ಇತರ ಮಾನವರ ಮೇಲೆ ಅಲ್ಲ). ನಾವು ದೇವರ ಚಿತ್ತದಂತೆ ಜೀವಿಸುವುದಕ್ಕಾಗಿ ನಮಗೆ ಬೇಕಾಗುವ ಇಹಲೋಕದ ಅಗತ್ಯತೆಗಳಾದ ಆರೋಗ್ಯ ಮತ್ತು ಹಣಕಾಸುಗಳನ್ನು ನಮಗೆ ಒದಗಿಸಲಾಗುತ್ತದೆ. ದೇವರಿಗೆ ಗೊತ್ತಿದೆ, ನಮ್ಮ ಮನಸ್ಸನ್ನು ಕೆಡಿಸದೇ ಇರುವಷ್ಟು ಹಣವನ್ನು ನಮಗೆ ಹೇಗೆ ಕೊಡಬೇಕು, ಎನ್ನುವಂಥದ್ದು. ದೇವರು ಹಳೆಯ ಒಡಂಬಡಿಕೆಯಲ್ಲಿ ಕೆಲವು ಕೊಟ್ಯಾಧಿಪತಿಗಳನ್ನು ಉಂಟುಮಾಡಿದರು. ಆದರೆ ಅವರು ಈಗ ನಮ್ಮ ನಡುವೆ ಇದನ್ನು ಮಾಡುವುದಿಲ್ಲ, ಏಕೆಂದರೆ ಇದು ನಾವು ಪರಲೋಕದ ಸಂಪತ್ತನ್ನು ಹುಡುಕುವುದಕ್ಕೆ ಅಡ್ಡಿಯನ್ನು ತರುತ್ತದೆ - ಮತ್ತು ನಮ್ಮನ್ನು ನಾಶ ಮಾಡುತ್ತದೆ.

"ಆತ್ಮಿಕ ವರಗಳು" ಎಂದು ಎಫೆಸ 1:3ರಲ್ಲಿ ಹೇಳಲಾಗಿರುವ ಪದಗಳನ್ನು "ಪವಿತ್ರಾತ್ಮನ ವರ" ಎಂಬುದಾಗಿ ಭಾಷಾಂತರ ಮಾಡಬಹುದು. ದೇವರು ಕ್ರಿಸ್ತನಲ್ಲಿ ನಮಗೆ ಈಗಾಗಲೇ ಪವಿತ್ರಾತ್ಮನ ಪ್ರತಿಯೊಂದು ವರವನ್ನೂ ಕೊಟ್ಟಿದ್ದಾರೆ. ನಾವು ಅವುಗಳನ್ನು ಯೇಸುವಿನ ನಾಮದಲ್ಲಿ ಸ್ವೀಕರಿಸಿಕೊಳ್ಳಬೇಕು ಅಷ್ಟೇ. ಇದು ಹೇಗೆಂದರೆ, ಒಬ್ಬ ಭಿಕ್ಷುಕಿ ಹುಡುಗಿಯು ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಾ ಕುಳಿತ್ತಿದ್ದಾಳೆ ಎಂದು ಕಲ್ಪಿಸಿಕೊಳ್ಳಿರಿ. ಆಗ ಒಬ್ಬ ಐಶ್ವರ್ಯವಂತನಾದ ರಾಜಕುಮಾರನು ಅಲ್ಲಿಗೆ ಬರುತ್ತಾನೆ ಮತ್ತು ಆಕೆಯನ್ನು ಮದುವೆಯಾಗಲು ಬಯಸಿ, ಆಕೆಗಾಗಿ ಒಂದು ಬ್ಯಾಂಕ್ ಖಾತೆಯನ್ನು ತೆರೆದು, ಅದಕ್ಕೆ ಕೊಟ್ಯಾಂತರ ರೂಪಾಯಿಗಳನ್ನು ಹಾಕುತ್ತಾನೆ - ಆ ಹಣವನ್ನು ಆಕೆಯು ಯಾವಾಗ ಬೇಕಾದರೂ ತೆಗೆದುಕೊಳ್ಳಬಹುದು. ಹಾಗಿದ್ದಲ್ಲಿ, ಆಕೆ ಎಂತಹ ಅದೃಷ್ಟವಂತೆ ಆಗಿದ್ದಾಳೆ, ಅಲ್ಲವೇ! ಹಿಂದೆ ಈಕೆಯ ಬಳಿ ಒಂದು ಭಿಕ್ಷಾಪಾತ್ರೆ ಮತ್ತು ಕೆಲವು ನಾಣ್ಯಗಳ ಹೊರತಾಗಿ ಬೇರೇನೂ ಇರಲಿಲ್ಲ. ಆದರೆ ಈಗ ಆಕೆಯು ಒಳ್ಳೆಯ ಉಡುಪನ್ನು ಧರಿಸಿಕೊಂಡು ಐಶಾರಾಮಿಯಾಗಿ ಜೀವಿಸಬಹುದಾಗಿದೆ. ಈಗ ಆಕೆಯು ಬ್ಯಾಂಕಿನಿಂದ ಎಷ್ಟೇ ಮೊತ್ತದ ಹಣವನ್ನು ಸಹ ಬಿಡಿಸಿಕೊಳ್ಳಬಹುದು, ಏಕೆಂದರೆ ರಾಜಕುಮಾರನು ಸಹಿ ಮಾಡಿರುವ ಅಸಂಖ್ಯಾತ ಖಾಲಿ ಚೆಕ್ ಹಾಳೆಗಳು ಆಕೆಯ ಬಳಿ ಇವೆ.

ಆತ್ಮಿಕವಾಗಿ ಹೇಳುವುದಾದರೆ, ಇದು ನಮ್ಮ ಚಿತ್ರಣವಾಗಿದೆ. ಈಗ ನಾವು ಈ ಪರಲೋಕದ ಬ್ಯಾಂಕಿಗೆ ತೆರಳಿ, ಪವಿತ್ರಾತ್ಮನ ವರಗಳಲ್ಲಿ ಒಂದನ್ನೂ ಬಿಡದೆ ಪ್ರತಿಯೊಂದನ್ನು ಪಡೆದುಕೊಳ್ಳಬಹುದು, ಏಕೆಂದರೆ ಅವೆಲ್ಲವೂ ಕ್ರಿಸ್ತನ ನಾಮದಲ್ಲಿ ನಮಗೆ ಸೇರಿವೆ. ನಾವು ಕ್ರಿಸ್ತನೊಂದಿಗೆ ಮದಲಗಿತ್ತಿಯ ಸಂಬಂಧದಲ್ಲಿ ಮುಂದುವರಿದರೆ, ನಾವು ಆತನಿಗೆ, "ಕರ್ತನೇ, ನಾನು ಇಹಲೋಕದಲ್ಲಿ ಜೀವಿಸುವ ಪ್ರತಿನಿತ್ಯವೂ ನಿನ್ನ ಮದಲಗಿತ್ತಿಯಾಗಿ ನಿನಗೆ ಯಥಾರ್ಥವಾಗಿ ನಡೆದುಕೊಳ್ಳಲು ಬಯಸುತ್ತೇನೆ," ಎಂದು ಹೇಳುವುದಾದರೆ, ಪರಲೋಕದ ಪ್ರತಿಯೊಂದು ಸಂಪತ್ತೂ ಕ್ರಿಸ್ತನಲ್ಲಿ ನಮಗೆ ಸೇರುತ್ತದೆ. ಪವಿತ್ರಾತ್ಮನ ಪ್ರತಿಯೊಂದು ವರವೂ ನಮ್ಮದಾಗುತ್ತದೆ. ನಾವು ಇದಕ್ಕೆ ಅರ್ಹರು ಎಂದು ದೇವರನ್ನು ಒಪ್ಪಿಸುವುದು ಅವಶ್ಯವಿಲ್ಲ - ಏಕೆಂದರೆ ನಾವು ಅವುಗಳಲ್ಲಿ ಯಾವುದಕ್ಕೂ ಅರ್ಹರಲ್ಲ. ಆ ಭಿಕ್ಷುಕಿಯು ಉಚಿತವಾಗಿ ಗಳಿಸಿದ ಅಪಾರ ಸಂಪತ್ತಿಗೆ ತನ್ನಲ್ಲಿ ಅರ್ಹತೆ ಇದೆಯೆಂದು ಯೋಚಿಸುತ್ತಾಳೆಂದು ನೀವು ಕಲ್ಪಿಸಿಕೊಳ್ಳುತ್ತೀರಾ? ಖಂಡಿತವಾಗಿ ಇಲ್ಲ, ಆಕೆಯು ಇದಕ್ಕೆ ಅರ್ಹಳಲ್ಲ. ದೇವರ ಕರುಣೆ ಮತ್ತು ಕೃಪೆಯ ಮೂಲಕ ನಾವು ಪಡೆದುಕೊಳ್ಳುವ ಪ್ರತಿಯೊಂದೂ ನಮಗೆ ಸೇರುತ್ತವೆ. ಪರಲೋಕದ ಎಲ್ಲಾ ಸಂಪತ್ತು ನಮಗೆ ಕ್ರಿಸ್ತನಲ್ಲಿ ಉಚಿತವಾಗಿ ಕೊಡಲ್ಪಟ್ಟಿದೆ, ಹಾಗಾಗಿ ನಾವು ಅವೆಲ್ಲವನ್ನೂ ಸ್ವೀಕರಿಸಬಹುದು. ನಾವು ಅವುಗಳನ್ನು ನಮ್ಮ ಉಪವಾಸಗಳು ಅಥವಾ ಪ್ರಾರ್ಥನೆಗಳ ಮೂಲಕ ಗಳಿಸಲು ಸಾಧ್ಯವಿಲ್ಲ. ಅನೇಕರು ಪವಿತ್ರಾತ್ಮನ ವರಗಳನ್ನು ಪಡೆಯುವುದಿಲ್ಲ, ಏಕೆಂದರೆ ಅವರು ಅವುಗಳನ್ನು ಈ ವಿಧಾನದ ಮೂಲಕ ಪಡೆಯಲು ಯತ್ನಿಸುತ್ತಾರೆ! ನಾವು ಅವುಗಳನ್ನು ಈ ರೀತಿಯಾಗಿ ಸ್ವೀಕರಿಸಲಾರೆವು. ಅವೆಲ್ಲವನ್ನು ಕ್ರಿಸ್ತನ ಅರ್ಹತೆಯ ಮುಖಾಂತರ ಮಾತ್ರ ನಾವು ಸ್ವೀಕರಿಸಬಹುದು.